Tag: ವಿಧಾನಸೌಧ ವಜ್ರಮಹೋತ್ಸವ

  • ರಾಷ್ಟ್ರಪತಿಗಳಿಗೆ ಟಿಪ್ಪು ಭಾಷಣ ಬರೆದು ಕೊಟ್ಟಿದ್ರು ಇವ್ರು ಅಂದ್ರು ದಿನೇಶ್ ಅಮೀನ್ ಮಟ್ಟು

    ರಾಷ್ಟ್ರಪತಿಗಳಿಗೆ ಟಿಪ್ಪು ಭಾಷಣ ಬರೆದು ಕೊಟ್ಟಿದ್ರು ಇವ್ರು ಅಂದ್ರು ದಿನೇಶ್ ಅಮೀನ್ ಮಟ್ಟು

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದ ಭಾಷಣದಲ್ಲಿ ಟಿಪ್ಪುವಿನ ಬಗ್ಗೆ ಉಲ್ಲೇಖವಾಗಿದ್ದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಪರ – ವಿರೋಧದ ಚರ್ಚೆಗಳು ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದ ರಾಷ್ಟ್ರಪತಿಗಳ ಭಾಷಣ ನಿಜವಾಗಿಯೂ ಬರೆದಿದ್ದು ಯಾರು ಎಂಬ ಬಗ್ಗೆ ಚರ್ಚೆಯೋ ಚರ್ಚೆ. ಕೆಲವರು ರಾಜ್ಯದತ್ತ ಕೈತೋರಿಸಿದರೆ, ಇನ್ನು ಕೆಲವರು ಕೇಂದ್ರದತ್ತ ಕೈ ತೋರಿಸಿದ್ದಾರೆ. ಈ ಎಲ್ಲದರ ನಡುವೆ ಸಿಎಂ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ರಾಮನಾಥ್ ಕೋವಿಂದ್ ವಿಧಾನಸಭೆ ವಜ್ರಮಹೋತ್ಸವದಲ್ಲಿ ಮಾಡಿದ ಭಾಷಣ ಯಾರು ಬರೆದು ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತಮ್ಮ ಫೇಸ್ ಬುಕ್ ಪುಟದಲ್ಲಿ ವಿವರವಾಗಿ ಬರೆದಿದ್ದಾರೆ. ಜೊತೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಬಿಜೆಪಿಯ ಪ್ರಕಾಶ್ ಕಾಲೆಳೆದಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಕಚೇರಿಯಲ್ಲಿ ಸುತ್ತಾಡುತ್ತಿರುವ ವಿಗ್ ಗಿರಾಕಿಯೊಬ್ಬರು ನನ್ನ ರಾಜೀನಾಮೆ ಕೇಳಿ ಪ್ರೆಸ್ ನೋಟ್ ಸಿದ್ಧಪಡಿಸುತ್ತಿದ್ದ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

    ದಿನೇಶ್ ಅಮೀನ್ ಮಟ್ಟು ಫೇಸ್ ಬುಕ್ ಪುಟದಲ್ಲಿ ಬರೆದಿದ್ದೇನು?
    ರಾಷ್ಟ್ರಪತಿಗಳ ಭಾಷಣದ ಬಗ್ಗೆ ಚರ್ಚಿಸುತ್ತಾ ಮಧ್ಯಾಹ್ನ ಹೋಟೆಲ್ ಗೆ ಊಟಕ್ಕೆ ಹೋಗಿದ್ದಾಗ ದಲಿತ ಸಮುದಾಯಕ್ಕೆ ಸೇರಿರುವ ಬಿಜೆಪಿಯ ಶಾಸಕರೊಬ್ಬರು ಭೇಟಿಯಾದರು. (ನನಗೆ ಆತ್ಮೀಯರಾಗಿರುವ ಕಾರಣ ಹೆಸರು ಹೇಳುವುದಿಲ್ಲ). ನನ್ನನ್ನು ನೋಡಿದವರೇ ‘ಏನ್ಸಾಮಿ, ನೀವು ಹೀಗೆಲ್ಲ ಬರೆದುಕೊಡೋದಾ? ಎಂದು ನಗುತ್ತಲೇ ಆಕ್ಷೇಪದ ದನಿಯಲ್ಲಿ ಪ್ರಶ್ನಿಸಿದರು. ಅವರು ತಮಾಷೆ ಮಾಡ್ತಾ ಇದ್ದಾರೆ ಎಂದು ಸುಮ್ಮನೆ ನಕ್ಕೆ. ಆದರೆ ಅದು ತಮಾಷೆಯಾಗಿರಲಿಲ್ಲ. ಅವರೇ ಮಾತು ಮುಂದುವರಿಸಿ ನಮ್ಮ ಪಕ್ಷದ ಕಚೇರಿಯಲ್ಲಿ ಇದೇ ವಿಷಯ ಚರ್ಚೆಯಾಗುತ್ತಿದೆ’ ಎಂದರು. ರಾಷ್ಟ್ರಪತಿ ಭಾಷಣ ಹೇಗೆ ತಯಾರಿಸುತ್ತಾರೆ ಎಂದು ವಿವರವಾಗಿ ತಿಳಿಸಿದರೂ ಅವರಿಗಾಗಲಿ, ಅವರ ಜತೆಯಲ್ಲಿರುವವರಿಗಾಲಿ ಪೂರ್ಣವಾಗಿ ಮನವರಿಕೆಯಾಗಲಿಲ್ಲ.

    ಇದನ್ನೇ ನಿಜವೆಂದು ನಂಬಿ ಸ್ನೇಹಿತರಾದ ಶಾಸಕ ಸುರೇಶ್ ಕುಮಾರ್ ಮತ್ತು ಪಕ್ಷದ ಅರೆವಕ್ತಾರ ‘ಪರನಿಂದಕಾಶ’ ಅನುಕ್ರಮವಾಗಿ 14 ಮತ್ತು 19ನೇ ಬಾರಿ ರಾಜೀನಾಮೆ ಕೇಳಿದರೆ ನನ್ನ ಗತಿ ಏನು ಎಂದು ಸಂಜೆ ವರೆಗೆ ಬಹಳ ಚಿಂತೆಯಲ್ಲಿದ್ದೆ. ಇದರ ಜತೆಗೆ ಕಾಂಗ್ರೆಸ್ ಕಚೇರಿಯಲ್ಲಿ ಸುತ್ತಾಡುತ್ತಿರುವ ಒಬ್ಬ ವಿಗ್ ಗಿರಾಕಿ ನನ್ನ ರಾಜೀನಾಮೆ ಕೇಳಿ ಪ್ರೆಸ್ ನೋಟ್ ರೆಡಿ ಮಾಡ್ತಾ ಇದ್ದಾನೆ ಎಂಬ ಸುದ್ದಿ ಇನ್ನಷ್ಟು ಭಯಭೀತನನ್ನಾಗಿ ಮಾಡಿತ್ತು. ದೇವರ ದಯೆಯಿಂದ ಏನೂ ಆಗಲಿಲ್ಲ.

    ಗೊತ್ತಿಲ್ಲದವರಿಗಾಗಿ ಮಾಹಿತಿ: ರಾಷ್ಟ್ರಪತಿಗಳ ಭಾಷಣ ತಯಾರಿಸಲು ಅವರೇ ನೇಮಿಸಿಕೊಂಡ ಪತ್ರಿಕಾ ಕಾರ್ಯದರ್ಶಿಗಳಿರುತ್ತಾರೆ. ಸಾಮಾನ್ಯವಾಗಿ ಆ ಹುದ್ದೆಗೆ ಐಎಎಸ್, ಐಎಫ್ ಎಸ್ ಅಧಿಕಾರಿಗಳನ್ನು ನೇಮಿಸುತ್ತಾರೆ. ಇದೇ ಮೊದಲಬಾರಿಗೆ ಕೋವಿಂದ್ ಅವರು ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಬಿಜೆಪಿ ಬೆಂಬಲಿಗರಾದ ಅಶೋಕ್ ಮಲ್ಲಿಕ್ ಅವರನ್ನು ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣ ತಯಾರಿಯ ಹೊಣೆ ಅವರದ್ದು. ರಾಷ್ಟ್ರಪತಿಗಳು ಓದಿದ್ದ ಭಾಷಣದ ಬಗ್ಗೆ ಬಿಜೆಪಿ ನಾಯಕರಿಗೆ ಆಕ್ಷೇಪ ಇದ್ದರೆ, ಸುಮ್ಮನೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳು ಕೊನೆಗೆ ನನ್ನಂತಹ ಬಡಪಾಯಿ ಮೇಲೆ ಆರೋಪ ಮಾಡುವ ಬದಲಿಗೆ ಅವರ ಪತ್ರಿಕಾ ಕಾರ್ಯದರ್ಶಿಯ ರಾಜೀನಾಮೆ ಕೇಳಲಿ.

    ಇದರ ಜೊತೆಗೆ ಅಶೋಕ್ ಮಲ್ಲಿಕ್ ಯಾರು ಎಂದು ತಿಳಿಯಲು ಅವರ ಫೋಟೋವನ್ನು ಕೂಡಾ ಇಂದು ಸಂಜೆಯ ವೇಳೆಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

  • ವಿಧಾನಸೌಧದ ವಜ್ರ ಮಹೋತ್ಸವ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಅಪರೂಪದ ಕ್ಷಣಗಳಿವು..!

    ವಿಧಾನಸೌಧದ ವಜ್ರ ಮಹೋತ್ಸವ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಅಪರೂಪದ ಕ್ಷಣಗಳಿವು..!

    ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವದ ಪ್ರಯುಕ್ತ ವಿಧಾನಸಭೆ ಸಭಾಂಗಣದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಕಾರ್ಯಕ್ರಮ ಮುಗಿದ ನಂತರ ವಿಧಾನಸೌಧದ ಮುಂಭಾಗ ಫೋಟೋ ಸೆಷನ್ ನಡೆಯಿತು. ವಜ್ರಮಹೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ವಿಧಾನಸೌಧದ ಮುಂಭಾಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಫೋಟೋ ಸೆಷನ್ ನಲ್ಲಿ ಕೂರಲು ವ್ಯವಸ್ಥೆ ಸಿಗಲಿಲ್ಲ ಎಂಬ ಎಚ್.ಡಿ.ಕೆ. ಆರೋಪ, ಟಿಪ್ಪುವನ್ನು ಹಾಡಿ ಹೊಗಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಕಾಂಗ್ರೆಸ್ ಶಾಸಕರು ಹಾಗೂ ನಾಯಕರ ಸಂಭ್ರಮಕ್ಕೆ ಕಾರಣವಾದರೆ, ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿ ಮುಖಂಡರು ಕೋವಿಂದ್ ಭಾಷಣದಿಂದಾಗಿ ತೀವ್ರ ಮುಜುಗರಕ್ಕೀಡಾಗಬೇಕಾಯಿತು ಎನ್ನುವುದಂತೂ ಸುಳ್ಳಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಬಿ.ಎಸ್.ಯಡಿಯೂರಪ್ಪ ರಾಷ್ಟ್ರಪತಿಗಳ ಭಾಷಣದಲ್ಲಿ ಟಿಪ್ಪುವಿನ ಉಲ್ಲೇಖಕ್ಕೆ ನೋ ಕಮೆಂಟ್ ಎಂದರು. ಬಿಜೆಪಿಯ ಇತರೆ ನಾಯಕರು ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿದರು. ಆದರೆ ಸಂಸದ ಪ್ರತಾಪ್ ಸಿಂಹ ಮಾತ್ರ ಸಂಜೆ ರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆಗೆ ಟ್ವೀಟ್ ಟ್ಯಾಗ್ ಮಾಡಿ ಟಿಪ್ಪು ಏನು ಮಾಡಿದ್ದ ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    ಈ ಎಲ್ಲದರ ನಡುವೆ ರಾಜ್ಯದ ಇತಿಹಾಸದಲ್ಲಿ ಅವಿಸ್ಮರಣೀಯ ದಿನ ಎನ್ನಲಾದ ವಿಧಾನಸೌಧದ ವಜ್ರಮಹೋತ್ಸವ ಹೇಗಿತ್ತು ಎಂಬುದನ್ನು ಚಿತ್ರಗಳ ಮೂಲಕ ತೋರಿಸುವ ಪ್ರಯತ್ನ ನಮ್ಮದು. ಈ ವಜ್ರಮಹೋತ್ಸವ ನೆನಪು ಅಜರಾಮರವಾಗಿರಲಿ ಎಂದು ಕಾರ್ಯಕ್ರಮದ ಪ್ರಮುಖ ಫೋಟೋಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

    President Ram Nath Kovind addressed the joint session during Diamond Jubilee Celebrations of Vidhana Soudha in Bengaluru on Wednesday. /KPN
    President Ram Nath Kovind addressed the joint session during Diamond Jubilee Celebrations of Vidhana Soudha in Bengaluru on Wednesday.

    President Ram Nath Kovind at a photo session during Diamond Jubilee Celebrations of Vidhana Soudha in Bengaluru on Wednesday.

     

     

  • ರಾಷ್ಟ್ರಪತಿಗಳ ಭಾಷಣದಲ್ಲಿ ಟಿಪ್ಪುಗೆ ಬಹುಪರಾಖ್ – ಬಿಜೆಪಿಗೆ ಮುಜುಗರ, ಕೈ ಸಂಭ್ರಮ!

    ರಾಷ್ಟ್ರಪತಿಗಳ ಭಾಷಣದಲ್ಲಿ ಟಿಪ್ಪುಗೆ ಬಹುಪರಾಖ್ – ಬಿಜೆಪಿಗೆ ಮುಜುಗರ, ಕೈ ಸಂಭ್ರಮ!

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದ ಭಾಷಣ ಕಾಂಗ್ರೆಸ್ ಸಂಭ್ರಮಕ್ಕೆ ಕಾರಣವಾದರೆ, ಬಿಜೆಪಿಯವರ ತೀವ್ರ ಮುಜುಗರಕ್ಕೆ ಕಾರಣವಾಯ್ತು. ಮೊದಲ ಬಾರಿಗೆ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಬ್ರಿಟಿಷರ ವಿರುದ್ಧ ಹೋರಾಡಿ ಟಿಪ್ಪು ಸುಲ್ತಾನ್ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ಭಾಷಣದಲ್ಲಿ ಉಲ್ಲೇಖಿಸಿದರು. ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿದ ರಾಷ್ಟ್ರಪತಿಗಳು, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ಮಾತ್ರ ಸುಮ್ಮನೆ ಕುಳಿತಿದ್ದರು.

    ಇವತ್ತು ಅವಿಸ್ಮರಣೀಯ ದಿನ. ಭಾರತ ಪ್ರಜಾಪ್ರಭುತ್ವದಲ್ಲಿ ಮರೆಯಲಾಗದ ದಿನ. ವಜ್ರಮಹೋತ್ಸವದಲ್ಲಿ ಭಾಗವಹಿಸಿರುವ ನನಗೂ ಅವಿಸ್ಮರಣೀಯ ದಿನ. ಪಾರ್ಲಿಮೆಂಟ್ರಿ ಡೆಮಾಕ್ರಸಿ ಇತಿಹಾಸದಲ್ಲಿ ಇದೊಂದು ಮಹತ್ವದ ದಿನ. 14ನೇ ರಾಷ್ಟ್ರಪತಿಯಾಗಿ ಇಂಥಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕರ್ನಾಟಕಕ್ಕೆ ಇದು ನನ್ನ ಮೊದಲ ಭೇಟಿ ಎಂದರು.

    ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಉಲ್ಲೇಖಿಸಿದರು. ನಿಜಲಿಂಗಪ್ಪ, ದೇವರಾಜ ಅರಸ್, ರಾಮಕೃಷ್ಣ ಹೆಗಡೆ ಹೆಸರು ಉಲ್ಲೇಖಿಸಿದರು. ಆಗ ವೈಎಸ್‍ವಿ ದತ್ತಾ, ದೇವೇಗೌಡರು ಎಂದರು. ಇದಕ್ಕೆ ಕೋವಿಂದ್, ಹೌದು ದೇವೇಗೌಡರು ನನ್ನ ಸ್ನೇಹಿತ, ನಾನು ಹೇಳಲು ಬಯಸುತ್ತಿದ್ದೆ ಎಂದರು. ಆಗ ಕೆಲವರು ಬಂಗಾರಪ್ಪ ಎಂದರು. ಇದಕ್ಕೆ ರಾಷ್ಟ್ರಪತಿಗಳು, ಫ್ರೆಂಡ್ಸ್ ನಾನು ಕೆಲವರ ಹೆಸರನ್ನು ಮಾತ್ರ ಹೇಳುತ್ತಿದ್ದೇನೆ ಎಂದರು. 15 ನಿಮಿಷಗಳಲ್ಲಿ ರಾಷ್ಟ್ರಪತಿ ಭಾಷಣ ಅಂತ್ಯಗೊಳಿಸಿದರು.

  • ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವಕ್ಕೆ ಭರ್ಜರಿಯಾಗಿಯೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಜ್ರಮಹೋತ್ಸವಕ್ಕೆ ಸಾಕ್ಷ್ಯಚಿತ್ರಗಳ ಸಿದ್ಧತೆಯನ್ನು ಕೂಡ ಪ್ರಾರಂಭಿಸಲಾಗಿದೆ.

    ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ವಿಧಾನಸೌಧದ ವಜ್ರಮಹೋತ್ಸವ ನಡೆಯಲಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ.

    ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದಾರೆ. ಅದಕ್ಕಾಗಿ 1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.

    ಈಗ ನಡೆಯುವ ಅರ್ಧ ಗಂಟೆಯ ಕಾರ್ಯಕ್ರಮ ಬರೀ ಸ್ಯಾಂಪಲ್ ಎಂದು ಹೇಳಲಾಗಿದೆ.