Tag: ವಿಶ್ವಕಪ್

  • ವಿಶ್ವಕಪ್ 2019: ಮಳೆಯಲ್ಲಿ ಕೊಚ್ಚಿ ಹೋದ ಇಂಡೋ-ಕಿವೀಸ್ ಪಂದ್ಯ

    ವಿಶ್ವಕಪ್ 2019: ಮಳೆಯಲ್ಲಿ ಕೊಚ್ಚಿ ಹೋದ ಇಂಡೋ-ಕಿವೀಸ್ ಪಂದ್ಯ

    – ಐಸಿಸಿ ವಿರುದ್ಧ ಅಭಿಮಾನಿಗಳ ಬೇಸರ

    ಲಂಡನ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವರುಣನ ಆಟ ಹೆಚ್ಚಾಗಿದ್ದು, ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ ನಡುವಿನ ಪಂದ್ಯವೂ ಕೂಡ ಮಳೆಗೆ ಆಹುತಿಯಾಗಿದೆ.

    ಟೂರ್ನಿಯಲ್ಲಿ ಇದುವರೆಗೂ 4 ಪಂದ್ಯಗಳು ಮಳೆಯಿಂದ ರದ್ದಾಗಿದ್ದು, ಇಂಗ್ಲೆಂಡ್ ನಲ್ಲಿ ಮಳೆಗಾಲ ಇದ್ದರೂ ಕೂಡ ಟೂರ್ನಿ ಆಯೋಜಿಸಲು ಅವಕಾಶ ನೀಡಿದಕ್ಕೆ ಅಭಿಮಾನಿಗಳು ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ದಿನ ಆಟಗಾರರು ಅಭ್ಯಾಸ ನಡೆಸಲು ಕೂಡ ಮಳೆ ಹೆಚ್ಚಿನ ಅವಕಾಶ ನೀಡಿರಲಿಲ್ಲ. ಪರಿಣಾಮ ಆಟಗಾರರು ನಿಗದಿತ ಅವಧಿಗೂ ಮುನ್ನವೇ ಅಭ್ಯಾಸದಿಂದ ತೆರಳಿದ್ದರು. ಇಂದು ಕೂಡ ನಿರಂತರವಾಗಿ ಸುರಿದ ಮಳೆ ಪಂದ್ಯದ ಟಾಸ್ ನಡೆಯಲು ಅವಕಾಶ ನೀಡಿರಲಿಲ್ಲ. ಅಂಪೈರ್ ಗಳು ಪಂದ್ಯವನ್ನು ರದ್ದುಗೊಳಿಸಿದ್ದು, ಪರಿಣಾಮ ಇತ್ತಂಡಗಳು ತಲಾ 1 ಅಂಕವನ್ನು ಹಂಚಿಕೊಂಡಿದೆ. 3 ಪಂದ್ಯಗಳಿಂದ 5 ಅಂಕಗಳನ್ನು ಗಳಿಸಿರುವ ಭಾರತ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. ಇತ್ತ 4 ಪಂದ್ಯಗಳಿಂದ 7 ಅಂಕಗಳನ್ನು ಪಡೆದಿರುವ ನ್ಯೂಜಿಲೆಂಡ್ ನಂ.1 ಸ್ಥಾನದಲ್ಲಿ ಮುಂದುವರಿದಿದೆ.

    ಭಾರತ ಹಾಗೂ ನ್ಯೂಜಿಲೆಂಡ್ ಇತ್ತಂಡಗಳು ಕೂಡ ಬಲಿಷ್ಠವಾಗಿದ್ದು, ಇಂದು ಯಾವ ತಂಡ ಗೆಲ್ಲಲಿದೆ ಎಂಬುವುದರ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಪಂದ್ಯ ರದ್ದಾಗಿರುವುದರಿಂದ ಅಭಿಮಾನಿಗಳು ಸಾಕಷ್ಟು ನಿರಾಸೆ ಅನುಭವಿಸಿದ್ದಾರೆ. ಅಲ್ಲದೇ ಹಲವರು ಐಸಿಸಿ ವಿಶ್ವಕಪ್ ಟೂರ್ನಿಯ ಬಗ್ಗೆ ಮಿಮ್ಸ್ ಹಂಚಿಕೊಂಡಿದ್ದಾರೆ. ಈಗಾಗಲೇ ವಿಶ್ವಕಪ್ ಟೂರ್ನಿಯ ಲೋಗೋಗೆ ಕೊಡೆ ಹಿಡಿದಿರುವ ಫೋಟೋ ಸಾಕಷ್ಟು ವೈರಲ್ ಆಗಿದ್ದು, ಸದ್ಯ ನೀರಿನಲ್ಲೇ ಕ್ರಿಕೆಟ್ ಆಡುತ್ತಿರುವ ಯುವಕರ ಫೋಟೋವನ್ನು ಟ್ವೀಟ್ ಮಾಡಿ ನೆಟ್ಟಿಗರು ಐಸಿಸಿ ಕಾಲೆಳೆದಿದ್ದಾರೆ.

    ಚೆನ್ನೈನ ಕ್ರೀಡಾಂಗಣ ಖಾಲಿ ಇದ್ದು, ಟೂರ್ನಿಯ ಎಲ್ಲಾ ಪಂದ್ಯಗಳನ್ನು ಇಲ್ಲಿಗೆ ಬದಲಾಯಿಸಿ ಎಂದು ಅಭಿಮಾನಿಯೊಬ್ಬರು ಐಸಿಸಿಗೆ ಮನವಿ ಮಾಡಿದ್ದಾರೆ. ಧೋನಿ ಧರಿಸುವ ಗ್ಲೌಸ್ ಬಗ್ಗೆ ಐಸಿಸಿಗೆ ಹೆಚ್ಚು ಆಸಕ್ತಿ ಇದ್ದು, ಆದರೆ ಟೂರ್ನಿಯನ್ನು ಆಯೋಜಿಸುವುದರಲ್ಲಿ ಎಡವಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಐಸಿಸಿ ವಿರುದ್ಧ ಟ್ರೋಲ್ ಗಳ ಸಂಖ್ಯೆ ಹೆಚ್ಚಿದೆ.

  • ಕೋಚ್ ರವಿಶಾಸ್ತ್ರಿ ಅವಧಿ ವಿಸ್ತರಣೆ

    ಕೋಚ್ ರವಿಶಾಸ್ತ್ರಿ ಅವಧಿ ವಿಸ್ತರಣೆ

    ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಕೋಚ್‍ಗಳ ಅವಧಿಯನ್ನು ಬಿಸಿಸಿಐ 45 ದಿನಗಳ ಕಾಲ ವಿಸ್ತರಣೆ ಮಾಡಿದೆ.

    ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದು, ಈ ವೇಳೆಯೇ ಬಿಸಿಸಿಐ ಕೋಚ್‍ಗಳ ಅವಧಿಯನ್ನು ವಿಸ್ತರಣೆ ಮಾಡಿದೆ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನ ಬದಲಾಗುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಅವಧಿಯನ್ನು ವಿಸ್ತರಿಸಲಾಗಿದೆ.

    ಟೀಂ ಇಂಡಿಯಾಗೆ ರವಿಶಾಸ್ತ್ರಿ ಅವರೊಂದಿಗೆ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್, ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆಗಿ ಆರ್ ಶ್ರೀಧರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಕೋಚ್‍ಗಳ ಅವಧಿಯನ್ನ ವಿಸ್ತರಣೆ ಮಾಡುವ ತೀರ್ಮಾನ ಪ್ರಕಟಿಸಲಾಗಿದೆ.

    ಸದ್ಯ ಇರುವ ಕೋಚ್‍ಗಳ ಅವಧಿ ವಿಶ್ವಕಪ್ ಬಳಿಕ ಮುಕ್ತಾಯ ಆಗಲಿದ್ದು, ಸದ್ಯ ಅವಧಿ ವಿಸ್ತರಣೆ ಮಾಡಿರುವುದರಿಂದ ವೆಸ್ಟ್ ಇಂಡೀಸ್ ಟೂರ್ನಿಯ ಮುಕ್ತಾಯದ ವರೆಗೂ ಕಾರ್ಯನಿರ್ವಹಿಸಲು ಅವಕಾಶವಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ತಲಾ 3 ಟಿ20 ಹಾಗೂ ಏಕದಿನ ಪಂದ್ಯ ಸೇರಿದಂತೆ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆಗಸ್ಟ್ 3 ರಿಂದ ಸೆಪ್ಟೆಂಬರ್ 3ರವರೆಗೂ ಟೂರ್ನಿ ನಡೆಯಲಿದೆ.

    ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಆಡಿರುವ 2 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಇಂದು ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪಂದ್ಯ ಆರಂಭವಾಗುವುದೇ ಅನುಮಾನವಾಗಿದೆ.

  • ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿ ಇರಬೇಕೆಂಬುದು ನನ್ನಾಸೆ: ಹಾರ್ದಿಕ್ ಪಾಂಡ್ಯ

    ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿ ಇರಬೇಕೆಂಬುದು ನನ್ನಾಸೆ: ಹಾರ್ದಿಕ್ ಪಾಂಡ್ಯ

    ಲಂಡನ್: ಕಳೆದ ಮೂರು ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬುವುದು ನನ್ನ ಗುರಿಯಾಗಿದ್ದು, ಅದಕ್ಕಾಗಿ ಹೆಚ್ಚು ಶ್ರಮ ವಹಿಸಿದ್ದೇನೆ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್, ಸದ್ಯ ನಾನು ಇಂಗ್ಲೆಂಡಿನಲ್ಲಿರುವುದು ಕೇವಲ ವಿಶ್ವಕಪ್ ಗೆಲುವು ಪಡೆಯಲು ಮಾತ್ರ. ತನ್ನ ಜೀವನದಲ್ಲಿ ಭಾರತ ಪರ ವಿಶ್ವಕಪ್ ಕ್ರಿಕೆಟ್ ಆಡವುದು ನನ್ನ ಕೋರಿಕೆ ಆಗಿತ್ತು. ಅದಕ್ಕಾಗಿಯೇ ಸಾಕಷ್ಟು ಶ್ರಮ ವಹಿಸಿದ್ದೆ ಎಂದಿದ್ದಾರೆ.

    ಟೀಂ ಇಂಡಿಯಾ ನನಗೆ ಬೇಕಾದ ಎಲ್ಲವನ್ನು ನೀಡಿದ್ದು, ಕ್ರಿಕೆಟ್ ನನ್ನ ಜೀವನವೇ ಆಗಿದೆ. ಟೀಂ ಇಂಡಿಯಾ ಪರ ಆಡುವುದನ್ನು ಎಷ್ಟು ಪ್ರೀತಿಸುತ್ತೇನೆ ಅಷ್ಟೇ ಆಟದಲ್ಲಿ ಎದುರಾಗುವ ಚಾಲೆಂಜ್‍ಗಳನ್ನು ಸ್ವೀಕರಿಸಲು ಇಷ್ಟ ಪಡುತ್ತೇನೆ. ಇಂದು ಅಂತಹ ಚಾಲೆಂಜ್ ಎದುರಿಸುವ ಸಮಯ ಬಂದಿದ್ದು, ಜುಲೈ 14 ರಂದು ವಿಶ್ವಕಪ್ ನನ್ನ ಕೈಯಲ್ಲಿರಬೇಕು ಎಂದು ಆಸೆ ಪಡುತ್ತಿದ್ದೇನೆ. 2011ರ ವಿಶ್ವಕಪ್ ನನ್ನ ಗೆದ್ದ ಸಂದರ್ಭವನ್ನು ನೆನಪಿಸಿಕೊಂಡರೆ ಈಗಲು ನನಗೆ ಅಷ್ಟೇ ಥ್ರಿಲ್ ಆಗುತ್ತದೆ. 2019ರ ವಿಶ್ವಕಪ್ ಗೆಲ್ಲಲು ಸರ್ವ ಪ್ರಯತ್ನವನ್ನು ಹಾಕುತ್ತಿದ್ದೇನೆ ಎಂದ ಪಾಂಡ್ಯ ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ವಿಶ್ವಕಪ್ ಒತ್ತಡ ಕುರಿತ ಪ್ರಶ್ನೆಗೆ ಉತ್ತರಿಸುವ ಪಾಂಡ್ಯ, ನನಗೆ ಯವುದೇ ರೀತಿಯ ಒತ್ತಡ ಇಲ್ಲ. ಏಕೆಂದರೆ 1.5 ಬಿಲಿಯನ್ ಜನರು ಇದನ್ನೇ ಆಸೆ ಪಡುತ್ತಿದ್ದಾರೆ ಎಂದಿದ್ದಾರೆ.

    ಇತ್ತ ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದು, ಈಗಾಗಲೇ ಪಂದ್ಯದ ಟಾಸ್ ಕೂಡ ತಡವಾಗಿದೆ. ಭಾರತೀಯ ಕಾಲಮಾನ ಅನ್ವಯ 2.30ಕ್ಕೆ ಟಾಸ್ ಆಗಬೇಕಿತ್ತು. ಆದರೆ ಮಳೆಯ ಮತ್ತೆ ಅಡ್ಡಿಪಡಿಸಿದ ಕಾರಣ ಟಾಸ್ ವಿಳಂಬವಾಗಿದೆ. ಈಗಾಗಲೇ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ 3 ಪಂದ್ಯಗಳು ಮಳೆಯಿಂದ ರದ್ದಾಗಿದ್ದು ತೀವ್ರ ನಿರಾಸೆ ಮೂಡಿಸಿದೆ.

  • ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ಅಭಿನಂದನ್‍ರನ್ನು ಎಳೆದುತಂದು ಪಾಕ್‌ನಿಂದ ಜಾಹೀರಾತು – ರೊಚ್ಚಿಗೆದ್ದ ಸಾನಿಯಾ ಮಿರ್ಜಾ

    ನವದೆಹಲಿ: ವಿಶ್ವಕಪ್ ಪಂದ್ಯದ ಮೊದಲು ಪಾಕಿಸ್ತಾನ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮುಂದಿಟ್ಟು ಭಾರತದ ಕಾಲೆಳೆದಿದ್ದಕ್ಕೆ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರೊಚ್ಚಿಗೆದ್ದಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ ಜಾಹೀರಾತನ್ನು ನೋಡಿದ ಸಾನಿಯಾ ಮಿರ್ಜಾ ತಮ್ಮ ಟ್ವಿಟ್ಟರಿನಲ್ಲಿ ರೊಚ್ಚಿ ಗೆದ್ದಿದ್ದಾರೆ. ಸಾನಿಯಾ ತಮ್ಮ ಟ್ವಿಟ್ಟರಿನಲ್ಲಿ, “ಎರಡು ಕಡೆ ಅವಮಾನಕರ ವಿಷಯದೊಂದಿಗೆ ಜಾಹೀರಾತು ತಯಾರಾಗಿದೆ. ಸ್ವಲ್ಪ ಗಂಭೀರವಾಗಿ ನಡೆದುಕೊಳ್ಳಿ. ಈ ಪಂದ್ಯಕ್ಕೆ ಪ್ರಚಾರ ನೀಡುವ ಯಾವುದೇ ಅವಶ್ಯಕತೆ ಇಲ್ಲ. ಈಗಾಗಲೇ ಈ ಪಂದ್ಯಕ್ಕೆ ಪ್ರಚಾರ ಸಿಕ್ಕಿದೆ. ಇದು ಕೇವಲ ಕ್ರಿಕೆಟ್ ಪಂದ್ಯ” ಎಂದು ಟ್ವೀಟ್ ಮಾಡಿದ್ದಾರೆ.

    ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನು ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿತ್ತು. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸಿದ್ದರು. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿತ್ತು.

    ಸ್ಟಾರ್ ಸ್ಪೋಟ್ಸ್ ವಾಹಿನಿ ಕೂಡ ಜಾಹೀರಾತನ್ನು ಮಾಡಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಈ ವಿಡಿಯೋದಲ್ಲಿ ಭಾರತದ ಅಭಿಮಾನಿ ತಮ್ಮನ್ನು ತಾವೇ ಪಾಕಿಸ್ತಾನದ ತಂದೆ ಎಂದು ಪಾಕ್ ಅಭಿಮಾನಿಗೆ ಹೇಳುತ್ತಾರೆ. ಈ ವಿಡಿಯೋವನ್ನು ಸ್ಟಾರ್ ಸ್ಪೋಟ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, ಈ ತಂದೆಯ ದಿನಾಚರಣೆಯಂದು ವಿಶ್ವಕಪ್ ಪಂದ್ಯ ವೀಕ್ಷಿಸಿ ಬಾಪ್ ರೇ ಬಾಪ್ ಎಂದು ಹೇಳುತ್ತೀರಾ ಎಂದು ಟ್ವೀಟ್ ಮಾಡಿದೆ.

    ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಮತ್ತೆ ವಾಪಸ್ ಆಗ್ತೇನೆ ಎಂದು ಕವಿತೆ ಹಂಚಿಕೊಂಡ ಧವನ್

    ಮತ್ತೆ ವಾಪಸ್ ಆಗ್ತೇನೆ ಎಂದು ಕವಿತೆ ಹಂಚಿಕೊಂಡ ಧವನ್

    ಲಂಡನ್: ವಿಶ್ವಕಪ್ ಟೂರ್ನಿಯ ಆಸೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತೆ ವಾಪಸ್ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

    ಗಾಯಗೊಂಡ ಬಳಿಕ ಮೊದಲ ಬಾರಿಗೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಧವನ್, ಟ್ವಿಟ್ಟರ್ ನಲ್ಲಿ ಡಾ. ರಾಹತ್ ಇಂದೋರಿ ಅವರ ಕವಿತೆಯನ್ನು ಹಂಚಿಕೊಂಡಿದ್ದು, ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಧವನ್ ಸದ್ಯ ತಂಡದಿಂದ ಹೊರಗುಳಿದಿದ್ದರು ಕೂಡ ಬಿಸಿಸಿಐ ಅವರನ್ನು ಇಂಗ್ಲೆಂಡ್‍ನಲ್ಲಿಯೇ ಉಳಿಸಿಕೊಂಡಿದೆ. ಆ ಮೂಲಕ ಬಹುಬೇಗ ಚೇತರಿಕೆಗೆ ಸಹಕಾರ ಆಗುವಂತೆ ತಜ್ಞ ವೈದ್ಯರಿಂದ ಸಲಹೆ ಪಡೆಯುತ್ತಿದ್ದಾರೆ. ಇತ್ತ ಧವನ್ ಸ್ಥಾನದಲ್ಲಿ ರಿಷಬ್ ಪಂತ್ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದು, ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಆದರೆ ಪಂತ್ ಅವಗಿಂತ ಹೆಚ್ಚಿನ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಆಡುವ 11 ಬಳಗದಲ್ಲಿ ಇದ್ದರು ಅಚ್ಚರಿ ಸಂಗತಿ ಏನು ಅಲ್ಲ.

    ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಇಂದು ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದ್ದು, ಈ ವೇಳೆ ಧವನ್ ಆಟಗಾರರೊಂದಿಗೆ ಕಾಣಿಸಿಕೊಂಡಿದ್ದರು. ಇತ್ತ ವಿಶ್ವಕಪ್ ಟೂರ್ನಿಗಳಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಆಡಿರುವ ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ 4 ರಲ್ಲಿ ಸೋತಿದೆ.

    ವಿಶ್ವಕಪ್ ನಲ್ಲಿ 16 ವರ್ಷಗಳ ಹಿಂದೆ ಅಂದರೆ 2003 ರಲ್ಲಿ ಇತ್ತಂಡಗಳು ಮುಖಾಮುಖಿ ಆಗಿದ್ದವು. ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 4 ವಿಕೆಟ್ ಕಿತ್ತಿದ್ದ ಜಹೀರ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.

  • ಮೋದಿಯ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಪ್ರಶಂಸಿಸಿದ ಸಚಿನ್

    ಮೋದಿಯ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಪ್ರಶಂಸಿಸಿದ ಸಚಿನ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಶಂಶಿಸಿದ್ದಾರೆ.

    ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಹೋಗಿದ್ದಾಗ ಅಲ್ಲಿನ ಅಧ್ಯಕ್ಷರಿಗೆ ಭಾರತ ತಂಡದ ಆಟಗಾರರು ಸಹಿ ಹಾಕಿದ್ದ ಬ್ಯಾಟ್ ನೀಡಿ ಗೌರವಿಸಿದ್ದರು.

    ಮಾಲ್ಡೀವ್ಸ್ ಅಧ್ಯಕ್ಷರಿಗೆ ಬ್ಯಾಟ್ ನೀಡಿದ ಫೋಟೋ ಹಾಕಿದ ಮೋದಿ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸಚಿನ್ “ಕ್ರಿಕೆಟ್ ಆಟವನ್ನು ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು ಮೋದಿಜೀ. ನಿಮ್ಮ ನಡೆ ಕ್ರಿಕೆಟ್ ರಾಜತಾಂತ್ರಿಕತೆಗೆ ಒಂದು ಉತ್ತಮ ಉದಾಹರಣೆ. ಶೀಘ್ರದಲ್ಲೇ ಮಾಲ್ಡೀವ್ಸ್‍ನ್ನು ಕ್ರಿಕೆಟ್ ಮ್ಯಾಪ್‍ನಲ್ಲಿ ನೋಡಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ಕಳೆದ ಶನಿವಾರ ಮಾಲ್ಡೀವ್ಸ್‍ಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಮೋದಿ ಅವರು ಆ ದೇಶದ ಕ್ರೀಡಾ ಕ್ಷೇತ್ರಕ್ಕೆ ಸಹಾಯವಾಗಲಿ ಎಂದು ಅಲ್ಲಿ ಒಂದು ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ನೆರವು ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮೋದಿ ಅವರು ಆ ದೇಶದ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಭಾರತ ತಂಡದ ಆಟಗಾರರು ಸಹಿ ಹಾಕಿದ್ದ ಬ್ಯಾಟ್ ನೀಡಿ ಅದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಸಚಿನ್ ಅವರು, ಮೋದಿ ಅವರ ಈ ನಡೆ ಈಗ ನಡೆಯುತ್ತಿರುವ ವಿಶ್ವಕಪ್‍ನ ಕ್ರಿಕೆಟ್ ರಾಜತಾಂತ್ರಿಕತೆಗೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.

    ಭಾರತ ದೇಶವು ಮಾಲ್ಡೀವ್ಸ್‍ನಲ್ಲಿ ಕ್ರಿಕೆಟ್‍ನನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ದೇಶದ ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂಬ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಉದ್ದೇಶವನ್ನು ನಾವು ಪೂರೈಸುತ್ತೇವೆ ಎಂದು ಮೋದಿ ಅವರು ಹೇಳಿದ್ದರು.

    ಈ ವಿಚಾರದ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಮಾತನಾಡಿ, ಭಾರತ ಮಾಲ್ಡೀವ್ಸ್‍ನಲ್ಲಿ ಒಂದು ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದೆ ಮತ್ತು ಈ ದೇಶದಲ್ಲಿ ಕ್ರಿಕೆಟ್‍ಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಮಾತನಾಡಿ ಇಲ್ಲಿನ ಕ್ರಿಕೆಟ್ ಆಟಗಾರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

  • ವಿಶ್ವಕಪ್ ನಡುವೆ ‘ಭಾರತ್’ ವೀಕ್ಷಣೆ – ಟೀಂ ಇಂಡಿಯಾಗೆ ಸಲ್ಮಾನ್ ಧನ್ಯವಾದ

    ವಿಶ್ವಕಪ್ ನಡುವೆ ‘ಭಾರತ್’ ವೀಕ್ಷಣೆ – ಟೀಂ ಇಂಡಿಯಾಗೆ ಸಲ್ಮಾನ್ ಧನ್ಯವಾದ

    ನವದೆಹಲಿ: ವಿಶ್ವಕಪ್‍ನಲ್ಲಿ ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಂ ಇಂಡಿಯಾ ಆಟಗಾರು ತಮ್ಮ ಕಠಿಣ ಅಭ್ಯಾಸದ ನಡುವೆಯೂ ಬಿಡುವು ಮಾಡಿಕೊಂಡು ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ಸಿನಿಮಾ ನೋಡಿ ಬಂದ ಫೋಟೋವನ್ನು ಭಾರತ ತಂಡದ ಕೇದಾರ್ ಜಾಧವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ಫೋಟೋದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್, ಮಾಜಿ ನಾಯಕ ಎಂ.ಎಸ್ ಧೋನಿ, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿದ್ದಾರೆ.

    ಭಾರತ್ ಸಿನಿಮಾ ನೋಡಿ ಫೋಟೋ ಹಾಕಿದ ಕೇದಾರ್ ಜಾಧವ್ ಅವರು “ಭಾತರ ಕ್ರಿಕೆಟ್ ತಂಡ, ಭಾರತ್ ಸಿನಿಮಾದ ನಂತರ” ಎಂದು ಬರೆದು ತಮ್ಮ ಖುಷಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ.

    ಸಲ್ಮಾನ್ ಖಾನ್ ಅವರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, “ಧನ್ಯವಾದಗಳು ಭಾರತ ತಂಡ ನನ್ನ ಸಿನಿಮಾವನ್ನು ಇಷ್ಟಪಟ್ಟಿದಕ್ಕೆ. ನನ್ನ ಸಿನಿಮಾ ನೋಡಿದಕ್ಕೆ ಧನ್ಯವಾದಗಳು ಸಹೋದರರೇ. ನಿಮ್ಮ ಮುಂದಿನ ಪಂದ್ಯಗಳಿಗೆ ಶುಭವಾಗಲಿ ಪುರ ಭಾರತ್ ಅಪ್ಕಾ ಸತ್ ಹೈ (ಸಂಪೂರ್ಣ ಭಾರತ ನನ್ನ ಜೊತೆ ಇದೆ)” ಎಂದು ಬರೆದುಕೊಂಡಿದ್ದಾರೆ.

    ಭಾರತ್ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಬಾಕ್ಸ್ ಅಫೀಸ್‍ನಲ್ಲಿ 250 ಕೋಟಿ ರೂ. ಗಳಿಸಿದೆ. ಈ ಸಿನಿಮಾ ಕೊರಿಯನ್ ಸಿನಿಮಾ ಆನ್ ಓಡ್ ಟು ಮೈ ಫಾದರ್ ನ ರೂಪಾಂತರವಾಗಿದ್ದು, ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ, ಜಾಕಿ ಶ್ರಾಫ್, ತಬು, ಕತ್ರಿನಾ ಕೈಫ್, ಮುಖ್ಯಭೂಮಿಕೆಯಲ್ಲಿ ಅಭಿನಯಸಿದ್ದಾರೆ.

    ಇಂಡಿಯಾ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಜಯಗಳಿಸಿದ್ದು ತನ್ನ ಮೂರನೇ ಪಂದ್ಯವನ್ನು ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ.

  • ಇಂಡೋ-ಪಾಕ್ ವಿಶ್ವಕಪ್ ಪಂದ್ಯ – ಅಭಿನಂದನ್‍ರನ್ನ ಎಳೆದುತಂದು ಜಾಹೀರಾತು ಬಿಟ್ಟ ಪಾಕ್

    ಇಂಡೋ-ಪಾಕ್ ವಿಶ್ವಕಪ್ ಪಂದ್ಯ – ಅಭಿನಂದನ್‍ರನ್ನ ಎಳೆದುತಂದು ಜಾಹೀರಾತು ಬಿಟ್ಟ ಪಾಕ್

    ಇಸ್ಲಾಮಾಬಾದ್: ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಯುದ್ಧ ಭೀತಿಯನ್ನ ಎದುರಿಸಿದ್ದ ಪಾಕಿಸ್ತಾನ ಸದ್ಯ ಏರ್ ಸ್ಟ್ರೈಕ್ ಬಳಿಕ ಪಾಕ್ ಸೈನಿಕರಿಗೆ ಸೆರೆಯಾಗಿದ್ದ ವಿಂಗ್‍ಕಮಾಂಡ್ ಅಭಿನಂದನ್ ಅವರನ್ನ ಮುಂದಿಟ್ಟು ಭಾರತದ ಕಾಲೆಳೆದಿದೆ.

    ಭಾರತದೊಂದಿಗೆ ಮೇಲ್ನೋಟಕ್ಕೆ ಸ್ನೇಹ ಸಂಬಂಧಕ್ಕೆ ಸಿದ್ಧ ಎಂದು ತೋರ್ಪಡಿಸಿಕೊಂಡು ತನ್ನ ಕುತಂತ್ರಿ ಬುದ್ಧಿಯನ್ನ ಪಾಕಿಸ್ತಾನ ಮುಂದುವರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಆನ್‍ಲೈನ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಜಾಜ್ ಟಿವಿ ಪಾಕಿಸ್ತಾನ ಈ ಬಾರಿ ವಿಶ್ವಕಪ್ ಕುರಿತ ಪಂದ್ಯದ ಜಾಹೀರಾತಿನಲ್ಲಿ ಅಭಿನಂದನ್‍ರನ್ನ ಎಳೆದುತಂದಿದೆ. ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಈಗಾಗಲೇ ಜಾಹೀರಾತು ನೀಡಲು ಆರಂಭಿಸಿದೆ.

    ಪಾಕ್ ಜಾಹೀರಾತಿನಲ್ಲಿ ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನ ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡದ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿದೆ. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿದೆ.

    ಪಾಕಿಸ್ತಾನ ಮಾಧ್ಯಮದ ಈ ಜಾಹೀರಾತಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಪಾಕ್‍ಗೆ ತಿರುಗೇಟು ನೀಡಿ ಭಾರತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಗೆಲುವಿನ ಸಂಭ್ರಮದಲ್ಲಿದ್ದ ಟೀಂ ಇಂಡಿಯಾಗೆ ಅಘಾತ – ಗಾಯದ ಸಮಸ್ಯೆಯಿಂದ ಧವನ್ ಔಟ್

    ಗೆಲುವಿನ ಸಂಭ್ರಮದಲ್ಲಿದ್ದ ಟೀಂ ಇಂಡಿಯಾಗೆ ಅಘಾತ – ಗಾಯದ ಸಮಸ್ಯೆಯಿಂದ ಧವನ್ ಔಟ್

    ಲಂಡನ್: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ 3 ವಾರಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಧವನ್, ಪಂದ್ಯದ ವೇಳೆ ನಾಥನ್ ಕೌಲ್ಟರ್ ಲೈನ್ ಬೌಲಿಂಗ್ ನಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿದ್ದ ಧವನ್ ಅವರಿಗೆ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ವಿಶ್ರಾಂತಿ ನೀಡಲಾಗಿದೆ.

    ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ವೇಳೆ ಟೀಂ ಇಂಡಿಯಾ ಫಿಲ್ಡೀಂಗ್ ನಲ್ಲಿ ಧವನ್ ಬದಲಿಗೆ ರವೀಂದ್ರ ಜಡೇಜಾ ಮೈದಾನಕ್ಕಿಳಿದಿದ್ದರು. ಆ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಟ್ಟ ಧವನ್ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಪಂದ್ಯದಲ್ಲಿ ಧವನ್ 117 ರನ್ ಸಿಡಿಸಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

    ಧವನ್ ಹೊರಗುಳಿದಿರುವ ಪರಿಣಾಮ ಅನಿರ್ವಾಯವಾಗಿ ಟೀಂ ಇಂಡಿಯಾ ಆರಂಭಿಕ ಜೋಡಿ ಬದಲಾಗಲಿದ್ದು, ರೋಹಿತ್ ಶರ್ಮಾರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ತೀರ್ಮಾನ ಕೈಗೊಳ್ಳಬೇಕಿದೆ.

    ಸದ್ಯ ಆರಂಭಿಕ ಆಟಗಾರನಾಗಿ ಆಯ್ಕೆ ಆಗಿದ್ದ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುತ್ತಿದ್ದು, ರಿಷಬ್ ಪಂತ್ ಹಾಗೂ ರಾಯುಡು ಅವರು ರಿಸರ್ವ್ ಆಟಗಾರರಾಗಿರುವುದರಿಂದ ಆಯ್ಕೆ ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲವಿದೆ. ಇತ್ತ ಶ್ರೇಯಾಸ್ ಅಯ್ಯರ್ ಕೂಡ ಸ್ಥಾನ ಪಡೆಯುವ ರೇಸ್‍ನಲ್ಲಿದೆ.

    ವಿಶ್ವಕಪ್ ಟೂರ್ನಿಯ ಭಾಗವಾಗಿ ಟೀಂ ಇಂಡಿಯಾ ಮುಂದಿನ ಹಂತದಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.

  • ಕೊನೆಯ 10 ಓವರ್ ನಲ್ಲಿ 116 ರನ್ – ಭಾರತಕ್ಕೆ 36 ರನ್ ಜಯ

    ಕೊನೆಯ 10 ಓವರ್ ನಲ್ಲಿ 116 ರನ್ – ಭಾರತಕ್ಕೆ 36 ರನ್ ಜಯ

    ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯವನ್ನು 36 ರನ್ ಗಳಿಂದ ಗೆಲ್ಲುವ ಮೂಲಕ ಭಾರತ ಸತತ ಎರಡನೇ ಗೆಲುವು ದಾಖಲಿಸಿತು.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದರೆ, ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 316 ರನ್ ಗಳಿಗೆ ಆಲೌಟ್ ಆಯ್ತು. ಭಾರತದ ಬ್ಯಾಟ್ಸ್ ಮನ್ ಗಳು ಕೊನೆಯ 10 ಓವರ್ ಗಳಲ್ಲಿ 116 ರನ್ ಚಚ್ಚಿದರೆ ಕೊನೆಯ 11 ಓವರ್ ಗಳಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡಿತ್ತು.

    40 ಓವರ್ ಗಳಿಸಿದಾಗ ಭಾರತ 2 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. ಅಂತಿಮವಾಗಿ 50 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಟೀಂ ಇಂಡಿಯಾ ಪರ ಶಿಖರ್ ಧವನ್ 117 ರನ್, ರೋಹಿತ್ ಶರ್ಮಾ 57 ರನ್, ವಿರಾಟ್ ಕೊಹ್ಲಿ 82 ರನ್, ಹಾರ್ದಿಕ್ ಪಾಂಡ್ಯ 48 ರನ್ ಹೊಡೆದರು.

    ಆಸ್ಟ್ರೇಲಿಯಾ ಪರ ವಾರ್ನರ್ 56 ರನ್, ಸ್ಮಿತ್ 69 ರನ್, ಕ್ಯಾರಿ 55 ರನ್ ಹೊಡೆದರು. ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದರೆ ಚಹಾಲ್ 2 ವಿಕೆಟ್ ಪಡೆದರು.