– ಚರಂಡಿ, ನಡು ರಸ್ತೆಯಲ್ಲೇ ಬಿದ್ದ ನೂರಾರು ಜನರು
ವಿಶಾಖಪಟ್ಟಣಂ: ‘ಅಮ್ಮಾ ಎದ್ದೇಳು, ಅಮ್ಮಾ ಎದ್ದೇಳು’… ‘ಪಾಪು ನಿನಗೇನೂ ಆಗಲ್ಲ, ಕಣ್ಣು ಬೀಡೋ, ಎದ್ದೇಳೋ’ ಎಂದು ನೂರಾರು ಮಕ್ಕಳು-ಪೋಷಕರು ಕಣ್ಣೀರಿಟ್ಟರು. ಅಮ್ಮನನ್ನ ಹಿಡಿದು ಮಗಳು ಗೋಳೋ ಅಂತ ಅತ್ತಳು. ಅಂಗೈಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಂದಮ್ಮನ ಸ್ಥಿತಿ ಕಂಡು ಅಪ್ಪ ಅಸಹಾಯಕರಂತೆ ಚಡಪಡಿಸಿದ ಮನಕಲುಕುವ ದೃಶ್ಯಗಳು ವಿಶಾಖಪಟ್ಟಣಂನಲ್ಲಿ ಕಂಡು ಬಂದವು.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕಾರ್ಖಾನೆಯಿಂದ ಗುರುವಾರ ನಸುಕಿನ ಜಾವ ಅನಿಲ ಸೋರಿಕೆಯಾಗಿದೆ. ಎಲ್‍ಜಿ ಪಾಲಿಮರ್ಸ್ ಇಂಡಸ್ಟ್ರಿಯ ಸ್ಥಾವರದಲ್ಲಿ 2:30 ಗಂಟೆಗೆ ಅಪಘಾತ ಸಂಭವಿಸಿದ್ದು, ಬೆಳಗ್ಗೆ 5:30ರ ಸುಮಾರಿಗೆ ನ್ಯೂಟ್ರಾಲೈಜರ್ ಗಳನ್ನು ಬಳಸಿದ ನಂತರ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿತು. ಅಷ್ಟೊತ್ತಿಗೆ ಅನಿಲವು 4 ಕಿ.ಮೀ ವ್ಯಾಪ್ತಿಯಲ್ಲಿ 5 ಸಣ್ಣ ಹಳ್ಳಿಗಳಿಗೆ ಹರಡಿತ್ತು. ಅಪಘಾತದಲ್ಲಿ ಈವರೆಗೆ 2 ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ ದುರಂತ- 2 ಟ್ಯಾಂಕಿನ ಒಟ್ಟು 10 ಟನ್ ವಿಷಾನಿಲ ಸೋರಿಕೆ
ಎನ್‍ಡಿಆರ್‌ಎಫ್, ಎಸ್‍ಡಿಆರ್‌ಎಫ್, ಎನ್‍ಡಿಎಂಎ ಮತ್ತು ನೌಕಾಪಡೆಯ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದವು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್‍ಡಿಆರ್‌ಎಫ್ ಡಿಜಿ ಎಸ್‍ಎನ್ ಪ್ರಧಾನ್ ಹೇಳಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಬಳಿಕ ತೆರೆದ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆ- ಸಾವಿನ ಸಂಖ್ಯೆ 8ಕ್ಕೆ ಏರಿಕೆ
ವಿಶಾಖಪಟ್ಟಣಂನಿಂದ 30 ಕಿ.ಮೀ ದೂರದಲ್ಲಿರುವ ವೆಂಕಟಪುರಂ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಪರಿಣಾಮ ಸಾವಿರಕ್ಕೂ ಹೆಚ್ಚು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. 300 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 25 ಜನರು ವೆಂಟಿಲೇಟರ್ ಗಳಲ್ಲಿದ್ದಾರೆ. 15 ಮಕ್ಕಳ ಸ್ಥಿತಿ ಗಂಭೀರವಾಗಿದೆ.
https://twitter.com/gunjanm_/status/1258256034222620674
ಪರಿಸ್ಥಿತಿ ಎಷ್ಟರ ಮಟ್ಟಿಗೆ ಕರಾಳವಾಗಿತ್ತು ಎಂದರೆ ಮೃತ 11 ಜನರಲ್ಲಿ ಇಬ್ಬರು ಭಯದಿಂದಲೇ ಪ್ರಾಣಬಿಟ್ಟಿದ್ದಾರೆ. ಓರ್ವ ಕಂಪನಿಯ ಎರಡನೇ ಮಹಡಿಯಿಂದ ಬಿದ್ದರೆ, ಇನ್ನೊಬ್ಬ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಜನರು ಮಕ್ಕಳು, ವೃದ್ಧರನ್ನು ಕರೆದುಕೊಂಡು ಗ್ರಾಮವನ್ನು ಬಿಡಲು ಆರಂಭಿಸಿದರು. ಆದರೆ ಅನೇಕರು ಮಾರ್ಗಮಧ್ಯದಲ್ಲೇ ಪ್ರಜ್ಞೆ ತಪ್ಪಿದರು. ಕೆಲವರು ಚರಂಡಿಗೆ ಬಿದ್ದರೆ, ಇನ್ನೂ ಕೆಲವರು ಬೈಕ್ ನಿಯಂತ್ರಣ ಕಳೆದುಕೊಂಡು ನಡುರಸ್ತೆಯಲ್ಲೇ ಬಿದ್ದಿದ್ದರು. ಇದನ್ನೂ ಓದಿ: ನನ್ನಮ್ಮ ಕೂಡ ಏಕಾಏಕಿ ಕೆಳಗೆ ಬಿದ್ರು, ಕೂಡ್ಲೇ ಆಸ್ಪತ್ರೆಗೆ ಕರೆದೊಯ್ದೆ- ಪ್ರತ್ಯಕ್ಷದರ್ಶಿ ವಿವರಣೆ
ಕಾರ್ಖಾನೆಯ ಸುತ್ತಲೂ ಗೊಂದಲ ನಿರ್ಮಾಣವಾಗಿತ್ತು. ಜನರು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡುತ್ತಿದ್ದರು. ಪೊಲೀಸರು, ಭದ್ರತಾ ಸಿಬ್ಬಂದಿ ಜನರ ಸಹಾಯಕ್ಕೆ ನಿಂತರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ತಮ್ಮ ಜೀವ ಉಳಿಸಲು ಪ್ರಯತ್ನಿಸುತ್ತಿದ್ದರು. ಅನೇಕ ಜನರು ತಲೆತಿರುಗಿ ನೆಲಕ್ಕೆ ಬಿದ್ದಿದ್ದರು.
ರಸ್ತೆ ಪಕ್ಕದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ತಾಯಿ ನೋಡಿ ಮಗಳು ಕಣ್ಣೀರಾದಳು. ಅಮ್ಮಾ ಎದ್ದೇಳು… ಏಳ್ ಅಮ್ಮಾ ಎಂದು ಹಿಡಿದು ತಾಯಿಯನ್ನ ಎಚ್ಚರಗೊಳಿಸಲು ಯತ್ನಿಸಿದಳು. ಬಳಿಕ ವಿಷವನ್ನು ಕಕ್ಕುವಂತೆ ಎದೆಯನ್ನು ಒತ್ತಿ ಕಣ್ಣೀರಿಟ್ಟಳು. ಆಗ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿ ಎಚ್ಚರಗೊಂಡಳು.
ಮತ್ತೊಂದು ಕಡೆ ತಂದೆಯೊಬ್ಬ ತನ್ನ ಪುಟ್ಟ ಮಗುವನ್ನು ಅಂಗೈಯಲ್ಲಿ ಹಿಡಿದು ಕಣ್ಣೀರಿಡುತ್ತಿದ್ದ. ‘ಏ ಎದ್ದೇಳೋ… ಲೇ ಪುಟ್ಟಾ ನಿಮಗೆ ಏನೂ ಆಗಲ್ಲ’ ಎಂದು ಧೈರ್ಯ ಹೇಳುತ್ತ ಮಗುವನ್ನು ಹಿಡಿದು ಅಂಬುಲೆಂನ್ಸ್ ಹತ್ತಿ ಆಸ್ಪತ್ರೆಗೆ ಸಾಗಿದರು.
1984ರ ಡಿಸೆಂಬರ್ 3ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನಲ್ಲಿರುವ ಅಮೆರಿಕನ್ ಕಂಪನಿ ಯೂನಿಯನ್ ಕಾರ್ಬೈಡ್‍ನ ಕಾರ್ಖಾನೆಯಲ್ಲಿ 42 ಸಾವಿರ ಕೆಜಿ ವಿಷಕಾರಿ ಅನಿಲ ಸೋರಿಕೆಯಾಗಿತ್ತು. ಈ ಘಟನೆಯಲ್ಲಿ 3,500 ಜನರು ಬಲಿಯಾಗಿದ್ದರು ಎಂದು ಸರ್ಕಾರ ತಿಳಿಸಿತ್ತು. ಆದರೆ ಈ ಅಪಘಾತದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.