– ಸೇನಾ ಮುಖ್ಯಸ್ಥ ರಾವತ್ ವಿರುದ್ಧ ಆನ್‍ಲೈನ್‍ನಲ್ಲಿ ಆಕ್ರೋಶ
– ಹುತಾತ್ಮ ಮಹಿಳಾ ಯೋಧರ ಮೃತದೇಹ ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದಿದ್ದ ಬಿಪಿನ್ ರಾವತ್
ನವದೆಹಲಿ: ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ನೇಮಕಾತಿಗೆ ಇರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಬಳಕೆದಾರರು, ರಾವತ್ ಹೇಳಿಕೆ ಸೇನೆಯನ್ನು ಮುಜುಗರಕ್ಕೀಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೇನಾ ಮುಖ್ಯಸ್ಥರು ಹೇಳಿದ್ದೇನು?: ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ರಾವತ್ ಅವರು, ಮಹಿಳಾ ನೇಮಕಾತಿಯ ಹಲವು ಆಯಾಮಗಳ ಬಗ್ಗೆ ಮಾತನಾಡಿದ್ದರು.
ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಲು ನಾನು ಸಿದ್ಧನಿದ್ದೇನೆ. ಆದರೂ ಸೇನೆಯಲ್ಲಿರುವ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದಿರುತ್ತಾರೆ. ಅವರೆಲ್ಲಾ ಮಹಿಳಾ ಕಮಾಂಡರ್ ಗಳು ತಮ್ಮ ನೇತೃತ್ವ ವಹಿಸುವುದನ್ನು ಒಪ್ಪಲ್ಲ ಎಂದು ಹೇಳಿದ್ದರು.

ಸೇನೆಯಲ್ಲಿ ಮಹಿಳೆಯರು ಎಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ಪಡೆಯಲ್ಲಿ ಅವರೇ ನಮ್ಮ ಶಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಯುದ್ಧಭೂಮಿಯಲ್ಲಿ ಆ ಮಹಿಳಾ ಯೋಧರು ಮೃತಪಡುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಅವರು ಯುದ್ಧಭೂಮಿಯಲ್ಲಿ ಸಾವನ್ನಪ್ಪಿದರೆ ಮೃತದೇಹ ಮನೆಗೆ ಮರಳಿದಾಗ ಅದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದು ಹೇಳಿದ್ದರು.
ಹಾಗಂತ ಅವರು ಬೇರೆಲ್ಲೂ ಸಾಯಲ್ಲ ಎಂದು ನಾನು ಹೇಳಲ್ಲ. ಮಕ್ಕಳನ್ನು ಹೊಂದಿರುವ ಮಹಿಳೆಯರು ರಸ್ತೆ ಅಪಘಾತಗಳಲ್ಲೂ ಸಾಯುತ್ತಾರೆ. ಆದರೆ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ನೋಡಲು ದೇಶ ಬಯಸುವುದೇ ಎಂದು ಪ್ರಶ್ನಿಸಿದರು.

ಯುದ್ಧರಂಗದಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡಲು ಸೇನೆ ಸಿದ್ಧವಿಲ್ಲ ಎಂದಲ್ಲ. ಒಂದು ವೇಳೆ ಕಮಾಂಡರ್ ಹುದ್ದೆ ನೀಡಿದರೆ ಅವರು ದೀರ್ಘಾವಧಿಗೆ ಕುಟುಂಬದ ಹೊಣೆಗಾರಿಕೆಯಿಂದ ದೂರ ಉಳಿಯಬಹುದೇ? ಆಗ ಅವರಿಗೆ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದು ನಿರ್ಬಂಧ ಹೇರಬಹುದೇ? ಎಂದು ಪ್ರಶ್ನಿಸಿದ ಅವರು ನಾನು ಹೀಗೆ ಹೇಳಿದರೆ ವಿವಾದಕ್ಕೆ ಗುರಿಯಾಗುತ್ತದೆ ಎಂದು ಹೇಳಿದ್ದಾರೆ.
ಟ್ಟೀಟ್ ನಲ್ಲಿ ಏನಿದೆ?:
ಬಟ್ಟೆ ಬದಲಾಯಿಸುವಾಗ ಯೋಧರು ಇಣುಕುವ ಸಾಧ್ಯತೆ ಇದೆ. ಹೀಗಾಗಿ ಮಹಿಳೆಯರಿಗೆ ಯುದ್ಧಭೂಮಿಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆ ಹಾಗೂ ದೇಶವನ್ನು ಮುಜುಗರಕ್ಕೀಡುಮಾಡಿದ್ದಾರೆ ಎಂದು ವಿಷ್ಣುಕಾಂತ್ ಶರ್ಮಾ ಎಂಬವರು ಟ್ವೀಟ್ ಮಾಡಿದ್ದಾರೆ.
https://twitter.com/Dibyendu69/status/1074174987802599425
ರಾವತ್ ಹೇಳಿಕೆ ನಿಜಕ್ಕೂ ಆಘಾತಕರ. ಅವರೀಗ ಸೇನೆ ಮತ್ತು ದೇಶವನ್ನು ಮುಜುಗರಕ್ಕೀಡುಮಾಡಲು ಶುರು ಮಾಡಿದ್ದಾರೆ. ಅವರ ನಿವೃತ್ತಿಗೆ ಇನ್ನೆಷ್ಟು ತಿಂಗಳುಗಳು ಬಾಕಿ ಇದೆ ಎಂದು ಪ್ರಶ್ನಿಸಿ ಜಸ್ಕಿರಾತ್ ಸಿಂಗ್ ನಗ್ರ ಎಂಬವರು ಕಿಡಿಕಾಡಿದ್ದಾರೆ.
ಮಹಿಳೆಯರಿಗೆ ಖಾಸಗಿತನ ನೀಡಲಾಗದ್ದರ ಬಗ್ಗೆ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಮತ್ತು ಬುದ್ಧಿ ಇಲ್ಲದವರು ಕೊನೆಗೆ ಸೇನೆ ಸೇರಿದಾಗ ಹೀಗಾಗಲು ಸಾಧ್ಯ ಎಂದು ಲಿಂಡ್ಸೆ ಪೆರೆರಾ ಎಂಬವರು ಬಿಪಿನ್ ರಾವತ್ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com