Tag: ವಿಪಕ್ಷ ನಾಯಕ

  • ವಿಪಕ್ಷ ನಾಯಕನ ಸ್ಥಾನ ಬೇಡವೇ ಬೇಡ: ಡಿಕೆಶಿ

    ವಿಪಕ್ಷ ನಾಯಕನ ಸ್ಥಾನ ಬೇಡವೇ ಬೇಡ: ಡಿಕೆಶಿ

    ಬೆಂಗಳೂರು: ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ.

    ಬಿಜೆಪಿ ವಿರುದ್ಧ ಪ್ರಬಲ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಇದೆ. ಹೀಗಾಗಿ ಪ್ರಬಲ ನಾಯಕರ ರೇಸ್‍ನಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರೂ ಕೇಳಿಬಂದಿತ್ತು. ಆದರೆ ಅವರು ವಿಪಕ್ಷ ನಾಯಕ ರೇಸ್‍ನಿಂದ ಹಿಂದೆ ಸರಿದಿದ್ದು, ನನಗೆ ವಿಪಕ್ಷ ಸ್ಥಾನ ಬೇಡವೇ ಬೇಡ ಎಂದಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯಕ್ಕೆ ಡಿಕೆಶಿ ಯಾವುದೇ ಜವಾಬ್ದಾರಿ ವಹಿಸಿಕೊಳ್ಳದೆ ಸೈಲೆಂಟಾಗಿರಲು ತೀರ್ಮಾನಿಸಿದ್ದಾರೆ. ಜೊತೆಗೆ ಐಟಿ(ಆದಾಯ ತೆರಿಗೆ) ಹಾಗೂ ಇಡಿ(ಜಾರಿ ನಿರ್ದೇಶನಾಲಯ) ಸಮಸ್ಯೆಗಳನ್ನ ಪರಿಹರಿಸಿಕೊಳ್ಳುವತ್ತ ಗಮನ ಹರಿಸಲಿದ್ದಾರೆ. ಒಂದು ವರ್ಷದಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಹಾಗೂ ಬಿಜೆಪಿ ಸರ್ಕಾರದ ಆಯಸ್ಸನ್ನ ಗಮನದಲ್ಲಿಟ್ಟುಕೊಂಡು ಪಕ್ಷದ ಅಧ್ಯಕ್ಷ ಸ್ಥಾನವನ್ನು ಪಡೆಯುವ ಬಗ್ಗೆ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಒಂದು ವೇಳೆ ಬಿಜೆಪಿ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿ ನಡೆಯುವ ಲಕ್ಷಣ ಕಾಣಿಸಿದರೆ ಚುನಾವಣೆಗೆ ಒಂದು ವರ್ಷವಿರುವಾಗ ಕೆಪಿಸಿಸಿ ಗದ್ದುಗೆ ಏರುವ ಆಸೆಯನ್ನೂ ಡಿ.ಕೆ.ಶಿವಕುಮಾರ್ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಪಕ್ಷವನ್ನ ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಸ್ಥಾನಕ್ಕೇರುವ ಕನಸು ಟ್ರಬಲ್ ಶೂಟರದ್ದು ಎನ್ನಲಾಗುತ್ತಿದೆ. ಹೀಗೆ ಭವಿಷ್ಯದ ಪ್ಲಾನ್ ಗಾಗಿ ತಮ್ಮ ಇಂದಿನ ಅಧಿಕಾರದ ಆಸೆಯನ್ನು ಡಿಕೆಶಿ ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  • ಯಾರಿಗೆ ಒಲಿಯಲಿದೆ ವಿಪಕ್ಷ ನಾಯಕನ ಪಟ್ಟ – ರೇಸ್‍ನಲ್ಲಿ ಮೂವರು ‘ಕೈ’ ಲೀಡರ್ಸ್

    ಯಾರಿಗೆ ಒಲಿಯಲಿದೆ ವಿಪಕ್ಷ ನಾಯಕನ ಪಟ್ಟ – ರೇಸ್‍ನಲ್ಲಿ ಮೂವರು ‘ಕೈ’ ಲೀಡರ್ಸ್

    ಬೆಂಗಳೂರು: ಅಧಿಕಾರ ಕಳೆದುಕೊಂಡ ಕೈ ಪಾಳಯದಲ್ಲಿ ವಿಪಕ್ಷ ನಾಯಕ ಯಾರಾಗುತ್ತಾರೆ ಅನ್ನೋ ಚರ್ಚೆ ಇದೀಗ ಜೋರಾಗಿದೆ.

    ಸೋಮವಾರ ಬಿಜೆಪಿ ಬಹುಮತ ಸಾಬೀತು ಹಾಗೂ ಸದನ ಕೂಡ ನಡೆಯಲಿರುವುದರಿಂದ ವಿಪಕ್ಷ ನಾಯಕನ ಆಯ್ಕೆ ನಡೆಯಲೇಬೇಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿದ್ದರಾಮಯ್ಯ, ಆರ್ ವಿ ದೇಶಪಾಂಡೆ ಹಾಗೂ ಹೆಚ್. ಕೆ ಪಾಟೀಲ್ ಹೆಸರು ಕೇಳಿ ಬರುತ್ತಿದೆ.

    ವಿರೋಧ ಪಕ್ಷದಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ಪಡೆಯಲಿದ್ದು, ಕೈ ನಾಯಕರ ಪೈಕಿ ಯಾರಿಗೆ ವಿಪಕ್ಷ ಸ್ಥಾನ ಒಲಿಯಲಿದೆ ಎನ್ನುವ ಕುತೂಹಲ ಹಾಗೆಯೇ ಇದೆ. ಈ ಚರ್ಚೆಗೆ ಇಂದು ಬ್ರೇಕ್ ಬೀಳಲಿದ್ದು, ವಿಪಕ್ಷ ನಾಯಕ ಯಾರಾಗುತ್ತಾರೆ ಅನ್ನೋದು ಗೊತ್ತಾಗಲಿದೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನದ ರೇಸ್‍ನಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಆದರೆ ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯರ ಪಾತ್ರವಿದೆ ಎಂಬ ಆರೋಪ ಹೈಕಮಾಂಡ್ ಮಟ್ಟದಲ್ಲಿದ್ದರಿಂದ ಅವರ ಬಲ ಕುಗ್ಗಿಸಿದೆ ಎನ್ನಲಾಗುತ್ತಿದೆ.

    ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯರನ್ನು ನಂಬದೇ ಬೇರೆಯವರಿಗೆ ಮಣೆ ಹಾಕಿದರೆ ಹೆಚ್.ಕೆ.ಪಾಟೀಲ್ ಅಥವಾ ಆರ್.ವಿ.ದೇಶಪಾಂಡೆ ವಿರೋಧ ಪಕ್ಷದ ನಾಯಕರ ರೇಸ್‍ಗೆ ಬರಲಿದ್ದಾರೆ. ಈ ಮೂವರಲ್ಲಿ ವಿಪಕ್ಷ ನಾಯಕನ ಸ್ಥಾನ ಯಾರ ಪಾರಾಗಲಿದೆಯೋ ಗೊತ್ತಿಲ್ಲ.

    ಸೋಮವಾರವೇ ಅಧಿವೇಶನ ಹಾಗೂ ಬಹುಮತ ಸಾಬೀತು ಪ್ರಕ್ರಿಯೆ ನಡೆಯಬೇಕಿರುವುದರಿಂದ ಇಂದೇ ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿಯಬೇಕಿದೆ. ಕಾಂಗ್ರೆಸ್ ಹೈಕಮಾಂಡ್ ಒಲವು ಯಾರ ಕಡೆಗಿದೆ ಎಂಬುದು ಸದ್ಯದ ಕುತೂಹಲವಾಗಿದೆ.

  • ಕತ್ತೆ ಕಾಯಲು ಹೋಗಿದ್ರಾ..?- ಅಧಿಕಾರಿಗಳಿಗೆ ಬಿಎಸ್‍ವೈ ತರಾಟೆ

    ಕತ್ತೆ ಕಾಯಲು ಹೋಗಿದ್ರಾ..?- ಅಧಿಕಾರಿಗಳಿಗೆ ಬಿಎಸ್‍ವೈ ತರಾಟೆ

    ಚಿತ್ರದುರ್ಗ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಚಳ್ಳಕೆರೆ ತಾಲೂಕಿನ ದೊಡ್ಡಚೆಲ್ಲೂರು ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡು 20 ದಿನ ಕಳೆದರೂ ಅಧಿಕಾರಿಗಳು ಭೇಟಿ ನೀಡಿಲ್ಲ. ಅಲ್ಲಿನ ತಹಶೀಲ್ದಾರ್ ಕತ್ತೆ ಕಾಯಲು ಹೋಗಿದ್ದಾರಾ? ನಿಮ್ಮ ಮನೆಯಲ್ಲಿ ಇಂತಹ ಘಟನೆ ನಡೆದಿದ್ದರೆ ಸುಮ್ಮನೆ ಇರುತ್ತಿದ್ರಾ..? ಏನ್ ನಿಮ್ಮ ತಲೆ ಮಾಹಿತಿ ಸಂಗ್ರಹ ಮಾಡುವುದು. ರೈತ ಆತ್ಮಹತ್ಯೆ ಮಾಡಿಕೊಂಡ 24 ಗಂಟೆಯ ಒಳಗಾಗಿ ನೀವು ಭೇಟಿ ನೀಡಬೇಕಿತ್ತು. ಕುಟುಂಬಸ್ಥರಿಗೆ ಧೈರ್ಯ ಹೇಳಬೇಕಿತ್ತು. ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರೆ ನೀವು ತಮಾಷೆ ನೋಡುತ್ತಾ ಕುಳಿತುಕೊಳ್ಳುತ್ತೀರಾ ಎಂದು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.

    ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ. ನೀವು ಹೇಗೆ ಮಾಹಿತಿ ಪಡೆದಿದ್ದೀರಿ ಅಂತ ನನಗೆ ಗೊತ್ತಿಲ್ಲ. ಆದಷ್ಟು ಬೇಗ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಸ್ಥರಿಗೆ ಪರಿಹಾರ ಸಿಗುವ ವ್ಯವಸ್ಥೆ ಮಾಡಿ ಎಂದ ಅವರು, ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 100 ರಷ್ಟು ಬೆಳೆನಾಶವಾಗಿದೆ. ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವಲ್ಲಿ ವಿಫಲವಾಗಿರುವಿರಿ. ನರೇಗಾ ಯೋಜನೆ ಅವ್ಯವಹಾರದ ಬಗ್ಗೆ ಎಚ್ಚರ ವಹಿಸಿ ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

    ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

    ನವದೆಹಲಿ: ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲ ರಚನೆಯ ಚರ್ಚೆ ಕುರಿತ ಸಭೆಗೆ ಪ್ರಧಾನಿ ಮೋದಿ ಆಹ್ವಾನವನ್ನು ತಿರಸ್ಕರಿಸಿದ್ದು, ಸಭೆಗೆ ಗೈರು ಹಾಜರಾಗುವ ಕುರಿತು ಪತ್ರ ಬರೆದಿದ್ದಾರೆ.

    ತಮ್ಮ ಗೈರು ಹಾಜರಿಗೆ ಕಾರಣವನ್ನು ತಿಳಿಸಿರುವ ಖರ್ಗೆ ಪೂರ್ಣ ಪ್ರಮಾಣದಲ್ಲಿ ಲೋಕಪಾಲ ಆಯ್ಕೆ ಸಮಿತಿ ನೇಮಕವಾಗುವರೆಗೂ, ಕಾಂಗ್ರೆಸ್ ವಿರೋಧಿ ಪಕ್ಷವಾಗಿ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ತಮಗೆ ನೀಡಿದ ವಿಶೇಷ ಆಹ್ವಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮಗೆ ವಿಶೇಷ ಆಹ್ವಾನಿತ ಎಂಬ ಮನ್ನಣೆ ಬೇಡ, ಅತಿ ದೊಡ್ಡ ವಿರೋಧಿ ಪಕ್ಷದ ನಾಯಕನಿಗೆ ಸಮಿತಿಯಲ್ಲಿ ಸ್ಥಾನ ನೀಡಬೇಕು. ವಿಶೇಷ ಆಹ್ವಾನದ ಮೇರೆಗೆ ಯಾವುದೇ ಅಧಿಕಾರವಿರುವುದಿಲ್ಲ. 2013 ರ ಲೋಕಪಾಲ ಕಾಯ್ದೆಯ ಸಮಿತಿ ರಚನೆಯಾಗಬೇಕು ಎಂದು ತಿಳಿಸಿದ್ದಾರೆ.

    ಒಂದೊಮ್ಮೆ ಸರ್ಕಾರಕ್ಕೆ ಲೋಕಪಾಲ ರಚನೆ ಕುರಿತು ನಿಜವಾದ ಇಚ್ಛಾಶಕ್ತಿ ಹೊಂದಿದ್ದರೆ, ವಿರೋಧ ಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿದಲ್ಲಿದ್ದು, ಲೋಕಪಾಲ ರಚನೆ ಮಾಡುವ ಯಾವುದೇ ಆಸಕ್ತಿಯನ್ನು ಬಿಜೆಪಿ ಹೊಂದಿಲ್ಲ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ನೇತೃತ್ವದ ಸಭೆ ಗುರುವಾರ ನಿಗದಿಯಾಗಿತ್ತು. ಈ ಹಿಂದೆಯೂ ಇದೇ ಕಾರಣ ನೀಡಿ ಮಾರ್ಚ್ 1 ಹಾಗೂ ಏಪ್ರಿಲ್ 10 ರಂದು ನಿಗದಿಯಾಗಿದ್ದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು.

  • ಕರ್ನಾಟಕ ರಾಜಕೀಯದಲ್ಲಿ ಹೊಸ ದಾಖಲೆ ಬರೆದ ಬಿಎಸ್‍ವೈ!

    ಕರ್ನಾಟಕ ರಾಜಕೀಯದಲ್ಲಿ ಹೊಸ ದಾಖಲೆ ಬರೆದ ಬಿಎಸ್‍ವೈ!

    ಬೆಂಗಳೂರು: ರಾಜ್ಯದ ಕಡಿಮೆ ಅವಧಿಯ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಾಖಲೆ ಬರೆದಿದ್ದರು. ಆದರೆ ಈಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.

    ರಾಜ್ಯ ರಾಜಕೀಯದಲ್ಲಿ ಅತಿ ಹೆಚ್ಚು ಬಾರಿಗೆ ವಿಧಾನಸಭೆಯ ವಿಪಕ್ಷ ನಾಯಕರಾದ ದಾಖಲೆಯನ್ನು ಸದ್ಯ ಬಿ.ಎಸ್.ಯಡಿಯೂರಪ್ಪ ಅವರು ತಮ್ಮದಾಗಿಸಿಕೊಂಡಿದ್ದಾರೆ. 11 ವರ್ಷಗಳ ಬಳಿಕ ವಿಪಕ್ಷ ನಾಯಕರಾಗಿರುವ ಯಡಿಯೂರಪ್ಪ ಅವರು, ಒಟ್ಟು ಮೂರು ಬಾರಿ ಈ ಸ್ಥಾನವನ್ನು ಏರಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ(1994 ಡಿಸೆಂಬರ್ 27 ನಿಂದ 1996 ಡಿಸೆಂಬರ್ 18) ಮೊದಲ ಬಾರಿ ವಿಪಕ್ಷ ನಾಯಕರಾಗಿದ್ದರು. ಮಾಜಿ ಸಿಎಂ ಧರ್ಮಸಿಂಗ್ ಮುಖ್ಯಮಂತ್ರಿ ಆಗಿದ್ದಾಗ (2004ರ ಜೂನ್ 10 ರಿಂದ, 2006 ಫೆಬ್ರವರಿ 3ರವರೆಗೆ) ಎರಡನೇ ಬಾರಿ ವಿಪಕ್ಷ ನಾಯಕರಾಗಿದ್ದರು. ಈಗ 2018ರ ಮೇ 25 ರಿಂದ ಮೂರನೇ ಬಾರಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.

    ವಿಪಕ್ಷ ನಾಯಕರ ಕಚೇರಿಯಲ್ಲಿ ಪೂಜೆ:
    ವಿಧಾನಸೌಧ ವಿಪಕ್ಷ ನಾಯಕರ ಕೊಠಡಿ ಹೂಗಳಿಂದ ಸಿಂಗಾರಗೊಂಡಿದ್ದು, ಪುರೋಹಿತರಿಂದ ಪೂಜೆ ನಡೆಯಿತು. ಪೂಜೆಯಲ್ಲಿ ಬಿಎಸ್ ಯಡಿಯೂರಪ್ಪ, ಶಾಸಕರಾದ ಗೋವಿಂದ ಕಾರಜೋಳ, ರಾಜು ಗೌಡ, ಸಿಎಂ ಉದಾಸಿ, ಅಪ್ಪಚ್ಚು ರಂಜನ್ ಭಾಗವಹಿಸಿದ್ದರು.

  • ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ

    ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ

    ಹುಬ್ಬಳ್ಳಿ: ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಮಾತನಾಡಿದ ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್ ನವರ ನಾಟಕ ಗೊತ್ತಾಗುತ್ತೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯ ಚಾಮುಂಡೇಶ್ವರಿ ಸ್ಲಮ್ ನಲ್ಲಿ ವಾಸ್ತವ ಹೂಡಿದ್ದ ಶೆಟ್ಟರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ರವರಿಗೆ ಹಿಂದೂಗಳ ಓಟು ಬೇಕಾಗಿದೆ. ಆದ್ದರಿಂದ ಅವರಿಗೆ ಮಠ, ಮಂದಿರಗಳ ನೆನಪಾಗಿದೆ. ಸೆಕ್ಯೂಲರ್ ಎನ್ನೋ ನಾಟಕ ಮಾಡಬೇಡಿ. ಎಲ್ಲರನ್ನೂ ಸಮಾನಾಗಿ ಕಾಣಬೇಕು. ಮಹದಾಯಿ ಬಗ್ಗೆ ಕಾಂಗ್ರೆಸ್ ನಿಲವು ಏನು ಎಂಬುದನ್ನು ಇವರು ಸ್ಪಷ್ಟವಾಗಿ ತಿಳಿಸಬೇಕು ಅಂದ್ರು.

    ಮಹದಾಯಿ ವಿಚಾರವಾಗಿ ಅವರು ಬೆಂಬಲ ಕೊಡ್ತೀವಿ ಎಂದು ಹೇಳಬೇಕಿತ್ತು. ಆದರೆ ರಾಹುಲ್ ಅವರು ತಮ್ಮ ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಮಾತು ಎತ್ತಲಿಲ್ಲ. ಈಗ ಕಾಂಗ್ರೆಸ್‍ನವರ ನಾಟಕ ಗೊತ್ತಾಗುತ್ತೆ ಎಂದು ಕಿಡಿಕಾರಿದ್ರು.

    ಇದೇ ಸಂದರ್ಭದಲ್ಲಿ ಬಿಜೆಪಿಯವರ ಸ್ಲಂ ವಾಸ್ತವ್ಯ ಕುರಿತಂತೆ ಮಾತನಾಡಿದ ಅವರು, ಸ್ಲಂನಲ್ಲಿ ಬೆಳಗ್ಗೆಯಿಂದ ವಾಕಿಂಗ್ ಮಾಡಿ ಅವರ ಸಮಸ್ಯೆಯನ್ನು ಆಲಿಸಿದ್ದೇನೆ. ಇವರಿಗೆ ಮೊದಲನೆಯದಾಗಿ ಹಕ್ಕು ಪತ್ರ ನೀಡಬೇಕು. ನಾವು ಈ ಹಿಂದೆಯೇ ಇಲ್ಲಿ ಮೂಲಭೂತ ಸೌಕರ್ಯ ನೀಡಿದ್ದೆವೆ ಎಂದು ಶೆಟ್ಟರ್ ತಿಳಿಸಿದ್ರು.

  • ಬಶೀರ್ ಮನೆಗೆ ಹೋಗ್ಬೇಕು ಅನ್ನೋ ಕಾರಣಕ್ಕೆ ದೀಪಕ್ ಮನೆಗೂ ಭೇಟಿ ನೀಡಿದ್ರು- ಸಿಎಂ ವಿರುದ್ಧ ಈಶ್ವರಪ್ಪ ಟೀಕೆ

    ಬಶೀರ್ ಮನೆಗೆ ಹೋಗ್ಬೇಕು ಅನ್ನೋ ಕಾರಣಕ್ಕೆ ದೀಪಕ್ ಮನೆಗೂ ಭೇಟಿ ನೀಡಿದ್ರು- ಸಿಎಂ ವಿರುದ್ಧ ಈಶ್ವರಪ್ಪ ಟೀಕೆ

    ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕೊಲೆಗಡುಕರ ಸ್ವರ್ಗ. ಯಾರನ್ನ ಬೇಕಾದರೂ ಕೊಲೆ ಮಾಡಿ. ಸರ್ಕಾರ ಅವರನ್ನು ರಕ್ಷಿಸುತ್ತದೆ. ಮಂಗಳೂರಿನಲ್ಲಿ ಬಶೀರ್ ಮನೆಗೆ ಹೋಗಬೇಕು ಎಂಬ ಕಾರಣಕ್ಕೆ ದೀಪಕ್ ಮನೆಗೂ ಭೇಟಿ ನೀಡಿದ್ರು. ಇದೂವರೆಗೂ ಹತ್ಯೆ ಆದ ಯಾರೊಬ್ಬರ ಮನೆಗೂ ಹೋಗಿಲ್ಲ ಅಂದ್ರು.

    ಸಾಧನಾ ಸಮಾವೇಶ ಸರ್ಕಾರಿ ವೆಚ್ಚದಲ್ಲಿ ಮಾಡಬೇಡಿ. ಯಾರದ್ದೊ ದುಡ್ಡು- ಸಿದ್ದಪ್ಪನ ಜಾತ್ರೆ. ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಇವರಿಗೆ ಅಧಿಕಾರ ಕೊಟ್ಟಂತಾಗಿದೆ. ಹುಚ್ಚನ ಕೈಲಿ ಅಧಿಕಾರ ಕೊಟ್ಟಿದಿವಿ. ಇದಕ್ಕಾಗಿ ಇವನ್ನೆಲ್ಲಾ ನೋಡಬೇಕಾಗಿದೆ ಅಂತ ಕಿಡಿಕಾರಿದ್ರು.

    ಜಿಲ್ಲಾಧಿಕಾರಿ ಇನ್ನಿತರ ಅಧಿಕಾರಿಗಳನ್ನು ವೇದಿಕೆ ಮೇಲೆ ಕೂರಿಸಿಕೊಂಡು ರಾಜಕೀಯ ಭಾಷಣ ಮಾಡುತ್ತಿದ್ದಾರೆ. ಸರ್ಕಾರದ ಸಾಧನೆಗಳನ್ನು ಹೇಳುವುದನ್ನು ಬಿಟ್ಟು ವಿಪಕ್ಷಗಳನ್ನು ಟೀಕೆ ಮಾಡಲು ಸಾರ್ವಜನಿಕರ ಹಣ ಬಳಸುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ತನ್ನ ನೈತಿಕತೆ ತೋರಿಸಬೇಕು. ಕಾಂಗ್ರೆಸ್ ಸಮಾವೇಶ ಮಾಡಲಿ. ಸರ್ಕಾರಿ ವೆಚ್ಚದಲ್ಲಿ ಮಾಡೋದು ಬೇಡ. ಜ್ಞಾನ ಇಲ್ಲದ ಮುಖ್ಯಮಂತ್ರಿಯನ್ನು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನೋಡುತ್ತಿದ್ದೇವೆ. ವಿರೋಧ ಪಕ್ಷದವರನ್ನು ಬೈಯ್ಯುವ ಸಮಾವೇಶ ಇದು ಅಂದ್ರು.

    ಹುಚ್ಚ ಏನೇನೋ ಮಾತಾಡಿದ್ರೆ ನಾ ಉತ್ತರ ಕೊಡೋಕೆ ಆಗುತ್ತಾ ಎಂದು ಪ್ರಶ್ನಿಸಿದ ಈಶ್ವರಪ್ಪ, ನನ್ ಮನೇಲಿ ನೋಟು ಎಣಿಸುವ ಮಷಿನ್ ಇರೋದು, ಪ್ರಿಂಟಿಂಗ್ ಮಷಿನ್ ಅಲ್ಲ. ನನ್ನ ವ್ಯಾಪಾರದ ಹಣ ಎಣಿಸಲು ಇಂದಿಗೂ ನೋಟ್ ಕೌಂಟಿಂಗ್ ಮಿಷಿನ್ ಬಳಸುತ್ತೇನೆ. ಇದನ್ನ ವಿಧಾನಪರಿಷತ್ ನಲ್ಲೇ ಹೇಳಿದ್ದೇನೆ ಅಂತ ತಿಳಿಸಿದ್ರು.

    ಇನ್ನೂ ಮೂರು ತಿಂಗಳು ಮಾತ್ರ ಈ ಸರ್ಕಾರ ಇರುತ್ತೆ. ಮುಂದೆ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ಇದೇ ವೇಳೆ ಈಶ್ವರಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.