Tag: ವಿವಾಹ ವಾರ್ಷಿಕೋತ್ಸವ

  • ಪ್ರೇಮಿಗಳ ದಿನದಂದೇ ಪ್ರೇಮಲೋಕದ ಕನಸುಗಾರನ ವಿವಾಹ ವಾರ್ಷಿಕೋತ್ಸವ

    ಪ್ರೇಮಿಗಳ ದಿನದಂದೇ ಪ್ರೇಮಲೋಕದ ಕನಸುಗಾರನ ವಿವಾಹ ವಾರ್ಷಿಕೋತ್ಸವ

    ಬೆಂಗಳೂರು: ಚಂದನವನದ ಪ್ರೇಮಲೋಕದ ಕನಸುಗಾರ ಡಾ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದು ತಮ್ಮ 33ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ.

    ರವಿಚಂದ್ರನ್ ಅವರ ವಿವಾಹ ವಾರ್ಷಿಕೋತ್ಸವದ ಇನ್ನೊಂದು ವಿಶೇಷವೆನೆಂದರೆ, ಪ್ರೀತಿ ಪ್ರೇಮ ಎಂಬ ಪದಕ್ಕೆ ಸಮಾನದ ಅವರ ಮದುವೆ ಪ್ರೇಮಿಗಳ ದಿನದೊಂದು ನೇರವೇರಿದೆ. ಹೌದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಮದುವೆಯಾಗಿದ್ದಾರೆ.

    ನಿರ್ದೇಶಕ ಎನ್ ವೀರಸ್ವಾಮಿ ಪುತ್ರನಾಗಿ 1961 ಮೇ 30ರಂದು ಜನಿಸಿದ ವೀರಸ್ವಾಮಿ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಆರ್ ಸುಮತಿ ಅವರನ್ನು ವಿವಾಹವಾದರು. ಈ ದಂಪತಿ ವಿವಾಹವಾಗಿ ಇಂದಿಗೆ 33 ವರ್ಷಗಳಾಗಿವೆ. ನಟ, ನಿರ್ದೇಶಕ ನಿರ್ಮಾಪಕನಾಗಿ ಮಿಂಚಿದ್ದ ರವಿಚಂದ್ರನ್ ಅವರು ಒಳ್ಳೆಯ ಪತಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಈ ದಂಪತಿಗೆ ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.

    ರವಿಚಂದ್ರನ್ ಅವರ ಗಂಡು ಮಕ್ಕಳಿಬ್ಬರು ಅಪ್ಪನ ಹಾಗೇ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದು, ಕಳೆದ ವರ್ಷವಷ್ಟೇ ಮಗಳು ಗೀತಾಂಜಲಿಯನ್ನು ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳ 29 ರಂದು ಮಗಳು ಗೀತಾಂಜಲಿಯನ್ನು ಉದ್ಯಮಿ ಅಜಯ್ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಂತೆ ಮಗಳು ಮದುವೆಯನ್ನು ಸಖತ್ ಅದ್ಧೂರಿಯಾಗಿ ಮತ್ತು ವಿಶಿಷ್ಟವಾಗಿ ಮಾಡಿದ್ದರು.

    ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಕೋರಿರುವ ಮಗ ಮನೋರಂಜನ್, ನಮ್ಮ ಜೀವನದ ಏಳು ಬೀಳಿನಲ್ಲಿ ನೀವು ಜೊತೆಗೆ ಇದ್ದೀರಿ. ನೀವು ನಮಗೆ ಪ್ರೀತಿ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದೀರಾ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ರವಿಂಚದ್ರನ್ ಅವರು, ರವಿ ಬೋಪಣ್ಣ, ರವಿಚಂದ್ರ, ರಾಜೇಂದ್ರ ಪೊನ್ನಪ್ಪ ಎಂಬ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ವಿಶೇಷವೆನೆಂದರೆ ರವಿ ಬೋಪಣ್ಣ ಹಾಗೂ ರಾಜೇಂದ್ರ ಪೊನ್ನಪ್ಪ ಈ ಎರಡು ಸಿನಿಮಾಗಳನ್ನು ಸ್ವತಃ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

    https://www.instagram.com/p/B8iE7FOgBDT/

  • ಹಾಯ್ ಹೇಳಿದ್ದಾಗ ನಿನ್ನ ಮುಖದಲ್ಲಿದ್ದ ನಗು ಮರೆಯಲು ಸಾಧ್ಯವಿಲ್ಲ: ಗಣೇಶ್

    ಹಾಯ್ ಹೇಳಿದ್ದಾಗ ನಿನ್ನ ಮುಖದಲ್ಲಿದ್ದ ನಗು ಮರೆಯಲು ಸಾಧ್ಯವಿಲ್ಲ: ಗಣೇಶ್

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 12ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಪತ್ನಿ ಶಿಲ್ಪಾ ಗಣೇಶ್ ಜೊತೆಗಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಅಂದು ನಾನು ಹಾಯ್ ಎಂದಾಗ ನೀನು ನನಗೆ ಹಾಯ್ ಎಂದು ಹೇಳಿದ್ದೆ. ಆ ದಿನ ನಿನ್ನ ಮುಖದಲ್ಲಿದ್ದ ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿಗೆ ನಮ್ಮ ಮದುವೆಯಾಗಿ 12 ವರ್ಷಗಳೇ ಕಳೆದಿವೆ. ನೀನು ನನ್ನ ಪ್ರೀತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಮಹಾರಾಣಿ. ನನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    2008, ಫೆಬ್ರವರಿ 11ರಂದು ತಮ್ಮ ಜೆಪಿ ನಗರದ ನಿವಾಸದಲ್ಲಿಯೇ ಗಣೇಶ್ ಹಾಗೂ ಶಿಲ್ಪಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಫೆ. 18ರಂದು ಗಣೇಶ್ ಅವರ ಮದುವೆ ನಿಗದಿಯಾಗಿತ್ತು. ಆದರೆ ಅಭಿಮಾನಿಗಳ ಒತ್ತಡದಿಂದ ಗಣೇಶ್ ಹಾಗೂ ಶಿಲ್ಪಾ ಫೆ. 11ರಂದು ಜೆಪಿ ನಗರದ ಮನೆಯಲ್ಲಿಯೇ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ನಿರ್ದೇಶಕ ಯೋಗರಾಜ್ ಭಟ್, ನಾಗಶೇಖರ್, ನಿರ್ಮಾಪಕ ಕೆ. ಮಂಜು ಹಾಗೂ ಶಿಲ್ಪಾ ಅವರ ಆತ್ಮೀಯ ಸಂಬಂಧಿಕರು ಹಾಜರಿದ್ದರು.

    ಗಣೇಶ್ ಹಾಗೂ ಶಿಲ್ಪಾ ದಂಪತಿಗೆ ಮಗಳು ಚರಿತ್ರ್ಯ ಹಾಗೂ ಮಗ ವಿಹಾನ್ ಇದ್ದಾರೆ. ಗಣೇಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಇಬ್ಬರ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  • ತಾಯಿಯಂತ ಮಡದಿ ಪಡೆದಿದ್ದಕ್ಕೆ ಖುಷಿಯಿದೆ – ರಿಷಬ್ ಶೆಟ್ಟಿ

    ತಾಯಿಯಂತ ಮಡದಿ ಪಡೆದಿದ್ದಕ್ಕೆ ಖುಷಿಯಿದೆ – ರಿಷಬ್ ಶೆಟ್ಟಿ

    ಬೆಂಗಳೂರು: ತಾಯಿಯಂತ ಮಡದಿಯನ್ನು ಪಡೆದಿದ್ದಕ್ಕೆ ಖುಷಿಯಿದೆ ಎಂದು ಫೇಸ್ ಬುಕ್‍ನಲ್ಲಿ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಪೋಸ್ಟ್ ವೊಂದನ್ನು ಹಾಕಿದ್ದಾರೆ.

    ಭಾನುವಾರ ರಿಷಬ್ ಶೆಟ್ಟಿ ಮತ್ತು ಪ್ರಗತಿ ಮೂರನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಹಾಕಿಕೊಂಡಿರುವ ರಿಷಬ್ ತಾಯಿ ರೂಪದ ಹೆಂಡತಿ ಸಿಕ್ಕಿರುವುದಕ್ಕೆ ಖುಷಿಯಿದೆ ಎಂದು ಬರೆದುಕೊಂಡಿದ್ದಾರೆ.

    ತಾನು ಮತ್ತು ತನ್ನ ಹೆಂಡತಿ ಹಾಗೂ ಮಗು ಇರುವ ಫೋಟೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ರಿಷಬ್, ಮೂರು ವರ್ಷದ ಹಿಂದೆ ಈ ಬ್ಯೂಟಿಫುಲ್ ಯುವತಿಯನ್ನು ನಾನು ಮದುವೆಯಾದೆ. ನಾವಿಬ್ಬರು ಅಂದಿನಿಂದ ನನ್ನ ಊಹೆಗೂ ಮೀರಿದ ಸುಂದರ ಜೀವನವನ್ನು ನಡೆಸುತ್ತಿದ್ದೇವೆ. ಜೊತೆಗೆ ತಾಯಿಯಂತ ಮಡದಿ ಪಡೆದಿದ್ದಕ್ಕೆ ಖುಷಿಯಿದೆ. ನಿನ್ನ ತಾಳ್ಮೆ, ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಸ್ವೀಟ್ ಹಾರ್ಟ್ ಎಂದು ಬರೆದುಕೊಂಡಿದ್ದಾರೆ.

    ರಿಷಬ್ ಶೆಟ್ಟಿ ಅವರು ಪ್ರಗತಿವರನ್ನು ಮೊದಲಿಗೆ ರಿಕ್ಕಿ ಚಿತ್ರದ ಸಮಯದಲ್ಲಿ ಭೇಟಿಯಾಗಿದ್ದರು. ನಂತರ ಇಬ್ಬರು ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರು ಪ್ರೇಮ ಬಲೆಯಲ್ಲಿ ಸಿಲುಕಿ ಇಬ್ಬರ ಮನೆಯವರಿಗೂ ತಿಳಿಸಿ ಪರಸ್ಪರ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ 2017ರ ಫೆಬ್ರವರಿ 9 ರಂದು ಮದುವೆಯಾಗಿದ್ದರು.

    ರಿಷಬ್ ಮತ್ತು ಪ್ರಗತಿ ಜೋಡಿಯ ಮೂರು ವರ್ಷದ ಮದುವೆ ಸಂಕೇತವಾಗಿ ಮುದ್ದಾದ ಗಂಡು ಮಗುವಿನ ಅಗಮನವಾಗಿದೆ. ಈ ಮಗುವಿಗೆ ರಣ್ ವಿತ್ ಶೆಟ್ಟಿ ಎಂದು ಹೆಸರಿಡಲಾಗಿದೆ. ಬೆಲ್ ಬಾಟಮ್ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳ ಯಶಸ್ವಿನ ನಂತರ ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರ ರುದ್ರಪ್ರಯಾಗದಲ್ಲಿ ಬ್ಯುಸಿಯಾಗಿದ್ದಾರೆ.

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವನ್ನು ನೋಡಿದ ಮೈಸೂರಿನ ಆಭಿಮಾನಿಯೋರ್ವ ರಿಷಬ್ ಶಟ್ಟಿಗೆ ಪತ್ರ ಬರೆದು 200 ಟೆಕೆಟ್ ದರವನ್ನು ಕಳುಹಿಸಿಕೊಟ್ಟಿದ್ದರು. ಚಿತ್ರ ಪ್ರೇಮಿಯ ಈ ಅಭಿಮಾನವನ್ನು ಮೆಚ್ಚಿದ್ದ ರಿಷಬ್ ಅವರು ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಜೊತೆಗೆ ಮೈಸೂರಿಗೆ ಹೋದಾಗ ಆ ಅಭಿಮಾನಿಯನ್ನು ಭೇಟಿ ಕೊಡ ಮಾಡಿದ್ದರು.

  • ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

    ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡ್ಕೊಂಡ

    ಚಂಡೀಗಢ್: ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಹರಿಯಾಣದ ರಾಜೀವ್ ಕಾಲೋನಿಯಲ್ಲಿ ನಡೆದಿದೆ.

    21 ವರ್ಷದ ಫೈಝಾನ್ ತನ್ನ ಪತ್ನಿ ಶಾಬ್-ಇ-ನೂರ್ ನನ್ನು ಕೊಲೆ ಮಾಡಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಫೈಝಾನ್ ಹಾಗೂ ಶಾಬ್‍ನ ಮೊದಲನೇ ವಿವಾಹ ವಾರ್ಷಿಕೋತ್ಸವವಿತ್ತು. ಈ ನಡುವೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತೆರಳಿ ಫೈಝಾನ್ ತನ್ನ ಪತ್ನಿಯನ್ನು ಮೊಬೈಲ್ ಚಾರ್ಜಿಂಗ್ ವೈರ್ ಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮರುದಿನ ಬೆಳಗ್ಗೆ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಎಸ್‍ಎಚ್‍ಒ ಅಧಿಕಾರಿ ನವೀನ್ ಶಹಾರಾನ್ ಪ್ರತಿಕ್ರಿಯಿಸಿ, ಬುಧವಾರ ರಾತ್ರಿ ಫೈಝಾನ್ ಚಾರ್ಜಿಂಗ್ ವೈರ್ ನಿಂದ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮರುದಿನ ಬೆಳಗ್ಗೆ ವಿಕಾಸ್ ನಗರಕ್ಕೆ ಹೋಗಿ ಅಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಮಹಿಳೆಯ ಮೃತದೇಹವನ್ನು ಸಿವಿಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೈರನ್ನು ಮಹಿಳೆಯ ಕುತ್ತಿಗೆಗೆ ಸುತ್ತಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

    ಫೈಯಾನ್ ತಂದೆ ದಿಲ್‍ಶಾದ್ ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಸೊಸೆ ಹಲವು ಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ನನ್ನ ಮಗ ಆಕೆಯ ಹಾಗೂ ಆಕೆಯ ಪ್ರಿಯಕರನ ಕಾಲ್ ಡೀಟೆಲ್ಸ್ ತಂದಿದ್ದನು. ಬುಧವಾರ ಶಾಬ್ ವಿವಾಹ ವಾರ್ಷಿಕೋತ್ಸವಕ್ಕೆ ಏನೂ ಉಡುಗೊರೆ ಕೊಟ್ಟಿಲ್ಲ ಎಂದು ಜಗಳವಾಡುತ್ತಿದ್ದಳು. ಶಾಬ್ ಅದ್ಧೂರಿ ಜೀವನಶೈಲಿ ನಡೆಸಬೇಕು ಎಂದು ಹೇಳುತ್ತಿದ್ದಳು. ಅಲ್ಲದೆ ಪ್ರತಿದಿನ ಮಾಂಸಹಾರ ತಿನ್ನಬೇಕು, ಆದರೆ ನಮಗೆ ಕೇವಲ ತರಕಾರಿ ತರಲು ಆಗುತ್ತಿತ್ತು ಎಂದು ಹೇಳಿದ್ದಾರೆ.

    ಫೈಝಾನ್ ಮೃತದೇಹ ಗುರುವಾರ ಬೆಳಗ್ಗೆ 9.30ಕ್ಕೆ ಪತ್ತೆಯಾಗಿದ್ದು, 10 ಗಂಟೆಗೆ ಪತ್ನಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫೈಝಾನ್ ಸೈಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳೆಯ ಪೋಷಕರು ಮೀರತ್‍ನಲ್ಲಿದ್ದ ಕಾರಣ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ ಎಂದು ವರದಿಯಾಗಿದೆ.

  • 80ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವಿಶ್ವದ ಅತಿ ಹಿರಿಯ ದಂಪತಿ

    80ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ವಿಶ್ವದ ಅತಿ ಹಿರಿಯ ದಂಪತಿ

    – ವಿವಾಹವಾಗಿ 80 ವರ್ಷ ಕಳೆದರೂ ಕಿಂಚಿತ್ತೂ ಕುಂದಿಲ್ಲ ಪ್ರೀತಿ

    ವಾಷಿಂಗ್ಟನ್: ವಿಶ್ವದ ಅತೀ ಹಿರಿಯ ಜೋಡಿ ತಮ್ಮ 80ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

    ಟೆಕ್ಸಾಸಿನ ಆಸ್ಟಿನ್‍ನಲ್ಲಿ ನೆಲೆಸಿರುವ ಜಾನ್ ಮತ್ತು ಷಾರ್ಲೆಟ್ ಹೆಂಡರ್ಸನ್ ದಂಪತಿ ಎರಡನೇ ಮಹಾಯುದ್ಧದ ನಂತರ ಡಿಸೆಂಬರ್ 22, 1939ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿ 80ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದು, ಡಿಸೆಂಬರ್ 11ರಂದು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಜಾನ್ ಅವರು 1912ರಲ್ಲಿ ಫೋರ್ಟ್ ವೋರ್ಥಿನಲ್ಲಿ ಜನಿಸಿದ್ದಾರೆ. ಷಾರ್ಲೆಟ್ ಅವರು 1914ರಲ್ಲಿ ಲೋವಾದಲ್ಲಿ ಜನಿಸಿದ್ದಾರೆ. ಈ ಜೋಡಿ 1934ರಂದು ಟೆಕ್ಸಾಸಿನ ವಿಶ್ವವಿದ್ಯಾಲಯದಲ್ಲಿ ಪರಸ್ಪರ ಭೇಟಿಯಾಗಿ, ಪ್ರೀತಿಸಿ ವಿವಾಹವಾಗಿದ್ದಾರೆ.

    ಜಾನ್ ಅವರು ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ಐದು ವರ್ಷಗಳ ಕಾಲ ಸ್ನೇಹಿತರಾಗಿದ್ದ ನಾವು ನಂತರ ವಿವಾಹವಾದೆವು. ಮದುವೆಯಾಗುವುದಕ್ಕೂ ಮೊದಲು ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಬಯಸಿದ್ದೆವು. ಹೀಗಾಗಿ ಷಾರ್ಲೆಟ್ ಅವರು ಹ್ಯೂಸ್ಟನ್‍ನಲ್ಲಿ ಶಿಕ್ಷಕಿಯಾದರು. ನಾನು ಟೆಕ್ಸ್‍ನ ಪೋರ್ಟ್ ಆರ್ಥರಿನಲ್ಲಿ ಫುಟ್‍ಬಾಲ್ ಹಾಗೂ ಬಾಸ್ಕೆಟ್ ಬಾಲ್ ಕೋಚ್ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆನು ಎಂದು ತಿಳಿಸಿದ್ದಾರೆ.

    ಈ ದಂಪತಿ ಡಿಸೆಂಬರ್ 22, 1939ರಲ್ಲಿ ಕೇವಲ ಇಬ್ಬರ ಉಪಸ್ಥಿತಿಯಲ್ಲಿ ಮದುವೆಯಾಗಿದ್ದಾರೆ. ಹನಿಮೂನಿಗಾಗಿ ಸ್ಯಾನ್ ಆಂಟೋನಿಯೊ ಎಂಬ ಪುಟ್ಟ ಹೋಟೆಲ್‍ನಲ್ಲಿ ಕೇವಲ 7 ಡಾಲರ್(500 ರೂ.) ನೀಡಿ ರಾತ್ರಿ ಕಳೆದಿದ್ದಾರೆ.

    ಜಾನ್ ಅವರಿಗೆ 106 ವರ್ಷ ಹಾಗೂ ಷಾರ್ಲೆಟ್ ಅವರಿಗೆ 105 ವರ್ಷ ವಯಸ್ಸಾಗಿದೆ. ಈ ಇಬ್ಬರೂ ಮದುವೆಯಾಗಿ 80 ವರ್ಷಗಳಾಗಿದ್ದು, ಈ ಮೂಲಕ ಜಗತ್ತಿನ ಅತೀ ಹಿರಿಯ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಕಳೆದ ತಿಂಗಳು ಗಿನ್ನಿಸ್ ದಾಖಲೆಗೆ ಭಾಜನರಾಗಿದ್ದಾರೆ. ಇವರ ವಯಸ್ಸನ್ನು ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ಪರಿಶೀಲಿಸಲಾಗಿದೆ. ತಮ್ಮ ದೊಡ್ಡಪ್ಪ ಹಾಗೂ ದೊಡ್ಡಮ್ಮ ನವೆಂಬರಿನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಲು ಜಾಸನ್ ಅವರು ಗುರುತಿಸಿದ್ದಾರೆ.

    ಆರೋಗ್ಯಕರ ಆಹಾರ ಪದಾರ್ಥ ಸೇವಿಸುವುದು ಹಾಗೂ ಮದ್ಯ ಸೇವಿಸದಿರುವುದರಿಂದ ನಾವು ಇಷ್ಟು ವರ್ಷ ಬದುಕಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಜಾನ್ ಫಿಟ್ ಆಗಿರಲು ಸಮುದಾಯ ಜಿಮ್‍ನಲ್ಲಿ ಪ್ರತಿ ನಿತ್ಯ ವ್ಯಾಯಾಮ ಮಾಡುತ್ತಾರೆ. ಹೀಗಾಗಿ ಸ್ವಲ್ಪ ಕೂದಲುದುರುವಿಕೆಯನ್ನು ಬಿಟ್ಟರೆ ಇಬ್ಬರೂ ಆರೋಗ್ಯದಿಂದ ಇದ್ದಾರೆ.

    https://www.facebook.com/DoYouRemember/photos/a.354157741312964/3190889017639808/?type=3

    ಗಿನ್ನಿಸ್ ದಾಖಲೆಯ ಪ್ರಕಾರ, ಈ ಹಿಂದೆ ಜೆಲ್ಮಿರಾ ಹಾಗೂ ಹರ್ಬರ್ಟ್ ಫಿಶರ್ ಹಿರಿಯ ದಂಪತಿಯಾಗಿದ್ದರು. ಇವರು 19 ಹಾಗೂ 17ನೇ ವಯಸ್ಸಿನಲ್ಲಿ ಮದುವೆಯಾಗಿದ್ದರು. 2011ರಲ್ಲಿ ಹಾರ್ಬರ್ಟ್ ಸಾವನ್ನಪ್ಪುವುದಕ್ಕೂ 290 ದಿನಗಳ ಹಿಂದೆ ಜೋಡಿಗೆ 86 ವರ್ಷ ವಯಸ್ಸಾಗಿತ್ತು.

    https://www.facebook.com/115581995179112/photos/a.1637378306332799/3194552380615376/?type=3&theater

  • ಇದು ಕೇವಲ 3 ವರ್ಷಗಳ ಮದ್ವೆಯಲ್ಲ, ಸಂಬಂಧವನ್ನು ನಿರ್ಮಿಸುವ ಹಲವು ವರ್ಷಗಳು: ರಾಧಿಕಾ

    ಇದು ಕೇವಲ 3 ವರ್ಷಗಳ ಮದ್ವೆಯಲ್ಲ, ಸಂಬಂಧವನ್ನು ನಿರ್ಮಿಸುವ ಹಲವು ವರ್ಷಗಳು: ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯಾಗಿ ಇಂದಿಗೆ ಮೂರು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಧಿಕಾ ತಮ್ಮ ಇನ್‍ಸ್ಟಾದಲ್ಲಿ ಯಶ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

    ರಾಧಿಕಾ ತಮ್ಮ ಇನ್‍ಸ್ಟಾದಲ್ಲಿ ಯಶ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಅದಕ್ಕೆ, “ನಮಗೆ ನೆನಪಿಸಲು ನಾನು ಹಳೆ ಫೋಟೋವನ್ನು ಹಂಚಿಕೊಂಡಿದ್ದೇನೆ. ಫೋಟೋನ ಕ್ಲಾರಿಟಿಗಾಗಿ ಕ್ಷಮಿಸಿ. ಇದು ಕೇವಲ ಮೂರು ವರ್ಷಗಳ ಮದುವೆಯಲ್ಲ. ಆದರೆ ಇದು ಸಂಬಂಧವನ್ನು ನಿರ್ಮಿಸಿದ ಹಲವು ವರ್ಷಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಅವರಿಗೆ ಯಶ್ ತಾಳಿ ಕಟ್ಟಿದ್ದರು.

    ರಾಧಿಕಾ 2018 ಡಿಸೆಂಬರ್ 2ರಂದು ಐರಾಳಿಗೆ ಜನ್ಮ ನೀಡಿದ್ದರು. ಅಲ್ಲದೆ ಇತ್ತೀಚೆಗೆ ಮಗಳ ಮೊದಲ ಹುಟ್ಟುಹಬ್ಬವನ್ನು ಯಶ್ ಹಾಗೂ ರಾಧಿಕಾ ಅದ್ಧೂರಿಯಾಗಿ ಆಚರಿಸಿದ್ದರು. ಈಗ ರಾಧಿಕಾ ಎರಡನೇ ಬಾರಿ ತಾಯಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

  • ಅಂಬಿ-ಸುಮಲತಾರ 28ನೇ ವಿವಾಹ ವಾರ್ಷಿಕೋತ್ಸವ – ಸದಾ ನಿಮ್ಮನ್ನು ಪ್ರೀತಿಸುವೆ

    ಅಂಬಿ-ಸುಮಲತಾರ 28ನೇ ವಿವಾಹ ವಾರ್ಷಿಕೋತ್ಸವ – ಸದಾ ನಿಮ್ಮನ್ನು ಪ್ರೀತಿಸುವೆ

    – ಅಪರೂಪದ ವಿಡಿಯೋ ಶೇರ್

    ಬೆಂಗಳೂರು: ಇಂದು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾರ 28ನೇ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ಅಂಬಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸುಮಲತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಅಂಬರೀಶ್ ಮತ್ತು ಸುಮಲತಾ ಅವರು 1991ರ ಡಿಸೆಂಬರ್ 8 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಇವರಿಬ್ಬರು ಮದುವೆಯಾಗಿ 28 ವರ್ಷಗಳು ಕಳೆದಿದೆ. ಆದರೆ ಇಂದು ಸುಮಲತಾ ಅಗಲಿದ ಅಂಬಿ ಅವರ ನೆನಪಿನಲ್ಲಿದ್ದಾರೆ. ಹೀಗಾಗಿ ಸಂಸದೆ ಸುಮಲತಾ ಟ್ವೀಟ್ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯವನ್ನು ಕೋರಿದ್ದಾರೆ.

    “1991ರ ಡಿಸೆಂಬರ್ 8 ರಂದು ವಿವಾಹವಾಗಿದ್ದು, ಇಂದಿಗೆ 28 ವರ್ಷಗಳು ಆಗಿದೆ. ಇಷ್ಟು ವರ್ಷಗಳಲ್ಲಿ, ಹಂಚಿಕೆಯ, ಕಾಳಜಿಯ, ನಗುವ, ಅಳುವ, ಕಾಣೆಯಾಗುವ, ಹುಡುಕುವ, ಕತ್ತಲೆಯ, ಬೆಳಕಿನ, ಹತಾಶೆ, ಸಂತೋಷ, ಪ್ರೀತಿಯಿಂದ ಪ್ರೀತಿ ಇವೆಲ್ಲವೂ 28 ವರ್ಷಗಳೂ ಜೊತೆಯಾಗಿಯೇ ಇದ್ದವು. ಇವು ಯಾವಾಗಲೂ ಶಾಶ್ವತವಾಗಿ ಇರುತ್ತವೆ. ಸದಾ ನಿಮ್ಮನ್ನು ಪ್ರೀತಿಸುವೆ” ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ “ನಮ್ಮ 28ನೇ ವಿವಾಹ ವಾರ್ಷಿಕೋತ್ಸವ. ಈ ನೆನಪು ಒಂದು ಸ್ಮೈಲ್ ತರುತ್ತವೆ” ಎಂದು ಬರೆದುಕೊಂಡು ತಾವಿಬ್ಬರೂ ಅಭಿನಯಿಸಿದ್ದ ‘ತಾಯಿಗೊಬ್ಬ ಕರ್ಣ’ ಸಿನಿಮಾದ ರೊಮ್ಯಾಂಟಿಕ್ ಹಾಡನ್ನು ಶೇರ್ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೆ ವಿವಾಹ ವಾರ್ಷಿಕೋತ್ಸವಕ್ಕೆಂದು ಒಂದು ಅಪರೂಪದ ವಿಡಿಯೋ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಸುಮಲತಾ ಮತ್ತು ಅಂಬರೀಶ್ ಪೋಟೋಗಳು ಮತ್ತು ಒಟ್ಟಿಗೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ.

  • ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

    ಕಾರವಾರ: ಮದುವೆ ಎನ್ನುವುದು ಜೀವನದ ಪ್ರಮುಖ ಘಟನೆಯಲ್ಲಿ ಒಂದು. ಈ ವಿವಾಹವನ್ನು ವಾರ್ಷಿಕೋತ್ಸವನ್ನು ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ ದಂಪತಿ ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

    ಮುರುಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕೊಲ್ಲಾಪುರ ಮೂಲದ ಡಾ.ಚೇತನ್ ಮತ್ತು ದೀಪಿಕಾ.ಎಸ್ ರವರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಮುರುಡೇಶ್ವರ ಸಮುದ್ರದಾಳದಲ್ಲಿ 35 ನಿಮಿಷ ಪರಸ್ಪರ ಹೂವುಗಳನ್ನು ನೀಡಿ ಮೀನುಗಳ ಜೊತೆ ಈಜಾಡಿ ಸಂಭ್ರಮಿಸಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಇದಕ್ಕೆ ಮುರಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಾಹಸ ಸಂಸ್ಥೆ ವೇದಿಕೆ ಒದಗಿಸಿತ್ತು.

    ಮದುವೆಯಾದ ದಿನದ ಸವಿ ನೆನಪನ್ನು ಮರೆಯದ ರೀತಿ ನೆನಪಿರಬೇಕು ಎಂಬ ಹಂಬಲ ಹೊಂದಿದ್ದ ಈ ಜೋಡಿ ಆಯ್ಕೆ ಮಾಡಿಕೊಂಡಿದ್ದು ಸಮುದ್ರಾಳವನ್ನು. ಆದರೇ ಸಮುದ್ರದಾಳದಲ್ಲಿ ಇಳಿಯಲು ತಾಂತ್ರಿಕ ಪರಿಣಿತಿ ಬೇಕು. ಇವೆಲ್ಲದರ ನಡುವೆ ಹೆಚ್ಚು ಕಮ್ಮಿಯಾದರೂ ಪ್ರಾಣ ಪಕ್ಷಿ ಹಾರಿಹೋಗುವ ಭಯವೂ ಉಂಟು. ಹೀಗಾಗಿ ತಮ್ಮ ಈ ಬಯಕೆಯನ್ನು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಗಣೇಶ್ ರವರ ಬಳಿ ಹಂಚಿಕೊಂಡಿದ್ದರು.

    ದಂಪತಿಯ ಆಸೆಯನ್ನು ಈಡೇರಿಸಲು ಮುರುಡೇಶ್ವರದ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ನೇತ್ರಾಣಿ ದ್ವೀಪಕ್ಕೆ ಕರೆದೊಯ್ದು ಆಕ್ಸಿಜನ್ ತುಂಬಿದ ಸಿಲಿಂಡರ್ ಅಳವಡಿಸಿ ಸಮುದ್ರದಾಳಕ್ಕೆ ಕರೆದೊಯ್ದರು. ಇಲ್ಲಿ ಒಬ್ಬರಿಗೊಬ್ಬರು ಹೂ ಗುಚ್ಚ ನೀಡುವ ಮೂಲಕ ಸಂತಸದ ಮದುರ ಕ್ಷಣದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ 35 ನಿಮಿಷಕ್ಕೂ ಹೆಚ್ಚುಕಾಲ ಜೋಡಿಯಾಗಿ ಸಮುದ್ರದಾಳದಲ್ಲಿ ಮೀನುಗಳ ಜೊತೆ ಈಜಾಡಿ ಜೋಡಿ ಮೀನಿನಂತೆ ಸಂಚರಿಸಿ ಸಂತಸ ಪಟ್ಟು ಮದುರ ಗಳಿಗೆಯನ್ನು ಜೀವನದ ಮದುರ ಕ್ಷಣವಾಗಿ ದಾಖಲಿಸಿದರು.

  • ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿಕ್ – ಪ್ರಿಯಾಂಕಾ

    ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಿಕ್ – ಪ್ರಿಯಾಂಕಾ

    ಮುಂಬೈ: ಇಂಟರ್‌ನ್ಯಾಷನಲ್ ಜೋಡಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ನಿಕ್ ಹಾಗೂ ಪ್ರಿಯಾಂಕಾ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪರಸ್ಪರ ಶುಭ ಕೋರಿದ್ದಾರೆ.

    ಪ್ರಿಯಾಂಕಾ ತನ್ನ ಇನ್‍ಸ್ಟಾದಲ್ಲಿ ಮದುವೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, “ನಾನು ನೀಡಿದ ಮಾತು ಅಂದು, ಇಂದು ಹಾಗೂ ಶಾಶ್ವತವಾಗಿರುತ್ತೆ. ನೀವು ನನಗೆ ಖುಷಿ, ಗೌರವ, ಉತ್ಸಾಹ ಎಲ್ಲವನ್ನು ಒಂದೇ ಕ್ಷಣದಲ್ಲಿ ಕೊಟ್ಟಿದ್ದೀರಿ. ನನ್ನನ್ನು ಹುಡುಕಿದ್ದಕ್ಕಾಗಿ ಧನ್ಯವಾದಗಳು. ನನ್ನ ಪತಿ ನಿಕ್ ಜೋನಸ್‍ಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ಹಾಗೆಯೇ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ನಾವು ತುಂಬಾ ಅದೃಷ್ಟಶಾಲಿ ಎಂದು ಎನಿಸುತ್ತಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಇತ್ತ ನಿಕ್ ಜೋನಸ್ ಕೂಡ ಮದುವೆಯ ಸ್ಪಷೆಲ್ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. “ಒಂದು ವರ್ಷದ ಹಿಂದೆ ಈ ದಿನ ನಾವು ಜೊತೆಯಾಗಿ ಇರುವುದಾಗಿ ಪ್ರತಿಜ್ಞೆ ಮಾಡಿದ್ದೇವೆ. ನಾನು ನಿನ್ನನ್ನು ಮನಸ್ಫೂರ್ವಕವಾಗಿ ಇಷ್ಟಪಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕೂಡ ನಿಕ್ ಹಾಗೂ ಪ್ರಿಯಾಂಕಾ ಅವರ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್ ಜೋನಸ್ ಅವರಿಗೆ ಸ್ಪೆಷಲ್ ಸರ್ಪ್ರೈಸ್ ಆಗಿ ಗಿನೋ ಹೆಸರಿನ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಸರ್ಪ್ರೈಸ್ ನೋಡಿ ನಿಕ್ ಮೊದಲು ಶಾಕ್ ಆಗಿದ್ದರು. ಗಿನೋ ನಾಯಿಯ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಅದಕ್ಕೆ “ಒಂದೇ ಫ್ರೇಮ್ ನಲ್ಲಿ ಎಷ್ಟು ಕ್ಯೂಟ್ ಇದೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದರು.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕದಲ್ಲಿ ಮಾಡಿಕೊಂಡಿದ್ದರು.

  • ವಿವಾಹ ವಾರ್ಷಿಕೋತ್ಸವದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದೀಪ್‍ವೀರ್

    ವಿವಾಹ ವಾರ್ಷಿಕೋತ್ಸವದಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ದೀಪ್‍ವೀರ್

    ಹೈದರಾಬಾದ್: ಬಾಲಿವುಡ್ ಸ್ಟಾರ್ ಕಪಲ್ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.

    ದೀಪಿಕಾ ಹಾಗೂ ರಣ್‍ವೀರ್ ಕುಟುಂಬ ಸಮೇತ ತಿರುಪತಿಗೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಲು ಇಬ್ಬರು ನಿರ್ಧರಿಸಿದ್ದರು. ದಂಪತಿ ಮೊದಲು ತಿರುಪತಿಗೆ ಭೇಟಿ ನೀಡಿ ನಂತರ ಅಮೃತಸರ ಸ್ವರ್ಣ ಮಂದಿರದ ದರ್ಶನ ಪಡೆಯಲು ತೆರಳಿದರು.

    ತಿರುಪತಿಯಲ್ಲಿ ರಣ್‍ವೀರ್ ಹಾಗೂ ದೀಪಿಕಾ ನವವಧು-ವರರಂತೆ ಮಿಂಚಿದ್ದು, ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಫೋಟೋದಲ್ಲಿ ದೀಪಿಕಾ ಸಬ್ಯಾಸಾಚಿ ವಿನ್ಯಾಸದ ಕೆಂಪು ಬಣ್ಣದ ಸೀರೆ ಉಟ್ಟು, ಆಭರಣಗಳನ್ನು ಧರಿಸಿದ್ದಾರೆ. ಇತ್ತ ರಣ್‍ವೀರ್ ಗೋಲ್ಡನ್ ಕಲರ್ ಕುರ್ತಾ ಹಾಕಿದ್ದಾರೆ.

    ಕಳೆದ ವರ್ಷ ಎಂದರೆ ನ.14 ಹಾಗೂ 15ರಂದು ರಣ್‍ವೀರ್ ಹಾಗೂ ದೀಪಿಕಾ ಇಟಲಿಯ ಲೇಕ್ ಕೊಮೊದಲ್ಲಿ ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರು ಬೆಂಗಳೂರು ಹಾಗೂ ಮುಂಬೈನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜಿಸಿದ್ದರು.