Tag: ವಿಶ್ವಕಪ್ ಕ್ರಿಕೆಟ್

  • ಪಾಕ್‌ಗೆ ಹೀನಾಯ ಸೋಲು – ವಿಶ್ವಕಪ್‌ ಟೂರ್ನಿಯಿಂದಲೇ ಭಾರತ ಔಟ್‌

    ಪಾಕ್‌ಗೆ ಹೀನಾಯ ಸೋಲು – ವಿಶ್ವಕಪ್‌ ಟೂರ್ನಿಯಿಂದಲೇ ಭಾರತ ಔಟ್‌

    ದುಬೈ: ಮಹಿಳಾ ವಿಶ್ವಕಪ್‌ (World Cup) ಟೂರ್ನಿಯಿಂದ ಭಾರತ (Team India) ಹೊರ ಬಿದ್ದಿದೆ. ಪಾಕಿಸ್ತಾನದ (Pakistan) ವಿರುದ್ಧ ನ್ಯೂಜಿಲೆಂಡ್‌ 54 ರನ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ (New Zealand) 6 ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಪಾಕಿಸ್ತಾನ 11.4 ಓವರ್‌ಗಳಲ್ಲಿ 56 ರನ್‌ಗಳಿಸಿ ಹೀನಾಯವಾಗಿ ಸೋಲನ್ನು ಒಪ್ಪಿಕೊಂಡಿತು.

    ಒಂದು ವೇಳೆ ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿ ಪಾಕಿಸ್ತಾನ ಗೆದ್ದಿದ್ದರೆ ರನ್‌ ರೇಟ್‌ ಆಧಾರದಲ್ಲಿ ಭಾರತಕ್ಕೆ ಸೆಮಿ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಈ ಮೂಲಕ ಭಾರತ 8 ವರ್ಷಗಳ ಬಳಿಕ ಗ್ರೂಪ್‌ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿದೆ.

    ಭಾರತ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋತಿದ್ದರೆ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಜಯಗಳಿಸಿತ್ತು.

    ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದು 8 ಅಂಕ ಗಳಿಸಿ ಮೊದಲ ಸ್ಥಾನ ಪಡೆದರೆ ನ್ಯೂಜಿಲೆಂಡ್‌ 6 ಅಂಕ ಪಡೆದು ಎರಡನೇ ಸ್ಥಾನ ಪಡೆದಿದೆ. ಭಾರತ 4 ಅಂಕದೊಂದಿಗೆ ಮೂರನೇ ಸ್ಥಾನ ಪಡೆದಿದೆ. ಪಾಕಿಸ್ತಾನ ಒಂದು ಜಯದೊಂದಿಗೆ 4ನೇ ಸ್ಥಾನ ಪಡೆದರೆ ಆಡಿರುವ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾ ಸೋತಿದೆ.

  • ಬುಮ್ರಾ ಬೆಂಕಿ ಬೌಲಿಂಗ್‌, ಭಾರತಕ್ಕೆ ರೋಚಕ 6 ರನ್‌ ಜಯ – ಗುಂಪು ಹಂತದಲ್ಲೇ ಪಾಕ್‌ ಹೊರಕ್ಕೆ?

    ಬುಮ್ರಾ ಬೆಂಕಿ ಬೌಲಿಂಗ್‌, ಭಾರತಕ್ಕೆ ರೋಚಕ 6 ರನ್‌ ಜಯ – ಗುಂಪು ಹಂತದಲ್ಲೇ ಪಾಕ್‌ ಹೊರಕ್ಕೆ?

    ನ್ಯೂಯಾರ್ಕ್‌: ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅವರ ಮ್ಯಾಜಿಕ್‌ ಸ್ಪೆಲ್‌ನಿಂದಾಗಿ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ಪಾಕಿಸ್ತಾನದ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ 6 ರನ್‌ಗಳ ಜಯ ಸಾಧಿಸಿದೆ.

    120 ರನ್‌ಗಳ ಸವಾಲನ್ನು ನೀಡಿದಾಗ ಪಾಕಿಸ್ತಾನ (Pakistan) ಸುಲಭವಾಗಿ ಜಯಗಳಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ ಭಾರತ (India) ರೋಚಕ ಜಯ ಸಾಧಿಸಿದೆ. ಪಾಕ್‌ ಸೇನೆಯಿಂದ ಅಭ್ಯಾಸ ಪಡೆದು ವಿಶ್ವಕಪ್‌ಗೆ ಆಗಮಿಸಿದ್ದ ಪಾಕಿಸ್ತಾನ ತಂಡ ಈಗ ಸತತ ಎರಡು ಸೋಲಿನಿಂದ ಗುಂಪು ಹಂತದಲ್ಲೇ ಹೊರಕ್ಕೆ ಹೋಗುವ ಸಾಧ್ಯತೆಯಿದೆ.

    2 ವಿಕೆಟ್‌ ಕಳೆದುಕೊಂಡು 72 ರನ್‌ಗಳಿಸಿದ್ದಾಗ ಪಾಕ್‌ ಸುಭದ್ರ ಸ್ಥಿತಿಯಲ್ಲಿ ಇತ್ತು. ಆದರೆ ಯಾವಾಗ ಫಕರ್‌ ಜಮಾನ್‌ ಔಟ್‌ ಆದರೋ ಅಲ್ಲಿಂದ ಪತನ ಆರಂಭವಾಯಿತು. ಕೊನೆಯ 36 ಎಸೆತಗಳಲ್ಲಿ ಪಾಕ್‌ ಗೆಲುವಿಗೆ 7 ವಿಕೆಟ್‌ಗಳ ಸಹಾಯದಿಂದ 40 ರನ್‌ ಬೇಕಿತ್ತು. 15ನೇ ಓವರ್‌ ಎಸೆದ ಬುಮ್ರಾ 31 ರನ್‌ (44 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ರಿಜ್ವಾನ್‌ ಅವರನ್ನು ಬೌಲ್ಡ್‌ ಮಾಡಿದರು. ಈ ಓವರ್‌ನಲ್ಲಿ ಕೇವಲ 3 ರನ್‌ ಮಾತ್ರ ಬಂತು.

    ಅಕ್ಷರ್‌ ಪಟೇಲ್‌ ಎಸೆದ 16ನೇ ಓವರ್‌ನಲ್ಲಿ 2 ರನ್‌ ಬಂದರೆ, ಹಾರ್ದಿಕ್‌ (Hardik Pandya) ಎಸೆದ 17ನೇ ಓವರ್‌ನಲ್ಲಿ 5 ರನ್‌ ಪಾಕಿಗೆ ಬಂತು. ಸಿರಾಜ್‌ ಎಸೆದ 18ನೇ ಓವರ್‌ನಲ್ಲಿ 9 ರನ್‌ ಬಂದಾಗ ಕೊನೆಯ 12 ಎಸೆತದಲ್ಲಿ 21 ರನ್‌ ಬೇಕಿತ್ತು. ಇದನ್ನೂ ಓದಿ: IND vs PAK T20 World Cup: ಪಾಕಿಸ್ತಾನಕ್ಕೆ 120 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

    19ನೇ ಓವರ್‌ ಎಸೆದ ಬುಮ್ರಾ ಕೇವಲ 3 ರನ್‌ ನೀಡಿ 1 ವಿಕೆಟ್‌ ಪಡೆಯುವ ಮೂಲಕ ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಕೊನೆಯ 20ನೇ ಓವರ್‌ನಲ್ಲಿ ಪಾಕಿಸ್ತಾನಕ್ಕೆ 18 ರನ್‌ ಬೇಕಿತ್ತು.

    ಅರ್ಶ್‌ದೀಪ್‌ ಸಿಂಗ್‌ ಎಸೆದ ಮೊದಲ ಓವರ್‌ನಲ್ಲಿ ಇಮಾದ್‌ ವಸೀಂ ಕೀಪರ್‌ಗೆ ಕ್ಯಾಚ್‌ ನೀಡಿ ಹೊರನಡೆದರು. ನಂತರ ಎರಡು ಎಸೆತದಲ್ಲಿ 2ರನ್‌ ಬಂತು. 4ನೇ ಮತ್ತು 5ನೇ ಎಸೆತವನ್ನು ನಸೀಮ್‌ ಶಾ ಬೌಂಡರಿಗೆ ಅಟ್ಟಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಆದರೆ ಕೊನೆಯ ಎಸೆತದಲ್ಲಿ ಅರ್ಶ್‌ದೀಪ್‌ 1 ರನ್‌ ನೀಡಿದ ಪರಿಣಾಮ ಭಾರತ 6 ರನ್‌ಗಳ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ಅಂತಿಮವಾಗಿ 7 ವಿಕೆಟ್‌ ನಷ್ಟಕ್ಕೆ 113 ರನ್‌ ಮಾತ್ರ ಗಳಿಸಿತು.

    ಬುಮ್ರಾ 14 ರನ್‌ ನೀಡಿ 3 ವಿಕೆಟ್‌ ಪಡೆದರೆ ಪಾಂಡ್ಯ 24 ರನ್‌ ನೀಡಿ 2 ವಿಕೆಟ್‌ ಪಡೆದರು. ಅತ್ಯುತ್ತಮ ಪ್ರದರ್ಶನ ನೀಡಿದ ಬುಮ್ರಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ನಾಯಕ ಬಾಬರ್‌ ಅಜಂ, ಉಸ್ಮನ್‌ ಖಾನ್‌, ಫಖರ್‌ ಜಮಾನ್‌ ತಲಾ 13 ರನ್‌ ಹೊಡೆದರೆ ಇಮಾದ್‌ ವಾಸೀಂ 15 ರನ್‌ ಹೊಡೆದು ಔಟಾದರು.


    ಎ ಗುಂಪಿನಲ್ಲಿ ಆಡಿದ 2 ಪಂದ್ಯಗಳಲ್ಲಿ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 4 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಅಮೆರಿಕ 4 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ ಕೆನಡಾ 2 ಅಂಕ ಪಡೆದು ಮೂರನೇ ಸ್ಥಾನಲ್ಲಿದೆ. ಎರಡು ಪಂದ್ಯ ಸೋತಿರುವ ಪಾಕಿಸ್ತಾನ ಮತ್ತು ಐರ್ಲೆಂಡ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನಲ್ಲಿದೆ. ಎರಡು ಪಂದ್ಯಗಳನ್ನು ಸೋತಿರುವ ಮಾಜಿ ಚಾಂಪಿಯನ್‌ ಪಾಕಿಸ್ತಾನ ಗುಂಪು ಹಂತದಲ್ಲೇ ಹೊರಕ್ಕೆ ಹೋಗುವ ಸಾಧ್ಯತೆಯಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ 19 ಓವರ್‌ಗಳಿಗೆ 119 ರನ್‌ಗಳಿಸಿ ಆಲೌಟ್‌ ಆಗಿತ್ತು.

  • ಸೂಪರ್‌ ಓವರ್‌ ಥ್ರಿಲ್ಲರ್‌ – ಕ್ರಿಕೆಟ್‌ ಶಿಶು ಅಮೆರಿಕದ ಮುಂದೆ ಸೋತ ಪಾಕ್‌!

    ಸೂಪರ್‌ ಓವರ್‌ ಥ್ರಿಲ್ಲರ್‌ – ಕ್ರಿಕೆಟ್‌ ಶಿಶು ಅಮೆರಿಕದ ಮುಂದೆ ಸೋತ ಪಾಕ್‌!

    – ಕೊನೆಯ ಎಸೆತದಲ್ಲಿ ಅಮೆರಿಕವನ್ನು ಗೆಲ್ಲಿಸಿದ ನಿತೀಶ್‌ ಕುಮಾರ್‌

    ಡಲ್ಲಾಸ್‌: ಟಿ20 ವಿಶ್ವಕಪ್‌ (T20 World Cup) ಗೆಲ್ಲಲು ಸೇನಾ ಕೇಂದ್ರದಲ್ಲಿ ದೈಹಿಕ ತರಬೇತಿ ಪಡೆದಿದ್ದ ಪಾಕಿಸ್ತಾನ (Pakistan) ತಂಡ ಕ್ರಿಕೆಟ್‌ ಶಿಶು ಅಮೆರಿಕದ (USA) ವಿರುದ್ಧ ಸೋತಿದೆ. ಸೂಪರ್‌ ಓವರ್‌ನಲ್ಲಿ (Super Over) ಅಮೆರಿಕ ಪಾಕಿಸ್ತಾನವನ್ನು ಮಣಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 7 ವಿಕೆಟ್‌ ನಷ್ಟಕ್ಕೆ 159 ರನ್‌ ಹೊಡೆಯಿತು. ಚೇಸ್‌ ಮಾಡಿದ ಅಮೆರಿಕಕ್ಕೆ ಕೊನೆಯ ಓವರ್‌ನಲ್ಲಿ 15 ರನ್‌ ಬೇಕಿತ್ತು.

    ಹ್ಯಾರಿಸ್‌ ರೌಫ್‌ ಎಸೆದ ಮೊದಲ ಮೂರು ಎಸೆತದಲ್ಲಿ 1 ರನ್‌ ಬಂದಿದ್ದರೆ 4ನೇ ಎಸೆತವನ್ನು ಆರನ್‌ ಜೋನ್ಸ್‌ ಸಿಕ್ಸ್‌ಗೆ ಅಟ್ಟಿದರು. 5ನೇ ಎಸೆತದಲ್ಲಿ 1 ರನ್‌ ಓಡಿದರು. 6ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ನಿತೀಶ್‌ ಕುಮಾರ್‌ ಬೌಂಡರಿ ಹೊಡೆಯುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು.

    ಅಮೀರ್‌ ಎಸೆದ ಸೂಪರ್‌ ಓವರ್‌ನಲ್ಲಿ ಅಮೆರಿಕ 18 ರನ್‌ ಹೊಡೆಯಿತು. ಇದರಲ್ಲಿ ಇತರ ರೂಪದಲ್ಲಿ 7 ರನ್‌ ಬಿಟ್ಟುಕೊಟ್ಟಿದ್ದರು. 19 ರನ್‌ಗಳ ಸವಾಲು ಪಡೆದ ಪಾಕಿಸ್ತಾನ 1 ವಿಕೆಟ್‌ ನಷ್ಟಕ್ಕೆ 13 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಮೊದಲು ಬ್ಯಾಟ್‌ ಮಾಡಿದ್ದ ಪಾಕ್‌ ಪರ ನಾಯಕ ಬಾಬರ್‌ ಅಜಂ 44 ರನ್‌(43 ಎಸೆತ, 3 ಬೌಂಡರಿ, 2 ಸಿಕ್ಸರ್‌), ಶಾದಾಬ್‌ ಖಾನ್‌ 40 ರನ್‌(25 ಎಸೆತ, 1 ಬೌಂಡರಿ, 3 ಸಿಕ್ಸರ್‌) ಇಫ್ತಿಕಾರ್‌ ಅಹ್ಮದ್‌ ಔಟಾಗದೇ 18 ರನ್‌ (14 ಎಸೆತ, 3 ಬೌಂಡರಿ), ಶಾಹೀನ್‌ ಅಫ್ರಿದಿ ಔಟಾಗದೇ 23 ರನ್‌ (16 ಎಸೆತ, 1 ಬೌಂಡರಿ, 2 ಸಿಕ್ಸರ್‌) ಹೊಡೆದರು.

    ಅಮೆರಿಕ ಪರ ಮೊನಾಂಕ್‌ ಪಟೇಲ್‌ 50 ರನ್‌ (38 ಎಸೆತ, 7 ಬೌಂಡರಿ, 1 ಸಿಕ್ಸರ್‌), ಅಂಡ್ರಿಸ್‌ ಗೌಸ್‌ 35 ರನ್‌ (26 ಎಸೆತ, 5 ಬೌಂಡರಿ, 1 ಸಿಕ್ಸರ್)‌, ಆರನ್‌ ಜೋನ್ಸ್‌ ಔಟಾಗದೇ 36 ರನ್‌ (26 ಎಸೆತ, 2 ಬೌಂಡರಿ, 2 ಸಿಕ್ಸರ್‌), ನಿತೀಶ್‌ ಕುಮಾರ್‌ ಔಟಾಗದೇ 14 ರನ್‌ (14 ಎಸೆತ, 1 ಬೌಂಡರಿ) ಹೊಡೆದರು. ಪಾಕಿಸ್ತಾನ ಇತರ ರೂಪದಲ್ಲಿ12 ರನ್‌ (1 ನೋಬಾಲ್‌, 11 ವೈಡ್‌) ಬಿಟ್ಟುಕೊಟ್ಟದ್ದು ಮುಳುವಾಯಿತು.

     

  • ಸೋಲು-ಗೆಲುವಿನ ಆಟ – ನೀವು ತಿಳಿಯಲೇಬೇಕಾದ ಸಂಗತಿಗಳಿವು

    ಸೋಲು-ಗೆಲುವಿನ ಆಟ – ನೀವು ತಿಳಿಯಲೇಬೇಕಾದ ಸಂಗತಿಗಳಿವು

    2023ರ ಆರಂಭವು ಭಾರತ (Team India) ಮತ್ತು ಶ್ರೀಲಂಕಾ ನಡುವಿನ ಟಿ20 ಹಾಗೂ ಏಕದಿನ ದ್ವಿಪಕ್ಷೀಯ ಸರಣಿಯೊಂದಿಗೆ ಆರಂಭವಾಯಿತು. ಇದರೊಂದಿಗೆ 2023ರಲ್ಲಿ ನಡೆಯಬೇಕಿದ್ದ ವಿಶ್ವಕಪ್‌ ಕ್ರಿಕೆಟ್‌ಗೆ ತಯಾರಿಯೂ ಆರಂಭವಾಯಿತು. ಪೂರ್ವ ಸಿದ್ಧತೆಯಲ್ಲಿದ್ದ ಭಾರತ ಹಲವು ಸರಣಿಗಳನ್ನ ಗೆದ್ದುಕೊಂಡಿತ್ತು. ಶ್ರೀಲಂಕಾ ಬಳಿಕ ನ್ಯೂಜಿಲೆಂಡ್‌ ವಿರುದ್ಧದ ದ್ವಿಪಕ್ಷೀಯ ಸರಣಿಯನ್ನ ಗೆದ್ದು ಬೀಗಿತು. ಹೀಗೆ ಗೆಲುವಿನ ಓಟ ಮುಂದಿರಿಸಿದ್ದ ಭಾರತ ಪ್ರಮುಖ ಪಂದ್ಯಗಳಲ್ಲಿ ಸೋಲು ಕಂಡಿದ್ದನ್ನು ಮರೆಯುವಂತಿಲ್ಲ.

    2023ರ ವರ್ಷದಲ್ಲಿ ಕ್ರಿಕೆಟ್‌ ವಿಭಾಗದಲ್ಲಿ ಏಕದಿನ ವಿಶ್ವಕಪ್‌ ಕ್ರಿಕೆಟ್‌ (World Cup Cricket) ಟೂರ್ನಿ ಗಮನ ಸೆಳೆದರೂ ಈ ಸಂದರ್ಭದಲ್ಲಿ ನಡೆದ ಅನೇಕ ಬೆಳವಣಿಗೆಗಳ ಬಗ್ಗೆ ತಿಳಿಯಲೇ ಬೇಕಾದ ಸಂಗತಿಗಳಿವೆ. ಅವುಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

    ನವೆಂಬರ್ 19ರ ವರೆಗೂ ಟೀಂ ಇಂಡಿಯಾದ ರೋಹಿತ್ ಶರ್ಮಾ (Rohit Sharma) ಬಳಗವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದ್ರೆ ಆಸ್ಟ್ರೇಲಿಯಾ 6ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ 140 ಕೋಟಿ ಭಾರತೀಯರ ಕನಸು ಭಗ್ನಗೊಳಿಸಿತು. ಅಕ್ಟೋಬರ್‌ 5 ರಿಂದ ನವೆಂಬರ್‌ 19ರವರೆಗೆ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ 10 ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು. ಆದ್ರೆ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಟಗಾರರ ಹಲವು ದಾಖಲೆಗಳು ಅಚ್ಚಳಿಯದೇ ಉಳಿದವು.

    ವಿಶ್ವಕಪ್‌ನಲ್ಲಿ ಗಮನ ಸೆಳೆದ ದಾಖಲೆಗಳು:
    2008ರ ಆಗಸ್ಟ್‌ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದ ಕೊಹ್ಲಿ (Virat Kohli) 2023ರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಈ ಮೂಲಕ 49 ಶತಕ ಸಿಡಿಸಿದ್ದ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನ ನುಚ್ಚುನೂರು ಮಾಡಿದರು.

    2023ರ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ದಾಖಲೆಗಾಗಿ ಆಡದಿದ್ದರೂ 11 ಪಂದ್ಯಗಳಿಂದ 597 ರನ್‌ ಸಿಡಿಸಿ ಇತಿಹಾಸ ಸೃಷ್ಟಿದರು. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ರೋಹಿತ್‌ ಹೊರಹೊಮ್ಮಿದರು. ಅಷ್ಟೇ ಅಲ್ಲ ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಮೊಹಮ್ಮದ್‌ ಶಮಿ 50 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.

    ಟೈಮ್ಡ್‌ ಔಟ್‌ ಅಪಖ್ಯಾತಿ:
    ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಏಂಜಲೋ ಮಾಥ್ಯೂಸ್ ಒಂದೇ ಒಂದು ಎಸೆತವನ್ನೂ ಎದುರಿಸದೇ ಟೈಮ್ಡ್‌ ಔಟ್‌ಗೆ ಬಲಿಯಾದ ವಿಶ್ವದ ಮೊದಲ ಬ್ಯಾಟರ್‌ ಎಂಬ ಕುಖ್ಯಾತಿಗೆ ಪಾತ್ರರಾದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ನಾಯಕ ಶಕೀಬ್‌ ಉಲ್‌ ಹಸನ್‌ ಅಂಪೈರ್‌ ಜೊತೆ ಬ್ಯಾಟರ್‌ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್‌ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್‌ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್‌ ಅವರು, ನನ್ನ ಹೆಲ್ಮೆಟ್‌ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್‌ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್‌ ಮತ್ತು ಬಾಂಗ್ಲಾ ಆಟಗಾರರ ಜೊತೆ ಹೆಲ್ಮೆಟ್‌ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್‌ ಮಾತ್ರ ತಮ್ಮ ಟೈಮ್ಡ್‌ ಔಟ್‌ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೋ ಮಾಥ್ಯೂಸ್ ಔಟ್‌ ಎಂದು ತೀರ್ಪು ಪ್ರಕಟಿಸಲಾಯಿತು.

    ಭಾರತದ ವಿರುದ್ಧ ದಾಖಲೆ ಬರೆದ ಆಸೀಸ್‌:
    ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ (WTC) 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟಕೇರಿತು. 2019ರಲ್ಲಿ ಆರಂಭಗೊಂಡ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯಲ್ಲಿ ಕಿವೀಸ್‌ ಎದುರು ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಟೀಂ ಇಂಡಿಯಾ 2ನೇ ಬಾರಿಯೂ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನುಭವಿಸಿತು. ಆಸ್ಟ್ರೇಲಿಯಾ ಈ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಏಕದಿನ, ಟಿ20 ಹಾಗೂ ಟೆಸ್ಟ್‌ ಕ್ರಿಕೆಟ್‌ಗಳಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಏಕೈಕ ತಂಡ ಎನಿಸಿಕೊಂಡಿತು.

    8ನೇ ಬಾರಿಗೆ ಏಷ್ಯಾಕಪ್‌ ಕಿರೀಟ:
    2023ರ ಏಕದಿನ ಏಷ್ಯಾಕಪ್‌ (Asia Cup 2023) ಟೂರ್ನಿಯ ಫೈನಲ್‌ಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ 8ನೇ ಬಾರಿಗೆ ಏಷ್ಯಾಕಪ್‌ ಕಿರೀಟ ಮುಡಿಗೇರಿಸಿಕೊಂಡಿತು. 1984, 1988, 1991, 1995, 2010, 2016, 2018ರಲ್ಲಿ ಏಷ್ಯಾಕಪ್‌ ಚಾಂಪಿಯನ್‌ ಆಗಿದ್ದ ಭಾರತ 2023ರಲ್ಲಿ 8ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಅಲ್ಲದೇ ಇದು ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಗೆದ್ದ 2ನೇ ಏಷ್ಯಾಕಪ್‌ ಟೂರ್ನಿಯೂ ಆಗಿತ್ತು.

    ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ದಿಗ್ಗಜರು:
    ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರಿಂದ 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚಿಸಿಕೊಂಡಿದ್ದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಡ್‌ ಬ್ರಾಡ್, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ, ಡ್ವೈನ್‌ ಪ್ರಿಟೊರಿಯಸ್, ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್‌ ಫಿಂಚ್‌, ಭಾರತದ ಮುರಳಿ ವಿಜಯ್, ಅಂಬಟಿ ರಾಯುಡು ಅವರು ಕ್ರಿಕೆಟ್‌ಗೆ ವಿದಾಯ ಹೇಳಿದರು.

    5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ
    ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 2023ರಲ್ಲಿ ಐಪಿಎಲ್‌ ಚಾಂಪಿಯನ್ಸ್‌ ಟ್ರೋಫಿ ಮುಡಿಗೇರಿಸಿಕೊಳ್ಳುವುದರ ಜೊತೆಗೆ 5ನೇ ಬಾರಿಗೆ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತು. ಈ ಮೂಲಕ 5 ಬಾರಿ ಚಾಂಪಿಯನ್ಸ್‌ ಆಗಿ ಹೊರಹೊಮ್ಮಿದ್ದ ಮುಂಬೈ ಇಂಡಿಯನ್ಸ್‌ ದಾಖಲೆಯನ್ನ ಸರಿಗಟ್ಟಿತು.

    ವನಿತೆಯರಿಗೆ ಐತಿಹಾಸಿಕ ಜಯ:
    ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 347 ರನ್ ಗೆಲುವು ಸಾಧಿಸಿತು. ಇದೇ ಮೊದಲ ಬಾರಿಗೆ ಏಷ್ಯನ್ಸ್‌ ಗೇಮ್ಸ್‌ನಲ್ಲಿ ಪ್ರತಿನಿಧಿಸಿದ ಭಾರತ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತು.

    ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆ:
    ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ 2028ಕ್ಕೆ ನಡೆಯಲಿರುವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಯಾಯಿತು. ಈ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿತು. ಇದನ್ನೂ ಓದಿ: IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್‌ ಸ್ಟಾರ್ಕ್‌

    ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ಟಾರ್ಕ್‌:
    2024ರ ಐಪಿಎಲ್‌ ಟೂರ್ನಿಗಾಗಿ ಡಿಸೆಂಬರ್‌ 19ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಇದರೊಂದಿಗೆ ಮತ್ತೊಬ್ಬ ಆಸೀಸ್‌ ಸ್ಟಾರ್‌ ಆಲ್‌ರೌಂಡರ್‌ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ರೂ.ಗೆ ಬಿಕರಿಯಾಗಿ ದಾಖಲೆ ಬರೆದರು. 2 ವರ್ಷ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನಡೆಸಿ ಒಮ್ಮೆ ಚಾಂಪಿಯನ್‌ ಮತ್ತೊಮ್ಮೆ ರನ್ನರ್‌ ಅಪ್‌ ಪ್ರಶಸ್ತಿ ತಂದುಕೊಟ್ಟಿದ್ದ ಹಾರ್ದಿಕ್‌ ಪಾಂಡ್ಯ ಟ್ರೇಡ್‌ ವಿಂಡೋ ನಿಯಮದ ಪ್ರಕಾರ ಮುಂಬೈ ಇಂಡಿಯನ್ಸ್‌ಗೆ ನಾಯಕನಾಗಿ ಕಂಬ್ಯಾಕ್‌ ಮಾಡಿದರು.

    ಬೌಲರ್‌ಗಳಿಗೆ ಸ್ಟಾಪ್ ಕ್ಲಾಕ್ ಶಾಕ್‌ ಕೊಟ್ಟ ಐಸಿಸಿ:
    ಫೀಲ್ಡಿಂಗ್‌ ತಂಡವು ಓವರ್‌ ರೇಟ್‌ ಕಾಯ್ದುಕೊಳ್ಳುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಹೊಸ ನಿಯಮವೊಂದನ್ನು ಪರಿಚಯಿಸಿತು. ಒಂದು ಓವರ್ ಮುಗಿದು 60 ಸೆಕೆಂಡ್‌ಗಳಲ್ಲಿ, ಅಂದರೆ ಒಂದು ನಿಮಿಷದ ಅವಧಿಯಲ್ಲಿ ಮುಂದಿನ ಓವರ್ ಆರಂಭಿಸದೇ ಹೋದರೆ 3ನೇ ನಿರ್ದೇಶನದ ಬಳಿಕ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಲಭಿಸಲಿದೆ. ಮೊದಲೆರಡು ಬಾರಿ ಈ ರೀತಿಯ ವಿಳಂಬಕ್ಕೆ ರಿಯಾಯಿತಿ ಇರಲಿದೆ ಎಂಬ ಸ್ಟಾಪ್‌ ಕ್ಲಾಕ್‌ ನಿಯಮವನ್ನ ಪರಿಚಯಿಸಿತು.

    146 ವರ್ಷಗಳ ಇತಿಹಾಸದಲ್ಲಿ ಹೊಸ ಮೈಲುಗಲ್ಲು:
    ಟೀಂ ಇಂಡಿಯಾದ ಟಾಪ್ ಕ್ಲಾಸ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ ಎಲ್ಲಾ ಸ್ವರೂಪದಲ್ಲೂ 2 ಸಾವಿರ ರನ್ ಪೂರ್ಣಗೊಳಿಸಿದ ಸಾಧನೆ ಮಾಡಿದರು. ಭಾರತದ ಆತಿಥ್ಯದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ 50ನೇ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನ ನುಚ್ಚುನೂರು ಮಾಡಿದ್ದರು. ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ 146 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು. ಇದು ಅಭಿಮಾನಿಗಳಿಗೆ ಮರೆಯದ ಕ್ಷಣವಾಗಿತ್ತು.

  • ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

    ಅರ್ಜುನ ಪ್ರಶಸ್ತಿಗೆ ಶಮಿ ಹೆಸರು ಶಿಫಾರಸು

    ಮುಂಬೈ: ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಅತ್ಯುತ್ತಮ ಪ್ರದರ್ಶನ ತೋರಿದ ಮೊಹಮ್ಮದ್‌ ಶಮಿ (Mohammed Shami) ಅವರ ಹೆಸರನ್ನು ಬಿಸಿಸಿಐ (BCCI) ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ (Arjuna Award) ಶಿಫಾರಸು ಮಾಡಿದೆ.

    ಈ ಬಾರಿಯ ವಿಶ್ವಕಪ್‌ನಲ್ಲಿ ಶಮಿ ಕೇವಲ 7 ಪಂದ್ಯವಾಡಿ 24 ವಿಕೆಟ್‌ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 3 ಬಾರಿ ಶಮಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 7 ವಿಕೆಟ್‌ ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

     

    ವಿಶ್ವಕಪ್ ಟೂರ್ನಿಯ ನಂತರ ವಿಶ್ರಾಂತಿ ಪಡೆದಿರುವ ಅನುಭವಿ ವೇಗಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಬ್ಯಾಕ್ ಮಾಡಲಿದ್ದಾರೆ. ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

    ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮೊಹಮ್ಮದ್‌ ಶಮಿ ಅವರ ಗ್ರಾಮದಲ್ಲೇ ಸಣ್ಣ ಕ್ರೀಡಾಂಗಣ (Mini Stadium) ನಿರ್ಮಾಣಕ್ಕೆ ಉತ್ತರ ಪ್ರದೇಶ ಸರ್ಕಾರ (Uttar Pradesh) ಮುಂದಾಗಿದೆ.

    ಉತ್ತರ ಪ್ರದೇಶದ ಅಮ್ರೋಹಾ (Amroha) ಜಿಲ್ಲೆಯ ಸಹಾಸ್ಪುರ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಈಗಾಗಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಕ್ರೀಡಾಂಗಣದ ಕಾಮಗಾರಿ ಆರಂಭಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ.

    ಸರ್ಕಾರದಿಂದ ಘೋಷಣೆ ಹೊರ ಬಿದ್ದ ಬೆನ್ನಲ್ಲೇ ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ ಪಕ್ಷದ ರಾಜ್ಯಸಭಾ ಸದಸ್ಯ ಜಯಂತ್‌ ಸಿಂಗ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಶಮಿ ತವರಿನಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣಕ್ಕೆ ಸಹಾಯ ಮಾಡಲು ನನ್ನ ಸಂಸದರ ನಿಧಿಯನ್ನು ನೀಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

     

  • ಭಾರತ ಸೋತಿದ್ದಕ್ಕೆ ಸಂಭ್ರಮಾಚರಣೆ- 7 ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ UAPA ಅಡಿ ಕೇಸ್‌

    ಭಾರತ ಸೋತಿದ್ದಕ್ಕೆ ಸಂಭ್ರಮಾಚರಣೆ- 7 ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ UAPA ಅಡಿ ಕೇಸ್‌

    ಶ್ರೀನಗರ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಭಾರತ ಸೋತ ನಂತರ ಸಂಭ್ರಮಾಚರಣೆ ನಡೆಸಿದ 7 ಮಂದಿ ಕಾಶ್ಮೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ (Kashmir University Students) ವಿರುದ್ಧ ಯುಎಪಿಎ (UAPA) ಅಡಿ ಕೇಸ್‌ ದಾಖಲಾಗಿದೆ.

    ಶೇರ್-ಎ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ 7 ಮಂದಿ ವಿದ್ಯಾರ್ಥಿಗಳು ಭಾರತ ಸೋತ ನಂತರ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿದ್ದರು. ವಿಶ್ವವಿದ್ಯಾನಿಲಯದಲ್ಲಿ ಬಿವಿಎಸ್‌ಸಿ ಕೋರ್ಸ್ ಓದುತ್ತಿರುವ ಪಂಜಾಬ್ ನಿವಾಸಿ ಸಚಿನ್ ಬೈನ್ಸ್ ಅವರ ದೂರಿನ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: 50 ವರ್ಷ ದಾಟಿದೆ, ಒಂಟಿತನ ನಿಮ್ಮನ್ನು ಕಾಡುತ್ತಿರಬಹುದು – ರಾಗಾ ಬಗ್ಗೆ ಓವೈಸಿ ವ್ಯಂಗ್ಯ

     

    ಆಗಸ್ಟ್ 17ರಂದು ಭಾರತ ಸೋತ ನಂತರ ಪಾಕ್‌ ಪರ ಘೋಷಣೆ ಕೂಗಿದರು. ನಮ್ಮ ದೇಶದ ಬೆಂಬಲಿಗ ಎಂದು ಹೇಳಿ ನನ್ನನ್ನು ಗುರಿಯಾಗಿಸಿ ನಿಂದಿಸಲು ಪ್ರಾರಂಭಿಸಿದರು. ಪ್ರಶ್ನೆ ಮಾಡಿದ್ದಕ್ಕೆ ಸುಮ್ಮನಿರುವಂತೆ ಹೇಳಿದರು. ಸುಮ್ಮನಿರದಿದ್ದರೆ ಗುಂಡಿಕ್ಕಿ ಕೊಲ್ಲುತ್ತೇವೆ ಎಂದು ಬೆದರಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಾಶ್ಮೀರ ಮೂಲದ ಏಳು ವಿದ್ಯಾರ್ಥಿಗಳ ಮೇಲೆ ಯುಎಪಿಎ ಸೆಕ್ಷನ್ 13 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 ಮತ್ತು 506 ಅಡಿಯಲ್ಲಿ ಗಂಡರ್‌ಬಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     

  • ಬೌಲಿಂಗ್‌ನಲ್ಲೂ ಕಮಾಲ್‌ – ರೋಹಿತ್‌ ಫಸ್ಟ್‌, ಶಮಿ ಸೆಕೆಂಡ್‌

    ಬೌಲಿಂಗ್‌ನಲ್ಲೂ ಕಮಾಲ್‌ – ರೋಹಿತ್‌ ಫಸ್ಟ್‌, ಶಮಿ ಸೆಕೆಂಡ್‌

    ಅಹಮದಾಬಾದ್‌: ಸಿಕ್ಸರ್‌ ಸಿಡಿಸಿ ವಿಶ್ವ ದಾಖಲೆ ಬರೆದಿರುವ ರೋಹಿತ್‌ ಶರ್ಮಾ (Rohit Sharma) ಈ ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಬೌಲಿಂಗ್‌ನಲ್ಲೂ ದಾಖಲೆ ಬರೆದಿದ್ದಾರೆ.

    ಹೌದು. ಬೌಲರ್‌ಗಳ ಸರಾಸರಿ ಬೌಲಿಂಗ್‌ ರ‍್ಯಾಂಕ್‌ನಲ್ಲಿ ರೋಹಿತ್‌ ಶರ್ಮಾ ಮೊದಲ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಮೈದಾನದಲ್ಲಿ ನೆದರ್‌ಲ್ಯಾಂರ್ಡ್ಸ್‌ ವಿರುದ್ಧ 1 ಓವರ್‌ ಎಸೆದು 7 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಪಡೆದಿದ್ದರು.   ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

     

    ರೋಹಿತ್‌ ಶರ್ಮಾ ಸರಾಸರಿ 7.00 ಬೌಲ್‌ ಮಾಡಿದ ಪರಿಣಾಮ ಮೊದಲ ಸ್ಥಾನ ಪಡೆದರೆ ನಂತರದ ಎರಡು ಸ್ಥಾನಗಳನ್ನು ಶಮಿ (Mohammad Shami) ಮತ್ತು ಕೊಹ್ಲಿ (Virat Kohli) ಪಡೆದಿದ್ದಾರೆ. ಮೊಹಮ್ಮದ್‌ ಶಮಿ ಅವರ ಬೌಲಿಂಗ್‌ ಸರಾಸರಿ 10.70 ಇದ್ದು ಎರಡನೇ ಸ್ಥಾನ ಪಡೆದಿದ್ದರೆ ವಿರಾಟ್‌ ಕೊಹ್ಲಿ 15.00 ಇದ್ದು ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.  ಇದನ್ನೂ ಓದಿ: ಅಪ್ಪಿಕೊಂಡು ಸಮಾಧಾನ ಹೇಳಿದ ಮೋದಿ – ಮತ್ತೆ ನಾವು ಪುಟಿದೇಳುತ್ತೇವೆ ಎಂದ ಶಮಿ

    ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ 765 ರನ್‌ ಹೊಡೆದು ಮೊದಲ ಸ್ಥಾನ ಪಡೆದರೆ 597 ರನ್‌ ಹೊಡೆಯುವ ಮೂಲಕ ರೋಹಿತ್‌ ಶರ್ಮಾ ಎರಡನೇ ಸ್ಥಾನ ಪಡೆದಿದ್ದಾರೆ.

     

  • ಅಂದು ಸಚಿನ್‌, ಇಂದು ಕೊಹ್ಲಿ – ಇಬ್ಬರಿಗೂ ವಿಶ್ವಕಪ್‌ ಮಿಸ್‌!

    ಅಂದು ಸಚಿನ್‌, ಇಂದು ಕೊಹ್ಲಿ – ಇಬ್ಬರಿಗೂ ವಿಶ್ವಕಪ್‌ ಮಿಸ್‌!

    ಅಹಮದಾಬಾದ್‌: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್‌ ಕೊಹ್ಲಿ (Virat Kohli) ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಒಟ್ಟು 11 ಪಂದ್ಯಗಳ 11 ಇನ್ನಿಂಗ್ಸ್‌ನಲ್ಲಿ 765 ರನ್‌ ಸಿಡಿಸಿದ್ದ ಕೊಹ್ಲಿಯ ಅತ್ಯತ್ತಮ ಆಟಕ್ಕೆ ಸರಣಿ ಶ್ರೇಷ್ಠ (Player Of The Series) ಗೌರವ ಸಿಕ್ಕಿದೆ. ಈ ಟೂರ್ನಿಯಲ್ಲಿ 90.31 ಸ್ಟ್ರೈಕ್‌ ರೇಟ್‌ನಲ್ಲಿ 3 ಶತಕ ಮತ್ತು 6 ಅರ್ಧಶತಕವನ್ನು ಕೊಹ್ಲಿ ಸಿಡಿಸಿದ್ದಾರೆ.

    2003ರ ಫೈನಲಿನಲ್ಲಿ ಭಾರತ ಎದುರಾಳಿ ಆಸ್ಟ್ರೇಲಿಯಾವೇ ಆಗಿತ್ತು. ಫೈನಲ್‌ನಲ್ಲಿ (Final) ಭಾರತ ಸೋತಿದ್ದರೂ ಟೂರ್ನಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಒಟ್ಟು 673 ರನ್‌ ಹೊಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಈ ಅತ್ಯುತ್ತಮ ಆಟಕ್ಕೆ ಸಚಿನ್‌ಗೆ ಸರಣಿ ಶ್ರೇಷ್ಠ ಗೌರವ ಸಿಕ್ಕಿತ್ತು.  ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಮತ್ತೆ ಮತ್ತೆ ಮರೆಯಲಾಗದ ನೋವು – ಏಕೆ ಗೊತ್ತೇ?

    ಸಚಿನ್‌ ಅವರ ವಿಶ್ವದಾಖಲೆಯನ್ನು ವಿರಾಟ್‌ ಕೊಹ್ಲಿ ಈ ಟೂರ್ನಿಯಲ್ಲಿ ಮುರಿದಿದ್ದರು. ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರೂ ಇಬ್ಬರಿಗೆ ವಿಶ್ವಕಪ್‌ ಮಾತ್ರ ಮಿಸ್‌ ಆಗಿತ್ತು. 2011ರಲ್ಲಿ ಟೀಂ ಇಂಡಿಯಾ ಗೆಲ್ಲುವ ಮೂಲಕ ಸಚಿನ್‌ ಕನಸು ನನಸಾಗಿತ್ತು. ಆದರೆ ವಿರಾಟ್‌ ಕೊಹ್ಲಿಯ ವಿಶ್ವಕಪ್‌  ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ.

    ಫೈನಲ್‌ನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಪಡೆದ ಆಸ್ಟ್ರೇಲಿಯಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಟ್ರಾವಿಸ್‌ ಹೆಡ್‌ ಶತಕ ಮತ್ತು ಲಬುಶೇನ್‌ ಅವರ ಸಮಯೋಚಿತ ಅರ್ಧಶತಕದಿಂದ ಇನ್ನೂ 42 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು 241 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ಗೆ ಮುತ್ತಿಕ್ಕಿತು. ಇದನ್ನೂ ಓದಿ: ಡಿಆರ್‌ಎಸ್‌ ತೆಗೆದುಕೊಳ್ಳದೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ ಸ್ಮಿತ್‌

    6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್‌ ಗೆದ್ದು ಸಂಭ್ರಮಿಸಿದೆ. ಈ ಮೂಲಕ 6 ಬಾರಿ ವಿಶ್ವಕಪ್‌ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ (Australia) ಹೊರಹೊಮ್ಮಿದೆ.

  • ಸೋತ ಬೆನ್ನಲ್ಲೇ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಸೋತ ಬೆನ್ನಲ್ಲೇ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಅಹಮದಾಬಾದ್‌: ಬ್ಯಾಟಿಂಗ್‌, ಬೌಲಿಂಗ್‌ ಕೈಕೊಟ್ಟ ಪರಿಣಾಮ ಅಜೇಯವಾಗಿ ಫೈನಲ್‌ ತಲುಪಿದ್ದ ಭಾರತ (Team India) ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ (World Cup Cricket) ಸೋಲನ್ನು ಅನುಭವಿಸಿದೆ. ಸೋಲನ್ನು ಅನುಭವಿಸಿದ ಬೆನ್ನಲ್ಲೇ ನಾಯಕ ರೋಹಿತ್‌ ಶರ್ಮಾ (Rohit Sharma) ಕಣ್ಣೀರಿಟ್ಟಿದ್ದಾರೆ.

    ರೋಹಿತ್‌ ಶರ್ಮಾ ಹಲವು ಸಂದರ್ಭದಲ್ಲಿ ವಿಶ್ವಕಪ್‌ ಗೆಲ್ಲುವ ಬಗ್ಗೆ ಮಾತನಾಡಿದ್ದರು. ಒಬ್ಬ ಆಟಗಾರನ ಜೀವನದಲ್ಲಿ ವಿಶ್ವಕಪ್‌ ಗೆಲ್ಲುವುದು ದೊಡ್ಡದು ಎಂದಿದ್ದರು. ಏಷ್ಯಾ ಕಪ್‌ ಫೈನಲ್‌ ಗೆದ್ದ ಬಳಿಕ ಪಟಾಕಿ ಹೊಡೆಯಲಾಗಿತ್ತು. ಈ ವೇಳೆ ವಿಶ್ವಕಪ್‌ ಗೆದ್ದ ಬಳಿಕ ಪಟಾಕಿ ಹೊಡೆಯುವರಂತೆ ಎಂದು ಸುದ್ದಿಗೋಷ್ಠಿಯಲ್ಲೇ ಹೇಳಿದ್ದರು. ಇದನ್ನೂ ಓದಿ: ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌

    https://twitter.com/whenvsayshii/status/1726274461824074106

    ಫೈನಲ್‌ನಲ್ಲಿ ರೋಹಿತ್‌ ಶರ್ಮಾ 31 ಎಸೆತಗಳಲ್ಲಿ 47 ರನ್‌( 3 ಸಿಕ್ಸರ್‌, 4 ಬೌಂಡರಿ) ಸಿಡಿಸಿದ್ದರು. ಮ್ಯಾಕ್ಸ್‌ವೆಲ್‌ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋಗಿ ರೋಹಿತ್‌ ಶರ್ಮಾ ಕ್ಯಾಚ್‌ ನೀಡಿ ಔಟಾದರು.  ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    ಈ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ 11 ಪಂದ್ಯಗಳಿಂದ 597 ರನ್‌ ಸಿಡಿಸಿ ಇತಿಹಾಸ ಸೃಷ್ಟಿದ್ದಾರೆ. ಈ ಮೂಲಕ ತಂಡ ಒಂದರ ನಾಯಕನಾಗಿ ಅತಿ ಹೆಚ್ಚು ರನ್‌ ಸಿಡಿಸಿದ ಬ್ಯಾಟರ್‌ ಆಗಿ ರೋಹಿತ್‌ ಹೊರಹೊಮ್ಮಿದ್ದಾರೆ.

    ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ 578 ರನ್‌, 2007ರಲ್ಲಿ ಶ್ರೀಲಂಕಾದ ಜಯವರ್ಧನೆ 548 ರನ್‌, 2007 ರಲ್ಲಿ ಆಸ್ಟ್ರೇಲಿಯಾ ರಿಕ್ಕಿ ಪಾಂಟಿಂಗ್‌ 539 ರನ್‌, 2019 ರಲ್ಲಿ ಆಸ್ಟ್ರೇಲಿಯಾದ ಆರನ್‌ ಫಿಂಚ್‌ 507 ರನ್‌ ಹೊಡೆದಿದ್ದರು.

    ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ ರೋಹಿತ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ.

    ನಾನು ದಾಖಲೆಗಾಗಿ ಆಡುವುದಿಲ್ಲ. ನಾನು ಬ್ಯಾಟ್‌ ಮಾಡಲು ಬರುವಾಗ ತಂಡದ ಸ್ಕೋರ್‌ ಸೊನ್ನೆ ಆಗಿರುತ್ತದೆ. ಆರಂಭಿಕ ಆಟಗಾರನಾಗಿರುವ ಕಾರಣ ನನಗೆ ತಂಡದ ಖಾತೆಯನ್ನು ತೆರೆಯಲು ಅವಕಾಶ ಸಿಗುತ್ತದೆ. ನಾನು ವೇಗವಾಗಿ ರನ್‌ ಗಳಿಸಿದಷ್ಟು ನಂತರ ಬರುವ ಆಟಗಾರರಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು.

    125.94 ಸ್ಟ್ರೇಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರೋಹಿತ್ ಶರ್ಮಾ 1 ಶತಕ, 3 ಅರ್ಧಶತಕ, 66 ಬೌಂಡರಿ, 31 ಸಿಕ್ಸರ್‌ ಸಿಡಿಸಿದ್ದಾರೆ.

     

  • 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    ಅಹಮದಾಬಾದ್‌: ನೂರು ಕೋಟಿ ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಮೂರನೇ ಬಾರಿ ವಿಶ್ವಕಪ್‌ (World Cup) ಗೆಲ್ಲುವ ಭಾರತದ (Team India) ಕನಸು ಭಗ್ನಗೊಂಡಿದೆ. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್‌ ಗೆದ್ದು ಸಂಭ್ರಮಿಸಿದೆ. ಈ ಮೂಲಕ 6 ಬಾರಿ ವಿಶ್ವಕಪ್‌ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ (Australia)  ಹೊರಹೊಮ್ಮಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭ ಸವಾಲನ್ನು ಪಡೆದ ಆಸ್ಟ್ರೇಲಿಯಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಟ್ರಾವಿಸ್‌ ಹೆಡ್‌ ಶತಕ ಮತ್ತು ಲಬುಶೇನ್‌ ಅವರ ಸಮಯೋಚಿತ ಅರ್ಧಶತಕದಿಂದ ಇನ್ನೂ 42 ಎಸೆತ ಬಾಕಿ ಇರುವಂತೆಯೇ 4 ವಿಕೆಟ್‌ ಕಳೆದುಕೊಂಡು  241 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ಗೆ ಮುತ್ತಿಕ್ಕಿತು.

    ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಡೇವಿಡ್‌ ವಾರ್ನರ್‌ ಔಟಾಗಬೇಕಿತ್ತು. ಬ್ಯಾಟ್‌ ತುದಿಗೆ ತಗುಲಿದ್ದ ಚೆಂಡು ಸ್ಲಿಪ್‌ನಲ್ಲಿದ್ದ  ಕೊಹ್ಲಿ ಮತ್ತು ಶುಭಮನ್‌ ಮಧ್ಯೆ ತೂರಿ ಬೌಂಡರಿಗೆ ಹೋಗಿತ್ತು.  ಜೀವದಾನ ಸಿಕ್ಕಿದರೂ ವಾರ್ನರ್‌ ಅವರನ್ನು ಶಮಿ ಔಟ್‌ ಮಾಡಿದರು. 7 ರನ್‌ಗಳಿಸಿದ ವಾರ್ನರ್‌ ಕೊಹ್ಲಿಗೆ ಸ್ಲಿಪ್‌ನಲ್ಲಿ ಕ್ಯಾಚ್‌ ನೀಡಿ ತೆರಳಿದರು. ಮಿಶೆಲ್‌ ಮಾರ್ಶ್‌ 15 ರನ್‌ ಗಳಿಸಿದರೆ, ಸ್ಟೀವ್‌ ಸ್ಮಿತ್‌ 4 ರನ್‌ ಗಳಿಸಿ ಬುಮ್ರಾಗೆ ಎಲ್‌ಬಿಡಬ್ಲ್ಯೂ ಆದರು.

    47 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟ್ರಾವಿಸ್‌ ಹೆಡ್‌ಗೆ (Travis Head) ಜೊತೆಯಾದ ಲಬುಶೇನ್‌ (Marnus Labuschagne) 4ನೇ ವಿಕೆಟಿಗೆ  215 ಎಸೆತಗಳಲ್ಲಿ 192 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ  ದಡ ಸೇರಿಸಿದರು. ತಂಡ ಗೆಲ್ಲಲು 2 ರನ್‌ ಬೇಕಿದ್ದಾಗ ಹೆಡ್‌ ಕ್ಯಾಚ್‌ ನೀಡಿ ಔಟಾದರು.

    ಬುಮ್ರಾ 2 ವಿಕೆಟ್‌ ಪಡೆದರೆ ಶಮಿ ಮತ್ತು ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಜಡೇಜಾ ವಿಕೆಟ್‌ ಕೀಳಲು ವಿಫಲರಾದರು. ಆರಂಭದಲ್ಲಿ ಮೂರು ವಿಕೆಟ್‌ ಉರುಳಿದಾಗ ಆಸೆ ಜೀವಂತವಾಗಿತ್ತು.  ಆದರೆ ಹೆಡ್‌ ಮತ್ತು ಲಬುಶೇನ್‌  ಕ್ರೀಸ್‌ನಲ್ಲಿ ಬಲವಾಗಿ ನಿಂತ ಪರಿಣಾಮ ಪಂದ್ಯ ಭಾರತದ ಕೈ ಜಾರಿತು. ಅಂತಿಮವಾಗಿ ಹೆಡ್‌ 137 ರನ್‌ (120 ಎಸೆತ, 15 ಬೌಂಡರಿ, 4 ಸಿಕ್ಸ್‌) ಚಚ್ಚಿದರೆ, ಲಬುಶೇನ್‌ ಅಜೇಯ 58 ರನ್‌ ( 110 ಎಸೆತ, 4 ಬೌಂಡರಿ)  ಹೊಡೆದರು.

     

    ಆರಂಭದಿಂದಲೇ ಕುಸಿತ
    ಆರಂಭದಿಂದಲೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾದ ಭಾರತ ತಂಡ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 50 ಓವರ್‌ಗಳಲ್ಲಿ 240 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಆರಂಭದಲ್ಲೇ ಅಸೀಸ್‌ ಬೌಲರ್‌ಗಳನ್ನು ಬೆಂಡೆತ್ತಲು ಶುರು ಮಾಡಿದ ರೋಹಿತ್‌ ಶರ್ಮಾ 31 ಎಸೆತಗಳಲ್ಲೇ 47 ರನ್‌ (3 ಸಿಕ್ಸರ್‌, 4 ಬೌಂಡರಿ) ಬಾರಿಸಿ ಔಟಾದರು. ಆದ್ರೆ ಸೆಮಿಸ್‌ನಲ್ಲಿ ಕಿವೀಸ್‌ ವಿರುದ್ಧ ಅಬ್ಬರಿಸಿದ್ದ ಯುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌ 4 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿ ಕೈಕೊಟ್ಟರು. ಈ ಬೆನ್ನಲ್ಲೇ ಶ್ರೇಯಸ್‌ ಅಯ್ಯರ್‌ ಕೂಡ ಕೇವಲ ಒಂದೇ ಒಂದು ಬೌಂಡರಿ ಗಳಿಸಿ ಔಟಾದರು.  ಇದನ್ನೂ ಓದಿ: ಕೋಚ್‌ ದ್ರಾವಿಡ್‌ ದಾಖಲೆ ಮುರಿದ ‘ರಾಹುಲ್‌

    ಮೊದಲ 10.2 ಓವರ್‌ಗಳಲ್ಲೇ 81 ರನ್‌ಗಳಿಸಿದ್ದ ಭಾರತ ತಂಡ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೀಡಾಗಿತ್ತು. ಇದರಿಂದ 4ನೇ ವಿಕೆಟ್‌ಗೆ ಕೊಹ್ಲಿ ಮತ್ತು ಕೆ.ಎಲ್‌ ರಾಹುಲ್‌ ಜೋಡಿ ನಿಧಾನಗತಿಯ ಬ್ಯಾಟಿಂಗೆ ಮುಂದಾಯಿತು. ಈ ಜೋಡಿ 109 ಎಸೆತಗಳಲ್ಲಿ 67 ರನ್‌ಗಳ ಜವಾಬ್ದಾರಿಯುತ ಜೊತೆಯಾಟ ನೀಡಿದರೂ 97 ಎಸೆತಗಳಲ್ಲಿ ಕೇವಲ ಒಂದೇ ಒಂದು ಬೌಂಡರಿ ದಾಖಲಾಗಿತ್ತು.

    ಉತ್ತಮ ರನ್‌ ಕಲೆಹಾಕುವ ಭರವಸೆ ಮೂಡಿಸಿದ್ದ ಈ ಜೋಡಿ ಆಟಕ್ಕೆ ಆಸ್ಟ್ರೇಲಿಯಾ ಕ್ಯಾಪ್ಟನ್‌ ಪ್ಯಾಟ್‌ ಕಮ್ಮಿನ್ಸ್‌ ಕೊಹ್ಲಿ ಆಟಕ್ಕೆ ಬ್ರೇಕ್‌ ಹಾಕಿದರು. 54 ರನ್‌ (63 ಎಸೆತ, 4 ಬೌಂಡರಿ) ಗಳಿಸಿ ಕೊಹ್ಲಿ ಔಟಾಗುತ್ತಿದ್ದಂತೆ, ಇಡೀ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತ್ತು. ಲಕ್ಷಾಂತರ ಅಭಿಮಾನಿಗಳು ತಲೆಯ ಮೇಲೆ ಕೈಹೊತ್ತು ಕುಳಿತರು. ಆ ನಂತರ 107 ಎಸೆತಗಳನ್ನು ಎದುರಿಸಿದ ಕೆ.ಎಲ್‌ ರಾಹುಲ್‌ ಕೇವಲ ಒಂದೇ ಒಂದು ಬೌಂಡರಿ ಸಿಡಿಸಿ 66 ರನ್‌ ಗಳಿಸಿದರು.

    ನಂತರ ಕಣಕ್ಕಿಳಿದ ಯಾವೊಬ್ಬ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಟೀಂ ಇಂಡಿಯಾ ಪರ ಸೂರ್ಯಕುಮಾರ್‌ ಯಾದವ್‌ 15 ರನ್‌, ರವೀಂದ್ರ ಜಡೇಜಾ 9 ರನ್‌, ಮೊಹಮ್ಮದ್‌ ಶಮಿ 6 ರನ್‌, ಜಸ್ಪ್ರೀತ್‌ ಬುಮ್ರಾ 1 ರನ್‌, ಕುಲ್ದೀಪ್‌ ಯಾದವ್‌ 10 ರನ್‌ ಹಾಗೂ ಮೊಹಮ್ಮದ್‌ ಸಿರಾಜ್‌ 9 ರನ್‌ ಗಳಿಸಿ ಔಟಾದರು.

    ಆಸೀಸ್‌ ಪರ ಮಾರಕ ದಾಳಿ ನಡೆಸಿದ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌, ಕಿತ್ತರೆ, ಜೋಶ್‌ ಹೇಜಲ್‌ವುಡ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ ತಲಾ 2 ವಿಕೆಟ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.