Tag: ವಿಧಾನ ಸಭಾ ಚುನಾವಣೆ

  • ಬಿಜೆಪಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯ: ಮೋದಿ

    ಬಿಜೆಪಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯ: ಮೋದಿ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಅಗತ್ಯವಾಗಿದ್ದು, ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದು ಈಗ ನಿಲ್ಲಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಉತ್ತರ ಪ್ರದೇಶದ ಜೌನ್‍ಪುರದಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಲ್ಲಿಯವರೆಗಿನ ಮತದಾನವು ಬಿಜೆಪಿ ಮೈತ್ರಿಕೂಟದ ಗೆಲುವನ್ನು ಖಚಿತಪಡಿಸಿದೆ ಎಂದಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

    ಇಂದು ನಡೆದ ಆರನೇ ಹಂತದ ಮತದಾನದಲ್ಲಿ ಚಲಾವಣೆಯಾದ ಮತಗಳು ಬಿಜೆಪಿ ಪರವಾಗಿವೆ. ಉತ್ತರ ಪ್ರದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕಾರಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಅಗತ್ಯವಾಗಿದೆ ಮತ್ತು ಅದು ಈಗ ನಿಲ್ಲಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮಗೆ ಇನ್ನೂ ಐದು ವರ್ಷ ಕೊಡಿ : ಅಮಿತ್ ಶಾ

    2017ರಲ್ಲಿದ್ದಂತೆಯೇ ಬಿಜೆಪಿ ಗೆಲುವು ಭರ್ಜರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾ, ಹಿಂದೆ ಇದ್ದ ಸಮಾಜವಾದಿ ಪಕ್ಷದ ಸರ್ಕಾರವನ್ನು ಮಾಫಿಯಾವಾದಿ ಎಂದು ವಾಗ್ದಾಳಿ ನಡೆಸಿದರು. ನಂತರ ಜಾನ್‍ಪುರವನ್ನು ಮಾಫಿಯಾ ಮುಕ್ತಗೊಳಿಸಲು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಗತ್ಯವಿದೆ ಎಂದಿದ್ದಾರೆ.

  • ಕೇರಳದಲ್ಲಿ ಬಿಜೆಪಿಗೆ ಬಹುಮತ ಪಕ್ಕಾ: ಶ್ರೀಧರನ್

    ಕೇರಳದಲ್ಲಿ ಬಿಜೆಪಿಗೆ ಬಹುಮತ ಪಕ್ಕಾ: ಶ್ರೀಧರನ್

    ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಬಹುಮತಗಳಿಂದ ಗೆಲುವು ಸಾಧಿಸಲಿದೆ ಎಂದು ಮೆಟ್ರೋಮ್ಯಾನ್ ಶ್ರೀಧರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಾಲಕ್ಕಾಡ್ ನಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋನಲ್ಲಿ ಭಾಗಿಯಾಗಿ ಮಾತನಾಡಿದರು. ನನ್ನ ಪ್ರಕಾರ ಕೇರಳದಲ್ಲಿ ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. ಕಿಂಗ್ ಮೇಕರ್ ಆಗಲು ಬೇಕಾದ ಸ್ಥಾನಗಳು ಬಿಜೆಪಿಗೆ ಸಿಗಲಿದೆ ಎಂದು ಶ್ರೀಧರನ್ ಹೇಳಿದರು.

    ಕೇರಳದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಕೈಗಾರಿಕೆಗಳಿಂದ ಮಾತ್ರ ರಾಜ್ಯಕ್ಕೆ ಸಂಪತ್ತು ತರಬಹುದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇರಳಕ್ಕೆ ಕೈಗಾರಿಕೆಯನ್ನು ತರುತ್ತೇನೆ ಎಂದು ಭರವಸೆ ನೀಡಿದರು.

    ನಿರುದ್ಯೋಗ ಕೂಡ ಕೇರಳದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಠಿಸುವ ಅಗತ್ಯತೆ ಇದೆ. ಅಲ್ಲದೆ ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವ ಬಗ್ಗೆಯೂ ಪ್ರಯತ್ನಿಸುತ್ತೇನೆ. ಒಟ್ಟಿನಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ನಡೆಸುವುದೇ ನನ್ನ ಗುರಿಯಾಗಿದೆ ಎಂದರು.

    ಹಿರಿಯರ ಕಾಲು ತೊಳೆಯುವುದು ನಮ್ಮ ಸಂಸ್ಕೃತಿಯಾಗಿದೆ. ಆದರೆ ಇದರ ಮಹತ್ವ ಎಡಪಕ್ಷಗಳಿಗೆ ತಿಳಿದಿಲ್ಲ. ಕಾಲು ತೊಳೆಯುವ ಮೂಲಕ ನಮ್ಮ ಹಿರಿಯರಿಗೆ ಗೌರವ ತೋರುವುದು ನಮ್ಮ ನಾಡಿನ ಸಂಸ್ಕೃತಿ . ಇದನ್ನು ಎಲ್ಲರೂ ಮಾಡುತ್ತಾರೆ. ನನ್ನ ಮಕ್ಕಳು ಕೂಡ ಹಿರಿಯರ ಕಾಲು ತೊಳೆಯುತ್ತಾರೆ. ಇದನ್ನು ಎಡಪಕ್ಷಗಳು ಟೀಕಿಸುವುದು ಸರಿಯಲ್ಲ. ಇದು ಸಂಪ್ರದಾಯದ ಬಗ್ಗೆ ಗೌರವ ಇಲ್ಲದಿರುವುದನ್ನು ಬಿಂಬಿಸುತ್ತದೆ ಎಂದು ಶ್ರೀಧರನ್ ಕಿಡಿಕಾರಿದ್ದಾರೆ.

    ಏಪ್ರಿಲ್ 6 ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.

  • ತೆಲಂಗಾಣದಲ್ಲಿ ಮತ್ತೆ ಗದ್ದುಗೆ ಏರ್ತಾರಾ ಕೆಸಿಆರ್..?

    ತೆಲಂಗಾಣದಲ್ಲಿ ಮತ್ತೆ ಗದ್ದುಗೆ ಏರ್ತಾರಾ ಕೆಸಿಆರ್..?

    – ಅತಂತ್ರವಾದ್ರೆ ಟಿಆರ್ ಎಸ್‍ಗೆ ಬಿಜೆಪಿ ಬೆಂಬಲ..?

    ಹೈದರಾಬಾದ್: ಭಾರೀ ಕುತೂಹಲ ಪಡೆದಿರುವ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

    ಸರಳ ಬಹುಮತಕ್ಕೆ 60 ಸೀಟುಗಳ ಅವಶ್ಯಕತೆ ಇದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಟಿಆರ್‍ಎಸ್ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಟಿಆರ್ ಎಸ್ ನೂರಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ತೆಲುಗು ನಾಡಿನ ನೂತನ ರಾಜ್ಯ ರಚನೆಯಾದ ಬಳಿಕ ನಡೆಯುತ್ತಿರುವ ಪ್ರಥಮ ಚುನಾವಣೆಯ ರಣಕಣದಲ್ಲಿ ಕೆಲ ದಿಗ್ಗಜರು ಸ್ಪರ್ಧಿಸಿದ್ದಾರೆ.

    ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸಿದ ಕೆ.ಚಂದ್ರಶೇಖರ ರಾವ್ ಗಜ್ವಾಲ್ ಕೇತ್ರದಿಂದ ಸ್ಪರ್ಧಿಸಿದ್ದು, ಪುತ್ರ ಕೆ.ಟಿ.ರಾಮ ರಾವ್ ಸಿರ್ಸಿಲಾ ಕೇತ್ರದಿಂದ ಮೂರನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಅಬ್ಬರದ ಭಾಷಣದ ಮೂಲಕ ತೆಲುಗು ಜನರನ್ನು ಹುಚ್ಚೆಬ್ಬಿಸಿದ್ದ ಎಐಎಂಐಎಂ ಪಕ್ಷದ ಅಕ್ಬರುದ್ದೀನ್ ಒವೈಸಿ ಚಂದ್ರಯಾನಗುಟ್ಟ ಕ್ಷೇತ್ರದಿಂದ ಗೆಲ್ಲುವ ತವಕದಲ್ಲಿದ್ದಾರೆ.

    ತೆಲಂಗಾಣ ವಿಧಾನಸಭೆಯಲ್ಲಿ 119 ಒಟ್ಟು ಕ್ಷೇತ್ರಗಳಿದ್ದು, ಅದರಲ್ಲಿ 60 ಕ್ಷೇತ್ರಗಳಲ್ಲಿ ಜಯಗಳಿಸಿದ ಪಕ್ಷ ಅಧಿಕಾರ ಹಿಡಿಯುತ್ತದೆ. 2014ರ ತೆಲಂಗಾಣ ಚುನಾವಣಾ ಫಲಿತಾಂಶದಲ್ಲಿ ಟಿಆರ್‍ಎಸ್ ಶೇ. 34.3, ಕಾಂಗ್ರೆಸ್ ಶೇ. 25.2, ಟಿಡಿಪಿ ಶೇ.14.7, ಎಂಐಎಂ ಶೇ.3.8, ಬಿಜೆಪಿ ಶೇ. 7.1 ಹಾಗೂ ಇತರೆ ಶೇ. 14.9 ಮತ ಗಳಿಸಿದ್ದವು.

    ತೆಲಂಗಾಣ ಚುನಾವಣೆಯಲ್ಲಿ ಯಾರಿಗೆ ಪ್ಲಸ್? ಯಾರಿಗೆ ಮೈನಸ್?
    ಲೋಕಸಭೆ ಚುನಾವಣೆ ವೇಳೆಯೇ ತೆಲಂಗಾಣ ವಿಧಾನಸಭೆ ಅವಧಿ ಮುಕ್ತಾಯ ಆಗಬೇಕಿತ್ತು. ಆದರೆ ಅವಧಿಗೂ ಮೊದಲೇ ಚುನಾವಣೆ ನಡೆದಿದೆ. ತೆಲಂಗಾಣದಲ್ಲಿ ಮಹಾಕೂಟಮಿ ರಚನೆ ಬಳಿಕ ಪರಿಸ್ಥಿತಿ ಬದಲಾಗಿದೆ. ಬದ್ಧವೈರಿಗಳಾಗಿದ್ದ ಕಾಂಗ್ರೆಸ್-ಟಿಡಿಪಿ ಮೈತ್ರಿ, ಪ್ರತ್ಯೇಕ ತೆಲಂಗಾಣ ರಚನೆಯಲ್ಲಿ ಪ್ರಮುಖವಾಗಿದ್ದ ಟಿಜೆಎಸ್, ಸಿಪಿಐಎಂ ಜೊತೆ ಸೇರಿತ್ತು. ದಕ್ಷಿಣ ತೆಲಂಗಾಣದಲ್ಲಿ ಕಾಂಗ್ರೆಸ್, ಖಮ್ಮಂ, ರಂಗಾರೆಡ್ಡಿ ಜಿಲ್ಲೆಗಳಲ್ಲಿ ಟಿಡಿಪಿ ಪ್ರಾಬಲ್ಯ ಪಡೆದಿದೆ.

    ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಕೌಟುಂಬಿಕ ದುರಹಂಕಾರ ಎಂಬ ಹಣೆಪಟ್ಟಿ ಹಾಕಲಾಗಿದೆ. ತೆಲಂಗಾಣ ಹೋರಾಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ಸಂಘಟನೆಗಳನ್ನು ಅಧಿಕಾರ ಕಡೆಗಣನೆ ಮಾಡಿದ್ದಾರೆಂಬ ಆರೋಪ ಎದುರಾಗಿತ್ತು. ತೆಲಂಗಾಣ ರಚನೆಗೆ ನಾವೇ ಕಾರಣ ಎಂದು ಕಾಂಗ್ರೆಸ್ ವಾದ ಮಂಡನೆ ಮಾಡಿತ್ತು. ಸ್ಥಳೀಯ ಮಟ್ಟದಲ್ಲಿ ಟಿಆರ್‍ಎಸ್ ಶಾಸಕರ ವಿರುದ್ಧ ಜನಾಭಿಪ್ರಾಯ ಇದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು.

    ಕಲ್ಯಾಣ ಕಾರ್ಯಕ್ರಮ (ರೈತರ ಸಾಲ ಮನ್ನಾ, ಉಚಿತ ಮನೆ ನಿರ್ಮಾಣ, ರೈತರಿಗೆ ನಗದು ನೆರವು) ಗಳಿಂದ ಕೆಸಿಆರ್ ಮತ್ತೆ ಅಧಿಕಾರ ಹಿಡಿಯಲಿದ್ದಾರೆ ಅನ್ನೋ ನಿರೀಕ್ಷೆ ಇದೆ. ಯುವಕರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಟಿಆರ್‍ಎಸ್ ಮಾಡಿದ್ದ ಭರವಸೆ ಈಡೇರಿಸಿಲ್ಲ. ಟಿಆರ್‍ಎಸ್ ಬಿಜೆಪಿಯ ಬಿ ಟೀಮ್ ಎಂಬುದು ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 2 ಲಕ್ಷ ರೂಪಾಯಿವರೆಗೆ ರೈತರ ಸಾಲ ಮನ್ನಾ ಭರವಸೆ ಕೊಟ್ಟಿದೆ. ದೇವಸ್ಥಾನ, ಮಸೀದಿಗಳಿಗೆ ಕಾಂಗ್ರೆಸ್‍ನಿಂದ ಉಚಿತ ವಿದ್ಯುತ್ ಸಂಪರ್ಕ, ಅರ್ಚಕರಿಗೆ ಅಪಘಾತ ವಿಮೆ ಭರವಸೆ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗುತ್ತೋ? ಇಲ್ವೋ?: ಎಚ್‍ಡಿಕೆ ಹೇಳಿದ್ದು ಹೀಗೆ

    ಪ್ರಜ್ವಲ್ ರೇವಣ್ಣಗೆ ಟಿಕೆಟ್ ಸಿಗುತ್ತೋ? ಇಲ್ವೋ?: ಎಚ್‍ಡಿಕೆ ಹೇಳಿದ್ದು ಹೀಗೆ

    ಶಿವಮೊಗ್ಗ: ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವುದಿಲ್ಲ ಎಂದು ದೇವೇಗೌಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರಜ್ವಲ್‍ರನ್ನು ಚುನಾವಣೆಗೆ ನಿಲ್ಲಿಸಬಾರದು ಎಂದು ನಾನು ಹೇಳಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಎಚ್‍ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶ ಕುರಿತಂತೆ ಇಂದು ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದಲ್ಲಿಯೇ ಈ ವಿಚಾರದಲ್ಲಿ ಕಲಹವಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೇ ಈ ಕುರಿತ ತೀರ್ಮಾನವನ್ನು ಎಚ್‍ಡಿ ದೇವೇಗೌಡ ಅವರು ಅಂತಿಮಗೊಳಿಸುತ್ತಾರೆ. ಈ ಬಾರಿಯ ಚುನಾವಣೆಯ ಟಿಕೆಟ್ ನೀಡುವ ವಿಚಾರವಾದಲ್ಲಿ ಯಾವುದೇ ಟೀಕೆಗಳಿಗೂ ಅವಕಾಶ ನೀಡದೇ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

    ಪ್ರತಿ ಕ್ಷೇತ್ರದಲ್ಲಿಯು 4 ರಿಂದ 5 ಜನ ಟಿಕೆಟ್ ಅಕಾಂಕ್ಷಿಗಳು ಇರುವುದರಿಂದ ಒಬ್ಬರಿಗಷ್ಟೇ ಟಿಕೆಟ್ ನೀಡಲು ಸಾಧ್ಯ. ಈ ಕುರಿತು ನವೆಂಬರ್ 16 ರ ನಂತರ ಕೋರ್ ಕಮಿಟಿ ಸಭೆ ನಡೆಸಿ ಪಕ್ಷದ 150 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸುತ್ತೇವೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

    ಈ ಹಿಂದೆ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ತನ್ನ ಮಗ ಪ್ರಜ್ವಲ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುವುದು ಇನ್ನೂ ಖಚಿತವಾಗಿಲ್ಲ. ದೇವೇಗೌಡರಿಂದ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ ಎಂದು ಹೇಳಿದ್ದರು.

    ಭವಾನಿ ರೇವಣ್ಣ ಅವರ ಹೇಳಿಕೆ ಬೆನ್ನಲ್ಲೇ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ಅವರು ರೇವಣ್ಣನ ಪುತ್ರ ಪ್ರಜ್ವಲ್ ಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವತಿ ನೀಡಿಲ್ಲ. ನಮ್ಮ ಕುಟುಂಬದಿಂದ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು.

     

  • ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

    ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

    ಮೈಸೂರು: ಪ್ರಧಾನಿ ಮೋದಿಯವರ ಹಿಂದಿ ಭಾಷಣ ಕೇಳಿ ಯಾರು ಮರುಳಾಗಬೇಡಿ, ನನಗೆ ಕೆಲಸ ಮಾಡುವ ಒಂದು ಅವಕಾಶವನ್ನು ಕೊಡಿ ಎಂದು ವಿಕಾಸ ಯಾತ್ರೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ನಾಡಿನ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ. ಈ ಹಿಂದಿನ 20 ತಿಂಗಳ ಆಡಳಿತ ಕೇವಲ ಸಿನಿಮಾ ಟ್ರೇಲರ್ ಮಾತ್ರ. ಅಂದು ನಿಮ್ಮ ಪೂರ್ಣ ಅಶೀರ್ವಾದದಿಂದ ನಾನು ಸಿಎಂ ಆಗಿರಲಿಲ್ಲ. ಇಂದು ನಿಮ್ಮ ಆಶೀರ್ವಾದ ಬೇಕಿದೆ ಎಂದು ಹೇಳಿದರು.

    ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷವು ಮತದಾರರನ್ನು ಸೆಳೆಯಲು ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದೆ. ಸಮಾವೇಶಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಹಾಗೂ ಎಚ್.ಡಿ ಕುಮಾರಸ್ವಾಮಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಎಚ್‍ಡಿಡಿ ವಿಕಾಸ ಯಾತ್ರೆಗೆ ಚಾಲನೆ ನೀಡಿದರು. ವಿಕಾಸ ವಾಹಿನಿ ಬಸ್ ನಲ್ಲಿ ಯಾತ್ರೆ ಆರಂಭಿಸಿದ ಕುಮಾರಸ್ವಾಮಿ ಅವರು ನಂಜನಗೂಡು, ಎಚ್.ಡಿ.ಕೋಟೆ, ದಟ್ಟಗಳ್ಳಿ, ರಾಮಕೃಷ್ಣ ನಗರ ಬೋಗಾದಿ, ಹಿನಕಲ್ ವೃತ್ತಗಳ ಮೂಲಕ ಮೆರವಣಿಗೆ ನಡೆಸಿ ಸಮಾವೇಶ ಪ್ರದೇಶಕ್ಕೆ ತೆರಳಿದರು.

    ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಗೆ ಚುನಾವಣೆ ಗೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪೊಲೀಸ್ ಜೀಪ್‍ನಲ್ಲಿ ಹಣ ಸಾಗಿಸಿದ್ದಾರೆ. ಈಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದರೆ ನೂರು ಕೋಟಿ ಬೇಕಾದರು ಖರ್ಚು ಮಾಡುತ್ತಾರೆ. ಈಗ ಅವರಿಗೆ ದುಡ್ಡಿಗೆ ಕಡಿಮೆ ಇಲ್ಲ. ದೇವೆಗೌಡರ ಜೊತೆ ಇದ್ದ ಸಿದ್ದರಾಮಯ್ಯ ಬೇರೆ, ಪ್ರಸ್ತುತ ಸಿದ್ದರಾಮಯ್ಯ ಬೇರೆ ಎಂದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಅವರೊಬ್ಬರು ಮಾತ್ರ ಕುರಿ ಕಾದಿಲ್ಲ. ನಾವು ಗೊಬ್ಬರ ಹೊತ್ತಿದ್ದೇವೆ. ರೈತರ ಕಷ್ಟದ ಅರಿವು ನನಗಿದೆ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಮಾತ್ರ ಒಪ್ಪುತ್ತಿಲ್ಲ. ನಾವು ಸುಳ್ಳು ಹೇಳುತ್ತೇವೆ ಅಂತಾ ಸಿಎಂ ಹೇಳುತ್ತಾರೆ. ಸಿಎಂ ಒಬ್ಬರೇ ನಾಡಿನಲ್ಲಿ ಸತ್ಯಹರಿಶ್ಚಂದ್ರ. ಸತ್ಯಹರಿಶ್ಚಂದ್ರ ಸಿಎಂ ನೀವು ಎಷ್ಟು ಸಾಲ ಮಾಡಿದ ಮಾಡಿದ್ದೀರಾ ಅಂತಾ ಜನರಿಗೆ ತಿಳಿಸಿ ಎಂದು ಕಿಡಿಕಾರಿದರು.

    ಸಿಎಂ ಸಿದ್ದರಾಮಯ್ಯ ಚಾಮಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಾರೆ ಅಂತಾ ಈ ಸಮಾವೇಶ ಮಾಡುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಜೆಡಿಎಸ್ ಹಾಳು ಮಾಡಿದವರು ಸಿದ್ದರಾಮಯ್ಯ. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿದ ಪುಣ್ಯಾತ್ಮ. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಮಾಜಿ ಸಂಸದ ಎಚ್. ವಿಶ್ವನಾಥ್ ನನ್ನನ್ನು ಮತ್ತು ನನ್ನ ತಂದೆ ಅವರನ್ನು ಟೀಕಿಸಿದ್ದಾರೆ. ಅವರ ಟೀಕೆ ವೈಯಕ್ತಿಕವಾಗಿರಲಿಲ್ಲ. ಜನರ ಶಕ್ತಿ ಮುಂದೆ ಸಿದ್ದರಾಮಯ್ಯರ ದರ್ಪ, ಹಣ ಬಲ ನಡೆಯಲ್ಲ. ಚಾಮುಂಡೇಶ್ವರಿ ಕ್ಷೇತ್ರದ ವಿಚಾರದಲ್ಲಿ ಸಿದ್ದರಾಮಯ್ಯ ನಮಗೆ ನಗಣ್ಯ ಎಂದರು.

    ನನ್ನ ಆರೋಗ್ಯ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಿದ್ದು, ಮರುಜನ್ಮವನ್ನು ಪಡೆದಿದ್ದೇನೆ. ಇದನ್ನು ಜನರಿಗಾಗಿ ಮುಡಿಪಾಗಿಡುತ್ತೇನೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನಾನು ತಪ್ಪು ಮಾಡಿರಲಿಲ್ಲ. ಆದರೂ 10 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ವೀರಶೈವ ಸಮಾಜದ ಬಂಧುಗಳೇ ನಾನು ನಿಮ್ಮವನು. ಜಾತಿ ಹೆಸರಿನ ವ್ಯಾಮೋಹಕ್ಕೆ ನನ್ನ ದ್ವೇಷಿಸಬೇಡಿ. ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಸಿಗದಿದ್ದಕ್ಕೆ ಬಿಜೆಪಿ ಅವರೇ ಕಾರಣ ಅದನ್ನು ವೀರಶೈವರು ಅರ್ಥ ಮಾಡಿಕೊಳ್ಳಬೇಕಿದೆ. ಇಪ್ಪತ್ತು ತಿಂಗಳು ನಮ್ಮ ತಂದೆಗೆ ನೋವು ಕೊಟ್ಟು ಸಿಎಂ ಆದೆ. ಅವರಿಗೆ ನೋವು ಉಂಟಾಗದಂತೆ ಈ ಬಾರಿ ಸಿಎಂ ಆಗಬೇಕು. ಅದಕ್ಕೆ ಜನರ ಆಶೀರ್ವಾದ ಬೇಕು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನ ಜಿ.ಟಿ ದೇವೇಗೌಡ. ಸಿದ್ದರಾಮಯ್ಯ ಅವರ ಮಗ ದಡ್ಡನೋ ಬುದ್ಧಿವಂತನೋ ಗೊತ್ತಿಲ್ಲ. ಅವರನ್ನು ಪದೇ ಪದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳಿಸಿ ಆಟ ನೋಡುತ್ತಿದ್ದಾರೆ. ಸೀತೆ ಮೇಲೆ ರಾವಣ ಕಣ್ಣು ಹಾಕಿದ್ದರಿಂದ ಲಂಕೆಗೆ ಬೆಂಕಿ ಬಿತ್ತು. ನೀವು ಈಗ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದೀರಾ ನಿಮಗೂ ಲಂಕೆಗೆ ಆದ ಕಥೆ ಬರುತ್ತೆ. ನನಗೆ ಕ್ಷೇತ್ರದಲ್ಲಿ ಬಹಳಷ್ಟು ನೋವು ಕೊಟ್ಟಿದ್ದೀರಿ. ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತೀರಾ ಜನರು ಇದನ್ನು ಜನ ನಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಪ್ರಧಾನಿ ದೇವೇಗೌಡ ದಂಪತಿ ಚಾಮುಂಡಿ ಬೆಟ್ಟದಿಂದ ಮೈಸೂರಿನ ಉತ್ತನಹಳ್ಳಿ ಅಮ್ಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವೇಗೌಡ ಅವರಿಗೆ ಶಾಸಕ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮೇಯರ್ ರವಿಕುಮಾರ್ ಸಾಥ್ ನೀಡಿದರು.

  • ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

    ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

    ಕೋಲಾರ: 2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಳೆದ ಕೆಲವು ದಿನಗಳ ಹಿಂದೆ ಚಿಂತಾಮಣಿ ಶಾಸಕರಾದ ಜೆ.ಕೆ ಕೃಷ್ಣ ರೆಡ್ಡಿ ತಮ್ಮ ಮತದಾರರನ್ನು ಸೆಳೆಯಲು ಬಾಡೂಟ ಕಾರ್ಯಕ್ರಮ ಏರ್ಪಡಿಸಿದಂತೆ. ಇಂದು ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಟಿಪ್ಪು ಜಯಂತಿ ಆಚರಣೆಯ ಪೂರ್ವಭಾವಿ ಸಭೆ ಹೆಸರಲ್ಲಿ ಬಾಡೂಟ ಏರ್ಪಡಿಸಿದ್ದಾರೆ.

    ಕೋಲಾರದ ಬೈರೇಗೌಡ ನಗರದ ಶಾಸಕರ ನಿವಾಸದ ಬಳಿ ಮುಸ್ಲಿಂ ಮುಖಂಡರಿಗೆ ಸಭೆಗೆ ಆಹ್ವಾನಿಸಿದ್ದಾರೆ. ಸಭೆಯಲ್ಲಿ ಭಾಗವಹಿಸುವ ಮುಖಂಡರಿಗಾಗಿ ಮಧ್ಯಾಹ್ನದ ಊಟಕ್ಕೆ ಭರ್ಜರಿ ಬಾಡೂಟ ತಯಾರಿ ಮಾಡಿಸಿದ್ದು, ಸುಮಾರು 300 ಕೆ.ಜಿ ಚಿಕನ್ ಧಮ್ ಬಿರಿಯಾನಿ ಮಾಡಿಸಲಾಗಿದೆ.

    ಆದರೆ ಇಂದು 11 ಗಂಟೆಗೆ ನಿಗಧಿಯಾಗಿದ್ದ ಸಭೆಗೆ ಒಂದು ಗಂಟೆಯಾದರು ಯಾವ ಮುಖಂಡರೂ ಬಾರದ ಹಿನ್ನೆಲೆ ಶಾಸಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. 2013 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಮುಸ್ಲಿಂ ಸಮುದಾಯದ ಮತಗಳು ದೊರೆತಿರಲಿಲ್ಲ. ಅದ್ದರಿಂದಲೇ ಈ ಬಾರಿ ಮುಸ್ಲಿಂ ಮತಗಳನ್ನು ಸೆಳೆಯಲು ಭರ್ಜರಿ ತಯಾರಿ ನಡೆಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

  • ಬಿಜೆಪಿಯ ನವಕರ್ನಾಟಕ ಯಾತ್ರೆಗೆ ಗುರುವಾರ ಚಾಲನೆ: ಯಾತ್ರೆ ಹೇಗಿರುತ್ತೆ? ಯಾರೆಲ್ಲ ನಾಯಕರು ಭಾಗವಹಿಸ್ತಾರೆ?

    ಬಿಜೆಪಿಯ ನವಕರ್ನಾಟಕ ಯಾತ್ರೆಗೆ ಗುರುವಾರ ಚಾಲನೆ: ಯಾತ್ರೆ ಹೇಗಿರುತ್ತೆ? ಯಾರೆಲ್ಲ ನಾಯಕರು ಭಾಗವಹಿಸ್ತಾರೆ?

    ಬೆಂಗಳೂರು: ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಗುರುವಾರ ಚಾಲನೆ ಸಿಗಲಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

    ಗುರುವಾರ ಬೆಳಗ್ಗೆ 11ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಐಇಸಿಗೆ ಬರಲಿರುವ ಅಮಿತ್ ಶಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಾಳೆ ನಡೆಯುವ ಬೈಕ್ ಯಾತ್ರೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕ ಭಾಗದ 17 ಜಿಲ್ಲೆಗಳ 27 ಸಾವಿರ ಬೂತ್ ಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ. ಒಂದು ಬೂತ್ ನಿಂದ ಕನಿಷ್ಠ 3 ಬೈಕ್ ಗಳಲ್ಲಿ 6 ಕಾರ್ಯರ್ತರು ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಯಾತ್ರೆ ಸಂಚರಿಸಲಿದೆ. ಕೇರಳದ ಜನ ರಕ್ಷಾ ಯಾತ್ರೆಯ ಸ್ವರೂಪದಲ್ಲಿ ರಾಜ್ಯದಲ್ಲೂ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಪ್ರಯಾಣಿಸಲು ಬಿಎಸ್‍ವೈ ಅವರಿಗೆ ವಿಶೇಷವಾಗಿ ವಾಹನ ಸಿದ್ದಪಡಿಸಲಾಗಿದ್ದು, ಅದರಲ್ಲಿಯೇ ಅವರು ಪ್ರಯಾಣ ಬೆಳಸಲಿದ್ದಾರೆ. ಪ್ರತಿ ದಿನ ಸುಮಾರು ನೂರು ಕಿ.ಮೀ. ಗೂ ಹೆಚ್ಚು ಸಂಚಾರ ಮಾಡಲಿರುವ ಯಾತ್ರೆ, 25 ದಿನಗಳಲ್ಲಿ ಒಟ್ಟು ಸುಮಾರು 11 ಸಾವಿರ ಕಿ.ಮೀ. ಸುತ್ತಲಿದೆ.

    ಪರಿವರ್ತನಾ ಯಾತ್ರೆಯಲ್ಲಿ ವಾರಕ್ಕೆ ಒಬ್ಬರು ಕೇಂದ್ರದ ದಿಗ್ಗಜ್ಜರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದೆ. ಅಲ್ಲದೇ ಕಟು ಹಿಂದುತ್ವವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ, ಸಾಧ್ವಿ ನಿರಂಜನ್ ಅವರು ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳು ಕೂಡ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಪರಿವರ್ತನಾ ಯಾತ್ರೆಗೆ ಅನುಮತಿ ನೀಡಿಲ್ಲ. ಹಾಗಾಗಿ ಯಾತ್ರೆ ಕೊಡಗು ಜಿಲ್ಲೆಯಲ್ಲಿ ಸಂಚಾರ ಮಾಡುವ ಸಾಧ್ಯತೆ ಕಡಿಮೆಯಿದೆ. ನಿಗದಿ ಪ್ರಕಾರ ನವೆಂಬರ್ 8 ರಂದು ಕೊಡಗು ಜಿಲ್ಲೆಗೆ ಯಾತ್ರೆ ಪ್ರವೇಶ ಮಾಡಬೇಕು. ನವೆಂಬರ್ 10, 11, 12 ಹಾಗೂ 13 ರಂದು ಮಂಗಳೂರು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ನಡೆಯಲಿದ್ದು, ಮಂಗಳೂರಿನಲ್ಲೇ ಕೋರ್ ಕಮಿಟಿ ಸಭೆ ನಡೆಯಲಿದೆ. ಜನವರಿ 18, 2018 ರಂದು ಉಡುಪಿ ಅಷ್ಟ ಮಠ ಪರ್ಯಾಯದಲ್ಲಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಜನವರಿ 25, 2018 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.

    ಬಿಜೆಪಿಯ ಪರಿವರ್ತನಾ ಯಾತ್ರೆಯು ಅಂತಿಮವಾಗಿ ಜನವರಿ 28 ರಂದು ಬೆಂಗಳೂರಿನಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ. ಅಂದು ಬೆಂಗಳೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಸಮಾವೇಶದ ಉಸ್ತುವಾರಿ ಮಾಜಿ ಡಿಸಿಎಂ ಆರ್. ಅಶೋಕ್ ಅವರಿಗೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮಾವೇಶದಲ್ಲಿ ಭಾಗವಹಿಸಲಿದ್ದು, ವಿಧಾನ ಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಇದಕ್ಕೂ ಮುನ್ನ ಡಿಸೆಂಬರ್ 21 ರಂದು ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ.

     

     

     

  • ಏನಿದು ರೋರೋ ಸಮುದ್ರಯಾನ? ಎಷ್ಟು ಗಂಟೆ ಉಳಿತಾಯವಾಗುತ್ತೆ? ವಿಶೇಷತೆ ಏನು?

    ಏನಿದು ರೋರೋ ಸಮುದ್ರಯಾನ? ಎಷ್ಟು ಗಂಟೆ ಉಳಿತಾಯವಾಗುತ್ತೆ? ವಿಶೇಷತೆ ಏನು?

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ನಲ್ಲಿ ರೋರೋ ಸಮುದ್ರಯಾನಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗುಜರಾತ್ ರಾಜ್ಯ ಜನತೆಗೆ ದೀಪಾವಳಿಯ ಉಡುಗೊರೆಯಾಗಿದ್ದು, ದೇಶಕ್ಕೆ ಮಹತ್ವ ಯೋಜನೆಯಾಗಿದೆ ಎಂದು ಹೇಳಿದರು.

    ಗುಜರಾತ್‍ಗೆ ಅಕ್ಟೋಬರ್ ತಿಂಗಳಿನಲ್ಲಿ ಪ್ರಧಾನಿ ಮೋದಿಯವರ ಮೂರನೇ ಭೇಟಿ ಇದಾಗಿದ್ದು, 1,140 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಇದರಲ್ಲಿ ಪ್ರಮುಖವಾಗಿ 600 ಕೋಟಿ ರೂ. ಮೌಲ್ಯದ ರೋರೋ ಸಮುದ್ರಯಾನ ದೋಣಿ ಸೇವೆಯನ್ನು ಘೋಗಾ ಮತ್ತು ದಹೇಜ್ ನಗರಗಳ ಉದ್ಘಾಟಿಸಿದರು.

    ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅಭಿವೃದ್ಧಿ ಯೋಜನೆಯಗಳನ್ನು ಕೈಗೊಳ್ಳಲು ತನಗೆ ಕೇಂದ್ರ ಸರ್ಕಾರದಿಂದ ಬೆಂಬಲ ದೊರೆತಿರಲಿಲ್ಲ ಆದರೆ ಕಳೆದ ಮೂರು ವರ್ಷಗಳಿಂದ ಗುಜರಾತ್ ಅಭಿವೃದ್ಧಿಗೆ ಬೇಕಾದ ಹಲವು ಯೋಜನೆಯಗಳನ್ನು ಜಾರಿಗೊಳಿಸಿರುವುದಾಗಿ ತಿಳಿಸಿದರು.

    ಭಾರತದ ಮೊದಲ ಯೋಜನೆ: ಭಾರತದಲ್ಲಿ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ. 1960ರಲ್ಲಿ ಈ ಯೋಜನೆಯ ಆರಂಭಕ್ಕೆ ಚಿಂತನೆಯನ್ನು ಕೈಗೊಳ್ಳಲಾಯಿತು ಆದರೆ 2012ರಲ್ಲಿ ಯೋಜನೆಯ ಆರಂಭಕ್ಕೆ ಮೋದಿ ಶಂಕುಸ್ಥಾಪನೆಯನ್ನು ಮಾಡಿದ್ದರು. ಈ ಯೋಜನೆಯು ಮೋದಿಯವರ ಕನಸಿನ ಯೋಜನೆಯಾಗಿದೆ.

    ಎಷ್ಟು ಸಮಯ ಉಳಿಯುತ್ತೆ? ರೋರೋ ಸಮುದ್ರಯಾನ ಯೋಜನೆ ಆರಂಭಕ್ಕೂ ಗುಜರಾತ್‍ನ ಭವನಗರ್ ಜಿಲ್ಲೆ ಘೋಗಾ ನಗರದಿಂದ ದಹೇಜ್ ನಗರಗಳ ಮಧ್ಯೆ ಸಂಪರ್ಕ ಸಾಧಸಿಲು 310 ಕಿ.ಮೀ ದೂರದ ರಸ್ತೆ ಮಾರ್ಗವನ್ನು ಕ್ರಮಿಸಬೇಕಿತ್ತು. ಆದರೆ ಪ್ರಸ್ತುತ ರೋರೋ ಹಡಗಿನ ಮೂಲಕ ಕೇವಲ 30 ಕಿ.ಮೀ ದೂರವನ್ನು ಹೊಂದಿದೆ. ಇದರಿಂದ ಪ್ರಯಾಣಿಕರು ಸುಮಾರು 8 ಗಂಟೆಯ ಅವಧಿಯ ಬದಲು ಒಂದೇ ಗಂಟೆಯಲ್ಲಿ ತಮ್ಮ ಪ್ರಯಾಣ ಮಾಡಿ ಮತ್ತೊಂದು

    ಎಷ್ಟು ಜನ ಪ್ರಯಾಣಿಸಬಹುದು?
    ಈ ರೋರೋ ಹಡಗಿನಲ್ಲಿ ಒಂದೇ ಬಾರಿಗೆ 250 ಪ್ರಯಾಣಿಕರು ಪ್ರಯಾಣಿಸಬಹುದು. ಅಷ್ಟೇ ಅಲ್ಲದೇ ಕಾರು, ಬಸ್, ಟ್ರಕ್ ಸೇರಿದಂತೆ ಒಟ್ಟು 100 ವಾಹನಗಳನ್ನು ಸಾಗಿಸಬಹುದಾಗಿದೆ. ಯೋಜನೆಯ ಆರಂಭಿಕ ಹಂತವಾಗಿ ಕೇವಲ ಪ್ರಯಾಣಿಕರನನ್ನು ಮಾತ್ರ ರೋರೋ ದೋಣಿಯಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ.

     

     

  • ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

    ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

    ಧಾರವಾಡ: ಜಿಲ್ಲೆಯ ಮನಗುಂಡಿ ಶ್ರೀ ಬಸವಾನಂದ ಸ್ವಾಮೀಜಿ ಯವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಗೂ ಪತ್ರವನ್ನು ಬರೆದಿದ್ದಾರೆ.

    ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ಶ್ರೀ ಗುರು ಬಸವ ಮಹಾಮನೆ ಆಶ್ರಮ ಹೊಂದಿರುವ ಶ್ರೀ ಬಸವಾನಂದ ಸ್ವಾಮೀಜಿ, ತನಗೆ ದೃಷ್ಟಿ ಇಲ್ಲದೇ ಇದ್ದರೂ ಕಲಘಟಗಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದು ಅಮಿತ್ ಶಾಗೆ ಪತ್ರವನ್ನು ಬರೆದಿದ್ದಾರೆ.

    ಸ್ವಾಮೀಜಿಗಳು ಬರೆದಿರುವ ಮೂರು ಪುಟಗಳ ಸುದೀರ್ಘ ಪತ್ರದಲ್ಲಿ ಇತ್ತೀಚೆಗೆ ಉತ್ತರ ಪ್ರದೇಶದ ರಾಜಕೀಯದಲ್ಲಾಗಿರುವ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ಕೆಲ ಸಲಹೆಗಳನ್ನು ನೀಡಿದ್ದಾರೆ.

    ಸಲಹೆ ಏನು?
    ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವ ಮುಂಚೆ ಆಕಾಂಕ್ಷಿಗಳಿಗೆ ಒಂದು ಪರೀಕ್ಷೆ ನಡೆಸಬೇಕು. ಆ ಪರೀಕ್ಷೆಗೆ ತಲಾ ಒಂದು ಲಕ್ಷ ರೂಪಾಯಿ ಶುಲ್ಕ ವಿಧಿಸಬೇಕು. ಅದಕ್ಕಾಗಿಯೇ ಒಂದು ಪರೀಕ್ಷಾ ಸಮಿತಿ ರಚಿಸಬೇಕು. ದೇಶಭಕ್ತಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ವಿದ್ಯಮಾನಗಳಿಗೆ ಸಂಬಂಧಿಸಿದ ಅರಿವು ಸೇರಿದಂತೆ ಬಿಜೆಪಿ ಪಕ್ಷವು ನಡೆದು ಬಂದ ದಾರಿ ಹಾಗೂ ಪ್ರಾದೇಶಿಕ ವಿಷಯಗಳ ಕುರಿತು ಪ್ರಶ್ನೆಗಳಿರಬೇಕು.

    ಪರೀಕ್ಷೆ ನಡೆಸುವ ಕಾರಣ ಒಂದು ಪುಸ್ತಕ ಪ್ರಕಟಿಸುವುದು ಸೂಕ್ತ. ಈ ರೀತಿ ಮಾಡುವುದರಿಂದ 224 ಕ್ಷೇತ್ರಗಳಿಗೆ ಏನಿಲ್ಲವಾದರೂ ಸಾವಿರದ ಐನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು. ಇದರಿಂದ ಪಕ್ಷದ ಖಜಾನೆಗೂ 15 ರಿಂದ 20 ಕೋಟಿ ರೂ. ಸಂಗ್ರಹವಾಗುತ್ತದೆ. ಅಲ್ಲದೇ ಒಳ್ಳೆಯ ಅಭ್ಯರ್ಥಿಗಳು ಸಹ ಕಣದಲ್ಲಿರುತ್ತಾರೆ ಎಂದು ಸ್ವಾಮೀಜಿ ಅಮಿತ್ ಶಾ ಅವರಿಗೆ ಸಲಹೆ ನೀಡಿದ್ದಾರೆ.

     

  • 2018 ರ ವಿಧಾನಸಭೆ ಚುನಾವಣೆ ಸಿದ್ಧತೆ- ಪಕ್ಷಾಂತರಿಗಳ ಮೇಲೆ ಕಾಂಗ್ರೆಸ್ ಕಣ್ಣು

    2018 ರ ವಿಧಾನಸಭೆ ಚುನಾವಣೆ ಸಿದ್ಧತೆ- ಪಕ್ಷಾಂತರಿಗಳ ಮೇಲೆ ಕಾಂಗ್ರೆಸ್ ಕಣ್ಣು

    ಬೆಂಗಳೂರು: 2018ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‍ನಲ್ಲಿ ತಯಾರಿ ಜೋರಗಿ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಹೈಕಮಾಂಡ್ ಪಕ್ಷಾಂತರಿಗಳ ಮೇಲೆ ಕಣ್ಣಿಟ್ಟಿದೆ.

    ಈ ಕುರಿತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿರುವ ರಾಜ್ಯ ಉಸ್ತುವಾರಿ ಕೆ.ಸಿ.ವೇಣಗೋಪಾಲ್ ಪಕ್ಷಾಂತರಕ್ಕೆ ಮನಸ್ಸು ಮಾಡಿರುವವರನ್ನು ಗುರುತಿಸಲು ಸೂಚಿಸಿದ್ದಾರೆ.

    2018ರ ಕರ್ನಾಟಕ ವಿಧಾನ ಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಮಹತ್ವ ಚುನಾವಣೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿಯು ಪಕ್ಷದ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ ಎಂದೇ ವಿಶ್ಲೇಷಿಸಲಾಗಿದೆ.

    ಪಕ್ಷದ ಗೆಲುವಿನ ಹಾದಿಯಲ್ಲಿ ಯಾರೊಂದಿಗೂ ರಾಜೀ ಮಾಡಿಕೊಳ್ಳುವುದು ಬೇಡ ಎಂದು ತಿಳಿಸಿರುವ ಉಸ್ತುವಾರಿ ವೇಣುಗೋಪಾಲ್, ಶೀಘ್ರವೇ ವರದಿಯನ್ನು ನೀಡಲು ತಿಳಿಸಿದ್ದಾರೆ. ಈ ವರದಿಯು ಕಾಂಗ್ರೆಸ್ ಹೈಕಮಾಂಡ್‍ಗೆ ಗೌಪ್ಯವಾಗಿ ಸಲ್ಲಿಕೆಯಾಗಲಿದೆ.

    ಪಕ್ಷದಿಂದ ಹೊರಹೋಗಲು ಮಾನಸಿಕವಾಗಿ ಸಿದ್ಧರಾಗಿರುವ ಶಾಸಕರು ಯಾರು? ಗೊಂದಲದಲ್ಲಿರುವ ಶಾಸಕರು ಯಾರು ಎಂಬುದರ ಬಗ್ಗೆಯು ವರದಿಯಲ್ಲಿ ಮಾಹಿತಿ ನೀಡಲು ತಿಳಿಸಿದ್ದಾರೆ.

    ಈ ವರದಿಯ ಅಧಾರವಾಗಿ ಕಾಂಗ್ರೆಸ್ ಹೈಕಮಾಂಡ್ ಪಕ್ಷದದಿಂದ ಹೊರ ಹೋಗುವವರ ಮನವೊಲಿಸಬೇಕಾ, ಇಲ್ಲಾ ಅಂತಹ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕಬೇಕಾ ಎಂಬುದರ ಬಗ್ಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಚುನಾವಣೆಗೂ ಒಂದು ತಿಂಗಳ ಮುಂಚೆಯೇ ಕಾಂಗ್ರೆಸ್ ಪಕ್ಷದ ಶಾಸಕರ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದ್ದು, ಗುಪ್ತ ವರದಿಯಲ್ಲಿ ಯಾವ ಶಾಸಕರು ಔಟ್ ಯಾವ ಶಾಸಕರು ಇನ್ ಎಂದುವುದು ಶೀಘ್ರವಾಗಿಯೇ ಹೈ ಕಮಾಂಡ್ ಕೈ ಸೇರಲಿದೆ.