Tag: ವಿಶಾಖಪಟ್ಟಣ

  • ರೋಹಿತ್ ಜೊತೆಗಿನ ಮನಸ್ತಾಪಕ್ಕೆ ಪೂರ್ಣವಿರಾಮ ಹಾಕಿದ ಕೊಹ್ಲಿ

    ರೋಹಿತ್ ಜೊತೆಗಿನ ಮನಸ್ತಾಪಕ್ಕೆ ಪೂರ್ಣವಿರಾಮ ಹಾಕಿದ ಕೊಹ್ಲಿ

    ವಿಶಾಖಪಟ್ಟಣಂ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವರದಿಗಳಿಗೆ ವಿರಾಟ್ ಕೊಹ್ಲಿ ಪೂರ್ಣವಿರಾಮ ಹಾಕಿದ್ದಾರೆ.

    ಹೌದು, ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಮುನ್ನವೇ ಟೀಂ ಇಂಡಿಯಾ ಆಟಗಾರರಲ್ಲಿ ಮನಸ್ತಾಪವಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತು ಹೊರನಡೆದ ಬಳಿಕ ಈ ವರದಿಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಹ ಬೆಳವಣಿಗೆಗಳು ನಡೆದಿದ್ದವು. ಈ ವರದಿಗಳನ್ನು ಕೊಹ್ಲಿ, ವೆಸ್ಟ್ ಇಂಡೀಸ್ ಸರಣಿಯಗೂ ಮುನ್ನವೇ ಅಲ್ಲಗೆಳೆದಿದ್ದರು. ಆದರೂ ಕೆಲ ಅವರು ಈ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅಲ್ಲದೇ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಆಡುವ 11ರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಅಭಿಮಾನಿಗಳು ಕ್ಯಾಪ್ಟನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಟೆಸ್ಟ್ ಸರಣಿಯಲ್ಲಿ ರೋಹಿತ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿದ್ದು, ಆರಂಭಿಕ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ರೋಹಿತ್‍ರ ಈ ಪ್ರದರ್ಶನಕ್ಕೆ ತಂಡದ ನಾಯಕರಾಗಿ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದು, ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ಔಟಾಗಿ ತಂಡದ ಕೊಠಡಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕೊಠಡಿಯ ಬಾಗಿಲನ್ನು ತೆರೆದಿಟ್ಟು ಚಪ್ಪಾಳೆಯೊಂದಿಗೆ ಸ್ವಾಗತ ಕೋರಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೊಹ್ಲಿಯ ಈ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಇಬ್ಬರ ನಡುವಿನ ಮನಸ್ತಾಪಕ್ಕೆ ಕೊಹ್ಲಿ ಫುಲ್ ಸ್ಟಾಪ್ ಹಾಕಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://twitter.com/ivarunkrishnan4/status/1179768843910209537

    ರೋಹಿತ್ ಶರ್ಮಾರನ್ನು ಟೆಸ್ಟ್ ತಂಡದ ಆರಂಭಿಕರಾಗಿ ಕಣಕ್ಕೆ ಇಳಿಸುವ ಬಗ್ಗೆ ಇದೇ ಸಂದರ್ಭದಲ್ಲಿ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಅವರನ್ನು ಆರಂಭಿಕರಾಗಿ ಕಣಕ್ಕೆ ಇಳಿಸುವ ಚಿಂತನೆಯನ್ನು ಏಕಾಏಕಿ ಕೈಗೊಂಡಿಲ್ಲ. ಹಲವು ಸಮಯದಿಂದ ಈ ಆಯ್ಕೆ ಬಗ್ಗೆ ಸಮಿತಿ ಚಿಂತನೆ ನಡೆಸಿತ್ತು. ಏಕೆಂದರೆ ರೋಹಿತ್ 2018 ರಿಂದ ಟೀಂ ಇಂಡಿಯಾ ಅಡಿದ್ದ 17 ಟೆಸ್ಟ್ ಪಂದ್ಯಗಳ ಪೈಕಿ ರೋಹಿತ್ ಕೇವಲ 4 ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸ್ಥಾನ ಪಡೆಯಲು ರಹಾನೆ, ಹಾರ್ದಿಕ್ ಪಾಂಡ್ಯ, ಹನುಮ ವಿಹಾರಿ ನಡುವೆಯೇ ಭಾರೀ ಪೈಪೋಟಿ ಉಂಟಾಗಿತ್ತು. ಈ ಸಂದರ್ಭದಲ್ಲಿ ರೋಹಿತ್‍ಗೆ ಆರಂಭಿಕ ಸ್ಥಾನ ನೀಡಿರುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ಏಕಾಏಕಿ ಆರಂಭಿಕರಾಗಿ ಕಣಕ್ಕೆ ಇಳಿಸುವುದರಿಂದ ರೋಹಿತ್ ಮೇಲಾಗುವ ಪರಿಣಾಮಗಳ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಆ ಬಳಿಕ ಅವರಿಗೆ ಆರಂಭಿಕರಾಗಿ ಅವಕಾಶ ನೀಡಿ ಆಟಕ್ಕೆ ಹೊಂದಿಕೊಳ್ಳಲು ಸಮಯ ನೀಡಲು ಆಯ್ಕೆ ಸಮಿತಿ ಮುಂದಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

    ರೋಹಿತ್ ಶರ್ಮಾರ ಈ ಕಮ್ ಬ್ಯಾಕ್ ಇನ್ನಿಂಗ್ಸ್‍ಗೆ ಕೊಹ್ಲಿ ಮಾತ್ರವಲ್ಲದೇ ತಂಡದ ಕೋಚ್ ರವಿಶಾಸ್ತ್ರಿ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿರೊಂದಿಗೆ ಆಟಗಾರರ ಕೊಠಡಿಯಿಂದ ಹೊರ ನಿಂತಿದ್ದ ತಂಡದ ಕೋಚ್ ಬಳಗ ಕೂಡ ಚಪ್ಪಾಳೆಯೊಂದಿಗೆ ರೋಹಿತ್‍ಗೆ ಸ್ವಾಗತ ಕೋರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದಲ್ಲಿ 244 ಎಸೆತಗಳಲ್ಲಿ 72.13 ಸರಾಸರಿಯೊಂದಿಗೆ ರೋಹಿತ್ 176 ರನ್ ಗಳಿಸಿ ಔಟಾಗಿದ್ದರು. ಅಲ್ಲದೇ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರ್ವಾಲ್ ರೊಂದಿಗೆ 217 ರನ್ ಗಳ ಜೊತೆಯಾಟ ನೀಡುವ ಮೂಲಕ ದಾಖಲೆ ಬರೆದಿದ್ದರು.

    https://www.instagram.com/p/B3JQ5Bpgu__/

  • ಸಿಕ್ಸರ್ ಸಿಡಿಸಿ ದಾಖಲೆ ಬರೆದ ರೋಹಿತ್, ಮಯಾಂಕ್

    ಸಿಕ್ಸರ್ ಸಿಡಿಸಿ ದಾಖಲೆ ಬರೆದ ರೋಹಿತ್, ಮಯಾಂಕ್

    ವಿಶಾಖಪಟ್ಟಣಂ: ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಭಾರತದ ಪರ ಸಿಕ್ಸರ್ ದಾಖಲೆ ಬರೆದಿದ್ದಾರೆ.

    ಮೊದಲ ಬಾರಿಗೆ ಕ್ರೀಸ್ ಹಂಚಿಕೊಂಡ ಈ ಜೋಡಿ ಒಟ್ಟು 9 ಸಿಕ್ಸ್ ಸಿಡಿಸಿದೆ. ಈ ಮೂಲಕ ಭಾರತದ ಪರ ಮೊದಲ ಬಾರಿಗೆ 9 ಸಿಕ್ಸ್ ಸಿಡಿಸಿದ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ರೋಹಿತ್ ಶರ್ಮಾ 6 ಸಿಕ್ಸ್ ಹೊಡೆದಿದ್ದರೆ ಅಗರ್ವಾಲ್  3 ಸಿಕ್ಸ್ ಹೊಡೆಯುವುದರೊಂದಿಗೆ ಈ ಸಾಧನೆ ನಿರ್ಮಾಣವಾಗಿದೆ.

    ಬುಧವಾರ ಭಾರತ 59.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 ರನ್ ಹೊಡೆದಿದ್ದ ಸಂದರ್ಭದಲ್ಲಿ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಈ ಜೋಡಿ 115 ರನ್ ಸೇರಿಸಿತು. ತಂಡದ ಮೊತ್ತ 317 ಆಗಿದ್ದಾಗ 176 ರನ್(244 ಎಸೆತ, 23 ಬೌಂಡರಿ, 6 ಸಿಕ್ಸರ್) ಹೊಡೆದಿದ್ದ ರೋಹಿತ್ ಶರ್ಮಾ ಸ್ಟಂಪ್ ಔಟ್ ಆದರು. ಏಕದಿನ ಶೈಲಿಯಲ್ಲೇ ರೋಹಿತ್ ಶರ್ಮಾ ಬ್ಯಾಟ್ ಬೀಸಿದ ಪರಿಣಾಮ ಬೌಂಡರಿ ಸಿಕ್ಸರ್ ನೆರವಿನಿಂದಲೇ 128 ರನ್ ಹೊಡೆದರು.

    84 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ ರೋಹಿತ್ 154 ಎಸೆತಗಳಲ್ಲಿ ಶತಕ ಹೊಡೆದಿದ್ದರು. 114 ಎಸೆತಗಳಲ್ಲಿ 50 ರನ್ ಹೊಡೆದಿದ್ದ ಮಯಾಂಕ್ 204 ಎಸೆತ ಎದುರಿಸಿ ಚೊಚ್ಚಲ ಶತಕ ಬಾರಿಸಿದರು.

    ರೋಹಿತ್ ಶರ್ಮಾ ಔಟಾದ ನಂತರ ಬಂದ ಚೇತೇಶ್ವರ ಪೂಜಾರ 6 ರನ್ ಗಳಿಸಿ ಔಟಾದರೆ ಕೊಹ್ಲಿ 20 ರನ್ ಹೊಡೆದರು. ಇತ್ತೀಚಿನ ವರದಿ ಬಂದಾಗ 105 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 386 ರನ್ ರನ್‍ಗಳಿಸಿದೆ. ಮಯಾಂಕ್ ಅಗರ್ವಾಲ್ 177 ರನ್(331 ಎಸೆತ, 20 ಬೌಂಡರಿ, 4 ಸಿಕ್ಸರ್) ರನ್ ಗಳಿಸಿದ್ದರೆ ಅಜಿಂಕ್ಯಾ ರಹಾನೆ 5 ರನ್ ಗಳಿಸಿ ಗಳಿಸಿ ಆಡುತ್ತಿದ್ದಾರೆ.

    ರೋಹಿತ್ ಶರ್ಮಾ ಮಯಾಂಕ್ ಭಾರತದ ಪರ ಮೂರನೇ ಅತಿ ಹೆಚ್ಚಿನ ಜೊತೆಯಾಟವಾಡಿದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1956 ರಲ್ಲಿ ಪಂಕಜ್ ರಾಯ್ ಮತ್ತು ವಿನೂ ಮಂಕಡ್ ನ್ಯೂಜಿಲೆಂಡ್ ವಿರುದ್ಧ 413 ರನ್ ಹೊಡೆದಿದ್ದರೆ 2006ರಲ್ಲಿ ಸೆಹ್ವಾಗ್ ಮತ್ತು ದ್ರಾವಿಡ್ ಪಾಕಿಸ್ತಾನದ ವಿರುದ್ಧ 410 ರನ್ ಹೊಡೆದಿದ್ದರು.

  • ಡಾಕ್ಟರ್ ಭೇಟಿಯಾಗಲು 20 ಕಿ.ಮೀ ನಡೆದ ಆದಿವಾಸಿ ಗರ್ಭಿಣಿ ಸಾವು

    ಡಾಕ್ಟರ್ ಭೇಟಿಯಾಗಲು 20 ಕಿ.ಮೀ ನಡೆದ ಆದಿವಾಸಿ ಗರ್ಭಿಣಿ ಸಾವು

    ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಡಕಟ್ಟು ಜನಾಂಗದ ತುಂಬು ಗರ್ಭಿಣಿಯೊಬ್ಬರು ಮಗು ಸಮೇತ ಮೃತಪಟ್ಟ ಹೀನಾಯ ಘಟನೆಯೊಂದು ನಡೆದಿದೆ.

    ಈ ಘಟನೆ ಕಳೆದ ವಾರ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮಹಿಳೆಯ ಮನೆಯ ಹತ್ತಿರಲ್ಲಿ ಯಾವುದೇ ಹೆಲ್ತ್ ಕೇರ್ ಸೆಂಟರ್ ಇಲ್ಲದೇ ಇರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಗರ್ಭಿಣಿ ಮಗುವಿಗೆ ಜನ್ಮ ನೀಡಲು ಕೆಲ ದಿನಗಳಷ್ಟೇ ಬೇಕಾಗಿತ್ತು. ಆದರೆ ಅದಕ್ಕಿಂತಲೇ ಮೊದಲೇ ವಿಪರೀತ ರಕ್ತಸ್ರಾವವಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ 28 ವರ್ಷದ ತುಂಬು ಗರ್ಭಿಣಿ ವೈದ್ಯರನ್ನು ಭೇಟಿಯಾಗಲು ನಗರ ಪ್ರದೇಶಕ್ಕೆ ಬರಲು ಸುಮಾರು 20 ಕಿ.ಮೀ ದೂರ ನಡೆದಿದ್ದೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

    ಆಸ್ಪತ್ರೆಗೆ ಬಂದು ವೈದ್ಯರನ್ನು ಬೇಟಿ ಮಾಡಿ ವಾಪಸ್ ಹೋಗುವವರಿದ್ದರು. ಆದರೆ ಅದಾಗಲೇ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಯೊಳಗೆ ಕರೆದೊಯ್ಯಲಾಯಿತು. ಆದರೆ ಕೆಲ ನಿಮಿಷಗಳಲ್ಲೇ ಮಹಿಳೆಗೆ  ವಿಪರೀತ ರಕ್ತಸ್ರಾವವಾಗಿದ್ದು, ಹೊಟ್ಟೆಯೊಳಗಿದ್ದ ಮಗು ಸಮೇತ ಸಾವನ್ನಪ್ಪಿದ್ದಾರೆ.

    ಘಟನೆ ಸಂಬಂಧ ಪೆಡಬಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇತ್ತೀಚೆಗಷ್ಟೇ ಅಂಬುಲೆನ್ಸ್ ವಿಳಂಬದಿಂದಾಗಿ ಹೆದ್ದಾರಿಯಲ್ಲೇ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು.

  • ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಅಂಕಲ್ ಬಳಿಕ ವೈರಲ್ ಆಯ್ತು ಡಾಕ್ಟರ್ ಡ್ಯಾನ್ಸ್

    ಹೈದರಾಬಾದ್: ಅಂಕಲ್ ಒಬ್ಬರು ಡ್ಯಾನ್ಸ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ಬೆನ್ನಲ್ಲೇ ಆಂಧ್ರಪ್ರದೇಶದ ವೈದ್ಯರೊಬ್ಬರು ತೆಲಗು ನಟ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಂತೆ ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಯ (ಕೆಜಿಎಚ್) ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಕೆ ಸೂರ್ಯನಾರಾಯಣ ಅವರು ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. ಕೆಜಿಎಚ್‍ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವೈದ್ಯರ ಸೂರ್ಯನಾರಾಯಣ ಅವರು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ವಯಸ್ಸು ನಂಬರ್ ಅಷ್ಟೇ ಎನ್ನುವಂತೆ ಅಂಕಲ್ ಹಾಕಿದ್ರು ಸಖತ್ ಸ್ಟೆಪ್- ವಿಡಿಯೋ ವೈರಲ್

    ದಿವಂಗತ ನಟ ಎ.ನಾಗೇಶ್ವರ ರಾವ್ ಅವರ ಪ್ರಸಿದ್ಧ ತೆಲುಗು ಗೀತೆಗಳಿಗೆ ಡಾ.ಸೂರ್ಯನಾರಾಯಣ್ ನೃತ್ಯ ಮಾಡಿದ್ದಾರೆ. ನಾಗೇಶ್ವರ್ ಅವರನ್ನು ಅನುಕರಣೆ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಹಾಗೂ ಸಹೋದ್ಯೋಗಿಗಳನ್ನು ಮಂತ್ರಮುಗ್ಧಗೊಳಿಸಿದರು.

    ಈ ಕುರಿತು ಮಾತನಾಡಿದ ಅವರು, ನಾನು ಎ.ನಾಗೇಶ್ವರ ರಾವ್ ಅವರ ಅಭಿಮಾನಿ. ನಾನು ಹಲವು ವರ್ಷಗಳಿಂದ ನೃತ್ಯ ಮಾಡುತ್ತಿದ್ದೇನೆ. 11ನೇ ವಯಸ್ಸಿನಿಂದಲೂ ನಾಗೇಶ್ವರ್ ಅವರನ್ನು ಅನುಕರಣೆ ಮಾಡುತ್ತಾ ಬೆಳೆದೆ. 200ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದೇನೆ. 1996ರಲ್ಲಿ ಚೆನ್ನೈನಲ್ಲಿ ನೃತ್ಯ ಪ್ರದರ್ಶನಕ್ಕೆ ಆಯ್ಕೆಯಾಗಿದ್ದೆ. ಆದರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಗೇಶ್ವರ್ ಅವರು ವಿಮಾನ ಪ್ರಯಾಣ ಕೈಗೊಂಡಿದ್ದರಿಂದ ನಿಲ್ದಾಣಕ್ಕೆ ಬೇಗ ಹೋದರು. ಹೀಗಾಗಿ ನನ್ನ ಡ್ಯಾನ್ಸ್ ಅನ್ನು ಅವರು ನೋಡಲಿಲ್ಲ ಎಂದು ನೆನೆದಿದ್ದಾರೆ.

    ನಾಗೇಶ್ವರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದೇನೆ. ಅವರು ನನ್ನ ನೃತ್ಯವನ್ನು ನೋಡಿ ಸಂತೋಷಗೊಂಡರು. ನೃತ್ಯವನ್ನು ಅಷ್ಟು ಸುಲಭವಾಗಿ ಕಲೆಯಲು ಸಾಧ್ಯವಿಲ್ಲ ಎಂದು ವೈದ್ಯ ಸೂರ್ಯನಾರಾಯಣ ಹೇಳಿದ್ದಾರೆ.

    ಈ ದಿನಗಳಲ್ಲಿ ನೀವು ಯಾವುದೇ ಹಾಡನ್ನು ಯೂಟ್ಯೂಬ್‍ನಲ್ಲಿ ಮತ್ತೆ ಮತ್ತೆ ನೋಡಬಹುದು. ಆದರೆ ನಾನು ಚಿತ್ರಮಂದಿರಗಳಲ್ಲಿ ಮತ್ತೆ ಮತ್ತೆ ಸಿನಿಮಾಗಳನ್ನು ನೋಡಿ ನೃತ್ಯದ ಎಲ್ಲಾ ಹಂತಗಳನ್ನು ಕಲಿತಿದ್ದೇನೆ. ನನ್ನ ಸ್ಟೆಪ್ ಗಳನ್ನು ಸರಿಪಡಿಸಲು ಬಹಳಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದು ತಿಳಿಸಿದರು.

  • ಪ್ರತಿಪಕ್ಷಗಳ ರಾಜಕಾರಣದಿಂದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ

    ಪ್ರತಿಪಕ್ಷಗಳ ರಾಜಕಾರಣದಿಂದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ

    ವಿಶಾಖಪಟ್ಟಣಂ: ದೇಶದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ರಾಜಕಾರಣದ ಆಟಗಳಿಂದ ಶತ್ರು ದೇಶ ಲಾಭ ಪಡೆಯುತ್ತಿದೆ. ಇದರಿಂದ ಭಾರತಕ್ಕೆ ಹಾನಿ ಅನುಭವಿಸುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ಹೊರಹಾಕಿದ್ದಾರೆ.

    ಶುಕ್ರವಾರದಂದು ತಮಿಳುನಾಡಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮೋದಿ ಅವರು ಬಳಿಕ ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ಕೆಲವು ವಿರೋಧ ಪಕ್ಷಗಳು ಮೋದಿ ಮೇಲಿರುವ ದ್ವೇಷಕ್ಕೆ ದೇಶವನ್ನು ಕೂಡ ದ್ವೇಷಿಸಲು ಆರಂಭಿಸಿವೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟವನ್ನು ಇಡೀ ಜಗತ್ತೇ ಬೆಂಬಲಿಸುತ್ತಿದೆ. ಆದ್ರೆ ಭಾರತದಲ್ಲೇ ಇರುವ ಕೆಲವು ಪಕ್ಷಗಳು ಹಾಗೂ ಅದರ ನಾಯಕರು ನಮ್ಮ ಹೋರಾಟವನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇದರಿಂದ ಶತ್ರು ದೇಶಕ್ಕೆ ಲಾಭವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

    26/11ರಲ್ಲಿ ಮುಂಬಯಿ ದಾಳಿಯಾದಾಗ ಅಂದಿನ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಆದ್ರೆ ಉರಿ ದಾಳಿಯಾದಾಗ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರಿಗೆ ಪಾಠ ಕಲಿಸಿತ್ತು. ಬಳಿಕ ಪುಲ್ವಾಮ ದಾಳಿ ನಡೆದಾಗ ಭಾರತೀಯ ವಾಯುಪಡೆ ಏರ್ ಸ್ಟ್ರೈಕ್ ಮಾಡಿರುವುದು ನಿಮ್ಮೆಲ್ಲರಿಗೂ ಗೊತ್ತಿದೆ. ನಾವು ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಉಗ್ರರ ವಿರುದ್ಧ ಹೋರಾಡಲು ಸೇನೆಗೆ ನಮ್ಮ ಸರ್ಕಾರ ಮುಕ್ತ ಅವಕಾಶ ನೀಡಿದೆ. ಉಗ್ರರ ಕೈಯಲ್ಲಿ ಭಾರತ ಅಸಹಾಯಕವಾಗಿ ಸಿಲುಕುವ ಕಾಲ ಮುಗಿದೋಗಿದೆ. ದೇಶ ಸೇವೆಯಲ್ಲಿರುವ ನಮ್ಮ ಯೋಧರಿಗೆ ನನ್ನ ನಮನಗಳು ಎಂದು ಹೇಳಿದರು.

    ಬಳಿಕ ಮಹಾ ಘಟಬಂಧನ ಕುರಿತು ಮಾತನಾಡಿ, ಯಾಕೆ ಪ್ರತಿಪಕ್ಷ ನಾಯಕರು ಭಾರತವನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಪಕ್ಷಗಳ ರಾಜಕಾರಣಕ್ಕೆ ದೇಶವನ್ನು ದುರ್ಬಲಗೊಳಿಸಿ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದ್ದಾರೆ. ಯಾಕೆ ಈ ರೀತಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ? ಮೋದಿ ಮೇಲಿನ ದ್ವೇಷಕ್ಕೆ ದೇಶವನ್ನು ಯಾಕೆ ದ್ವೇಷಿಸಲು ಆರಂಭಿಸಿದ್ದಾರೆ? ಇದರಿಂದ ಪಾಕಿಸ್ತಾನ ಲಾಭ ಪಡೆಯುತ್ತಿದೆ. ಎಂದು ವಿಪಕ್ಷ ನಾಯಕರನ್ನು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳ ಟೀಕಾಪ್ರಹಾರ – ಧೋನಿ ನೆರವಿಗೆ ಬಂದ ಮ್ಯಾಕ್ಸ್‌ವೆಲ್

    ಅಭಿಮಾನಿಗಳ ಟೀಕಾಪ್ರಹಾರ – ಧೋನಿ ನೆರವಿಗೆ ಬಂದ ಮ್ಯಾಕ್ಸ್‌ವೆಲ್

    ವಿಶಾಖಪಟ್ಟಣ: ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದ ವೇಳೆ ಸಿಂಗಲ್ ರನ್ ಗಳನ್ನು ಓಡಲು ನಿರಾಕರಿಸಿದ ಧೋನಿ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.

    ಪಂದ್ಯದ ಅಂತಿಮ 3 ಓವರ್ ಗಳನ್ನು ಎದುರಿಸಿದ ಧೋನಿ 17 ರನ್ ಮಾತ್ರ ಗಳಿಸಿದ್ದರು. ಅಲ್ಲದೇ ಈ ಹಂತದಲ್ಲಿ 1 ಬೌಂಡರಿಯನ್ನು ಸಿಡಿಸಿದ್ದರು. ಅಂತಿಮವಾಗಿ 37 ಎಸೆತಗಳಿಂದ 29 ರನ್ ಗಳಿಸಿದ್ದರು. ಟೀಂ ಇಂಡಿಯಾ ಪರ ಟಿ20 ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 35 ಪ್ಲಸ್ ಎಸೆತಗಳಲ್ಲಿ ಗಳಿಸಿದ 2ನೇ ಅತಿ ಕಡಿಮೆ ರನ್ ಆಗಿದ್ದು, ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ಮತ್ತಷ್ಟು ರನ್ ಗಳಿಸಿದ್ದರೆ ಎದುರಾಳಿ ತಂಡ ಜಯಗಳಿಸುತ್ತಿರಲಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅಂತಿಮ ಮೂರು ಓವರ್ ಗಳಲ್ಲಿ 8 ಬಾರಿ ಒಂಟಿ ರನ್ ಓಡಲು ಧೋನಿ ನಿರಾಕರಿಸಿದ್ದರು. ಆದರೆ 109 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಬ್ಯಾಟಿಂಗ್ ನಡೆಸಿದ ಧೋನಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿತ್ತು. ಆದರ ಧೋನಿ ತಂಡದ ಮೊತ್ತ ಹೆಚ್ಚಿಸಲು ವಿಫಲರಾಗಿದ್ದರು. ಪರಿಣಾಮ ತಂಡ ಸಾಧಾರಣ ಮೊತ್ತ ಗಳಿಸಿತ್ತು.

    ಇದರ ನಡುವೆಯೇ ಪಂದ್ಯದಲ್ಲಿ ಧೋನಿಯ ರಕ್ಷಣಾತ್ಮಕ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ಸ್ ವೆಲ್ ಅರ್ಧ ಪಿಚ್‍ನಲ್ಲಿ ಬ್ಯಾಟಿಂಗ್ ನಡೆಸಲು ಕಷ್ಟಕರವಾಗಿತ್ತು. ಯಾವುದೇ ಬ್ಯಾಟ್ಸ್ ಮನ್‍ಗೆ ಆಡುವುದು ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ. ಧೋನಿ ತಮ್ಮ ಮ್ಯಾಚ್ ಫಿನಿಷಿಂಗ್ ಪ್ರದರ್ಶನಕ್ಕೆ ಖ್ಯಾತಿ ಪಡೆದವರು. ಪಂದ್ಯದ ಅಂತಿಮ ಓವರ್ ನಲ್ಲೂ ಕೂಡ ಅವರು ಸಿಕ್ಸರ್ ಸಿಡಿಸಿದ್ದರು. ಇದು ಅವರ ಬ್ಯಾಟಿಂಗ್ ಶಕ್ತಿಗೆ ಸಾಕ್ಷಿ. ಆದರೆ ಆ ಓವರ್ ನಲ್ಲಿ 7 ರನ್ ಗಳಿಸಲಷ್ಟೇ ಸಾಧ್ಯವಾಗಿದ್ದು, ಪಿಚ್ ಎಷ್ಟು ಕಠಿಣವಾಗಿತ್ತು ಎನ್ನುವುದಕ್ಕೆ ಉದಾಹಣೆ ಆಗಬಹುದು ಎಂದು ಸಮರ್ಥನೆಯನ್ನು ಮುಂದಿಟ್ಟಿದ್ದಾರೆ.

    ಧೋನಿ ಅವರಂತಹ ಬ್ಯಾಟ್ಸ್ ಮನ್‍ರನ್ನು ಅಂತಿಮ ಓವರ್ ಗಳಲ್ಲಿ ಕೇವಲ 1 ಬೌಂಡರಿಗೆ ಸಿಮೀತಗೊಳಿಸಿದ್ದು ಕೂಡ ನಮ್ಮ ಬೌಲರ್ ಸಾಧನೆಯೇ ಸರಿ ಎಂದು ಎಂದಿದ್ದಾರೆ. ಇದೇ ವೇಳೆ ಕೆಎಲ್ ರಾಹುಲ್ ಬ್ಯಾಟಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ಹುತ್ಮಾತ ಯೋಧರಿಗೆ ಗೌರವ – ಅಭಿಮಾನಿಗಳಲ್ಲಿ ಮೌನವಾಗಿರುವಂತೆ ಕೊಹ್ಲಿ ಮನವಿ

    ಪುಲ್ವಾಮಾ ಹುತ್ಮಾತ ಯೋಧರಿಗೆ ಗೌರವ – ಅಭಿಮಾನಿಗಳಲ್ಲಿ ಮೌನವಾಗಿರುವಂತೆ ಕೊಹ್ಲಿ ಮನವಿ

    ವಿಶಾಖಪಟ್ಟಣ: ಪುಲ್ವಾಮಾ ದಾಳಿಯ ಬಳಿಕ ಮೊದಲ ಭಾರಿಗೆ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾಗೆ ಬೆಂಬಲವಾಗಿ ನೆರೆದಿದ್ದ ಅಭಿಮಾನಿಗಳು ‘ಭಾರತ್ ಮಾತ ಕೀ ಜೈ’ ಎಂಬ ಘೋಷಣೆ ಕೂಗಿ ಸ್ವಾಗತ ಮಾಡಿದ್ದರು.

    ಪಂದ್ಯ ಆರಂಭಕ್ಕೂ ಮುನ್ನ ಇತ್ತಂಡಗಳ ಆಟಗಾರರು ಕೂಡ ಕ್ರೀಡಾಂಗಣದಲ್ಲಿ 2 ನಿಮಿಷ ಮೌನಾಚರಣೆ ಮಾಡುವ ಮೂಲಕ ನಮನ ಹುತಾತ್ಮ ಯೋಧರಿಗೆ ಸಲ್ಲಿಸಿದರು. ಆದರೆ ಈ ವೇಳೆ ಅಭಿಮಾನಿಗಳು ಘೋಷಣೆ ಕೂಗುವುದನ್ನು ನಿಲ್ಲಿಸದ ಕಾರಣ ಕೊಹ್ಲಿ ಮೌನವಾಗಿ ಇರುವಂತೆ ಸೂಚನೆ ನೀಡಿ ಮನವಿ ಮಾಡಿದ್ದ ಘಟನೆ ನಡೆದಿದೆ.

    ರಾಷ್ಟ್ರ ಗೀತೆಯ ಬಳಿಕ ಆಟಗಾರರು 2 ನಿಮಿಷ ಮೌನಾಚರಣೆ ಮಾಡಿದ್ದರು. ಈ ವೇಳೆ ಅಭಿಮಾನಿಗಳ ಗ್ಯಾಲರಿಯಿಂದ ಘೋಷಣೆ ಮೊಳಗುತ್ತಲೇ ಇತ್ತು. ಈ ವೇಳೆ ಎಚ್ಚೆತ್ತ ಕೊಹ್ಲಿ ಕೈಸನ್ನೆ ಮಾಡುವ ಎಲ್ಲರ ಮನ ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅವರ ಈ ಫೋಟೋ ಸಖತ್ ವೈರಲ್ ಆಗಿದೆ. ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರು.

    ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಸೋಲುಂಡಿತ್ತು. ಪಂದ್ಯದ ಸೋತ ಪರಿಣಾಮ ಕೆಲ ಅಭಿಮಾನಿಗಳು ತಂಡದ ಆಟಗಾರರ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಅಂತಿಮ ಓವರ್‍ಗಳನ್ನು ಆಡಿದ ಧೋನಿ ಹಾಗು ಅಂತಿಮ ಬೌಲರ್ ಎಸೆತ ಉಮೇಶ್ ಯಾದವ್ ವಿರುದ್ಧ ಹೆಚ್ಚು ಅಕ್ರೋಶ ವ್ಯಕ್ತವಾಗಿದೆ. 2 ಪಂದ್ಯ ಟಿ20 ಸರಣಿಯಲ್ಲಿ ಸದ್ಯ ಆಸೀಸ್ ಮುನ್ನಡೆ ಪಡೆದಿದ್ದು, ಬುಧವಾರ 2ನೇ ಹಾಗೂ ಅಂತಿಮ ಟಿ20 ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊನೆಯ ಎಸೆತದಲ್ಲಿ ಭಾರತಕ್ಕೆ ಸೋಲು!

    ಕೊನೆಯ ಎಸೆತದಲ್ಲಿ ಭಾರತಕ್ಕೆ ಸೋಲು!

    – ಆಸೀಸ್‍ಗೆ 3 ವಿಕೆಟ್ ಗೆಲುವು
    – ಕೊನೆಯ ಓವರ್ ನಲ್ಲಿ 14 ರನ್ ಕೊಟ್ಟ ಉಮೇಶ್ ಯಾದವ್

    ವಿಶಾಖಪಟ್ಟಣ: ಇಲ್ಲಿನ ವೈ ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಆಸೀಸ್ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು, ಆಸ್ಟ್ರೇಲಿಯಾ ಮೂರು ವಿಕೆಟ್‍ಗಳ ಜಯ ಸಾಧಿಸಿದೆ.

    127 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾಗೆ ಕೊನೆಯ ಓವರ್ ನಲ್ಲಿ 14 ರನ್ ಬೇಕಿತ್ತು. ಉಮೇಶ್ ಯಾದವ್ ಎಸೆದ ಈ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿದ ಪರಿಣಾಮ ಕೊನೆಯ ಎಸೆತದಲ್ಲಿ 2 ರನ್‍ಗಳ ಅಗತ್ಯವಿತ್ತು. ಪ್ಯಾಟ್ ಕಮ್ಮಿನ್ಸ್ ಕೊನೆಯ ಎಸೆತದಲ್ಲಿ 2 ರನ್ ಕದಿಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆಯನ್ನು ಪಡೆದಿದೆ.

    ಟೀಂ ಇಂಡಿಯಾ ಸುಲಭ ಗುರಿಯನನ್ನು ಬೆನ್ನತ್ತಿದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಸ್ಟೋಯಿನ್ಸ್ 1 ರನ್ ಗೆ ರನೌಟ್ ಆದ್ರೆ, ನಾಯಕ ಫಿಂಚ್ ರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಬುಮ್ರಾ ಶಾಕ್ ನೀಡಿದರು. ಪರಿಣಾಮ 5 ರನ್ ಗಳಿಗೆ ಆಸೀಸ್ ಪ್ರಮುಖ 2 ವಿಕೆಟ್ ಕಳೆದುಕೊಂಡಿತ್ತು.

    ಈ ಹಂತದಲ್ಲಿ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 43 ಎಸೆತಗಳಲ್ಲಿ 56 ರನ್ ಗಳಿಸಿ ಮಿಂಚಿದರು. ಅರ್ಧ ಶತಕ ಗಳಿಸಿ ಟೀಂ ಇಂಡಿಯಾಗೆ ಮುಳುವಾಗಿದ್ದ ಮ್ಯಾಕ್ಸ್ ವೆಲ್‍ರನ್ನು ಚಹಲ್ ಪೆವಿಲಿಯಗಟ್ಟಲು ಯಶಸ್ವಿಯಾದರೆ, ಆರಂಭಿಕ ಶಾರ್ಟ್ 37 ರನ್ ಗಳಿಸಿ ರನೌಟ್ ಆದರು. ಬಳಿಕ ಬಂದ ಟರ್ನರ್ ಕೂಡ ಬಂದಷ್ಟೇ ವೇಗದಲ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಭಾರತ ಪಂದ್ಯ ಗೆಲುವಿನ ಆಸೆ ಮೂಡಿತು. ಇದನ್ನು ಓದಿ: ಕಮ್ ಬ್ಯಾಕ್ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಕೆಎಲ್ ರಾಹುಲ್

    ಮಿಂಚಿದ ಬುಮ್ರಾ: 98 ರನ್ ಗಳಿಗೆ 3 ವಿಕೆಟ್ ಗಳಿಸಿ ಸುಸ್ಥಿತಿಯಲ್ಲಿದ್ದ ಆಸೀಸ್‍ಗೆ ಶಾರ್ಟ್ ರನೌಟ್ ಆದ ಬಳಿಕ ರನ್ ವೇಗಕ್ಕೆ ಕಡಿವಾಣ ಬಿತ್ತು. ಕೊನೆಯ 12 ಎಸೆತಗಳಲ್ಲಿ ಆಸೀಸ್ ಗೆಲುವಿಗೆ 16 ರನ್ ಬೇಕಿತ್ತು. ಬೂಮ್ರಾ ಈ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತ ಪರಿಣಾಮ ಪಂದ್ಯ ಕುತೂಹಲ ಘಟ್ಟದತ್ತ ತಿರುಗಿತು. ಆದರೆ ಉಮೇಶ್ ಯಾದವ್ ಓವರ್ ನಲ್ಲಿ 2 ಬೌಂಡರಿ ಹೋದ ಪರಿಣಾಮ ಪಂದ್ಯ ಭಾರತದಿಂದ ಕೈ ಜಾರಿತು. ಬುಮ್ರಾ 4 ಓವರ್ ಎಸೆದು 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಅರ್ಧ ಶತಕ ಹಾಗೂ ನಾಯಕ ಕೊಹ್ಲಿ 24, ಧೋನಿ 29 ರನ್ ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿತ್ತು.

    ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಟೀಂ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಕಳೆದು ಬಹುಬೇಗ ಕಳೆದುಕೊಂಡರೂ ಕೂಡ ಉತ್ತಮ ಆರಂಭ ಪಡೆಯಿತು. ಆರಂಭದ 8.3 ಓವರ್ ಗಳಲ್ಲಿ 69 ರನ್ ಗಳಿಸಿ ಟೀಂ ಇಂಡಿಯಾ ಉತ್ತಮ ಹಂತದಲ್ಲಿತ್ತು. ಕೊಹ್ಲಿ 17 ಎಸೆತಗಳಲ್ಲಿ 24 ರನ್ ಗಳಿಸಿ ಬಿರುಸಿನ ಬ್ಯಾಟಿಂಗ್ ನಡೆಸಿದ್ದರು. ಆದರೆ ಆ್ಯಡಂ ಜಂಪಾ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಭಾರತ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾದರು. ಕೊಹ್ಲಿ ಪಂದ್ಯದಲ್ಲಿ ಆಸೀಸ್ ವಿರುದ್ಧ 500 ರನ್ ಪೂರ್ಣಗೊಳಿಸಿದ ಹೆಗ್ಗಳಿಕೆ ಗಳಿಸಿದರು.

    ಪಂತ್ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರೆ, ಉತ್ತಮವಾಗಿ ಆಡುತ್ತಿದ್ದ ರಾಹುಲ್‍ರನ್ನು ಕಾಲ್ಟರ್ ನೈಲ್ ಪೆವಿಲಿಯಗಟ್ಟಿದರು. ಈ ಹಂತದಲ್ಲಿ ಟೀಂ ಇಂಡಿಯಾ 12.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಬಂದ ಧೋನಿ 37 ಎಸೆತಗಳನ್ನು 29 ರನ್ ಗಳಿಸಿ ಅಜೇಯರಾಗಿ ಉಳಿದರು.

    ಟೀಂ ಇಂಡಿಯಾ 8.3 ಓವರ್ ಗಳಲ್ಲಿ 1 ವಿಕೆಟ್ ಕಳೆದು ಕೊಂಡು 69 ರನ್ ಗಳಿಸಿದರೆ, ಉಳಿದ 11.3 ಓವರ್ ಗಳಲ್ಲಿ 57 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇತ್ತ ಧೋನಿ 35 ಪ್ಲಸ್ ಎಸೆತ ಎದುರಿಸಿದರೂ ಕೂಡ 29 ರನ್ ಮಾತ್ರ ಗಳಿಸಿ ಟಿ20 ಮಾದರಿಯಲ್ಲಿ ಭಾರತದ ಪರ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎನಿಸಿಕೊಂಡರು. ಈ ಹಿಂದೆ 2009ರಲ್ಲಿ ಇಂಗ್ಲೆಂಡ್ ವಿರುದ್ಧ ಜಡೇಜಾ 71.82 ಸ್ಟ್ರೈಕ್ ನಲ್ಲಿ ರನ್ ಗಳಿಸಿದ್ದರು. ಇಂದು ಧೋನಿ 78.37 ಸ್ಟ್ರೈಕ್ ರೇಟ್ ಹೊಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ಹೆಲಿಕಾಪ್ಟರ್ ಶಾಟ್’ ಬಳಿಕ ಧೋನಿ ಪ್ರತಿಕ್ರಿಯೆ ಹೀಗಿತ್ತು- ವಿಡಿಯೋ ವೈರಲ್

    `ಹೆಲಿಕಾಪ್ಟರ್ ಶಾಟ್’ ಬಳಿಕ ಧೋನಿ ಪ್ರತಿಕ್ರಿಯೆ ಹೀಗಿತ್ತು- ವಿಡಿಯೋ ವೈರಲ್

    ವಿಶಾಖಪಟ್ಟಣ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿ ಸಿಡಿಸಿದ ಹೆಲಿಕಾಪ್ಟರ್ ಶಾಟ್ ಸಿಕ್ಸರ್ ವಿಡಿಯೋ ವೈರಲ್ ಆಗಿದ್ದು, ಸಿಕ್ಸರ್ ಸಿಡಿಸಿದ ಬಳಿಕ ನೀಡಿದ ಪ್ರತಿಕ್ರಿಯೆ ವಿಶೇಷವಾಗಿತ್ತು.

    ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಆಗಮಿಸುತ್ತಿದಂತೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಧೋನಿ 38 ಓವರ್ ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. ಈ ವೇಳೆ ನಾನ್ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ಕೂಡ ಒಂದು ಕ್ಷಣ ಅಚ್ಚರಿಗೊಂಡರು. ಕೊಹ್ಲಿ ಪ್ರತಿಕ್ರಿಯೆ ಕಂಡ ಧೋನಿ ಕೂಡ ಸಂತಸದಿಂದ ನಸು ನಕ್ಕು ಸಂಭ್ರಮಿಸಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ವೆಬ್‍ಸೈಟ್ ನಲ್ಲಿ ಪೋಸ್ಟ್ ಮಾಡಿದ್ದು, ಇದೂವರೆಗೂ 1 ಲಕ್ಷ ವ್ಯೂ ಕಂಡಿದೆ.

    ಧೋನಿ ಅವರ ಪ್ರತಿಕ್ರಿಯೆ ಕಂಡ ಅಭಿಮಾನಿಗಳು ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಧೋನಿ ಅವರ ಬ್ಯಾಟಿಂಗ್ ಕುರಿತು ಹಲವು ಕ್ರಿಕೆಟ್ ವಿಶ್ಲೇಷಕರು ಟೀಕೆ ವ್ಯಕ್ತಪಡಿಸಿದ್ದು, ಯುವ ಆಟಗಾರರಿಗೆ ಅವಕಾಶ ನೀಡುವ ಚಿಂತನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಂಡೀಸ್ ವಿರುದ್ಧ ಪಂದ್ಯದಲ್ಲೂ ಧೋನಿ 25 ಎಸೆತಗಳಲ್ಲಿ 20 ರನ್ ಸಿಡಿಸಿ ಔಟಾಗಿದ್ದರು.

    ಇತ್ತ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 10 ಸಾವಿರ ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. ವಿರಾಟ್ ಬ್ಯಾಟಿಂಗ್ ಶೈಲಿಗೆ ವಿಶ್ವದ ಹಲವು ಕ್ರಿಕೆಟ್ ಸ್ಟಾರ್ ಗಳು ಹಾಗೂ ಅಭಿಮಾನಿಗಳು ಪ್ರಶಂಸೆಯನ್ನ ವ್ಯಕ್ತಪಡಿಸಿದ್ದರು. ಈ ಪಂದ್ಯ ಟೈ ನಲ್ಲಿ ಅಂತ್ಯ ಕಂಡ ಕಾರಣ ಟೂರ್ನಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಮುನ್ನಡೆಯಲ್ಲಿ ಮುಂದುವರಿಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/ghanta_10/status/1055052075434950656?

  • ಮದ್ವೆಯಾದ 4 ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದ ಸಾವು

    ಮದ್ವೆಯಾದ 4 ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದ ಸಾವು

    ವಿಶಾಖಪಟ್ಟಣ: 19 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

    ಗಂಡನೊಂದಿಗೆ ಜಗಳವಾಡಿದ ಕಾರಣ ಶನಿವಾರ ರಾತ್ರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ. ಆದ್ರೆ ಗಂಡನೇ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಪೊಲೀಸರ ಪ್ರಕಾರ, ವಿಶಾಖಪಟ್ಟಣ ಬಳಿಯ ಎಲ್‍ಬಿ ಪುರಂನವರಾದ ಸಂಧ್ಯಾ ನಾಲ್ಕು ತಿಂಗಳ ಹಿಂದಷ್ಟೇ ವೈಜಾಗ್ ಸ್ಟೀಲ್ ಪ್ಲಾಂಟ್ ನೌಕರನಾದ ರಾಜು ಎಂಬವರೊಂದಿಗೆ ಮದುವೆಯಾಗಿದ್ದರು. ಗಜುವಾಕಾದ ಬಾಡಿಗೆ ಫ್ಲಾಟ್‍ನಲ್ಲಿ ದಂಪತಿ ವಾಸವಿದ್ದರು. ಶನಿವಾರದಂದು ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿತ್ತು. ವಾಗ್ವಾದದ ಬಳಿಕ ರಾಜು ಮನೆಯಿಂದ ಹೊರಹೋಗಿದ್ದು ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ ಸಂಧ್ಯಾ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.

    ಪತ್ನಿಯನ್ನ ಕೂಡಲೇ ರಾಜು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿಂದ ಕೆಜಿಹೆಚ್ ಆಸ್ಪತ್ರೆಗೆ ರವಾನಿಸಲು ವೈದ್ಯರು ಹೇಳಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿ ಸಂಧ್ಯಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತದೇಹವನ್ನ ತವರೂರಿಗೆ ತೆಗೆದುಕೊಂಡು ಹೋಗಲಾಗಿದೆ. ಆದ್ರೆ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಕೈ ಮುರಿದಿರುವುದನ್ನು ನೋಡಿ, ರಾಜು ಆಕೆಯ ಮೇಲೆ ದಾಳಿ ಮಾಡಿ ಕೊಂದಿದ್ದಾನೆ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.