Tag: ವಿಶ್ವಕಪ್

  • ಹಾಸನದಲ್ಲಿ ಕೊಹ್ಲಿಗಾಗಿ ಕಾಯ್ತಿದೆ ಚಿನ್ನದ ಮೈಕ್ರೋ ವಿಶ್ವಕಪ್

    ಹಾಸನದಲ್ಲಿ ಕೊಹ್ಲಿಗಾಗಿ ಕಾಯ್ತಿದೆ ಚಿನ್ನದ ಮೈಕ್ರೋ ವಿಶ್ವಕಪ್

    ಹಾಸನ: ವಿಶ್ವದೆಲ್ಲೆಡೆ ಈಗ ಕ್ರಿಕೆಟ್ ಜ್ವರ. ಇಂಗ್ಲೆಂಡ್‍ನಲ್ಲಿ ಇಂದು ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಮ್ಮ ದೇಶ ಗೆದ್ದು ಬೃಹತ್ ಕಪ್ಪನ್ನು ಆಟಗಾರರು ಎತ್ತಿಹಿಡಿಯಬೇಕು ಎಂಬುದು ಪ್ರತಿಯೊಬ್ಬ ಭಾರತೀಯರ ಆಶಯವಾಗಿದೆ. ಭಾರತ ಅಲ್ಲಿ ಗೆದ್ದು ಬರಲಿ, ಗೆದ್ದು ಅಲ್ಲಿ ವಿಶ್ವಕಪ್ ಎತ್ತಿ ಹಿಡಿದಲ್ಲಿ ಹಾಸನದಲ್ಲಿಯೂ ಕೂಡ ಅವರಿಗಾಗಿ ಒಂದು ಮಿನಿ ವಿಶ್ವಕಪ್ ಕಾಯುತ್ತಿದೆ.

    ಹೌದು. ಕಾಲು ಇಂಚು ಎತ್ತರವಿರುವ ಇನ್ನೂರು ಮಿಲಿ ತೂಕದ ಚೋಟಾ ಚಿನ್ನದ ವಿಶ್ವಕಪ್. ಹಾಸನದ ಕ್ರಿಕೆಟ್ ಪ್ರೇಮಿಯೊಬ್ಬರು ತಮ್ಮ ಕೈಚಳಕದಿಂದ ಈ ಮೈಕ್ರೋ ವಿಶ್ವಕಪ್ ಮಾಡಿದ್ದಾರೆ. ಹಾಸಸನ ನಗರದ ಹೊಸಲೈನ್ ರಸ್ತೆ ನಿವಾಸಿ ನರೇಂದ್ರ ತಮ್ಮ ಕೈಚಳಕದಿಂದ ಈ ರೀತಿ ವಿಶ್ವಕಪ್‍ನ ತದ್ರೂಪಿ ಮೈಕ್ರೋ ವಿಶ್ವಕಪ್ ತಯಾರಿಸಿದ್ದಾರೆ.

    ಮೂಲತಃ ವಿಶ್ವಕರ್ಮರಾದ ನರೇಂದ್ರರಿಗೆ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಈ ಹಿಂದೆಯೂ ಕೂಡ ಕಳೆದ ವಿಶ್ವಕಪ್‍ನಲ್ಲಿ ಬೆಳ್ಳಿಯ ವಿಶ್ವಕಪ್ ಮಾಡಿದ್ದ ನರೆಂದ್ರ ಅವರು ಈ ಬಾರಿ ಚಿನ್ನದ ಮೈಕ್ರೋ ವಿಶ್ವಕಪ್ ತಮ್ಮ ಕೈಯಾರೆ ಮಾಡಿದ್ದಾರೆ. ಅತೀ ಸಣ್ಣ ಕರಕುಶಲ ಕೆಲಸ ಮಾಡಿರುವ ನರೇಂದ್ರರವರ ಈ ಕೆಲಸಕ್ಕೆ ಪತ್ನಿಯ ಶಹಬ್ಬಾಸ್‍ಗಿರಿ ಕೂಡ ಸಿಕ್ಕಿದೆ.

    ಅಂದ ಹಾಗೆ ಇಂಗ್ಲೆಂಡ್‍ನಲ್ಲಿ ಭಾರತ- ಪಾಕಿಸ್ತಾನ ನಡವಿನ ಪಂದ್ಯದಲ್ಲಿ ಭಾರತ ವಿಶ್ವ ಕಪ್ ಗೆದ್ದು ಕಪ್ಪನ್ನು ಎತ್ತಿ ಹಿಡದರೆ ಈ ಮೈಕ್ರೋ ವಿಶ್ವಕಪ್ ಅನ್ನು ಕೂಡ ನಮ್ಮ ತಂಡದ ನಾಯಕ ವಿರಾಟ್ ಕೋಹ್ಲಿಗೆ ನೀಡುತ್ತೇನೆ ಎಂದು ನರೇಂದ್ರ ತಮ್ಮ ಮನದಾಳದ ಮಾತು ಆಡಿದ್ದಾರೆ.

  • ಇಂಡೋ, ಪಾಕ್ ಕ್ರಿಕೆಟ್ ಕದನ – ಏನು ಹೇಳುತ್ತೆ ಹವಾಮಾನ ವರದಿ!

    ಇಂಡೋ, ಪಾಕ್ ಕ್ರಿಕೆಟ್ ಕದನ – ಏನು ಹೇಳುತ್ತೆ ಹವಾಮಾನ ವರದಿ!

    ಮ್ಯಾಂಚೆಸ್ಟರ್: ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣ ಸಿದ್ಧವಾಗಿದೆ. ಆದರೆ ಅಭಿಮಾನಿಗಳ ಕುತೂಹಲಕ್ಕೆ ಮಳೆರಾಯ ಅಡ್ಡಿಪಡಿಸುವ ಆತಂಕ ಸೃಷ್ಟಿಯಾಗಿದೆ.

    ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಕ್ಕೆ ಮಳೆರಾಯ ಅಡ್ಡಿಪಡಿಸಲಿದ್ದಾನೆ ಎಂಬ ಆತಂಕ ಶುರುವಾಗಿದೆ. ಮ್ಯಾಂಚೆಸ್ಟರ್ ನಲ್ಲಿ ಕಳೆದ 4 ದಿನಗಳಿಂದ ಮಳೆಯಾಗುತ್ತಿತ್ತು. ಆದರೆ ಶುಕ್ರವಾರ ಮೋಡಗಳು ಸರಿದು ಮಧ್ಯಾಹ್ನದ ವರೆಗೂ ಸೂರ್ಯ ಕಾಣಿಸಿಕೊಂಡಿದ್ದ. ಆದರೆ ಸಂಜೆ ವೇಳೆಗೆ ಮತ್ತೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಇಂದು ಮಳೆ ಇಲ್ಲದ ಕಾರಣ ಟೀಂ ಇಂಡಿಯಾ ಮಧ್ಯಾಹ್ನ 1 ಗಂಟೆವರೆಗೂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತ್ತು. ಮಧ್ಯಾಹ್ನದ ಬಳಿಕ ಪಾಕ್ ತಂಡ ಅಭ್ಯಾಸಕ್ಕಿಳಿದಿತ್ತು.

    ಟೂರ್ನಿಯಲ್ಲಿ ಭಾರತ, ನ್ಯೂಜಿಲ್ಯಾಂಡ್ ಪಂದ್ಯ ಸೇರಿ ಇದುವರೆಗೂ ನಾಲ್ಕು ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ. ಪಾಕಿಸ್ತಾನ-ಶ್ರೀಲಂಕಾ, ಬಾಂಗ್ಲಾದೇಶ-ಶ್ರೀಲಂಕಾ, ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯಗಳು ರದ್ದಾಗಿತ್ತು. ಶ್ರೀಲಂಕಾದ ಎರಡು ಪಂದ್ಯಗಳು ಮಳೆಯಿಂದಾಗಿಯೇ ರದ್ದಾಗಿರುವ ಕಾರಣ ತಂಡ ಸೆಮಿ ಫೈನಲ್ ತಲುಪುದರ ಮೇಲೆ ಪರಿಣಾಮ ಬೀರಲಿದೆ.

    ಹವಾಮಾನ ವರದಿ ಪ್ರಕಾರ ಮುಂಜಾನೆ ಅಲ್ಪ ಮಳೆಯಾಗುವ ಸಾಧ್ಯತೆ ಇದ್ದು, ಆ ಬಳಿಕ ಸೂರ್ಯ ಬಂದರು ಪಂದ್ಯದ ಸೆಕೆಂಡ್ ಆಫ್‍ಗೆ ಮತ್ತೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ. ಈ ವರದಿಯ ಅನ್ವಯ ಪಂದ್ಯ ಸಂರ್ಪೂಣ 50 ಓವರ್ ನಡೆಯುವ ಅವಕಾಶ 50-50 ಎನ್ನಲಾಗಿದೆ.

    ಇಂಗ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ನಾಳೆ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ. ಟೂರ್ನಿಯಲ್ಲಿ ಮಳೆಯಿಂದ ಪಂದ್ಯ ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟೂರ್ನಿಯ ಆಯೋಜನೆ ಹೊಣೆ ಹೊತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಉತ್ತಮ ವ್ಯವಸ್ಥೆ ಮಾಡಿಲ್ಲ ಎಂಬ ಟೀಕೆ ಕೇಳಿ ಬಂದಿದೆ.

  • ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಕೊಹ್ಲಿ ಸಂದೇಶ

    ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಕೊಹ್ಲಿ ಸಂದೇಶ

    ಲಂಡನ್: ಪಾಕಿಸ್ತಾನ ವಿರುದ್ಧ ನಾಳೆ ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕ್ ವಿರುದ್ಧ ಪಂದ್ಯದ ಬಗ್ಗೆ ಅಭಿಮಾನಿಗಳು ಭಾವುಕರಾಗಬೇಕಿಲ್ಲ. ಎಲ್ಲಾ ವಿಶ್ವಕಪ್ ಪಂದ್ಯಗಳಂತೆ ಇದು ಒಂದು ಪಂದ್ಯ ಅಷ್ಟೇ. ಆಟವನ್ನು ಎಂಜಾಯ್ ಮಾಡಿ ತಂಡಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಸಾಕಷ್ಟು ಅನುಭವಿ ಆಟಗಾರನನ್ನು ಹೊಂದಿದೆ. ಯಾರು ಚೆನ್ನಾಗಿ ಆಡುತ್ತಾರೆ ಅವರಿಗೆ ಗೆಲುವು ಖಚಿತ. ಇಂಗ್ಲೆಂಡ್‍ಗೆ ಆಗಮಿಸಿದ ಬಳಿಕ ಪಾಕ್ ವಿರುದ್ಧ ಪಂದ್ಯದ ಬಗ್ಗೆ ಭಿನ್ನವಾಗಿ ಏನು ಚರ್ಚೆ ನಡೆಸಿಲ್ಲ. ಅಲ್ಲದೇ ಪಂದ್ಯಕ್ಕಾಗಿ ತಂಡದ ಡ್ರೇಸಿಂಗ್ ರೂಮ್ ವಾತಾವರಣವೂ ಬದಲಾಗಿಲ್ಲ. ಎಲ್ಲಾ ಪಂದ್ಯಗಳನ್ನು ಸಮನಾಗಿ ಪರಿಗಣಿಸಿ ದೇಶದ ಪರ ಆಡುತ್ತೇವೆ. ನಮ್ಮ ಸಾಮಥ್ರ್ಯವನ್ನು ಅರಿತು ಆಡುತ್ತೇವೆ ಎಂದರು.

    ಧವನ್ ಅಲಭ್ಯವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ತಂಡ ಯಾವುದೇ ಒತ್ತಡ ಸಂದರ್ಭಗಳನ್ನು ಎದುರಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದಿದ್ದಾರೆ. ಇತ್ತ ಪಾಕಿಸ್ತಾನದ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ತಂಡವನ್ನು ಸೇರಿಸಿಕೊಂಡಿದ್ದು, ಬಿಸಿಸಿಐ ರಿಷಬ್‍ರ ಫೋಟೋವನ್ನು ಟ್ವೀಟ್ ಮಾಡಿದೆ.

    ತಂಡದಲ್ಲಿ ಬದಲಾವಣೆ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಡುವ 11ರ ಬಳಗದಲ್ಲಿ ಬದಲಾಗುವ ಸಾಧ್ಯತೆ ಇದ್ದು, ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

    ಧವನ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ಕಾರಣ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಬಿಸಿಸಿಐ ಕಾರ್ತಿಕ್‍ರ ಅನುಭಕ್ಕೆ ಮಣೆ ಹಾಕಿ ಅವಕಾಶ ನೀಡಲಿದೆ ಎನ್ನಲಾಗಿದೆ. ಉಳಿದಂತೆ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಬದಲಾಗಿ ಆಲೌಂಡರ್ ರವೀಂದ್ರ ಜಡೇಜಾ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

  • ವಿಶ್ವಕಪ್ 2019 : ಇಂಡೋ, ಪಾಕ್ ಕದನ – ಟೀಂ ಇಂಡಿಯಾ ಗೆಲ್ಲುವ ಫೇವರಿಟ್

    ವಿಶ್ವಕಪ್ 2019 : ಇಂಡೋ, ಪಾಕ್ ಕದನ – ಟೀಂ ಇಂಡಿಯಾ ಗೆಲ್ಲುವ ಫೇವರಿಟ್

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದು, ಇತ್ತಂಡಗಳು ಗೆಲುವಿನ ಲೆಕ್ಕಾಚಾರಗಳನ್ನು ಆರಂಭಿಸಿವೆ.

    ಏಷ್ಯಾದ ಎರಡು ರಾಷ್ಟ್ರಗಳ ಪಂದ್ಯವನ್ನ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕೂಡ ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ. ಎರಡು ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ಆಡದಿರುವುದರಿಂದ ನಾಳೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಂದರ್ಭದಲ್ಲಿ ಎರಡು ತಂಡಗಳ ಬಲಾಬಲ ನೋಡುವುದಾದರೆ ಪಂದ್ಯದಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಆಗಿದೆ.

    2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮಾತ್ರ ಮುಖಾಮುಖಿಯಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಎರಡು ತಂಡಗಳು 131 ಪಂದ್ಯಗಳನ್ನು ಆಡಿದ್ದು, ಭಾರತ 54 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಪಾಕ್ 73 ಪಂದ್ಯಗಳಲ್ಲಿ ಗೆದ್ದಿದೆ. 1978 ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮೊದಲ ಏಕದಿನ ಟೂರ್ನಿಯನ್ನ ಆಡಿದ್ದವು.

    ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಪರಿಗಣಿಸುವುದಾದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ರಲ್ಲಿ ಭಾರತ, 11 ರಲ್ಲಿ ಪಾಕ್ ಗೆಲುವು ಪಡೆದಿದೆ. ಭಾರತ ಹಾಗೂ ಪಾಕ್ ನಡುವ ಅಂತಿಮ ದ್ವಿಪಕ್ಷೀಯ ಕ್ರಿಕೆಟ್ ಸರಣಿ 2012-13 ರಲ್ಲಿ ನಡೆದಿತ್ತು.

    ಉಳಿದಂತೆ 2015ರ ವಿಶ್ವಕಪ್ ಬಳಿಕ ನಡೆದ 4 ಪಂದ್ಯಗಳಲ್ಲಿ ಭಾರತ 3 ರಲ್ಲಿ ಗೆಲುವು ಪಡೆದಿದೆ. 2017ರ ಚಾಂಪಿಯನ್ಸ್ ಟ್ರೋಫಿಯ ಬಾರ್ಮಿಂಗ್‍ಹ್ಯಾಮ್ ಪಂದ್ಯದಲ್ಲಿ ಭಾರತ 124 ರನ್ ಅಂತರದಲ್ಲಿ ಪಾಕ್ ವಿರುದ್ಧ ಗೆಲುವು ಪಡೆದಿತ್ತು. ಪಂದ್ಯದಲ್ಲಿ ರೋಹಿತ್ ಶರ್ಮಾ, ಧವನ್, ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರೆ, ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ 319 ರನ್ ಆಗಲು ಸಹಕಾರಿಯಾಗಿತ್ತು. ಡಿಎಲ್‍ಎಸ್ ನಿಯಮಗಳ ಅನ್ವಯ ಪಾಕ್ 289 ರನ್ ಟಾರ್ಗೆಟ್ ಪಡೆದರು ಕೇವಲ 164 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲುಂಡಿತ್ತು. ಆದರೆ ಟೂರ್ನಿಯ ಫೈನಲ್‍ನಲ್ಲಿ ಭಾರತ 180 ರನ್ ಗಳಿಂದ ಸೋಲುಂಡಿತ್ತು. ಆ ಬಳಿಕ 2018 ರಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ಕೊಹ್ಲಿ ಅನುಪಸ್ಥಿತಿ ನಡುವೆಯೂ ಭಾರತ ಗೆದ್ದು ಬೀಗಿತ್ತು.

    2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಿರುವ 3 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವು ಪಡೆದಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಂದ ಗೆದ್ದು ಬೀಗಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮಳೆಗೆ ರದ್ದಾಗಿದ್ದ ಕಾರಣ ಅಂಕಪಟ್ಟಿಯಲ್ಲಿ 5 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದೆ.

    ಇತ್ತ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಆಡಿರುವ ಪಾಕಿಸ್ತಾನ 2 ರಲ್ಲಿ ಸೋತು 1 ಪಂದ್ಯದಲ್ಲಿ ಗೆಲುವು ಪಡೆದಿದ್ದರೆ, ಶ್ರೀಲಂಕಾ ವಿರುದ್ಧ ಪಂದ್ಯ ರದ್ದಾಗಿದೆ. 4 ಪಂದ್ಯಗಳಿಂದ 3 ಅಂಕಗಳನ್ನು ಪಡೆದಿರುವ ಪಾಕ್ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ.

    ನಾಳಿನ ಪಂದ್ಯದ ತಂಡದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ತಂಡ ಬಲವಾಗಿದ್ದರೆ, ಧವನ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಸಮಸ್ಯೆಯಾಗಿದೆ. ಧವನ್ ಸ್ಥಾನದಲ್ಲಿ ಆರಂಭಿಕನಾಗಿ ರಾಹುಲ್ ಕಣಕ್ಕೆ ಇಳಿಯುವುದು ಖಚಿತವಾಗಿದ್ದು, ನಂ.4 ರಲ್ಲಿ ಯಾರು ಬ್ಯಾಟ್ ನಡೆಸಲಿದ್ದಾರೆ ಎಂಬ ಕುತೂಹಲವಿದೆ. ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ ರಾಹುಲ್ ಹೆಚ್ಚಿನ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವಿ, ಬುಮ್ರಾ ಭಾರತದ ಶಕ್ತಿಯಾಗಿದ್ದರೆ, ಚಹಲ್ ಕಮಲ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಇದರೊಂದಿಗೆ ಕುಲ್ದೀಪ್ ಯಾದವ್ ಸಾಥ್ ನೀಡಬೇಕಿದೆ.

  • ಭಾರತ 6 – ಪಾಕಿಸ್ತಾನ ಝೀರೋ, 1996ರಲ್ಲಿ ಬೆಂಗಳೂರಲ್ಲೂ ಸೋತಿತ್ತು ಪಾಕಿಸ್ತಾನ!

    ಭಾರತ 6 – ಪಾಕಿಸ್ತಾನ ಝೀರೋ, 1996ರಲ್ಲಿ ಬೆಂಗಳೂರಲ್ಲೂ ಸೋತಿತ್ತು ಪಾಕಿಸ್ತಾನ!

    ಮ್ಯಾಂಚೆಸ್ಟರ್: ಈ ಬಾರಿಯ ವಿಶ್ವಕಪ್‍ನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಿಗೆ ಮಳೆರಾಯನೇ ವಿಲನ್ ಆಗುತ್ತಿದ್ದು, ಭಾನುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 6 ಪಂದ್ಯಗಳಲ್ಲಿ ಸೆಣಸಾಡಿದ್ದು, ಆರು ಬಾರಿಯೂ ಭಾರತವೇ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾನುವಾರ 7ನೇ ಪಂದ್ಯ ನಡೆಯಲಿದ್ದು ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಪಾಕಿಸ್ತಾನ ತಂಡ ಟೀಂ ಇಂಡಿಯಾ ವಿರುದ್ಧ 39 ರನ್‍ಗಳಿಂದ ಸೋಲನುಭವಿಸಿತ್ತು. ವಿಶ್ವಕಪ್‍ನಲ್ಲಿ ಇತ್ತಂಡಗಳೂ 4 ವರ್ಷ ಹಿಂದೆ 2015ರಲ್ಲಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ 76 ರನ್‍ಗಳಿಂದ ಗೆಲುವು ಸಾಧಿಸಿತ್ತು.

    ವಿಶ್ವಕಪ್ 1992: 1992ರಲ್ಲಿ ಭಾರತ-ಪಾಕ್ ಮೊದಲ ಬಾರಿಗೆ ವಿಶ್ವಕಪ್‍ನಲ್ಲಿ ಪರಸ್ಪರ ಸೆಣಸಾಡಿತ್ತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 43 ರನ್‍ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 54 ರನ್ ಗಳಿಸಿದ್ದರು. ಜೊತೆಗೆ 10 ಓವರ್ ನಲ್ಲಿ 37 ರನ್ ನೀಡಿ 1 ವಿಕೆಟ್ ಗಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದ್ದರು.

    ವಿಶ್ವಕಪ್ 1999 – ಬೆಂಗಳೂರಲ್ಲಿ ಸಿಧು, ವೆಂಕಟೇಶ್ ಪ್ರಸಾದ್, ಕುಂಬ್ಳೆ ಹೀರೋ: 1996ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‍ನ ಕಾರ್ಟರ್ ಫೈನಲ್ ಅಹರ್ನಿಶಿ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 39 ರನ್‍ಗಳಿಂದ ಪರಾಭವಗೊಳಿಸಿತ್ತು. ಈ ಪಂದ್ಯದಲ್ಲಿ 93 ರನ್ ಗಳಿಸಿದ ನವಜೋತ್ ಸಿಂಗ್ ಸಿಧು ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಸಚಿನ್ 31, ಸಂಜಯ್ ಮಾಂಜ್ರೇಕರ್ 20, ಮೊಹಮ್ಮದ್ ಅಜರುದ್ದೀನ್ 20, ವಿನೋದ್ ಕಾಂಬ್ಳಿ 24, ಅಜಯ್ ಜಡೇಜ 45, ಅನಿಲ್ ಕುಂಬ್ಳೆ 10, ಜಾವಗಲ್ ಶ್ರೀನಾಥ್ 12, ನಯನ್ ಮೊಂಗಿಯ 3 ರನ್ ಗಳಿಸಿ ನಿಗದಿತ 50 ಓವರ್ ಮುಗಿದಾಗ ಭಾರತ 8 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು.

    ಪಾಕಿಸ್ತಾನದ ಪರವಾಗಿ ವಖಾರ್ ಯೂನಿಸ್ ಹಾಗೂ ಮುಷ್ತಾಖ್ ಅಹ್ಮದ್ ತಲಾ 2 ವಿಕೆಟ್ ಗಳಿಸಿದರೆ. ಅತಾ-ಉರ್-ರೆಹ್ಮಾನ್, ಆಖಿಬ್ ಜಾವೇದ್, ಅಮೀಲ್ ಸೊಹೇಲ್ ತಲಾ 1 ವಿಕೆಟ್ ಗಳಿಸಿದರು. ವಖಾರ್ ಯೂನಿಸ್ ಹಾಗೂ ಆಖಿಬ್ ಜಾವೇದ್ 10 ಓವರ್‍ಗಳಲ್ಲಿ ತಲಾ 67 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

    288 ರನ್ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅಮೀರ್ ಸೊಹೇಲ್ ಹಾಗೂ ಸಯೀದ್ ಅನ್ವರ್ ಉತ್ತಮ ಆರಂಭವನ್ನೇ ನೀಡಿದರು. ಮೊದಲ ವಿಕೆಟ್ ಜೊತೆಯಾಟಕ್ಕೆ ಇಬ್ಬರೂ ಸೇರಿ 84 ರನ್ ಪೇರಿಸಿದ್ದರು. 15ನೇ ಓವರ್ ನಲ್ಲಿ ಅಮೀರ್ ಸೊಹೇಲ್ ಭಾರತೀಯ ವೇಗಿ ವೆಂಕಟೇಶ್ ಪ್ರಸಾದ್ ಅವರ ಎಸೆತವನ್ನು ಬೌಂಡರಿಗಟ್ಟಿ, ಬಾಲ್ ಹೋದ ದಿಕ್ಕನ್ನು ತೋರಿಸಿ ಕೆಣಕಿದರು. ಆದರೆ ಇದರ ನಂತರದ ಎಸೆತದಲ್ಲೇ ವೆಂಕಟೇಶ್ ಪ್ರಸಾದ್ ಅಮೀರ್ ಸೊಹೇಲ್ ಅವರನ್ನು ಬೌಲ್ಡ್ ಮಾಡಿ ಸೇಡು ತೀರಿಸಿಕೊಂಡರು. ಈ ವಿಕೆಟ್ ಬೀಳುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಭಾರತದ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿತ್ತು. ವೆಂಕಟೇಶ್ ಪ್ರಸಾದ್ ಹಾಗೂ ಅನಿಲ್ ಕುಂಬ್ಳೆ ಈ ಪಂದ್ಯದಲ್ಲಿ ತಲಾ 3 ವಿಕೆಟ್ ಪಡೆದರೆ, ಜಾವಗಲ್ ಶ್ರೀನಾಥ್ ಹಾಗೂ ವೆಂಕಟಪತಿ ರಾಜು ತಲಾ 1 ವಿಕೆಟ್ ಗಳಿಸಿದರು.

    ಪಾಕ್ ಪರವಾಗಿ ಅಮೀರ್ ಸೊಹೇಲ್ 55, ಸಯೀದ್ ಅನ್ವರ್ 48, ಇಜಾಜ್ ಅಹ್ಮದ್ 12, ಇಂಜಮಾಮ್ ಉಲ್ ಹಖ್ 12, ಸಲೀಮ್ ಮಲಿಕ್ 38, ಜಾವೇದ್ ಮಿಯಾಂದಾದ್ 38, ರಶೀದ್ ಲತೀಫ್ 26, ವಖಾರ್ ಯೂನಿಸ್ 4, ಅತಾ-ಉರ್-ರೆಹ್ಮಾನ್ 0, ಆಖಿಬ್ ಜಾವೇದ್ 6, ಮುಷ್ತಾಖ್ ಅಹ್ಮದ್ 0 ರನ್ ಗಳಿಸಿದರು. ನಿಧಾನಗತಿಯ ಬೌಲಿಂಗ್ ಹಿನ್ನೆಲೆಯಲ್ಲಿ ಪಾಕ್ ತಂಡಕ್ಕೆ ಬ್ಯಾಟಿಂಗ್‍ಗೆ 1 ಓವರ್ ಇಳಿಕೆ ಮಾಡಿ 49 ಓವರ್ ನಿಗದಿಗೊಳಿಸಲಾಗಿತ್ತು. ನಿಗದಿತ 49 ಓವರ್ ಮುಗಿದಾಗ ಪಾಕ್ ತಂಡ 9 ವಿಕೆಟ್ ನಷ್ಟಕ್ಕೆ 248 ರನ್ ಮಾತ್ರ ಗಳಿಸಿತ್ತು. ಈ ಮೂಲಕ ಭಾರತ ಪಂದ್ಯವನ್ನು 39 ರನ್‍ಗಳಿಂದ ಜಯಿಸಿತು.

    ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಡೇ ನೈಟ್ ಪಂದ್ಯವಾಗಿತ್ತು. ಅಂದು ನಡೆದ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 55 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿದ್ದರು. ಅಲ್ಲದೆ ಇದೇ ಪಂದ್ಯದಲ್ಲಿ ವಖಾರ್ ಯೂನಿಸ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200ನೇ ವಿಕೆಟ್ ಗಳಿಸಿದ ದಾಖಲೆ ಮಾಡಿದ್ದರು.

    https://www.youtube.com/watch?v=lA2Ojyb0gqg&feature=youtu.be

    1999ರ ವಿಶ್ವಕಪ್: ಮ್ಯಾಂಚೆಸ್ಟರ್ ನಲ್ಲಿ 1999ರಲ್ಲಿ ನಡೆದ ಪಂದ್ಯದಲ್ಲಿ ಪಾಕ್ 47 ರನ್‍ಗಳಿಂದ ಸೋತಿತ್ತು. ಭಾರತದ 227 ರನ್ ಟಾರ್ಗೆಟ್ ಬೆಂಬತ್ತಿದ ಪಾಕಿಸ್ತಾನ 180 ರನ್‍ಗಳಿಗೆ ಆಲೌಟಾಯಿತು. ಈ ಪಂದ್ಯದಲ್ಲಿ ವೇಗದ ಬೌಲರ್ ಕನ್ನಡಿಗ ವೆಂಕಟೇಶ್ ಪ್ರಸಾದ್ 9.3 ಓವರ್‍ ಗಳಲ್ಲಿ 27 ರನ್ ನೀಡಿ 5 ವಿಕೆಟ್ ಗಳಿಸಿದರು. ಅಲ್ಲದೆ ಅವರು 2 ಮೇಡನ್ ಓವರ್ ಎಸೆದಿದ್ದರು. ಈ ಪಂದ್ಯದಲ್ಲಿ ವೆಂಕಟೇಶ್ ಪ್ರಸಾದ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಿದರು.

    ವಿಶ್ವಕಪ್ 2003: ಸೆಂಚುರಿಯನ್‍ನಲ್ಲಿ 2003ರಲ್ಲಿ ನಡೆದ ಪಂದ್ಯದಲ್ಲಿ ಇನ್ನೂ 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‍ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಪಾಕಿಸ್ತಾನ ನೀಡಿದ 273 ರನ್ ಟಾರ್ಗೆಟ್‍ಗೆ ಉತ್ತರವಾಗಿ ಟೀಂ ಇಂಡಿಯಾ 45.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತ್ತು. 75 ಎಸೆತಗಳಲ್ಲಿ 98 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.

    ವಿಶ್ವಕಪ್ 2011: ಚಂಡೀಗಢದಲ್ಲಿ 2011ರಲ್ಲಿ ನಡೆದ ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಪಾಕಿಸ್ತಾನ 29 ರನ್‍ಗಳ ಸೋಲನುಭವಿಸಿತು. ಈ ಪಂದ್ಯದಲ್ಲಿ 85 ರನ್ ಗಳಿಸಿದ್ದ ಸಚಿನ್ ಮ್ಯಾನ್ ಆಫ್ ದಿ ಮ್ಯಾಚ್ ಗೌರವ ಪಡೆದರು.

    ವಿಶ್ವಕಪ್ 2015: ಆಸ್ಟ್ರೇಲಿಯಾದ ಆಡಿಲೇಡ್‍ನಲ್ಲಿ 2015ರಲ್ಲಿ ಭಾರತ ನೀಡಿದ 300 ರನ್ ಟಾರ್ಗೆಟ್ ಗೆ ಉತ್ತರವಾಗಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ 224 ರನ್‍ಗಳಿಗೆ ಆಲೌಟಾಗಿ ಭಾರತಕ್ಕೆ 76 ರನ್‍ಗಳ ಗೆಲುವು ನೀಡಿತು. ಈ ಪಂದ್ಯದಲ್ಲಿ 107 ರನ್ ಗಳಿಸಿ ಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.

  • ಪಾಕ್ ಮೂಲದ ಅಭಿಮಾನಿಗೆ ಟಿಕೆಟ್ ಕೊಡಿಸಿದ ಧೋನಿ

    ಪಾಕ್ ಮೂಲದ ಅಭಿಮಾನಿಗೆ ಟಿಕೆಟ್ ಕೊಡಿಸಿದ ಧೋನಿ

    ನವದೆಹಲಿ: ಪಾಕಿಸ್ತಾನ ಮೂಲದ ಕ್ರಿಕೆಟ್ ಅಭಿಮಾನಿ ಮೊಹಮ್ಮದ್ ಬಶೀರ್ (ಚಾಚಾ ಶಿಕಾಗೋ) ಅವರಿಗೆ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಟಿಕೆಟ್ ಕೊಡಿಸಿದ್ದಾರೆ.

    ಧೋನಿ ಮತ್ತು ಬಶೀರ್ ಅವರದ್ದು 9 ವರ್ಷದ ಗೆಳತನ. ಜೂನ್ 16ರಂದು ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಧೋನಿ ಚಾಚಾ ಶಿಕಾಗೋ ಅವರಿಗೆ ಟಿಕೆಟ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಅಮೆರಿಕದ ಶಿಕಾಗೋದಲ್ಲಿ ರೆಸ್ಟೋರೆಂಟ್ ಹೊಂದಿರುವ ಪಾಕಿಸ್ತಾನ ಮೂಲದ 63 ವರ್ಷದ ಮೊಹಮ್ಮದ್ ಬಶೀರ್, ಧೋನಿ ಅಭಿಮಾನಿಯಾಗಿದ್ದಾರೆ. 2011ರ ವಿಶ್ವಕಪ್ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ನಡುವೆ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೆ ಮೊಹಮ್ಮದ್ ಬಶೀರ್ ಭಾರತಕ್ಕೆ ಆಗಮಿಸಿದ್ದರು. ಆಗಲೂ ಧೋನಿ ಟಿಕೆಟ್ ಖರೀದಿಸಿ ಕೊಟ್ಟಿದ್ದರು.

    ಧೋನಿ ಮತ್ತು ಬಶೀರ್ ಅವರ ನಡುವೆ ಸ್ನೇಹ ಮುಂದುವರೆದಿದ್ದು, ಪಂದ್ಯ ವೀಕ್ಷಿಸಲು ಬಶೀರ್ ಇಂಗ್ಲೆಂಡ್‍ಗೆ ಆಗಮಿಸಿದ್ದಾರೆ. ಧೋನಿ ತುಂಬಾ ಒಳ್ಳೆಯ ವ್ಯಕ್ತಿ ಅವರೊಂದಿಗೆ 9 ವರ್ಷಗಳಿಂದ ಸ್ನೇಹವಿದೆ. ಈ ಪಂದ್ಯದ ಟಿಕೆಟ್‍ಗಾಗಿ ಜನರು 800-900 ಪೌಂಡ್ ನೀಡಲು ತಯಾರಾಗಿದ್ದಾರೆ. ನಾನು ಈ 800-900 ಪೌಂಡ್ ನಲ್ಲಿ ಮತ್ತೆ ಚಿಕಾಗೋಗೆ ವಾಪಸ್ ಹೋಗಬಹುದು. ಆದರೆ ನಾನು ಟಿಕೆಟ್‍ಗಾಗಿ ಹೆಣಗಾಡಬೇಕಾಗಿಲ್ಲ ನನಗೆ ಧೋನಿ ಅವರು ಟಿಕೆಟ್ ನೀಡಿದ್ದಾರೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬಶೀರ್ ಪಾಕಿಸ್ತಾನ ತಂಡ ತಂಗಿರುವ ಹೋಟೆಲ್‍ಗೆ ತೆರಳಿ ಶೋಯಬ್ ಮಲ್ಲಿಕ್ ಮತ್ತು ಅವರ ಪತ್ನಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಭೇಟಿಯಾಗಿದ್ದಾರೆ.

  • ಪಾಕ್ ಜಾಹೀರಾತಿಗೆ ತಿರುಗೇಟು ಕೊಟ್ಟ ಭಾರತದ ಯೂಟ್ಯೂಬ್ ಸ್ಟಾರ್ಸ್!

    ಪಾಕ್ ಜಾಹೀರಾತಿಗೆ ತಿರುಗೇಟು ಕೊಟ್ಟ ಭಾರತದ ಯೂಟ್ಯೂಬ್ ಸ್ಟಾರ್ಸ್!

    ನವದೆಹಲಿ: ವಿಶ್ವಕಪ್ ಟೂರ್ನಿಯ ಭಾಗವಾಗಿ ನಾಳೆ ನಡೆಯಲಿರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಭಾರೀ ಕುತೂಹಲವನ್ನು ಮೂಡಿಸಿದೆ.

    ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಕುರಿತ ಹೊಸ ಹೊಸ ಮಿಮ್ಸ್ ಹರಿದಾಡುತ್ತಿದ್ದು, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಜಾಹೀರಾತಿಗೆ ಭಾರತದ ಯೂಟ್ಯೂಬ್ ಸ್ಟಾರ್ಸ್ ತಿರುಗೇಟು ನೀಡಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    https://twitter.com/hvgoenka/status/1139545650347929600

    ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹೋಲುವಂತಹ ವ್ಯಕ್ತಿಯನ್ನು ಜಾಹೀರಾತಿನಲ್ಲಿ ಬಳಕೆ ಮಾಡಿದ್ದ ಪಾಕ್ ಮಾಧ್ಯಮ ವಿರುದ್ಧ ಭಾರತೀಯ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸದ್ಯ ವಿ ಸೆವೆನ್ ಪಿಕ್ಚರ್ಸ್ ಎಂಬ ಯೂಟ್ಯೂಬ್ ಚಾನೆಲ್ ವಿಡಿಯೋ ಬಿಡುಗಡೆ ಮಾಡಿದೆ.

    ವಿಡಿಯೋದಲ್ಲಿ ಭಾರತೀಯ ಅಭಿಮಾನಿ ಸಲೂನ್‍ನಲ್ಲಿ ಯುವರಾಜ್ ಸಿಂಗ್ ವಿಡಿಯೋ ನೋಡತ್ತಾ ಕುಳಿತ್ತಿರುತ್ತಾರೆ. ಈ ವೇಳೆ ಆಗಮಿಸುವ ಪಾಕ್ ಅಭಿಮಾನಿ ಗಿಫ್ಟ್ ಎಂದು ರುಮಾಲ್ (ಕರ್ಚಿಫ್)ನ್ನು ನೀಡಿ ಜೂನ್ 16 ರಂದು ಪಾಕ್ ಗೆಲ್ಲುವ ಬಳಿಕ ನಿಮಗೆ ಬೇಕಾಗುತ್ತದೆ ಎಂದು ಕಾಲೆಳೆಯುತ್ತಾರೆ. ಇದಕ್ಕೆ ಸೈಲೆಂಟ್ ಆಗಿಯೇ ತಿರುಗೇಟು ನೀಡುವ ಭಾರತೀಯ ಅಭಿಮಾನಿ ಅಭಿನಂದನ್ ರೀತಿಯೇ ಪಾಕ್ ಅಭಿಮಾನಿಗೆ ಶೇವ್ ಮಾಡಿಸುತ್ತಾನೆ. ಪಾಕ್ ಅಭಿಮಾನಿ ನೀಡಿದ್ದ ಕರ್ಚಿಫ್ ಗಿಫ್ಟನ್ನು ಆತನಿಗೆ ಮರಳಿ ನೀಡಿರುವ ಭಾರತೀಯ ಅಭಿಮಾನಿ, ನಿಮ್ಮಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಅಭಿನಂದನ್ ಕುಡಿದು ಬಿಟ್ಟ ಟೀ ಕಪ್ ಪಡೆಯಲು ಮಾತ್ರ ಸಾಧ್ಯ ಎಂದು ಹೇಳಿ ಟಾಂಗ್ ನೀಡುತ್ತಾನೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮದೇ ಪ್ರತಿಕ್ರಿಯೆ ನೀಡಿ ಉತ್ತರಿಸುತ್ತಿದ್ದಾರೆ. ವಿಡಿಯೋ ಅಂತ್ಯದಲ್ಲಿ ಸಿಗುವ ಟ್ವಿಸ್ಟ್ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

  • ಅಗಲಿದ ಗೆಳೆಯನಿಗೆ ಗೆಲುವು ಅರ್ಪಿಸಿದ ಕಿಚ್ಚ ಸುದೀಪ್

    ಅಗಲಿದ ಗೆಳೆಯನಿಗೆ ಗೆಲುವು ಅರ್ಪಿಸಿದ ಕಿಚ್ಚ ಸುದೀಪ್

    ಲಂಡನ್: ನಟ ಕಿಚ್ಚ ಸುದೀಪ್ ಅವರು ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಟೂರ್ನಿಯಲ್ಲಿ ಸುದೀಪ್ ಅವರ ತಂಡ ಗೆಲುವು ಪಡೆದಿದೆ.

    ಈ ಕುರಿತು ಮಾಹಿತಿ ನೀಡಿ ಕಿಚ್ಚ ಸುದೀಪ್ ಅಭಿಮಾನಿಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಸುದೀಪ್ ಅವರ ತಂಡ ಮತ್ತೊಮ್ಮೆ ಟೂರ್ನಿ ಗೆದ್ದ ಸಾಧನೆ ಮಾಡಿದೆ. ಕಳೆದ ಬಾರಿಯ ಟೂರ್ನಿಯಲ್ಲೂ ಸುದೀಪ್ ಅವರ ತಂಡ ಗೆಲುವು ಪಡೆದಿತ್ತು.

    ಸುದೀಪ್ ತಂಡದಲ್ಲಿ ಅವರ ಸ್ನೇಹಿತ ರಾಜೀವ್ ಸೇರಿದಂತೆ ಹಲವರು ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಗೆಳೆಯನನ್ನ ಸುದೀಪ್ ನೆನಪಿಸಿಕೊಂಡಿದ್ದು, ಅಗಲಿದ ಗೆಳೆಯ ಧ್ರುವ ಅವರಿಗೆ ಗೆಲುವು ಅರ್ಪಿಸಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ಧ್ರುವ ಅವರು ಸುದೀಪ್ ರೊಂದಿಗೆ ಪಂದ್ಯದಲ್ಲಿ ಭಾಗಿಯಾಗಿದ್ದರು.

    ಟೂರ್ನಿಯ ಸಂದರ್ಭದಲ್ಲಿ ತೆಗೆದುಕೊಂಡಿದ್ದ ಕೆಲ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್, ಲಾರ್ಡ್ಸ್ ಕ್ರೀಡಾಂಗಣದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸುದೀಪ್ ಅವರಿಗೆ ಶುಭ ಕೋರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

    ಕಾರ್ಪೋರೇಟ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿಯೇ ಸುದೀಪ್ ಇಂಗ್ಲೆಂಡ್‍ಗೆ ತೆರಳಿದ್ದರು. ವಿಶ್ವಕಪ್ ಟೂರ್ನಿಯ ಭಾಗವಾಗಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಸೆಣಸಿದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಿದ್ದರು. ಈ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

  • ಧೋನಿ ಜೆರ್ಸಿ ಪ್ರದರ್ಶಿಸಿದ ಕೋಚ್ ರವಿಶಾಸ್ತ್ರಿ

    ಧೋನಿ ಜೆರ್ಸಿ ಪ್ರದರ್ಶಿಸಿದ ಕೋಚ್ ರವಿಶಾಸ್ತ್ರಿ

    ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಕದನಕ್ಕೆ ಅಭಿಮಾನಿಗಳು ಕಾದು ಕಳಿತು ನಿರಾಸೆ ಅನುಭವಿಸಿದ್ರು. ಆದರೆ ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕೋಚ್ ರವಿಶಾಸ್ತ್ರಿ ಅವರು ಅಭಿಮಾನಿಗಳಿಗೆ ಧೋನಿ ಜೆರ್ಸಿ ತೋರಿಸಿದ್ದಾರೆ.

    ನಾಟಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬದ್ಧ ಅಭಿಮಾನಿಗಳು ಮಳೆಯಿಂದ ಟಾಸ್ ತಡವಾದ ಕಾರಣ ಮೊದಲು ಕಾದು ಕಳಿತ್ತಿದ್ದರು. ಆದರೆ ಮಳೆ ನಿಲ್ಲದ ಕಾರಣ ಪಂದ್ಯ ರದ್ದಾಗಿತ್ತು. ಈ ವೇಳೆ ಅಭಿಮಾನಿಗಳು ಧೋನಿ ಧೋನಿ ಎಂದು ಕೂಗಿದ್ದಾರೆ. ಇತ್ತ ಆಟಗಾರರ ಕೊಠಡಿಯ ಬಾಲ್ಕನಿಗೆ ಬಂದ ಕೋಚ್ ರವಿಶಾಸ್ತ್ರಿ ಅವರು ಧೋನಿ ಜೆರ್ಸಿ ತೋರಿಸಿದ್ದರು.

    ಕೋಚ್ ಜೆರ್ಸಿ ತೋರಿಸಿದ ಸಂದರ್ಭದಲ್ಲಿ ತಂಡದ ಇತರೇ ಎಲ್ಲಾ ಆಟಗಾರರು ಹತ್ತಿರದಲ್ಲೇ ಇದ್ದರು ಕೂಡ ಧೋನಿ ಎಲ್ಲಿಗೆ ತೆರಳಿದ್ದರು ಎಂಬುವುದು ತಿಳಿದು ಬಂದಿಲ್ಲ. ಆದರೆ ಆ ಬಳಿಕ ಧೋನಿ ಬಾಲ್ಕನಿಗೆ ಬಂದಿದ್ದರು, ಧೋನಿ ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ಇತ್ತ ಪಂದ್ಯ ರದ್ದಾಗಿದ್ದ ಕಾರಣ ಎರಡು ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮಳೆಯಿಂದ ಕೊಚ್ಚಿ ಹೋದ 4ನೇ ಪಂದ್ಯ ಇದಾಗಿದೆ. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಂ. 1 ಪಟ್ಟ ಪಡೆದಿದ್ದು, ಟೀಂ ಇಂಡಿಯಾ 5 ಅಂಕ ಪಡೆದು 3ನೇ ಸ್ಥಾನ ಪಡೆದಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ನಾಯಕ ಕೊಹ್ಲಿ, ಮಳೆಯಿಂದ ಪಂದ್ಯ ರದ್ದಾಗಿದ್ದು, ಟೂರ್ನಿಯ ಆರಂಭದಲ್ಲೇ ಈ ರೀತಿ ಆಗಿದ್ದು ದುರದೃಷ್ಟಕರ. ಹವಾಮಾನವನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದರು.

    https://twitter.com/msdfansofficial/status/1139227096075476992

  • ನಿಮಗೆ ಬೇಕಾಗಿದ್ದ ಕಪ್ ಇದೇ ಅಲ್ವಾ – ಪಾಕ್ ವಿರುದ್ಧ ಪೂನಂ ಗರಂ

    ನಿಮಗೆ ಬೇಕಾಗಿದ್ದ ಕಪ್ ಇದೇ ಅಲ್ವಾ – ಪಾಕ್ ವಿರುದ್ಧ ಪೂನಂ ಗರಂ

    ಮುಂಬೈ: ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತೀಯರ ಮನ ಗೆದ್ದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‍ರನ್ನ ಮುಂದಿಟ್ಟು ಜಾಹೀರಾತು ನೀಡಿದ್ದ ಪಾಕ್‍ಗೆ ನಟಿ ಪೂನಂ ಪಾಂಡೆ ತಿರುಗೇಟು ನೀಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಭಾಗವಾಗಿ ಭಾನುವಾರ ಪಾಕಿಸ್ತಾನ ಹಾಗೂ ಟೀಂ ಇಂಡಿಯಾ ಪಂದ್ಯ ಆಡಲಿದ್ದು, ಈ ಪಂದ್ಯದ ಪ್ರಚಾರಕ್ಕಾಗಿ ಪಾಕಿಸ್ತಾನ ಮಾಧ್ಯಮ ಭಾರತದ ಕಾಲೆಳೆದು ಜಾಹೀರಾತು ನೀಡಿತ್ತು. ಈ ಜಾಹೀರಾತಿನ ವಿರುದ್ಧ ಸಾನಿಯಾ ಮಿರ್ಜಾ ಕೂಡ ಕಿಡಿಕಾರಿದ್ದರು. ಸದ್ಯ ಪೂನಂ ಕೂಡ ತಮ್ಮದೇ ಶೈಲಿಯಲ್ಲಿ ಪಾಕ್‍ಗೆ ತಿರುಗೇಟು ನೀಡಿದ್ದಾರೆ.

     

    View this post on Instagram

     

    My Answer to the Pakistani AD. #IndvsPak World Cup 2019.

    A post shared by Poonam Pandey (@ipoonampandey) on

    ಈ ಕುರಿತು ತನ್ನ ಇನ್ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ಪೂನಂ, ನಿನ್ನೆಯಷ್ಟೇ ನನ್ನ ವಾಟ್ಸಾಪ್ ನಲ್ಲಿ ವಿಡಿಯೋ ನೋಡಿದ್ದು, ಒಬ್ಬ ಹೀರೋ ಮಾಡಿದ ಕೆಲಸವನ್ನು ಅವಹೇಳನ ಮಾಡಲಾಗಿದೆ. ಪಾಕಿಸ್ತಾನ ಮಾಧ್ಯಮದ ಈ ವರ್ತನೆ ಒಳ್ಳೆಯದಲ್ಲ. ಈ ಜಾಹೀರಾತಿಗೆ ನನ್ನ ಉತ್ತರ ಏನೆಂದರೆ, ಟೀ ಕಪ್ ಮೇಲೆ ಜೋಕ್ ಮಾಡುವುದು ಏಕೆ? ವಾಸ್ತವದಲ್ಲಿ ನಿಮಗೆ ಬೇಕಾಗಿರುವುದು ಈ ಕಪ್ ಎಂದು ತನ್ನ ಒಳ ಉಡುಪನ್ನು ನೀಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೂನಂ ವಿಡಿಯೋಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಕೆಲವರು ನಟಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಬೆಂಬಲ ನೀಡಿ ಕಮೆಂಟ್ ಮಾಡಿದ್ದಾರೆ. ಇದನ್ನು ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯ – ಅಭಿನಂದನ್‍ರನ್ನ ಎಳೆದುತಂದು ಜಾಹೀರಾತು ಬಿಟ್ಟ ಪಾಕ್