Tag: ವಿಮಾನ ದುರಂತ

  • ವಿಮಾನ ಅಪಘಾತಕ್ಕೀಡಾಗಿ 12 ಮಂದಿ ದುರ್ಮರಣ

    ವಿಮಾನ ಅಪಘಾತಕ್ಕೀಡಾಗಿ 12 ಮಂದಿ ದುರ್ಮರಣ

    ಸ್ಯಾನ್ ಜೋಸ್: ಕೋಸ್ಟಾರಿಕಾದಲ್ಲಿ ವಿಮಾನ ಅಪಘಾತಕ್ಕೀಡಾಗಿ 12 ಮಂದಿ ಮೃತಪಟ್ಟ ಘಟನೆ ನಡೆದಿದೆ.

    ಕೊಸ್ಟಾರಿಕಾ ರಾಜಧಾನಿ ಸ್ಯಾನ್ ಜೋಸ್‍ನಿಂದ ಸುಮಾರು 230 ಕಿಮೀ ದೂರದಲ್ಲಿರೋ ಪ್ರಸಿದ್ಧ ಪ್ರವಾಸಿ ತಾಣ ಪಂಟಾ ಇಸ್ಲಿಟಾ ಎಂಬ ಶಿಖರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ 10 ಮಂದಿ ಅಮೆರಿಕ ಪ್ರಜೆಗಳು ಹಾಗೂ ಇಬ್ಬರು ಸ್ಥಳೀಯ ಪೈಲಟ್ ಗಳಾಗಿದ್ದಾರೆ ಎಂದು ಕೊಸ್ಟಾರಿಕಾ ಸರ್ಕಾರ ಹೇಳಿದೆ. ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದುಬರಬೇಕಿದೆ ಅಂತ ಅಲ್ಲಿನ ಭದ್ರತಾ ಸಚಿವಾಲಯ ತಿಳಿಸಿದೆ.

    ನಾಗರಿಕಾ ವಿಮಾನಯಾನ ಸಂಸ್ಥೆಯ ನಿರ್ದೇಶಕ ಎನಿಯೊ ಕುಬಿಲ್ಲೊ ಅವರು ಸ್ಥಳಿಯ ಮಾಧ್ಯಮಗಳ ಜೊತೆ ಘಟನೆ ಕುರಿತು ಮಾತನಾಡಿ, ಘಟನೆಯಲ್ಲಿ 10 ವಿದೇಶಿ ಪ್ರವಾಸಿಗರು ಹಾಗೂ ಇಬ್ಬರು ಸ್ಥಳೀಯ ಪೈಲೆಟ್ ಗಳು ದುರ್ಮರಣಕ್ಕೀಡಾಗಿದ್ದಾರೆ ಅಂತ ಹೇಳಿದ್ದಾರೆ.

    2010 ರಿಂದ 2014ರ ವರೆಗೆ ಕೋಸ್ಟಾರಿಕಾದ ಅಧ್ಯಕ್ಷರಾಗಿದ್ದ ಲಾರಾ ಚಿಂಚಿಲ್ಲಾ, ತನ್ನ ಸೋದರ ಸಂಬಂಧಿಯೊಬ್ಬರು ವಿಮಾನ ದುರಂತದಲ್ಲಿ ಮೃತಪಟ್ಟಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ. ದುರಂತದಿಂದಾಗಿ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ಮೃತರ ಪತ್ತೆಗೆ ಶವಪರೀಕ್ಷೆ ನಡೆಸಬೇಕಿದೆ ಎಂದು ಭದ್ರತಾ ಸಚಿವ ಗುಸ್ಟಾವೊ ಮಾತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ವೀಡಿಯೋ: ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದ ವಿಮಾನ- ಐವರ ಸಾವು

    ವೀಡಿಯೋ: ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದ ವಿಮಾನ- ಐವರ ಸಾವು

    ಮೆಲ್ಬೋರ್ನ್: ವಿಮಾನವೊಂದು ಶಾಪಿಂಗ್ ಮಾಲ್‍ಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಮೆಲ್ಬೋರ್ನ್‍ನ ಎಸ್ಸೆಂಡನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಬೀಚ್‍ಕ್ರಾಫ್ಟ್ ಸೂಪರ್‍ಕಿಂಗ್ ಏರ್ 200 ವಿಮಾನ ಹತ್ತಿರದಲ್ಲೇ ಇದ್ದ ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನದಲ್ಲಿದ್ದ ಪೈಲೆಟ್ ಹಾಗೂ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಎಂಜಿನ್ ಸಮಸ್ಯೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

    ವಿಮಾನದಲ್ಲಿದ್ದ ಪ್ರಯಾಣಿಕರು ಅಮೆರಿಕದವರಾಗಿದ್ದು ತಸ್ಮಾನಿಯಾದ ಕಿಂಗ್ ದ್ವೀಪಕ್ಕೆ ಗಾಲ್ಫ್ ಆಡಲು ತೆರಳುತ್ತಿದ್ದರು. ವಿಮಾನದ ಪೈಲೆಟ್ ಮ್ಯಾಕ್ ಕ್ವಾರ್ಟರ್‍ಮೈನ್‍ಗೆ ಪೈಲೆಟ್ ಆಗಿ ದಶಕಗಳ ಅನುಭವವಿತ್ತು ಎಂದು ಪತ್ರಿಕೆಗಳು ವರದಿ ಮಾಡಿವೆ.

    ಶಾಪಿಂಗ್ ಮಾಲ್ 10 ಗಂಟೆಗೆ ತೆರೆಯಬೇಕಿದ್ದರಿಂದ ಘಟನೆ ನಡೆದಾಗ ಮಾಲ್‍ನೊಳಗೆ ಗ್ರಾಹಕರಿರಲಿಲ್ಲ. ಅಲ್ಲದೆ ಮಾಲ್‍ನ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮಾಲ್‍ನವರು ಹೇಳಿಕೆ ನೀಡಿದ್ದಾರೆ. ಘಟನೆಯಿಂದ ಮಾಲ್‍ನ ಚಾವಣಿಗೆ ಹಾನಿಯಾಗಿದೆ. 60ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯ ನಿರ್ವಹಿಸಿ ಬೆಂಕಿ ನಂದಿಸಿದ್ದಾರೆ.

    ವಿಮಾನ ಶಾಪಿಂಗ್ ಮಾಲ್‍ಗೆ ಅಪ್ಪಳಿಸುವ ದೃಶ್ಯ ಕಾರ್‍ವೊಂದರ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ.

    https://www.youtube.com/watch?v=9nljpCEYdy8