Tag: ವಿಪತ್ತು ನಿರ್ವಹಣಾ ಇಲಾಖೆ

  • ಇಂಡೋನೇಷ್ಯಾ ಸುನಾಮಿಗೆ 222ಕ್ಕೂ ಹೆಚ್ಚು ಮಂದಿ ಬಲಿ

    ಇಂಡೋನೇಷ್ಯಾ ಸುನಾಮಿಗೆ 222ಕ್ಕೂ ಹೆಚ್ಚು ಮಂದಿ ಬಲಿ

    ಜಕಾರ್ತಾ: ಇಂಡೋನೇಷ್ಯಾದಲ್ಲಿ ಶನಿವಾರ ಸಂಭವಿಸಿದ ಸುನಾಮಿ ಆರ್ಭಟಕ್ಕೆ ಇಲ್ಲಿಯವರೆಗೆ ಸುಮಾರು 222 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

    ಸುನಾಮಿ ಅಬ್ಬರಕ್ಕೆ ಇಂಡೋನೇಷ್ಯಾದ ಜಾವಾ ಹಾಗೂ ಸುಮಾತ್ರಾ ದ್ವೀಪಗಳು ತತ್ತರಿಸಿ ಹೋಗಿದೆ. ಶನಿವಾರದಂದು ಅನಾಖ್ ಕ್ರಾಕಟೋ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಸಮುದ್ರದಲ್ಲಿ ಬೃಹತ್ ಅಲೆಗಳು ನಿರ್ಮಾಣವಾಗಿ ಸುನಾಮಿ ಸಂಭವಿಸಿತ್ತು. ಈ ಪ್ರಕೃತಿ ಅವಘಡದಿಂದ ಸುಮಾರು 745 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಲ್ಲಿಯವರೆಗೆ 222ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆ ಆಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಸುನಾಮಿ ಸಂಭವಿಸಿದ ದ್ವೀಪಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯ ಮುಂದುವರಿಸಿದೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದು, ಅಲ್ಲಿನ ಸರ್ಕಾರ ಅವರಿಗೆ ಆಶ್ರಯ ಕಲ್ಪಿಸುವ ಕಾರ್ಯದಲ್ಲಿದೆ.

    2004 ರ ಡಿಸೆಂಬರ್ ತಿಂಗಳಿನಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿ ಹೊಡೆತಕ್ಕೆ 13 ರಾಷ್ಟ್ರಗಳ ಸುಮಾರು 2.27 ಲಕ್ಷ ಜನರು ಮೃತಪಟ್ಟಿದ್ದರು. ಅದರಲ್ಲಿ 1.20 ಲಕ್ಷ ಮಂದಿ ಇಂಡೋನೇಷ್ಯಾದವರಾಗಿದ್ದರು. 2018ರ ಸೆಪ್ಟೆಂಬರ್ ನಲ್ಲಿ ಇಂಡೋನೇಷ್ಯಾದಲ್ಲಿ ಅಪ್ಪಳಿಸಿದ ಸುನಾಮಿಗೆ 2,500 ಮಂದಿ ಬಲಿಯಾಗಿದ್ದರು.

    ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ನೆರೆಯ ರಾಷ್ಟ್ರಗಳಾದ ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ನೆರವು ನೀಡುವುದಾಗಿ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv