Tag: ವಿನಯ್ ಬಾಲಾಜಿ

  • ಭರ್ಜರಿ ಕಲೆಕ್ಷನ್ನಿನೊಂದಿಗೆ 25 ದಿನ ಪೂರೈಸಿದ ‘ನನ್ನಪ್ರಕಾರ’!

    ಭರ್ಜರಿ ಕಲೆಕ್ಷನ್ನಿನೊಂದಿಗೆ 25 ದಿನ ಪೂರೈಸಿದ ‘ನನ್ನಪ್ರಕಾರ’!

    ಬೆಂಗಳೂರು: ವಿನಯ್ ಬಾಲಾಜಿ ನಿರ್ದೇಶನದ ಮೊದಲ ಚಿತ್ರ ನನ್ನ ಪ್ರಕಾರ. ಬಿಡುಗಡೆ ಪೂರ್ವದಿಂದಲೇ ತನ್ನ ಹೊಸತನದ ಛಾಯೆಯಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಆ ನಂತರ ಎದುರಾದ ಒಂದಷ್ಟು ಎಡರುತೊಡರುಗಳನ್ನು ಸಮರ್ಥವಾಗಿಯೇ ಎದುರಿಸಿದ ಈ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಸೃಷ್ಟಿಸುತ್ತಾ ಮುಂದುವರೆಯುತ್ತಿದೆ.

    ಇದು ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ನನ್ನ ಪ್ರಕಾರ ವಿಭಿನ್ನವಾದ ಸ್ಕ್ರೀನ್ ಪ್ಲೇ, ಎಲ್ಲರನ್ನೂ ಹಿಡಿದಿಡುವಂಥಾ ಕಥೆಯೊಂದಿಗೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಥೇಟರಿನತ್ತ ಸೆಳೆದುಕೊಳ್ಳುತ್ತಾ ಸಾಗಿ ಬಂದಿರೋ ಚಿತ್ರ ಇದೀಗ ಗೆಲುವಿನ ನಗೆ ಬೀರಿದೆ. ಇದೇನು ಸಲೀಸಾಗಿ ದಕ್ಕಿದ ಗೆಲುವಲ್ಲ. ಬಹುಶಃ ಗಟ್ಟಿತನ ಇಲ್ಲದೇ ಇದ್ದಿದ್ದರೆ ನನ್ನ ಪ್ರಕಾರ ಇಪ್ಪತೈದು ದಿನದಾಚೆಗೆ ಸಾಗಿ ಬರುವುದೂ ಕೂಡಾ ಸಾಧ್ಯವಾಗುತ್ತಿರಲಿಲ್ಲ. ಸಾಹೋದಂಥಾ ಬಿಗ್ ಬಜೆಟ್ಟನ ಪರಭಾಷಾ ಚಿತ್ರ ಎಂಟ್ರಿ ಕೊಡೋ ಘಳಿಗೆಯಲ್ಲಿ ಈ ಚಿತ್ರ ಒಳ್ಳೆ ಪ್ರದರ್ಶನ ಕಾಣುತ್ತಿದ್ದರೂ ಥಿಯೇಟರು ಸಿಗದೆ ಕಂಗಾಲಾಗಿತ್ತು. ಆದರೂ ಕೂಡಾ ಸಾವರಿಸಿಕೊಂಡು ಗೆಲ್ಲುವಂತೆ ಮಾಡಿರೋದು ಈ ಸಿನಿಮಾದ ಹೊಸತನ.

    ಪರಭಾಷಾ ಚಿತ್ರಗಳ ಹಾವಳಿ ಸೇರಿದಂತೆ ಅದೆಂಥಾದ್ದೇ ಸವಾಲುಗಳೆದುರಾದರೂ ಒಳ್ಳೆ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈ ಬಿಡೋದಿಲ್ಲ. ಈ ಮಾತಿಗೆ ದಂಡಿ ದಂಡಿ ಉದಾಹರಣೆಗಳಿವೆ. ಆ ಸಾಲಿನಲ್ಲಿ ಒಂದಾಗಿ ಸೇರಿಕೊಂಡಿರೋ ನನ್ನಪ್ರಕಾರ, ರೋಮಾಂಚಕ ಗೆಲುವನ್ನೇ ತನ್ನದಾಗಿಸಿಕೊಂಡಿದೆ. ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದಲ್ಲಿ ಅರ್ಜುನ್, ನಿರಂಜನ್ ದೇಶಪಾಂಡೆ, ಪ್ರಮೋದ್ ಶೆಟ್ಟಿ ಕೂಡಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇಪ್ಪತೈದನೇ ದಿನದಾಚೆಗೆ ಯಶಸ್ವಿ ಯಾನ ಕೈಗೊಂಡಿರೋ ನನ್ನಪ್ರಕಾರ ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗೋ ಹುಮ್ಮಸ್ಸಿನೊಂದಿಗೆ ಮುನ್ನುಗ್ಗುತ್ತಿದೆ.

  • ನನ್ನಪ್ರಕಾರ: ಕನ್ನಡ ಚಿತ್ರದ ಕಸುವಿನ ಮುಂದೆ ಸೈಡಿಗೆ ಸರಿದ ಸಾಹೋ!

    ನನ್ನಪ್ರಕಾರ: ಕನ್ನಡ ಚಿತ್ರದ ಕಸುವಿನ ಮುಂದೆ ಸೈಡಿಗೆ ಸರಿದ ಸಾಹೋ!

    ವ್ಯಾವಹಾರಿಕವಾಗಿ ಪರಭಾಷಾ ಚಿತ್ರಗಳು ಎಂಥಾ ಸವಾಲೊಡ್ಡಿದರೂ ಕಸುವು ಹೊಂದಿರೋ ಕನ್ನಡ ಚಿತ್ರಗಳು ಅದರ ವಿರುದ್ಧ ಹೋರಾಡಿ ಗೆಲ್ಲತ್ತವೆಂಬುದಕ್ಕೆ ಒಂದಷ್ಟು ಉದಾಹರಣೆಗಳಿವೆ. ವಿನಯ್ ಬಾಲಾಜಿ ನಿರ್ದೇಶನದ ನನ್ನಪ್ರಕಾರ ಚಿತ್ರವೂ ಇದೀಗ ಆ ಸಾಲಿಗೆ ಸೇರಿಕೊಂಡಿದೆ. ಕುರುಕ್ಷೇತ್ರದಂಥಾ ಬಿಗ್ ಬಜೆಟ್ಟಿನ ಚಿತ್ರವೇ ಸಾಹೋ ಆರಂಭಿಕ ಅಬ್ಬರಕ್ಕೆ ಸಿಕ್ಕಿ ನಲುಗಿತ್ತು. ನನ್ನಪ್ರಕಾರ ಚಿತ್ರ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದ್ದ ಹೊತ್ತಿನಲ್ಲಿಯೇ ಸಾಹೋ ಬಿರುಗಾಳಿಯಂತೆ ಬಂದಪ್ಪಳಿಸಿತ್ತು. ಆದರೂ ಕೂಡ ಈ ಸಿನಿಮಾ ತನ್ನ ಕಸುವಿನಿಂದಲೇ ಅಸ್ತಿತ್ವ ಉಳಿಸಿಕೊಂಡು ಗೆದ್ದು ಬೀಗಿದೆ.

    ವಿನಯ್ ಬಾಲಾಜಿ ನಿರ್ದೇಶನದ ಈ ಚಿತ್ರ ಆರಂಭದಿಂದಲೂ ತನ್ನ ಕ್ರಿಯೇಟಿವಿಟಿ ಮತ್ತು ಹೊಸತನದ ಹೊಳಹಿನೊಂದಿಗೇ ಪ್ರೇಕ್ಷಕರನ್ನು ಸೆಳೆದುಕೊಂಡು ಬಂದಿತ್ತು. ಅದಕ್ಕೆ ತಕ್ಕುದಾದ ಕಥಾ ಹಂದರ ಹೊಂದಿದ್ದ ನನ್ನಪ್ರಕಾರವನ್ನು ಮೊದಲ ದಿನದಿಂದಲೇ ಪ್ರೆಕ್ಷಕರು ಮೆಚ್ಚಿಕೊಳ್ಳಲಾರಂಭಿಸಿದ್ದರು. ಹೀಗೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾ ಪಾಲಿಗೆ ಮಹಾ ಕಂಟಕವಾಗಿ ಬಂದೊಕ್ಕರಿಸಿಕೊಂಡಿದ್ದು. ಆದರೆ ಸಾಹೋ ಅತಿ ಹೆಚ್ಚು ಚಿತ್ರಮಂದಿರಗಳನ್ನು ಆವರಿಸಿಕೊಂಡು ಪ್ರದರ್ಶನಕ್ಕೆ ತೊಂದರೆಯಾದರೂ ಕೂಡಾ ನನ್ನಪ್ರಕಾರ ಸಾವರಿಸಿಕೊಂಡು ನಿಂತಿದೆ. ಮತ್ತೆ ಈ ಚಿತ್ರಕ್ಕೆ ಹೆಚ್ಚಿನ ಥಿಯೇಟರುಗಳು ಸಿಗುತ್ತಿವೆ. ಮಲ್ಟಿಫ್ಲೆಕ್ಸ್ ಗಳಲ್ಲಿಯೂ ಇದರ ಪ್ರದರ್ಶನಕ್ಕೆ ಹೊಸ ವೇಗ ಸಿಕ್ಕಿದೆ. ಇದನ್ನು ಓದಿ: ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

    ಸಾಹೋದಂಥಾ ಭಾರೀ ಬಜೆಟ್ಟಿನ ಚಿತ್ರಗಳ ಮುಂದೆ ಹೀಗೆ ಕನ್ನಡ ಚಿತ್ರ ಕಾಲೂರಿ ನಿಂತು ಸೆಣೆಸೋದೇನು ಸಾಮಾನ್ಯ ಸಂಗತಿಯಲ್ಲ. ಅದು ಸಾಧ್ಯವಾಗೋದು ಇಡೀ ಚಿತ್ರ ಪ್ರೇಕ್ಷಕರನ್ನು ಮೋಡಿಗೀಡು ಮಾಡುವಂತೆ ಮೂಡಿ ಬಂದಿದ್ದಾಗ ಮಾತ್ರ. ನನ್ನಪ್ರಕಾರ ಚಿತ್ರವನ್ನು ನಿರ್ದೇಶಕ ವಿನಯ್ ಬಾಲಾಜಿ ಅದೇ ರೀತಿ ರೂಪಿಸಿದ್ದಾರೆ. ಕಿಶೋರ್, ಪ್ರಿಯಾಮಣಿ ಮತ್ತು ಮಯೂರಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿರೋ ನನ್ನಪ್ರಕಾರ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾ ಹಂದರದ ಚಿತ್ರ. ಇದನ್ನೀಗ ಕನ್ನಡಿಗರು ಪ್ರೀತಿಯಿಂದ ಗೆಲ್ಲಿಸಿದ್ದಾರೆ. ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಗೆದ್ದ ಖುಷಿ ಚಿತ್ರತಂಡದಲ್ಲಿದೆ.

  • ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

    ನೋಡುಗರೆದೆಯಲ್ಲಿ ಕೌತುಕದ ಕಂದೀಲು ಹಚ್ಚುವ ನನ್ನಪ್ರಕಾರ!

    ಬೆಂಗಳೂರು: ಹೊಸಾ ಅಲೆಯ, ಹೊಸಾ ಪ್ರಯೋಗದ ಚಿತ್ರವಾಗಿ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲಿ ನಿರೀಕ್ಷೆ ಬಿತ್ತಿದ್ದ ಚಿತ್ರ ನನ್ನಪ್ರಕಾರ. ಕಥೆಯ ಸುಳಿವು, ತಾರಾಗಣದ ಮೆರುಗು ಮತ್ತು ಪೋಸ್ಟರ್, ಟ್ರೇಲರ್ ಗಳಿಂದಲೇ ಏರಿಕೊಂಡಿದ್ದ ಕ್ಯೂರಿಯಾಸಿಟಿ… ಇಂಥಾ ಸಕಾರಾತ್ಮಕ ವಶಾತಾವರಣದಲ್ಲಿಯೇ ಈ ಸಿನಿಮಾವೀಗ ತೆರೆಗೆ ಬಂದಿದೆ. ಅಷ್ಟಕ್ಕೂ ಇಂಥಾ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಕಥೆಗಳ ಮೇಲೆ ಪ್ರೇಕ್ಷಕರಲ್ಲೊಂದು ಮೋಹ ಇದ್ದೇ ಇರುತ್ತದೆ. ಅಂಥಾದ್ದೇ ಪ್ರೀತಿಯಿಂದ ಬಂದು ನನ್ನಪ್ರಕಾರವನ್ನು ನೋಡಿದವರೆಲ್ಲ ಬೆರಗಾಗಿ ಮೆಚ್ಚಿಕೊಳ್ಳುವಂತೆ ಈ ಚಿತ್ರ ಮೂಡಿ ಬಂದಿದೆ.

    ಈ ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಕಿಶೋರ್ ಇಲ್ಲಿ ಅಶೋಕ್ ಎಂಬ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಚ್ಚಿಕೊಳ್ಳೋದೇ ಒಂದು ಅಪಘಾತ ಮತ್ತು ಕೊಲೆಯ ಘಾಟಿನಿಂದ. ಅಪಘಾತವಾಗಿ ಹೊತ್ತಿ ಉರಿಯುತ್ತಿರೋ ಕಾರು ಮತ್ತು ಅದರ ಪಕ್ಕದಲ್ಲೊಂದು ಶವ… ಸಸ್ಪೆನ್ಸ್ ಥ್ರಿಲ್ಲ ಕಥೆಯೊಂದು ಟೇಕಾಫ್ ಆಗೋದೇ ಇಲ್ಲಿಂದ. ಆ ಜಾಗಕ್ಕೆ ಸೂಪರ್ ಕಾಪ್ ಆಗಿ ಕಿಶೋರ್ ಎಂಟ್ರಿ ಕೊಟ್ಟ ನಂತರದಲ್ಲಿ ಇದು ಚಿತ್ರವಿಚಿತ್ರವಾದ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಈ ಮೂಲಕವೇ ನೋಡುಗರೆದೆಯಲ್ಲಿ ಕೌತುಕದ ಕಂದೀಲು ಸದಾ ಹೊತ್ತಿ ಉರಿಯುವಂತೆ ಮಾಡುತ್ತದೆ.

    ಒಂದರೆ ಕ್ಷಣವೂ ಇಲ್ಲಿ ಬೇರೆ ಆಲೋಚಿಸಲು ಪುರಸೊತ್ತೇ ಇಲ್ಲ. ಅಂಥಾ ಆವೇಗ, ಚುರುಕುತನದೊಂದಿಗೆ ಕಥೆ ಚಲಿಸುತ್ತದೆ. ಇನ್ನೇನು ಸತ್ಯ ಬಯಲಾಯ್ತೆಂಬಷ್ಟರಲ್ಲಿ ಅದು ಸುಳ್ಳಾಗಿ ಮತ್ತೊಂದು ಸತ್ಯ ಮಿಣುಕಿದಂತಾಗಿ ರೋಚಕ ಹಾದಿಯಲ್ಲಿಯೇ ಕ್ಲೈಮ್ಯಾಕ್ಸ್ ತಲುಪಿಕೊಳ್ಳುತ್ತದೆ. ಇಂಥಾ ಹತ್ತಾರು ತಿರುವಿನ ಕಥೇಯನ್ನು ಗೊಂದಲವೇ ಇಲ್ಲದಂತೆ ರೂಪಿಸಿರುವಕ್ಸ್ನಿರ್ದೇಶಕ ವಿನಯ್ ಬಾಲಾಜಿಯ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕೆ ಕಿಶೋರ್, ಪ್ರಿಯಾಮಣಿ, ಮಯೂರಿ ಸೇರಿದಂತೆ ಎಲ್ಲ ನಟನಟಿಯರೂ ಸಾಥ್ ಕೊಟ್ಟಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿಯೇ ಹೊಸತನ ಹೊಂದಿರೋ, ಹೊಸಾ ಪ್ರಯೋಗಗಳ ಚಿತ್ರವಾಗಿ ಮನಸೆಳೆಯುತ್ತದೆ.

    ರೇಟಿಂಗ್: 4/5

  • ನನ್ನಪ್ರಕಾರ ಸ್ಕ್ರೀನ್ ಪ್ಲೇ ಕಂಡು ಖುಷಿಗೊಂಡ ಸೆನ್ಸಾರ್ ಮಂಡಳಿ!

    ನನ್ನಪ್ರಕಾರ ಸ್ಕ್ರೀನ್ ಪ್ಲೇ ಕಂಡು ಖುಷಿಗೊಂಡ ಸೆನ್ಸಾರ್ ಮಂಡಳಿ!

    ಬೆಂಗಳೂರು: ಈ ವಾರವೇ ಅದ್ದೂರಿಯಾಗಿ ಬಿಡುಗಡೆಯಾಗಲು ನನ್ನಪ್ರಕಾರ ಚಿತ್ರ ಸಜ್ಜುಗೊಂಡಿದೆ. ಇದು ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದರೂ ಕೂಡಾ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಸದ್ದು ಮಾಡುತ್ತಿರೋದಂತೂ ನಿಜ. ಇದೆಲ್ಲ ಹೇಗೆ ಸಾಧ್ಯವಾಯಿತೆಂಬ ಅಚ್ಚರಿ ಯಾರಿಗಾದರೂ ಇದ್ದರೆ ಅದಕ್ಕೆ ಕ್ರಿಯೇಟಿವಿಟಿ, ಹೊಸತನಕ್ಕಾಗಿನ ಹುಡುಕಾಟ ಎಂಬುದಕ್ಕಿಂತ ಬೇರ್ಯಾವ ಉತ್ತರವೂ ಸಿಗಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ಪ್ರತೀ ವಿಚಾರದಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಬೆರೆಸಿರೋ ನಿರ್ದೇಶಕರು ನನ್ನಪ್ರಕಾರ ಸ್ಕ್ರೀನ್‍ಪ್ಲೇನಲ್ಲಿ ನವೀನ ಪ್ರಯೋಗ ಹೊಂದಿದೆ ಅನ್ನೋ ವಿಚಾರವನ್ನು ಹೇಳಿದ್ದರು. ಇದೀಗ ಆ ಸ್ಕ್ರೀನ್ ಪ್ಲೇ ಚಮತ್ಕಾರ ಸೆನ್ಸಾರ್ ಮಂಡಳಿ ಅಧಿಕಾರಿಗನ್ನೂ ಥ್ರಿಲ್ ಆಗಿಸಿದೆ.

    ನನ್ನ ಪ್ರಕಾರ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ. ಇದರೊಂದಿಗೆ ಸೆನ್ಸಾರ್ ಮಂಡಳಿ ಅಧಿಕಾರಿಗಳ ಕಡೆಯಿಂದ ಭರಪೂರವಾದ ಮೆಚ್ಚುಗೆಗಳೂ ಸಿಕ್ಕಿವೆ. ಪ್ರಧಾನವಾಗಿ ಅವರಿಗೆ ನನ್ನಪ್ರಕಾರದಲ್ಲಿ ಮಾಡಲಾಗಿರೋ ಸ್ಕ್ರೀನ್ ಪ್ಲೇ ಪ್ರಯೋಗಗಳು ಇಷ್ಟವಾಗಿವೆ. ಇತ್ತೀಚೆಗೆ ತಾವು ನೋಡಿದ ಚಿತ್ರಗಳ ಸಾಲಿನಲ್ಲಿ ಇದೊಂದು ಅದ್ಭುತವಾದ ಸ್ಕ್ರೀನ್‍ಪ್ಲೇ ಪ್ರಯೋಗ ಹೊಂದಿರೋ ಚಿತ್ರ ಎಂಬ ಮುಕ್ತಕಂಠದ ಮೆಚ್ಚುಗೆಯೂ ಅವರ ಕಡೆಯಿಂದ ಸಿಕ್ಕಿದೆ. ಇದರಿಂದ ನಿರ್ದೇಶಕ ವಿನಯ್ ಬಾಲಾಜಿ ಸೇರಿದಂತೆ ಇಡೀ ಚಿತ್ರತಂಡವೇ ಸಂತಸಗೊಂಡಿದೆ.

    ಸೆನ್ಸಾರ್ ಮಂಡಳಿ ಅಧಿಕಾರಿಗಳು ಹೀಗೆ ಮೆಚ್ಚುಗೆ ಸೂಚಿಸಿರೋದು ಇಡೀ ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಕಸುವೆಂಥಾದ್ದಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷಿ. ಕೇವಲ ಸ್ಕ್ರೀನ್ ಪ್ಲೇನಲ್ಲಿ ಮಾತ್ರವಲ್ಲದೇ ಎಲ್ಲ ವಿಚಾರಗಳಲ್ಲಿಯೂ ಇಂಥಾದ್ದೇ ಹೊಸತನ ಮತ್ತು ಹೊಸಾ ಪ್ರಯೋಗಗಳೊಂದಿಗೆ ನನ್ನಪ್ರಕಾರ ಚಿತ್ರ ರೂಪಿಸಲ್ಪಟ್ಟಿದೆಯಂತೆ. ಇದೆಲ್ಲವೂ ಪ್ರೇಕ್ಷಕರಿಗೆ ಹೊಸಾ ಫೀಲ್ ನೀಡಲಿವೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಚಿತ್ರವಾದರೂ ಅದನ್ನು ಮೀರಿದ ಸಸ್ಪೆನ್ಸುಗಳು ಪ್ರೇಕ್ಷಕರಿಗಾಗಿ ಕಾದಿವೆ.

  • ಬುಕ್ ಮೈ ಶೋ, ಐಎಂಡಿಬಿಯಲ್ಲೂ ನನ್ನಪ್ರಕಾರದ್ದೇ ಹವಾ!

    ಬುಕ್ ಮೈ ಶೋ, ಐಎಂಡಿಬಿಯಲ್ಲೂ ನನ್ನಪ್ರಕಾರದ್ದೇ ಹವಾ!

    ಬೆಂಗಳೂರು:  ಪ್ರಿಯಾಮಣಿ, ಕಿಶೋರ್ ಮತ್ತು ಮಯೂರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ನನ್ನಪ್ರಕಾರ ಚಿತ್ರ ಈ ವಾರ ತೆರೆಗಾಣುತ್ತಿದೆ. ಮೋಷನ್ ಪೋಸ್ಟರ್, ಹಾಡು ಮತ್ತು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿರೋ ಟ್ರೇಲರ್‍ಗಳೆಲ್ಲವೂ ನನ್ನಪ್ರಕಾರವನ್ನು ಬಹುನಿರೀಕ್ಷಿತ ಚಿತ್ರವಾಗಿ ನೆಲೆಗಾಣಿಸಿದೆ. ಹೊಸಬರ ಚಿತ್ರಗಳು ಕನ್ನಡ ಚಿತ್ರರಂಗದ ಗೌಜು ಗದ್ದಲ ಮೀರಿಕೊಂಡು ಸದ್ದು ಮಾಡೋದೇ ಒಂದು ಸಾಹಸ. ಅಂಥಾದ್ದರಲ್ಲಿ ಈ ಚಿತ್ರ ದೇಶಮಟ್ಟದಲ್ಲಿ ಗಮನ ಸೆಳೆಯೋದರೊಂದಿಗೆ ಪ್ರತೀ ಪ್ರೇಕ್ಷಕರಲ್ಲೂ ನೋಡಲೇಬೇಕೆನ್ನುವ ಉತ್ಸಾಹ ಹೆಚ್ಚಿಸಿಬಿಟ್ಟಿದೆ.

    ವಿನಯ್ ಬಾಲಾಜಿ ನಿರ್ದೇಶನ ಮಾಡಿರೋ ನನ್ನ ಪ್ರಕಾರ ಚಿತ್ರ ಐಎಂಡಿಬಿಯಲ್ಲಿಯೂ ಮೂರನೇ ಸ್ಥಾನ ಪಡೆದುಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಆ ಸಾಲಿನಲ್ಲಿ ಬಾಲಿವುಡ್ ಚಿತ್ರಗಳಿಗೇ ಪೈಪೋಟಿ ನೀಡಿದ್ದ ಈ ಕನ್ನಡ ಚಿತ್ರದ ಬಗ್ಗೆ ಪರಭಾಷಾ ಚಿತ್ರರಂಗದಲ್ಲಿಯೂ ಒಲವು ಹುಟ್ಟಿಕೊಂಡಿತ್ತು. ಇದೀಗ ಬಿಡುಗಡೆಯ ಕಡೇ ಕ್ಷಣಗಳಲ್ಲಿ ಬುಕ್ ಮೈ ಶೋನಲ್ಲಿಯೂ ಕೂಡಾ ಈ ಚಿತ್ರ ಟ್ರೆಂಡಿಂಗ್‍ನಲ್ಲಿದೆ. ಇದನ್ನು ನೋಡಲೇ ಬೇಕೆಂಬ ಪ್ರೇಕ್ಷಕರ ಉತ್ಸಾಹ ಎಂಥಾದ್ದಿದೆ ಅನ್ನೋದಕ್ಕೂ ಬುಕ್ ಮೈ ಶೋನಲ್ಲಿ ಸಾಕ್ಷಿಗಳಿವೆ.

    ಇನ್ನು ಎಲ್ಲ ವರ್ಗದ ಪ್ರೇಕ್ಷರನ್ನೂ ಕೂಡಾ ನನ್ನ ಪ್ರಕಾರ ಈಗಾಗಲೇ ಆವರಿಸಿಕೊಂಡಿದೆ. ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲು ಪ್ರೀತಿಯಿಂದ ಇದರ ಟ್ರೇಲರ್ ಅನ್ನು ಲಾಂಚ್ ಮಾಡಿದ್ದರು. ಖುದ್ದು ದರ್ಶನ್ ಅವರೇ ಅದನ್ನು ನೋಡಿ ಥ್ರಿಲ್ ಆಗಿದ್ದರು. ಈ ಚಿತ್ರ ದೊಡ್ಡಮಟ್ಟದಲ್ಲಿ ಗೆಲುವು ಕಾಣಲಿದೆ ಅನ್ನೋದರ ಸಂಕೇತದಂಥಾ ಮಾತುಗಳನ್ನೂ ಆಡಿದ್ದರು. ಆ ನಂತರದಲ್ಲಿಯಂತೂ ನನ್ನ ಪ್ರಕಾರ ಯೂಟ್ಯೂಬ್‍ನಲ್ಲಿಯೂ ವ್ಯಾಪಕ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಒಟ್ಟಾರೆಯಾಗಿ ಇದೊಂದು ಹೊಸಾ ಅಲೆಯ, ಪ್ರಯೋಗಾತ್ಮಕ ಅಂಶಗಳಿರೋ ಸಸ್ಪೆನ್ಸ್ ಥ್ರಿಲ್ಲರ್ ಆಗಿ ಪ್ರೇಕ್ಷಕರನ್ನು ಥೇಟರಿನತ್ತ ಸಾಗಿ ಬರುವಂತೆ ಮಾಡಿದೆ.

  • ನನ್ನ ಪ್ರಕಾರ: ಏಳನೇ ತಾರೀಕು ಕಾದಿದೆಯೊಂದು ಅಚ್ಚರಿ!

    ನನ್ನ ಪ್ರಕಾರ: ಏಳನೇ ತಾರೀಕು ಕಾದಿದೆಯೊಂದು ಅಚ್ಚರಿ!

    ಬೆಂಗಳೂರು: ಯಶಸ್ವಿ ಚಿತ್ರವೊಂದು ಬಿಡುಗಡೆಗೂ ಮುನ್ನವೇ ಯಾವ್ಯಾವ ಥರದಲ್ಲಿ ಸುದ್ದಿಯಾಗಬಹುದೋ ಅಷ್ಟೆಲ್ಲ ರೀತಿಯಲ್ಲಿ ಸದ್ದು ಮಾಡುತ್ತಿರೋ ಚಿತ್ರ ನನ್ನ ಪ್ರಕಾರ. ವಿನಯ್ ಬಾಲಾಜಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಪ್ರತಿಭಾವಂತ ನಟ ಕಿಶೋರ್ ಕುಮಾರ್ ಕೂಡಾ ಪ್ರಧಾನ ಪಾತ್ರದಲ್ಲಿ ಮಿಂಚಲಣಿಯಾಗಿದ್ದಾರೆ. ಎಲ್ಲ ದಿಕ್ಕುಗಳಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಈ ಚಿತ್ರ ಬಿಡುಗಡೆಯ ದಿನಾಂಕ ಹತ್ತಿರಾಗುತ್ತಿರೋ ಘಳಿಗೆಯಲ್ಲಿ ಮಹತ್ವದ ಟೈಟಲ್ ಸಾಂಗ್‍ವೊಂದನ್ನು ಲಾಂಚ್ ಮಾಡಲು ನಿರ್ಧರಿಸಿದೆ.

    ಟೈಟಲ್ ಟ್ರ್ಯಾಕ್ ಎಂದರೆ ಒಂದಷ್ಟು ಸಿದ್ಧಸೂತ್ರಗಳಿದ್ದಾವೆ. ಆದರೆ ಒಂದಿಡೀ ಚಿತ್ರವನ್ನೇ ಹೊಸತನದಲ್ಲಿ ರೂಪಿಸಿರೋ ಚಿತ್ರತಂಡ ಟೈಟಲ್ ಟ್ರ್ಯಾಕ್ ವಿಚಾರದಲ್ಲಿ ಸಿದ್ಧಸೂತ್ಗಳಿಗೆ ಬದ್ಧವಾಗಿ ಆಲೋಚಿಸೋದು ಖಂಡಿತಾ ಸಾಧ್ಯವಿಲ್ಲ. ವಿನಯ್ ಬಾಲಾಜಿ ಈ ನಂಬಿಕೆಗೆ ತಕ್ಕುದಾಗಿಯೇ ಸದರಿ ಟೈಟಲ್ ಟ್ರ್ಯಾಕ್ ಅನ್ನು ರೂಪಿಸಿದ್ದಾರೆ. ಇದು ಏಳನೇ ತಾರೀಕು ಬುಧವಾರ ಸಂಜೆ ಜೀó ಮ್ಯೂಸಿಕ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಲಿದೆ.

    ಈ ಟೈಟಲ್ ಟ್ರ್ಯಾಕಿಗೆ ಭರ್ಜರಿ ಚೇತನ್ ಸಾಹಿತ್ಯ ಬರೆದಿದ್ದಾರೆ. ಇದರ ಸಾಹಿತ್ಯ ರಚನೆಯೂ ಕೂಡಾ ಚೇತನ್ ಪಾಲಿಗೆ ಸವಾಲಾಗಿತ್ತು. ಯಾಕೆಂದರೆ ಅದು ಇಡೀ ಕಥೆಯ ಅಂಶಗಳನ್ನು ಹೇಳುತ್ತಲೇ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡಿ ಒಂದು ಕ್ಲೂವನ್ನು ಕೂಡಾ ಪ್ರೇಕ್ಷಕರತ್ತ ದಾಟಿಸುವಂತಿರಬೇಕಿತ್ತಂತೆ. ಆದರೆ ಇಂಥಾ ಸವಾಲು ಸ್ವೀಕರಿಸಿದ್ದ ಚೇತನ್ ತುಂಬಾ ಕಡಿಮೆ ಅವಧಿಯಲ್ಲಿಯೇ ಈ ಹಾಡು ಬರೆದು ಕೊಟ್ಟಿದ್ದರಂತೆ. ಅರ್ಜುನ್ ರಾಮು ಅದಕ್ಕೆ ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದರೂ ಕೂಡಾ ಅದಕ್ಕೆ ನಿರ್ದೇಶಕರ ನಿರೀಕ್ಷೆಯಂತೆ ಧ್ವನಿಯಾಗೋ ಗಾಯಕ ಮಾತ್ರ ಸಿಕ್ಕಿರಲಿಲ್ಲವಂತೆ. ಕಡೆಗೂ ಸಿಕ್ಕವರು ತಮಿಳಿನ ಸೂಪರ್ ಹಿಟ್ ಮೂವಿ ವಿಕ್ರಂ ವೇದಾಗೆ ಟೈಟಲ್ ಟ್ಯ್ರಾಕ್ ಹಾಡಿದ್ದ ಶಿವಂ.

    ಶಿವಂರನ್ನು ಸಂಪರ್ಕಿಸಿ, ಕಥೆ ಮತ್ತು ಹಾಡಿನ ಭಾವಗಳನ್ನು ವಿವರಿಸಿ ಒಂದಷ್ಟು ಕನ್ನಡ ಕಲಿಸುವಲ್ಲಿಯೂ ನಿರ್ದೇಶಕರು ಯಶ ಕಂಡಿದ್ದರು. ಹಾಗೆ ಶಿವಂ ಈ ಅದ್ಭುತ ಹಾಡಿಗೆ ಅದರಂತೆಯೇ ಧ್ವನಿ ನೀಡಿದ್ದಾರಂತೆ. ಕಥೆಯ ಸಾರವನ್ನು ಹೇಳುತ್ತಾ, ಪ್ರೇಕ್ಷಕರ ಗೊಂದಲ ನಿವಾರಣೆ ಮಾಡುತ್ತಾ ಕ್ಲೈಮ್ಯಾಕ್ಸ್ ಹಂತದಲ್ಲಿ ಈ ಹಾಡು ಬರಲಿದೆ. ಇದುವೇ ಕ್ಲೈಮ್ಯಾಕ್ಸ್ ನಲ್ಲೇನಾಗಲಿದೆ ಎಂಬ ಸುಳಿವನ್ನೂ ಕೊಡಲಿದೆ. ಈ ವಿಶೇಷವಾದ ಹಾಡು ಇದೇ ಬುಧವಾರ ಸಂಜೆ ಅನಾವರಣಗೊಳ್ಳಲಿದೆ.