Tag: ವಿನೋದ್ ರಾಯ್

  • ಗಂಗೂಲಿ, ಕುಂಬ್ಳೆಯನ್ನು ಕೋಚ್ ಹುದ್ದೆಯಲ್ಲಿ ಉಳಿಸಿಕೊಳ್ಳುತ್ತಿದ್ದರು: ವಿನೋದ್ ರಾಯ್

    ಗಂಗೂಲಿ, ಕುಂಬ್ಳೆಯನ್ನು ಕೋಚ್ ಹುದ್ದೆಯಲ್ಲಿ ಉಳಿಸಿಕೊಳ್ಳುತ್ತಿದ್ದರು: ವಿನೋದ್ ರಾಯ್

    ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿಯಲು ಕಾರಣ ಎಂಬುವುದು ಈಗಾಗಲೇ ತಿಳಿದಿದೆ. ಸದ್ಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಿಸಿಸಿಐ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ವಿನೋದ್ ರಾಯ್ ಈ ಕುರಿತು ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿರುವ ವಿನೋದ್ ರಾಯ್, ಕೋಚ್ ಹಾಗೂ ನಾಯಕನ ನಡುವಿನ ಭಿನ್ನಾಭಿಪ್ರಾಯವೇ ಕುಂಬ್ಳೆ ಕೋಚ್ ಸ್ಥಾನದಿಂದ ಕೆಳಗಿಳಿಯಲು ಕಾರಣ. ಆದರೆ ಅಂದು ನನಗೆ ಅವರನ್ನು ಉಳಿಸಿಕೊಳ್ಳುವ ಅಧಿಕಾರವಿರಲಿಲ್ಲ. ನನಗೆ ಅಧಿಕಾರವಿದ್ದಿದ್ದರೆ ಅವರನ್ನು ಕೋಚ್ ಸ್ಥಾನದಲ್ಲಿಯೇ ಉಳಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

    33 ತಿಂಗಳ ಕಾಲ ಸಿಒಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ 71 ವರ್ಷದ ವಿನೋದ್ ರಾಯ್ ಅವರು, ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಕುಂಬ್ಳೆ ತಾವು ಕಂಡ ಅದ್ಭುತ ಕೋಚ್ ಆಗಿದ್ದು, ಅವರ ಮೇಲೆ ನನಗೆ ಅತೀವ ಗೌರವವಿದೆ. ನನ್ನ ಅವಧಿಯಲ್ಲಿ ಅವರ ಕಾಲಾವಧಿಯನ್ನು ಹೆಚ್ಚಿಸುವ ಅವಕಾಶ ಲಭಿಸಿದ್ದರೆ ಖಂಡಿತ ನಾನು ಆ ಕೆಲಸ ಮಾಡುತ್ತಿದೆ. ಆದರೆ ಕೊಹ್ಲಿರೊಂದಿಗೆ ಭಿನ್ನಾಭಿಪ್ರಾಯ ಉಂಟಾದ ಬಳಿಕ ಅವರನ್ನು ಉಳಿಸಿಕೊಳ್ಳುವ ಅವಕಾಶ ನನಗೆ ಲಭಿಸಲಿಲ್ಲ. ಇಂದು ಅಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಗಂಗೂಲಿ ಬಲವಂತವಾಗಿಯಾದರೂ ಕೂಡ ಕುಂಬ್ಳೆರನ್ನು ಕೋಚ್ ಹುದ್ದೆಯಲ್ಲಿ ಮುಂದುವರಿಸುತ್ತಿದ್ದರು. ಆದರೆ ಅನಿಲ್ ಕುಂಬ್ಳೆ ವಿವಾದ ಉಂಟಾಗುವ ಮೊದಲೇ ಸ್ವತಃ ಕೋಚ್ ಹುದ್ದೆಯನ್ನು ಗೌರವಯುತವಾಗಿ ತೊರೆದರು ಎಂದು ತಿಳಿಸಿದ್ದಾರೆ.

    ಕುಂಬ್ಳೆರನ್ನು ಮುಂದುವರಿಸುವ ಕುರಿತು ನಾನು ಸಲಹಾ ಸಮಿತಿಯ ಸದಸ್ಯರಾಗಿದ್ದ ಸಚಿನ್, ಗಂಗೂಲಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದೆ. ಆದರೆ ಕೋಚ್ ಸ್ಥಾನದಲ್ಲಿ ಕುಂಬ್ಳೆ ಅವರು ಮುಂದುವರಿಯುವುದನ್ನು ಕೊಹ್ಲಿ ಬಯಸಿರಲಿಲ್ಲ. ಈ ಬಗ್ಗೆ ಸಚಿನ್, ಕೊಹ್ಲಿರೊಂದಿಗೆ ಮಾತನಾಡಿದ್ದರೂ ಕೂಡ ಅವರ ಮನವೊಲಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.

    ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ಬಂದಿರುವುದರಿಂದ ಇಂತಹ ಪರಿಸ್ಥಿತಿಗಳು ಮತ್ತೆ ಉದ್ಭವಿಸುವುದಿಲ್ಲ ಎಂಬ ವಿಶ್ವಾಸವಿದೆ. ಗಂಗೂಲಿ ಯಾವುದೇ ವಿಷಯವನ್ನಾದರೂ ಕೂಡ ಡೀಲ್ ಮಾಡುವ ಸಮರ್ಥರಾಗಿದ್ದಾರೆ ಎಂದು ವಿನೋದ್ ರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಲಡಾಖ್ ಕ್ರಿಕೆಟಿಗರು ಕಾಶ್ಮೀರ ತಂಡವನ್ನ ಪ್ರತಿನಿಧಿಸಲಿದ್ದಾರೆ: ವಿನೋದ್ ರಾಯ್

    ಲಡಾಖ್ ಕ್ರಿಕೆಟಿಗರು ಕಾಶ್ಮೀರ ತಂಡವನ್ನ ಪ್ರತಿನಿಧಿಸಲಿದ್ದಾರೆ: ವಿನೋದ್ ರಾಯ್

    ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಆಗಿರುವ ಲಡಾಖ್ ಪ್ರದೇಶದ ಕ್ರಿಕೆಟಿಗರು ರಣಜಿ ಟೂರ್ನಿಯಲ್ಲಿ ಜಮ್ಮು ಕಾಶ್ಮೀರ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್  ಸ್ಪಷ್ಟನೆ ನೀಡಿದ್ದಾರೆ.

    ಇದುವರೆಗೂ ಲಡಾಖ್ ಪ್ರದೇಶಕ್ಕೆ ಸೇರಿರುವ ಯಾವುದೇ ಆಟಗಾರ ಕೂಡ ಕಾಶ್ಮೀರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿಲ್ಲ. ಆದ್ದರಿಂದ ಈ ಪ್ರದೇಶಕ್ಕೆ ಸೇರಿದ ಆಟಗಾರರು ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಕಾಶ್ಮೀರ ಪರ ಆಡುತ್ತಾರೆ ಎಂದು ವಿನೋದ್ ರಾಯ್ ಹೇಳಿದ್ದಾರೆ.

    ಈಗಾಗಲೇ ಕೇಂದ್ರಾಡಳಿತ ಪ್ರದೇಶವಾಗಿರುವ ಛತ್ತಿಸ್‍ಗಢ ಪ್ರದೇಶದ ಆಟಗಾರರು ಹರಿಯಾಣ ಹಾಗೂ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಆದರಂತೆ ಲಡಾಖ್ ಪ್ರದೇಶದ ಆಟಗಾರರು ಜಮ್ಮು ಕಾಶ್ಮೀರ ತಂಡದ ಪರವೇ ಆಡಲಿದ್ದಾರೆ ಎಂದಿದ್ದಾರೆ. ಇದೇ ವೇಳೆ ಇದುವರೆಗೂ ಶ್ರೀನಗರದಲ್ಲಿ ನಡೆಯುತ್ತಿದ್ದ ಕಾಶ್ಮೀರದ ರಣಜಿ ಪಂದ್ಯಗಳನ್ನು ಅಲ್ಲಿಂದ ಬದಲಾವಣೆ ಮಾಡುವ ಯೋಚನೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಜಮ್ಮು ಕಾಶ್ಮೀರವನ್ನು ವಿಭಜನೆ ಮಾಡಿ ಆದೇಶ ನೀಡಿದ ಬಳಿಕ ಲಡಾಖ್ ಕ್ರಿಕೆಟ್ ಆಟಗಾರರ ಭವಿಷ್ಯ ಕುರಿತು ಬಿಸಿಸಿಐ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಅಲ್ಲದೇ ಲಡಾಖ್ ಹಾಗೂ ಜಮ್ಮು ಕಾಶ್ಮೀರಕ್ಕೆ ಬೇರೆ ಬೇರೆ ಬೋರ್ಡ್ ಸ್ಥಾಪನೆ ಬೇಡ ಎಂದು ನಿರ್ಧರಿಸಿ ಕಾಶ್ಮೀರ ತಂಡವನ್ನು ಪ್ರತಿನಿಧಿಸಲು ಅವಕಾಶ ನೀಡಿದೆ. ಬಿಸಿಸಿಐ ಆಯೋಜಿಸುವ ಈ ಸಾಲಿನ ರಣಜಿ ಕ್ರಿಕೆಟ್ ಟೂರ್ನಿಗಳು ಮುಂದಿನ ಡಿಸೆಂಬರ್ ನಿಂದ ಆರಂಭವಾಗಲಿದೆ.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕಾರಣದಿಂದ ಅಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಘೋಷಣೆ ಮಾಡುವ ಮೊದಲೇ ಕಣಿವೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕಾಶ್ಮೀರವನ್ನು ಬಿಟ್ಟು ತೆರಳುವಂತೆ ಟೀಂ ಇಂಡಿಯಾ ಕ್ರಿಕೆಟರ್ ಇರ್ಫಾನ್ ಪಠಾಣ್ ಸೇರಿದಂತೆ 100 ಮಂದಿ ಕ್ರಿಕೆಟಿಗರಿಗೆ ಸೂಚನೆ ನೀಡಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ಆಟಗಾರ ಹಾಗೂ ಮೆಂಟರ್ ಆಗಿ ಇರ್ಫಾನ್ ಪಠಾಣ್ ಕಾರ್ಯನಿರ್ವಹಿಸುತ್ತಿದ್ದಾರೆ.

  • ಪಾಕ್ ಪಂದ್ಯ ಬಹಿಷ್ಕರಿಸಿದರೆ ನಮಗೆ ನಾವೇ ಗುಂಡಿಟ್ಟುಕೊಂಡಂತೆ: ವಿನೋದ್ ರಾಯ್

    ಪಾಕ್ ಪಂದ್ಯ ಬಹಿಷ್ಕರಿಸಿದರೆ ನಮಗೆ ನಾವೇ ಗುಂಡಿಟ್ಟುಕೊಂಡಂತೆ: ವಿನೋದ್ ರಾಯ್

    ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಬಹಿಷ್ಕಾರ ಮಾಡುವುದು ನಮಗೆ ನಾವೇ ಗುಂಡಿಟ್ಟುಕೊಂಡಂತೆ ಎಂದು ಸುಪ್ರೀಂ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಅಭಿಪ್ರಾಯ ಪಟ್ಟಿದ್ದಾರೆ.

    ಭಯೋತ್ಪಾದನೆಗೆ ಬೆಂಬಲ ನೀಡವಂತಹ ರಾಷ್ಟ್ರಗಳನ್ನು ಐಸಿಸಿ ಕ್ರಿಕೆಟ್ ಸದಸ್ಯತ್ವವನ್ನು ಕಳೆದುಕೊಳ್ಳುವಂತೆ ಮಾಡುವ ಅನಿವಾರ್ಯತೆ ಇದ್ದು, ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

    ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಅವರು ಶುಕ್ರವಾರವೇ ಐಸಿಸಿಗೆ ಪತ್ರ ಬರೆದಿದ್ದು, ಭಯೋತ್ಪಾದನೆಗೆ ಬೆಂಬಲ ನೀಡುವಂತಹ ರಾಷ್ಟ್ರಗಳೊಂದಿಗೆ ಇರುವ ಒಪ್ಪಂದಗಳನ್ನು ಕಡಿದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಈ ಪತ್ರವನ್ನು ನಾನು ಕೂಡ ನೋಡಿದ್ದು, ನಮ್ಮಿಂದ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡುವ ಸಾಮರ್ಥ್ಯವಿದೆ. ಈ ಒಂದು ಕಾರ್ಯ ಉತ್ತಮವಾಗಿದ್ದು, ಭಾರತ ಸರ್ಕಾರ ಕೂಡ ಇಂತಹದ್ದೇ ಕಾರ್ಯದಲ್ಲಿ ತೊಡಗಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ತಂಡ ಭಾರತ ದೇಶವನ್ನು ವಿಶ್ವ ಪಟ್ಟದಲ್ಲಿ ಪ್ರತಿನಿಧಿಸುತ್ತದೆ. ನಮ್ಮ ದೇಶದ ಕ್ರಿಕೆಟ್ ಆಟವನ್ನು ತ್ಯಜಿಸಿದ ರಾಷ್ಟ್ರವಲ್ಲ ಎಂದಿದ್ದಾರೆ.

    ಮೂಲಗಳ ಪ್ರಕಾರ ಬಿಸಿಸಿಐ ಇಂತಹ ದಾರಿಯನ್ನು ಅನುಸರಿಲು ಭಾರತದ ಒಲಿಂಪಿಕ್ ಸಂಸ್ಥೆ ಮೇಲೆ ವಿಶ್ವ ಒಲಿಂಪಿಕ್ ಸಂಸ್ಥೆ ಕೈಗೊಂಡ ಕ್ರಮ ಕಾರಣ ಎನ್ನಲಾಗಿದ್ದು, ಕೆಲ ದಿನಗಳ ಹಿಂದೆ ಪಾಕ್ ಶೂಟರ್ ಗಳಿಗೆ ವಿಶ್ವಕಪ್ ನಲ್ಲಿ ಭಾಗವಹಿಸಲು ಭಾರತ ವೀಸಾ ನಿರಾಕರಣೆ ಮಾಡಿತ್ತು. ಪರಿಣಾಮ ಭಾರತದ ತೀರ್ಮಾನಕ್ಕೆ ಒಲಿಂಪಿಕ್ ಸಮಿತಿ ಅಸಮಾಧಾನ ವ್ಯಕ್ತಪಡಿಸಿ ದೇಶಕ್ಕೆ ನೀಡಿದ್ದ ಕ್ರೀಡಾಕೂಟದ ಅತಿಥ್ಯದ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ.

    ಒಲಿಪಿಂಕ್ ಸಮಿತಿಯ ನಿರ್ಣಯದಿಂದ ಆದ ಸ್ಥಿತಿ ಬಿಸಿಸಿಐ ಆಗಬಾರದು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಪಾಕಿಸ್ತಾನ ತಂಡವನ್ನು ವಿಶ್ವಕಪ್ ನಿಂದಲೇ ಹೊರಗಿಡಲು ಪ್ರಯತ್ನ ನಡೆಸಲಾಗುತ್ತದೆ. ಆದರೆ ವಿಶ್ವಕಪ್‍ನಿಂದ ಪಾಕ್ ತಂಡವನ್ನು ಹೊರಗಿಡುವುದು ಒಂದು ದಿನದಲ್ಲಿ ಸಾಧ್ಯವಾಗುವುದಿಲ್ಲ ಎಂದು ರಾಯ್ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv