Tag: ವಿರಾಜಪೇಟೆ

  • ಗಣೇಶ ವಿಸರ್ಜನೆ ವೇಳೆ ನಿಯಮ ಉಲ್ಲಂಘನೆ – 64 ಮಂದಿ ವಿರುದ್ಧ ಪ್ರಕರಣ ದಾಖಲು

    ಗಣೇಶ ವಿಸರ್ಜನೆ ವೇಳೆ ನಿಯಮ ಉಲ್ಲಂಘನೆ – 64 ಮಂದಿ ವಿರುದ್ಧ ಪ್ರಕರಣ ದಾಖಲು

    ಮಡಿಕೇರಿ: ವಿರಾಜಪೇಟೆ (Virajpete) ಗಣೇಶ ವಿಸರ್ಜನೋತ್ಸವ (Ganesh Immersion) ಸಂದರ್ಭದಲ್ಲಿ ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿದ ಆರೋಪದಡಿ ಒಟ್ಟು 64 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

    ಶ್ರೀಮಂಗಲ ಪೊಲೀಸ್ ಉಪನಿರೀಕ್ಷಕ ರವೀಂದ್ರ ಒಂದು ಮಂಟಪ ಸಮಿತಿ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಇದನ್ನು ಒಟ್ಟು 16 ಸಮಿತಿಗಳ ಮಂಟಪಗಳಲ್ಲಿದ್ದ ಧ್ವನಿವರ್ಧಕಕ್ಕೆ ಸಂಬಂಧಿಸಿದ 64 ಮಂದಿಯ ವಿರುದ್ಧವೂ ಅನ್ವಯಿಸಿ ಕಲಂ 125, 285, 292, 36, 109 ಸೇರಿದಂತೆ ಕೆಪಿ ಕಾಯಿದೆ, 188 ಐಎಂವಿ ಕಾಯಿದೆಯಡಿಯೂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ಶಿವಕೇರಿಯ ಮಂಟಪದ ಮೆರವಣಿಗೆ ವೇಳೆ ದೊಡ್ಡ ಪ್ರಮಾಣದ ಧ್ವನಿವರ್ಧಕಗಳನ್ನು ವಾಹನದಲ್ಲಿಟ್ಟುಕೊಂಡು ತೆರಳುತ್ತಿದ್ದರು. ರಾತ್ರಿ 10ಗಂಟೆ ನಂತರ ಧ್ವನಿರ್ವಕ ಬಳಸದಂತೆ ಆಪರೇಟರ್‌ಗಳಿಗೆ ಸೂಚಿಸಿದರೂ ಇದನ್ನು ಪಾಲಿಸದೆ ಧ್ವನಿವರ್ದಕ ಬಳಕೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆ ಡಿಜೆ ಆಪರೇಟರ್, ಮಾಲೀಕ ಮದನ್ ಕೃಷ್ಣ, ಟೆಕ್ನೀಷಿಯನ್‌ಗಳಾದ ಪುನೀತ್, ಮೋಕ್ಷಿತ್ ವಿರುದ್ಧ ಕ್ರಮಕೈಗೊಳ್ಳುವಂತೆ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣ ದಾಖಲಾಗಿ, ಒಟ್ಟು 16 ಸಮಿತಿಗಳ ಮಂಟಪದಲ್ಲಿದ್ದ ಧ್ವನಿವರ್ಧಕ ಸಂಬಂಧಿತ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ.

    ಶಿವಕೇರಿಯ ವಿನಾಯಕ ಯುವ ಸಮಿತಿ, ಪಂಜರಪೇಟೆಯ ವಿನಾಯಕ ಸೇವಾ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಉತ್ಸವ ಸಮಿತಿ, ದಖನ್ನಿ ಮೊಹಲ್ಲದ ವಿಜಯ ವಿನಾಯಕ ಉತ್ಸವ ಸಮಿತಿ, ಪಟ್ಟಣ ಪಂಚಾಯಿತಿ ವಿಘ್ನೇಶ್ವರ ಉತ್ಸವ ಸಮಿತಿ, ಕೆ. ಬೋಯಿಕೇರಿಯ ಕೆಂಕೇರಮ್ಮ ವಿಘ್ನೇಶ್ವರ ಸಮಿತಿ, ಪಂಜರಪೇಟೆಯ ಮಹಾಗಣಪತಿ ಸೇವಾ ಸಮಿತಿ, ಸುಂಕದಕಟ್ಟೆಯ ವರಸಿದ್ಧಿ ವಿನಾಯಕ ಉತ್ಸವ ಸಮಿತಿ, ನೆಹರುನಗರದ ನೇತಾಜಿ ಉತ್ಸವ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ವಿನಾಯಕ ಉತ್ಸವ ಸಮಿತಿ, ತೆಲುಗರ ಬೀದಿಯ ವಿನಾಯಕ ಭಕ್ತ ಮಂಡಳಿ, ಅಯ್ಯಪ್ಪ ಬೆಟ್ಟದ ವರದ ವಿನಾಯಕ ಸೇವಾ ಸಮಿತಿ, ಸುಣ್ಣದ ಬೀದಿಯ ದೊಡ್ಡಮ್ಮ, ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ಗೌರಿಕೆರೆ ಗಣೇಶೋತ್ಸವ ಸಮಿತಿಯ ಮಂಟಪಗಳಲ್ಲಿದ್ದ ಡಿಜೆ ಮಾಲೀಕ, ಆಪರೇಟರ್, ಟೆಕ್ನೀಷಿಯನ್ ಹಾಗೂ ವಾಹನ ಚಾಲಕರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

    ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಬಂದ ನಂತರ ಪರಿಸರ ಕಾಯಿದೆಯ ಸೆಕ್ಷನ್ 15, ಕಾಯಿದೆ 1986 ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

  • ಹರ್ಷಿಕಾ ಪೂಣಚ್ಚ ಮಗಳ ಹೆಸರು ರಿವೀಲ್ – ದೇವಿ ಹೆಸರಿಟ್ಟ ದಂಪತಿ

    ಹರ್ಷಿಕಾ ಪೂಣಚ್ಚ ಮಗಳ ಹೆಸರು ರಿವೀಲ್ – ದೇವಿ ಹೆಸರಿಟ್ಟ ದಂಪತಿ

    – ಕೊಡವ ಸಂಪ್ರದಾಯದಂತೆ ನಾಮಕರಣ

    ಕೊಡಗಿನ ಕುವರಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿ ಭುವನ್ ಪೊನ್ನಣ್ಣ (Bhuvan Ponnanna) ದಂಪತಿ ಕೊಡವ ಸಂಪ್ರದಾಯದಂತೆ ಇಂದು ವಿರಾಜಪೇಟೆಯಲ್ಲಿ ಮುದ್ದು ಮಗಳ ನಾಮಕರಣ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಆಧುನಿಕ ಶೈಲಿಯ ಹೆಸರನ್ನಿಡುವ ಈ ಕಾಲದಲ್ಲಿ ಹರ್ಷಿಕಾ-ಭುವನ್ ಮಗಳಿಗೆ ವಿಭಿನ್ನವಾಗಿ ದೇವಿಯ ಹೆಸರನ್ನಿಟ್ಟಿದ್ದಾರೆ.

    ಹರ್ಷಿಕಾ-ಭುವನ್ ದಂಪತಿ ಮದುವೆ, ಸೀಮಂತ ಹೀಗೆ ಪ್ರತಿಯೊಂದು ಕಾರ್ಯಕ್ರಮವನ್ನೂ ಸಾಂಪ್ರದಾಯಿಕ ಶೈಲಿಯಲ್ಲೇ ಮಾಡಿಕೊಂಡು ಬಂದಿದ್ದರು. ಇದೀಗ ನವರಾತ್ರಿ ಮೊದಲ ದಿನ ಜನಿಸಿದ ಮಗಳಿಗೆ ‘ತ್ರಿದೇವಿ ಪೊನ್ನಕ್ಕ’ (Tridevi Ponnakkaah) ಎಂದು ಸಾಂಪ್ರದಾಯಿಕವಾಗಿ ನಾಮಕರಣ ಮಾಡಿದ್ದಾರೆ. ಮಗಳೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ಮಗಳ ಹೆಸರನ್ನು ದಂಪತಿ ರಿವೀಲ್ ಮಾಡಿದ್ದಾರೆ. ಕೊಡವ ಶೈಲಿಯಲ್ಲೇ ಮಗುವಿಗೆ ಉಡುಪನ್ನು ಧರಿಸಿದ್ದು ವಿಶೇಷವಾಗಿತ್ತು. ನಾಮಕರಣ ಕಾರ್ಯಕ್ರಮದಲ್ಲಿ ದಂಪತಿಯ ಕುಟುಂಬಸ್ಥರು, ಸಿನಿಮಾ ಕಲಾವಿದರು ಹಾಗೂ ಸ್ನೇಹಿತರು ಭಾಗಿಯಾಗಿದ್ದಾರೆ. ಇದನ್ನೂ ಓದಿ: 17 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್

    ಗರ್ಭಿಣಿಯಾಗಿದ್ದ ಸಂದರ್ಭದಲ್ಲೂ ಹರ್ಷಿಕಾ ಪೂಣಚ್ಚ ವೆಸ್ಟರ್ನ್ ಸ್ಟೈಲ್ ಅನುಸರಿಸದೇ ಸಾಂಪ್ರದಾಯಿಕವಾಗಿ ಕೊಡವ ಶೈಲಿಯಲ್ಲಿಯೇ ಫೋಟೋಶೂಟ್ ಮಾಡಿಸಿಕೊಂಡು ಗಮನಸೆಳೆದಿದ್ದರು. ಇವರ ಸೀಮಂತ ಕಾರ್ಯಕ್ರಮವನ್ನು ಸಹ ಅದ್ಧೂರಿಯಾಗಿ ನೆರವೇರಿಸಲಾಗಿತ್ತು. 2024ರ ಸೆಪ್ಟೆಂಬರ್ ತಿಂಗಳಲ್ಲಿ ಹರ್ಷಿಕಾ ಮುದ್ದಾದ ಹೆಣ್ಣುಮಗುವಿಗೆ ಜನ್ಮಕೊಟ್ಟರು.‌ ಇದನ್ನೂ ಓದಿ: ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?

  • ಮದುವೆ ಆಗದಿದ್ದಕ್ಕೆ ಜಿಗುಪ್ಸೆ – ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

    ಮದುವೆ ಆಗದಿದ್ದಕ್ಕೆ ಜಿಗುಪ್ಸೆ – ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

    ಮಡಿಕೇರಿ: ವಯಸ್ಸಾಗಿದ್ದರೂ ಮದುವೆ ಆಗದಿರುವುದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpet) ಹೊರವಲಯ ಕೆ.ಬೋಯಿಕೇರಿಯಲ್ಲಿ ನಡೆದಿದೆ.

    ಮೃತನನ್ನು ಮಡಿಕೇರಿ (Madikeri) ತಾಲೂಕು ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮ ನಿವಾಸಿ ಬಿ.ಪಿ.ಅನಿಲ್ ಕುಮಾರ್ ಅಲಿಯಾಸ್ ಸತೀಶ್ (40) ಎಂದು ಗುರುತಿಸಲಾಗಿದ್ದು, ಮರದ ಆಚಾರಿ ಕೆಲಸ ಮಾಡುತ್ತಿದ್ದ.ಇದನ್ನೂ ಓದಿ: ಪೂಜೆಯ ನೆಪದಲ್ಲಿ ಚಿನ್ನಾಭರಣ ದೋಚಿದ ಖತರ್‌ನಾಕ್‌ ಜೋಡಿ ಅಂದರ್‌!

    ಕುಟುಂಬ ನಿರ್ವಹಣೆಗಾಗಿ ಕೆಲಸ ಅರಸಿಕೊಂಡು ಬಂದ್ದಿದ್ದವರು ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳ ನಂತರ ಮೃತ ಸತೀಶ್‌ನ ಅಣ್ಣ ಬೆಳ್ಯಪ್ಪ ವಿರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ಮಳಿಗೆಯೊಂದನ್ನು ಬಾಡಿಗೆ ಪಡೆದಿದ್ದರು. ಅಲ್ಲಿ ಕೋವಿ ದುರಸ್ತಿ ಮಾಡುವ ಕೆಲಸವನ್ನು ಆರಂಭಿಸಿದರು. ಆದರೆ ಆಚಾರಿ ಕೆಲಸದ ಒತ್ತಡದಲ್ಲಿ ಸತೀಶ್ ಮದ್ಯ ಸೇವನೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದ.

    ಸತೀಶ್, ದೇವಯ್ಯ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದು, ತನ್ನ ತಾಯಿ ಮತ್ತು ಅಣ್ಣನೊಂದಿಗೆ ವಾಸವಾಗಿದ್ದರು. ಸಹೋದರರ ಮಧ್ಯೆ ಅನ್ಯೋನ್ಯ ಸಂಬಂಧವಿತ್ತು. ಹಿರಿಯಣ್ಣನಿಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಆದರೆ ವಯಸ್ಸು 40 ಆಗಿದ್ದರೂ ಕೂಡ ಸತೀಶ್‌ಗೆ ಮದುವೆಯಾಗಿಲ್ಲ ಎನ್ನುವ ಕೊರಗು ಕಾಡುತ್ತಿತ್ತು. ಇದರಿಂದ ಸತೀಶ್ ಕೂಡ ಆಗಾಗ ಸಾಯವ ವಿಚಾರವಾಗಿ ಮಾತನಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಭಾನುವಾರ ರಾತ್ರಿ ಸುಮಾರು 9:30ರ ವೇಳೆಗೆ ಮನೆಗೆ ಬಂದ ಸತೀಶ್ ಕೈಕಾಲು ತೊಳೆದು ಊಟಕ್ಕೆ ಸಿದ್ಧನಾಗಿದ್ದ. ಆದರೆ ಅಣ್ಣ ಮತ್ತು ತಾಯಿ ಇದ್ದರೂ ಕೂಡ ಏಕಾಏಕಿ ಎದ್ದು ಕೋಣೆಯೊಳಗೆ ಹೋದ. ಒಳಗೆ ಹೋಗಿ ಕೋಣೆಯಲ್ಲಿದ್ದ ಕೋವಿಯಿಂದ ತಲೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಿಣಾಮ ತಲೆ ಭಾಗ ಛಿದ್ರವಾಗಿದೆ.

    ರಾತ್ರಿ 09:45 ಸುಮಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಮಾಹಿತಿ ಬಂದಿದ್ದು, ಮೃತನ ಅಣ್ಣ ಬೆಳ್ಯಪ್ಪ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮೃತದೇಹವನ್ನು ಮಡಿಕೇರಿ ಶವಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆ – ಪಾರ್ಟಿಯಲ್ಲೇ ಸೇಹಿತನ ಕೊಲೆ

  • ಕೋಳಿ ಕಾಲು ಸುಡದಿದ್ದಕ್ಕೆ ಬಾಮೈದುನನ ಕೊಂದ ಬಾವ

    ಕೋಳಿ ಕಾಲು ಸುಡದಿದ್ದಕ್ಕೆ ಬಾಮೈದುನನ ಕೊಂದ ಬಾವ

    ಮಡಿಕೇರಿ: ಕೋಳಿ ಕಾಲು ಸುಡದಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬಾಮೈದುನನನ್ನು ಬಾವ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpete) ತಾಲ್ಲೂಕಿನ ಕದೆಮುಳ್ಳೂರು ತೋರ ಗ್ರಾಮದಲ್ಲಿ ನಡೆದಿದೆ.

    ಮೃತನನ್ನು 25 ವರ್ಷದ ಮಂಜು ಹಾಗೂ ಆರೋಪಿಯನ್ನು 34 ವರ್ಷದ ಅಭಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಗಾಯಕ ಪಿ.ಜಯಚಂದ್ರನ್‌ ಹಾಡಿದ್ದ ಕನ್ನಡದ ಸೂಪರ್‌ ಹಿಟ್‌ ಹಾಡುಗಳಿವು..

    ಮೃತ ಮಂಜು ತೋರ ಗ್ರಾಮದ ತೋಟದ ಅಚ್ಚಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ. ಮೃತ ಮಂಜು ತಂಗಿ ಕಾವ್ಯಳನ್ನು ಆರೋಪಿ ಅಭಿ ವಿವಾಹವಾಗಿದ್ದ. ಜ.07 ಮಂಗಳವಾರದಂದು ತೋಟದ ಕಾರ್ಮಿಕರಿಗೆ ಮುಂಗಡ ಸಂಬಳವನ್ನು ನೀಡಲಾಗಿತ್ತು. ಅಂದು ಸಂಜೆ ಮಂಜು ಮತ್ತು ಅರೋಪಿ ಅಭಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದರು. ತೋಟದ ಮಾಲೀಕರ ನಿರ್ದೇಶನದ ಮೇರೆಗೆ ರಾತ್ರಿ ಕಾಫಿ ಕಣದಲ್ಲಿ ಕಾವಲು ಕಾಯುವಂತೆ ತಿಳಿಸಿದ್ದರು. ಈ ವೇಳೆ ಕಾಫಿ ಕಣದಲ್ಲಿ ಕೋಳಿ ಕಾಲು ಸುಡಲು ಇಬ್ಬರು ಮುಂದಾಗಿದ್ದರು. ಆರೋಪಿ ಮೃತ ಮಂಜುಗೆ ನೀನು ಕೋಳಿ ಕಾಲು ಸುಡು, ನಾನು ಮನೆಯಿಂದ ಇಬ್ಬರಿಗೂ ಊಟ ತರುತ್ತೇನೆ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದ.

    ಮನೆಯಿಂದ ಅಭಿ ಹಿಂದಿರುಗಿದಾಗ ಮಂಜು ಕೋಳಿ ಕಾಲು ಸುಡದೆ ಏಕಾಂತದಲ್ಲಿ ಕುಳಿತಿದ್ದ. ಇದನ್ನು ಕಂಡು ಕೋಪಗೊಂಡ ಅಭಿ ಜಗಳಕ್ಕೆ ಮುಂದಾಗಿದ್ದ. ಈ ವೇಳೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ತನ್ನ ಬಳಿಯಿದ್ದ ಕತ್ತಿಯಿಂದ ಆರೋಪಿ ಮಂಜುವಿನ ತಲೆ ಭಾಗವನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಅಧಿಕ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಕೊಲೆ ಮಾಡಿದ ಬಳಿಕ ಮನೆಯಲ್ಲಿದ್ದ ಡಿಸೇಲ್ ತಂದು, ಮೃತದೇಹವನ್ನು ಅಭಿ ಸುಟ್ಟು ಹಾಕಿದ್ದಾನೆ. ಇದರಿಂದ ಸೊಂಟದ ಮೇಲಿನ ಭಾಗವು ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾರಿಗೂ ಗೊತ್ತಾಗಬಾರದು ಎಂದು ಮೃತದೇಹವನ್ನು ಹುಲ್ಲಿನಲ್ಲಿ ಅಡುಗಿಸಿಟ್ಟಿದ್ದ. ಬಳಿಕ ಮನೆಗೆ ಹಿಂದಿರುಗಿದಾಗ ಮನೆಯವರು ಮಂಜು ಎಲ್ಲಿ ಎಂದು ಕೇಳಿದಾಗ, ಗೊತ್ತಲ್ಲದಂತೆ ನಾಟಕವಾಡಿ ಮಲಗಿದ್ದ.

    ಮನೆಯವರು ರಾತ್ರಿಯೆಲ್ಲಾ ಮಂಜುಗಾಗಿ ಹುಡುಕಾಟ ನಡೆಸಿದ್ದಾರೆ. ಬಳಿಕ ಮುಂಜಾನೆಯು ತೋಟದಲ್ಲಿ ಹುಡುಕಾಟ ನಡೆಸಿದ್ದಾರೆ. ಕೊನೆಯಲ್ಲಿ ಜ.08 ರಂದು ತೋಟದ ಮಾಲೀಕರು ಮತ್ತು ಮೃತನ ತಂದೆ ಮಣಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಜು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಕೈಗೊಂಡು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ.ಇದನ್ನೂ ಓದಿ: ಸರ್ಕಾರಿ ನೌಕರರ ಆಸ್ತಿ ವಿವರ ಬಹಿರಂಗಕ್ಕೆ `ಲೋಕಾ’ದಿಂದ ಸಿಎಸ್‍ಗೆ ಪತ್ರ – ತಿರುಗಿಬಿದ್ದ ನೌಕರರು

    ಆರೋಪಿ ಅಭಿಯ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಬಿಎನ್‌ಎಸ್ ಸೆಕ್ಷನ್ ಅನ್ವಯ ಕೊಲೆ ಪ್ರಕರಣ ದಾಖಲಿಸಿದ್ದಾರೆ.

     

  • Kodagu | ವಿರಾಜಪೇಟೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ಜನರಲ್ಲಿ ಢವ ಢವ!

    Kodagu | ವಿರಾಜಪೇಟೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ – ಜನರಲ್ಲಿ ಢವ ಢವ!

    ಮಡಿಕೇರಿ: ವರ್ಷವಿಡೀ ಕಾಡಾನೆ ಹಾವಳಿಯಿಂದ ಕಂಗೆಡುತ್ತಿದ್ದ ಕೊಡಗು (Kodagu) ಜಿಲ್ಲೆಯ ಜನರು ಇದೀಗ ಹುಲಿಯ ಹಾವಳಿಯಿಂದ ಭಯಗೊಂಡಿದ್ದಾರೆ. ಇಲ್ಲಿನ ಗ್ರಾಮೀಣ ಭಾಗದಲ್ಲಿ ದನಕರುಗಳನ್ನು ಬಲಿ ಪಡೆಯುತ್ತಿದ್ದ ವ್ಯಾಘ್ರವೊಂದು ಇದೀಗ ವಿರಾಜಪೇಟೆ (Virajpet) ನಗರ ಪ್ರದೇಶದ ರಾಜ್ಯ ಹೆದ್ದಾರಿ ಬದಿಯಲ್ಲೇ ಕಾಣಿಸಿಕೊಂಡಿದೆ.

    ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆಯಲ್ಲಿರುವ ಕುಕ್ಲೂರು ಮುತ್ತಪ್ಪ ದೇವಸ್ಥಾನದ ಮುಂಭಾಗದಲ್ಲಿ ಹುಲಿ (Tiger) ರಸ್ತೆ ದಾಟುತ್ತಿರುವ ದೃಶ್ಯವನ್ನು ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಹಿನ್ನೆಲೆ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ – ಬಾಲಕನ ತಂದೆಗೆ ಬಿತ್ತು 25,000 ರೂ. ದಂಡ!

    ಅರಣ್ಯ ಇಲಾಖೆ ವಿರಾಜಪೇಟೆ ಡಿಸಿಎಫ್ ಜಗನ್ನಾಥ್, ಆರ್‌ಎಫ್‌ಒ ಶಿವರಾಮ್ ಮತ್ತು ಸಿಬ್ಬಂದಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದೆ. ಕಾರ್ಯಾಚರಣೆ ವೇಳೆ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪಟ್ಟಣದ ಪೂಮಾಲೆ ಮಂದ್ ಮೂಲಕ ವಿರಾಜಪೇಟೆ-ಮಡಿಕೇರಿ ಮುಖ್ಯರಸ್ತೆ ಬದಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

    ಹುಲಿ ಚಲನವಲನ ಪತ್ತೆಗೆ ಇಂದು (ಡಿ.18) ರಾತ್ರಿಯೇ ಕ್ಯಾಮೆರಾ ಅಳವಡಿಸಲು ಸಂಕೇತ್ ಪೂವಯ್ಯ ಸೂಚನೆ ನೀಡಿದ್ದಾರೆ. ಜೊತೆಗೆ ಕಾರ್ಯಾಚರಣೆಗೆ ಇನ್ನಷ್ಟು ಸಿಬ್ಬಂದಿ ಸೇರಿಸಿಕೊಳ್ಳಲು ಅರಣ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

    ಈ ಹಿಂದೆ ಸುಮಾರು ಎರಡೂವರೆ ತಿಂಗಳೂ ಕೊಡಗಿನ ಜನಕ್ಕೆ ಕಾಟ ಕೊಟ್ಟಿದ್ದ ಹುಲಿಯೊಂದು 29 ಜಾನುವಾರುಗಳನ್ನ ಬಲಿ ಪಡೆದಿತ್ತು. ಇದನ್ನೂ ಓದಿ: ಅತ್ತೆ ಮೇಲೆ ಮಚ್ಚು ಬೀಸಿ ಪರಾರಿಯಾಗುತ್ತಿದ್ದ ಅಳಿಯನನ್ನು ಬೆನ್ನಟ್ಟಿ ಹಿಡಿದ ಪೊಲೀಸರು

  • 18 ವರ್ಷಗಳ ಬಳಿಕ ವಿರಾಜಪೇಟೆ ಪುರಸಭೆ ಅಧಿಕಾರ ಹಿಡಿದ ಕಾಂಗ್ರೆಸ್

    18 ವರ್ಷಗಳ ಬಳಿಕ ವಿರಾಜಪೇಟೆ ಪುರಸಭೆ ಅಧಿಕಾರ ಹಿಡಿದ ಕಾಂಗ್ರೆಸ್

    ಮಡಿಕೇರಿ: ವಿರಾಜಪೇಟೆ ಪುರಸಭೆಯಲ್ಲಿ (Virajpet Municipality) ನಡೆದ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ 18 ವರ್ಷಗಳ ಬಳಿಕ ಕಾಂಗ್ರೆಸ್ (Congress) ಗದ್ದುಗೆ ಏರಿದೆ.

    ಎರಡನೇ ಅವಧಿ ಅಧ್ಯಕ್ಷರಾಗಿ ದೇಚಮ್ಮ ಕಾಳಪ್ಪ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಫೌಝಿಯಾ ತಬುಸಂ ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಪುರಸಭೆ ಒಟ್ಟು 18 ಸ್ಥಾನ ಬಲ ಹೊಂದಿದೆ. ದೇಚಮ್ಮ ಕಾಳಪ್ಪ 11 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪುರಸಭೆಯಲ್ಲಿ ಬಿಜೆಪಿಯ 8, ಕಾಂಗ್ರೆಸ್‌ನ 6, ಜೆಡಿಎಸ್ 1 ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಕಾನೂನು ಅರಿವು ಕಾರ್ಯಾಗಾರ

    ಬಿಜೆಪಿಯ (BJP) ಜೂನಾ ಸುನೀತಾ 8 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಚುನಾವಣಾಧಿಕಾರಿಯಾಗಿ ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಕರ್ತವ್ಯ ನಿರ್ವಹಿಸಿದರು. ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಚುನಾವಣೆಯಲ್ಲಿ ಭಾಗಿಯಾಗಿದ್ದರು. ಪೊನ್ನಣ್ಣನವರನ್ನು ಹೊತ್ತು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಪುರಸಭೆ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಮಂದಿ ಅಸ್ವಸ್ಥ

  • ವೃದ್ದೆಯನ್ನು ಕೊಂದ ಸಲಗವನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

    ವೃದ್ದೆಯನ್ನು ಕೊಂದ ಸಲಗವನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

    ಮಡಿಕೇರಿ: ವೃದ್ದೆಯನ್ನು ಕೊಂದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ಛಲ ಬಿಡದೇ ಕಾಡಿಗೆ ಅಟ್ಟಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ತಾಲ್ಲೂಕಿನ ಕೋಟೆ (Kote) ಗ್ರಾಮದಲ್ಲಿ ನಡೆದಿದೆ.

    ಆ.30 ರಂದು ಬೆಳಗ್ಗೆ ಕಾಡಾನೆಯೊಂದು ವೃದ್ದೆಯ ಮೇಲೆ ದಾಳಿ ನಡೆಸಿತ್ತು. ಹತ್ಯೆ ಮಾಡಿದ ಕಾಡಾನೆಯನ್ನು ಪತ್ತೆ ಹಚ್ಚುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು (Forest Department Officials) ಸಿಬ್ಬಂದಿಗೆ ಸೂಚನೆ ನೀಡಿದ್ದರು. ಸಿಬ್ಬಂದಿ ಕೈಗೆ ಸಿಗದೇ ಕಾಡಾನೆ ಸುತ್ತಾಡಿಸಿತ್ತು ಆದರೆ ಕಾರ್ಯಾಚರಣೆ ತಂಡದವರು ಛಲ ಬಿಡದೇ ಆನೆಯನ್ನು ಹುಡುಕಲು ಪ್ರಯತ್ನ ಪಟ್ಟಿದ್ದರು.ಇದನ್ನೂ ಓದಿ: ರಾಯಚೂರಲ್ಲಿ ಡೆತ್‌ನೋಟ್ ಬರೆದಿಟ್ಟು ಬಿಎ ವಿದ್ಯಾರ್ಥಿ ನೇಣಿಗೆ ಶರಣು

    ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಆರ್‌ಆರ್‌ಟಿ (RRT) ತಂಡದ ಸಿಬ್ಬಂದಿ ಬಾಡಗ ಬಾಣಂಗಾಲ ಹುಂಡಿ ಭಾಗದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿದರು. ಮಹಿಳೆಯನ್ನು ಹತ್ಯೆಗೈದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಕೊನೆಗೂ ಸಿಬ್ಬಂದಿ ಸೇರಿ ಚನ್ನಂಗಿ ಅರಣ್ಯಕ್ಕೆ ಅಟ್ಟಿದ್ದಾರೆ.

    ಈ ಕಾಡಾನೆಯು ಕಳೆದ ಮೂರು ತಿಂಗಳಿನಿಂದ ಇದೇ ವಸತಿ ಭಾಗದ ಸುತ್ತಲೂ ಸುತ್ತಾಡುತ್ತಿದ್ದು, ಹಿಂಸೆ ನೀಡುತ್ತಿತ್ತು. ಕಾಡಾನೆಯು ಹಿಂದಿರುಗಿ ಬರಬಹುದು ಎಂಬ ಭಯದಲ್ಲಿ ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

  • ನಿರ್ಮಾಣ ಹಂತದ ಬಾವಿಗೆ ಬಿದ್ದು ಕಾಡಾನೆ ಸಾವು

    ನಿರ್ಮಾಣ ಹಂತದ ಬಾವಿಗೆ ಬಿದ್ದು ಕಾಡಾನೆ ಸಾವು

    ಮಡಿಕೇರಿ: ತೆರೆದ ಬಾವಿಗೆ (Well) ಬಿದ್ದು ಕಾಡಾನೆ (Wild Elephant ) ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಾಲಂಗಾಲ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬಾವಿಯನ್ನು ಕೊರೆಯಲಾಗಿತ್ತು. ಸೋಮವಾರ ರಾತ್ರಿ 11 ಗಂಟೆಗೆ ನಿರ್ಮಾಣ ಹಂತದಲ್ಲಿದ್ದ ಬಾವಿಗೆ ಬಿದ್ದು ಆನೆ ಮೃತಪಟ್ಟಿದೆ. ಇದನ್ನೂ ಓದಿ: ದರ್ಶನ್‌ ಮನೆ ತೂಗುದೀಪ್ ನಿವಾಸಕ್ಕೂ ಸಂಚಕಾರ


    ಪಾಲೇಂಗಡ ಬಿದ್ದಪ್ಪ ಶಂಬು ಆವರ ಮನೆ ಮುಂದೆ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಆಧಿಕಾರಿಗಳು ಭೇಟಿ ನೀಡಿದ್ದಾರೆ.

  • ಹೃದಯಾಘಾತದಿಂದ ಮತದಾನ ಕೇಂದ್ರದ ಆವರಣದಲ್ಲೇ ಚಂಡೆ ವಾದಕ ನಿಧನ

    ಹೃದಯಾಘಾತದಿಂದ ಮತದಾನ ಕೇಂದ್ರದ ಆವರಣದಲ್ಲೇ ಚಂಡೆ ವಾದಕ ನಿಧನ

    – ಸಾಯುವ ಮೊದಲು ಮತದಾನ

    ಮಡಿಕೇರಿ: ಮತದಾನ (Voting) ಮಾಡಲು ಹೋಗಿದ್ದ ವ್ಯಕ್ತಿಯೋರ್ವರು ಮತದಾನ ಮಾಡಿ ಮತ ಕೇಂದ್ರದಿಂದ ಹೊರಬಂದ ತಕ್ಷಣವೇ ಹೃದಯಾಘಾತದಿಂದ (Heart Attack) ನಿಧನರಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ (Virajpete) ತಾಲೂಕಿನ ಬಿ.ಶೇಟಿಗೇರಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಖ್ಯಾತ ಚಂಡೆ ವಾದಕ ಪದಾರ್ಥಿ ಮನೋಹರ್ ಮತದಾನ ಕೇಂದ್ರಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮತದಾನ ಮಾಡುವ ವೇಳೆಯಲ್ಲೇ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಸುಸ್ತಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನಂತರ ಮತದಾನ ಕೇಂದ್ರದ ಒಳಗೆ ಹೋಗಿ ಮತದಾನ ಮಾಡಿ ಬಂದ ತಕ್ಷಣವೇ ಮತದಾನ ಕೇಂದ್ರದ ಅವರಣದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 50.93% ವೋಟಿಂಗ್‌ – ಎಂದಿನಂತೆ ಬೆಂಗಳೂರಿನಲ್ಲಿ ಕಡಿಮೆ ಮತದಾನ

    ಸಾಯುವ ಮುನ್ನ ತಮ್ಮ ಕರ್ತವ್ಯ ಮುಗಿಸಿ ಮನೋಹರ್ ಮೃತಪಟ್ಟಿದ್ದಾರೆ. ಸುತ್ತಮುತ್ತಲಿನ ಊರುಗಳಲ್ಲಿ ಮನೋಹರ್ ಅವರು ಚಂಡೆ ವಾದ್ಯದ ಮೂಲಕವೇ ಖ್ಯಾತಿಗಳಿಸಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಉಸಿರಾಟದ ಸಮಸ್ಯೆ; ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಬಂದು ಮತದಾರರಿಂದ ವೋಟ್

  • ಕೊನೆಗೂ ತಾಯಿ ಮಡಿಲು ಸೇರಿದ 2 ದಿನದ ಮರಿಯಾನೆ – ಅರಣ್ಯ ಇಲಾಖೆ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ

    ಕೊನೆಗೂ ತಾಯಿ ಮಡಿಲು ಸೇರಿದ 2 ದಿನದ ಮರಿಯಾನೆ – ಅರಣ್ಯ ಇಲಾಖೆ ಸಿಬ್ಬಂದಿಯ ಯಶಸ್ವಿ ಕಾರ್ಯಾಚರಣೆ

    ಮಡಿಕೇರಿ: ಮನೆಯೊಂದರ ಆವರಣದಲ್ಲಿ ಮರಿಯಾನೆಯೊಂದು (Baby Elephant) ಜನ್ಮ ಪಡೆದಂದೇ ತಾಯಿಯಿಂದ ದೂರವಾಗಿ ರೋಧನೆ ಮಾಡುತ್ತಿದ್ದ ಘಟನೆ ನಡೆದಿತ್ತು. ಸದ್ಯ ಇದೀಗ ಮರಿಯಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟು ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ಸಮೀಪದ ನರಿಯಂದಡ ಗ್ರಾಮಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡಿನ ಬಳಿ ಸೋಮವಾರ ತಡರಾತ್ರಿ ಕಾಡಾನೆಯೊಂದು (Elephant) ಮರಿ ಹಾಕಿ, ಜನರ ಗದ್ದಲದಿಂದ ಹೆದರಿ ಮರಿಯನ್ನು ಬಿಟ್ಟು ಕಾಡಿನೊಳಗೆ ಹೋಗಿತ್ತು. ಇದೀಗ ತಾಯಿ ಆನೆ ಜೊತೆ ಮರಿಯಾನೆಯನ್ನು ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಕರಡ ಗ್ರಾಮದ ಕೀಮಲೆ ಕಾಡಿನ ಮನೆಯೊಂದರ ಆವರಣದಲ್ಲಿ ಕಾಡಾನೆ ಮರಿ ಹಾಕಿತ್ತು. ಮಂಗಳವಾರ ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಮರಿಯನ್ನು ವೀಕ್ಷಿಸಲಾರಂಭಿಸಿದ್ದರು. ಇದರಿಂದ ವಿಚಲಿತವಾದ ಕಾಡಾನೆ ಮರಿಯನ್ನು ಬಿಟ್ಟು ತೆರಳಿತ್ತು. ಅಲ್ಲದೇ ಮರಿಯಾನೆಯನ್ನು ಬಿಟ್ಟು ಹೋದ ಹಿನ್ನೆಲೆಯಲ್ಲಿ ಅದರ ರೋಧನೆ ಮುಗಿಲು ಮುಟ್ಟಿತ್ತು. ಹೀಗಾಗಿ ಗ್ರಾಮಸ್ಥರು ಮರಿಯಾನೆಗೆ ಹಾಲು ಉಣಿಸಿ ಆರೈಕೆ ಮಾಡಿದ್ದರು. ಇದನ್ನೂ ಓದಿ: ಲಕ್ಷ್ಮೀ ಪೂಜೆಗಿಟ್ಟಿದ್ದ ವಜ್ರಾಭರಣ ಹೊತ್ತೊಯ್ದ ಕಳ್ಳರು

    ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಗೆ ಗ್ಲೂಕೋಸ್ ನೀಡಿ ಸ್ವಲ್ಪದೂರ ಎತ್ತಿಕೊಂಡು, ಸ್ವಲ್ಪ ದೂರ ಜೀಪ್‌ನಲ್ಲಿ ಕೊಂಡು ಹೊಗಿ ನಂತರ ಕಾಡಿನೊಳಗೆ ನಡೆಸಿಕೊಂಡು ಹಳ್ಳ, ಕೊಳ್ಳ ಹಾಗೂ ದಟ್ಟ ಅರಣ್ಯದ ನಡುವೆ ಸಾಗಿ ಮರಿಯಾನೆಯನ್ನು ಅಂತಿಮವಾಗಿ ತಾಯಿಯಾನೆಯೊಂದಿಗೆ ಸೇರಿಸಿದ್ದಾರೆ. ತಾಯಿ ಆನೆ ತನ್ನ ಮರಿಯನ್ನು ಬಿಟ್ಟು ಸುಮಾರು 7 ಕಿ.ಮೀ ದೂರ ಹೋಗಿರುವುದು ಅಪರೂಪ. ನಾವು ಕಾಡಿನೊಳಗೆ ಹುಡುಕಿಕೊಂಡು ಹೋಗಿ ಮರಿಯನ್ನು ತಾಯಿ ಆನೆಯೊಂದಿಗೆ ಸೇರಿಸಿದ್ದೇವೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

    ಸದ್ಯ ತಾಯಿ ಹಾಗೂ ಮರಿಯಾನೆ ಸ್ವಚ್ಛಂದವಾಗಿ ಕಾಡಿನೊಳಗೆ ಓಡಾಟ ನಡೆಸುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆ ಜಾತಿ ಈ ಜಾತಿ ಬಿಟ್ಟುಬಿಡಿ, ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು, ಒಗ್ಗಟ್ಟಿನಿಂದ ಕೆಲಸ ಮಾಡೋಣ: ವಿಜಯೇಂದ್ರ