Tag: ವಿರಾಜಪೇಟೆ

  • ಚಿಕಿತ್ಸೆ ನೀಡಿಲ್ಲವೆಂದು ಖಾಸಗಿ ವೈದ್ಯರ ಮೇಲೆ ಮೂವರಿಂದ ಹಲ್ಲೆ

    ಚಿಕಿತ್ಸೆ ನೀಡಿಲ್ಲವೆಂದು ಖಾಸಗಿ ವೈದ್ಯರ ಮೇಲೆ ಮೂವರಿಂದ ಹಲ್ಲೆ

    ಮಡಿಕೇರಿ: ದೇಶದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಚಿಕಿತ್ಸೆ ನೀಡಲು ವೈದ್ಯರು ಸಿಬ್ಬಂದಿ ಕೊರತೆ ತೀವ್ರವಾಗಿದೆ. ಪರಿಸ್ಥಿತಿ ಹೀಗಿದ್ದರೂ ಮೂವರು ದುಷ್ಕರ್ಮಿಗಳು ಸೋಮವಾರ ಕ್ಷುಲ್ಲಕ ಕಾರಣಕ್ಕೆ ವೀರಾಜಪೇಟೆ ತಾಲೂಕಿನ ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಿವೇಕಾನಂದ ಪ್ರತಿಷ್ಠಾನದ ಆಸ್ಪತ್ರೆ ವೈದ್ಯ ಡಾ.ಜಿ ಹೊಸಮನಿ (70) ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ.

    ಘಟನೆಗೆ ಕಾರಣ:
    ಇಂದು ತಿತಿಮತಿ ಗ್ರಾಮದ ಸೈಯದ್ ಎಂಬವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೇ ಮಧ್ಯಾಹ್ನ 2:30ರ ಸುಮಾರಿಗೆ ಪ್ರಜ್ಞೆತಪ್ಪಿದ್ದಾರೆ. ಹೀಗಾಗಿ ಸೈಯದ್ ಹಾಗೂ ಆತನ ಸ್ನೇಹಿತರು ಚಿಕಿತ್ಸೆಗೆ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮಹಿಳೆಯನ್ನು ಯಾರು ಸರಿಯಾಗಿ ಗಮನಿಸಿಲ್ಲ. ಹೀಗಾಗಿ ಸ್ಥಳದಲ್ಲೇ ಇದ ಸೈಯದ್ ಫಿರೋಜ್ ಸಮೀರ್ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಅಷ್ಟೇ ಅಲ್ಲ ಮಾತಿಗೆ ಮಾತು ಬೆಳೆದು ಹಲ್ಲೆಗೆ ಮುಂದಾಗಿದ್ದಾರೆ. ಖಾಸಗಿ ವೈದ್ಯ ಡಾ.ಜಿ ಹೊಸಮನಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ವೈದ್ಯರ ಕೈ ಮೂಳೆ ಮುರಿದಿದೆ. ಬಳಿಕ ಹೊಸಮನಿ ಅವರಿಗೆ ಗೋಣಿಕೊಪ್ಪಲಿನ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಹಲ್ಲೆ ನಡೆಸಿದ ಮರಪಾಲದ ಫಿರೋಜ್, ಸಮೀರ್, ಎಡತೊರೆ ಸೈಯದ್‍ಆಲವಿ ಎಂಬವರನ್ನು ಗೋಣಿಕೋಪ್ಪ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ಟಿಪ್ಪರ್, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ದುರ್ಮರಣ

    ಟಿಪ್ಪರ್, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ದುರ್ಮರಣ

    -ಅಪಘಾತದ ರಭಸಕ್ಕೆ ಟಿಪ್ಪರ್ ಮುಂಭಾಗ ನಜ್ಜುಗುಜ್ಜು

    ಮಡಿಕೇರಿ : ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

    ವಿರಾಜಪೇಟೆಯ ನಿವಾಸಿ ಭರತ್ ಮತ್ತು ಕುಶಾಲನಗರದ ನಿವಾಸಿ ಕುಟ್ಟನ್ ಅಪಘಾತದಲ್ಲಿ ಸಾವನ್ನಪ್ಪಿದವರು. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ರಾಮನಗರದಲ್ಲಿ ಟಿಪ್ಪರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಭರತ್ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಕುಟ್ಟನ್ ಎಂಬವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ನೀಡುವ ಮೊದಲೇ ಕುಟ್ಟನ್ ಸಾವನ್ನಪ್ಪಿದ್ದಾರೆ.

    ಮುಖಾಮುಖಿ ಡಿಕ್ಕಿಯ ರಭಸಕ್ಕೆ ಬೈಕ್ ಮುಂಭಾಗದ ಚಕ್ರವೇ ಮುರಿದು ಬಿದ್ದಿದ್ದರೆ, ಟಿಪ್ಪರ್ ನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕ್ಷಣ ಕ್ಷಣಕ್ಕೂ ನದಿಗೆ ಕುಸಿದು ಬೀಳುತ್ತಿರುವ ರಸ್ತೆ-ಆತಂಕದಲ್ಲಿ ಗುಹ್ಯ ಗ್ರಾಮಸ್ಥರು

    ಕ್ಷಣ ಕ್ಷಣಕ್ಕೂ ನದಿಗೆ ಕುಸಿದು ಬೀಳುತ್ತಿರುವ ರಸ್ತೆ-ಆತಂಕದಲ್ಲಿ ಗುಹ್ಯ ಗ್ರಾಮಸ್ಥರು

    -ಪ್ರವಾಹ ಇಳಿಮುಖ, ಮುಳಗಡೆಯಾದ ಮನೆಗಳ ಸ್ವಚ್ಛತೆ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಹ ತಗ್ಗಿದರೂ ಅವಘಡಗಳು ಮಾತ್ರ ನಿಲ್ಲುತ್ತಿಲ್ಲ. ಸಿದ್ದಾಪುರದಿಂದ ಗುಹ್ಯ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಕ್ಷಣ ಕ್ಷಣಕ್ಕೂ ಕುಸಿಯುತ್ತಿದ್ದು, ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

    ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ರಸ್ತೆಯನ್ನು ಕಾವೇರಿ ನದಿ ಆಪೋಷಣೆ ತೆಗೆದುಕೊಳ್ಳುತ್ತಿದೆ. ಕಳೆದ ನಾಲ್ಕು ದಿನದಿಂದ ಪ್ರವಾಹದ ನೀರಿನಿಂದ ರಸ್ತೆ ಸಡಿಲಗೊಂಡಿದ್ದರಿಂದ ಕುಸಿಯಲಾರಂಭಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಸ್ತೆ ಮೂಲಕ ತೆರಳಲು ಗ್ರಾಮಸ್ಥರು ಭಯ ಪಡುವಂತಾಗಿದೆ.

    ಮುಳಗಡೆಯಾದ ಮನೆಗಳ ಸ್ವಚ್ಛತೆ: ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಸುರಿದಿದ್ದ ರಣಭೀಕರ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ಕೊಡಗಿನ ಹಲವು ಗ್ರಾಮಗಳು ಪ್ರವಾಹದಲ್ಲಿ ನಾಲ್ಕು ದಿನಗಳ ಕಾಲ ಮುಳುಗಿ ಹೋಗಿದ್ದವು. ಇದೀಗ ಪ್ರವಾಹದ ನೀರು ತಗ್ಗಿದ್ದು, ಜನರು ಮನೆಗಳ ಸ್ವಚ್ಛತೆಗೆ ಮುಂದಾಗಿದ್ದಾರೆ.

    ಕೊಡಗಿನ ಕುಶಾಲನಗರದ ಹಲವು ಬಡಾವಣೆಗಳು ಮುಳುಗಡೆಯಾಗಿದ್ದವು. ಅಲ್ಲದೆ ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ದಾಪುರ ಕರಡಿಗೋಡು, ಕುಂಬಾರಗುಂಡಿ, ಬೆಟ್ಟದಕಾಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಇದೀಗ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಇದೀಗ ಕೆಲ ಜನರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಕೆಲವರು ತಮ್ಮ ಮನೆಗಳನ್ನು ತೊಳೆದು ಸ್ವಚ್ಛಗೊಳಿಸುತ್ತಿದ್ದಾರೆ. ಮತ್ತೆ ಕೆಲವರು ಸಂಪುಗಳಿಗೆ ಗಲೀಜು ನೀರು ತುಂಬಿಕೊಂಡಿರುವುದರಿಂದ ಸಂಪಿನ ಇಡೀ ನೀರನ್ನು ಮೋಟರ್ ಗಳ ಮೂಲಕ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿದ್ದಾರೆ.

    ಇನ್ನು ಮಹಿಳೆಯರು ತಮ್ಮ ಮನೆಗಳ ವಸ್ತುಗಳನೆಲ್ಲಾ ತೆಗೆದು ಸ್ವಚ್ಛಗೊಳಿಸುತ್ತಿದ್ದಾರೆ. ಮತ್ತೊಂದೆಡೆ ಪ್ರವಾಹದ ನೀರು ತಗ್ಗುತ್ತಿದ್ದಂತೆ ಕುಶಾಲನಗರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪ್ರತೀ ಬೀದಿಗಳಿಗೆ ಬ್ಲೀಚಿಂಗ್ ಸಿಂಪಡಿಸಿದ್ದಾರೆ. ಪ್ರವಾಹದಲ್ಲಿ ತೇಲಿಬಂದಿದ್ದ ಅಪಾರ ಪ್ರಮಾಣದ ಕೆಸರು ಕಸಕಡ್ಡಿ ಪ್ರತೀ ಬಡಾವಣೆಯಲ್ಲಿ ಸಾಕಷ್ಟು ತುಂಬಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಬ್ಲೀಚಿಂಗ್ ಸಿಂಪಡಣೆ ಮಾಡಿದ್ದಾರೆ.

  • ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

    ಕಳೆದ ಬಾರಿ ಜಾಗದಲ್ಲೇ ಮತ್ತೆ ಭೂಕುಸಿತದ ಆತಂಕ

    -ಅಪಾಯದಂಚಿನಲ್ಲಿ 10 ಮನೆಗಳು

    ಮಡಿಕೇರಿ : ಕಳೆದ ಎರಡು ವರ್ಷಗಳಿಂದ ಕೊಡಗಿಗೆ ಪ್ರಕೃತಿ ಹೊಡೆತದ ಮೇಲೆ ಹೊಡೆತ ನೀಡುತ್ತಲೇ ಇದೆ. ಕಳೆದ ಬಾರಿಯ ಭಾರೀ ಮಳೆಯಿಂದ ತಡೆಗೋಡೆಯೊಂದು ಕುಸಿದು ಮನೆಯೊಂದು ಸಂಪೂರ್ಣ ನೆಲಸಮವಾಗಿತ್ತು. ಆದರೀಗ ಮತ್ತದೇ ಸ್ಥಳದಲ್ಲಿ ಭಾರೀ ಭೂಕುಸಿತವಾಗುವ ಆತಂಕದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ.

    ವಿರಾಜಪೇಟೆಯ ನೆಹರು ನಗರ ಬಡಾವಣೆಯಲ್ಲಿ ಕಳೆದ ಬಾರಿಯ ಮಳೆ ಸಂದರ್ಭ ತಡೆಗೋಡೆ ಸಂಪೂರ್ಣ ಕುಸಿದು ಬಿದ್ದಿತ್ತು. ಪರಿಣಾಮವಾಗಿ ಮಹಿಳೆಯೊಬ್ಬರ ಮನೆಯ ಮೇಲೆ ತಡೆಗೋಡೆ ಬಿದ್ದು, ಇಡೀ ಮನೆ ನೆಲಸಮವಾಗಿತ್ತು. ಮಳೆಗಾಲದ ಬಳಿಕ ಆ ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ಕೊಟ್ಟಿದ್ದ ಅಧಿಕಾರಿಗಳು ಮತ್ತೊಂದು ಮಳೆಗಾಲ ಆರಂಭವಾದರೂ ತಡೆಗೋಡೆ ನಿರ್ಮಿಸಿಲ್ಲ.

    ತಡೆಗೋಡೆ ನಿರ್ಮಿಸುವದಕ್ಕಾಗಿ ಬೇಸಿಗೆಯಲ್ಲೇ ದೊಡ್ಡ ಪ್ರಮಾಣದ ಅಡಿಪಾಯವನ್ನು ತೆಗೆದಿದ್ದಾರೆ. ಆದರೆ ಲಾಕ್‍ಡೌನ್ ಆಗಿದ್ದರಿಂದ ಅಷ್ಟಕ್ಕೆ ಕೆಲಸ ಸಂಪೂರ್ಣ ಸ್ಥಗಿತವಾಗಿದೆ. ಇದೀಗ ಮಳೆಗಾಲ ಆರಂಭವಾಗಿದ್ದು ಸುಮಾರು ಇಪ್ಪತ್ತು ಅಡಿಗೂ ಹೆಚ್ಚು ಎತ್ತರದ ಭೂಮಿ ಕುಸಿಯುವ ಭೀತಿ ಇದೆ.

    ಕಳೆದ ವರ್ಷವೇ ಭೂಮಿ ಕುಸಿದಿರುವ ಮೇಲ್ಭಾಗದಲ್ಲಿ 25 ಕ್ಕೂ ಹೆಚ್ಚು ಮನೆಗಳಿದ್ದು, ಹತ್ತು ಮನೆಗಳು ಸಂಪೂರ್ಣ ಅಪಾಯದಲ್ಲಿವೆ. ಮಳೆ ಸುರಿಯಲಾರಂಭಿಸಿದ್ದು, ಜಾಸ್ತಿಯಾದಲ್ಲಿ ಯಾವ ಸಂದರ್ಭದಲ್ಲಿಯಾದರೂ ಮನೆಗಳು ಕುಸಿದು ಬೀಳಲಿವೆ. ಸದ್ಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಕುಸಿದಿರುವ ಸ್ಥಳಕ್ಕೆ ಪ್ಲಾಸ್ಟಿಕ್ ಹೊದಿಸಿದ್ದಾರೆ. ಆದರೂ ಮಣ್ಣು ಮಾತ್ರ ಅದರೊಳಗೆ ಕುಸಿಯುತ್ತಲೇ ಇದೆ. ಹೀಗಾಗಿ ಜನರು ಜೀವ ಕೈಯಲ್ಲಿ ಬಿಗಿ ಹಿಡಿದು ಕಾಲ ದೂಡುತ್ತಿದ್ದಾರೆ.

    ಕಷ್ಟಪಟ್ಟು ಮಾಡಿದ ಮನೆ ಹೀಗಾಯಿತಲ್ಲಾ ಎನ್ನೋ ಆತಂಕದಲ್ಲಿ ಯೋಚಿಸಿ ಹಂಸ ಎಂಬವರ 65 ವರ್ಷದ ವೃದ್ಧ ಪತ್ನಿ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದಾರೆ. ಇತ್ತ ಮನೆಯೂ ಬೀಳುವ ಆತಂಕದಲ್ಲಿದ್ದು, ಅತ್ತ ಪತ್ನಿಯೂ ಆಸ್ಪತ್ರೆ ಸೇರಿರುವ ನೋವಿನಲ್ಲೇ ಕಾಲ ದೂಡುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದ್ದು ಭಾರೀ ಪ್ರಮಾಣದಲ್ಲಿ ಮಳೆ ಸುರಿದಲ್ಲಿ 10 ಮನೆಗಳು ನೆಲಸಮವಾಗುವ ಭಯದಲ್ಲೇ ಜನರು ಬದುಕುತ್ತಿದ್ದಾರೆ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಿ ಮುಂದೆ ಆಗುವ ಅಪಾಯ ತಪ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

  • ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ

    ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ಗುಂಡಿಕ್ಕಿ ಕೊಂದ ತಮ್ಮ

    ಮಡಿಕೇರಿ: ತಾಯಿಯೊಂದಿಗೆ ಜಗಳವಾಡಿದ ಅಣ್ಣನನ್ನೇ ತಮ್ಮನೊಬ್ಬ ಗುಂಡಿಕ್ಕಿ ಕೊಲೆಗೈದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದದಲ್ಲಿ ಇಂದು ನಡೆದಿದೆ.

    ಬಿಳಗುಂದದ ಸುರೇಶ್ (48) ಹತ್ಯೆಯಾದ ವ್ಯಕ್ತಿ. ಕುಮಾರ್ ಕೊಲೆಗೈದ ಆರೋಪಿ. ಇಬ್ಬರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದು, ಕುಮಾರ್ ಮದ್ಯದ ಮತ್ತಿನಲ್ಲಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

    ಸುರೇಶ್ ಇಂದು ಕುಮಾರ್ ತಾಯಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಕುಮಾರ್ ಏಕಾಏಕಿ ಮನೆಯಿಂದ ಗನ್ ತಂದು ಸುರೇಶ್ ಎದೆಗೆ ಶೂಟ್ ಮಾಡಿದ್ದಾನೆ. ಪರಿಣಾಮ ಎದೆಗೆ ಹೊಕ್ಕು ಸುರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆದರೆ ಇದನ್ನು ತಿಳಿಯದೆ ವಿರಾಜಪೇಟೆ ಆಸ್ಪತ್ರೆಗೆ ಸುರೇಶ್ ಮೃತದೇಹವನ್ನು ಸಾಗಿಸಲಾಗಿತ್ತು.

    ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿ ಹತ್ಯೆಗೈದಿದ್ದ ಪಾಪಿ ಕುಮಾರ್ ಘಟನಾ ಸ್ಥಳದಿಂದ ಪರಾರಿಯಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿರಾಜಪೇಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲೇ ಇರಿಸಿ, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸುರೇಶ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  • ಪಬ್ಲಿಕ್ ಟಿವಿ ವರದಿಗೆ ಮಿಡಿದ ಹೃದಯ

    ಪಬ್ಲಿಕ್ ಟಿವಿ ವರದಿಗೆ ಮಿಡಿದ ಹೃದಯ

    ಮಡಿಕೇರಿ: ಲಾಕ್‍ಡೌನ್ ಸಮಸ್ಯೆಯಿಂದ ಕೂಲಿಯೂ ಇಲ್ಲದೆ ಕನಿಷ್ಠ ಮಾತ್ರೆಗೂ ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ಔಷಧಿ ಪೂರೈಸುವ ಮೂಲಕ ಕೊಡಗಿನ ಆರತಿ ಎಂಬವರು ಮಾನವೀಯತೆ ಮೆರೆದಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಮತ್ತು ಲೀಲಮ್ಮ ದಂಪತಿಯ ಪುತ್ರ ಪ್ರವೀಣ್ ಬುದ್ಧಿಮಾಂದ್ಯನಾಗಿದ್ದು, ಈತನಿಗೆ ಬೇಕಾಗಿರುವ ಮಾತ್ರೆ ಕೊಳ್ಳಲು ಹಣವೂ ಇಲ್ಲದೆ ಕುಟುಂಬ ಪರದಾಡುತಿತ್ತು. ಒಂದೆಡೆ ಬಾಲಕನಿಗೆ ಮಾತ್ರೆ ಕೊಳ್ಳಲು ಹಣದ ಕೊರತೆ ಇದ್ದರೆ, ಮತ್ತೊಂದೆಡೆ ಬಾಲಕನ ತಂದೆ ಹರೀಶ್ ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರೂ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಹರೀಶ್ ಅವರ ಕುಟುಂಬ ಸಮಸ್ಯೆಯಲ್ಲಿತ್ತು.

    ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಗುರುವಾರ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಮಡಿಕೇರಿ ತಾಲೂಕಿನ ಪಾಲೂರಿನ ನಿವಾಸಿ ಆರತಿ ಬಾಲಕನಿಗೆ 3 ತಿಂಗಳಿಗೆ ಬೇಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

  • ಆದಿವಾಸಿ ಯುವಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಆರೋಪ

    ಆದಿವಾಸಿ ಯುವಕನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ಆರೋಪ

    ಮಡಿಕೇರಿ: ಕಟ್ಟಿಗೆ ತರಲು ಕಾಡಿಗೆ ಹೋಗಿದ್ದ ಆದಿವಾಸಿ ಯುವಕರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಲ್ಲೆ ನಡೆಸಿರುವ ಆರೋಪ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಸಮೀಪದ ಅಣ್ಣಿಗೇರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ದಿಡ್ಡಳ್ಳಿ ನಿವಾಸಿಗಳಾದ ನಾಗೇಶ್ ಹಾಗೂ ಸೋಮು ವಾಪಸ್ ಬರುವಾಗ ಅರಣ್ಯ ರಕ್ಷಕರಾದ ನಾಗೇಶ್ ಮತ್ತು ತಿಮ್ಮ ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದಿಡ್ಡಳ್ಳಿಯಿಂದ ಅಣ್ಣಿಗೇರಿಗೆ ಎಳೆದೊಯ್ದು ಮನ ಬಂದಂತೆ ಹಲ್ಲೆ ಮಾಡಿದ್ದಾರೆ. ಕೈ, ಕಾಲು ಭಾಗ ಊತ ಬರುವಂತೆ ಮನಸೋ ಇಚ್ಛೆ ಥಳಿಸಿದ್ದಾರೆ.

    ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಯೇ ಕತ್ತರಿಸಿ ನಮ್ಮ ವಿರುದ್ಧ ಸುಳ್ಳು ಹೇಳಿದ್ದಾರೆ. ಮೂಲ ನೆಲೆಗಳಲ್ಲಿ ಗೆಡ್ಡೆ, ಗೆಣಸು, ಮೇವು ಹಾಗೂ ಉರುವಲಿಗೆ ಒಣ ಮರಗಳನ್ನು ಬಳಸಿಕೊಳ್ಳುವ ಹಕ್ಕು ಆದಿವಾಸಿಗಳಿಗೆ ಇದೆ. ಹೀಗಿದ್ದರೂ ವಿನಾಃ ಕಾರಣ ಹಲ್ಲೆ ಮಾಡಿದ್ದಾರೆ. ಕೂಡಲೇ ಇಬ್ಬರನ್ನೂ ಅಮಾನತು ಮಾಡಬೇಕು. ಇದಕ್ಕೆಲ್ಲ ಕುಮ್ಮಕ್ಕು ನೀಡಿರುವ ಮತ್ತಿಗೋಡಿನ ಆರ್‍ಎಫ್‍ಓ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಕೊರೊನಾ ಎಫೆಕ್ಟ್: ಕಾಲಿಗೆ ನಮಸ್ಕರಿಸಲು ಬಂದ ಪ್ರತಾಪ್ ಸಿಂಹ, ತಡೆದ ಬೋಪಯ್ಯ

    ಕೊರೊನಾ ಎಫೆಕ್ಟ್: ಕಾಲಿಗೆ ನಮಸ್ಕರಿಸಲು ಬಂದ ಪ್ರತಾಪ್ ಸಿಂಹ, ತಡೆದ ಬೋಪಯ್ಯ

    – ‘ಮೈಸೂರಿನವರನ್ನು ಕಂಡ್ರೆ ಭಯ ನಾ ಸರ್..!’

    ಮಡಿಕೇರಿ: ಕೊರೋನಾ ವೈರಸ್‍ನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಸಲು ವಿರಾಜಪೇಟೆಗೆ ಸಂಸದ ಪ್ರತಾಪ್ ಸಿಂಹ, ಸಚಿವ ಸೋಮಣ್ಣ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾಲಿಗೆ ನಮಸ್ಕರಿಸಲು ಮುಂದಾದ ಪ್ರತಾಪ್ ಸಿಂಹ ಅವರನ್ನು ತಡೆದ ಶಾಸಕ ಬೋಪಯ್ಯ ಅವರು ದೂರದಿಂದಲೇ ನಮಸ್ಕರಿಸಲು ತಿಳಿಸಿದ ಘಟನೆ ನಡೆಯಿತು.

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರೊಂದಿಗೆ ವಿರಾಜಪೇಟೆಗೆ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಜಿ ಬೋಪಯ್ಯ ಅವರ ಕಾಲಿಗೆ ನಮಸ್ಕರಿಸಲು ಪ್ರತಾಪ್ ಸಿಂಹ ಮುಂದಾದರು. ಕೂಡಲೇ ಸಂಸದರನ್ನು ತಡೆದ ಬೋಪಯ್ಯ ಅವರು, ‘ದೂರವೇ ನಿಂತು ನಮಸ್ಕರಿಸಿ. ನೀವು ಮೈಸೂರಿನವರು ಸ್ವಲ್ಪ ಭಯವಾಗುತ್ತದೆ ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಂಸದರು, ‘ಮೈಸೂರಿನವರನ್ನು ಕಂಡ್ರೆ ಭಯ ನಾ ಸರ್..!’ ಎಂದು ಸ್ಥಳದಿಂದ ತೆರಳಿದರು. ಇತ್ತ ಪಕ್ಷದ ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಉಸ್ತುವಾರಿ ಸಚಿವರನ್ನು ಮುಗಿಬಿದ್ದು ಮಾತಾನಾಡಿಸುವ ದೃಶ್ಯ ಕಂಡು ಬಂತು.

    ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ತಿಳುವಳಿಕೆ ನೀಡಲಾಗುತ್ತಿದೆ. ಸಚಿವ ಸೋಮಣ್ಣ ಬಂದಿದ್ದ ವೇಳೆ ಸ್ಥಳೀಯರು, ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಬಿಜೆಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪದೇ ಪದೇ ಸೂಚನೆ ನೀಡಿದರು. ಪೊಲೀಸರ ಸೂಚನೆಯ ಬಳಿಕವೂ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಷ್ಯ ವಹಿಸಲಾಗಿತ್ತು.

  • ಎರಡೂವರೆ ತಿಂಗಳಲ್ಲಿ 29 ಜಾನುವಾರು ಬಲಿ- ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ

    ಎರಡೂವರೆ ತಿಂಗಳಲ್ಲಿ 29 ಜಾನುವಾರು ಬಲಿ- ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ

    – ಅರಣ್ಯ ಇಲಾಖೆಯ ಬೋನಿಗೆ ಬೀಳದ ಹುಲಿರಾಯ
    – ನಿದ್ದೆ ಇಲ್ಲದೆ ಟಾರ್ಚ್ ಹಿಡಿದು ಹಸುಗಳನ್ನು ಕಾಯುವ ಕೆಲಸ

    ಮಡಿಕೇರಿ: ವರ್ಷದ ಎಲ್ಲ ದಿನಗಳಲ್ಲೂ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು ಜಿಲ್ಲೆಯ ಜನರು ಇದೀಗ ಹುಲಿಯ ಹಾವಳಿಯಿಂದ ಭಯಗೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಸುತ್ತ ಕಳೆದ ಎರಡೂವರೆ ತಿಂಗಳಲ್ಲಿ ಹುಲಿ ದಾಳಿಗೆ ಸುಮಾರು 29 ಜಾನುವಾರುಗಳು ಬಲಿಯಾಗಿವೆ. ಇದು ಜನರನ್ನು ಆತಂಕಕ್ಕೆ ಉಂಟು ಮಾಡಿದ್ದು, ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಬೋನ್ ಇಟ್ಟು ಕಾಯುತ್ತಿದೆ.

    ಕಳೆದ ಒಂದೇ ತಿಂಗಳಲ್ಲಿ 15ಕ್ಕೂ ಹೆಚ್ಚು ಜಾನುವಾರುಗಳನ್ನು ಹುಲಿ ಕೊಂದು ತಿಂದಿದೆ. ವಿರಾಜಪೇಟೆ ತಾಲೂಕಿನ ಬಾಳೆಲೆ, ನಿಟ್ಟೂರು, ಹುದಿಕೇರಿ, ಬೆಳ್ಳೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಾನುವಾರುಗಳನ್ನು ಟಾರ್ಗೆಟ್ ಮಾಡಿ ಹುಲಿ ದಾಳಿ ನಡೆಸುತ್ತಿದೆ. ಈ ವ್ಯಾಪ್ತಿಯಲ್ಲಿ ಕೇವಲ ಒಂದೇ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಹುಲಿ ಸೆರೆಗಾಗಿ ಬೋನ್ ಇಟ್ಟಿದೆ. ಆದರೆ ಹುಲಿ ಬೋನ್ ಕಡೆ ಸುಳಿಯುತ್ತಲೇ ಇಲ್ಲ.

    ಜನರು ಹುಲಿಯ ಆತಂಕದಿಂದ ರಾತ್ರಿ ಇಡೀ ಟಾರ್ಚ್ ಹಾಕಿ ಜಾರುವಾರುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಹುಲಿ ದಾಳಿಯಿಂದಾಗಿ ಜಾರುವಾರುಗಳು ಸಾವನ್ನಪ್ಪಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕೇವಲ 2-3 ಸಾವಿರ ರೂ. ಪರಿಹಾರ ನೀಡುತ್ತಾರೆ. ಆದರೆ ಒಂದು ಜರ್ಸಿ ತಳಿಯ ಹಸುಗೆ ಕನಿಷ್ಠ 40 ರಿಂದ 50 ಸಾವಿರ ರೂ ಬೆಲೆ ಇದೆ. ಹೀಗಾಗಿ ಜಾನುವಾರುಗಳನ್ನು ಸಾಕಿಕೊಂಡು ಬದುಕು ದೂಡುತ್ತಿರುವ ಬಡ ರೈತರು ಹುಲಿ ದಾಳಿಯಿಂದ ಕಂಗಾಲಾಗಿದ್ದಾರೆ.

    ಶನಿವಾರ ಸಂಜೆ ಬೆಳ್ಳೂರು ಗ್ರಾಮದ ಗೋಪಾಲ್ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದೆ. ಈ ಹಿನ್ನೆಲೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುದಿಕೇರಿ ಹೋಬಳಿ ಸಂಚಾಲಕ ಸೂರಜ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಸ್ಥಳೀಯ ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ದಿನ ನಿತ್ಯ ಹುಲಿ ಹಾವಳಿಯಿಂದ ಗ್ರಾಮದಲ್ಲಿ ಜೀವನ ಮಾಡುವುದೇ ಕಷ್ಟವಾಗಿ ಸೂಕ್ತ ಪರಿಹಾರ ನೀಡಬೇಕು ಮತ್ತು ಅದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

  • ಸೂರಿಗಾಗಿ ಸಂತ್ರಸ್ತರಿಂದ ಪ್ರತಿಭಟನೆ

    ಸೂರಿಗಾಗಿ ಸಂತ್ರಸ್ತರಿಂದ ಪ್ರತಿಭಟನೆ

    ಮಡಿಕೇರಿ: ಪ್ರವಾಹದಲ್ಲಿ ಮನೆ ಕಳೆದುಕೊಂಡು ಆರು ತಿಂಗಳು ಕಳೆದರೂ ಸರ್ಕಾರ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೊಡಗಿನ ಸಂತ್ರಸ್ತರು ಅವಿರತ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

    ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಎದುರು ನೂರಕ್ಕೂ ಹೆಚ್ಚು ಕುಟುಂಬಗಳು ಧರಣಿ ಆರಂಭಿಸಿವೆ. ಪ್ರತಿಭಟನೆ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಕೊಡಗು ಉಪವಿಭಾಗಾಧಿಕಾರಿ ಜವರೇಗೌಡ, ವಿರಾಜಪೇಟೆ ತಹಶೀಲ್ದಾರ್ ಮಹೇಶ್ ದೌಡಾಯಿಸಿದರು. ಹದಿನೈದು ದಿನಗಳ ಒಳಗೆ ಜಾಗ ಗುರುತಿಸಿ ಸೈಟು ಹಂಚಿಕೆ ಮಾಡಲಾಗುವುದು, ಅಲ್ಲಿಯವರೆಗೆ ಪ್ರತಿಭಟನೆಯನ್ನು ಕೈಬಿಡುವಂತೆ ಎಸಿ ಜವರೇಗೌಡ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರತಿಭಟನೆಯನ್ನು ನಾವು ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

    ಇದುವರೆಗೆ ಯಾವುದೇ ಪರಿಹಾರ ನೀಡದಿರುವ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.