Tag: ವಿಶೇಷ ಸ್ಥಾನಮಾನ

  • ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    ಪುಲ್ವಾಮಾ ದಾಳಿಯೇ ವಿಶೇಷ ರಾಜ್ಯ ಸ್ಥಾನಮಾನ ರದ್ದುಪಡಿಸಲು ಪ್ರೇರೇಪಿಸಿತು: ಸುಪ್ರೀಂಗೆ ಕೇಂದ್ರ

    ನವದೆಹಲಿ: ಸಿಆರ್‌ಪಿಎಫ್‌ (CRPF) ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ದಾಳಿ (Pulwama Attack) ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು (Special Status of Jammu and Kashmir) ರದ್ದು ಪಡಿಸಲು ಮತ್ತು ರಾಜ್ಯವನ್ನು ಭಾರತೀಯ ಒಕ್ಕೂಟಕ್ಕೆ ಸಂಪೂರ್ಣವಾಗಿ ಸೇರಿಸುವ ಕ್ರಮಕ್ಕೆ ಪ್ರೇರೇಪಿಸಿತು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ.

    ವಿಶೇಷ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಸಂವಿಧಾನ ಪ್ರಕಾರವಾಗಿ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿ – ಭಯೋತ್ಪಾದಕಿ ಮಗಳಿಗೆ ಸಾಥ್ ಕೊಟ್ಟಿದ್ದ ತಂದೆ, ಬಯಲಾಯ್ತು ಸ್ಫೋಟಕ ಸತ್ಯ

    ಆರ್ಟಿಕಲ್ 35(ಎ) ನಂತಹ ನಿಬಂಧನೆಗಳಿಂದಾಗಿ ಜಮ್ಮು ಕಾಶ್ಮೀರದ ನಿವಾಸಿಗಳು ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಆನಂದಿಸಲು ಸಾಧ್ಯವಾಗಲಿಲ್ಲ. ಹಿಂದಿನ ತಪ್ಪನ್ನು ಸರಿಪಡಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ರಾಜ್ಯದಲ್ಲಿ ಹೂಡಿಕೆಗಳು ಹೆಚ್ಚಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ನಿರ್ಧಾರದಿಂದ ಸಕಾರಾತ್ಮಕ ಫಲಿತಾಂಶಗಳು ಬರುತ್ತಿವೆ ಎಂದು ತಿಳಿಸಿದರು.

    ಪಂಜಾಬ್  ವಿಭಜಿಸುವ ಮೂಲಕ ಹರಿಯಾಣ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲು 1966 ರಲ್ಲಿ ಅಳವಡಿಸಿಕೊಂಡ ಮಾದರಿಯಂತೆಯೇ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗದೊಂದಿಗೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಪೊಲೀಸ್ ಅಧಿಕಾರ ಮಾತ್ರ ಕೇಂದ್ರದ ಬಳಿಯಿದೆ. ಭವಿಷ್ಯದಲ್ಲಿ ಅದು ರಾಜ್ಯದ ಸ್ಥಾನಮಾನವನ್ನು ಮರಳಿ ಪಡೆಯಬಹುದು ಎಂದು ಹೇಳಿದರು.  ಇದನ್ನೂ ಓದಿ:  ಕಾರಿನ ‘ಕೀ’ ಯಿಂದ ಪುಲ್ವಾಮಾ ತನಿಖೆ ಓಪನ್! – ಕೀ ಪತ್ತೆಯಾದ ರೋಚಕ ಕಥೆ ಓದಿ

    2019ರ ಫೆ.24 ರಂದು ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ ಮಾರುತಿ ಇಕೋ ಕಾರನ್ನು ಪುಲ್ವಾಮಾದಲ್ಲಿ  ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಗುದ್ದಿದ ಪರಿಣಾಮ 40 ಮಂದಿ ಯೋಧರು ಹುತಾತ್ಮರಾಗಿದ್ದರು.

    2019ರ ಆಗಸ್ಟ್‌ 6 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು (Abrogation of Article 370) ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಹಲವು ಮಂದಿ ಸುಪ್ರೀಂ ಮೊರೆ ಹೋಗಿದ್ದರು. 370ನೇ ವಿಧಿಯನ್ನು ರದ್ದುಗೊಳಿಸಿದ ನಾಲ್ಕು ವರ್ಷಗಳ ನಂತರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಸಂವಿಧಾನ ಪೀಠವು 20 ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಿಷನ್ ಕಾಶ್ಮೀರ ಅಷ್ಟು ಸುಲಭವಾಗಿದ್ದು ಹೇಗೆ? ವಿರೋಧಿಗಳು ಹೇಳುವುದು ಏನು? ಸಂವಿಧಾನ ಏನು ಹೇಳುತ್ತೆ?

    ಮಿಷನ್ ಕಾಶ್ಮೀರ ಅಷ್ಟು ಸುಲಭವಾಗಿದ್ದು ಹೇಗೆ? ವಿರೋಧಿಗಳು ಹೇಳುವುದು ಏನು? ಸಂವಿಧಾನ ಏನು ಹೇಳುತ್ತೆ?

    ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಗಾದೆ ಮಾತಿನಂತೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನೇ ಬಳಸಿಕೊಂಡು ಯಾರು ಊಹೆ ಮಾಡದ ರೀತಿಯಲ್ಲಿ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಬೇಕಾದರೆ ಜಮ್ಮು ಕಾಶ್ಮೀರ ಶಾಸನಸಭೆಯ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿತ್ತು. ಆದರೆ ಇದ್ಯಾವ ಪ್ರಕ್ರಿಯೆಗಳಿಗೆ ಆಸ್ಪದ ನೀಡದೇ ಕೇಂದ್ರ ಸರ್ಕಾರ ‘ಬೈಪಾಸ್ ಸರ್ಜರಿ’ ಮಾಡುವ ಮೂಲಕ ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಶಾಕ್ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ಯಾವ ತಂತ್ರ ಬಳಸಿ ಸಂವಿಧಾನದ 370 ಮತ್ತು 35 ವಿಧಿಯನ್ನು ರದ್ದು ಮಾಡಿದೆ? ಈ ರೀತಿ ತಂತ್ರದ ಮೂಲಕ ರದ್ದು ಮಾಡಬಹುದೇ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಅಷ್ಟೊಂದು ಜಟಿಲವಾಗಿದ್ದು ಯಾಕೆ?
    ನಿಮಗೆ ಈಗಾಗಲೇ ತಿಳಿದಿರುವುಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ಅದು ಜಮ್ಮು ಕಾಶ್ಮೀರದ ಶಾಸನ ಸಭೆಯಲ್ಲಿ ಪಾಸ್ ಆಗಬೇಕು. ಆದರೆ ಸದ್ಯ ಅಲ್ಲಿನ ವಿಧಾನಸಭೆಯನ್ನು ವಿಸರ್ಜಿಸಲಾಗಿದೆ. ಹೀಗಾಗಿ ವಿಧಾನಸಭೆ ಇಲ್ಲದೇ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ಸಾಧ್ಯವಿರಲಿಲ್ಲ. ಇದರ ಜೊತೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿಯಾಗಬೇಕು. ಸಂವಿಧಾನಕ್ಕೆ ತಿದ್ದುಪಡಿಯಾಗಬೇಕಾದರೆ ರಾಜ್ಯಸಭೆಯಲ್ಲಿ ಎನ್‍ಡಿಎಗೆ ಬಹುಮತ ಇಲ್ಲ. ಹೀಗಾಗಿ ಲೋಕಸಭೆಯಲ್ಲಿ ಮಸೂದೆ ಮಂಡಿಸಿದರೂ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆಗಲಾರದು ಎನ್ನುವ ಮಾತು ಕೇಳಿ ಬಂದಿತ್ತು.

    ಪ್ರತ್ಯೇಕವಾದಿಗಳ ವಾದ ಏನಿತ್ತು?
    ವಿಶೇಷ ಸ್ಥಾನಮಾನ ರದ್ದು ಮಾಡಬೇಕಾದರೆ ಜಮ್ಮು ಕಾಶ್ಮೀರ ಸಂವಿಧಾನದ ರಚನಾ ಸಮಿತಿ ಶಿಫಾರಸು ಅಗತ್ಯ ಎನ್ನುವ ಮಹತ್ವದ ಉಲ್ಲೇಖ ಭಾರತದ ಸಂವಿಧಾನದಲ್ಲಿದೆ. ಈ ಸಮಿತಿ 1957ರಲ್ಲೇ ವಿಸರ್ಜನೆ ಆಗಿದೆ. ಅಷ್ಟೇ ಅಲ್ಲದೇ ಅಲ್ಲದೇ ಕಾಶ್ಮೀರದ ಒಂದು ಭಾಗ ಪಾಕಿಸ್ತಾನದಲ್ಲಿದೆ. ಈ ಕಾರಣಕ್ಕಾಗಿ ಮತ್ತೆ ಸಂವಿಧಾನ ರಚನಾ ಸಮಿತಿ ರಚಿಸಲು ಸಾಧ್ಯವಿರಲಿಲ್ಲ. ಸಂವಿಧಾನ ರಚನಾ ಸಮಿತಿ ಅಸ್ವಿತ್ವದಲ್ಲಿ ಇಲ್ಲದೇ ಇರುವಾಗ ಪ್ರತ್ಯೇಕ ಸ್ಥಾನಮಾನವನ್ನು ಹೇಗೆ ತೆಗೆಯಲಾಗುತ್ತದೆ? ಸದ್ಯದ ಪರಿಸ್ಥಿತಿಯಲ್ಲಿ ಇದು ಅಸಾಧ್ಯವಾದ ವಿಚಾರ. ಬೇರೆ ಯಾವುದೇ ರೀತಿ ಮಾಡಿದರೂ ಅದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎನ್ನುವ ವಾದವನ್ನು ಇಲ್ಲಿಯವರೆಗೆ ಮುಂದಿಟ್ಟುಕೊಂಡು ಬಂದಿದ್ದರು.

    ಜಟಿಲ ಸಮಸ್ಯೆಯನ್ನು ಪರಿಹರಿಸಿದ್ದು ಹೇಗೆ?
    ಕಾಶ್ಮೀರ ಸಮಸ್ಯೆ ಇಲ್ಲಿಯವರೆಗೆ ಜಟಿಲವಾಗಿ ಕಂಡರೂ ಸರ್ಕಾರ 370ನೇ ಕಲಂನಲ್ಲೇ ಇದ್ದ ಅಂಶವೊಂದನ್ನು ಬಳಸಿಕೊಂಡು ಆ ವಿಧಿಯನ್ನೇ ಈಗ ರದ್ದುಮಾಡಿರುವುದು ವಿಶೇಷ. ಸೆಕ್ಷನ್ 3ರ ಪ್ರಕಾರ ಈ ಕಲಂನಲ್ಲಿ ಯಾವುದೇ ಅಂಶಗಳಿದ್ದರೂ ರಾಷ್ಟ್ರಪತಿಗಳು ಒಂದು ಸಾರ್ವಜನಿಕ ಅಧಿಸೂಚನೆ ಹೊರಡಿಸುವ ಮೂಲಕ ಈ ಕಲಂ ಅನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಕೆಲ ಬದಲಾವಣೆಗಳನ್ನು ಮಾಡಬಹುದು ಎನ್ನುವ ಪ್ರಸ್ತಾಪವಿದೆ. ಕೇಂದ್ರ ಸರ್ಕಾರ ಈ ಅಂಶವನ್ನೇ ಮುಂದಿಟ್ಟುಕೊಂಡು ಈಗ 370ನೇ ವಿಧಿಯನ್ನು ರದ್ದುಗೊಳಿಸಿದೆ.

    ತಿದ್ದುಪಡಿ ಮಾಡಿದ್ದು ಹೇಗೆ?
    ಈ ಮೊದಲೇ ತಿಳಿಸಿದಂತೆ ಸಂವಿಧಾನ ರಚನಾ ಸಮಿತಿ ಶಿಫಾರಸು ಮಾಡಿದರೆ ಮಾತ್ರ ವಿಶೇಷ ಸ್ಥಾನಮಾನವನ್ನು ತೆಗೆಯಬಹುದು. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲದ ಕಾರಣ ಸರ್ಕಾರ 370ನೇ ವಿಧಿಯನ್ನು ತಿದ್ದುಪಡಿ ಮಾಡಲೇಬೇಕಿತ್ತು. ಈ ತಿದ್ದುಪಡಿಗಾಗಿ ಸರ್ಕಾರ ಆಯ್ಕೆ ಮಾಡಿದ್ದು 367ನೇ ವಿಧಿಯನ್ನು. ರಾಷ್ಟ್ರಪತಿಗಳು ಆದೇಶದ ಮೂಲಕ ತಿದ್ದುಪಡಿ ಮಾಡಬಹುದಾದ ವಿಧಿ ಇದಾಗಿದೆ. ಈ ವಿಧಿಯನ್ನು ಬಳಸಿಕೊಂಡು ಸರ್ಕಾರ ‘ಸಂವಿಧಾನ ರಚನಾ ಸಮಿತಿ’ಯನ್ನು ‘ರಾಜ್ಯ ವಿಧಾನಸಭೆ’ ಎಂಬುದಾಗಿ ಪರಿಗಣಿಸಬೇಕು ಎನ್ನುವ ಅಂಶವನ್ನು ಸೇರಿಸಿ ತಿದ್ದುಪಡಿ ಮಾಡಲಾಯಿತು. ಸದ್ಯ ಈಗ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ಅಸ್ವಿತ್ವದಲ್ಲಿ ಇಲ್ಲ. ಪ್ರಸ್ತುತ ರಾಜ್ಯಪಾಲರಿಂದ ಶಿಫಾರಸು ಮಾಡಿಸುವ ಮೂಲಕ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲಾಯಿತು.

    ಕೇಂದ್ರದ ಈ ನಿರ್ಧಾರ ಸಾಧುವೇ?
    ಯಾರೂ ಊಹಿಸದ ರೀತಿಯಲ್ಲಿ ದಶಕಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ ಈಗ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಮಾಡಲು ಕೇಂದ್ರ ಸರ್ಕಾರ ಅನುಸರಿಸಿದ ನಡೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಯಾವುದೇ ರಾಜ್ಯವನ್ನು ಒಡೆಯಬೇಕಾದರೆ ಶಾಸನ ಸಭೆಯಲ್ಲಿ ಚರ್ಚೆ ನಡೆಯುವುದು ಉತ್ತಮ ಪ್ರಜಾಪ್ರಭುತ್ವದ ಲಕ್ಷಣ. ಆದರೆ ಇಲ್ಲಿ ಯಾವುದೇ ಚರ್ಚೆ ನಡೆಸದೇ ನಾಯಕರನ್ನು ಗೃಹ ಬಂಧನದಲ್ಲಿರಿಸಿ ದಿನಬೆಳಗಾಗುವುದರ ಒಳಗಡೆ ಎರಡು ಭಾಗ ಮಾಡಿದ್ದು ಎಷ್ಟು ಸರಿ? ಇನ್ನು ಮುಂದೆ ಯಾವುದೇ ಸರ್ಕಾರಗಳು ಬೇರೆ ರಾಜ್ಯವನ್ನು ಒಡೆದು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬಹುದಲ್ಲವೇ ಎನ್ನುವ ಪ್ರಶ್ನೆಯೂ ಎದ್ದಿದೆ.

    ಕಾನೂನು ತಜ್ಞರು ಏನು ಹೇಳುತ್ತಾರೆ?
    ಕೇಂದ್ರದ ನಡೆಯ ಬಗ್ಗೆ ಕಾನೂನು ಪಂಡಿತರಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರದ ನಿರ್ಧಾರ ಅಸಂವಿಧಾನಿಕವಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರೆ ಹಲವು ಚರ್ಚೆಗಳು ಆಗಬಹುದು ಎಂದು ಹೇಳಿದ್ದಾರೆ.

    ಕೆಲವರು ಸಂವಿಧಾನದಲ್ಲಿ ಇರುವ ಅಂಶಗಳನ್ನೇ ಬಳಸಿಕೊಂಡು ಕಿತ್ತು ಹಾಕಿದ ಪರಿಣಾಮ ನ್ಯಾಯಾಲಯಕ್ಕೆ ಹೋಗುವ ಪ್ರಮೇಯವೇ ಉದ್ಭವಿಸುವುದಿಲ್ಲ. ನ್ಯಾಯಾಲಯದಲ್ಲೂ ಕೇಂದ್ರದ ವಾದಕ್ಕೆ ಅಂತಿಮವಾಗಿ ಜಯ ಸಿಗುತ್ತದೆ ಎಂದು ಹೇಳಿದ್ದರೆ ಇನ್ನು ಕೆಲವರೂ ಸೂಪರ್ ಸೀಡ್ ಮಾಡಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ರಾಜ್ಯಪಾಲರು ಯಾವಾಗಲೂ ಕೇಂದ್ರದ ಪ್ರತಿನಿಧಿ ಆಗುತ್ತಾರೆಯೇ ಹೊರತು ರಾಜ್ಯದ ಪ್ರತಿನಿಧಿಯಾಗಲು ಸಾಧ್ಯವಿಲ್ಲ. ಹೀಗಾಗಿ ವಿಧಾನಸಭೆಯಲ್ಲಿ ಅಂಗೀಕಾರವಾಗದ ಹೊರತು ವಿಶೇಷ ಸ್ಥಾನಮಾನವನ್ನು ಹೇಗೆ ರದ್ದು ಪಡಿಸುತ್ತಾರೆ? ಕೇಂದ್ರ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ವಾದಿಸುತ್ತಿದ್ದಾರೆ.

    ಇತ್ತೀಚೆಗೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸಮಯದಲ್ಲಿ ಹಣಕಾಸು ಮಸೂದೆಯನ್ನು ಜುಲೈ 31ರ ಒಳಗಡೆ ಪಾಸ್ ಮಾಡಬೇಕಿತ್ತು. ಸರ್ಕಾರವೇ ಇಲ್ಲದೇ ಇರುವಾಗ ಈ ಮಸೂದೆಯನ್ನು ಹೇಗೆ ಪಾಸ್ ಮಾಡಲಾಗುತ್ತದೆ ಎನ್ನುವ ಪ್ರಶ್ನೆ ಬಂದಾಗ ಕಾನೂನು ಪಂಡಿತರು, ಸ್ಪೀಕರ್ ಕೈ ತೋರಿಸಿದ್ದು ಕೇಂದ್ರ ಸರ್ಕಾರವನ್ನು. ರಾಜ್ಯ ಸರ್ಕಾರ ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಹಣಕಾಸು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ. ಹೀಗಾಗಿ ಸದ್ಯ ಕಣಿವೆ ರಾಜ್ಯದಲ್ಲಿ ಸರ್ಕಾರ ಇಲ್ಲದ ಕಾರಣ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದು. ಸಂವಿಧಾನವೇ ಈ ಅವಕಾಶ ನೀಡಿದ್ದಾಗ ಇದರಲ್ಲಿ ತಪ್ಪು ಏನು ಇಲ್ಲ. ಒಂದು ವೇಳೆ ಬಹುಮತ ಇರುವ ಸರ್ಕಾರವನ್ನು ಉದ್ದೇಶಪೂರ್ವಕವಾಗಿ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಹೇರಿ ಈ ನಿರ್ಧಾರ ಕೈಗೊಂಡಿದ್ದರೆ ಮಾತ್ರ ತಪ್ಪಾಗುತಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ಎಲ್ಲ ಸಂವಿಧಾನ ಬದ್ಧವಾಗಿಯೇ ನಡೆದಿದೆ ಎಂದು ಎಂದು ಕೆಲವರು ವಾದಿಸುತ್ತಿದ್ದಾರೆ.

  • ಎಲ್ಲರೊಳಗೊಂದಾದ ಜಮ್ಮು-ಕಾಶ್ಮೀರ: ಮುಂದೇನು?

    ಎಲ್ಲರೊಳಗೊಂದಾದ ಜಮ್ಮು-ಕಾಶ್ಮೀರ: ಮುಂದೇನು?

    ನವದೆಹಲಿ: ಕಾಶ್ಮೀರಕ್ಕೆ ಈವರೆಗೆ ನೀಡಿದ ವಿಶೇಷ ಸ್ಥಾನಮಾನ ಹಾಗೂ ವಿಶೇಷ ಅಧಿಕಾರವನ್ನು ರದ್ದು ಮಾಡಿದ ಮೋದಿ ಸರ್ಕಾರಕ್ಕೆ ಆಮ್ ಆದ್ಮಿ ಪಾರ್ಟಿ, ಬಿಎಸ್‍ಪಿ(ಬಹುಜನ ಸಮಾಜವಾದಿ ಪಾರ್ಟಿ), ವೈಎಸ್‍ಆರ್ ಪಿ, ಬಿಜೆಡಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿವೆ. ಇಷ್ಟು ಮಾತ್ರವಲ್ಲದೆ ಎಐಡಿಎಂಕೆಯೂ ಸರ್ಕಾರಕ್ಕೆ ಸಪೋರ್ಟ್ ನೀಡಿದೆ.

    ಹಾಗಾದ್ರೆ ಮುಂದೇನು..?
    1. ಭಾರತ ಸರ್ಕಾರದ ಎಲ್ಲಾ ಕಾನೂನುಗಳು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಲಿದೆ.
    2. ಜಮ್ಮು- ಕಾಶ್ಮೀರದಲ್ಲಿ ಇತರೆ ರಾಜ್ಯಗಳ ಜನರಿಗೂ ಬದುಕಲು ಅವಕಾಶ ನೀಡಲಾಗುತ್ತದೆ.
    3. ಜಮ್ಮು-ಕಾಶ್ಮೀರದಲ್ಲಿ ಹೊರಗಿನವರೂ ಆಸ್ತಿ-ಪಾಸ್ತಿ ಖರೀದಿಸಬಹುದು.
    4. ಜಮ್ಮು-ಕಾಶ್ಮೀರದಲ್ಲಿ ಇನ್ನು ಮುಂದೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ

    5. ಜಮ್ಮು-ಕಾಶ್ಮೀರದಲ್ಲಿ ಇನ್ನು ಮುಂದೆ ಅಲ್ಪಸಂಖ್ಯಾತರಿಗೂ ಮೀಸಲಾತಿ ಸಿಗಲಿದೆ
    6. ಹೊರಗಿನವರು ಕೂಡ ಇಲ್ಲಿ ಉದ್ಯೋಗ ಹೊಂದಬಹುದು.
    7. ಜಮ್ಮು-ಕಾಶ್ಮೀರ 2 ಭಾಗಗಳಾಗಿ ವಿಂಗಡಣೆಯಾಗಿದೆ
    8. ಇನ್ನು ಮುಂದೆ ಜಮ್ಮು-ಕಾಶ್ಮೀರ ರಾಜ್ಯವಲ್ಲ, ಆದರೆ ವಿಧಾನಸಭೆ ಇರುತ್ತದೆ.

    9. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಲಿದೆ.
    10. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಆದರೆ ವಿಧಾನಸಭೆ ಇರಲ್ಲ.
    11. ಕೇಂದ್ರಾಡಳಿತ ಪ್ರದೇಶ ಹಿನ್ನೆಲೆಯಲ್ಲಿ ಕೇಂದ್ರದ ಹಿಡಿತದಲ್ಲಿ ಇಡೀ ಜಮ್ಮು-ಕಾಶ್ಮೀರ ಇರಲಿದೆ.
    12. ಕಾನೂನು ಸುವ್ಯವಸ್ಥೆ ಹಣಕಾಸು ನೇರವಾಗಿ ಕೇಂದ್ರದ ಹಿಡಿತದಲ್ಲಿರಲಿದೆ.

    ರಾಜ್ಯಸಭೆಯಲ್ಲಿ ಇಂದು ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಿದರು. ಈ ವೇಳೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.