Tag: ವಿಧಾನ ಪರಿಷತ್ ಕಲಾಪ

  • ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಕಾರ್ಯಕ್ರಮ ಜಾರಿ – ದಿನೇಶ್ ಗುಂಡೂರಾವ್

    ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಕಾರ್ಯಕ್ರಮ ಜಾರಿ – ದಿನೇಶ್ ಗುಂಡೂರಾವ್

    – ತಾಯಿ, ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಸಿಸೇರಿಯನ್ ಹೆರಿಗೆಗಳಿಗೆ ನಿಯಂತ್ರಣ ಅಗತ್ಯ
    – ಭ್ರೂಣ ಹತ್ಯೆ ವಿರುದ್ಧ ಡಿಕಾಯ್ ಆಪರೇಷನ್‌ಗಳ ಮೂಲಕ 46 ಜನರ ಬಂಧನ

    ಬೆಳಗಾವಿ: ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳು ನೂತನ ಕಾರ್ಯಕ್ರಮ ಜಾರಿಗೊಳಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ಇಂದು (ಡಿ.16) ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಜಗದೇವ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಈ ವಿಷಯದ ಕುರಿತು ಮಾತನಾಡಿದರು.ಇದನ್ನೂ ಓದಿ: 2025ರ ಅಂತ್ಯ ಅಥವಾ 2026ರ ಆರಂಭದಲ್ಲಿ ಬಾಂಗ್ಲಾ ಚುನಾವಣೆ – ಮೊಹಮ್ಮದ್ ಯೂನಸ್

    ರಾಜ್ಯದಲ್ಲಿ ಪ್ರತಿ ವರ್ಷ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. 2021-2022ರಲ್ಲಿ 35% ಇದ್ದ ಸಿಸೇರಿಯನ್ ಪ್ರಮಾಣ, 2022-23ಕ್ಕೆ 38%ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ 46% ಇದೆ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.61ರಷ್ಟು ಸಿಸೇರಿಯನ್ ಹೆರಿಗೆ ಮಾಡಲಾಗುತ್ತಿದೆ. ಸಿಸೇರಿಯನ್‌ಗಳಿಂದ ಹೆಚ್ಚು ಆದಾಯ ಬರುತ್ತದೆ ಮತ್ತು ಸುಲಭವಾಗಿ ಸಿಸೇರಿಯನ್ ಮಾಡಬಹುದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆಗಳನ್ನೇ ಹೆಚ್ಚು ಮಾಡುತ್ತಿದ್ದಾರೆ. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನ ಸಹಜ ಹೆರಿಗೆ ಮಾಡಿಸಿಕೊಳ್ಳಲು ಮಾನಸಿಕವಾಗಿ ಸಜ್ಜುಗೊಳಿಸಿಬೇಕಿದೆ. ಇದಕ್ಕಾಗಿ ನೂತನ ಕಾರ್ಯಕ್ರಮ ಜಾರಿಗೊಳಿಸುತ್ತಿರುವುದಾಗಿ ಸದನಕ್ಕೆ ತಿಳಿಸಿದರು.

    ಭ್ರೂಣ ಹತ್ಯೆ ವಿರುದ್ಧ ಯಶಸ್ವಿ ಡಿಕಾಯ್ ಆಪರೇಷನ್:
    ರಾಜ್ಯದಲ್ಲಿ 2023-24ರಿಂದ ಇಲ್ಲಿಯವರೆಗೆ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಿ 46 ಜನರನ್ನು ಬಂಧಿಸಲಾಗಿದೆ ಎಂದು ಇದೇ ವೇಳೆ ಸದನದಲ್ಲಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ಮೇಲೆ ತಪಾಸಣೆಗಳನ್ನು ಜಾಸ್ತಿ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯ ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಲ್ಲದೇ ಡಿಕಾಯ್ ಆಪರೇಷನ್‌ಗಳ ಯಶಸ್ವಿ ಕಾರ್ಯಾಚರಣೆಗಳನ್ನ ನಡೆಸಿ ಭ್ರೂಣೆ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಯಲು ಸರ್ಕಾರವು ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯಡಿ ಬರುವ ಎಲ್ಲಾ ಶಾಸನಬದ್ದ ಸಮಿತಿಗಳನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲಿ ರಚನೆ ಮಾಡಲಾಗಿದೆ. 2018 ರಿಂದ ರಾಜ್ಯದಲ್ಲಿ ‘ಬಾಲಿಕಾ’ ಆನ್ಲೈನ್ ಸಾಪ್ಟ್ವೇರ್ ಮುಖಾಂತರ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ.ಇದನ್ನೂ ಓದಿ: ಬಿಜಿಎಸ್‌ ಆಸ್ಪತ್ರೆಯಿಂದ ಕೋರ್ಟ್‌ಗೆ ಆಗಮಿಸಿದ ದರ್ಶನ್‌

    ರಾಜ್ಯ ಮಟ್ಟದಲ್ಲಿ ಶೇ.100ರಷ್ಟು ಗರ್ಭಿಣಿಯರ ನೋಂದಣಿ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಗ್ರಾಮ ಮಟ್ಟದಲ್ಲಿ ಜನನ ಸಮಯದ ಲಿಂಗಾನುಪಾತದ ದತ್ತಾಂಶಗಳನ್ನು ಮಾಹಿತಿ ತಂತ್ರಜ್ಞಾನದ ಮುಖಾಂತರ ಮೇಲ್ವಿಚಾರಣೆ ಮಾಡಲು ಕಲ್ಪಿಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯನ್ನು ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್/ಮಾಲೀಕರು/ವೈದ್ಯರ ವಿರುದ್ಧ ಒಟ್ಟು 136 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 74 ಪ್ರಕರಣಗಳು ದಂಡ ವಿಧಿಸಿ ಖುಲಾಸೆಗೊಂಡಿವೆ ಹಾಗೂ 65 ಪ್ರಕರಣಗಳು ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ಬಾಕಿಯಿರುತ್ತದೆ ಎಂದು ತಿಳಿಸಿದರು.

    ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್, ಆಸ್ಪತ್ರೆ, ವೈದ್ಯರು, ದಲ್ಲಾಳಿಗಳು, ಗರ್ಭಿಣಿಯರ ಸಂಬಂಧಿಕರ ವಿರುದ್ಧ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಕರಿಸುವ ಮಾಹಿತಿದಾರರಿಗೆ ಕರ್ನಾಟಕ ಸರ್ಕಾರದಿಂದ ನೀಡುತ್ತಿದ್ದ ಬಹುಮಾನವನ್ನು 50 ಸಾವಿರದಿಂದ 1 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ರಾಜ್ಯ ಮಟ್ಟದಿಂದ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಗುಪ್ತ ಕಾರ್ಯಾಚರಣೆ ನಡೆಸಲಾಗಿದೆ ಎಂದರು.

    ಹೆಣ್ಣು ಭ್ರೂಣ ಹತ್ಯೆ ಮಾಡದಂತೆ ರಾಜ್ಯಾದ್ಯಂತ ಜನಜಾಗೃತಿ ಹಾಗೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.ಇದನ್ನೂ ಓದಿ: ಬೆಜೆಪಿ ರೆಬೆಲ್‌ ತಂಡದಿಂದ ಫಡ್ನವಿಸ್‌ ಭೇಟಿ

     

  • ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೆ ಕಡ್ಡಾಯವಾಗಿ ನೀಡಬೇಕು: ಮುರುಗೇಶ್ ನಿರಾಣಿ

    ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೆ ಕಡ್ಡಾಯವಾಗಿ ನೀಡಬೇಕು: ಮುರುಗೇಶ್ ನಿರಾಣಿ

    ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆ ಆಗುವ ಯಾವುದೇ ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೇ ನೀಡಬೇಕು. ಇಲ್ಲದೆ ಹೋದರೆ ಅಂತ ಕೈಗಾರಿಕೆಗಳ ಮೇಲೆ ಕ್ರಮ‌ ತೆಗೆದುಕೊಳ್ಳುತ್ತೇವೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದರು.

    ವಿಧಾನಪರಿಷತ್ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮಂಜೇಗೌಡ ವಿಷಯ ಪ್ರಸ್ತಾಪ ಮಾಡಿದರು. ಸರ್ಕಾರ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪನೆ ಮಾಡಬೇಕು. ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಈಗಿರುವ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಎರಡು ಜಿಲ್ಲೆಗಳಲ್ಲಿ ಮೂಲಭೂತ ಸೌಕರ್ಯಗಳು ಇವೆ. ಹೀಗಾಗಿ ಕೈಗಾರಿಕೆಗಳನ್ನು ಹೆಚ್ಚು ಸ್ಥಾಪನೆ ಮಾಡಬೇಕು ಎಂದು ಒತ್ತಾಯ ಮಾಡಿದರು.

    ಇದಕ್ಕೆ ಉತ್ತರ ನೀಡಿದ ಸಚಿವ ಮುರುಗೇಶ್ ನಿರಾಣಿ, ಈಗಾಗಲೇ ಒನ್ ಡಿಸ್ಟ್ರಿಕ್ಟ್ ಒನ್ ಇಂಡಸ್ಟ್ರಿ ಅನ್ನೋ ಯೋಜನೆ ಇಲಾಖೆಯಲ್ಲಿ ಜಾರಿ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ಇಂಡಸ್ಟ್ರಿ ಆದರೂ ಇರಬೇಕು ಎನ್ನುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಬಿಜೆಪಿಯದ್ದು ಸಬ್ ಕಾ ವಿಕಾಸ್ ನಹೀ ಹೇ, ಸಬ್ ಕಾ ಸರ್ವ ನಾಶ್ ಹೇ: ಸಿದ್ದರಾಮಯ್ಯ

    ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಕೈಗಾರಿಕೆ ಸ್ಥಾಪನೆಗೂ ಇಲಾಖೆ ಕ್ರಮವಹಿಸುತ್ತಿದೆ. ಟಯರ್ 2 ಸಿಟಿಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದರೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತದೆ. ಯಾರಾದ್ರು ಕೈಗಾರಿಕೆ ಪ್ರಾರಂಭಕ್ಕೆ ಮುಂದೆ ಬಂದರೆ ಅನುಮತಿ ನೀಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಸರೋಜಿನಿ ಮಹಿಷಿ ವರದಿ ಅನ್ವಯ, ಕೈಗಾರಿಕೆಗಳಲ್ಲಿ 80% ಉದ್ಯೋಗ ಕನ್ನಡಿಗರಿಗೆ ಕೊಡಬೇಕು. ಯಾವುದೇ ಕೈಗಾರಿಕೆಗಳು, ಕಾರ್ಖಾನೆಗಳು ಕನ್ನಡಿಗರಿಗೆ ಉದ್ಯೋಗ ನೀಡದೇ ಹೋಗಿರುವ ಮಾಹಿತಿ ಕೊಟ್ಟರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು: ರಾಜುಗೌಡ ಆಕ್ರೋಶ