Tag: ವಿಶ್ವಕಪ್

  • ವಿಶ್ವಕಪ್‍ನಲ್ಲಿ ಇಂದು ಭಾರತಕ್ಕೆ ಮೊದಲ ಪಂದ್ಯ

    ವಿಶ್ವಕಪ್‍ನಲ್ಲಿ ಇಂದು ಭಾರತಕ್ಕೆ ಮೊದಲ ಪಂದ್ಯ

    ಲಂಡನ್: ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಇಂದಿನಿಂದ ಕ್ರಿಕೆಟ್ ಹಬ್ಬ ಶುರು. ಮಹಾಯುದ್ಧದಲ್ಲಿ ಶುಭಾರಂಭ ಮಾಡಲು ಕೊಹ್ಲಿ ಹುಡುಗರು ಸಜ್ಜಾಗಿದ್ರೆ, ಮತ್ತೊಂದೆಡೆ ಸೋತು ಸುಣ್ಣವಾಗಿರುವ ಹರಿಣಗಳು ಕಮ್ ಬ್ಯಾಕ್ ಮಾಡಲು ರಣತಂತ್ರ ಹೆಣೆದಿದ್ದಾರೆ.

    ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಇಂದು ಭಾರತ ತನ್ನ ಮೊದಲ ಲೀಗ್ ಪಂದ್ಯವಾಡಲಿದೆ. ಈಗಾಗಲೇ ಎರಡು ಲೀಗ್ ಮ್ಯಾಚ್ ಆಡಿ ಸೋತಿರುವ ದಕ್ಷಿಣ ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಸೌತಾಂಪ್ಟನ್‍ನ ದಿ ವೇಜಸ್ ಬೌಲ್ ಸ್ಟೇಡಿಯಂನಲ್ಲಿ ಬಲಿಷ್ಠ ತಂಡಗಳ ಕಾಳಗಕ್ಕೆ ಅಖಾಡ ಸಿದ್ಧವಾಗಿದೆ.

    ವಿಶ್ವಕಪ್‍ನಲ್ಲಿ ಫೇವರೆಟ್ ಟೀಂ ಆಗಿರುವ ಕೊಹ್ಲಿ ಪಡೆ, ಗೆದ್ದು ಶುಭಾರಂಭ ಮಾಡಲು ತಂತ್ರ ರೂಪಿಸಿದೆ. ಕೇದರ್ ಜಾಧವ್ ಗಾಯದ ಸಮಸ್ಯೆಯಿಂದ ಬಳಲುತ್ತಿರೋದು ಟೀಂ ಇಂಡಿಯಾಗೆ ಮೈನಸ್ ಪಾಯಿಂಟ್. ಶಿಖರ್, ರೋಹಿತ್ ಓಪನರ್ಸ್ ಆಗಿ ಕಣಕ್ಕಿಳಿದ್ರೆ, ಮೀಡಲ್ ಆರ್ಡರ್ ನಲ್ಲಿ ಕೊಹ್ಲಿ, ಕೆಎಲ್ ರಾಹುಲ್, ಧೋನಿ ಪ್ರಾಬಲ್ಯ ಮೆರೆದ್ರೆ ಸ್ಲಾಗ್ ಓವರ್ಸ್‍ನಲ್ಲಿ ಪಾಂಡ್ಯ ಮತ್ತು ಜಡೇಜಾ ಮಿಂಚಲಿದ್ದಾರೆ. ಬೌಲಿಂಗ್‍ನಲ್ಲಿ ಬೂಮ್ರಾ ಮತ್ತು ಭುವನೇಶ್ವರ್ ಎದುರಾಳಿಗಳನ್ನು ಕಟ್ಟಿಹಾಕಲು ತಯಾರಾಗಿದ್ರೆ, ಸ್ಪೀನ್ ಮೋಡಿಗೆ ಕುಲ್‍ದೀಪ್ ಆ್ಯಂಡ್ ಚಹಾಲ್ ರೆಡಿ ಇದ್ದಾರೆ.

    ಬ್ಯಾಕ್ ಟು ಬ್ಯಾಕ್ ಸೋಲುಂಡಿರುವ ಸೌತ್ ಆಫ್ರಿಕಾಗೆ ಗಾಯದ ಸಮಸ್ಯೆ ಬಿಟ್ಟುಬಿಡದಂತೆ ಕಾಡ್ತಿದೆ, ಡೇಲ್ ಸ್ಟೈನ್ ಬೆನ್ನಲ್ಲೇ ಲೂಂಗಿ ಎನ್‍ಗಿಡಿ ಗಾಯಗೊಂಡಿರುವುದು ಡುಪ್ಲಿಸಿಸ್ ಪಡೆಗೆ ನುಂಗಲಾರದ ತುತ್ತಾಗಿದೆ. ಇನ್ನುಳಿದಂತೆ ಜೆಪಿ ಡುಮಿನಿ, ಮಿಲ್ಲರ್, ಕ್ವಿಂಟನ್ ಡಿಕಾಕ್, ಆಮ್ಲಾ, ಮರ್ಕರಮ್, ಇಮ್ರಾನ್ ತಾಹೀರ್, ಕ್ರಿಸ್ ಮೊರಿಸ್, ರಬಾಡ ಅಖಾಡಕ್ಕಿಳಿಯಲಿದ್ದಾರೆ.

    ಬ್ಯಾಟಿಂಗ್ ಸ್ವರ್ಗವಾಗಿರುವ ಪಿಚ್‍ನಲ್ಲಿ ರನ್ ಹೊಳೆ ಹರಿಯೋದರಲ್ಲಿ ಅನುಮಾನವೇ ಇಲ್ಲ. ಉಭಯ ತಂಡಗಳಲ್ಲೂ ಹೊಡಿಬಡಿ ಆಟಗಾರ ಇರುವುದರಿಂದ ಬಿಗ್ ಸ್ಕೋರ್ ಮ್ಯಾಚ್ ನಡೆಯಲಿದೆ.

  • ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಭಿಮಾನಿಗಳಿದ್ದಾರೆ – ಯೂನಿಸ್ ಖಾನ್

    ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಭಿಮಾನಿಗಳಿದ್ದಾರೆ – ಯೂನಿಸ್ ಖಾನ್

    ನವದೆಹಲಿ: ಪಾಕಿಸ್ತಾನದಲ್ಲೂ ಟೀಂ ಇಂಡಿಯ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಗಳು ಇದ್ದಾರೆ ಎಂದು ಪಾಕ್ ಮಾಜಿ ಆಟಗಾರ ಯೂನಿಸ್ ಖಾನ್ ಹೇಳಿದ್ದಾರೆ.

    ಸಲಾಮ್ ಕ್ರಿಕೆಟ್ 2019 ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಯೂನಿಸ್, ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನವೂ ಸೇರಿದಂತೆ ಜಗತ್ತಿನ ಎಲ್ಲಾ ಭಾಗದಲ್ಲೂ ಅವರನ್ನೂ ಪ್ರೀತಿಸುವ ಅಭಿಮಾನಿಗಳು ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2015ರ ವಿಶ್ವಕಪ್‍ನಿಂದ ಕೊಹ್ಲಿ ಅವರು ಅತ್ಯುತ್ತಮ ಲಯದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್ ನಂತರ ಅತೀ ಹೆಚ್ಚು ಶತಕಗಳನ್ನು ಭಾರಿಸಿರುವ ಕೊಹ್ಲಿ ನೇತೃತ್ವದ ಭಾರತ ತಂಡ ಎಲ್ಲಾ ವಿಭಾಗದಲ್ಲೂ ತುಂಬ ಬಲಿಷ್ಠವಾಗಿದೆ. ಹಾಗಾಗಿ ಅನೇಕ ಯುವ ಪಾಕಿಸ್ತಾನಿ ಆಟಗಾರರು ವಿರಾಟ್ ಕೊಹ್ಲಿಯಂತೆ ಆಡಲು ಬಯಸುತ್ತಾರೆ ಮತ್ತು ಅವರಂತೆ ಸದಾ ಫಿಟ್ ಆಗಿರಲು ಪ್ರಯತ್ನ ಪಡುತ್ತಾರೆ ಎಂದು ಹೇಳಿದ್ದಾರೆ.

    ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಯೂನಿಸ್ ಖಾನ್, “ಕೊಹ್ಲಿಯನ್ನು ಪಾಕಿಸ್ತಾನದವರು ಪ್ರೀತಿಸುತ್ತಾರೆ. ಹಲವಾರು ಯುವ ಪಾಕಿಸ್ತಾನಿ ಆಟಗಾರರು ಅವರಂತೆ ಆಟವಾಡಲು ಬಯಸುತ್ತಾರೆ. ಅವರು ಈ ಬಾರಿಯ ಏಷ್ಯಾಕಪ್‍ನ್ನು ಆಡದೇ ಇದ್ದರು ಅವರ ಅಭಿಮಾನಿಗಳು ಭಾರತ ತಂಡ ಆಡುವ ಸಮಯದಲ್ಲಿ ಕೊಹ್ಲಿ ಎಂದು ಕೊಗುತ್ತಿದ್ದರು. ಈ ಬಾರಿಯ ವಿಶ್ವಕಪ್‍ನಲ್ಲಿ ಕೊಹ್ಲಿ ಅವರು ಭಾರತ ತಂಡಕ್ಕೆ ಬಹುದೊಡ್ಡ ವರದಾನವಾಗಲಿದ್ದಾರೆ” ಎಂದು ಹೇಳಿದರು.

    ಇದೇ ಕಾರ್ಯಕ್ರಮದಲ್ಲಿ ಕೊಹ್ಲಿಯ ಬಗ್ಗೆ ಮಾತನಾಡಿದ ಕ್ರಿಕೆಟ್‍ನ ದಂತಕಥೆ ವಿವಿಯನ್ ರಿಚಡ್ರ್ಸ್ ಅವರು, ನಾನು ಯಾವಾಗಲೂ ಭಾರತೀಯ ಆಟಗಾರರನ್ನು ಇಷ್ಟಪಡುತ್ತೇನೆ. ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ ಕೊಹ್ಲಿಯ ಅಕ್ರಮಕಾರಿ ಆಟವನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

  • ವಿಶ್ವಕಪ್ 2019: ಅಭ್ಯಾಸದ ವೇಳೆ ಕೊಹ್ಲಿ ಹೆಬ್ಬೆರಳಿಗೆ ಗಾಯ

    ವಿಶ್ವಕಪ್ 2019: ಅಭ್ಯಾಸದ ವೇಳೆ ಕೊಹ್ಲಿ ಹೆಬ್ಬೆರಳಿಗೆ ಗಾಯ

    ಲಂಡನ್: ವಿಶ್ವಕಪ್ ಕ್ರಿಕೆಟ್ ಅಭ್ಯಾಸದ ವೇಳೆ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ.

    ತರಬೇತಿಯಲ್ಲಿ ಪಾಲ್ಗೊಂಡಿದ್ದ ನಾಯಕ ಕೊಹ್ಲಿ ನೆಟ್‍ನಲ್ಲಿ ಬೆವರಿಳಿಸಿದ್ದರು. ಈ ಸಂದರ್ಭದಲ್ಲಿ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಗಾಯದ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಗಾಯಗೊಂಡ ವೇಳೆ ಕೊಹ್ಲಿ ತಮ್ಮ ಬೆರಳನ್ನು ಐಸ್ ನಲ್ಲಿ ಡಿಪ್ ಮಾಡಿದ್ದರು. ತಂಡದ ತಜ್ಞ ವೈದ್ಯರು ಗಾಯಕ್ಕೆ ಚಿಕಿತ್ಸೆ ನೀಡಿದ ಬಳಿಕ ಅವರು ತರಬೇತಿ ಮುಂದುವರಿಸದೇ ಮೈದಾನದಿಂದ ಹೊರ ನಡೆದರು.

    ಕೊಹ್ಲಿ ಗಾಯದ ತೀವ್ರತೆಯ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ಇದುವರೆಗೂ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ 3 ದಿನಗಳು ಬಾಕಿ ಇರುವ ವೇಳೆಯೇ ಘಟನೆ ನಡೆದಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

    ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿದ್ದ ಕೇದಾರ್ ಜಾಧವ್ ಕೂಡ ಚೇತರಿಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಕ್ಕೆ ಮುನ್ನ ಗಾಯಗೊಂಡಿದ್ದ ವಿಜಯ್ ಶಂಕರ್ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ಕೊಹ್ಲಿ ಒಬ್ಬ ಅಪ್ರಬುದ್ಧ ಆಟಗಾರ – ರಬಾಡ

    ನವದೆಹಲಿ: ಕೊಹ್ಲಿ ಪಂದ್ಯದ ಸಮಯದಲ್ಲಿ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಎದುರಾಳಿಗಳು ನಿಂದಿಸಿದಾಗ ಕೋಪಗೊಳ್ಳುತ್ತಾರೆ. ಹೀಗಾಗಿ ಅವರೊಬ್ಬ ಅಪ್ರಬುದ್ಧ ಆಟಗಾರ ಎಂದು ದಕ್ಷಿಣ ಆಫ್ರಿಕಾದ ಯುವ ವೇಗಿ ಕಗಿಸೋ ರಬಾಡ ಅವರು ಹೇಳಿದ್ದಾರೆ.

    ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯದ ವೇಳೆ ಆಕ್ರಮಣಕಾರಿ ವ್ಯಕ್ತಿತ್ವ ತೋರುವ ವಿಚಾರದ ಬಗ್ಗೆ ಮಾತನಾಡಿರುವ ರಬಾಡ ಐಪಿಎಲ್ ವೇಳೆ ತಮ್ಮ ಮತ್ತು ಕೊಹ್ಲಿ ನಡುವಿನ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಕೊಹ್ಲಿ ಪಂದ್ಯದ ವೇಳೆ ಎದುರಾಳಿಗಳನ್ನು ನಿಂದಿಸುತ್ತಾರೆ. ಆದರೆ ಯಾರದರು ಅವರನ್ನು ನಿಂದಿಸಿದರೆ ಕೋಪಗೊಳ್ಳುತ್ತಾರೆ. ಇದೇ ರೀತಿ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವೊಂದರಲ್ಲಿ ನನ್ನ ಎಸೆತಕ್ಕೆ ಬೌಂಡರಿ ಬಾರಿಸಿದ ಕೊಹ್ಲಿ ಅವರು ನನ್ನನ್ನು ನಿಂದಿಸಿ ಮಾತನಾಡಿದರು. ನಂತರ ಎಸೆದ ಎಸೆತ ಡಾಟ್ ಅದ ಕಾರಣ ನಾನು ಅವರನ್ನು ನಿಂದಿಸಿದೆ. ಇದನ್ನು ಸಹಿಸಿಕೊಳ್ಳದ ಕೊಹ್ಲಿ ನನ್ನ ಮೇಲೆ ಕೋಪಗೊಂಡರು ಎಂದು ವಿವರಿಸಿದರು.

    ವಿರಾಟ್ ಒಬ್ಬ ಅತ್ಯುತ್ತಮ ಆಟಗಾರ. ಒಳ್ಳೆಯ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಗೆಲುವು ತಂದು ಕೊಡುವ ಅದ್ಭುತ ಆಟಗಾರ. ಆದರೆ ಎದುರಾಳಿಗಳನ್ನು ಜರಿಯುವ ಅವರು ಎದುರಾಳಿಗಳ ಜರಿಯುವಿಕೆಯನ್ನು ಸ್ವೀಕಾರ ಮಾಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಬಾಡ ಅವರು 2018ರಲ್ಲಿ ಕೊಹ್ಲಿ ಅವರನ್ನು ಹಿಂದಿಕ್ಕಿ ಐಸಿಸಿಯ ವರ್ಷದ ಆಟಗಾರ ಪ್ರಶಸ್ತಿ ಮತ್ತು ಆದೇ ವರ್ಷ ಅತ್ಯುತ್ತಮ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಕಸಿದುಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿದ ರಬಾಡ, ಕೊಹ್ಲಿ ಅವರು ಕಳೆದ ಐದು ವರ್ಷದಿಂದ ಭಾರತೀಯ ಕ್ರಿಕೆಟ್‍ನ ಆಧಾರ ಸ್ತಂಭ ಅವರು ಈ ಎಲ್ಲಾ ಪ್ರಶಸ್ತಿಗಳಿಗೂ ಅರ್ಹರಾಗಿದ್ದಾರೆ. ಕೊಹ್ಲಿ ಅವರು ಆಡುವ ಆಟದ ವಿಷಯದಲ್ಲಿ ನೀವು ತಪ್ಪು ಹುಡುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    2019ರ ವಿಶ್ವಕಪ್‍ನ ತನ್ನ ಮೊದಲ ಪಂದ್ಯವನ್ನು ಕೊಹ್ಲಿ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜೂನ್ 5 ರಂದು ಆಡಲಿದೆ.

  • ಬೊಜ್ಜು ತುಂಬಿಕೊಂಡ, ನಾಯಕ ಆಡಲು ಅನರ್ಹ – ಶೋಯೆಬ್ ಅಖ್ತರ್ ಕಿಡಿ

    ಬೊಜ್ಜು ತುಂಬಿಕೊಂಡ, ನಾಯಕ ಆಡಲು ಅನರ್ಹ – ಶೋಯೆಬ್ ಅಖ್ತರ್ ಕಿಡಿ

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಪಾಕಿಸ್ತಾನದ ತಂಡದ ವಿರುದ್ಧ ದೇಶದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ನಾಯಕ ಸರ್ಫರಾಜ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.

    ತಂಡದ ನಾಯಕ ಸರ್ಫರಾಜ್ ಅಹ್ಮದ್ ಟಾಸ್‍ಗೆ ಆಗಮಿಸುತ್ತಿದ್ದ ವೇಳೆ ಆತನ ಹೊಟ್ಟೆ ಬೊಜ್ಜಿನಿಂದ ಕೂಡಿರುವುದನ್ನು ನೋಡಿ ನನಗೆ ಅಸಹ್ಯವಾಗಿತ್ತು. ಇದುವರೆಗೂ ನಾನು ನೋಡಿದ ಆನ್ ಫಿಟ್ ಕ್ಯಾಪ್ಟನ್ ಎಂದರೆ ಈತನೆ. ಆತನ ದೇಹದಲ್ಲಿ ತುಂಬಿಕೊಂಡಿದ್ದ ಬೊಜ್ಜಿನಿಂದ ಆತ ನಡೆದಾಡುವುದಕ್ಕೂ ಕಷ್ಟ ಪಡುತ್ತಿದ್ದ. ಅಲ್ಲದೇ ವಿಕೆಟ್ ಕೀಪಿಂಗ್ ಸಮಯದಲ್ಲಿ ಭಾರೀ ಅವಸ್ಥೆ ಪಡುತ್ತಿದ್ದನ್ನು ಗಮನಿಸಿದ್ದೇನೆ ಎಂದು ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ವೇಳೆ ಅಖ್ತರ್ ಈ ಮೇಲಿನ ಮಾತುಗಳನ್ನು ಆಡಿದ್ದು, ಆ ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ಆಗಿದ್ದು.. ಆಗಿದೆ.. ನನ್ನ ಆಲೋಚನೆಗಳ ಭಾವೋದ್ವೇಗದಲ್ಲಿ ಆಡಿದ ಮಾತುಗಳನ್ನು ಮತ್ತೊಮ್ಮೆ ಚಿಂತಿಸುತ್ತಿದ್ದೇನೆ. ದೇಶದ ಪರ ಆಡುತ್ತಿರುವ ಆಟಗಾರರಿಗೆ ನಾವು ಬೆಂಬಲವಾಗಿರುವುದು ಅಗತ್ಯ. ಟೂರ್ನಿ ಅಂತ್ಯವಾಗುವವರೆಗೂ ನಮ್ಮ ಬೆಂಬಲ ಆಟಗಾರರಿಗೆ ಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

    ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಸರ್ಫರಾಜ್ ಅಹ್ಮದ್, 2017 ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಕೂಡ ಭಾರತ ತಂಡ ಕೂಡ ಮೊದಲ ಪಂದ್ಯಗಳಲ್ಲಿ ಸೋಲುಂಡಿತ್ತು. ಆದರೆ ಫೈನಲ್ ವೇಳೆಗೆ ಟೈಟಲ್ ಗೆದ್ದು ಸಂಭ್ರಮಿಸಿತ್ತು ಎಂದು ನೆನಪು ಮಾಡಿದ್ದಾರೆ. ಅಲ್ಲದೇ ಸೋಲಿನಿಂದ ಆಟಗಾರರು ಪಾಠ ಕಲಿತು ಟೈಟಲ್ ಗೆಲುವಿನ ರೇಸ್ ನಲ್ಲಿ ಇರುತ್ತೇವೆ. ಟೂರ್ನಿಯ ಉಳಿದ 8 ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನು ಓದಿ: ಬಿರಿಯಾನಿ ಸವಿಯುತ್ತಾ ಕುಳಿತ ಪಾಕ್ ಕ್ರಿಕೆಟಿಗರ ವಿರುದ್ಧ ವಾಸೀಂ ಅಕ್ರಂ ಗರಂ

  • ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ – ಕ್ರಿಸ್‍ಗೇಲ್ ವಿಶ್ವದಾಖಲೆ

    ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ – ಕ್ರಿಸ್‍ಗೇಲ್ ವಿಶ್ವದಾಖಲೆ

    ನಾಟಿಂಗ್‍ಹ್ಯಾಮ್: ವಿಶ್ವಕಪ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ, ವಿಶ್ವಕಪ್‍ನಲ್ಲೂ ಸೋಲಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಪಂದ್ಯದಲ್ಲಿ 105 ರನ್ ಗಳಿಗೆ ಪಾಕ್ ತಂಡವನ್ನು ಕಟ್ಟಿಹಾಕಿದ್ದ ವಿಂಡೀಸ್ 13.4 ಓವರ್ ಗಳಲ್ಲಿ ಗುರಿ ತಲುಪಿ 7 ವಿಕೆಟ್ ಗಳ ಭರ್ಜರಿ ಜಯ ಪಡೆದಿದೆ.

    ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಕೆರೇಬಿಯನ್ ಬೌಲಿಂಗ್ ದಾಳಿಗೆ ಸಿಲುಕಿ 21.4 ಓವರ್ ಗಳಲ್ಲಿ 105 ರನ್ ಗಳಿಸಿ ಸರ್ವಪತನವಾಯಿತು. ಪಾಕ್ ಪರ ಆರಂಭಿಕ ಫಖರ್ ಜಮನ್ ಮತ್ತು ಬಾಬರ್ ಅಜಮ್ ತಲಾ 22 ರನ್ ಕಳಿಸಿದ್ದು ಬಿಟ್ಟರೆ ಅನುಭವಿಗಳಾದ ನಾಯಕ ಸರ್ಫರಾಜ್ ಮತ್ತು ಮೊಹಮ್ಮದ್ ಹಫೀಜ್ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ಬಂದ ರಿಯಾಜ್ 2 ಸಿಕ್ಸರ್ ಸಿಡಿಸಿ 18 ರನ್‍ಗಳಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಪಾಕ್ ವಿಶ್ವಕಪ್ ಕ್ರಿಕೆಟ್‍ನಲ್ಲಿ 2ನೇ ಅತಿ ಕಡಿಮೆ ರನ್ ಗಳಿಸಿ ಆಲೌಟ್ ಆಯ್ತು. 1992 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 74 ರನ್ ಗಳಿಗೆ ಅಲೌಟ್ ಆಗಿರುವುದು ಪಾಕ್ ಕನಿಷ್ಠ ರನ್ ಮೊತ್ತವಾಗಿದೆ.

    106 ರನ್ ಗಳ ಅಲ್ಪ ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 13.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. ಪಂದ್ಯದಲ್ಲಿ ವಿಂಡೀಸ್ ಪರ 50 ರನ್ (34 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಕ್ರಿಸ್ ಗೇಲ್ ಅಂತರಾಷ್ಟ್ರಿಯ ಕ್ರಿಕೆಟಿನಲ್ಲಿ 19 ಸಾವಿರ ರನ್ ಪೂರ್ಣಗೊಳಸಿದ ಹೆಗ್ಗಳಿಕೆ ಪಡೆದರು. ಅಲ್ಲದೇ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಎಂಬ ದಾಖಲೆ ಬರೆದರು.

    39 ವರ್ಷದ ಗೇಲ್ ಈ ಪಂದ್ಯ ಸೇರಿ ಒಟ್ಟು 40 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ 37 ಸಿಕ್ಸರ್ ಗಳಿಸಿದ ಎಬಿಡಿ 2ನೇ ಸ್ಥಾನ, 31 ಸಿಕ್ಸರ್ ಸಿಡಿಸಿರುವ ಪಾಟಿಂಗ್ 3ನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಒಶೇನ್ ಥಾಮಸ್ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹೋಲ್ಡರ್ 3 ವಿಕೆಟ್, ರಸೇಲ್ 2 ಹಾಗೂ ಶೆಲ್ಡನ್ ಕಾಟ್ರೆಲ್ 1 ವಿಕೆಟ್ ಪಡೆದು ಪಾಕಿಸ್ತಾನದ ದಿಡೀರ್ ಸೋಲಿಗೆ ಕಾರಣರಾದರು.

    ಪಾಕ್ ಟ್ರೋಲ್: ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಪಾಕ್ ಆಲೌಟ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದೆ. ವಿಶ್ವಕಪ್‍ನಂತಹ ದೊಡ್ಡ ಟೂರ್ನಿಗಳಲ್ಲಿ ತಮ್ಮ ತಂಡ ಹೀಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದನ್ನು ಕಂಡ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ನವದೆಹಲಿ: ಇಂಗ್ಲೆಂಡ್ ರಾಣಿ ಎಲಿಜಬೆತ್‍ರನ್ನು ಭೇಟಿ ಮಾಡಲು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    2019ರ ವಿಶ್ವಕಪ್‍ಗೆಂದು ಇಂಗ್ಲೆಂಡ್‍ಗೆ ತೆರಳಿರುವ 10 ತಂಡಗಳ ನಾಯಕರನ್ನು ಬ್ರಿಟನ್ ರಾಣಿ ಎಲಿಜಬೆತ್ ಮತ್ತು ಯುವರಾಜ ಹ್ಯಾರಿ ಅವರು ಭೇಟಿ ಮಾಡಿ ಶುಭಕೋರಿದ್ದಾರೆ. ಈ ಸಮಾರಂಭದಲ್ಲಿ ಇಂಗ್ಲೆಂಡ್‍ನ ಹಲವು ರಾಜ ಮನೆತನದವರು ನಾಯಕರನ್ನು ಭೇಟಿಯಾಗಿ ಶುಭಕೋರಿದ್ದಾರೆ.

    ಈ ಸಮಾರಂಭಕ್ಕೆ ಎಲ್ಲಾ ತಂಡದ ನಾಯಕರುಗಳು ಸೂಟ್‍ಗಳನ್ನು ಧರಿಸಿ ರಾಣಿಯನ್ನು ಭೇಟಿಯಾದರೆ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಸಮಾರಂಭದಲ್ಲಿ ಸರ್ಫರಾಜ್ ಅವರು ತಮ್ಮ ದೇಶದ ಸಾಂಪ್ರದಾಯಿಕ ಉಡುಪಾದ ಬಿಳಿ ಬಣ್ಣದ ಸಲ್ವಾರ್ ಕಮೀಜ್‍ನ್ನು ಧರಿಸಿ ಅದರ ಮೇಲೆ ತಮ್ಮ ತಂಡದ ಹಸಿರು ಬಣ್ಣದ ಕೋಟನ್ನು ಧರಿಸಿ ಸಮಾರಂಭಕ್ಕೆ ಬಂದಿದ್ದಾರೆ.

    ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದ್ದು ಸರ್ಫರಾಜ್ ಅಹ್ಮದ್‍ರನ್ನು ಟೀಕಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮೂಲದ ಕೆನೆಡಿಯಾನ್ ಬರಹಗಾರ ಟರೆಕ್ ಫತಾಹ್ ಪೈಜಾಮಾ ಧರಿಸಿ ಬಂದಿದ್ದಾರೆ. ಸದ್ಯ ಅವರು ಲುಂಗಿ, ಬನ್ಯನ್, ಟೋಪಿ ಧರಿಸಿ ಬಂದಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಸರ್ಫರಾಜ್ ಅಹ್ಮದ್ ನಾಯಕನಾಗಿರುವ ಪಾಕಿಸ್ತಾನ ತಂಡ ವಿಶ್ವಕಪ್‍ನ ಮೊದಲ ಪಂದ್ಯವನ್ನು ಇಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

  • ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ಸಾಧನೆಗೈದ ತಾಹೀರ್

    ವಿಶ್ವಕಪ್ ಇತಿಹಾಸದಲ್ಲಿ ಅಪರೂಪದ ಸಾಧನೆಗೈದ ತಾಹೀರ್

    ಲಂಡನ್: 2019 ವಿಶ್ವಕಪ್ ಟೂರ್ನಿ ಇಂದಿನಿಂದ ಆರಂಭವಾಗಿದ್ದು, ಆರಂಭದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ತಂಡದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅಪರೂಪದ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಚ್ಚರಿ ಎಂಬಂತೆ ಆಫ್ರಿಕಾ ಪರ ಮೊದಲ ಓವರನ್ನು ಇಮ್ರಾನ್ ತಹೀರ್ ಎಸೆದರು. ಆ ಮೂಲಕ ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್ ಬೌಲ್ ಮಾಡಿದ ಸ್ಪಿನ್ನರ್ ಎಂಬ ಹೆಗ್ಗಳಿಕೆಯನ್ನ ತಹೀರ್ ಪಡೆದರು.

    40 ವರ್ಷ ವಯಸ್ಸಿನ ಇಮ್ರಾನ್ ತಹೀರ್ ತಮ್ಮ ಸ್ಮರಣೀಯ ಪಂದ್ಯದ ಮೊದಲ ಓವರಿನ 2ನೇ ಎಸೆತದಲ್ಲೇ ಜಾನಿ ಬೇರ್ ಸ್ಟೋ ವಿಕೆಟ್ ಪಡೆದು ಗೋಲ್ಡನ್ ಡಕ್‍ಔಟ್ ಮಾಡಿದರು. ಅಲ್ಲದೇ ಮೊದಲ ಓವರಿನಲ್ಲಿ ಕೇವಲ 1 ರನ್ ನೀಡಿದರು. ಪಂದ್ಯದಲ್ಲಿ 10 ಓವರ್ ಸ್ಪೆಲ್ ಪೂರ್ಣಗೊಳಿಸಿದ ಇಮ್ರಾನ್ ತಹೀರ್ 6.10 ಎಕಾನಮಿಯಲ್ಲಿ 2 ವಿಕೆಟ್ ಪಡೆದು 61 ರನ್ ನೀಡಿದರು.

    ಇಂಗ್ಲೆಂಡ್‍ನ ಪಿಚ್‍ಗಳು ಬ್ಯಾಟಿಂಗ್‍ಗೆ ಫೇವರಿಟ್ ಆಗಿದ್ದು, ಆದರೆ ಸದ್ಯ ಪಂದ್ಯ ನಡೆಯುತ್ತಿರುವ ಕೆನ್ನಿಂಗ್ಟನ್ ಓವೆಲ್ ಪಿಚ್‍ನಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಇಲ್ಲಿ ನಡೆದ 2 ಅಭ್ಯಾಸ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ಕನಿಷ್ಠ ಮೊತ್ತ ದಾಖಲಿಸಿದೆ. ಆದರೆ ಆತಿಥೇಯ ಇಂಗ್ಲೆಂಡ್ ತಂಡ ಮಾತ್ರ ಜೇಸನ್ ರಾಯ್‍ರ 54 ರನ್, ಜೋ ರೂಟ್‍ರ 51 ರನ್, ನಾಯಕ ಮಾರ್ಗನ್ 57 ರನ್ ಹಾಗೂ ಬೆನ್ ಸ್ಟೋಕ್ಸ್ ರ 89 ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 311 ರನ್ ಕಲೆ ಹಾಕಿದೆ.

  • ಕೊಹ್ಲಿಗೆ ಲಂಡನ್‍ನಲ್ಲಿ ವಿಶೇಷ ಗೌರವ

    ಕೊಹ್ಲಿಗೆ ಲಂಡನ್‍ನಲ್ಲಿ ವಿಶೇಷ ಗೌರವ

    ಲಂಡನ್: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಗೌರವ ನೀಡಲಾಗಿದ್ದು, ಲಂಡನ್‍ನ ಲಾಡ್ರ್ಸ್ ಕ್ರೀಡಾಂಗಣದಲ್ಲಿ ಕೊಹ್ಲಿ ಅವರ ಮೆಣದ ಪ್ರತಿಮೆಯನ್ನ ಆನಾವರಣ ಮಾಡಲಾಗಿದೆ.

    ವಿಶ್ವಕಪ್ ಟೂರ್ನಿಗೆ ಅದ್ದೂರಿ ಆರಂಭ ನೀಡಿದ ಸಮಾರಂಭದ ವೇಳೆ ಕೊಹ್ಲಿ ಅವರ ಪ್ರತಿಮೆ ಅನಾವರಣಗೊಳಿಸಲಾಗಿದ್ದು, ಮೇ 30 ರಿಂದ ಜೂನ್ 15ರ ವರೆಗೂ ಅಂದರೆ ಟೂರ್ನಿ ಮುಕ್ತಾಯವಾಗುವವರೆಗೂ ಲಂಡನ್‍ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

    ಕೊಹ್ಲಿ ಮೆಣದ ಪ್ರತಿಮೆಯನ್ನ ವಿಶ್ವಕಪ್ ಟೂರ್ನಿಯ ಹೊಸ ವಿನ್ಯಾಸ ಟೀಂ ಇಂಡಿಯಾ ಜೆರ್ಸಿಯೊಂದಿಗೆ ನಿರ್ಮಿಸಿಲಾಗಿದೆ. ಅಲ್ಲದೇ ವಿರಾಟ್ ಕೊಹ್ಲಿ ಅವರೇ ನೀಡಿದ್ದ ಶೂ, ಗ್ಲೌಸ್ ಗಳನ್ನು ಪ್ರತಿಮೆಗೆ ಅಳವಡಿಸಲಾಗಿದೆ. ವಿಶ್ವದ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ರಿಟಿಷ್ ಓಟಗಾರ ಫರಾಹ್ ರಂತಹ ದಿಗ್ಗಜರೊಂದಿಗೆ ಕೊಹ್ಲಿ ಪ್ರತಿಮೆಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

    ವಿಶ್ವ ಕ್ರಿಕೆಟ್ ನಲ್ಲಿ ನಂ.1 ಬ್ಯಾಟ್ಸ್ ಮನ್ ಸ್ಥಾನ ಪಡೆದಿರುವ ಕೊಹ್ಲಿ, 77 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6613 ರನ್ ಸಿಡಿಸಿದ್ದಾರೆ. ಇದರಲ್ಲಿ 25 ಶತಕ, 20 ಅರ್ಧ ಶತಕಗಳು ಸೇರಿದೆ. ಏಕದಿನ ಮಾದರಿಯಲ್ಲಿ 227 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, 41 ಶತಕ, 49 ಅರ್ಧ ಶತಕಗಳೊಂದಿಗೆ 10,843 ರನ್ ಗಳಿಸಿದ್ದಾರೆ.

    ವಿರಾಟ್ ಕೊಹ್ಲಿ ಭಾಗವಹಿಸುತ್ತಿರುವ ಮೂರನೇ ವಿಶ್ವಕಪ್ ಟೂರ್ನಿ ಇದಾಗಿದ್ದು, ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ವಿಶ್ವಕಪ್ ಪ್ರಯಾಣ ಆರಂಭಿಸುವ ಮುನ್ನ ಭಾರತದಲ್ಲಿ ಮಾತನಾಡಿದ್ದ ಕೊಹ್ಲಿ, ಈ ಬಾರಿಯ ಟೂರ್ನಿ ನನಗೆ ತುಂಬ ಸವಾಲಿನ ವಿಶ್ವಕಪ್. ನಾವು ಉತ್ತಮ ಕ್ರಿಕೆಟ್ ಅಟದ ಕಡೆ ಗಮನ ನೀಡಬೇಕು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆಟವಾಡಿದರೆ ನಾವು ಆಡಿದ ಪ್ರತಿ ಪಂದ್ಯದಲ್ಲೂ ಉತ್ತಮ ಫಲಿತಾಂಶ ಕಾಣಬಹುದು. ನಮ್ಮ ತಂಡ ಸಾಧ್ಯವದಷ್ಟು ಸರಳವಾಗಿ ಇರಲು ಪ್ರಯತ್ನಮಾಡಬೇಕು ಎಂದಿದ್ದರು.

  • ಬ್ಯಾಟಿಂಗ್ ವೇಳೆ ಬಾಂಗ್ಲಾ ಫೀಲ್ಡ್ ಸೆಟ್ ಮಾಡಿದ ಧೋನಿ – ವಿಡಿಯೋ

    ಬ್ಯಾಟಿಂಗ್ ವೇಳೆ ಬಾಂಗ್ಲಾ ಫೀಲ್ಡ್ ಸೆಟ್ ಮಾಡಿದ ಧೋನಿ – ವಿಡಿಯೋ

    ಲಂಡನ್: ವಿಶ್ವಕಪ್ ಅಭ್ಯಾಸ ಪಂದ್ಯ ಸಲುವಾಗಿ ಮಂಗಳವಾರ ಬಾಂಗ್ಲಾದೇಶದ ವಿರುದ್ಧ ಸೆಣಸಿದ ಟೀಂ ಇಂಡಿಯಾ, ಧೋನಿ ಹಾಗೂ ಕೆಎಲ್ ರಾಹುಲ್ ಶತಕ ನೆರವಿನಿಂದ ಗೆದ್ದು ಬೀಗಿತ್ತು. ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ಎದುರಾಳಿ ತಂಡದ ಫೀಲ್ಡ್ ಸೆಟ್ ಮಾಡಿ ಸುದ್ದಿಯಾಗಿದ್ದಾರೆ.

    ಪಂದ್ಯದ 40ನೇ ಓವರಿನಲ್ಲಿ ಬಾಂಗ್ಲಾ ತಂಡದ ಆಟಗಾರ ಮಿಡ್ ಆಫ್ ಬಳಿ ನಿಂತಿದ್ದರು. ಬೌಲರ್ ಶಬ್ಬೀರ್ ರಹಮಾನ್ ಬೌಲಿಂಗ್ ಹಾಕಲು ಬಂದಾಗ ಧೋನಿ ಅವರನ್ನು ತಡೆದು ಫೀಲ್ಡರ್ ಅನ್ನು ಬೇರೆಡೆ ಕಳುಹಿಸುವಂತೆ ಸೂಚಿಸಿದರು. ಧೋನಿ ಸೂಚನೆಯನ್ನು ಪಾಲಿಸಿದ ಶಬ್ಬೀರ್ ರಹಮಾನ್ ಫೀಲ್ಡರ್ ಅನ್ನು ದೂರ ಸರಿಯುವಂತೆ ಸೂಚಿಸಿದ್ದು, ಫೀಲ್ಡರ್ ಬಳಿಕ ಲೆಗ್ ಸ್ಕ್ಯಾರ್ ಬಳಿ ತೆರಳಿದರು. ಧೋನಿ ಸೂಚನೆಗೆ ವೀಕ್ಷಕ ವಿವರಣೆಗಾರರು ಕೂಡ ಅಚ್ಚರಿಗೊಂಡಿದ್ದರು.

    ನಡೆದಿದ್ದು ಏನು?
    ಶಬ್ಬೀರ್ ಬೌಲಿಂಗ್ ಮಾಡುತ್ತಿರುವಾಗ ಫೀಲ್ಡರ್ ಸಹ ಮುಂದುಗಡೆ ಬಂದಿದ್ದಾರೆ. ಈ ದೃಶ್ಯವನ್ನು ರಾಹುಲ್ ಮತ್ತು ಧೋನಿ ನೋಡಿದ್ದು ಇಬ್ಬರು ಒಟ್ಟಿಗೆ ಕೈ ಸನ್ನೆ ಮಾಡಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಧೋನಿ ಕ್ರಿಕೆಟಿನಲ್ಲಿ ತೀರ ಮಗ್ನರಾಗಿ ಎದುರಾಳಿ ತಂಡದ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಯೊಬ್ಬರು ವಿಡಿಯೋ ಟ್ವೀಟ್ ಮಾಡಿದ್ದಾರೆ.

    ನಾಲ್ಕನೇ ಕ್ರಮಾಂಕ: ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕೆಎಲ್ ರಾಹುಲ್ 99 ಎಸೆತಗಳಲ್ಲಿ 12 ಬೌಂಡರಿ, 04 ಸಿಕ್ಸರ್ ನೆರವಿನಿಂದ ಶತಕ ಸಿಡಿಸಿ ತಾವು ಈ ಸ್ಥಾನಕ್ಕೆ ಸೂಕ್ತ ಎಂಬುವುದನ್ನು ಸಾಬೀತು ಪಡಿಸಿದರು. ಆ ಮೂಲಕ 2 ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಆಯ್ಕೆದಾರರ ಹುಡುಕಾಟಕ್ಕೆ ಉತ್ತರ ನೀಡಿದರು.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಧೋನಿ 78 ಎಸೆತಗಳಲ್ಲಿ 7 ಸಿಕ್ಸರ್, 8 ಬೌಂಡರಿಗಳೊಂದಿಗೆ 113 ರನ್ ಸಿಡಿಸಿದ್ದರು. ರಾಹುಲ್, ಧೋನಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತ್ತು. ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ 49.3 ಓವರ್ ಗಳಲ್ಲಿ 264 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲುಂಡಿತು. ಪರಿಣಾಮ ಟೀಂ ಇಂಡಿಯಾ ಬರೋಬ್ಬರಿ 95 ರನ್ ಗಳ ಗೆಲುವು ಪಡೆಯಿತು.