Tag: ವಿಧಾನ ಸೌಧ

  • ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ

    ಆಡಳಿತ ಪಕ್ಷದ ವಿರುದ್ಧವೇ ಧರಣಿ ಕುಳಿತ ಬಿಜೆಪಿ ಶಾಸಕ ಕುಮಾರಸ್ವಾಮಿ

    ಬೆಂಗಳೂರು: ಮೂಡಿಗೆರೆ ತಾಲೂಕನ್ನು ಅತಿವೃಷ್ಟಿಯ ಪಟ್ಟಿಗೆ ಸೇರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧವೇ ಶಾಸಕ ಎಂಪಿ ಕುಮಾರಸ್ವಾಮಿಯವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದ್ದಾರೆ.

    ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲಿ ಯಾಕೋ ಬೆಲೆ ಸಿಗುತ್ತಿಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕೊ ಯಾಕೋ ಕಡೆಗಣಿಸುತ್ತಿದ್ದಾರೆ. ನಮ್ಮ ಸರ್ಕಾರವೇ ಈ ರೀತಿ ತಾರತಮ್ಯ ಮಾಡಬಾರದು. ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ ಅಂತ ಅನಿಸುತ್ತಿದೆ. ಏಕಾಏಕಿ ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿ ಮೂಡಿಗೆರೆ ಕ್ಷೇತ್ರ ಕೈಬಿಡಲಾಗಿದೆ. ಆರ್. ಅಶೋಕ್ ಈ ತರಹ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಎಲ್ಲ ಉಸ್ತುವಾರಿ ಮಂತ್ರಿಗಳು ಬರುತ್ತಾರೆ. ಆದರೆ ಏನೂ ಮಾಡಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದರೆ ಅರ್ಥ ಆಗುವುದಿಲ್ಲ. ಎನ್‍ಡಿಆರ್‍ಎಫ್ ಪಟ್ಟಿಯಲ್ಲಿ ಮೂಡಿಗೆರೆ ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಹಾರ ಕೊಡಬೇಕು ಅದಕ್ಕಾಗಿ ನಾನು ಇಲ್ಲಿಯೇ ಕೂರುತ್ತೇನೆ ಎಂದು ಎಂ.ಪಿ ಕುಮಾರಸ್ವಾಮಿ ಪ್ರತಿಭಟನೆ ನಡೆಸಿದರು.

    2019 ರಲ್ಲಿ ಅತಿವೃಷ್ಟಿ ಆಗಿತ್ತು. ಈ ವೇಳೆ ಮನೆಗಳು ಕಾಫಿತೋಟ ಕೊಚ್ಚಿಕೊಂಡು ಹೋಗಿತ್ತು. ಅಲ್ಲದೇ 6 ಜನ ಮನೆ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು. ಶಿವಮೊಗ್ಗ ನಗರ ಎನ್‌ಡಿಆರ್‌ಎಫ್‌ ವ್ಯಾಪ್ತಿಗೆ ಸೇರುತ್ತದೆ. ಮೂಡಿಗೆರೆಯಲ್ಲಿ 900 ಸೆಂಟಿ ಮೀಟರ್ ಮಳೆಯಾಗಿದೆ. ನಾನು 2018 ರಲ್ಲಿ ಶಾಸಕನಾದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ನಮಗೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ನಮ್ಮದೇ ಸರ್ಕಾರ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಶಾಸಕ ಎಂಪಿ ಕುಮಾರಸ್ವಾಮಿ ಪ್ರತಿಭಟನೆ ಹಿನ್ನೆಲೆ ಕಂದಾಯ ಸಚಿವ ಆರ್ ಅಶೋಕ್ ತಮ್ಮ ಆಪ್ತ ಕಾರ್ಯದರ್ಶಿಯನ್ನು ಸಂಧಾನಕ್ಕೆ ಕಳುಹಿಸಿದರು. ಅಶೋಕ್ ತಮ್ಮ ಪಿಎಸ್ ಪ್ರಶಾಂತ್ ರಿಂದ ಫೋನ್ ಮೂಲಕ ಸಂಪರ್ಕಿಸಿ ಎಂಪಿ ಕುಮಾರಸ್ವಾಮಿ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಎಂ.ಪಿ ಕುಮಾರಸ್ವಾಮಿಯವರು ಕರೆಯನ್ನು ನಿರಾಕರಿಸಿ ಹೇಳಿದ ಒಂದು ಕೆಲಸವನ್ನೂ ಮಾಡಿಕೊಡಲ್ಲ, ಅಶೋಕ್‍ರವರೇ ಸ್ಥಳಕ್ಕೆ ಬರಲಿ ಎಂದು ಹೇಳಿದರು.

    ಅಶೋಕ್ ಸಂಧಾನ:
    ನಂತರ ಎಂಪಿ ಕುಮಾರಸ್ವಾಮಿ ಸಿಟ್ಟಿಗೆ ಬೆದರಿ ಪ್ರತಿಭಟನಾ ಸ್ಥಳಕ್ಕೆ ಆರ್. ಅಶೋಕ್ ಆಗಮಿಸಿದ್ದಾರೆ. ಈ ವೇಳೆ ಕುಮಾರಸ್ವಾಮಿಯವರು ನಾನು ಹಿರಿಯ ಶಾಸಕ, ನನಗೆ ಹೀಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ಲಾಯಲ್ ಆಗಿಲ್ವಾ? ಯಾವತ್ತಾದ್ದರೂ ಬ್ಲ್ಯಾಕ್ ಮೇಲ್ ಮಾಡಿದ್ದೀನಾ? ನೀವೆಲ್ಲ ಹೇಳಿದ್ದು ಕೇಳಿಕೊಂಡಿಲ್ವಾ? ನನ್ನ ಮಾತಿಗೆ ತೂಕ ಇಲ್ಲ ಅಂದರೆ ಹೇಗೆ? ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಈ ವೇಳೆ ಅವರ ಹೆಗಲ ಮೇಲೆ ಕೈ ಹಾಕಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿ ಕುಮಾರಸ್ವಾಮಿ ಮನವೊಲಿಸಿ ಆರ್. ಅಶೋಕ್ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ನಾನು ಕುಮಾರಸ್ವಾಮಿ 20 ವರ್ಷದಿಂದ ಸ್ನೇಹಿತರು. ಅನುದಾನ ಸಮಸ್ಯೆ ಆಗಿದೆ. ಬೆಳೆ ಪರಿಹಾರ ವಿನಂತಿ ಇದೆ. ಸಿಎಂ ಬಳಿ ಮಾತನಾಡಿ ಬೆಳೆ ಪರಿಹಾರ ಕೊಡಬೇಕಾಗಿದ್ದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

    ತಾರತಮ್ಯಕ್ಕೂ ಸಿಟಿ. ರವಿ ಕಾರಣ ಎಂಬ ಆರೋಪಕ್ಕೆ, ಸಿಟಿ ರವಿ ನನಗೆ 10-12 ದಿನದಿಂದ ಯಾವುದೇ ಕರೆ ಮಾಡಿಲ್ಲ. ಸಿಟಿ ರವಿ ಜೀವರಾಜ್ ಬೆಳ್ಳಿ ಪ್ರಕಾಶ್ ಸುರೇಶ್ ಮಧ್ಯೆ ಯಾವುದೇ ರೀತಿ ಭಿನ್ನಾಭಿಪ್ರಾಯ ಇಲ್ಲ. ಮೂಡಿಗೆರೆ ಚಿಕ್ಕಮಗಳೂರಿಗೆ ಬಹಳ ಬಾರಿ ಪ್ರೀತಿ ವಿಶ್ವಾಸದಿಂದ ಹೋಗಿದ್ದೇನೆ. ಚಿಕ್ಕಮಗಳೂರು ಹೊಸದೇನಲ್ಲ. ನಮ್ಮ ಪಾರ್ಟಿ ಹೇಗೆ ಅಂದರೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಂ ಬಗ್ಗೆ ಪ್ರಶ್ನೆಗಳನ್ನು ಕೇಳ್ಬೇಡಿ, ಅಷ್ಟು ಕೆಳಮಟ್ಟಕ್ಕೆ ನನ್ನ ಇಳಿಸ್ಬೇಡಿ: ಹೆಚ್‍ಡಿಡಿ

  • ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭ

    ಗುರುವಾರದಿಂದ ವಿಧಾನಮಂಡಲ ಅಧಿವೇಶನ ಆರಂಭ

    ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಮರು ಹಂಚಿಕೆಯ ಅಸಮಾಧಾನದ ನಡುವೆ ವಿಧಾನಮಂಡಲ ಅಧಿವೇಶನಕ್ಕೆ ವೇದಿಕೆ ಸಿದ್ಧವಾಗಿದೆ. ನಾಳೆಯಿಂದ ಫೆಬ್ರವರಿ ಐದರವರೆಗೂ ಅಧಿವೇಶನ ನಡೆಯಲಿದೆ. ಮೊದಲ ದಿನವಾದ ನಾಳೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.

    ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯೋ ಸಂಭವ ಇದೆ. ಕೃಷಿ ಕಾಯ್ದೆ ಖಂಡಿಸಿ ರೈತರು ನಡೆಸುತ್ತಿರುವ ಹೋರಾಟ, ಅನುದಾನ ವಿಳಂಬ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಪ್ಲಾನ್ ಮಾಡ್ಕೊಂಡಿವೆ. ಇನ್ನು ಗೋಹತ್ಯೆ ನಿಷೇಧ ಕಾಯ್ದೆಯ ಮಸೂದೆಯನ್ನು ಪರಿಷತ್‍ನಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಬಿಜೆಪಿ ಸಿದ್ಧತೆ ನಡೆಸಿದೆ. ಈ ಬಾರಿ 11 ವಿಧೇಯಕಗಳು ಮಂಡನೆ ಆಗಲಿದೆ. ಕಲಾಪದಲ್ಲಿ ಒಂದು ದೇಶ, ಒಂದು ಚುನಾವಣೆ ಬಗ್ಗೆಯೂ ಚರ್ಚೆ ನಡೆಯಲಿದೆ.

    ಈ ಮಧ್ಯೆ, ವಿಧಾನ ಪರಿಷತ್‍ನ ಸಭಾಪತಿ ಸ್ಥಾನಕ್ಕೆ ಹಗ್ಗಜಗ್ಗಾಟ ಶುರುವಾಗಿದೆ. ಪರಿಷತ್‍ನಲ್ಲಿ ಬಿಜೆಪಿಗೆ ಬೆಂಬಲ ಕೊಟ್ಟಿರುವ ಜೆಡಿಎಸ್ ಸಭಾಪತಿ ಸ್ಥಾನಕ್ಕೆ ಬೇಡಿಕೆಯಿಟ್ಟಿದೆ. ಆದರೆ ಇದನ್ನು ಬಿಜೆಪಿ ಇನ್ನೂ ಒಪ್ಪಿಲ್ಲ ಎನ್ನಲಾಗಿದೆ. ಇಂದು ಸಂಜೆ ನಡೆದ ಸಭೆಯಲ್ಲಿ ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ. ನಾಳೆ ಮತ್ತೊಮ್ಮೆ ಸಭೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.

    ಜನವರಿ 29ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಲಿದ್ದು, ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಿರಲು ಜೆಡಿಎಸ್ ನಿರ್ಧರಿಸಿದೆ. ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಜೊತೆ ಬಸವರಾಜ ಹೊರಟ್ಟಿ ಸಭೆ ನಡೆಸಿದರು. ಬಳಿಕ ಮಾತಾಡಿದ ಹೊರಟ್ಟಿ, ನಮಗೆ ಸಭಾಪತಿ ಸ್ಥಾನ ಬೇಕೇ ಬೇಕು ಎಂದು ಹೇಳಿದರು.

  • ರೈತ ವಿರೋಧಿ ಕಾನೂನುಗಳ ವಿರುದ್ಧ ಕಿಚ್ಚು – ಅಧಿಕಾರ ಸೌಧಕ್ಕೆ ಇಂದು ಅನ್ನದಾತರ ಲಗ್ಗೆ

    ರೈತ ವಿರೋಧಿ ಕಾನೂನುಗಳ ವಿರುದ್ಧ ಕಿಚ್ಚು – ಅಧಿಕಾರ ಸೌಧಕ್ಕೆ ಇಂದು ಅನ್ನದಾತರ ಲಗ್ಗೆ

    – ವಿವಿಧ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಆಗಮನ

    ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ಒಳಗೊಂಡಂತೆ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸ್ತಿರೋ ಹೋರಾಟ ಇನ್ನಷ್ಟು ತೀವ್ರಗೊಳ್ತಿದ್ದು, ಅನ್ನದಾತರ ಹೋರಾಟಕ್ಕೆ ಇಂದು ಮತ್ತೆ ರಾಜಧಾನಿ ಬೆಂಗಳೂರು ಸಾಕ್ಷಿ ಆಗಲಿದೆ.

    ನಿನ್ನೆ ಇಡೀ ಕರ್ನಾಟಕ ಬಂದ್ ಆಚರಿಸಿದ್ದ ರೈತ ಪರ ಸಂಘಟನೆಗಳು ಇಂದು ಬೆಂಗಳೂರಲ್ಲಿ ಸಾಲು ಸಾಲು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ರೈತರ ಪರವಾಗಿ ರೈತ ಸಂಘಟನೆಗಳ ಜೊತೆಗೆ ಇತರೆ ಸಂಘಟನೆಗಳು ಬೀದಿಗಿಳಿಯಲಿವೆ. ಮುಖ್ಯವಾಗಿ 10 ಸಾವಿರಕ್ಕೂ ಹೆಚ್ಚು ರೈತರು ಇವತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಬರುತ್ತಿರುವ ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಆನಂದ್‍ರಾವ್ ಸರ್ಕಲ್ ಫ್ಲೈಓವರ್ ಮೂಲಕ ವಿಧಾನಸೌಧಕ್ಕೆ ಲಗ್ಗೆ ಇಡಲಿದ್ದಾರೆ.

    ರೈತ ವಿರೋಧಿ ಕಾನೂನುಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಬೃಹತ್ ರ್ಯಾಲಿಯ ಮೂಲಕ ಮನವಿ ಪತ್ರ ಸಲ್ಲಿಸಲಿದೆ. ಕಾರ್ಪೋರೇಷನ್ ಸರ್ಕಲ್, ವಿಧಾನಸೌಧ ಮೂಲಕ ರಾಜಭವನಕ್ಕೆ ತೆರಳಲಿದ್ದಾರೆ. ಇತ್ತ ರೈತರ ಬಾರುಕೋಲು ಚಳುವಳಿ, ವಿಧಾನಸೌಧ ಮುತ್ತಿಗೆಯನ್ನು ವಿಫಲಗೊಳಿಸಲು ಬೆಂಗಳೂರು ಪೊಲೀಸರು ಸರ್ವ ಸನ್ನದ್ಧರಾಗಿದ್ದಾರೆ.

    ವಿಧಾನಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಕಡೆ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಸಂಗೊಳ್ಳಿರಾಯಣ್ಣ ಪ್ರತಿಮೆ, ಮೌರ್ಯ ಸರ್ಕಲ್ ಫ್ಲೈಓವರ್, ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಪೊಲೀಸರ ಬಂದೋಬಸ್ತ್ ಮಾಡಲಾಗ್ತಿದೆ. 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗುತ್ತದೆ ಎಂದು ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಸೌಮೇಂದು ಮುಖರ್ಜಿ ಹೇಳಿದ್ದಾರೆ.

  • ಕೊರೊನಾ ಕುರಿತ ಸರ್ವ ಪಕ್ಷಗಳ ಸಭೆ – ಏನು ನಿರ್ಣಯ ತೆಗೆದುಕೊಳ್ಳಲಾಗಿದೆ?

    ಕೊರೊನಾ ಕುರಿತ ಸರ್ವ ಪಕ್ಷಗಳ ಸಭೆ – ಏನು ನಿರ್ಣಯ ತೆಗೆದುಕೊಳ್ಳಲಾಗಿದೆ?

    ಬೆಂಗಳೂರು: ಕೊರೊನಾ ಕುರಿತು ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷಣಗಳ ಸಭೆ ನಡೆದಿದೆ. ಈ ಸಭೆಯಲ್ಲಿ ಕೊರೊನಾ ವಿರುದ್ಧ ರಾಜ್ಯ ಹೋರಾಡಲು ಬೇಕಾದ ಕೆಲ ನಿರ್ಣಯಗಳನ್ನು ತಗೆದುಕೊಳ್ಳಲಾಗಿದೆ.

    ಸಭೆ ಬಳಿಕ ಟ್ವೀಟ್ ಮಾಡಿರುವ ಯಡಿಯೂರಪ್ಪ ಅವರು, ಸರ್ವ ಪಕ್ಷಗಳ ಸಭೆಯಲ್ಲಿ ನಾಯಕರು ಉಪಯುಕ್ತ ಸಲಹೆಗಳನ್ನು ನೀಡಿರುತ್ತಾರೆ. ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಲಿದೆ. ಸರ್ವ ಪಕ್ಷದ ಮುಖಂಡರು ಸರ್ಕಾರದ ಕ್ರಮಗಳಿಗೆ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿ, ಈ ಸಂಕಷ್ಟದ ಸನ್ನಿವೇಶದಲ್ಲಿ ಸರ್ಕಾರದ ಜೊತೆ ಕೈಜೋಡಿಸುವುದಾಗಿ ಸಹಮತ ವ್ಯಕ್ತಪಡಿಸಿದರು ಎಂದು ತಿಳಿಸಿದ್ದಾರೆ.

    ಜೊತೆಗೆ ಸಭೆಯಲ್ಲಿ ನಾಯಕರು ಸಲಹೆ ನೀಡಿದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್‍ಗಳು ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಾಟಲಿಗಳನ್ನು ಸರಬರಾಜು ಮಾಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಾಧನಗಳನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

    ರಾಜ್ಯದ ಗಡಿಗಳಲ್ಲಿ ಸಿಕ್ಕಿಕೊಂಡಿರುವ ಜನರ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು. ಸೋಂಕಿಗೊಳಗಾಗಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲು ಹಾಗೂ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಟೆಸ್ಟಿಂಗ್ ಕಿಟ್ (ಪರೀಕ್ಷಾ ಸಾಧನಗಳು) ವಿತರಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.

    ರೈತರ ಕೃಷಿ ಉತ್ಪನ್ನಗಳ, ಸಾಗಣೆ, ಮಾರಾಟ ಮತ್ತು ಒಳಕೆದಾರರಿಗೆ ಸೂಕ್ತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗುವುದು. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ವಿತರಣೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಪಡಿತರವನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಸಲಹೆಯನ್ನು ವಿರೋಧ ಪಕ್ಷದ ನಾಯಕರು ನೀಡಿದ್ದು, ಆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಮುಸ್ಲಿಂ ಬಾಂಧವರ ಜೊತೆ ನಾನು ಸಭೆ ನಡೆಸಿದ್ದು, ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆಯನ್ನು ನಡೆಸಲು ಒಪ್ಪಿ ಸಹಕರಿಸಿರುತ್ತಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಸರ್ವ ಪಕ್ಷಗಳ ಸಭೆಯಲ್ಲಿ ತಗೆದುಕೊಂಡ ನಿರ್ಧಾರಗಳನ್ನು ತಿಳಿಸಿದರು.

    ಈ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ನಾಯಕರಾದ ಹೆಚ್.ಡಿ.ರೇವಣ್ಣ, ಬಸವರಾಜ್ ಹೊರಟ್ಟಿ, ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಶ್ರೀರಾಮುಲು, ಸುಧಾಕರ್, ಬೊಮ್ಮಾಯಿ, ಲಕ್ಷ್ಮಣ್ ಸವದಿ, ಅಧಿಕಾರಿಗಳು ಉಪಸ್ಥಿತಿರಿದ್ದರು.

  • ವಿಧಾನಸೌಧಕ್ಕೂ ಕೊರೊನಾ ಆತಂಕ- ಇಂದಿನಿಂದ ಸಾರ್ವಜನಿಕರಿಗೆ ಕಲಾಪ ವೀಕ್ಷಣೆ ಬಂದ್

    ವಿಧಾನಸೌಧಕ್ಕೂ ಕೊರೊನಾ ಆತಂಕ- ಇಂದಿನಿಂದ ಸಾರ್ವಜನಿಕರಿಗೆ ಕಲಾಪ ವೀಕ್ಷಣೆ ಬಂದ್

    ಬೆಂಗಳೂರು: ಕೊರೊನಾ ಆತಂಕ ವಿಧಾನಸೌಧಕ್ಕೂ ಕಾಲಿಟ್ಟಿದೆ. ವಿಧಾನಸಭೆ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಇಂದಿನಿಂದ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಂದಿನಿಂದ 4 ದಿನಗಳ ಕಾಲ ಅಂದರೆ ಮಾರ್ಚ್ 17 ರಿಂದ 20 ರವರೆಗೆ ಸಾರ್ವಜನಿಕರಿಗೆ ನಿಷೇಧ ಹೇರಿ ಸ್ಪೀಕರ್ ವಿಶ್ವೇಶ್ವರ ಕಾಗೇರಿ ಆದೇಶಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಕೆಲವಷ್ಟೇ ಸಾರ್ವಜನಿಕರು ಬಂದಿದ್ರು. ವಿಧಾನಸಭೆ ಪ್ರೇಕ್ಷಕರ ಗ್ಯಾಲರಿಯಂತೂ ಖಾಲಿ ಖಾಲಿಯಾಗಿತ್ತು. ಸ್ಪೀಕರ್ ಗ್ಯಾಲರಿಯೂ ಖಾಲಿ ಇತ್ತು. ನಿನ್ನೆ ಸದನದಲ್ಲಿ ಈ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆ ಹೊರಡಿಸಿದ್ದರು.

    ಕೊರೊನಾ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಶಾಸಕರು ಹಾಗೂ ಸಚಿವರು ಸಹ ಗ್ಯಾಲರಿ ಪ್ರವೇಶ ಕೋರಿ ಮನವಿ ಸಲ್ಲಿಸಬಾರದು. ಪಾಸ್ ಸಹ ವಿತರಿಸಬಾರದು ಎಂದು ಸ್ಪೀಕರ್ ಕಾಗೇರಿ ಸೋಮವಾರ ಹೇಳಿದ್ದರು.

  • ಅಡಿಕೆ, ತೆಂಗಿನ ಮರ ಕಡಿಯಲು ಆದೇಶಿಸಿದ್ದ ತಹಶೀಲ್ದಾರ್‌ಗೆ ತರಾಟೆ

    ಅಡಿಕೆ, ತೆಂಗಿನ ಮರ ಕಡಿಯಲು ಆದೇಶಿಸಿದ್ದ ತಹಶೀಲ್ದಾರ್‌ಗೆ ತರಾಟೆ

    – ಹುದ್ದೆಯಿಂದ ಬಿಡುಗಡೆಗೊಳಿಸಿ ಸರ್ಕಾರ ಆದೇಶ

    ಬೆಂಗಳೂರು: ಸುಮಾರು 30 ವರ್ಷಗಳಿಂದ ಬೆಳೆದು ನಿಂತಿದ್ದ ತೋಟವನ್ನು ಏಕಾಏಕಿ ಉರುಳಿಸಿ ದರ್ಪ ತೋರಿದ್ದ ತಹಶೀಲ್ದಾರ್ ನಡೆಗೆ ಸರ್ಕಾರ ಗರಂ ಆಗಿದೆ. ತುಮಕೂರು ಜಿಲ್ಲೆ ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನ ಹುದ್ದೆಯಿಂದ ಬಿಡುಗಡೆಗೊಳಿಸಿ ಕಂದಾಯ ಇಲಾಖೆ ಆದೇಶಿಸಿದೆ. ಅಷ್ಟೇ ಅಲ್ಲ ತಹಶೀಲ್ದಾರ್ ಅವರನ್ನ ವಿಧಾನಸೌಧಕ್ಕೆ ಕರೆಸಿ ಸಿಎಂ, ಕಂದಾಯ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

    ವಿಧಾನಸೌಧಕ್ಕೆ ಗುಬ್ಬಿ ತಹಶೀಲ್ದಾರ್ ಮಮತಾ ಅವರನ್ನು ಕಂದಾಯ ಸಚಿವ ಆರ್.ಅಶೋಕ್ ಕರೆಸಿದ್ರು. ತಹಶೀಲ್ದಾರ್ ಅವರಿಂದ ವಿವರಣೆ ಕೇಳಿ ತರಾಟೆಗೆ ತೆಗೆದುಕೊಂಡ್ರು ಎನ್ನಲಾಗಿದೆ. ಬಳಿಕ ತಹಶೀಲ್ದಾರ್ ಅವರನ್ನ ಕಂದಾಯ ಸಚಿವ ಆರ್.ಅಶೋಕ್ ಸಿಎಂ ಬಳಿ ಕರೆದುಕೊಂಡು ಹೋಗಿದ್ರು. ಸಿಎಂ ಕೂಡ ತಹಶೀಲ್ದಾರ್ ಅವರನ್ನ ತರಾಟೆಗೆ ತೆಗೆದುಕೊಂಡು ಗರಂ ಆದ್ರು ಎನ್ನಲಾಗಿದೆ. ನಂತರ ಮಮತಾ ಅವರನ್ನ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಿ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಆದೇಶ ಮಾಡಿದೆ.

    ಅಂದಹಾಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದ ಸಣ್ಣಕೆಂಪಯ್ಯ ಮತ್ತು ಸಿದ್ದಮ್ಮ ಎಂಬುವವರಿಗೆ ಉಡುಸಲಮ್ಮ ದೇವರಸ್ಥಾನದಿಂದ ಕೊಡುಗೆಯಾಗಿ 5.18 ಎಕರೆ ಜಮೀನು ನೀಡಲಾಗಿತ್ತು ಎನ್ನಲಾಗಿದೆ. ಕಳೆದ 30 ವರ್ಷಗಳಿಂದಲೂ ತೆಂಗು, ಅಡಿಕೆ ಬಾಳೆ ಬೆಳೆದುಕೊಂಡು ಬಂದಿದ್ದಾರೆ. ಈ ನಡುವೆ ಉಡುಸಲಮ್ಮ ದೇವರ ಜಾತ್ರೆಗೆ ಜಾಗ ಸಾಕಾಗೋದಿಲ್ಲ ಎಂದು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ತಹಶೀಲ್ದಾರ್ ಮಮತಾ ಅವರು ತೋಟವನ್ನು ಉರುಳಿಸಲು ಆದೇಶ ಕೊಟ್ಟಿದ್ದಾರೆ ಎನ್ನಲಾಗಿದೆ. ಅದರಂತೆ ಗ್ರಾಮ ಲೆಕ್ಕಿಗ ಮುರುಳಿ ಯಾವುದೇ ನೋಟಿಸ್ ನೀಡದೇ ಏಕಾಏಕಾಏಕಿ ಫಸಲಿಗೆ ಬಂದಿದ್ದ ತೋಟಕ್ಕೆ ನುಗ್ಗಿ 150 ಅಡಿಕೆ, 20 ತೆಂಗು ಮತ್ತು ಬಾಳೆ ಗಿಡವನ್ನು ಉರುಳಿಸಿದ್ದರು. ಇದರಿಂದ ಸಣ್ಣ ಕೆಂಪಯ್ಯ, ಸಿದ್ದಮ್ಮ ಕುಟುಂಬದ ಗೋಳಾಟದ ವಿಡಿಯೋ ವೈರಲ್ ಆಗಿತ್ತು. ತಹಶೀಲ್ದಾರ್ ವಿರುದ್ಧ, ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

  • ವಿಧಾನ ಸೌಧಕ್ಕೆ ಆವರಿಸಿದ ಗ್ರಹಣ- ಸಚಿವರುಗಳು ನಾಪತ್ತೆ

    ವಿಧಾನ ಸೌಧಕ್ಕೆ ಆವರಿಸಿದ ಗ್ರಹಣ- ಸಚಿವರುಗಳು ನಾಪತ್ತೆ

    ಬೆಂಗಳೂರು: ವಿಧಾನ ಸೌಧಕ್ಕೂ ಕೇತುಗ್ರಸ್ಥ ಸೂರ್ಯಗ್ರಹಣ ತಟ್ಟಿದೆ. ಇಂದು ಗ್ರಹಣಕ್ಕೆ ಹೆದರಿ ಒಬ್ಬರೇ ಒಬ್ಬ ಸಚಿವರು ವಿಧಾನ ಸೌಧದತ್ತ ಸುಳಿದಿಲ್ಲ. ಸಿಎಂ ಸೇರಿದಂತೆ ಯಾವೊಬ್ಬ ಸಚಿವರುಗಳು ತಮ್ಮ ಕಚೇರಿಯತ್ತ ಸುಳಿಯದ ಕಾರಣ ವಿಧಾನ ಸೌಧ ಬಿಕೋ ಅನ್ನುತ್ತಿತ್ತು.

    ಜನಪ್ರತಿನಿಧಿ ಆಗಮಿಸದ ಹಿನ್ನೆಲೆಯಲ್ಲಿ ವಿಧಾನ ಸೌಧದ ಕಾರಿಡಾರ್, ಪಾರ್ಕಿಂಗ್ ಎಲ್ಲವು ಖಾಲಿ ಖಾಲಿ ಆಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದಿನಂತೆ ವಿಧಾನ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಜನರ ಸಮಸ್ಯೆ ಆಲಿಸಬೇಕಾದ ಸಚಿವರುಗಳು ಗ್ರಹಣಕ್ಕೆ ಹೆದರಿ ವಿಧಾನ ಸೌಧದತ್ತ ಸುಳಿದಿಲ್ಲ.

    ಸಚಿವರುಗಳು ಕಚೇರಿಗೆ ಬಂದರೆ ವಿಧಾನಸೌಧ ಜನಜಂಗುಳಿಯಿಂದ ಕೂಡಿರುತ್ತಿದೆ. ಮುಖ್ಯಮಂತ್ರಿಗಳು ಸೇರಿದಂತೆ ಯಾವೊಬ್ಬ ಸಚಿವರುಗಳು ವಿಧಾನ ಸೌಧದತ್ತ ಸುಳಿದಿಲ್ಲ. ಅದರಿಂದಾಗಿ ಪಾರ್ಕಿಂಗ್,ಕಾರಿಡಾರ್ ಎಲ್ಲವು ಬಿಕೋ ಎನ್ನುತ್ತಿದೆ.

  • ಡಿಡಿ ಚಂದನ ಸೆನ್ಸಾರ್ ಮಾಡಿ ಬಿತ್ತರಿಸುತ್ತಿದೆ: ಸಿದ್ದರಾಮಯ್ಯ ಟ್ವೀಟ್

    ಡಿಡಿ ಚಂದನ ಸೆನ್ಸಾರ್ ಮಾಡಿ ಬಿತ್ತರಿಸುತ್ತಿದೆ: ಸಿದ್ದರಾಮಯ್ಯ ಟ್ವೀಟ್

    -ಸ್ಪೀಕರ್ ಕ್ಲಾಸ್ ಟೀಚರ್ ಅಲ್ಲ

    ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಆಡಳಿತ ಪಕ್ಷದ ಮಾತುಗಳನ್ನು ಡಿಡಿ ಚಂದನ ಸೆನ್ಸಾರ್ ಮಾಡಿ ಬಿತ್ತರಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.

    ವಿಧಾನಸಭೆಯಲ್ಲಿ ಮಾಧ್ಯಮಗಳಿಗೆ ಸ್ಪೀಕರ್ ನಿರ್ಬಂಧ ಹೇರಿರುವ ಹಿನ್ನೆಲೆ, ವಿರೋಧ ಪಕ್ಷದವರ ಧ್ವನಿ ತಗ್ಗಿಸುವ ಕೆಲಸ ನಡೀತಾ ಇದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಇದರ ಜೊತೆಗೆ ಡಿಡಿ ಚಾನೆಲ್ ನಲ್ಲಿ ಆಡಳಿತ ಪಕ್ಷದವರ ಧ್ವನಿ ಮಾತ್ರ ಕೊಡುತ್ತಿದ್ದಾರೆ. ವಿರೋಧ ಪಕ್ಷದ ಸದಸ್ಯರು ಮಾತನಾಡುವಾಗ ಧ್ವನಿ ತಗ್ಗಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ವಿಚಾರವಾಗಿ ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಸಿದ್ದು, ವಿರೋಧಪಕ್ಷಗಳ ದನಿಯನ್ನು ದಮನಿಸಿ ಆಡಳಿತ ಪಕ್ಷಕ್ಕೆ ನೆರವಾಗುವ ಉದ್ದೇಶದಿಂದಲೇ ಸ್ಪೀಕರ್ ಅವರು ಟಿವಿ ಚಾನೆಲ್‍ಗಳ ನಿರ್ಬಂಧ ಹೇರಿರುವುದು ಕಳೆದೆರಡು ದಿನಗಳ ಕಲಾಪದಿಂದ ಸ್ಪಷ್ಟವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಗುಡಿಗಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿದ್ದು, ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡ ಆಡಳಿತ ಪಕ್ಷದ ಸದಸ್ಯರು, ಸರ್ಕಾರದ ವೈಫಲ್ಯದ ಬಗ್ಗೆ ಆಡಿದ ಮಾತುಗಳು ಮತ್ತು ಅವರ ಮುಖಗಳನ್ನು ಸರ್ಕಾರಿ ಕೃಪಾಪೋಷಿತ ಡಿಡಿ ಚಂದನ ನ್ಯೂಸ್ ಸೆನ್ಸಾರ್ ಮಾಡಿ ಬಿತ್ತರಿಸುತ್ತಿರುವುದು ಖಂಡನೀಯ ಎಂದು ಡಿಡಿ ಚಂದನ ಮಾಧ್ಯಮದ ವಿರುದ್ಧ ಕಿಡಿಕಾರಿದ್ದಾರೆ.

    ಬಿಜೆಪಿಗೆ ಟ್ವೀಟ್‍ಗೆ ತಿರುಗೇಟು:
    ಸ್ಪೀಕರ್ ಅವರು ಕ್ಲಾಸ್ ಟೀಚರ್ ಅಲ್ಲ, ನಾವು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಅಲ್ಲ. ಸ್ಪೀಕರ್ ಸದನದಲ್ಲಿ ಅಂಪೈರ್ ರೀತಿ ಇರಬೇಕು, ಅವರೇ ಆಟಗಾರರ ರೀತಿಯಲ್ಲಿ ಮೈದಾನಕ್ಕೆ ಇಳಿದರೆ ನಾವು ಆಟಗಾರರ ರೀತಿಯಲ್ಲಿಯೇ ಎದುರಿಸುತ್ತೇವೆ. ಸ್ಪೀಕರ್ ಕಾಗೇರಿಯವರ ಜೊತೆ ನನಗೆ ವೈಯಕ್ತಿಕ ಜಗಳವೇನಿಲ್ಲ. ವಿಧಾನಮಂಡಲದ ಶಿಷ್ಟಾಚಾರ-ನಡವಳಿಕೆಗಳ ಬಗ್ಗೆ ನನಗೂ ತಿಳಿದಿದೆ. ಆದರೆ ಅಧಿಕಾರ ವಹಿಸಿಕೊಂಡ ಕೂಡಲೇ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿದ ಸ್ಪೀಕರ್, ಮೊದಲ ದಿನದಿಂದಲೇ ಬಿಜೆಪಿ ಸದಸ್ಯರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಖಂಡನೀಯ ಎಂದು ಬರೆದುಕೊಂಡು ಸಿದ್ದರಾಮಯ್ಯನವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಬಿಜೆಪಿ ಟ್ವೀಟ್:
    ಈ ವಿಡಿಯೋ ನೋಡಿದವರಿಗೆ ಕಾಂಗ್ರೆಸ್ ಹಾಗೂ ಗೂಂಡಾ ಸಂಸ್ಕೃತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದರ ಅರಿವಾಗುತ್ತದೆ. ತಮ್ಮ 5 ವರ್ಷದ ಅವಧಿಯಲ್ಲಿ ಇದೇ ಧೋರಣೆ ಪ್ರದರ್ಶಿಸಿ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ siddaramaiah ಅವರ ಈ ವರ್ತನೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ಣಾಮವಾಗುವುದು ಖಚಿತ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.

  • ಬಿರಿಯಾನಿ ಕಥೆ ಹೇಳಿದ ಸಿಟಿ ರವಿ- ಖಡಕ್ ಉತ್ತರ ಕೊಟ್ಟ ಸಿಎಂ

    ಬಿರಿಯಾನಿ ಕಥೆ ಹೇಳಿದ ಸಿಟಿ ರವಿ- ಖಡಕ್ ಉತ್ತರ ಕೊಟ್ಟ ಸಿಎಂ

    ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಬಿಜೆಪಿ ಶಾಸಕ ಸಿಟಿರವಿ ಅವರು ಬಿರಿಯಾನಿ ಕಥೆಯನ್ನು ಪ್ರಸ್ತಾಪ ಮಾಡಿದರು. ಈ ವೇಳೆ ಶಾಸಕರ ಕಥೆಗೆ ಸಿಎಂ ಅವರು ಖಡಕ್ ಉತ್ತರ ನೀಡಿದ ಪ್ರಸಂಗ ನಡೆಯಿತು.

    ಐಎಂಎ ಕಂಪನಿ ಬಗ್ಗೆ ಈ ಹಿಂದೆಯೇ ಕಂಪ್ಲೆಂಟ್ ಬಂದಿರುತ್ತದೆ. ಆಗ ತನಿಖೆಯೂ ನಡೆಯುತ್ತದೆ. ಆ ತನಿಖೆಗೆ ಕ್ಲೀನ್ ಚಿಟ್ ಕಳುಹಿಸಿದ್ದಾರೆ. ಆ ಕ್ಲೀನ್ ಚಿಟ್ ಕೊಟ್ಟವನು ಇಂದು ಜೈಲಿನಲ್ಲಿದ್ದಾರೆ. ಆದರೆ ಯಾರ ಬಳಿ ಆಡಳಿತ ಇತ್ತೋ, ಇಂಟಲಿಜೆನ್ಸ್ ಇತ್ತೋ ಅವರೇ ಅವರನ್ನು ಯಾರು ರಕ್ಷಣೆ ಮಾಡಿದ್ದಾರೆ ಎಂದು ಸಿಟಿ ರವಿ ಪ್ರಸ್ತಾಪ ಮಾಡಿದರು.

    46 ಸಾವಿರ ಬಡ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ ಪಾಪದ ಹೊಣೆ ಅವರ ಜೊತೆ ಕೂತು ಬಿರಿಯಾನಿ ತಿಂದವರ ಮೇಲಿದೆ. ಆ ಬಿರಿಯಾನಿ ತಿಂದಿದ್ದು ಯಾರು ಅನ್ನೋದನ್ನು ಅವರು ಬಾಯಿ ಬಿಟ್ಟು ಹೇಳಿದರೆ ರಾಜ್ಯ ಹಾಗೂ ದೇಶಕ್ಕೆ ಗೊತ್ತಾಗುತ್ತದೆ. ಅಂಥವರನ್ನು ತೆಗೆದುಕೊಂಡು ಹೋಗಿ ನೇಣು ಹಾಕಬೇಕು ಎಂದು ಶಾಸಕರು ಕಿಡಿಕಾರಿದರು.

    ರಕ್ಷಣೆ ಮಾಡುತ್ತೇವೆ ಎಂದು ಹೇಳಬೇಕಾಗಿದ್ದು, ಆ 46 ಸಾವಿರ ಬಡ ಕುಟುಂಬವನ್ನೇ ಹೊರತು ಒಬ್ಬ ಕಳ್ಳನನ್ನು ಅಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಹೇಳಿದವರು ಯಾರು? ಅವರು ಯಾವ ಧೈರ್ಯದ ಮೇಲೆ ಹೇಳಿದ್ರು? ಸತ್ಯ ಗೊತ್ತಾಗಬೇಕಿದೆ ಎಂದು ಇದೇ ವೇಳೆ ಸಿಟಿ ರವಿ ಒತ್ತಾಯಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿಟಿ ರವಿ ಅವರು ಬಿರಿಯಾನಿ ಕಥೆಯನ್ನು ನನಗೆ ಹೇಳಿದ್ದು ಅನ್ನೋದು ಗೊತ್ತು. ಹೊರಗಡೆ ಮಾಧ್ಯಮಗಳಲ್ಲಿ ನನ್ನ ಬಗ್ಗೆ ಹಾಗೂ ಆ ಬಿರಿಯಾನಿ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಓದಿದ್ದೇನೆ. ಐಎಂಎ ಪ್ರಕರಣದ ಇಂದಿನ ಈ ತನಿಖೆಯಲ್ಲಿ ಎಸ್‍ಐಟಿಯನ್ನು ನಾವೇ ರಚನೆ ಮಾಡಿದ್ದೇವೆ. ನಮ್ಮ ಅಧಿಕಾರಿಗಳು ಅತ್ಯಂತ ಉತ್ತಮವಾದ ಕೆಲಸ ಮಾಡಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ ಎಂದರು.

    ಬಿರಿಯಾನಿ ಕಥೆಗೆ ವಿವರಣೆ ನೀಡಿದ ಸಿಎಂ, ನನಗೆ ಐಎಂಎ ವ್ಯವಸ್ಥಾಕರ ಪರಿಚಯವಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ಕೃಷ್ಣಾ ಕಚೇರಿಯಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ವೇಳೆ ಸಿಟಿ ರವಿ ಪ್ರಸ್ತಾಪ ಮಾಡಿದ ಶಾಸಕರು ಬಂದು ಇಫ್ತಿಯಾರ್ ಗೆ ದಯವಿಟ್ಟು ಬರಬೇಕು ಎಂದು ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದರು. ನಾನು ಮೊದಲನೇ ಬಾರಿಗೆ ಆ ಕಚೇರಿಗೆ ಹೋಗಿದ್ದು, ಹಾಗೆಯೇ ವ್ಯವಸ್ಥಾಪಕರನ್ನು ಭೇಟಿ ಮಾಡಿದ್ದೇನೆ. ಅಲ್ಲಿ ನಾನೇನು ಬಿರಿಯಾನಿ ತಿಂದಿಲ್ಲ. ಯಾಕೆಂದರೆ ನನಗೆ ಎರಡನೇ ಬಾರಿಗೆ ಹೃದಯದ ಚಿಕಿತ್ಸೆ ಆದ ಬಳಿಕ ನಾನು ನಾನ್ ವೆಜ್ ತಿನ್ನೋದನ್ನು ಬಿಟ್ಟಿದ್ದೇನೆ. ಹೀಗಾಗಿ ನಾನು ಅಲ್ಲಿಗೆ ಬಿರಿಯಾನಿ ತಿನ್ನಲು ಹೋಗಿಲ್ಲ. ಅವರು ರಂಜಾನ್ ಹಬ್ಬಕ್ಕೆ ಕರೆದ್ರಲ್ವಾ ಎಂದು ಹೋಗಿ ಖರ್ಜೂರ ಬಾಯಿಗೆ ಹಾಕಿದಾಗ ಅದರ ಫೋಟೋ ತೆಗೆದಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಎಂದು ವಿವರಣೆ ನೀಡಿದರು.

    ನನಗೆ ಕೇಂದ್ರ ಸರ್ಕಾರದ ಐಟಿ ಇಲಾಖೆಯಿಂದ ನಮ್ಮ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿ ಸರಿಯಾದ ರೀತಿಯ ತನಿಖೆಗಳು ಆಗುತ್ತಿಲ್ಲ ಎಂಬ ವರದಿ ಬಂದ ಬಳಿಕ ನಾನೇ ನಮ್ಮ ಡಿಜಿಯವರನ್ನು ಕರೆದು ಅದರ ಬಗ್ಗೆ ತನಿಖೆ ಆಗಬೇಕು ಎಂದು ನಿರ್ದೇಶನ ಕೊಟ್ಟೆ. ನಾನು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಈ ಕಂಪನಿ ಬಂದಿದ್ದಲ್ಲ, ಅದಕ್ಕಿಂತಲೂ ಮೊದಲೇ ಈ ಕಂಪನಿ ಇತ್ತು ಎಂದರು.

    ವ್ಯವಸ್ಥಾಪಕ ಕಚೇರಿಯಲ್ಲಿ ದೇಶದ ಗೌರವಾನ್ವಿತ ಪ್ರಧಾನಿಗಳ ಫೋಟೋವನ್ನು ಕೂಡ ಹಾಕಿಕೊಂಡಿದ್ದರು. ಆದಾಯ ತೆರಿಗೆ ಇಲಾಖೆಯವರು ನೀಡಿದ್ದ ಫೋಟೋವನ್ನೂ ಹಾಕಿಕೊಂಡಿದ್ದರು. ಇಂದು ನಮ್ಮ ಅಧಿಕಾರಿಗಳೇ ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅರೆಸ್ಟ್ ಮಾಡಿದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಕೂರಿಸುವ ಬದಲು ಇಡಿಯವರು ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.

    ಇಲ್ಲಿ ಬಿರಿಯಾನಿ ಕಥೆ ಯಾವುದು ನಡೆದಿಲ್ಲ. ಬಡವರ ದುಡ್ಡನ್ನು ನುಂಗಿ ಹಾಕಿದವರಿಗೆ ರಕ್ಷಣೆ ಕೊಡಲು ಈ ಸರ್ಕಾರದಲ್ಲಿ ಸಾಧ್ಯವಿಲ್ಲ. ಈ ಸಂಬಂಧ ಯಾವ ರಾಜಿನೂ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

    ಇದೇ ವೇಳೆ ಸಿಎಂ ಮಾತಿಗೆ ದನಿಗೂಡಿಸಿ ಸ್ಪೀಕರ್ ನಾನು ವೆಜ್ ತಿನ್ನೋದನ್ನು ಬಿಡಬೇಡಿ. ನಮ್ಮ ರಕ್ಷಣೆಗೆ ಬನ್ನಿ ನೀವು ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ರು.

  • ಸಿಎಲ್‍ಪಿ ಸಭೆಗೆ ಗೈರು- ಶಾಸಕ ಸುಧಾಕರ್,  ತುಕಾರಾಂಗೆ  ಜ್ವರವಂತೆ

    ಸಿಎಲ್‍ಪಿ ಸಭೆಗೆ ಗೈರು- ಶಾಸಕ ಸುಧಾಕರ್, ತುಕಾರಾಂಗೆ ಜ್ವರವಂತೆ

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆ ಇಂದು ವಿಧಾನಸೌಧದಲ್ಲಿ ನಡೆಯುತ್ತಿದ್ದು, ಕೆಲ ಶಾಸಕರು ಸಭೆಗೆ ಗೈರಾಗಿದ್ದಾರೆ.

    ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಹಾಗೂ ಸಂಡೂರು ಶಾಸಕ ತುಕಾರಾಂ ಅವರು ಸಭೆಗೆ ಗೈರಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕಾರಣ ನೀಡಿದ್ದಾರೆ. ನಮಗೆ ವೈರಲ್ ಜ್ವರ ಇದೆ. ಹೀಗಾಗಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಇತ್ತ ಖಾನಾಪುರ ಅಂಜಲಿ ನಿಂಬಾಳ್ಕರ್ ಕೂಡ ಸಭೆಗೆ ಗೈರಾಗಿದ್ದಾರೆ. ಇದೀಗ ಇವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಇವರು ಸಭೆಗೆ ಹಾಜರಾಗುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಹೀಗಾಗಿ ಇವರು ಇಂದು ರಾಜೀನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ.

    ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಅನಾರೋಗ್ಯದ ಕಾರಣ ಗೈರು ಎಂದು ಪತ್ರ ಬರೆದು ತಮ್ಮ ಬೆಂಬಲಿಗನ ಮೂಲಕ ಪತ್ರ ಕಳುಹಿಸಿದ್ದಾರೆ. ರಾಜೀನಾಮೆ ಕೊಟ್ಟವರು ಹಾಗೂ ರೋಶನ್ ಬೇಗ್ ರನ್ನ ಹೊರತುಪಡಿಸಿ ಅನುಮತಿ ಪಡೆದವರು ಹಾಗೂ ಮಾಹಿತಿ ನೀಡದವರು ಸೇರಿ ಒಟ್ಟು 8 ಮಂದಿ ಶಾಸಕರು ಸಭೆಗೆ ಗೈರಾಗಿದ್ದಾರೆ.

    ನಾಗೇಂದ್ರ ತಡವಾಗಿ ಬರುವುದಾಗಿ ಸಿದ್ದರಾಮಯ್ಯಗೆ ಕರೆ ಮಾಡಿ ತಿಳಿಸಿದ್ದಾರೆ. ಈಗಾಗಲೇ ಸಮ್ಮಿಶ್ರ ಸರ್ಕಾರದ 15 ಮಂದಿ ರಾಜೀನಾಮೆ ನೀಡಿದ್ದು, ಇಂದು ಮತ್ತಷ್ಟು ಶಾಸಕರು ರಾಜೀನಾಮೆ ನಿಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಕಾಂಗ್ರೆಸ್ ನಿಂದ ಸಿಎಲ್‍ಪಿ ಸಭೆ ಕರೆಯಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ  ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್, ಶಾಸಕಾಂಗ ಸಭೆ ನಡೆಯುತ್ತಿದೆ.