– ವೋಟಿಗಾಗಿ ನೋಟು ಕೇಸ್‌ನಲ್ಲಿ ಕೈ ನಾಯಕರಿಗೆ ಶಾಕ್
ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರಿಗೆ 5 ಕೋಟಿ ರೂ. ಹಂಚಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ವಿನೋದ್ ತಾವ್ಡೆ (Vinod Tawde) ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕೈ ನಾಯಕ ಸುಪ್ರಿಯಾ ಶ್ರೀನಾಥ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿದ್ದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಹುಲ್ ಗಾಂಧಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ
ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಹೋಟೆಲ್‌ನಲ್ಲಿ ವಿನೋದ್ ತಾವ್ಡೆ ಅವರು ಮತದಾರರನ್ನು ಓಲೈಸಲು 5 ಕೋಟಿ ರೂ. ಹಂಚಿದ್ದಾರೆ ಎಂದು ಪ್ರಾದೇಶಿಕ ಪಕ್ಷದ ಬಹುಜನ ವಿಕಾಸ್ ಅಘಾಡಿ (BVA) ನಾಯಕ ಹಿತೇಂದ್ರ ಠಾಕೂರ್ ಮಂಗಳವಾರ ಆರೋಪಿಸಿದ್ದರು. ಈ ಆರೋಪಗಳು ಸುಳ್ಳು ಮತ್ತು ಆಧಾರ ರಹಿತ ಎಂದಿರುವ ತಾವ್ಡೆ ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ. ಅಲ್ಲದೇ ಲೀಗಲ್ ನೋಟಿಸ್‌ನ ಪ್ರತಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಕಕ್ಷಿದಾರನ ಪ್ರತಿಷ್ಠೆಗೆ ಹಾನಿ ಮಾಡುವ ಏಕೈಕ ಉದ್ದೇಶದಿಂದ ಹಣದ ಕಥೆ ಕಟ್ಟಿದ್ದೀರಿ. ಜನರ ದೃಷ್ಟಿಯಲ್ಲಿ ನನ್ನ ಕಕ್ಷಿದಾರರ ವ್ಯಕ್ತಿತ್ವ ಹಾಳುಮಾಡುವುದಕ್ಕಾಗಿ ನೀವೆಲ್ಲರೂ ಸುಳ್ಳು, ಆಧಾರ ರಹಿತ ಆರೋಪಗಳನ್ನು ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಿದ್ದೀರಿ ಎಂದು ತಾವ್ಡೆ ಪರ ವಕೀಲರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್
ನವೆಂಬರ್ 23ರಂದು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹೊರಬೀಳಲಿದೆ, ಇದಕ್ಕೆ ಮುನ್ನಾದಿನವೇ ತಾವ್ಡೆ ಅವರು ಕಾಂಗ್ರೆಸ್ ನಾಯಕರಿಗೆ ನೋಟಿಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ





