Tag: ವಿರೇನ್ ಖನ್ನಾ

  • ಡ್ರಗ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ವಿರೇನ್ ಖನ್ನಾ ಡ್ರಗ್ಸ್ ಪಾರ್ಟಿಯಲ್ಲಿ ಕ್ರಿಕೆಟ್ ಆಟಗಾರರು?

    ಡ್ರಗ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ – ವಿರೇನ್ ಖನ್ನಾ ಡ್ರಗ್ಸ್ ಪಾರ್ಟಿಯಲ್ಲಿ ಕ್ರಿಕೆಟ್ ಆಟಗಾರರು?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಜಾಲ ಪ್ರಕರಣದ ತನಿಖೆ ವೇಳೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ವಿರೇನ್ ಖನ್ನಾ ಪಾರ್ಟಿಗೆ ಕೇವಲ ನಟ, ನಟಿಯರು ಮಾತ್ರ ಬರುತ್ತಿರಲಿಲ್ಲ. ಖನ್ನಾ ಪಾರ್ಟಿಗೆ ರಾಜಕಾರಣಿಗಳು, ಉದ್ಯಮಿಗಳು ಜೊತೆಗೆ ಕ್ರಿಕೆಟ್ ಆಟಗಾರರು ಕೂಡ ಬರುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಮತ್ತೆ ಪೊಲೀಸ್ ಕಸ್ಟಡಿಗೆ ಕೇಳ್ಬೇಡಿ- ಅಧಿಕಾರಿಗಳ ಮುಂದೆ ರಾಗಿಣಿ, ಸಂಜನಾ ಗೋಳು

    ಸಿಸಿಬಿ ಪೊಲೀಸ್ ತಂಡ ವಿರೇನ್ ಖನ್ನಾನನ್ನು ದೆಹಲಿಯಿಂದ ಬಂಧಿಸಿ ಇಲ್ಲಿಗೆ ಕರೆದುಕೊಂಡು ವಿಚಾರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಖನ್ನಾ ಆಯೋಜನೆ ಮಾಡುತ್ತಿದ್ದ ಪಾರ್ಟಿಯಲ್ಲಿ ನಟ, ನಟಿಯರು, ರಾಜಕಾರಣಿಗಳು, ಉದ್ಯಮಿಗಳ ಮಕ್ಕಳು ಮಾತ್ರವಲ್ಲದೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರೂ ಕೂಡ ಬರುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ಯಾವ ಕ್ರಿಕೆಟ್ ಆಟಗಾರರು ಬರುತ್ತಿದ್ದರು, ಅವರಿಗೂ ಡ್ರಗ್ಸ್ ಸಪ್ಲೈ ಆಗುತ್ತಿತ್ತಾ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:  ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಪಾರ್ಟಿಗೆ ಕೇವಲ ನಟ, ನಟಿಯರು ಮಾತ್ರ ಬರುತ್ತಿರಲಿಲ್ಲ. ರಾಜಕಾರಣಿಗಳು, ಉದ್ಯಮಿಗಳು ಬರುತ್ತಿದ್ದರು. ಅಷ್ಟೇ ಅಲ್ಲದೇ ಕ್ರಿಕೆಟ್ ಆಟಗಾರರು ಕೂಡ ಬರುತ್ತಿದ್ದರು. ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ಆಟಗಾರರು ಪಾರ್ಟಿಗೆ ಬರುತ್ತಿದ್ದರು. ನನ್ನ ಪಾರ್ಟಿಗೆ ರಾಗಿಣಿ ಬಂದಿರುವುದು ಎರಡೇ ಸಲ. ಸಂಜನಾ ಮಾತ್ರ ಆಗಾಗ ಬರುತ್ತಿದ್ದರು ಎಂದು ತನಿಖಾಧಿರಿಗಳ ಮುಂದೆ ಇಂಟರ್ ನ್ಯಾಷನಲ್ ಸ್ಟಾರ್ ಹೆಸರುಗಳನ್ನು ಖನ್ನಾ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

    ಖನ್ನಾ ಸಿಸಿಬಿ ಲಿಸ್ಟ್‌ನಲ್ಲಿ ಇರುವ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರನ್ನು ಹೇಳಿಲ್ಲ. ಲೋಕಲ್ ನಲ್ಲಿ ಪಾರ್ಟಿಗೆ ಯಾರು ಬರುತ್ತಿದ್ದರು ಅನ್ನೋ ಪ್ರಶ್ನೆಗೆ ಖನ್ನಾ ಸೈಲೆಂಟ್ ಆಗಿದ್ದಾನೆ. ಯಾವುದೇ ರಾಜಕಾರಣಿಗಳ ಬಗ್ಗೆ ಮಾತನಾಡಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಖನ್ನಾನ ಒಂದು ಮೊಬೈಲ್ ಇನ್ನೂ ರಿಟ್ರೀವ್ ಆಗಿಲ್ಲ. ರಿಟ್ರೀವ್ ಆದ ಬಳಿಕ ಮತ್ತಷ್ಟು ಮಾಹಿತಿ ಹೊರ ಬರುವ ಸಾಧ್ಯತೆ ಇದೆ. ಹೀಗಾಗಿ ಸೋಮವಾರ ಕಸ್ಟಡಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

    ಆರೋಪಿಗಳು ವಾಟ್ಸಪ್ ಹಾಗೂ ಇನ್ಸ್ಟಾಗ್ರಾಮ್ ಗ್ರೂಪ್‍ನಲ್ಲಿ ಪಾರ್ಟಿಗಳ ಕುರಿತು ಚಾಟಿಂಗ್ ಮಾಡುತ್ತಿದ್ದರು. ಪಾರ್ಟಿ ಎಲ್ಲಿ ನಡೆಯುತ್ತೆ? ಯಾರೆಲ್ಲಾ ಬರುತ್ತಿದ್ದಾರೆ ಎಂದು ಕೂಡ ಚಾಟಿಂಗ್ ಮಾಡಿದ್ದಾರೆ. ಪಾರ್ಟಿ ಆಯೋಜನೆ ಸ್ಥಳದ ಲೊಕೇಷನ್ ಪಾರ್ಟಿ ಹಿಂದಿನ ದಿನ ಶೇರ್ ಆಗುತ್ತಿತ್ತು. ವಿರೇನ್ ಖನ್ನಾ ಆಯೋಜನೆ ಮಾಡುವ ಪ್ರತಿ ಪಾರ್ಟಿಯ ಮಾಹಿತಿ ಈ ಗ್ರೂಪ್‍ನಲ್ಲಿ ಶೇರ್ ಆಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಆರೋಪಿಗಳು ಬಂಧನಕ್ಕೂ ಮುನ್ನ ಎಲ್ಲರೂ ಗ್ರೂಪ್ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.

    ವಿಚಾರಣೆ ವೇಳೆ ಕೂಡ ಗ್ರೂಪ್‍ನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಇದೇ ಪಾರ್ಟಿಗಳಲ್ಲಿ ಡ್ರಗ್ಸ್ ಸಹ ಸರಬರಾಜು ಆಗಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಎಲ್ಲಾ ಮೊಬೈಲ್‍ನಲ್ಲಿ ಪಾರ್ಟಿ ಸಂಬಂಧ ಮಾಡಿರುವ ಮೆಸೇಜ್‍ಗಳು ರಿಟ್ರೀವ್ ಮಾಡಲಾಗುತ್ತಿದೆ. ಇಂದು ಸಿಸಿಬಿ ವಿರೇನ್ ಖನ್ನಾ, ವೈಭವ್ ಜೈನ್, ರವಿಶಂಕರ್ ಬಳಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ್ದು, ಎಲ್ಲಾ ಆರೋಪಿಗಳ ಮೊಬೈಲ್ ರಿಟ್ರೀವ್ ಆಗಿದ್ದ ರಿಪೋರ್ಟ್ ಸಿಸಿಬಿ ಕೈ ಸೇರಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಆರೋಪಿ ವಿರೇನ್ ಖನ್ನಾಗೆ ಸ್ಯಾಂಡಲ್‍ವುಡ್ ಅಷ್ಟೇ ಅಲ್ಲ ಬಾಲಿವುಡ್‍ನಲ್ಲೂ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ. ಸಿಸಿಬಿ ತನಿಖೆಯಲ್ಲಿ ಕಿಂಗ್ ಫಿನ್ ವಿರೇನ್ ಖನ್ನಾಗೆ ದೊಡ್ಡ ಜಾಲದ ಲಿಂಕ್ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ಪೇಡ್ಲರ್ ವಿರೇನ್ ಖನ್ನಾಗೆ ನಟಿ ರಾಗಿಣಿ ಮತ್ತು ಸಂಜನಾ ರೀತಿಯ ಸೆಲೆಬ್ರಿಟಿಗಳು ಸಾವಿರಾರು ಮಂದಿ ಪರಿಚಯ ಇದ್ದಾರೆ. ಅದರಲ್ಲೂ ದೊಡ್ಡ ಸೆಲೆಬ್ರಿಟಿಗಳನ್ನ ಖುಷಿಪಡಿಸಿ ಹಣ ಮಾಡುವುದೇ ಖನ್ನಾ ಕಾಯಕವಾಗಿದೆ. ಹೀಗಾಗಿ ಸಿಸಿಬಿ ಪೊಲೀದರು ಆರೋಪಿ ವಿರೇನ್ ಖನ್ನಾಗೆ ಬಾಲಿವುಡ್‍ನಲ್ಲಿರೋ ಸೆಲೆಬ್ರಿಟಿಗಳ ಲಿಂಕ್ ಪತ್ತೆ ಹಚ್ಚುತ್ತಿದ್ದಾರೆ.

  • ವೃತ್ತಿಯಲ್ಲಿ ಟೆಕ್ಕಿ, ಪ್ರವೃತ್ತಿಯಲ್ಲಿ ಡ್ರಗ್ಸ್ ದಂಧೆಯ ಕಿಂಗ್ ಪಿನ್- ವಿರೇನ್ ಖನ್ನಾ ಬಂಧನ

    – ದೆಹಲಿಯಲ್ಲಿದ್ದುಕೊಂಡೇ ಡ್ರಗ್ ಪಾರ್ಟಿ ಆಯೋಜನೆ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದಂಧೆಯ ಕಿಂಗ್‍ಪಿನ್ ವೀರೇನ್ ಖನ್ನಾ ಎಂಬಾತನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ ವಿರೇನ್ ಖನ್ನಾ ಡ್ರಗ್ ಪಾರ್ಟಿಗಳನ್ನು ಮಾಡಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಕುರಿತು ಖಚಿತ ಮಾಹಿತಿಗಳನ್ನು ಕಲೆಹಾಕಿದ್ದ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ಆತ ದೆಹಲಿಯಲ್ಲಿರುವ ಮಾಹಿತಿ ಲಭಿಸಿತ್ತು. ಕೂಡಲೇ ದೆಹಲಿಗೆ ತೆರಳಿದ ಸಿಸಿಬಿಯ ಇಬ್ಬರು ಪಿಎಸ್‍ಐಗಳು ಆರೋಪಿಯನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ವೃತ್ತಿಯಲ್ಲಿ ಟೆಕ್ಕಿಯಾಗಿರುವ ಆರೋಪಿ ಖನ್ನಾ ದೊಡ್ಡ ಪಾರ್ಟಿ ಆರೆಂಜ್ ಮಾಡುತ್ತಿದ್ದ. ನಾಳೆಯೂ ಬೆಂಗಳೂರಿನಲ್ಲಿ ದೊಡ್ಡ ಪಾರ್ಟಿ ನಡೆಸಲು ವೇದಿಕೆ ಸಿದ್ಧ ಮಾಡಿದ್ದ. ಈ ಪಾರ್ಟಿಗೆ ಸಂಬಂಧಿಸಿದ ಫೋಟೋವನ್ನು ಬಿಡುಗಡೆ ಮಾಡಿದ್ದ. ಬಂಧಿತ ಖನ್ನಾ ಮೂಲತಃ ಬೆಂಗಳೂರಿನ ನಿವಾಸಿಯೇ ಆಗಿದ್ದು, ದೆಹಲಿಯ ಮಥೂರ ರಸ್ತೆಯ ನಿವಾಸಿದಲ್ಲಿದ್ದುಕೊಂಡೇ ಬೇರೆ ಬೇರೆ ಪಾರ್ಟಿಗಳನ್ನು ಏರ್ಪಡಿಸಲು ಸಿದ್ಧತೆ ನಡೆಸುತ್ತಿದ್ದ. ಇಂತಹ ಪಾರ್ಟಿಗಳಿಗೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.