Tag: ವಿನಯ್ ಗುರೂಜಿ

  • ನೋ ಕಾಮೆಂಟ್, ಅವರವರ ಭಾವ ಅವರವರದ್ದು- ರಘು ಆಚಾರ್ ಆರೋಪಕ್ಕೆ ವಿನಯ್ ಗುರೂಜಿ ಪ್ರತಿಕ್ರಿಯೆ

    ನೋ ಕಾಮೆಂಟ್, ಅವರವರ ಭಾವ ಅವರವರದ್ದು- ರಘು ಆಚಾರ್ ಆರೋಪಕ್ಕೆ ವಿನಯ್ ಗುರೂಜಿ ಪ್ರತಿಕ್ರಿಯೆ

    ಬೆಂಗಳೂರು: ನೋ ಕಾಮೆಂಟ್, ಅವರವರ ಭಾವ ಅವರವರದ್ದು. ಅವರು ಹೇಳಿದ ಸನ್ನಿವೇಶ ಅಲ್ಲಿರಲಿಲ್ಲ ಎಂದು ಕಾಂಗ್ರೆಸ್‌ ಪರಿಷತ್‌ ಸದಸ್ಯ ರಘು ಆಚಾರ್‌ ಆರೋಪಕ್ಕೆ ವಿನಯ್‌ ಗುರೂಜಿ ಪ್ರತಿಕ್ರಿಯಿಸಿದ್ದಾರೆ.

    ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ಸಂಬಂಧ ಇಂದು ವಿನಯ್‌ ಗುರೂಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

    ಭೇಟಿಯ ಬಳಿಕ ಮಾಧ್ಯಮಗಳು ರಘು ಆಚಾರ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ನಾನೇ ನಿಶ್ಚಯ ಮಾಡಿದ ಮದುವೆ ಇದು. ಲಿಂಗಾಯತರಲ್ಲಿ ಒಂದು ಸಂಪ್ರದಾಯ ಇದೆ. ಗುರುಗಳು ಊಟ ಮಾಡಿದ ಮೇಲೆ ಉಳಿದ ಊಟವನ್ನು ಭಕ್ತರು ಪ್ರಸಾದವಾಗಿ ಸ್ವೀಕರಿಸುವ ಪದ್ಧತಿ ಇದೆ. ನಾನು ಊಟ ಮಾಡಿದ ಮೇಲೆ ತಟ್ಟೆ ಎಲ್ಲಿಟ್ಟಿದ್ದೇನೆ. ಲೋಟ ಎಲ್ಲಿಟ್ಟಿದ್ದೇನೆ ಎಂದು ನೋಡುವುದಕ್ಕೆ ಆಗುವುದಿಲ್ಲ. ನನ್ನ ಗಮನಕ್ಕೆ ಬರದೇ ಈ ಪ್ರಸಂಗ ನಡೆದಿದೆ. ನನ್ನ ಗಮನಕ್ಕೆ ಬಂದಿದ್ದರೆ ಗಾಂಧಿವಾದ ರೀತಿ ಖಂಡಿಸುತ್ತಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಸಿಎಂ ಜೊತೆ ಚರ್ಚೆ ನಡೆಸಿದ ವಿಷಯಕ್ಕೆ ಕೇಳಲಾದ ಪ್ರಶ್ನೆಗೆ, ಗೋಹತ್ಯೆ ನಿಷೇಧ ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವ ವಿಷಯ ಕುರಿತು ಚರ್ಚಿಸಲು ಬಂದಿದ್ದೆವು. ಹಿಂದೂ ಧರ್ಮದಲ್ಲಿ ನಾವು ಗೋವುಗಳಿಗೆ ವಿಶೇಷ ಗೌರವ ನೀಡಿದ್ದೇವೆ. ರಾಷ್ಟ್ರೀಯ ಪಕ್ಷಿ, ಪ್ರಾಣಿಗೆ ಹೇಗೆ ಈಗ ಕಾನೂನು ಇದೆಯೇ ಅದೇ ರೀತಿ ಕಾನೂನು ತರಬೇಕೆಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

    ಗೋಹತ್ಯೆ ನಿಷೇಧ ಅನಿವಾರ್ಯ ಇದೆ. ಅಧಿಕಾರಿಗಳ ಚರ್ಚೆ ಮಾಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ನಾನು ಕೊಟ್ಟ ಸಲಹೆಗಳನ್ನು ಸಿಎಂ ಅವರು ಇಲ್ಲಿಯವರೆಗೆ ನಿರಾಕರಿಸಿಲ್ಲ. ಈ ಮನವಿಯನ್ನೂ ಈಡೇರಿಸುವ ಭರವಸೆ ಇದೆ ಎಂದು ಹೇಳಿದರು.

    ಕಳೆದ ವಾರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್‌, ರಾಜ್ಯ ಸರಕಾರವು ಗೋ ಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಿದೆ. ಜಾನುವಾರುಗಳ ರಕ್ಷಣೆಗೆ ಸರಕಾರ ಹೊಸ ಕ್ರಮಗಳನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದರು.

  • ಗುರುಗಳಲ್ಲಿ ಭಗವಂತನನ್ನು ಕಾಣುತ್ತೇವೆ, ಅವರು ಸೇವಿಸಿದ ಆಹಾರ ನಮಗೆ ಪ್ರಸಾದ – ರಘು ಆಚಾರ್‌ಗೆ ಶರವಣ ಟಾಂಗ್

    ಗುರುಗಳಲ್ಲಿ ಭಗವಂತನನ್ನು ಕಾಣುತ್ತೇವೆ, ಅವರು ಸೇವಿಸಿದ ಆಹಾರ ನಮಗೆ ಪ್ರಸಾದ – ರಘು ಆಚಾರ್‌ಗೆ ಶರವಣ ಟಾಂಗ್

    ಬೆಂಗಳೂರು: ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಅವಧೂತ ವಿನಯ್ ಗುರೂಜಿ ವಿರುದ್ಧ ಆರೋಪಿಸಿದ್ದ ರಘು ಆಚಾರ್‌ಗೆ  ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಅವಧೂತ ವಿನಯ್ ಗುರೂಜಿ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪಿಸಿದ್ದರು. ಈ ಬಗ್ಗೆ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ರಘು ಆಚಾರ್‌ಗೆ ಟಾಂಗ್ ನೀಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಆಚಾರ್ ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿದೆ. ಅವಧೂತ ವಿನಯ್ ಗುರೂಜಿಯವರ ಅಪಾರ ಶಿಷ್ಯವೃಂದದಲ್ಲಿ ನಾನು ಒಬ್ಬ ಭಕ್ತ. ಮೊದಲನೆಯದಾಗಿ ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗೆ ಒಳಪಟ್ಟಿರುತ್ತದೆ. ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ. ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ ಹಾಗೂ ನಿಮಗೂ ಕೂಡ ಬಲವಂತವಾಗಿ ತಿಳಿಸಿಲ್ಲ.

    ನಂಬಿಕೆ ಇರುವವರು ಅದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ನೀವು ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ನಂಬಿಕೆಯ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಇನ್ನು ನಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿ ಕಾಳಜಿ ಬೇಡ, ಗುರುಗಳು ಆರೋಗ್ಯದಿಂದ ಇದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ. ನಮ್ಮ ಆಚಾರ-ವಿಚಾರಗಳ ಬಗ್ಗೆ, ನಂಬಿಕೆಗಳ ಬಗ್ಗೆ, ಕೆಲವರು ಓಲೈಕೆಗಾಗಿ ಕೆಟ್ಟದಾಗಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಹಾಗಾಗಿ ಇಂತಹ ವಿಚಾರಗಳನ್ನು ಪ್ರಚಾರಕ್ಕಾಗಿ ಈ ತರಹದ ಮಾತುಗಳನ್ನು ನಿಲ್ಲಿಸಿ.

    ನಿಮಗೇನಾದರೂ ವಿನಯ್ ಗುರೂಜಿ ರವರ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದರೆ ನಿಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ. ನೀವು ಗುರುಗಳ ಬಗ್ಗೆ ಇತರ ಹಗುರವಾಗಿ ಮಾತನಾಡಿರುವುದು ನನ್ನ ಮನಸ್ಸಿಗೆ ನೋವಾಗಿದೆ. ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ರಘು ಆಚಾರ್ ಖಾರವಾದ ಪದಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

    ಬೆಂಗಳೂರು: ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂದು ಅವಧೂತ ವಿನಯ್ ಗುರೂಜಿ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಗರಂ ಆಗಿದ್ದಾರೆ.

    ಈ ವಿಚಾರವಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ರಘು ಆಚಾರ್, ಅಭಿಮಾನಿಗಳಿಂದ ಅವಧೂತರೆನಿಸಿಕೊಂಡಿರುವ ವಿನಯ್ ಗುರೂಜಿ ಗೌರಿಗದ್ದೆ ನಿಮಗೊಂದು ಬಹಿರಂಗ ಬಿನ್ನಹ. ಇಷ್ಟಕ್ಕೂ ಇಂತಹದೊಂದು ಬಹಿರಂಗ ಬಿನ್ನಹ ಬರೆಯಲು ಪ್ರಚೋದಿಸಿದ್ದು, ಸೋಮವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಮ್ಮ ಹಾಗೂ ನಿಮ್ಮ ಶಿಷ್ಯರ ನಡವಳಿಕೆ ಎಂದು ದೂರಿದ್ದಾರೆ.

    https://www.facebook.com/RaghuAcharG/posts/135567878217937

    ಪತ್ರದಲ್ಲಿ ಏನಿದೆ?
    ಭೂತ ಭವಿಷ್ಯ ಬಲ್ಲ ನಿಮಗೆ ಗೊತ್ತಿರುವಂತೆಯೇ ಇಡೀ ಜಗತ್ತನ್ನು ಇಂದು ಕೊರೊನಾ ಎಂಬ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ.

    ಇಂತಹ ಮಹಾಮಾರಿಯಿಂದ ವೈಯಕ್ತಿಕವಾಗಿ ನಮ್ಮನ್ನು ಹಾಗೂ ನಮ್ಮ ಸುತ್ತಮುತ್ತಲೂ ಇರುವವರನ್ನು ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ನಮ್ಮ ದೇಶದ ಸರ್ಕಾರಗಳು ಕೆಲವೊಂದು ಸಾರ್ವಜನಿಕ ನಡವಳಿಕೆಯನ್ನು ನಿಯಮದಂತೆ ವಿಧಿಸಿವೆ. ಅದರಲ್ಲಿ ಮುಖ್ಯವಾದವು ನಮ್ಮ ಉಸಿರು ಅನ್ಯರಿಗೆ ತಗುಲದಂತೆ ಮಾಸ್ಕ್ ಧರಿಸುವುದು ಹಾಗೂ ನಮ್ಮ ಉಗುಳು ಅನ್ಯರಿಗೆ ತಾಗದಂತೆ ವರ್ತಿಸುವುದು. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮಹಾಮಹೀಮರಾದ ತಮ್ಮಿಂದ ಹಾಗೂ ತಮ್ಮ ಶಿಷ್ಯರಿಂದ ಈ ಎರಡು ನಿಯಮಗಳ ಬಹಿರಂಗ ಉಲ್ಲಂಘನೆಗೊಂಡು ನಿಜಕ್ಕೂ ಅಚ್ಚರಿ ಹಾಗೂ ಗಾಬರಿ ಮೂಡಿತು.

    ನೀವು ಮಾಸ್ಕ್ ತೊಡದೆ ಎಲ್ಲರೊಂದಿಗೆ ಆತ್ಮೀಯವಾಗಿ ವರ್ತಿಸುತ್ತಿದ್ದಿರಿ. ಆಶೀರ್ವಾದ ಮಾಡುತ್ತಿದ್ದಿರಿ. ಮದುವೆಯ ಊಟ ಮಾಡಿದ ನಂತರ ತಾವು ತಿಂದುಂಡು ಬಿಟ್ಟ ಆಹಾರವನ್ನು ನಿಮ್ಮ ಶಿಷ್ಯರೂ ಎಲ್ಲರಿಗೂ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು. ಗೌರವ, ನಂಬಿಕೆ, ಭಕ್ತಿ ಇವೆಲ್ಲ ಇರಲಿ, ಇರಬೇಕು. ಒಪ್ಪುತ್ತೇನೆ. ಆದರೆ ಕೊರೊನಾದಂತಹ ಮಾರಕ ಸನ್ನಿವೇಶದಲ್ಲಿ ಇಂತಹದೊಂದು ನಡವಳಿಕೆಯನ್ನು ನಿಮ್ಮ ಹಾಗೂ ನಿಮ್ಮ ಶಿಷ್ಯರಿಂದ ಕಂಡು ನನಗೆ ನಂಬಿಕೆಯೇ ಬರಲಿಲ್ಲ.

    ನಿಮ್ಮ ಶಿಷ್ಯರ ನಡವಳಿಕೆ ನಿಮ್ಮ ಗಮನಕ್ಕೆ ಬರದೇ ಈ ಅಚಾತುರ್ಯ ನಡೆಯುತ್ತಿರಬಹುದು ಎಂದು ಭಾವಿಸಿ ಈ ಬಗ್ಗೆ ವಿಚಾರಿಸಿದೆ. ಆಗ ಇದು ನಿಮ್ಮ ಗಮನಕ್ಕೆ ಬಂದೇ ನಡೆಯುತ್ತಿದೆ ಎಂದು ಕೇಳಿಪಟ್ಟೆ. ಇದು ನಿಜಕ್ಕೂ ಆಘಾತ ತರುವಂತಹ ವಿಚಾರ. ಕೊರೊನಾ ಕಾಲದಲ್ಲಿ ನಿಮ್ಮಿಂದ ಇಂತಹ ನಡವಳಿಕೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮ ಬಗ್ಗೆ ಅಪಾರ ಗೌರವ ಹೊಂದಿದ್ದರೂ ಜನರ ಜೀವಕ್ಕೆ ಅಪಾಯ ತರುವಂತಹ ಆ ಬೇಜವಾಬ್ದಾರಿ ನಡವಳಿಕೆಯನ್ನು ಖಂಡಿಸದೆ ನನಗೆ ಬೇರೆ ವಿಧಿಯಿಲ್ಲ.

    ದಯಮಾಡಿ ಈ ವರ್ತನೆಯನ್ನು ಬದಲಾಯಿಸಿಕೊಳ್ಳಿ. ತನ್ಮೂಲಕ ನೀವು ಕೊಟ್ಟಿದ್ದನ್ನು ಪ್ರಸಾದ ಎಂದು ಭಾವಿಸುವ ಜನರ ಜೀವದೊಂದಿಗೆ ಚೆಲ್ಲಾಟ ಆಡುವುದನ್ನು ಇನ್ನಾದರೂ ನಿಲ್ಲಿಸುವಂತೆ ಕೋರುತ್ತೇನೆ ಎಂದು ರಘು ಆಚಾರ್ ಬಹಿರಂಗ ಪತ್ರವನ್ನು ಬರೆದಿದ್ದಾರೆ.

  • ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ

    ರಂಭಾಪುರಿ ಶ್ರೀಗಳ ಪಾದಪೂಜೆ ಮಾಡಿದ ವಿನಯ್ ಗುರೂಜಿ

    – ಶ್ರೀಚಕ್ರವನ್ನ ರೇಣುಕಾಚಾರ್ಯ ಪ್ರತಿಮೆ ಕೆಳಗಿಡಲು ಮನವಿ

    ಚಿಕ್ಕಮಗಳೂರು: ವಿನಯ್ ಗುರುಜಿ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ಶ್ರೀಗಳ ಪಾದ ಪೂಜೆ ನೆರವೇರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ವಿನಯ್ ಗುರೂಜಿ, ಪಂಚಪೀಠಗಳಲ್ಲಿ ಮೊದಲನೇ ಪೀಠವಾದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪಠದ ಶ್ರೀಗಳ ಪಾದಪೂಜೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ವಿನಯ್ ಗುರೂಜಿ, ರಂಭಾಪುರಿ ಶ್ರೀಗಳಾದ ಶ್ರೀ ವೀರ ಸೋಮೇಶ್ವರ ಸ್ವಾಮೀಜಿ ಪಾದಪೂಜೆ ಮಾಡಿ ಪುಷ್ಪಾರ್ಚನೆ ಗೈದಿದ್ದಾರೆ.

    ವಿನಯ್ ಗುರೂಜಿ ಇತ್ತೀಚಿಗೆ ಕಾಶಿಗೆ ಹೋಗಿ ಬಂದಿದ್ದರು. ಆಗ ಅಲ್ಲಿಂದ ಶ್ರೀಚಕ್ರ ತಂದಿದ್ದರು. ಅದನ್ನು ರಂಭಾಪುರಿ ಪೀಠಕ್ಕೆ ನೀಡಬೇಕೆಂದು ವಿನಯ್ ಗುರೂಜಿಗೆ ಅವರ ಗುರುಗಳ ಆಜ್ಞೆಯಾಗಿತ್ತಂತೆ. ಈ ಹಿನ್ನೆಲೆ ಇಂದು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ ರಂಭಾಪುರಿ ಶ್ರೀಗಳಿಗೆ ಪಾದಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿ, ಶ್ರೀ ಚಕ್ರ ನೀಡಿದ್ದಾರೆ.

    ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ಮನವಿ: ಇತ್ತೀಚೆಗೆ ಕಾಶಿಗೆ ಹೋಗಿದ್ದ ವಿನಯ್ ಗುರೂಜಿ, ಎರಡು ಶ್ರೀಚಕ್ರಗಳನ್ನು ತಂದಿದ್ದರು. ಅದರಲ್ಲಿ ಒಂದನ್ನು ರಂಭಾಪುರಿ ಪೀಠಕ್ಕೆ ನೀಡಿದ್ದು, ಶೀಘ್ರದಲ್ಲೇ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 61 ಅಡಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಆ ಪ್ರತಿಮೆ ಕೆಳಗೆ ಶ್ರೀಚಕ್ರ ಇಡುವಂತೆ ವಿನಯ್ ಗುರೂಜಿ ರಂಭಾಪುರಿ ಶ್ರೀಗಳಿಗೆ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ರಂಭಾಪುರಿ ಪೀಠಕ್ಕೆ ಆಗಮಿಸಿದ ವಿನಯ್ ಗುರೂಜಿ, ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ತಾವೇ ಪೂಜೆ ಮಾಡಿ, ದರ್ಶನ ಪಡೆದಿದ್ದಾರೆ. ಮಠದ ಆವರಣದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಳೆದು, ರಂಭಾಪುರಿ ಶ್ರೀಗಳ ಜೊತೆಯೂ ದೀರ್ಘ ಸಮಾಲೋಚನೆ ನಡೆಸಿದ್ದಾರೆ.

    ರಾಜಕಾರಣಿಗಳು ವಿನಯ್ ಗುರೂಜಿ ಪರಮ ಭಕ್ತರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶ್ರೀನಿವಾಸಪುರ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಕುಮಾರ್ ವಿನಯ್ ಗುರೂಜಿಯವರ ಪರಮ ಭಕ್ತರು ಹಾಗೂ ಈ ಹಿಂದೆ ವಿನಯ್ ಗುರೂಜಿಗೆ ಪಾದಪೂಜೆ ಸಹ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶೃಂಗೇರಿ ಶಾರದಾಂಬೆ ಹಾಗೂ ಕಿಗ್ಗಾ ಋಶ್ಯಶೃಂಗೇಶ್ವರನ ದೇವಾಲಯಕ್ಕೆ ಬಂದಾಗ ವಿನಯ್ ಗುರೂಜಿಯನ್ನು ಭೇಟಿ ಮಾಡದೆ ಹೋಗುವುದಿಲ್ಲ. ಇವರಷ್ಟೇ ಅಲ್ಲ, ಬಹುತೇಕ ರಾಜಕಾರಣಿಗಳು ವಿನಯ್ ಗುರೂಜಿಯ ಭಕ್ತರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ವಿನಯ್ ಗುರೂಜಿ ಭಕ್ತರಾಗಿದ್ದು, ಅವರ ಮಠದಲ್ಲೇ ಹೋಮ ಕೂಡ ನಡೆಸಿದ್ದರು.

  • ಅಯೋಧ್ಯೆಯ ರಾಮ ಮಂದಿರಕ್ಕೆ ಮರಳು ರವಾನಿಸಿದ ವಿನಯ್ ಗುರೂಜಿ

    ಅಯೋಧ್ಯೆಯ ರಾಮ ಮಂದಿರಕ್ಕೆ ಮರಳು ರವಾನಿಸಿದ ವಿನಯ್ ಗುರೂಜಿ

    – ರಾಮಮಂದಿರಕ್ಕೆ ಕರ್ನಾಟಕದ ಅಯೋಧ್ಯೆಯ ಮಣ್ಣು

    ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ದತ್ತಾತ್ರೇಯರ ಆಶೀರ್ವಾದದ ಮರಳನ್ನ ರವಾನೆ ಮಾಡಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

    ಅವಧೂತ ವಿನಯ್ ಗುರೂಜಿ ಭಿಕ್ಷಾ ಪಾತ್ರೆಗೆ ಮರಳು ಹಾಕಿ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಗೌರಿಗದ್ದೆಯ ಆಶ್ರಮದ ಜೌಧಂಬರ ವೃಕ್ಷದ ಕೆಳಗೆ ರಾಮೇಶ್ವರದಿಂದ ತಂದ ಮರಳಿನಲ್ಲಿ ಲಿಂಗ ಪೂಜೆ ಮಾಡಿದ್ದಾರೆ. ನಂತರ ವಿನಯ್ ಗುರೂಜಿ ಆಶೀರ್ವದಿಸಿ ಅಯೋಧ್ಯೆಗೆ ರವಾನಿಸಿದ್ದಾರೆ. ವಿನಯ್ ಗುರೂಜಿ ರಾಮೇಶ್ವರದಿಂದ ಪ್ರತಿ ವರ್ಷ ಮರಳನ್ನ ತಂದು ಆ ಮರಳಿನಲ್ಲಿ ಜೌಧಂಬರ ವೃಕ್ಷದ ಕೆಳಗೆ ಲಿಂಗವನ್ನ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಮಾಡುತ್ತಾರೆ. ಇದೀಗ ಪ್ರತಿದಿನ ಮರಳಿನಲ್ಲಿ ಲಿಂಗ ಪೂಜೆ ಸಲ್ಲಿಸುತ್ತಿದ್ದ ಮರಳನ್ನ ಅಯೋಧ್ಯೆಗೆ ಕಳುಹಿಸಿದ್ದಾರೆ.

    ದೇಶದ 18 ದತ್ತ ಕ್ಷೇತ್ರದ ಮಣ್ಣು ತರುವಂತೆ ಪ್ರಧಾನಿ ಮೋದಿ ಸಂದೇಶ ರವಾನಿಸಿದ್ದರು. ಬಜರಂಗದಳದ ಪ್ರಮುಖ ಕಾರ್ಕಳದ ಸುನೀಲ್ ಕಡೆಯಿಂದ ಮರಳನ್ನ ವಿನಯ್ ಗುರೂಜಿ ಅಯೋಧ್ಯೆಗೆ ಕಳಿಸಿದ್ದಾರೆ.

    ಇದೇ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಗೆ ಜಿಲ್ಲೆಯ ಪುಣ್ಯ ಕ್ಷೇತ್ರದ ಮರಳು ಹಾಗೂ ಮಣ್ಣು ತಲುಪಲಿದೆ. ಇತ್ತೀಚಿಗೆ ಜಿಲ್ಲೆಯ ಬಾಳೆಹೊನ್ನೂರು ರಂಭಾಪುರಿ ಪೀಠದ ರಂಭಾಪುರಿ ಶ್ರೀಗಳು ಕೂಡ ಪೀಠದ ಮಣ್ಣನ್ನು ಅಯೋಧ್ಯೆಗೆ ಕಳುಹಿಸಿ ಕೊಟ್ಟಿದ್ದರು. ರಾಮಮಂದಿರ ನಿರ್ಮಾಣಕ್ಕೆ ಶುಭಹಾರೈಸಿದ ಶ್ರೀಗಳು ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳ ಮೂಲಕ ಮಣ್ಣನ್ನ ಹಸ್ತಾಂತರಿಸಿದ್ದರು.

    ಶೃಂಗೇರಿ ಶಾರದಾಂಭೆ ಸನ್ನಿದಿ ಹಾಗೂ ಕರ್ನಾಟಕದ ಅಯೋಧ್ಯೆ ಚಿಕ್ಕಮಗಳೂರಿನ ದತ್ತಪೀಠದ ಮಣ್ಣು ಹಾಗೂ ಹೊನ್ನಮ್ಮನಹಳ್ಳದ ನೀರನ್ನ ಅಯೋಧ್ಯೆಗೆ ಕಳುಹಿಸಿದ್ದರು. ಜೊತೆಗೆ ನಾಡಿನ ಜೀವನದಿಗಳಾದ ತುಂಗಾ-ಭದ್ರೆ ನದಿ ನೀರನ್ನ ಕೂಡ ಅಯೋಧ್ಯೆಗೆ ತಲುಪಿಸಿದ್ದಾರೆ. ಆಗಸ್ಟ್ 5ರಂದು ನಡೆಯುವ ರಾಮಮಂದಿರ ಭೂಮಿ ಪೂಜೆಗೆ ಕಾಫಿನಾಡಿನ ಪುಣ್ಯ ಕ್ಷೇತ್ರಗಳಿಂದ ಮಣ್ಣು ಹಾಗೂ ಮರಳನ್ನ ರವಾನೆ ಮಾಡಲಾಗಿದೆ. ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆ ಮಣ್ಣು ಮತ್ತು ನೀರನ್ನ ರಾಮಮಂದಿರಕ್ಕೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

  • ಡಿಕೆಶಿ ಪುತ್ರಿಗೆ ಕಂಕಣಭಾಗ್ಯ ಕಲ್ಪಿಸಿದ್ರು ವಿನಯ್ ಗುರೂಜಿ!

    ಡಿಕೆಶಿ ಪುತ್ರಿಗೆ ಕಂಕಣಭಾಗ್ಯ ಕಲ್ಪಿಸಿದ್ರು ವಿನಯ್ ಗುರೂಜಿ!

    ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳಿಗೆ ಕಂಕಣ ಭಾಗ್ಯ ಕೂಡಿ ಬರಲು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿಯೇ ಕಾರಣ ಎಂದು ಹೇಳಲಾಗ್ತಿದೆ.

    ವಿನಯ್ ಗುರೂಜಿ ಒಪ್ಪಿಗೆ ಸೂಚಿಸಿದ ಮೇಲೆಯೇ ಡಿ.ಕೆ ಶಿವಕುಮಾರ್ ಮಗಳ ಮದುವೆ ಮಾತುಕತೆಯ ಕುರಿತು ಮುಂದುವರಿದಿದ್ದಾರೆ. ಮಾರ್ಚ್ 19 ರಂದು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರ ಮಗಳ ಮದುವೆ ನಡೆದಿತ್ತು. ಅಂದು ಮದುವೆ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಕೂಡ ಬಂದಿದ್ದರು. ಆಗ ಡಿಕೆಶಿ ಈ ವಿಚಾರವಾಗಿ ಪ್ರಸ್ತಾಪ ನಡೆಸಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಾಫಿ ಉದ್ಯಮಿ ದಿವಂಗತ ಸಿದ್ಧಾರ್ಥ್ ಹೆಗ್ಡೆಯವ ಹಿರಿಯ ಪುತ್ರನೊಂದಿಗೆ ಮಗಳ ಮದುವೆ ಬಗ್ಗೆ ಮಾತುಕತೆ ನಡೆಸಲು ವಿನಯ್ ಗುರೂಜಿ ಬಳಿ ಡಿಕೆಶಿ ಸಲಹೆ ಕೇಳಿದ್ದರು. ಈ ವೇಳೆ ವಿನಯ್ ಗುರೂಜಿ ಕೂಡ ಮುಂದುವರಿಯಿರಿ ಎಂದಿದ್ದರಂತೆ. ವಿನಯ್ ಗುರೂಜಿ ಒಪ್ಪಿಗೆ ಸೂಚಿಸಿದೆ ಮೇಲೆಯೇ ಡಿಕೆಶಿ ತಮ್ಮ ಮಗಳನ್ನ ಸಿದ್ಧಾರ್ಥ್ ಹೆಗ್ಡೆ ಮಗನಿಗೆ ಕೊಡಲು ಮುಂದಾಗಿ ಮಾತುಕತೆ ನಡೆಸಿದ್ದಾರೆ. ಈಗ ಇಬ್ಬರ ಮದುವೆ ಮಾತುಕತೆಯೂ ಮುಗಿದಿರೋದ್ರಿಂದ ಡಿಕೆಶಿ ಫೋನ್ ಮೂಲಕ ವಿನಯ್ ಗುರೂಜಿಗೆ ಮದುವೆ ಮಾತುಕತೆಯ ಬಗ್ಗೆ ತಿಳಿಸಿದ್ದು, ನಿಮ್ಮ ಸಲಹೆ ಹಾಗೂ ಆಶೀರ್ವಾದಂತೆ ಎಲ್ಲಾ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಡಿಕೆಶಿ ಗುರೂಜಿಯ ಪರಮಭಕ್ತ:
    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿಯ ಪರಮಭಕ್ತ. ಇತ್ತೀಚೆಗೆ ಅಂದರೆ ಕಳೆದ ಎರಡ್ಮೂರು ವರ್ಷಗಳಲ್ಲಿ ಅವರು ಜಿಲ್ಲೆಗೆ ಬಂದಾಗೆಲ್ಲಾ ವಿನಯ್ ಗುರೂಜಿಯನ್ನ ಭೇಟಿ ಮಾಡಿಯೇ ಹೋಗಿದ್ದರು. ವಿನಯ್ ಗುರೂಜಿಯ ಆಶ್ರಮದಲ್ಲಿ ಕೆಲ ಪೂಜೆಯನ್ನೂ ನಡೆಸಿದ್ದರು. ಅವರು ಸಚಿವರು ಆಗಿದ್ದಾಗ ಒಮ್ಮೆ ಜಿಲ್ಲೆಗೆ ಬಂದಿದ್ದರು. ಆಗ ಶರ್ಮಾ ಟ್ರಾವೆಲ್ಸ್ ಮುಖ್ಯಸ್ಥರು ಅವರ ಜೊತೆಗಿದ್ದರು. ಅಂದು ವಿನಯ್ ಗುರೂಜಿ ಶರ್ಮಾಗೆ ಹೇಳಿದ ಮಾತು ಕೇಳಿ ಡಿಕೆಶಿ ಹೌದೇನ್ರಿ, ನನಗೆ ಗೊತ್ತಿಲ್ಲ ಎಂದಿದ್ದರಂತೆ. ಅಂದು ಡಿಕೆಶಿ ಕೈಗೆ ಒಂದು ತೆಂಗಿನ ಕಾಯಿ ಕೊಟ್ಡಿದ್ದ ವಿನಯ್ ಗುರೂಜಿ ಡಿಕೆಶಿಗೆ “ಎಷ್ಟು ದೂರ ಹೋಗಬೇಕು ಅನ್ನಿಸುತ್ತೋ ಅಷ್ಟು ದೂರ ಹೋಗಿ ಹೊಡೆದು ಬನ್ನಿ” ಎಂದಿದ್ದರಂತೆ.

    ತೆಂಗಿನ ಕಾಯಿಯನ್ನ ಹೊಡೆದು ಬಂದ ಮೇಲೆ ಶುಭವಾಗುತ್ತೆ ಹೋಗಿ ಎಂದಿದ್ದರಂತೆ. ಡಿಕೆಶಿ ಜೈಲು ವನವಾಸ ಮುಗಿಸಿ ಬಂದ ಮೇಲೂ ನೀವು ಕೆಪಿಸಿಸಿ ಅಧ್ಯಕ್ಷ ಆಗ್ತೀರಾ ಎಂದಿದ್ದರಂತೆ. ಕಳೆದ ಎರಡ್ಮೂರು ವರ್ಷಗಳಿಂದ ವಿನಯ್ ಗುರೂಜಿಯವರ ಪರಮಭಕ್ತರಾಗಿರೋ ಡಿಕೆಶಿ ವಿನಯ್ ಗುರೂಜಿಯವರ ಅನುಮತಿ ಇಲ್ಲದೆ ಯಾವ ಕೆಲಸವನ್ನೂ ಮಾಡೋದಿಲ್ಲ ಅನ್ನೋದಕ್ಕೆ ಮಗಳ ಮದುವೆಯ ಮಾತುಕತೆಯೇ ಸಾಕ್ಷಿ.

  • ಡಿಸೆಂಬರ್‌ವರೆಗೂ ಕೊರೊನಾ ಆತಂಕ ದೇಶವನ್ನ ಕಾಡಬಹುದು: ವಿನಯ್ ಗುರೂಜಿ

    ಡಿಸೆಂಬರ್‌ವರೆಗೂ ಕೊರೊನಾ ಆತಂಕ ದೇಶವನ್ನ ಕಾಡಬಹುದು: ವಿನಯ್ ಗುರೂಜಿ

    – ಕೋವಿಡ್-19 ವಾರಿಯರ್ಸ್‌ಗೆ ಆರತಿ ಎತ್ತಿ, ಹೂಮಳೆಗೈದ ಗುರೂಜಿ

    ಚಿಕ್ಕಮಗಳೂರು: ಕೊರೊನಾ ವಾರಿಯರ್ಸ್ ಗಳಿಗೆ ಗೌರಿಗದ್ದೆ ದತ್ತಶ್ರಮದ ಅವಧೂತ ವಿನಯ್ ಗುರೂಜಿ ಆರತಿ ಎತ್ತಿ, ಹೂಮಳೆಗೈದಿದ್ದಾರೆ.

    ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಿಸಿದರು. ಹೆಲ್ತ್ ವಾರಿಯರ್ಸ್‍ಗೆ ವಿನಯ್ ಗುರೂಜಿ ಅವರು ಆರತಿ ಎತ್ತಿದರು. ಬಳಿಕ ಮೇಲ್ಭಾಗದಲ್ಲಿ ಕುಳಿತಿದ್ದ ಅವರ ಬಳಿಗೆ ಹೋಗಿ ಹೂಗಳನ್ನ ಸುರಿದು ಪುಷ್ಪಾರ್ಚನೆಯ ಮೂಲಕ ಗೌರವಿಸಿದ್ದಾರೆ.

    ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ತಮ್ಮ ಜೀವವನ್ನು ಪಣಕ್ಕಿಟ್ಟು ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಅವರು ದೇಶ ಜನರ ಜೀವನ ಉಳಿಸಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ನಮಗೆ ಮರುಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.

    ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಕೊರೊನಾ ವೈರಸ್‍ನಿಂದ ದೇಶವೇ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೇನಾನಿಗಳ ಸೇವೆಯನ್ನ ದೇಶದ ಯಾರೊಬ್ಬರೂ ಮರೆಯಬಾರದು. ಹಾಗಾಗಿ ಗಾಂಧಿ ಮಾರ್ಗದ ಅನುಯಾಯಿಗಳಾಗಿರುವ ಆಶ್ರಮದ ವತಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

    ಕೊರೊನಾ ವೈರಸ್ ಆತಂಕ ಡಿಸೆಂಬರ್‌ವರೆಗೂ ದೇಶವನ್ನ ಕಾಡಬಹುದು. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಾವು ಅಗ್ನಿಹೋತ್ರ ಹೋಮ ಹಾಗೂ ರುದ್ರ ಹೋಮ ಮಾಡಬೇಕು. ಸರ್ಕಾರದ ನಿರ್ದೇಶನಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರದ ಕಾಪಾಡಿಕೊಳ್ಳಬೇಕು ಎಂದು ವಿನಯ್ ಗುರೂಜಿ ಮನವಿ ಮಾಡಿಕೊಂಡರು.

    ದೇಶದ ಹಲವೆಡೆ ಹೆಲ್ತ್ ವಾರಿಯರ್ಸ್ ಗಳ ಮೇಲೆ ಹಲ್ಲೆ ಮಾಡಿದ್ದಾರೆ, ನಿಂದಿಸಿದ್ದಾರೆ. ಸಮಾಜಕ್ಕೆ ಸಂದೇಶ ನೀಡುವ ಸಲುವಾಗಿ ಕೊರೊನಾ ಸೇನಾಸಿಗಳನ್ನು ಗೌರವಿಸಲಾಗಿದೆ. ಪ್ರಸ್ತುತ ಸ್ಥಿಯಲ್ಲಿ ಅವರ ಸೇವೆ ಸಮಾಜಕ್ಕೆ ಸ್ವಾಸ್ಥ್ಯಕ್ಕೆ ಅತಿ ಮುಖ್ಯವಾದುದು. ಅವರನ್ನ ಎಲ್ಲರೂ ಗೌರವಿಸಬೇಕು ಎಂದರು.

    ಹೆಲ್ತ್ ವಾರಿಯರ್ಸ್ ಗಳ ಈ ಅಭಿನಂದನಾ ಸಮಾರಂಭದಲ್ಲಿ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕರಿಗೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಬೇಳೂರು ರಾಘವೇಂದರ ಶೆಟ್ಟಿ, ಆಶ್ರಮದ ಕಾರ್ಯದರ್ಶಿ ಸುಧಾಕರ್ ಉಪಸ್ಥಿತರಿದ್ದರು.

  • ಕೊರೊನಾ ಆತಂಕ- ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೇಲಿ

    ಕೊರೊನಾ ಆತಂಕ- ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೇಲಿ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆಯಲ್ಲಿರುವ ಅವಧೂತ ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೇಲಿ ಬಿದ್ದಿದೆ.

    ಆಶ್ರಮಕ್ಕೆ ಹೋಗುವ ಮಾರ್ಗದ ನಂದಿಗೋಡು ಗ್ರಾಮಸ್ಥರು ತಮ್ಮ ಊರಿನ ಎಂಟ್ರಿಗೆ ಬೇಲಿ ಹಾಕಿದ್ದಾರೆ. ನಮ್ಮ ಊರಿಗೆ ಹೊರ ಭಾಗದವರು ಬರುವುದು ಬೇಡ, ಕೊರೊನಾನ ಹಬ್ಬಿಸುವುದು ಬೇಡವೆಂದು ಬೇಲಿ ಹಾಕಿದ್ದಾರೆ. ಹಾಗಾಗಿ ವಿನಯ್ ಗುರೂಜಿ ಆಶ್ರಮದ ಮಾರ್ಗಕ್ಕೂ ಬೀಗ ಬಿದ್ದಂತಾಗಿದೆ.

    ಕೊರೊನಾ ಸೋಂಕು ಕಡಿಮೆಯಾಗುವವರೆಗೂ ಬೇರೆ ಯಾವ ಊರಿನವರು ನಮ್ಮ ಊರಿಗೆ ಬರುವುದು ಬೇಡವೆಂದು ಗ್ರಾಮದ ಸಚಿನ್ ಹಾಗೂ ಸ್ನೇಹಿತರು ಬೇಲಿ ಹಾಕಿದ್ದಾರೆ. ಇದೇ ಮಾರ್ಗದಲ್ಲಿ ವಿನಯ್ ಗುರೂಜಿ ಆಶ್ರಮದ ಮಾರ್ಗ ಬಂದ್ ಆಗಿದೆ.

  • ವಿನಯ್ ಗುರೂಜಿಗೆ ಬೆದರಿಕೆ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

    ವಿನಯ್ ಗುರೂಜಿಗೆ ಬೆದರಿಕೆ ಹಾಕ್ತಿದ್ದ ಗ್ಯಾಂಗ್ ಅರೆಸ್ಟ್

    – 30 ಲಕ್ಷ ಬೇಡಿಕೆ ಕೂಡ ಇಟ್ಟಿದ್ದರು

    ಬೆಂಗಳೂರು: ಹಳೆ ವಿಡಿಯೋ ಇಟ್ಟುಕೊಂಡು ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

    ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಸಂತೋಷ್ ಬಂಧಿತರು. ಈ ಐವರು ವಿನಯ್ ಗುರೂಜಿಯ ಹಳೆ ವಿಡಿಯೋ ಇಟ್ಟುಕೊಂಡು, ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇವರು ವಿಡಿಯೋ ಎಡಿಟ್ ಮಾಡಿ, ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡಿದ್ದರು. ನಂತರ 30 ಲಕ್ಷ ರೂ. ನೀಡುವಂತೆ ವಿನಯ್ ಗುರೂಜಿ ಬಳಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಬೆದರಿಕೆ ಒಡ್ಡಿದ್ದರು. ಹೀಗಾಗಿ ಈ ಕುರಿತು ವಿನಯ್ ಗುರೂಜಿ ಆಪ್ತ ಪ್ರಶಾಂತ್ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

    ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

    ಚಿಕ್ಕಮಗಳೂರು: ನಾನು ಮಠ-ಮಾನ್ಯದ ಅಧಿಪತಿಯಲ್ಲ. ಗಾಂಧಿ ಟ್ರಸ್ಟಿನ ಅಧಿಪತಿ. ಅಧಿಪತಿಯೂ ಅಲ್ಲ ಕೆಲಸಗಾರನಷ್ಟೆ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

    ಜನರಿಗೆ 30 ವರ್ಷಗಳಿಂದ ಸೇವೆ ನೀಡುತ್ತಿದ್ದ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೀಡಾಗಿ ಸಂಸ್ಥೆಗೆ ಬೀಗ ಹಾಕಿದೆ. ಕೊಪ್ಪ ನಗರದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಮಿಕರು ಸಂಸ್ಥೆಗೆ ಸರ್ಕಾರ ಸಹಕಾರ ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಿನಯ್ ಗುರೂಜಿ ಅವರು ಕೂಡ ಭಾಗವಹಿಸಿ ಮಾತನಾಡಿ ಸರ್ಕಾರಕ್ಕೆ ಎಚ್ಚರಿಸಿದರು.

    ನನ್ನೊಬ್ಬನ ಸ್ವರವೇ ಮುಷ್ಕರವಾಗುವುದಿಲ್ಲ. ಎಲ್ಲರ ಸ್ವರವೂ ಸೇರಿದರೆ ಅದು ಪ್ರತಿಭಟನೆಯಾಗುತ್ತದೆ. ನಾನೊಬ್ಬನೇ ಮಾತನಾಡಿದರೆ ಅದು ಧ್ವನಿಯಾಗುತ್ತದೆ. ನಿಮ್ಮೆಲ್ಲರ ಧ್ವನಿ ಸೇರಿಸಿ ನಿಮ್ಮ ಪ್ರತಿನಿಧಿಯಾಗಿ ನಾನು ಮಾತನಾಡಬೇಕು ಎಂದು ಕೊಂಡಿದ್ದೇನೆ ಎಂದರು.

    ನನಗೆ ತಿಳಿದಂತೆ ಈ ಸಮಸ್ಯೆ ಶೇಕಡಾ 100ರಷ್ಟು ಬಗೆ ಹರಿಯುತ್ತದೆ. ಯಾಕೆಂದರೆ, ನಾನು ಸೋಮವಾರ ಮಾತನಾಡಿದಾಗ, ಮೂರು ಪಕ್ಷದವರು ಸಂಸ್ಥೆ ಬಗ್ಗೆ ರಾಜಕೀಯ ಬೆರಸದೆ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ. ನನಗೆ ತಿಳಿದಂತೆ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಆಗದಿದ್ದರೆ ಕಾರ್ಮಿಕರು ಅನ್ನ-ನೀರು ಬಿಟ್ಟು ಉಪವಾಸ ಕೂರುವುದಕ್ಕಿಂತ ನಾವು ಹಾಗೂ ನಮ್ಮ ಆಶ್ರಮದವರು ಅನ್ನ-ನೀರು ಬಿಟ್ಟು ಇದೇ ಜಾಗದಲ್ಲಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.