Tag: ವಿನೋದ್ ಕಾಂಬ್ಳಿ

  • ಕುಡಿದು ಪತ್ನಿ ಮೇಲೆ ಹಲ್ಲೆ – ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ವಿರುದ್ಧ FIR

    ಕುಡಿದು ಪತ್ನಿ ಮೇಲೆ ಹಲ್ಲೆ – ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ವಿರುದ್ಧ FIR

    ಮುಂಬೈ: ಟೀಂ ಇಂಡಿಯಾ (Team India) ಮಾಜಿ ಆಟಗಾರ ವಿನೋದ್ ಕಾಂಬ್ಳಿ (Vinod Kambli), ಪತ್ನಿ ಆಂಡ್ರಿಯಾ ಹೆವಿಟ್‌ಗೆ (Andrea Hewitt) ಕುಡಿದು ಬಂದು ಹಲ್ಲೆ ನಡೆಸಿರುವ ಆರೋಪದಡಿ ಮುಂಬೈನ (Mumbai) ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮದ್ಯಪಾನ ಮಾಡಿ ಮನೆಗೆ ಬಂದ ವಿನೋದ್ ಕಾಂಬ್ಳಿ, ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಮುಂಬೈ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಆಂಡ್ರಿಯಾ ಹೆವಿಟ್ ದೂರು ದಾಖಲಿಸಿದ್ದಾರೆ. ಪೊಲೀಸರು ಕಾಂಬ್ಳಿ ವಿರುದ್ಧ ಎಫ್‍ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಡೋಪಿಂಗ್ ಟೆಸ್ಟ್‌ನಲ್ಲಿ ಫೇಲ್ – ಜಿಮ್ನಾಸ್ಟ್ ದೀಪಾ ಕರ್ಮಾಕರ್ 21 ತಿಂಗಳು ಅಮಾನತು

    ಶುಕ್ರವಾರ ಮಧ್ಯಾಹ್ನ 1 ರಿಂದ 1:30ರ ಸುಮಾರಿಗೆ ಘಟನೆ ನಡೆದಿದ್ದು, ಕಾಂಬ್ಳಿ ಪಾನಮತ್ತರಾಗಿ ತಮ್ಮ ಪ್ಲಾಟ್‍ಗೆ ಬಂದು ಮದ್ಯದ ನಶೆಯಲ್ಲಿ ದೌರ್ಜನ್ಯವೆಸಗಿದ್ದಾರೆ ಎಂದು ಆಂಡ್ರಿಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆ ವೇಳೆ ತಮ್ಮ 12 ವರ್ಷದ ಮಗನೂ ಜೊತೆಗಿದ್ದ. ನಮ್ಮ ಜಗಳವನ್ನು ಬಿಡಿಸಲು ಆತನೂ ಮಧ್ಯ ಪ್ರವೇಶ ಮಾಡಿದ. ಆಗ ಅಡುಗೆ ಮನೆಗೆ ಹೋಗಿ, ಮುರಿದು ಹೋಗಿದ್ದ ಪ್ರೈಯಿಂಗ್ ಪ್ಯಾನ್ (Frying Pan) ತಂದು ನನ್ನ ತಲೆಗೆ ಹೊಡೆದರು. ತಲೆಗೆ ಗಾಯಗಳಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ

    ಇದೀಗ ವಿನೋದ್ ಕಾಂಬ್ಳಿ ವಿರುದ್ಧ ಐಪಿಸಿ ಸೆಕ್ಷನ್ 324 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಹಲ್ಲೆ) ಹಾಗೂ ಐಪಿಸಿ ಸೆಕ್ಷನ್ 504 (ಉದ್ದೇಶಪೂರ್ವಕವಾಗಿ ಮಾಡಿದ ಅಪಮಾನ) ಅಡಿ ಕೇಸು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿನೋದ್ ಕಾಂಬ್ಳಿಗೆ ಸೈಬರ್ ಕಳ್ಳರಿಂದ ವಂಚನೆ

    ವಿನೋದ್ ಕಾಂಬ್ಳಿಗೆ ಸೈಬರ್ ಕಳ್ಳರಿಂದ ವಂಚನೆ

    ಮುಂಬೈ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರಿಗೆ ಸೈಬರ್ ವಂಚಕರು 1 ಲಕ್ಷ ರೂ. ವಂಚಿಸಿರುವ ಘಟನೆ ಬಾಂದ್ರಾದಲ್ಲಿ ನಡೆದಿದೆ.

    ಪ್ರಸಿದ್ಧ ಬ್ಯಾಂಕ್‌ನ ಪ್ರತಿನಿಧಿಯೆಂದು ಕಾಂಬ್ಳಿಗೆ ಕರೆ ಮಾಡಿದ್ದಾರೆ. ನಂತರ ಕೆವೈಸಿ ಅಪ್ಡೇಟ್ ಮಾಡಲು ತಿಳಿಸಿದ್ದಾರೆ. ಬಳಿಕ ಅವರ ಬ್ಯಾಂಕ್ ವಿವರಗಳನ್ನೆಲ್ಲಾ ತೆಗೆದುಕೊಂಡು ಅಪ್‌ಲೊಡ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    MONEY

    ಸ್ವಲ್ಪ ಸಮಯದ ನಂತರ ಅವರ ಖಾತೆಯಿಂದ ಒಂದು ಲಕ್ಷ ರೂ.ವನ್ನು ವಂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಕಾಂಬ್ಳಿ ಅಪರಿಚಿತ ವ್ಯಕ್ತಿಯ ಮೇಲೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಮಾಜಿ ಕ್ರಿಕೆಟ್ ಆಟಗಾರರಾಗಿರುವ ವಿನೋದ್ ಕಾಂಬ್ಳಿ ಸಚಿನ್ ತೆಂಡೂಲ್ಕರ್ ಜೊತೆಗೆ 664 ರನ್‌ಗಳ ಜೊತೆಯಾಟವಾಡಿ ಪ್ರಸಿದ್ಧಿಯನ್ನು ಪಡೆದಿದ್ದರು. 17 ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಶತಕ, 3 ಅರ್ಧ ಶತಕಗಳೊಂದಿಗೆ 1048 ರನ್ ಹಾಗೂ ಏಕದಿನ ಪಂದ್ಯಗಳಲ್ಲಿ 2 ಶತಕ, 14 ಅರ್ಧಶತಕದೊಂದಿಗೆ 2477 ರನ್ ಗಳ ಸಾಧನೆಯನ್ನು ಮಾಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಮನೆಗೆ ಕಳುಹಿಸದ ಅತ್ತೆಗೆ ಬ್ಲೇಡ್‌ನಿಂದ ಹಲ್ಲೆ ಮಾಡಿದ ಅಳಿಯ

  • ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ

    ಟೆಸ್ಟ್ ದಾಖಲೆಯಲ್ಲಿ ಕಾಂಬ್ಳಿ ಫಸ್ಟ್, ಸಚಿನ್ ಸೆಕೆಂಡ್, ಕೊಹ್ಲಿಗೆ ಮೂರನೇ ಸ್ಥಾನ

    ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದು ಪರಿಗಣಿಸಲಾಗಿದೆ. ಸಚಿನ್ ಎರಡು ಎಕದಿನ, ಟೆಸ್ಟ್ ಎರಡೂ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಅವರು 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಮತ್ತು 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ.

    ಸಚಿನ್ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಉತ್ತಮ ಸರಾಸರಿಯನ್ನು ಹೊಂದಿರುವ ಭಾರತೀಯ ಬ್ಯಾಟ್ಸ್‌ಮನ್‌ ದಾಖಲೆಯನ್ನು ತಪ್ಪಿಸಿಕೊಂಡರು. ಈ ಪಟ್ಟಿಯಲ್ಲಿ ಅವರ ಬಾಲ್ಯದ ಸ್ನೇಹಿತ ವಿನೋದ್ ಕಾಂಬ್ಳಿ ಅಗ್ರಸ್ಥಾನದಲ್ಲಿದ್ದಾರೆ.

    ಹೌದು, ವಿನೋದ್ ಕಾಂಬ್ಳಿ ಅವರ ಹೆಸರು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಆದರೆ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ ನಂಬರ್ 1 ಸ್ಥಾನದಲ್ಲಿದ್ದಾರೆ. ಅವರು ಕೇವಲ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸಚಿನ್ ಅವರಿಗಿಂತ ಭಿನ್ನವಾಗಿ, ಕಾಂಬ್ಳಿ ಪ್ರಾರಂಭದಲ್ಲಿಯೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ತಮ್ಮ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಡಬಲ್-ಶತಕ ಸಿಡಿಸಿದ್ದರು. ಬಳಿಕ ಮುಂದಿನ ಎರಡು ಟೆಸ್ಟ್ ಗಳಲ್ಲಿ ಇನ್ನೂ ಎರಡು ಶತಕಗಳನ್ನು ಗಳಿಸಿದ್ದರು.

    ಕಾಂಬ್ಳಿ ಅವರು ಆಡಿದ ನಂತರದ 13 ಇನ್ನಿಂಗ್ಸ್‌ಗಳಲ್ಲಿ ಮೂರು ಅಂಕಿ ರನ್ ಗಳಿಸಲು ಹೆಣಗಾಡಿದರು. 1995ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈ ಮೂಲಕ ಕಾಂಬ್ಳಿ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 54.20ರ ಸರಾಸರಿಯಲ್ಲಿ ಒಟ್ಟು 1,084 ರನ್ ಗಳಿಸಿದರು. 2000ದಲ್ಲಿ ಅವರು ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದರು. ಆದರೆ 1995ರ ನಂತರ ಎಂದಿಗೂ ಟೆಸ್ಟ್ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ.

    ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸರಾಸರಿ ಹೊಂದಿದ ಬ್ಯಾಟ್ಸ್‌ಮನ್‍ಗಳ ಪಟ್ಟಿಯಲ್ಲಿ ಕಾಂಬ್ಳಿ ನಂತರದ ಸ್ಥಾನದಲ್ಲಿ ಬಾಲ್ಯದ ಸ್ನೇಹಿತ ಸಚಿನ್ ಇದ್ದಾರೆ. ಮಾಸ್ಟರ್ ಬ್ಲಾಸ್ಟರ್ 53.78 ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 52.62 ಸರಾಸರಿಯಲ್ಲಿ 7,240 ರನ್ ದಾಖಲಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್ ದ್ರಾವಿಡ್ 52.63 ಸರಾಸರಿಯಲ್ಲಿ 13,265 ರನ್ ಗಳಿಸಿದರೆ, ಸುನಿಲ್ ಗವಾಸ್ಕರ್ 51.12 ಸರಾಸರಿಯಲ್ಲಿ 10,122 ರನ್ ದಾಖಲಿಸಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

  • ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪತ್ನಿಯಿಂದ ಗಾಯಕ ಅಂಕಿತ್ ತಿವಾರಿ ತಂದೆ ಮೇಲೆ ಹಲ್ಲೆ!

    ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಪತ್ನಿಯಿಂದ ಗಾಯಕ ಅಂಕಿತ್ ತಿವಾರಿ ತಂದೆ ಮೇಲೆ ಹಲ್ಲೆ!

    ಮುಂಬೈ: ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಹಾಗೂ ಪತ್ನಿ ಆಂಡ್ರಿಯಾ ಹೇವಿತ್ ಕ್ಷುಲ್ಲಕ ವಿಚಾರಕ್ಕೆ ಸುಮಾರು 59 ವರ್ಷ ವಯಸ್ಸಿನ ವೃದ್ಧರ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಇನ್ನೋರ್ಬಿಟ್ ಮಾಲ್ ನಲ್ಲಿ ನಡೆದಿದೆ.

    ಘಟನೆಯಲ್ಲಿ ಬಾಲಿವುಡ್‍ನ ಖ್ಯಾತ ಗಾಯಕ ಅಂಕಿತ್ ತಿವಾರಿ ತಂದೆ ಆರ್ ಕೆ ತಿವಾರಿ ಹಲ್ಲೆಗೊಳಗಾಗಿದ್ದಾರೆ. ಭಾನುವಾರ ಮಧ್ಯಾಹ್ನ ಇನ್ನೋರ್ಬಿಟ್ ಮಾಲ್ ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಾಜಿ ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿ ಹಾಗೂ ಪತ್ನಿ ತಿವಾರಿಯವರ ಮೇಲೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಘಟನೆ ನಡೆದಾಗ ಗಾಯಕ ಅಂಕಿತ್ ಹಾಗೂ ಅವರ ತಮ್ಮ ಅಂಕೂರ್ ಸ್ಥಳದಲ್ಲಿದ್ದರು.

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ನಾನು ಮತ್ತೆ ನನ್ನ ಪತ್ನಿ ಮಾಲ್ ನಲ್ಲಿ ಹೋಗುತ್ತಿದ್ದಾಗ ಸುಮಾರು 57 ವರ್ಷದ ವ್ಯಕ್ತಿಯೊಬ್ಬರು ಉದ್ದೇಶ ಪೂರ್ವಕವಾಗಿ ನನ್ನ ಪತ್ನಿಯ ಕೈಯನ್ನು ಹಿಡಿದು ಎಳೆದಿದ್ದಾರೆ. ಆಗ ಕೂಡಲೇ ನನ್ನ ಪತ್ನಿ ಆ ವ್ಯಕ್ತಿಯಿಂದ ಕೈ ಬಿಡಿಸಿಕೊಂಡು ದೂರಕ್ಕೆ ತಳ್ಳಿದ್ದಾಳೆ. ನಂತರ ನಾವು ಅಲ್ಲೇ ಇದ್ದ ಫುಡ್ ಕೋರ್ಟ್ ನಲ್ಲಿದ್ದಾಗ ಆ ವ್ಯಕ್ತಿಯು ತಮ್ಮ ಇಬ್ಬರು ಮಕ್ಕಳೊಂದಿಗೆ ಬಂದು ನನ್ನ ಪತ್ನಿಯ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಿದ್ದರು. ಆಗ ನಾನು ನನ್ನ ಪತ್ನಿಯ ರಕ್ಷಣೆಗಾಗಿ ಅವರ ಮೇಲೆ ಹಲ್ಲೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.

    ಪತ್ನಿ ಆಡ್ರಿಯೋ ಮಾತನಾಡಿ, ಸುಮ್ಮ ಸುಮ್ಮನೆ ವ್ಯಕ್ತಿಯೊಬ್ಬರ ಕೈ ನನಗೆ ತಾಗಿಲ್ಲ, ಉದ್ದೇಶಪೂರ್ವಕವಾಗಿಯೇ ನನ್ನ ಕೈ ಹಿಡಿದು ಎಳೆದಿದ್ದಾರೆ. ಇಂತವರ ವಿರುದ್ಧ ಸರಿಯಾದ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಮಾತನಾಡಿದ ಗಾಯಕ ಅಂಕೂರ್ ತಿವಾರಿ, ಮಾಲ್ ನಲ್ಲಿ ನಮ್ಮ ತಂದೆಯು ಆಕಸ್ಮಿಕವಾಗಿ ಮಹಿಳೆಯೊಬ್ಬರ ಕೈಗೆ ಕೈ ತಗುಲಿದೆ. ಇದಕ್ಕೆ ಆಕ್ರೋಶಗೊಂಡ ಅವರು ತಂದೆಯ ಮೇಲೆಯೇ ಹಲ್ಲೆ ನಡೆಸಿದ್ದಾರೆ. ನನ್ನ ತಂದೆಗೆ ಅವರು ಪಂಚ್ ಮಾಡಿದ್ದಾರೆ. ಹಲ್ಲೆಯಿಂದ ಅವರು ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಅಲ್ಲದೇ ನಮ್ಮ ತಂದೆಗೆ ಅವರು ಯಾರು ಎಂಬುದು ಗೊತ್ತಿರಲಿಲ್ಲ, ನಂತರ ಆಕೆ ಕಾಂಬ್ಳಿ ಪತ್ನಿ ಎಂದು ತಿಳಿಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

    ಕಾಂಬ್ಳಿಯವರು ಜೋರಾಗಿ ಗಲಾಟೆ ಮಾಡುತ್ತ ನನ್ನ ತಂದೆಯ ಮೇಲೆಯೇ ಹಲ್ಲೆ ನಡೆಸಿದರು. ನಾನು ತಡೆಯಲು ಹೋದಾಗ ಅವರು ಹಾಗೂ ಅವರ ಪತ್ನಿ ನನ್ನನ್ನು ಸಹ ಎಳೆದಾಡಿದ್ದಾರೆ. ಯಾರಾದರೂ ವಿಡಿಯೋ ಮಾಡುತ್ತಾರೆಂದು ಅವರ ಮೇಲೆಯೂ ರೇಗಾಡಿದರು.ಸ ಅಲ್ಲದೆ ಒಬ್ಬ ಮಹಿಳೆಯನ್ನು ಬೆನ್ನತ್ತಿ ಆಕೆಯು ವಿಡಿಯೋ ಮಾಡಿಕೊಂಡಿದ್ದನ್ನು ಡಿಲೀಟ್ ಮಾಡಿದ್ದರು ಎಂದು ಹೇಳಿದ್ದಾರೆ.

    ಘಟನೆ ಸಂಬಂಧ ಬಂಗೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕ್ರಿಕೆಟ್ ದೇವರಿಗೆ 44ರ ಸಂಭ್ರಮ: ಸಚಿನ್ ಬಗ್ಗೆ ನಿಮಗೆ ಗೊತ್ತಿರದ 10 ವಿಷಯಗಳು ಇಲ್ಲಿವೆ

    ಕ್ರಿಕೆಟ್ ದೇವರಿಗೆ 44ರ ಸಂಭ್ರಮ: ಸಚಿನ್ ಬಗ್ಗೆ ನಿಮಗೆ ಗೊತ್ತಿರದ 10 ವಿಷಯಗಳು ಇಲ್ಲಿವೆ

    ಮುಂಬೈ: ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರಿಗೆ 44ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಎಂಬ ಧರ್ಮದ ದೇವರು ಎಂದು ಕರೆಸಿಕೊಳ್ಳುವ ಸಚಿನ್‍ಗೆ ಅನೇಕ ಮಂದಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

    ಪ್ರಪಂಚದ್ಯಂತ ಸಚಿನ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 24 ವರ್ಷಗಳ ಸುದೀರ್ಘ ಕಾಲ ತಮ್ಮ ಮನಮೋಹಕ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ಎಲ್ಲ ವಿಭಾಗದ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದಾಯ ಹೇಳಿದ್ದಾರೆ.

    ಇಲ್ಲಿ ನಿಮಗೆ ನಿಮ್ಮ ನೆಚ್ಚಿನ ಕ್ರೀಡಾಪಟು ಸಚಿನ ಅವರ ಬಗ್ಗೆ ಗೊತ್ತಿರದ 10 ಕುತೂಹಲಕಾರಿ ವಿಷಯಗಳು ಇಲ್ಲಿವೆ.

    1. ತೆಂಡೂಲ್ಕರ್ ತಂದೆ ರಮೇಶ್ ತೆಂಡೂಲ್ಕರ್ ಅವರು ಸಂಗೀತ ನಿರ್ದೆಶಕ ಸಚಿನ್ ದೇವ್ ಬರ್ಮನ್ ಅವರ ಅಭಿಮಾನಿಯಾಗಿದ್ದರು. ಈ ಕಾರಣಕ್ಕಾಗಿ ಮಗನಿಗೆ ಸಚಿನ್ ಎಂದು ಹೆಸರನ್ನು ಇಟ್ಟಿದ್ದರು.

    2. 1987ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿ-ಫೈನಲ್ ಪಂದ್ಯದಲ್ಲಿ ಬಾಲ್ ಬಾಯ್ ಆಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.

    3. ಬ್ರಬೌರ್ನ್ ಸ್ಟೇಡಿಯಂನಲ್ಲಿ 1988 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಆಡಿದ್ದರು.

    4. ಸಚಿನ್ 19 ನೇ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಆಟಗಾರರಾಗಿದ್ದರು. ಇವರ ಮೊದಲ ಕಾರು ಮಾರುತಿ-800.

    5. ಸಚಿನ್ ತಮ್ಮ ಮೊದಲ ಟೆಸ್ಟ್ ಪಾಕಿಸ್ತಾನ ತಂಡದ ವಿರುದ್ಧ ಆಡಿದ್ದು, ಈ ಪಂದ್ಯದಲ್ಲಿ, ಸುನೀಲ್ ಗವಾಸ್ಕರ್ ನೀಡಿದ್ದ ಬ್ಯಾಟ್ ಬಳಸಿದ್ದರು.

    6. 1992 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಪಂದ್ಯದಲ್ಲಿ ಮೂರನೇ ಅಂಪೈರ್ ತೀರ್ಪಿನಿಂದ ಔಟ್ ಆದ ಮೊದಲ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್.

    7. ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್‍ಗಳನ್ನು ಕಲೆಹಾಕಿದ ಮೊದಲ ಆಟಗಾರ. 2001ರಲ್ಲಿ ತೆಂಡೂಲ್ಕರ್ ತಮ್ಮ 266ನೇ ಪಂದ್ಯದಲ್ಲಿ ಈ ದಾಖಲೆಯನ್ನು ನಿರ್ಮಾಣ ಮಾಡಿದ್ದರು.

    8. ಭಾರತೀಯ ವಾಯುಪಡೆಯ ಹಿನ್ನೆಲೆ ಇಲ್ಲದೇ ಗ್ರೂಪ್ ಕ್ಯಾಪ್ಟನ್ ಶ್ರೇಣಿ ಗೌರವ ಪಡೆದ ಮೊದಲ ಆಟಗಾರ ಹಾಗೂ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪಡೆದ ಮೊದಲ ಕ್ರೀಡಾಪಟು.

    9. ದೆಹಲಿಯ ತಿಹಾರ್ ಜೈಲಿನ ವಾರ್ಡ್ ಒಂದಕ್ಕೆ ಸಚಿನ್ ಅವರ ಹೆಸರನ್ನು ಇಡಲಾಗಿದೆ. ಇದೇ ಜೈಲಿನ ಇನ್ನೊಂದು ವಾರ್ಡ್ ಗೆ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಹೆಸರನ್ನು ಇಡಲಾಗಿದೆ. ಸಚಿನ್ ಮತ್ತು ವಿನೋದ್ ಕಾಂಬ್ಳಿ ಇಬ್ಬರು ಆಟಗಾರರು ಶಾಲೆಯ ಮ್ಯಾಚ್ ಒಂದರಲ್ಲಿ ಪಾರ್ಟನರ್ ಶಿಪ್ ನಲ್ಲಿ ದಾಖಲೆಯ 664 ರನ್ ಕಲೆಹಾಕಿದ್ದರು.

    10. ಸಚಿನ್ ಅವರು ನನ್ನ ಕನಸಿನಲ್ಲಿ ಬಂದು ಗ್ರೌಂಡ್‍ನಲ್ಲಿ ಸಿಕ್ಸ್ ಹೊಡೆದು ಬೆಚ್ಚಿ ಬೀಳಿಸಿದ್ದರು. ಇನ್ನೊಂದು ಸಿಕ್ಸ್ ಹೊಡೆಯುತ್ತೇನೆ ಎಂದು ಮೈದಾನದಲ್ಲಿ ಡ್ಯಾನ್ಸ್ ಮಾಡಿ ನನ್ನನ್ನು ಕನಸಿನಲ್ಲಿ ಬೆಚ್ಚಿ ಬೀಳಿಸಿದ್ದರು ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹೇಳಿದ್ದರು.