Tag: ವಿಶ್ವಕಪ್

  • ಧವನ್ ಶತಕ, ರೋಹಿತ್ – ಕೊಹ್ಲಿ ಫಿಫ್ಟಿ – ಆಸೀಸ್‍ಗೆ ಗೆಲ್ಲಲು 353 ರನ್ ಟಾರ್ಗೆಟ್

    ಧವನ್ ಶತಕ, ರೋಹಿತ್ – ಕೊಹ್ಲಿ ಫಿಫ್ಟಿ – ಆಸೀಸ್‍ಗೆ ಗೆಲ್ಲಲು 353 ರನ್ ಟಾರ್ಗೆಟ್

    ಟೌಂಟನ್: 2019ರ ವಿಶ್ವಕಪ್ ಟೂರ್ನಿ ಭಾಗವಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಆಟಗಾರರು ಬೃಹತ್ ರನ್ ಗುರಿಯನ್ನೇ ಆಸೀಸ್ ಪಡೆಗೆ ನೀಡಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್  ಗಳಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀರ್ಮಾನವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಅಲ್ಲದೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುವ ಮೂಲಕ ಆಸೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಆರಂಭಿಕರು ಎಂಬ ದಾಖಲೆ ಬರೆದರು. ಈ ಜೋಡಿ 1,152 ರನ್ ಗಳನ್ನು ಆಸೀಸ್ ವಿರುದ್ಧ ಗಳಿಸಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ಆಟಗಾರರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

    ಧವನ್-ರೋಹಿತ್ ದಾಖಲೆ:
    ಆಸೀಸ್ ವಿರುದ್ಧ 22ನೇ ಬಾರಿ ಜೋಡಿಯಾಗಿ ಕಣಕ್ಕೆ ಇಳಿದ ರೋಹಿತ್, ಧವನ್ ಭಾರತ ಪರ ದಾಖಲೆ ಬರೆದರು. ಉಳಿದಂತೆ ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ಈ ಜೋಡಿ 135 ಎಸೆತಗಳಲ್ಲಿ 127 ರನ್ ಗಳಿಸಿ ಭಾರತ ಪರ ದಾಖಲೆಯ 16ನೇ ಶತಕ ಜೊತೆಯಾಟ ನೀಡಿದರು. ಈ ಹಿಂದೆ ರೋಹಿತ್, ಕೊಹ್ಲಿ 16 ಬಾರಿ ಶತಕ ಜೊತೆಯಾಟ ಆಡಿದ್ದರು. ಭಾರತ ಪರ ಸಚಿನ್ ಗಂಗೂಲಿ ಜೋಡಿ 26 ಶತಕಗಳ ಜೊತೆಯಾಟ ನೀಡಿದೆ.

    ಪಂದ್ಯದಲ್ಲಿ ರೋಹಿತ್ ಶರ್ಮಾ 70 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ಸೇರಿದಂತೆ 57 ಕಲೆ ಹಾಕಿದರು. ಇತ್ತ ಶಿಖರ್ ಧವನ್ 109 ಎಸೆತಗಳಲ್ಲಿ 16 ಬೌಂಡರಿ ಸಿಡಿಸುವ ಮೂಲಕ 117 ರನ್ ಗಳಿಸಿದರು. 32 ವರ್ಷದ ರೋಹಿತ್ ಆಸೀಸ್ ವಿರುದ್ಧ ವೇಗವಾಗಿ 2 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದು, 37 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ 40 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಗಳಿಸಿದ ಸಚಿನ್ ತೆಂಡಲ್ಕೂರ್ ಸಾಧನೆಯನ್ನ ಹಿಂದಿಕ್ಕಿದ್ದಾರೆ.

    ವಿಶ್ವಕಪ್ ಶತಕ:
    ಇತ್ತ ಧವನ್ ವೃತ್ತಿ ಜೀವನದಲ್ಲಿ 17 ಶತಕ ಸಾಧನೆ ಮಾಡಿದ್ದು, ವಿಶ್ವಕಪ್ ನಲ್ಲಿ 3ನೇ ಶತಕ ಇದಾಗಿದೆ. 2015ರ ವಿಶ್ವಕಪ್ ನಲ್ಲಿ ಶತಕ ಸಾಧನೆ ಮಾಡಿದ್ದ ಧವನ್ ಈ ಪಂದ್ಯದಲ್ಲಿ 95 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಭಾರತದ ಪರ ಸಚಿನ್ ವಿಶ್ವಕಪ್ ನಲ್ಲಿ 6 ಶತಕ ಸಿಡಿಸಿದ್ದು, ಗಂಗೂಲಿ 4 ಶತಕ ಸಿಡಿಸಿ ಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದಿದ್ದಾರೆ. ಭಾರತದ ಬ್ಯಾಟ್ಸ್ ಮನ್‍ಗಳು ವಿಶ್ವಕಪ್ ನಲ್ಲಿ 27 ಶತಕಗಳನ್ನು ಸಿಡಿಸಿದ್ದು, 26 ಶತಕಗಳೊಂದಿಗೆ ಆಸೀಸ್ 2ನೇ ಸ್ಥಾನದಲ್ಲಿದೆ.

    ಕಳೆದ ಪಂದ್ಯದಲ್ಲಿ ಬಹುಬೇಗ ನಿರ್ಗಮಿಸಿದ್ದ ನಾಯಕ ಕೊಹ್ಲಿ ಕೂಡ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಧವನ್ ರೊಂದಿಗೆ ಕೂಡಿದ 2ನೇ ವಿಕೆಟ್‍ಗೆ 93 ರನ್‍ಗಳ ಜೊತೆಯಾಟ ನೀಡಿದರು. ಧವನ್ ಔಟಾಗುತ್ತಿದಂತೆ ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ಕೂಡ ಬಿರುಸಿನ ಆಟ ಪ್ರದರ್ಶಸಿದರು. 28 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿಗಳ ನೆರವಿನಿಂದ 48 ರನ್ ಸಿಡಿಸಿ ಅರ್ಧ ಶತಕದ ಅಂಚಿನಲ್ಲಿ ಎಡವಿದರು. ಆ ವೇಳೆಗೆ ಕೊಹ್ಲಿ- ಹಾರ್ದಿಕ್ ಜೋಡಿ 53 ಎಸೆತಗಳಲ್ಲಿ 81 ರನ್ ಗಳಿಸಿತ್ತು.

    ಒಂದು ಬದಿಯಲ್ಲಿ ಹಾರ್ದಿಕ್ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದರೆ ಕೊಹ್ಲಿ ಕೂಡ ತಮ್ಮ ರನ್ ಗಳಿಕೆಯ ವೇಗವನ್ನು ಹೆಚ್ಚಿಸಿದ್ದರು. 55 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಕೊಹ್ಲಿ, 77 ಎಸೆತಗಳಲ್ಲಿ 82 ರನ್ ಗಳಿಸಿ ನಿರ್ಗಮಿಸಿದರು. ಇತ್ತ ಧೋನಿ 14 ಎಸೆತಗಳಲ್ಲಿ ಸಿಕ್ಸರ್, 4 ಬೌಂಡರಿ ಸಮೇತ 27 ರನ್ ಗಳಿಸಿ ಭಾರಿ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಅಂತಿಮ ಓವರ್ ಗಳಲ್ಲಿ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ 3 ಎಸೆತಗಳಲ್ಲಿ 11 ರನ್, ಜಾಧವ್ ಔಟಾಗದೆ ಉಳಿದರು. ಆಸೀಸ್ ಪರ ಸ್ಟೋಯಿನ್ಸ್ 2 ವಿಕೆಟ್ ಪಡೆದರೆ, ಕಮ್ಮಿನ್ಸ್, ಸ್ಟಾರ್ಕ್, ನೀಲ್ ತಲಾ 1 ವಿಕೆಟ್ ಪಡೆದರು.

  • ಇಂದು ಭಾರತ, ಆಸ್ಟ್ರೇಲಿಯಾ ಫೈಟ್ – ಕೆನ್ನಿಂಗ್ಟನ್ ಓವೆಲ್‍ನಲ್ಲಿ ಹೈವೋಲ್ಟೇಜ್ ಮ್ಯಾಚ್

    ಇಂದು ಭಾರತ, ಆಸ್ಟ್ರೇಲಿಯಾ ಫೈಟ್ – ಕೆನ್ನಿಂಗ್ಟನ್ ಓವೆಲ್‍ನಲ್ಲಿ ಹೈವೋಲ್ಟೇಜ್ ಮ್ಯಾಚ್

    ಸೌತಾಂಪ್ಟನ್: ಲಂಡನ್‍ನ ಕೆನ್ನಿಂಗ್ಟನ್ ಕ್ರೀಡಾಂಗಣ ಇಂದು ಹೈವೋಲ್ಟೇಜ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

    ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಸೋಲುಣಿಸಿರುವ ಕೊಹ್ಲಿ ಪಡೆ, ಇಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಆದ ತಪ್ಪುಗಳನ್ನ ತಿದ್ದುಕೊಂಡು ಎಚ್ಚರಿಕೆಯಿಂದಾಡಲು ಕೊಹ್ಲಿ ಪಡೆ ತಂತ್ರ ರೂಪಿಸಿದೆ.

    ಮೊದಲ ಪಂದ್ಯದಲ್ಲೇ ಶತಕ ಸಿಡಿಸಿರುವ ರೋಹಿತ್ ಫಾರ್ಮ್ ನಲ್ಲಿದ್ದು ಆಸಿಸ್‍ಗೆ ನಡುಕ ಹುಟ್ಟಿಸಿದ್ದಾರೆ. ಬ್ಯಾಟಿಂಗ್ ವೈಫಲ್ಯ ಕಂಡ ಧವನ್, ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಜಾದವ್, ಕೆಎಲ್ ರಾಹುಲ್, ಧೋನಿ, ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮಿಡಲ್ ಆರ್ಡರ್ ನ ಟ್ರಂಪ್ ಕಾರ್ಡ್ಸ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಎದುರಾಳಿಗಳನ್ನ ಕಟ್ಟಿಹಾಕೋ ತಾಕತ್ತು ಹೊಂದಿದ್ದಾರೆ. ಚಹಲ್, ಕುಲ್ದೀಪ್ ಯಾದವ್ ಆಸಿಸ್ ಬ್ಯಾಟ್ಸ್ ಮನ್‍ಗಳನ್ನ ಕಾಡೋದು ಗ್ಯಾರಂಟಿ.

    ಆಸಿಸ್ ರಣತಂತ್ರ, ಕೊಹ್ಲಿ ಬಾಯ್ಸ್ ಪ್ರತಿತಂತ್ರ:
    ಅಫ್ಘಾನಿಸ್ತಾನ್, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಬೀಗುತ್ತಿರುವ ಫಿಂಚ್ ಪಡೆ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದರೆ ಎದುರಾಳಿ ಭಾರತ ಏನು ಅಷ್ಟೊಂದು ಸುಲಭ ತುತ್ತಲ್ಲ ಅಂತಲೂ ಗೊತ್ತಿದೆ. ಹಾಗಾಗಿ, ಆಸಿಸರು ರಣತಂತ್ರ ಹೆಣೆದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನ್‍ ಆಪ್ ಹೊಂದಿರುವ ಆಸಿಸ್‍ಗೆ ಡೇವಿಡ್ ವಾರ್ನರ್, ಸ್ಮಿತ್ ಆನೆಬಲ. ಫಿಂಚ್, ಖವಾಜ, ಮ್ಯಾಕ್ಸ್ ವೆಲ್, ಸ್ಟೋಯ್ನಿಸ್, ಅಲೆಕ್ಸ್ ಗೆ ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತಿದೆ. ಬಲಿಷ್ಠ ಬೌಲಿಂಗ್ ಪಡೆಯನ್ನೂ ಹೊಂದಿರೋ ಆಸ್ಟ್ರೇಲಿಯಾಗೆ ಕೌಲ್ಟರ್ ನೈಲ್, ಕಮಿನ್ಸ್, ಮಿಚಲ್ ಸ್ಟಾರ್ಕ್, ಝುಂಪಾ ಪ್ರಮುಖ ಅಸ್ತ್ರಗಳಾಗಿವೆ.

    ಒಟ್ಟಿನಲ್ಲಿ, ವಿಶ್ವಕ್ರಿಕೆಟ್‍ನ ದಿಗ್ಗಜರ ಸೆಣಸಾಟ ಫೈನಲ್ ಪಂದ್ಯದಷ್ಟೇ ಕೌತುಕವನ್ನ ಹೆಚ್ಚಿಸಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.

  • ಎಬಿಡಿ ದೇಶದ ಬದಲು ಹಣವನ್ನ ಆಯ್ಕೆ ಮಾಡಿಕೊಂಡಿದ್ದಾರೆ: ಶೋಯೆಬ್ ಅಖ್ತರ್

    ಎಬಿಡಿ ದೇಶದ ಬದಲು ಹಣವನ್ನ ಆಯ್ಕೆ ಮಾಡಿಕೊಂಡಿದ್ದಾರೆ: ಶೋಯೆಬ್ ಅಖ್ತರ್

    ಇಸ್ಲಾಮಾಬಾದ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ದೇಶವನ್ನು ಆಯ್ಕೆ ಮಾಡಿಕೊಳ್ಳದೆ ಹಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ. ಅಖ್ತರ್ ಅವರು ಮಾತನಾಡಿರುವ ವಿಡಿಯೋ ಯೂಟ್ಯೂಬ್‍ನಲ್ಲಿ ಆಪ್‍ಲೋಡ್ ಮಾಡಲಾಗಿದೆ.

    ಮೊದಲಿಗೆ ಎಬಿ ಡಿವಿಯರ್ಸ್ ಅವರ ಮೇಲೆ ಐಪಿಎಲ್ ಹಾಗೂ ಪಿಎಸ್‍ಎಲ್ ಟೂರ್ನಿಗಳ ಒಪ್ಪಂದವನ್ನು ಮುರಿದುಕೊಳ್ಳಲು ಒತ್ತಡ ಹಾಕಲಾಗಿತ್ತು. ಇದರಿಂದ ಪಾರಾಗಲು ನಿರ್ಧರಿಸಿದ್ದ ಎಬಿಡಿ ವಿಶ್ವಕಪ್ ಮುನ್ನವೇ ನಿವೃತ್ತಿ ಘೋಷಣೆ ಮಾಡಿದ್ದರು ಎಂದು ಅಖ್ತರ್ ಹೇಳಿದ್ದಾರೆ.

    ಕೆಲದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ವಿರುದ್ಧ ಸೋಲುಂಡಿದ್ದ ದಕ್ಷಿಣ ಆಫ್ರಿಕಾ ವಿಶ್ವಕಪ್ ಟೂರ್ನಿಯಲ್ಲಿ ಸತತ 3ನೇ ಸೋಲು ಕಂಡಿತ್ತು. ಇದೇ ವೇಳೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಎಬಿಡಿ ಕೊನೆಯ ಪ್ರಯತ್ನ ನಡೆಸಿದ್ದರು ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಖ್ತರ್, ಎಬಿಡಿಗೆ ದೇಶಕ್ಕಿಂತ ಹಣವೇ ಮುಖ್ಯವಾಗಿತ್ತು ಎಂದಿದ್ದಾರೆ.

    ಹಣ ಇಂದು ಅಥವಾ ನಾಳೆ ಬರುತ್ತದೆ. ಆದರೆ ಎಬಿಡಿ ಇದನ್ನು ತಿಳಿದು ದೇಶದ ತಂಡಕ್ಕೆ ತಮ್ಮ ಅಗತ್ಯತೇ ಮನಗಂಡು ನಿರ್ಧಾರ ಕೈಗೊಳ್ಳಬೇಕಿತ್ತು. ವಿಶ್ವಕಪ್‍ಗೆ 1 ವರ್ಷ ಮುಂಚಿತವಾಗಿ ಎಬಿಡಿ ನಿವೃತ್ತಿ ಘೋಷಿಸಿದ್ದರು ಕೂಡ ದಕ್ಷಿಣ ಆಫ್ರಿಕಾ ತಂಡ ಫಾರ್ಮ್‍ನಲ್ಲಿ ಇರಲಿಲ್ಲ. ದೇಶ ವಿಚಾರ ಬಂದಾಗ ಹಣಕ್ಕೆ ಪ್ರಾಮುಖ್ಯತೆ ನೀಡಬಾರದಿತ್ತು. ವಿಶ್ವಕಪ್‍ಗೆ ಮತ್ತೆ ಎಬಿಡಿ ಅವರನ್ನ ಆಯ್ಕೆ ಮಾಡದೆ ಉತ್ತಮ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.

  • ಕಿವೀಸ್, ಟೀಂ ಇಂಡಿಯಾ ದ್ವಿಪಕ್ಷೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

    ಕಿವೀಸ್, ಟೀಂ ಇಂಡಿಯಾ ದ್ವಿಪಕ್ಷೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

    ನವದೆಹಲಿ: ವಿಶ್ವಕಪ್ ಸರಣಿಯಲ್ಲಿ ಟೀಂ ಇಂಡಿಯಾ ಸೇರಿದಂತೆ ವಿಶ್ವ ಕ್ರಿಕೆಟ್ ತಂಡಗಳು ಬ್ಯುಸಿಯಾಗಿದೆ. ಇತ್ತ ಮುಂದಿನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಕೈಗೊಳ್ಳಲಿರುವ ನ್ಯೂಜಿಲೆಂಡ್ ಪ್ರವಾಸ ವೇಳಾಪಟ್ಟಿಯನ್ನು ಬಿಡುಗಡೆಯಾಗಿದೆ.

    ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 5 ಟಿ20, 2 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಇದೇ ಮೊದಲ ಬಾರಿಗೆ ಬಿಸಿಸಿಐ 5 ಪಂದ್ಯಗಳ ಟಿ20 ಸರಣಿಯನ್ನ ಆಯೋಜಿಸಿದೆ.

    2020 ಜನವರಿ 24 ರಿಂದ ಟೂರ್ನಿ ಆರಂಭವಾಗಲಿದ್ದು, ಮೊದಲು ಟಿ20 ಪಂದ್ಯಳು ನಡೆಯಲಿದೆ. ಆ ಬಳಿಕ ಫೆ. 5 ರಿಂದ ಏಕದಿನ ಹಾಗೂ ಫೆ.21 ರಿಂದ ಟೆಸ್ಟ್ ಪಂದ್ಯಗಳು ಆರಂಭಗೊಳ್ಳಲಿದೆ.

    ವೇಳಾಪಟ್ಟಿ ಇಂತಿದೆ

    ಟಿ-20 ಸರಣಿ:

    ಜನವರಿ 24 – ಆಕ್ಲೆಂಡ್
    ಜನವರಿ 26 – ಆಕ್ಲೆಂಡ್
    ಜನವರಿ 29 – ಹ್ಯಾಮಿಲ್ಟನ್
    ಜನವರಿ 31 – ವೆಲ್ಲಿಂಗ್ಟನ್
    ಫೆಬ್ರವರಿ 02 – ತೌರಂಗ

    ಏಕದಿನ ಸರಣಿ:
    ಫೆಬ್ರವರಿ 05 – ಹ್ಯಾಮಿಲ್ಟನ್
    ಫೆಬ್ರವರಿ 08 – ಆಕ್ಲೆಂಡ್
    ಫೆಬ್ರವರಿ 11 – ತೌರಂಗ

    ಟೆಸ್ಟ್ ಸರಣಿ:
    ಫೆಬ್ರವರಿ 21 ರಿಂದ 25 – ವೆಲ್ಲಿಂಗ್ಟನ್
    ಫೆಬ್ರವರಿ 29 ರಿಂದ ಮಾ.04 – ಕ್ರೈಸ್ಟ್ ಚರ್ಚ್

  • ಗ್ಲೌಸ್ ತೆಗೆಯಲು ಹೇಳಿದ ಐಸಿಸಿ – ಧೋನಿ ಪರ ಬ್ಯಾಟ್ ಮಾಡಿದ ಬಿಸಿಸಿಐ

    ಗ್ಲೌಸ್ ತೆಗೆಯಲು ಹೇಳಿದ ಐಸಿಸಿ – ಧೋನಿ ಪರ ಬ್ಯಾಟ್ ಮಾಡಿದ ಬಿಸಿಸಿಐ

    ನವದೆಹಲಿ: ಸೇನಾ ಲಾಂಛನ ಇರುವ ಗ್ಲೌಸನ್ನು ಧರಿಸಿ ಆಟವಾಡುತ್ತಿರುವ ಧೋನಿ ಪರ ಸುಪ್ರೀಂ ಕೋರ್ಟ್ ನೇಮಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಬ್ಯಾಟಿಂಗ್ ಮಾಡಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವಿನೋದ್ ರಾಯ್, ಧೋನಿ ಅವರು ಗ್ಲೌಸ್ ಬಳಸಿ ಆಡಲು ಅನುಮತಿ ನೀಡುವಂತೆ ಐಸಿಸಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಗ್ಲೌಸ್ ನಲ್ಲಿ ಯಾವುದೇ ಧರ್ಮ ಮತ್ತು ಜಾಹೀರಾತು ಇಲ್ಲ. ಹೀಗಾಗಿ ಬಿಸಿಸಿಐ ಐಸಿಸಿ ಜೊತೆ ಮನವಿ ಮಾಡಿ ಧೋನಿಗೆ ಗ್ಲೌಸ್ ಧರಿಸಲು ಅನುಮತಿ ನೀಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡ್‍ನ ಸೌಥಾಂಪ್ಟನ್ ಮೈದಾನದಲ್ಲಿ ಬುಧವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಧೋನಿ ಪ್ಯಾರಾಚೂಟ್ ರೆಜಿಮೆಂಟ್‍ನ ಬಲಿದಾನ್ ಲಾಂಛನ ಇರುವ ಗ್ಲೌಸ್ ಧರಿಸಿದ್ದರು. ಈ ಪಂದ್ಯದಲ್ಲಿ ಧೋನಿ ಆಂಡಿಲೆ ಫೆಹ್ಲುಕ್ವವೋ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಈ ವೇಳೆ ಕ್ಯಾಮೆರಾದಲ್ಲಿ ಧೋನಿ ಗ್ಲೌಸ್ ಸೆರೆಯಾದ ಬಳಿಕ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

    ಧೋನಿ ಕೈಯಲ್ಲಿದ್ದ ಗ್ಲೌಸ್‍ಗೆ ಐಸಿಸಿ ಅಕ್ಷೇಪ ಮಾಡಿತ್ತು. ಐಸಿಸಿ ಉಪಕರಣ ಮತ್ತು ಪೋಷಾಕು ನಿಯಮದ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಯಾವುದೇ ರಾಜಕೀಯ, ಜಾತಿ ಇಲ್ಲವೇ ಜನಾಂಗೀಯ ಚಟುವಟಿಕೆಗಳಿಗೆ ಸಂಬಂಧಿತ ಸಂದೇಶಗಳನ್ನು ಪ್ರದರ್ಶನ ಮಾಡುವಂತಿಲ್ಲ. ಆದಕ್ಕಾಗಿ ಈ ಲಾಂಛನ ಇರುವ ಗ್ಲೌಸ್‍ನ್ನು ತೆಗೆದು ಆಡಲು ಧೋನಿಗೆ ಸೂಚಿಸುವಂತೆ ಬಿಸಿಸಿಐಗೆ ತಾಕೀತು ಮಾಡಿತ್ತು.

    ಐಸಿಸಿಯ ಈ ಕ್ರಮವನ್ನು ಭಾರತದ ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ್ದಾರೆ. ಮೊದಲು ನಿಮ್ಮ ಅಂಪೈರ್‍ ಗಳಿಗೆ ಸರಿಯಾಗಿ ತೀರ್ಪು ನೀಡಲು ಹೇಳಿ. ಇಂತಹ ಸಿಲ್ಲಿ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಬರೆದು ಐಸಿಸಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಈ ಪ್ಯಾರಾಚೂಟ್ ರೆಜಿಮೆಂಟ್‍ನ ಬಲಿದಾನ್ ಲಾಂಛನ ಇರುವ ವಸ್ತುಗಳನ್ನು ಬಳಸಲು ಕೇವಲ ಪ್ಯಾರಾಮಿಲಿಟರಿ ಕಾಮಾಂಡೋಗಳಿಗೆ ಮಾತ್ರ ಅನುಮತಿ ಇದೆ. 2011 ರಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇರಿದ್ದ ಧೋನಿ, 2015ರಲ್ಲಿ ಪ್ಯಾರಾ ಬ್ರಿಗೇಡ್‍ನಿಂದ ತರಬೇತಿ ಪಡೆದಿದ್ದರು. ಆದ್ದರಿಂದ ಅವರು ಧರಿಸಬಹುದು. ಸೇನೆ ನಮ್ಮ ದೇಶದ ಹೆಮ್ಮೆಯ ವಿಚಾರ. ಹೀಗಾಗಿ ಗ್ಲೌಸ್ ಧರಿಸಿದರೆ ತಪ್ಪೇನು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/omi_anpat619/status/1136891152379142144

    ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಮಂತ್ರಿಯಾದ ಫವಾದ್ ಚೌಧರಿ ಅವರು ಟ್ವೀಟ್ ಮಾಡಿ, “ಧೋನಿ ಇಂಗ್ಲೆಂಡ್‍ಗೆ ವಿಶ್ವಕಪ್ ಅಡಲು ಹೋಗಿದ್ದಾರೆ ಹೊರತು ಮಹಾಭಾರತಕ್ಕಲ್ಲ. ಭಾರತೀಯ ಮಾಧ್ಯಮಗಳು ಈ ವಿಚಾರದ ಬಗ್ಗೆ ವಿಲಕ್ಷಣ ಚರ್ಚೆ ಮಾಡುತ್ತಿದ್ದಾರೆ ಯಾಕೆ? ಯುದ್ಧ ದಾಹಿಗಳಾಗಿರುವ ಈ ಮಾಧ್ಯಮದ ಮಂದಿಯನ್ನು ಸಿರಿಯಾ, ಅಫಘಾನಿಸ್ತಾನ ಅಥವಾ ರುವಾಂಡಗಳಿಗೆ ಸೈನಿಕರನ್ನಾಗಿ ಕಳಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

  • ‘ಕಿಂಗ್ ಕೊಹ್ಲಿ’ – ಮೈಕಲ್ ವಾನ್ ಟ್ವೀಟ್‍ಗೆ ಐಸಿಸಿ ಖಡಕ್ ಉತ್ತರ

    ‘ಕಿಂಗ್ ಕೊಹ್ಲಿ’ – ಮೈಕಲ್ ವಾನ್ ಟ್ವೀಟ್‍ಗೆ ಐಸಿಸಿ ಖಡಕ್ ಉತ್ತರ

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮುನ್ನವೇ ಐಸಿಸಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಜನಂತೆ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಐಸಿಸಿ ಕಾಲೆಳೆದಿದ್ದ ಇಂಗ್ಲೆಂಡಿನ ಮಾಜಿ ಕ್ರಿಕೆಟ್ ಆಟಗಾರ ಮೈಕಲ್ ವಾನ್‍ಗೆ ಐಸಿಸಿ ಖಡಕ್ ಉತ್ತರ ನೀಡಿದೆ.

    ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಐಸಿಸಿ ಕೆಲ ವಿಶೇಷ ಟ್ವೀಟ್ ಗಳನ್ನು ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತದೆ. ಕೊಹ್ಲಿ ಅವರ ಪೈಂಟಿಂಗ್ ಟ್ವೀಟ್‍ಗೆ ಹಲವರು ತಮ್ಮದೇ ಪ್ರತಿಕ್ರಿಯೆ ನೀಡದ್ದು, ಕೆಲವರು ಐಸಿಸಿ ವಿರುದ್ಧ ಟೀಕೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ಕೆಲವರು ಪೈಂಟಿಂಗ್ ನಲ್ಲಿ ಇರುವುದು ಕೊಹ್ಲಿನ ಅಥವಾ ಕೆಎಲ್ ರಾಹುಲ್ ಅವರ ಎಂದು ಪ್ರಶ್ನೆ ಮಾಡಿದ್ದಾರೆ.

    ಇತ್ತ ಮೈಕಲ್ ವಾನ್ ಅವರು ಕೂಡ ಐಸಿಸಿ ಟ್ವೀಟ್‍ಗೆ ಪರೋಕ್ಷವಾಗಿ ಕಿಡಿಕಾರಿದ್ದು, ಟ್ವೀಟ್ ನಿಷ್ಪಕ್ಷಪಾತ ಮಾಡಿದಂತೆ ಕಾಣುತ್ತದೆ ಎಂದು ಬರೆದುಕೊಂಡಿದ್ದರು. ಮೈಕಲ್ ವಾನ್ ರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಮೂರು ಸ್ಕ್ರೀನ್ ಶಾಟ್ ಫೋಟೋಗಳನ್ನು ಟ್ವೀಟ್ ಮಾಡಿದೆ. ಮೊದಲ ಫೋಟೋದಲ್ಲಿ ಐಸಿಸಿ ಏಕದಿನ ಮಾದರಿಯ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ, 2ನೇ ಫೋಟೋದಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಹಾಗೂ ಐಸಿಸಿ ವಾರ್ಷಿಕ ಕ್ರಿಕೆಟಿಗ ಪ್ರಶಸ್ತಿಯ ಹ್ಯಾಟ್ರಿಕ್ ಸಾಧನೆ ಮಾಡಿರುವ ಕೊಹ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದೆ.

    ಐಸಿಸಿ ಪ್ರತಿಕ್ರಿಯೆಗೆ ಅಭಿಮಾನಿಗಳು ಫಿದಾ ಆಗಿದ್ದು, ಮೈಕಲ್ ವಾನ್ ಅವರಿಗೆ ತಕ್ಕ ಉತ್ತರ ಎಂದು ಪ್ರತಿಕ್ರಿಯೆ ನೀಡಿದ್ದರೆ. ಉಳಿದಂತೆ ಫೋಟೋದಲ್ಲಿ ಕೊಹ್ಲಿ ಕೈಯಲ್ಲಿ ಬ್ಯಾಟ್ ಹಾಗೂ ಬಾಲ್ ಹಿಡಿದು ತಾನೇ ನಂ.1 ಎಂಬಂತೆ ಇರುವ ಪೈಂಟಿಂಗ್ ಇದಾಗಿದೆ.

  • ರೋಹಿತ್ ಶತಕ ಸಾಧನೆ – ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ

    ರೋಹಿತ್ ಶತಕ ಸಾಧನೆ – ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವಿನ ಸಿಹಿ

    ಸೌತಾಂಪ್ಟನ್: 2019 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ಕೊಹ್ಲಿ ನಾಯಕತ್ವದ ತಂಡ ದಕ್ಷಿಣಾ ಆಫ್ರಿಕಾ ವಿರುದ್ಧ 15 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಗೆಲುವು ಪಡೆದಿದೆ.

    ಗೆಲ್ಲಲು 228 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರ ಅಜೇಯ ಶತಕ 122 ರನ್(144 ಎಸೆತ 13 ಬೌಂಡರಿ, 2 ಸಿಕ್ಸರ್) ನೆರವಿನಿಂದ 47.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿ ಗುರಿ ಮುಟ್ಟಿತು. ಭಾರತದ ಪರ ಧೋನಿ 34 ರನ್ (46ಎಸೆತ, 2 ಬೌಂಡರಿ), ರಾಹುಲ್ 26 ರನ್, ಕೊಹ್ಲಿ 18 ರನ್, ಪಾಂಡ್ಯ ಔಟಾಗದೆ 15 ರನ್ ಗಳಿಸಿ ಅಜೇಯರಾಗಿ ಉಳಿದರು.

    ರೋಹಿತ್ ಶರ್ಮಾ, ಶಿಖರ್ ಧವನ್ ಎಚ್ಚರಿಕೆ ಆಟದ ಮೂಲಕ ಉತ್ತಮ ಆರಂಭ ನೀಡುವ ಪ್ರಯತ್ನ ನಡೆಸಿದರು. ಆದರೆ ವಿಕೆಟ್ 8 ರನ್ ಗಳಿಸಿದ್ದ ಧವನ್ ವಿಕೆಟ್ ಪಡೆದ ರಬಾಡಾ ಟೀಂ ಇಂಡಿಯಾಗೆ ಮೊದಲ ಆಘಾತ ನೀಡಿದರು. ಇತ್ತ ರೋಹಿತ್ ಶರ್ಮಾ 2 ಜೀವದಾನಗಳನ್ನು ಪಡೆದು ಬ್ಯಾಟಿಂಗ್ ಮುಂದುವರಿಸಿದರು. ಧವನ್ ಔಟಾಗುತ್ತಿದಂತೆ ಕಣಕ್ಕೆ ಇಳಿದ ಕೊಹ್ಲಿ ಕೂಡ ನಿಧಾನಗತಿ ಬ್ಯಾಟಿಂಗ್‍ಗೆ ನಡೆಸಿ ಕೆಟ್ಟ ಹೊಡೆತಗಳಷ್ಟೇ ದಂಡಿಸುವ ಪ್ರಯತ್ನ ನಡೆಸಿದರು. ಈ ಹಂತದಲ್ಲಿ ಡ್ವೇನ್ ಪೆಟೊರ್ಟರಿಯಸ್ ಕೊಹ್ಲಿ ವಿಕೆಟ್ ಪಡೆದರು. ಈ ವೇಳೆಗೆ ಟೀಂ ಇಂಡಿಯಾ 15.3 ಓವರ್ ಗಳಲ್ಲಿ 54 ರನ್ ಗಳಷ್ಟೇ ಗಳಿಸಿತ್ತು.

    ರೋಹಿತ್ ಶತಕ: ಪಂದ್ಯದಲ್ಲಿ ಸಿಕ್ಕ ಜೀವದಾನಗಳನ್ನು ಉಪಯೋಗಿಸಿ ಕೊಂಡು ಎಚ್ಚರಿಕೆಯ ಬ್ಯಾಟಿಂಗ್ ಮುಂದುವರಿಸಿದ ರೋಹಿತ್ 70 ಎಸೆತಗಳಲ್ಲಿ ತಮ್ಮ ಅರ್ಧ ಶತಕ ಪೂರ್ಣಗೊಳಿಸಿದರು. ಇತ್ತ ರೋಹಿತ್ ರನ್ನು ಕೂಡಿಕೊಂಡ ಕೆಎಲ್ ರಾಹುಲ್ 3ನೇ ವಿಕೆಟ್‍ಗೆ 85 ರನ್ ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ 26 ರನ್ ಗಳಿಸಿ ರಬಾಡಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

    ಟೀಂ ಇಂಡಿಯಾ ಗೆಲುವಿಗೆ 108 ಎಸೆತಗಳಲ್ಲಿ 89 ರನ್ ಗಳು ಅಗತ್ಯವಿರುವ ವೇಳೆ ಮಾಜಿ ನಾಯಕ ಧೋನಿ ಬ್ಯಾಟಿಂಗ್ ಇಳಿದರು. ವಿಕೆಟ್ ಕಾಯ್ದುಕೊಳ್ಳುತ್ತಲೇ ರನ್ ಪಡೆಯುತ್ತಿದ್ದ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದರು. 128 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ರೋಹಿತ್ ಶತಕ ಸಾಧನೆ ಮಾಡಿ ತಂಡವನ್ನು ಜಯದತ್ತ ಮುನ್ನಡೆಸಿದರು. ಆ ಮೂಲಕ ವೃತ್ತಿ ಜೀವನದ 23ನೇ ಶತಕವನ್ನು ಪೂರೈಸಿದರು. ಇದು ರೋಹಿತ್ ಶರ್ಮಾರ 2ನೇ ವಿಶ್ವಕಪ್ ಶತಕವಾಗಿದೆ. 22 ಶತಕ ಗಳಿಸಿದ್ದ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿರನ್ನು ರೋಹಿತ್ ಹಿಂದಿಕ್ಕಿದರು.

    ಇತ್ತ ರೋಹಿತ್ ಜೊತೆಯಾಗಿ ಟೀಂ ಇಂಡಿಯಾವನ್ನು ಗೆಲುವಿನ ಸನಿಹ ತಂಡ ಮಾಜಿ ನಾಯಕ ಧೋನಿ 34 ರನ್ ಗಳಿಸಿ ನಿರ್ಮಿಸಿದರು. ಈ ಜೋಡಿ 4 ವಿಕೆಟ್‍ಗೆ 88 ಎಸೆತಗಳಲ್ಲಿ 74 ರನ್ ಜೊತೆಯಾಟ ನೀಡಿತು. 23 ಎಸೆತಗಳಲ್ಲಿ 15 ರನ್ ಅಗತ್ಯವಿದ್ದ ವೇಳೆ ಕ್ರಿಸ್ ಗಿಳಿಸಿದ ಹಾರ್ದಿಕ್ ಪಾಂಡ್ಯ 3 ಬೌಂಡರಿ ಸಹಿತ 15 ರನ್ ಗಳಿಸಿದರು.

    ಇತ್ತ ರೋಹಿತ್ ಶರ್ಮಾ ಶತಕದೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ 26 ಶತಕಗಳನ್ನು ಸಿಡಿಸಿದ್ದ ಆಸ್ಟ್ರೇಲಿಯಾ ಆಟಗಾರರ ದಾಖಲೆಯನ್ನು ಸರಿಗಟ್ಟಿತು. ಅಲ್ಲದೇ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿ 50ನೇ ಗೆಲುವು ಪಡೆದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ಸಿಲುಕಿ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಪರ ನಾಯಕ ಡುಪ್ಲೆಸಿಸ್ 39 ರನ್, ಮಿಲ್ಲರ್ 31 ರನ್ ಹಾಗೂ ಅಂತಿಮ ಹಂತದಲ್ಲಿ (34 ಎಸೆತ, 1 ಬೌಂಡರಿ, 2 ಸಿಕ್ಸರ್), ರಬಾಡ ಔಟಾಗದೇ 31 ರನ್(35 ಎಸೆತ, 2 ಬೌಂಡರಿ) ಗಳಿಸಿ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಭಾರತದ ಪರ ಚಹಲ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್, ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.

  • ಆರಂಭ, ಮಧ್ಯಮ ಕ್ರಮಾಂಕದಲ್ಲಿ ಕುಸಿತ –  ಬೌಲರ್‌ಗಳ ಆಟದಿಂದ ಭಾರತಕ್ಕೆ 228 ರನ್ ಗುರಿ

    ಆರಂಭ, ಮಧ್ಯಮ ಕ್ರಮಾಂಕದಲ್ಲಿ ಕುಸಿತ – ಬೌಲರ್‌ಗಳ ಆಟದಿಂದ ಭಾರತಕ್ಕೆ 228 ರನ್ ಗುರಿ

    ಸೌತಾಂಪ್ಟನ್: ವಿಶ್ವಕಪ್ ಕ್ರಿಕೆಟಿನ ಮೊದಲ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ 228 ರನ್‍ಗಳ ಗುರಿಯನ್ನು ನೀಡಿದೆ.

    ಆರಂಭ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್‍ಗಳು ಬೇಗನೇ ಔಟಾದರೂ ಕೊನೆಯಲ್ಲಿ ಬೌಲರ್ ಗಳು ಆಡಿದ ಪರಿಣಾಮ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು.

    ಆಫ್ರಿಕಾಗೆ ಮೊದಲ ಆಘಾತ ನೀಡಿದ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ 2ನೇ ಮತ್ತು 3ನೇ ಓವರಿನಲ್ಲಿ ಕ್ರಮವಾಗಿ 6 ರನ್ ಗಳಿಸಿದ್ದ ಹಶಿಮ್ ಆಮ್ಲಾ, 10 ರನ್ ಗಳಿಸಿದ್ದ ಡಿ ಕಾಕ್ ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್‍, ರಸಿ ವ್ಯಾನ್ ಡರ್ ಡಸೆನ್  ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಈ ಜೋಡಿ 3ನೇ ವಿಕೆಟ್‍ಗೆ 54 ರನ್ ಗಳ ಜೊತೆಯಾಟ ನೀಡಿತು.

    ರೋಹಿತ್ ಕ್ಯಾಚ್‍ ಡ್ರಾಪ್: ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಠಿಣ ಕ್ಯಾಚ್ ಡ್ರಾಪ್ ಮಾಡಿದರು. ಇದಕ್ಕೂ ಮುನ್ನ ಆಮ್ಲಾ ಕ್ಯಾಚ್ ಪಡೆದಿದ್ದ ರೋಹಿತ್, ಬುಮ್ರಾ ಬೌಲಿಂಗ್ ನಲ್ಲಿ ಫಾಫ್ ಡುಪ್ಲೆಸಿಸ್ ಗೆ ಜೀವದಾನ ನೀಡಿದ್ದರು.

    ಚಹಲ್ ಮೋಡಿ: ಈ ಹಂತದಲ್ಲಿ ದಾಳಿಗಿಳಿದ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ 38 ರನ್ ಗಳಿಸಿ ತಂಡಕ್ಕೆ ಮಾರಕವಾಗುತ್ತಿದ್ದ ಡುಪ್ಲೆಸಿ ಹಾಗೂ 22 ರನ್ ಗಳಿಸಿದ್ದ ರಸಿ ವ್ಯಾನ್ ಡರ್ ಡಸೆನ್ ವಿಕೆಟ್ ಪಡೆದು ಪಡೆದು ಎದುರಾಳಿ ತಂಡಕ್ಕೆ ಆಘಾತ ಡಬಲ್ ಆಘಾತ ನೀಡಿದರು. ಇದರ ಬೆನ್ನಲ್ಲೇ ಜೆಡಿ ಡುಮಿನಿರನ್ನ ಕುಲ್ದೀಪ್ ಯಾದವ್ ಎಲ್‍ಬಿ ಬಲೆಗೆ ಕೆಡವಿದರು. 22.6 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಐವರು ಬ್ಯಾಟ್ಸ್ ಮನ್‍ಗಳು 89 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.

    ಮಧ್ಯಮ ಕ್ರಮಾಂಕದಲ್ಲಿ ಒಂದಾದ ಡೇವಿಡ್ ಮಿಲ್ಲರ್ ಹಾಗೂ ಡ್ವೇನ್ ಪೆಟೊರ್ಟರಿಯಸ್ ಜೋಡಿ 75 ಎಸೆತಗಳಲ್ಲಿ 46 ರನ್ ಜೊತೆಯಾಟ ಆಡಿ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ಎಚ್ಚರಿಕೆ ವಹಿಸಿದರು. 40 ಎಸೆತಗಳಲ್ಲಿ 31 ರನ್ ಸಿಡಿಸಿದ್ದ ಮಿಲ್ಲರ್, ಚಹಲ್‍ಗೆ ಕ್ಯಾಚ್ ನೀಡಿ ಔಟಾದರು.

    39.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡಿದ್ದಾಗ 8ನೇ ವಿಕೆಟ್‍ಗೆ ಕ್ರಿಸ್ ಮೋರಿಸ್ ಮತ್ತು ಕಗಿಸೊ ರಬಾಡ 66 ರನ್ ಜೊತೆಯಾಟವಾಡಿ ತಂಡ 200ರ ಗಡಿ ದಾಟುವಂತೆ ಮಾಡಿದರು. ಮೋರಿಸ್ 42 ರನ್(34 ಎಸೆತ, 1 ಬೌಂಡರಿ, 2 ಸಿಕ್ಸರ್), ರಬಾಡ ಔಟಾಗದೇ 31 ರನ್(35 ಎಸೆತ, 2 ಬೌಂಡರಿ) ಹೊಡೆದು ಚೇತರಿಕೆಗೆ ಕಾರಣರಾದರು.

    ಚಹಲ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್, ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.

  • ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ – ಕೊಹ್ಲಿ ದಾಖಲೆ ಮುರಿಯಲು ಆಮ್ಲಾಗೆ ಬೇಕಿದೆ 77 ರನ್

    ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ – ಕೊಹ್ಲಿ ದಾಖಲೆ ಮುರಿಯಲು ಆಮ್ಲಾಗೆ ಬೇಕಿದೆ 77 ರನ್

    ಸೌತಾಂಪ್ಟನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯವನ್ನು ಎದುರಿಸುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

    ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ತಂಡ ಟೀಂ ಇಂಡಿಯಾ ಎನಿಸಿಕೊಂಡಿದೆ. ತಂಡದಲ್ಲಿ ಪ್ರಮುಖವಾಗಿ ವಿಜಯ್ ಶಂಕರ್ ಅವರ ಬದಲಾಗಿ ಕೇದಾರ್ ಜಾಧವ್ ಅವರು ಅವಕಾಶ ಪಡೆದಿದ್ದಾರೆ. ಉಳಿದಂತೆ ಆರಂಭಿಕ ಸ್ಥಾನದಲ್ಲಿ ರೋಹಿತ್, ಧವನ್ ಇದ್ದರೆ, ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಬಲ ತುಂಬಲಿದ್ದಾರೆ.

    ಇತ್ತ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಟೀಂ ಇಂಡಿಯಾ ಇಂದು ಸೌತ್ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿದಿದ್ದು, ಇದೇ ಪಂದ್ಯದಲ್ಲಿ ನಾಯಕ ಕೊಹ್ಲಿ ಅವರ ದಾಖಲೆಯನ್ನು ಮುರಿಯುವ ಅವಕಾಶವನ್ನು ದಕ್ಷಿಣ ಆಫ್ರಿಕಾ ತಂಡದ ಹಶಿಮ್ ಆಮ್ಲಾ ಪಡೆದಿದ್ದಾರೆ.

    ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 183 ಪಂದ್ಯ, 175 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ 8 ಸಾವಿರ ರನ್ ಪೂರೈಸಿದ್ದರು. ಈ ವೇಳೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ 190 ಪಂದ್ಯ 182 ಇನ್ನಿಂಗ್ಸ್ ನಲ್ಲಿ ಈ ದಾಖಲೆ ಮಾಡಿದ್ದರು.

    ಸದ್ಯ ಹಶಿಮ್ ಆಮ್ಲಾ 175 ಪಂದ್ಯ 172 ಇನ್ನಿಂಗ್ಸ್ ಗಳಲ್ಲಿ 7923 ರನ್ ಗಳಿಸಿದ್ದು, ಕೊಹ್ಲಿ ದಾಖಲೆ ಮುರಿಯಲು 77 ರನ್ ಅಗತ್ಯವಿದೆ. ಇಂದು ನಡೆಯುವ ಪಂದ್ಯದಲ್ಲಿ ಆಮ್ಲಾ ಅವರಿಗೆ ಈ ದಾಖಲೆ ಬರೆಯುವ ಅವಕಾಶ ಇದೆ. ಇತ್ತ ದಕ್ಷಿಣ ಆಫ್ರಿಕಾ ಆರಂಭಿಕ ಕ್ವಿಂಟನ್ ಡಿ ಕಾಕ್ 22 ರನ್ ಗಳಿಸಿದರೆ 8 ಸಾವಿರ ರನ್ ಪೂರೈಸಲಿದ್ದಾರೆ. ಆದರೆ ಹೆಚ್ಚಿನ ಪಂದ್ಯಗಳಲ್ಲಿ ಆಡಿರುವುದರಿಂದ ದಾಖಲೆ ಸೃಷ್ಟಿಸುವ ಅವಕಾಶ ಇಲ್ಲ.