Tag: ವಿಧಾನಸಭಾ ಚುನಾವಣಾ ಫಲಿತಾಂಶ

  • ಹರ್ಯಾಣದಲ್ಲಿ ಆಪ್ ಫ್ಲಾಪ್- ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಕೇಜ್ರಿವಾಲ್‍ಗೆ ಮುಖಭಂಗ

    ಹರ್ಯಾಣದಲ್ಲಿ ಆಪ್ ಫ್ಲಾಪ್- ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಕೇಜ್ರಿವಾಲ್‍ಗೆ ಮುಖಭಂಗ

    ಚಂಡೀಗಢ: ದೆಹಲಿ ಬಳಿಕ ಹರ್ಯಾಣದಲ್ಲಿ ಆಪ್ ಪಕ್ಷದ ಅಸ್ತಿತ್ವ ಸಾಧಿಸಲು ಮುಂದಾಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಭಾರೀ ಮುಖಭಂಗವಾಗಿದೆ.

    ಬಹುಮತದಿಂದ ದೆಹಲಿಯಲ್ಲಿ ಸರ್ಕಾರ ರಚಿಸಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಬೇರೆ ರಾಜ್ಯಗಳಲ್ಲಿ ಪಕ್ಷದ ಅಸ್ತಿತ್ವ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ದೆಹಲಿಯ ನೆರೆಯ ರಾಜ್ಯವಾದ ಹರ್ಯಾಣದ ಚುನಾವಣೆ ಮೇಲೆ ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದರು. ಆದರೆ ಆಪ್ ಅಭ್ಯರ್ಥಿಗಳು ಬಹುತೇಕ ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿದ್ದಾರೆ.

    ಹರ್ಯಾಣದ 90 ಕ್ಷೇತ್ರಗಳಲ್ಲಿ 46ರಲ್ಲಿ ಆಪ್ ಸ್ಪರ್ಧೆ ಮಾಡಿತ್ತು. 46 ಕ್ಷೇತ್ರಗಳಲ್ಲಿ ಆಪ್ ಶೇ.0.48ರಷ್ಟು ಮಾತ್ರ ಮತಗಳನ್ನು ಪಡೆದುಕೊಂಡಿದೆ. ನೋಟಾಗೆ ಶೇ. 0.52 ಮತಗಳು ಬಿದ್ದಿವೆ.

    ಕಾಂಗ್ರೆಸ್, ಬಿಜೆಪಿ ಮತ್ತು ಜನ್‍ನಾಯಕ್ ಜನತಾ ಪಾರ್ಟಿಗಳ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಸ್ಪರ್ಧಿಸಿದ್ದ ಆಪ್ ಅಭ್ಯರ್ಥಿಗಳು ಸೋಲು ಕಂಡಿದ್ದರು. ದೆಹಲಿಯಲ್ಲಿ ಘೋಷಣೆ ಮಾಡಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಆಪ್ ಹರ್ಯಾಣದಲ್ಲಿ ಮತ ಕೇಳಿತ್ತು. ಅರವಿಂದ್ ಕೇಜ್ರಿವಾಲ್ ಸಹ ಸೇರಿದಂತೆ ಹೆಚ್ಚು ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರಲಿಲ್ಲ. ಕೇವಲ ಸ್ಥಳೀಯ ನಾಯಕರು ಮಾತ್ರ ಚುನಾವಣಾ ಪ್ರಚಾರ ನಡೆಸಿದ್ದರು.

  • ಕಾಂಗ್ರೆಸ್ ಮುಕ್ತ ಭಾರತ ಮಾಡುವಲ್ಲಿ ಬಿಜೆಪಿ ವಿಫಲ – ಆತ್ಮವಿಶ್ವಾಸದಲ್ಲಿ ಸೋಲು ಕಂಡ ಕಮಲ

    ಕಾಂಗ್ರೆಸ್ ಮುಕ್ತ ಭಾರತ ಮಾಡುವಲ್ಲಿ ಬಿಜೆಪಿ ವಿಫಲ – ಆತ್ಮವಿಶ್ವಾಸದಲ್ಲಿ ಸೋಲು ಕಂಡ ಕಮಲ

    ಬೆಂಗಳೂರು: ಬಹಳ ನಿರೀಕ್ಷೆ ಹಾಗೂ ಹಲವಾರು ಕಾರಣಗಳಿಗೆ ಕುತೂಹಲ ಮೂಡಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮೋದಿ ಸರ್ಕಾರಕ್ಕೆ ಮತದಾರ ಸ್ಪಷ್ಟ ಸಂದೇಶ ರವಾನಿಸಿದ್ದಾನೆ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕಾಂಗ್ರೆಸ್‍ಗೆ ಸಿಹಿ ನೀಡಿದ್ದರೆ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ ತಾನು ಅಧಿಕಾರದಲ್ಲಿದ್ದ ಪ್ರಮುಖ ಮೂರು ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‍ಗಡ ಹಾಗೂ ಮಧ್ಯಪ್ರದೇಶವನ್ನು ಕೈ ಚೆಲ್ಲಿ ಸೋಲನುಭವಿಸಿದೆ.

    ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಮುಖ್ಯ ಕಾರಣ ಇಲ್ಲಿನ ಬಂಡಾಯ ಎಂದೇ ಹೇಳಲಾಗುತ್ತಿದೆ. ಯುವ ನಾಯಕ ಸಚಿನ್ ಪೈಲಟ್ ಮೇಲಿನ ಮತದಾರರ ಒಲವು ರಾಜಸ್ಥಾನದಲ್ಲಿ ಕಾಂಗ್ರೆಸ್‍ಗೆ ವರ್ಕೌಟ್ ಆಗಿದೆ. ಜೊತೆಗೆ ಈ ರಾಜ್ಯಗಳಲ್ಲಿ ಬಿಎಸ್ ಪಿ ಸಹ ಪ್ರಬಲವಾಗಿದ್ದು ಬಿಜೆಪಿಗೆ ಹೊಡೆತ ನೀಡಿದೆ. ಇನ್ನು ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆ ಹೊಂದಿರದಿದ್ದರೂ ಒಂದಷ್ಟು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಇರಾದೆ ಹೊಂದಿತ್ತು. ಆದರೆ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಪ್ರಬಲ ಪೈಪೋಟಿ ಬಿಜೆಪಿಯನ್ನು ಶೋಚನೀಯ ಸೋಲಿಗೆ ತಳ್ಳಿದೆ.

    ಬಿಜೆಪಿ ಅತಿಯಾದ ಆತ್ಮವಿಶ್ವಾಸವೂ ಈ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೇರೆ ರಾಜ್ಯಗಳ ಮತದಾರರನ್ನು ಬಿಜೆಪಿಯತ್ತ ಸೆಳೆಯುವುದು ಫಲ ಕೊಟ್ಟಿಲ್ಲ.

    ಬಿಜೆಪಿ ಸೋಲಿಗೆ ಕಾರಣ..?
    * ರಫೇಲ್ ಡೀಲ್‍ನ ಕಾಂಗ್ರೆಸ್ ಆರೋಪಕ್ಕೆ ಸರಿಯಾದ ಉತ್ತರ ಕೊಡದಿರುವುದು
    * ರಾಹುಲ್ ಆಕ್ರಮಣಕಾರಿ ಪ್ರಚಾರ ಶೈಲಿ ಎದುರಿಸಲು ಮೋದಿ ವಿಫಲ
    * ಕಾಂಗ್ರೆಸ್‍ನ ಮೃದು ಹಿಂದುತ್ವಕ್ಕೆ ಪೆಟ್ಟು ಕೊಡಲು ಹೋಗಿ ಕೈ ಸುಟ್ಟುಕೊಂಡ್ರಾ..?
    * ನೋಟ್ ಬ್ಯಾನ್ ವೈಫಲ್ಯ, ನಿರಂತರ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ
    * ಸಿಬಿಐ-ಆರ್‍ಬಿಐ ವಿವಾದ, ರೂಪಾಯಿ ಮೌಲ್ಯದಲ್ಲಾದ ನಿರಂತರ ಇಳಿಕೆ
    * ರಾಹುಲ್ ಗಾಂಧಿ ಅವರನ್ನ ನಿರ್ಲಕ್ಷ್ಯ ಮಾಡಿದ್ದು

    ರಫೇಲ್ ಡೀಲ್‍ನ ಕಾಂಗ್ರೆಸ್ ಆರೋಪಕ್ಕೆ ಸರಿಯಾದ ಉತ್ತರ ಕೊಡದಿರುವುದು. ರಾಹುಲ್ ಗಾಂಧಿ ಆಕ್ರಮಣಾಕಾರಿ ಪ್ರಚಾರ ಶೈಲಿಯನ್ನ ಎದುರಿಸಲು ಮೋದಿ ವಿಫಲರಾದ್ರಾ ಎನ್ನುವ ಚರ್ಚೆಗಳು ಸೃಷ್ಟಿಯಾಗಿವೆ. ಕಾಂಗ್ರೆಸ್‍ನ ಮೃದು ಹಿಂದುತ್ವಕ್ಕೆ ಪೆಟ್ಟು ಕೊಡಲು ಹೋಗಿ ಈ ರೀತಿ ಆಯ್ತಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿವೆ. ಅತಿಯಾದ ಆತ್ಮವಿಶ್ವಾಸ, ನೋಟ್‍ಬ್ಯಾನ್ ವೈಫಲ್ಯ, ನಿರಂತರ ಏರಿಕೆಯಾದ ಪೆಟ್ರೋಲ್ ಡೀಸೆಲ್ ದರ, ಸಿಬಿಐ – ಆರ್ ಬಿಐ ವಿವಾದ, ರೂಪಾಯಿ ಮೌಲ್ಯದಲ್ಲಿ ಆದ ನಿರಂತರ ಇಳಿಕೆ ಇವೆಲ್ಲ ಕೇಂದ್ರ ಸರ್ಕಾರಕ್ಕೆ ಹೊಡೆತ ನೀಡಿರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರನ್ನ ಅಂಡರ್ ಎಸ್ಟಿಮೇಟ್ ಮಾಡಿದ್ದು, ಅವರ ಸವಾಲುಗಳಿಗೆ ಸರಿಯಾದ ಪ್ರತಿ ಸವಾಲು ಕೊಡದೇ ಇದ್ದದ್ದು, ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಬಿಜೆಪಿಗೆ ಮುಳುವಾದವು ಎಂಬ ಮಾತುಗಳು ಕೇಳಿ ಬರುತ್ತಿವೆ.

    ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಸಮಿಫೈನಲ್ ಎಂತಲೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ದೊಡ್ಡ ಆಘಾತ ನೀಡಿದೆ. ಯಾರೊಬ್ಬರನ್ನ ಕಡೆಗಣಿಸಬೇಕಾದರೆ ಯೋಚಿಸಬೇಕಾದ ಅನಿವಾರ್ಯತೆಯನ್ನ ಪಂಚ ರಾಜ್ಯಗಳ ಚುನಾವಣೆ ಕಲಿಸಿದೆ. ದೇಶಾದ್ಯಂತ ಹೆಚ್ಚುತ್ತಿರುವ ಜನರ ಅಸಹನೆಯನ್ನ ಮೋದಿ ಪರಿಗಣಿಸಬೇಕಿದೆ. ಚಾಣಕ್ಯನ ನೀತಿ ಕೈಕೊಡುತ್ತಿರುವುದು ಮೋದಿ ಅವರನ್ನ ಚಿಂತೆಗೆ ಹಚ್ಚಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುತೇಕ ಖಚಿತ

    ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಹುತೇಕ ಖಚಿತ

    – ಸ್ವಂತ ಬಲದ ರಚನೆಗೆ ಬೇಕಿದೆ 1 ಕ್ಷೇತ್ರ
    – ಬಿಎಸ್‍ಪಿ ಬೆಂಬಲ ಸಾಧ್ಯತೆ

    ಭೋಪಾಲ್: ಮಧ್ಯಪ್ರದೇಶದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.

    ಕಳೆದ 23 ಗಂಟೆಗಳಿಂದ ನಡೆಯುತ್ತಿರುವ ಹಾವು-ಏಣಿ ಆಟದಲ್ಲಿ ಕಾಂಗ್ರೆಸ್ 115 ಸ್ಥಾನಗಳನ್ನು ಪಡೆದಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು 1 ಸ್ಥಾನದ ಕೊರತೆ ಇದೆ. ಬಿಜೆಪಿ 108 ಸ್ಥಾನ ಗಳಿಸಿ ಕಾಂಗ್ರೆಸ್ ಬಿಗ್ ಫೈಟ್ ನೀಡಿದೆ. ಬಿಎಸ್‍ಪಿ ಬೆಂಬಲ ನೀಡಿದರೆ ಕಾಂಗ್ರೆಸ್ ಅಧಿಕಾರ ರಚನೆ ಮಾಡುವದರಲ್ಲಿ ಸಂಶಯವಿಲ್ಲ. ಮಂಗಳವಾರ ರಾತ್ರಿಯೇ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಅವಕಾಶ ಕೇಳಿತ್ತು. ಆದ್ರೆ ಮತ ಎಣಿಕೆ ಮುಗಿಯೋವರೆಗೂ ಯಾರಿಗೂ ಅವಕಾಶವಿಲ್ಲ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ರು.

    ಒಟ್ಟಿನಲ್ಲಿ ಕ್ಷಣಕ್ಷಣಕ್ಕೂ ಬದಲಾದ ಫಲಿತಾಂಶ, ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಪೈಪೋಟಿ, ನಿರೀಕ್ಷಿಸದ ಅಚ್ಚರಿ ಬೆಳವಣಿಗೆಗೆ ಮಧ್ಯಪ್ರದೇಶ ಮತ ಎಣಿಕೆ ಸಾಕ್ಷಿಯಾಗಿದೆ. ಸದ್ಯ ಆಪರೇಷನ್ ಕಮಲ ಸದ್ದು ಕೇಳಿಬಂದಿದ್ದು, ಕೇಂದ್ರ ಸಚಿವ ತೋಮರ್ ಭೋಪಾಲ್‍ನಲ್ಲಿ ಬಿಡಾರ ಹೂಡಿದ್ದಾರೆ. ಸರ್ಕಾರ ರಚನೆಗೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಎಲ್ಲ 230 ಕ್ಷೇತ್ರಗಳಲ್ಲಿ ಇವಿಎಂನಲ್ಲಿ ಬಿದ್ದ ಮತವನ್ನು ಖಾತರಿಗೊಳಿಸಲು ಬಳಸಲಾಗಿದ್ದ ವಿವಿಪ್ಯಾಟ್(ವೋಟರ್ ವೆರಿಫೈಡ್ ವೋಟರ್ ಟ್ರಯಲ್) ಬಳಕೆ ಮಾಡಲಾಗಿದೆ. ಹೀಗಾಗಿ ಪ್ರತಿ ಸುತ್ತಿನ ಎಣಿಕೆ ಮಾಡಿದ ಬಳಿಕ ವಿವಿಪ್ಯಾಟ್ ಪರಿಶೀಲನೆ ಮಾಡಲಾಗುತ್ತದೆ. ಪ್ರತಿ ಸುತ್ತಿನ ಎಣಿಕೆಯಾದ ಬಳಿಕ ಏಜೆಂಟರ ಸಹಿಯನ್ನು ಪಡೆದು ಮುಂದಿನ ಸುತ್ತಿನ ಎಣಿಕೆ ಮಾಡಲಾಗುತ್ತದೆ. ಈ ಸಮಯದಲ್ಲಿ ಆಕ್ಷೇಪಣೆಗಳು ಬಂದರೆ ಮತ್ತೊಮ್ಮೆ ಮತ ಎಣಿಕೆ ಮಾಡಲಾಗುತ್ತದೆ. ಹೀಗಾಗಿ ಫಲಿತಾಂಶ ಮಧ್ಯರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

    ಮತ ಎಣಿಕೆ ವಿಳಂಬಕ್ಕೆ ಕಾರಣ:
    ಆಯಾ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರತಿ ಅಭ್ಯರ್ಥಿಯಿಂದ ಮತಗಳ ಪ್ರಮಾಣವನ್ನು ಲಿಖಿತವಾಗಿ ದೃಢೀಕರಿಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದ್ದರಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಯಿತು. ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪ್ರತಿ ಸುತ್ತಿನಲ್ಲಿ ತಾವು ಪಡೆದ ಮತಗಳನ್ನು ದೃಢೀಕರಿಸುವ ಸಂಬಂಧ ಅರ್ಜಿ ನಮೂನೆ ಭರ್ತಿ ಮಾಡಿ, ಸಹಿ ಮಾಡಿ ಕೊಡಬೇಕಿತ್ತು. ಈ ಪ್ರಕ್ರಿಯೆಯಿಂದ ಫಲಿತಾಂಶ ವಿಳಂಭವಾಯ್ತು. ಅಲ್ಲದೆ, ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆ ಪೈಕಿ ಶೇ.15 ರಷ್ಟು ಮತಗಟ್ಟೆಗಳಲ್ಲಿ ಬಳಸಿರುವ ಇವಿಎಂ ಯಂತ್ರಗಳೊಂದಿಗೆ ಅಳವಡಿಸಿದ್ದ ವಿವಿ ಪ್ಯಾಟ್‍ಗಳ ಮತಗಳನ್ನು ತಾಳೆ ಹಾಕುವುದನ್ನು ಕಡ್ಡಾಯಗೊಳಿಸಿದ್ದು ಮತ ಎಣಿಕೆಯ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv