Tag: ವಿಧಾನಸಭಾ ಅಧಿವೇಶನ

  • ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

    ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

    – ಸದನದಲ್ಲಿ ಬ್ಯಾಗ್ ಪ್ರದರ್ಶಿಸಿ ವಾಗ್ದಾಳಿ
    – ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷ ಕಿಡಿ

    ಬೆಂಗಳೂರು: ಕೋವಿಡ್ ಕಾಲದಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ನಿಕಟ ಪೂರ್ವ ಮುಖ್ಯಮಂತ್ರಿಗಳೂ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಮಾತ್ರಾ ಭ್ರಷ್ಟರಾಗಿ ಬದುಕುತ್ತಿದ್ದಾರೆ. ಕೇವಲ ಒಂದು ಬ್ಯಾಗ್ ವಿಚಾರದಲ್ಲಿ ಆರೂವರೆ ಕೋಟಿ ರೂಪಾಯಿ ನುಂಗಿದ್ದಾರೆ. ಎಂದು ಜೇಬಿನಲ್ಲಿ ಬ್ಯಾಗ್ ಇಟ್ಟುಕೊಂಡು ಬಂದಿದ್ದ ಜೆಡಿಎಸ್ ಶಾಸಕ ಸಾ.ರಾ ಮಹೇಶ್, ಸದನದಲ್ಲಿ ಬ್ಯಾಗ್ ಪ್ರದರ್ಶನ ಮಾಡಿ ರೋಹಿಣಿ ಸಿಂಧೂರಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    20 ವರ್ಷದಿಂದ 40 ವರ್ಷದೊಳಗಿನ ಮಹಿಳಾ ಅಧಿಕಾರಿಗಳು ಇದ್ದರೆ ನಮ್ಮವರೇ ನಮಗೆ ವಿಲನ್ ಆಗುತ್ತಾರೆ. ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ ಆಗಿದೆ ಎಂದು ಸಾ.ರಾ ಮಹೇಶ್ ಭಾವುಕರಾಗಿ ನುಡಿದರು. ಇದನ್ನೂ ಓದಿ: ರಾಯಚೂರಿನಲ್ಲಿ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ

    ವಿಧಾನಸಭಾ ಅಧಿವೇಶನದಲ್ಲಿ ಪಿಡಿ ಖಾತೆಗಳ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡುತ್ತಿದ್ದಂತೆ ಎದ್ದು ನಿಂತು ಸಾ.ರಾ ಮಹೇಶ್, ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಲು ಪ್ರಾರಂಭಿಸಿದರು. ಕೆಲ ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ಶೋಕಿ ಮಾಡಿಕೊಂಡು ಬದುಕುತ್ತಿದ್ದಾರೆ. ಬ್ಯಾಗ್ ಖರೀದಿಯಲ್ಲಿ 6.5 ಕೋಟಿ ರೂ. ಅಕ್ರಮ ನಡೆದಿದೆ. ಆ ಅಧಿಕಾರಿ ಮೈಸೂರಿನಲ್ಲಿ ಲೂಟಿ ಮಾಡಿದ್ದಾರೆ ಎಂದು ಹೆಸರು ಹೇಳದೇ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ ಮಹೇಶ್ ಕಿಡಿ ಕಾರಿದ್ದಾರೆ.

    ಕಲಾಪದಲ್ಲಿ ರೋಷಾವೇಶದಿಂದ ಮಾತನಾಡಿದ ಸಾ.ರಾ ಮಹೇಶ್, ಇಂಥ ಅಧಿಕಾರಿಗಳಿಂದ ನಮ್ಮ ರಕ್ಷಣೆಗೆ ಬನ್ನಿ. ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳುವ ತಾಕತ್ ಇದ್ಯಾ? ಐಎಎಸ್, ಐಪಿಎಸ್ ಮನೆಗಳ ಮೇಲೆ ಐಟಿ ರೇಡ್ ಆಗುತ್ತಾ? ಎಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಮಾತ್ರ ಐಟಿ ರೇಡ್ ಆಗುತ್ತದೆ ಎಂದು ಸದನದಲ್ಲಿ ಭಾವೋದ್ವೇಗದಿಂದ ಗದ್ಗದಿತರಾದರು. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ

    ನೆರವಿಗೆ ಧಾವಿಸಿದ ಎಚ್‍ಡಿಕೆ
    ಒಬ್ಬ ಸರ್ಕಾರಿ ಅಧಿಕಾರಿ ಶಾಸಕರ ಮೇಲೆ ಮಾಧ್ಯಮಗಳ ಎದುರು ಹೋಗಿದ್ದು ಯಾಕೆ? ಇವರಿಗೆ ಅಧಿಕಾರ ಯಾರು ಕೊಟ್ರು? ಅವರು ಐಎಎಸ್ ಇರಲಿ, ಬೇರೆ ಇರಲಿ ಎಂದು ಕುಮಾರಸ್ವಾಮಿ ಹೇಳಿದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿ, ನಾನೂ ಸಹ ಸಿಎಸ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ ರೂಲ್ಸ್ ನಲ್ಲಿ ಹೀಗೆ ಅಧಿಕಾರಿಗಳು ಹೋಗಿ ಮಾತಾಡೋದು ಸರಿಯಲ್ಲ. ಸಿಎಸ್ ಸೂಚನೆ ಕೊಟ್ಟಿರಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕಬ್ಬಿನ ಗದ್ದೆಗೆ ಬೆಂಕಿ- ನೂರಾರು ಟನ್ ಕಬ್ಬು ಬೆಂಕಿಗಾಹುತಿ

    ಈ ವಿಷಯದ ಬಗ್ಗೆ ಮಾತನಾಡಿದ ಆರ್.ಅಶೋಕ್, ಸಾ.ರಾ ಮಹೇಶ್ ಇದನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಸಿಎಸ್ ಜೊತೆ ನಾನೂ ಮಾತಾಡಿದ್ದೇನೆ. ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳೆದುರು ಹೋಗಿ ಮಾತಾಡುವಂತಿಲ್ಲ. ಕೆಲವು ಅಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಿಎಸ್‍ಗೆ ನಾವು ಸೂಚಿಸುತ್ತೇವೆ ಎಂದು ತಿಳಿಸಿದರು.

  • ಜೋರಾಗಿ ಮಾತನಾಡುತ್ತೀರಿ, ಮಾಸ್ಕ್ ಹಾಕಿಕೊಳ್ಳಿ- ಸದನದಲ್ಲಿ ಡಿಕೆಶಿಗೆ ಮಾಸ್ಕ್ ಹಾಕಿಸಿದ ಸ್ಪೀಕರ್

    ಜೋರಾಗಿ ಮಾತನಾಡುತ್ತೀರಿ, ಮಾಸ್ಕ್ ಹಾಕಿಕೊಳ್ಳಿ- ಸದನದಲ್ಲಿ ಡಿಕೆಶಿಗೆ ಮಾಸ್ಕ್ ಹಾಕಿಸಿದ ಸ್ಪೀಕರ್

    ಬೆಂಗಳೂರು: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನಡುವೆಯೇ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ಈ ವೇಳೆ ಸದನದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಭಾಷಣ ಮಾಡುತ್ತಿದ್ದ ಡಿ.ಕೆ.ಶಿವಕುಮಾರ್ ಅವರನ್ನು ತಡೆದ ಸ್ಪೀಕರ್ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರು.

    ಲಾಕ್‍ಡೌನ್ ವೇಳೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದರು. ಈ ಕುರಿತು ಭಾಷಣ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೆ ಈ ವೇಳೆ ಮಾಸ್ಕ್ ಧರಿಸದಿರುವುದನ್ನು ಗಮನಿಸಿದ ಸ್ಪೀಕರ್ ಅವರು, ಮಾರ್ಷಲ್‍ಗಳಿಂದ ಮಾಸ್ಕ್ ತರಿಸಿ ಡಿಕೆ ಶಿವಕುಮಾರ್ ಅವರಿಗೆ ನೀಡಿದರು. ಆ ಬಳಿಕ ನಂತರ ಮಾಸ್ಕ್ ಧರಿಸಿ ಡಿಕೆಶಿ ಮಾತು ಮುಂದುವರೆಸಿದರು.

    ಶಿವಕುಮಾರ್ ಅವರೇ ನೀವು ಜೋರಾಗಿ ಮಾತಾಡುತ್ತಿದ್ದೀರಿ. ಅದರಿಂದ ಬೇರೆಯವರಿಗೆ ಸಮಸ್ಯೆ ಆಗಬಾರದು ಎಂದು ಮಾಸ್ಕ್ ಧರಿಸಲು ಸೂಚಿಸಿದೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.

    ಫುಡ್‍ಕಿಟ್ ವಿತರಣೆಯಲ್ಲಿ ಕಿಟ್ ಮೇಲೆ ಬಿಜೆಪಿ ನಾಯಕರ ಫೋಟೋ ಹಾಕಿದ್ದಾರೆ. ಶಾಸಕ ಅರವಿಂದ ಲಿಂಬಾವಳಿ ಅವರು ಪ್ರಧಾನಿಗಳು, ಸಿಎಂ ಹಾಗೂ ತನ್ನ ಫೋಟೋ ಹಾಕಿ ಹಂಚಿದ್ದಾರೆ. ಬಡವರು, ಬಾಣಂತಿಯರಿಗೆ ಕೊಡುವ ಆಹಾರದ ಕಿಟ್ ಅದು. ಅಲ್ಲದೇ ಫುಡ್ ಕಿಟ್ ಅವ್ಯವಹಾರದ ಬಗ್ಗೆಯೂ ಸರ್ಕಾರಕ್ಕೆ ಗಮನಕ್ಕೆ ತಂದ್ದಿದ್ದೇವೆ. ಆದರೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಅದರ ಬಗ್ಗೆ ಒಂದು ತನಿಖೆ ಮಾಡಿಸಿಲ್ಲ ಎಂದು ಡಿಕೆಶಿ ಆರೋಪಿಸಿದರು.

    ರಾಜಕಾರಣ ಮಾಡೋಣ, ಚುನಾವಣೆ ಬರುತ್ತೆ ಹೋಗುತ್ತೆ. ಆದರೆ ಬಡವರ ವಿಷಯದಲ್ಲಿ ಫೋಟೋ ಹಾಕಿಕೊಂಡು ರಾಜಕಾರಣ ಮಾಡಿದರೆ, ಇದಕ್ಕಿಂದ ಅವಮಾನ ಸಂಗತಿ ಮತ್ತೊಂದು ಇಲ್ಲ. ಲಾಕ್‍ಡೌನ್ ನಿಂದ 6 ರಿಂದ 8 ತಿಂಗಳಿನಿಂದ ಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಕೇವಲ 4 ಗಂಟೆಯಲ್ಲಿ ಪ್ರಧಾನಿಗಳು ಲಾಕ್‍ಡೌನ್ ಮಾಡಿ, ಗಂಟೆ ಬಾರಿಸಲು, ದೀಪ ಹಚ್ಚಲು 4 ದಿನಗಳ ಸಮಯಕೊಟ್ಟರು. ಅದನ್ನು ಸಂತೋಷದಿಂದ ಸ್ವೀಕರ ಮಾಡಿದ್ದೇವು. ಆದರೆ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ನೆರವು ಸರ್ಕಾರ ಕೊಟ್ಟಿಲ್ಲ. ರೈತರಿಗೆ ಪರಿಹಾರ ಘೋಷಣೆ ಮಾಡಿದ್ರಿ, ಎಷ್ಟು ಜನರಿಗೆ ಎಷ್ಟು ರೂಪಾಯಿ ಪರಿಹಾರ ಕೊಟ್ಟಿದ್ದೀರಿ ಎಂಬ ಲೆಕ್ಕ ಕೊಡಿ ಎಂದು ಆಗ್ರಹಿಸಿದರು.

  • ಕೊರೊನಾ ಹೆಚ್ಚಾಗಿದ್ದು ನಿಮ್ಮಿಂದಲೇ- ಅಧಿವೇಶನ ಮೊಟಕುಗೊಳಿಸಲು ಸಿದ್ದು ವಿರೋಧ

    ಕೊರೊನಾ ಹೆಚ್ಚಾಗಿದ್ದು ನಿಮ್ಮಿಂದಲೇ- ಅಧಿವೇಶನ ಮೊಟಕುಗೊಳಿಸಲು ಸಿದ್ದು ವಿರೋಧ

    ಬೆಂಗಳೂರು: ಕೊರೊನಾ ಆತಂಕದ ನಡುವೆಯೂ ಇವತ್ತಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಸದನವನ್ನು ಮೊಟುಕುಗೊಳಿಸಲು ಸಿಎಂ ಬಿಎಸ್‍ವೈ ಚಿಂತನೆ ನಡೆಸಿದ್ದು, ಆದರೆ ಇದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಸಿಎಂ ಯಡಿಯೂರಪ್ಪ ಬೆಳಿಗ್ಗೆ ಸದನ ಮೊಟಕುಗೊಳಿಸುವ ಬಗ್ಗೆ ನನ್ನೊಂದಿಗೆ ಮಾತನಾಡಿದ್ದರು. ಕೊರೊನಾ ಜಾಸ್ತಿ ಆಗುತ್ತಿದೆ ನಿಜ, ಆದರೆ ಅದು ನಿಮ್ಮಿಂದ ಜಾಸ್ತಿ ಆಗುತ್ತಿದೆ ಎಂದು ಹೇಳಿದೆ. ನಾವು ಅಧಿವೇಶನ ಮೊಟಕುಗೊಳಿಸಲು ಒಪ್ಪುವುದಿಲ್ಲ. ಇನ್ನೂ ಮೂರು ವಾರಗಳ ಕಾಲ ಅಧಿವೇಶನ ವಿಸ್ತರಿಸಲು ನಮ್ಮ ಪ್ರಸ್ತಾಪವಿದೆ ಎಂದರು.

    ಸುಮಾರು 30 ರಿಂದ 40 ಬಿಲ್ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ತಂದಿದ್ದಾರೆ. ಸದನ ಮೊಟಕುಗೊಳಿಸುವುದಾದರೇ ಬಿಲ್ ಗಳನ್ನು ವಾಪಸ್ ಪಡೆಯಲಿ ನೋಡೋಣ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಹೇಳುತ್ತೇನೆ ಎಂದರು.

    ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಅಧಿವೇಶನ ಕಲಾಪವನ್ನು ಕಡಿತಗೊಳಿಸಬೇಕು ಎಂಬ ಅನಿಸಿಕೆ ಇದೆ. ಈ ಬಗ್ಗೆ ಕಲಾಪ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಇದಕ್ಕೆ ವಿಪಕ್ಷಗಳ ಸಹಕಾರ ಬೇಕಿದೆ ಎಂದರು.

  • ಸೆ.21 ರಿಂದ ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನೆ, ಅಹೋರಾತ್ರಿ ಧರಣಿ

    ಸೆ.21 ರಿಂದ ಬೆಂಗಳೂರಿನಲ್ಲಿ ರೈತರಿಂದ ಪ್ರತಿಭಟನೆ, ಅಹೋರಾತ್ರಿ ಧರಣಿ

    – ವಿಧಾನಸೌಧ ಮುತ್ತಿಗೆ ಹಾಕೋ ಎಚ್ಚರಿಕೆ

    ಶಿವಮೊಗ್ಗ: ರೈತರಿಗೆ ಮರಣ ಶಾಸನವಾಗಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ, ಜನವಿರೋಧಿ ಕಾಯ್ದೆಗಳ ವಿರೋಧಿಸಿ ಸೆ. 21 ರಿಂದ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಮಹಾತ್ಮಗಾಂಧಿ ಪ್ರತಿಮೆ ಎದುರು ಆಹೋರಾತ್ರಿ ಧರಣಿ ಮತ್ತು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಎಚ್ಚರಿಸಿದೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯನ್ನೇ ಕಸಿದುಕೊಂಡಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ ರತ್ನಗಂಬಳಿ ಹಾಕುವ ದೃಷ್ಟಿಯಿಂದ ಈ ಕಾಯ್ದೆ ಜಾರಿಗೆ ತರಲು ಹೊರಟಿದೆ. ಬಿಜೆಪಿ ಸರ್ಕಾರದ ಅನಾಚಾರವಿದು. ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಯಾಗಬಾರದು. ಮುಂಬರುವ ಅಧಿವೇಶನದಲ್ಲಿ ಭೂಸುಧಾರಣೆ ಕಾಯ್ದೆಯನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

    ಸೆ.21 ರಿಂದ ಅಧಿವೇಶನ ಆರಂಭವಾಗಲಿದ್ದು, ಪ್ರಾರಂಭದ ದಿನದಿಂದಲೇ ಅಧಿವೇಶನ ಮುಗಿಯುವವರೆಗೂ ಧರಣಿ ನಡೆಸುತ್ತೇವೆ. ಭೂಸುಧಾರಣಾ ಕಾಯ್ದೆಯ ಜೊತೆಗೆ ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಕೂಡ ಹಿಂಪಡೆಯಬೇಕು. ಈ ಧರಣಿಯಲ್ಲಿ ರಾಜ್ಯದ ಲಕ್ಷಾಂತರ ರೈತರು ಭಾಗವಹಿಸಲಿದ್ದು, ಶಿವಮೊಗ್ಗ ಜಿಲ್ಲೆಯಿಂದಲೂ ಕೂಡ ಸಾವಿರಕ್ಕೂ ಹೆಚ್ಚು ರೈತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಬಿಎಸ್‍ವೈ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವಾಗ ನನ್ನದು ರೈತ ಪರ ಸರ್ಕಾರ, ನಾನು ರೈತರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಈಗ ಮಾಡುತ್ತಿರುವುದಾದರೂ ಏನು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಶ್ರೀಮಂತರು ಭೂಮಿ ಖರೀದಿಸಿ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ಕಾಯ್ದೆಗಳನ್ನು ರೂಪಿಸುತ್ತಾ ಬಂದಿವೆ ಎಂದು ಆಪಾದಿಸಿದ್ದಾರೆ.

  • ಸೆ.21 ರಿಂದ ಅಧಿವೇಶನ ಆರಂಭ- ಸಾಮಾಜಿಕ ಅಂತರದಲ್ಲಿ ಆಸನದ ವ್ಯವಸ್ಥೆ: ಕಾಗೇರಿ

    ಸೆ.21 ರಿಂದ ಅಧಿವೇಶನ ಆರಂಭ- ಸಾಮಾಜಿಕ ಅಂತರದಲ್ಲಿ ಆಸನದ ವ್ಯವಸ್ಥೆ: ಕಾಗೇರಿ

    – ಪ್ರತಿ ಸೀಟಿನ ನಡುವೆ ಗ್ಲಾಸ್ ಶೀಟ್ ವ್ಯವಸ್ಥೆ

    ಬೆಂಗಳೂರು: ಸೆಪ್ಟೆಂಬರ್ 21 ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ ಕಾಗೇರಿ ಅವರು, ಸೆ. 21ರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಗುತ್ತೆ. ಕೊರೊನಾ ಹಿನ್ನೆಲೆ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳಿಗೂ ಕೊರೊನಾ ಸೋಂಕು ಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

    ಅಧಿವೇಶನ ನಡೆಸುವ ಕುರಿತು ಅನೇಕ ಮಾರ್ಗಸೂಚಿಗಳನ್ನು ಮಾಡಲಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಸಾಮಾಜಿಕ ಅಂತರದಲ್ಲಿ ಸೀಟುಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಸನಗಳಿಗೆ ಗ್ಲಾಸ್ ಶೀಟ್ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು, ಮಾಧ್ಯಮದವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಏನು ಕ್ರಮ ಆಗಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

    ಈ ಬಾರಿ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ. ಶಾಸಕರಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ನೀಡುವುದು ಸೇರಿದಂತೆ ಎಲ್ಲಾ ಕ್ರಮ ತೆಗೆದುಕೊಳ್ತಿದ್ದೇವೆ. ಅಲ್ಲದೇ ಎಲ್ಲರೂ ಮಾಸ್ಕ್, ಫೇಸ್ ಶೀಲ್ಡ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಎಲ್ಲರಿಗೂ ನಾವು ಮಾಸ್ಕ್, ಫೇಸ್ ಶೀಲ್ಡ್ ನೀಡುತ್ತೇವೆ. ಎಲ್ಲರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದರು.

    ಕಲಾಪ ಎಂದಿನಂತೆ ನಡೆಯಲಿದ್ದು, ಪ್ರಶ್ನೋತ್ತರ, ಶೂನ್ಯ ವೇಳೆ, ಗಮನ ಸೆಳೆಯುವ ಪ್ರಶ್ನೆ ಸೇರಿದಂತೆ ಎಲ್ಲಾ ವಿಧಾನಗಳು ಇರುತ್ತೆ. ಈ ಅಧಿವೇಶನದಲ್ಲಿ ಮಂಡಿಸಲು 10 ಹೊಸ ಬಿಲ್‍ಗಳು ನಮ್ಮ ಬಳಿ ಇದ್ದು, ಸುಗ್ರೀವಾಜ್ಞೆ ಹೊರಡಿಸಿರುವ 19 ಬಿಲ್‍ಗಳಿದೆ. ಅಲ್ಲದೇ ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಎರಡು ವಿಧೇಯಕ ಸೇರಿದಂತೆ ಒಟ್ಟು 31 ಬಿಲ್ ಈ ಅಧಿವೇಶನದಲ್ಲಿ ಅಂಗೀಕಾರ ಆಗಬೇಕು ಎಂದರು ವಿವರಿಸಿದರು.

    ಸಚಿವರು ಗನ್ ಮ್ಯಾನ್ ಹಾಗೂ ಅವರ ಪಿಎಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿಧಾನಸೌಧದ ಹೊಟೇಲ್ ಹೊರಗೆ ಶಿಫ್ಟ್ ಮಾಡಲಾಗಿದೆ. ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಸೇರಿದಂತೆ ಪತ್ರಕರ್ತರ ಗ್ಯಾಲರಿಗೆ ಸಿಮೀತ ಜನರಿಗೆ ಅವಕಾಶ ನೀಡಲು ವಾರ್ತಾ ಇಲಾಖೆ ಜೊತೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದರು.

    ಗ್ಯಾಲರಿಯಲ್ಲಿ ಮೀಡಿಯಾ ಶಿಫ್ಟ್ ಮಾಡೋ ಚಿಂತನೆ ಇದ್ದು, ಯಾವುದೇ ನಿರ್ಣಯ ಮಾಡಿದರೂ ಮಾಧ್ಯಮಗಳ ಸಹಕಾರ ಕೊಡಬೇಕು ಎಂದು ಕಾಗೇರಿ ಅವರು ಮನವಿ ಮಾಡಿದರು. ಅಲ್ಲದೇ ಎಲ್ಲರೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವವರು ಕೂಡ ಟೆಸ್ಟ್ ಮಾಡಿಸುವುದು ಕಡ್ಡಾಯ. ಇಂತಹ ಟೆಸ್ಟ್ ಗಳ ವರದಿ ಶೀಘ್ರವೇ ವರದಿ ಬರುವಂತೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದರು.

    ಸಚಿವರನ್ನು ಭೇಟಿ ಮಾಡುವ ನಿಯೋಗಗಳಿಗೆ ಅಧಿವೇಶನ ಜಾಗದಲ್ಲಿ ಈ ಬಾರಿ ಅವಕಾಶ ನೀಡಲಾಗುವುದಿಲ್ಲ. ಸಚಿವರನ್ನು ಶಾಸಕರ ಭವನದಲ್ಲಿ ನಿಯೋಗಗಳು ಭೇಟಿ ಮಾಡಬೇಕು ಅಥವಾ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಭೇಟಿ ಮಾಡಬೇಕು ಎಂದು ಸೂಚಿಸಿದರು.

    ವಿಧಾನಸೌಧದಲ್ಲಿ ಧರಣಿ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಕೊರೊನಾ ಇದೆ ಗೊತ್ತಿಲ್ಲ. ಹೇಗೆ ಪ್ರತಿಭಟನೆ ಮಾಡಬೇಕು ಅಂತಾ ಅವರೇ ನಿರ್ಧಾರ ಮಾಡಬೇಕು. ನಾವು ಹೀಗೆ ಮಾಡಿ ಎಂದು ಹೇಳಲು ಆಗೋದಿಲ್ಲ ಎಂದರು. ಅಲ್ಲದೇ 70 ವರ್ಷ ಮೇಲ್ಪಟ್ಟವರಿಗೆ ಅಧಿವೇಶನಕ್ಕೆ ಅವಕಾಶ ವಿಚಾರವಾಗಿ, ವಯಸ್ಸು ಹೆಚ್ಚಳ ಇರುವವರ ಪಟ್ಟಿ ಮಾಡಲಾಗಿದೆ. ಅವರಿಗೆ ವಿಶೇಷ ಕಾಳಜಿಯನ್ನು ಮಾಡುತ್ತೇವೆ. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

  • ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ವಿಶ್ವನಾಥ್

    ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ: ವಿಶ್ವನಾಥ್

    -ಇಂದ್ರಜಿತ್ ಲಂಕೇಶ್‍ರನ್ನು ಗೇಲಿ ಮಾಡುತ್ತಿದ್ದೇವೆ

    ಬೆಂಗಳೂರು: ವಿಧಾನಸಭಾ ಅಧಿವೇಶನ ಆರಂಭಕ್ಕೆ ಮುನ್ನವೇ ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವೇಳೆ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ನಾನು ಪರಿಷತ್ ಸದಸ್ಯ, ಆದ್ದರಿಂದ ನಾನು ಕೂಡ ಸಚಿವ ಸ್ಥಾನದ ಆಂಕಾಕ್ಷಿ ಎಂದು ತಿಳಿಸಿದರು.

    ಇದೇ ವೇಳೆ ಡ್ರಗ್ಸ್ ಮಾಫಿಯಾ ಕೊರೊನಾದಂತೆ ಇಡೀ ಜಗತ್ತನ್ನು ಆವರಿಸಿಕೊಂಡಿದೆ. ಪಾಕಿಸ್ತಾನ ಭಾರತವನ್ನು ಹಾಳು ಮಾಡಲು ಅಮೃತಸರಕ್ಕೆ ಡ್ರಗ್ಸ್ ಸಪ್ಲೈ ಮಾಡಿ ಹೇಗೆ ಯುವಕರನ್ನು ಹಾಳುಮಾಡುತ್ತಿದೆ ಎಂಬುವುದು ಗೊತ್ತಿದೆ. ಪಂಜಾಬ್ ರಾಜ್ಯ ಡ್ರಗ್ಸ್ ನಿಂದ ಏನಾಗುತ್ತಿದೆ ಎಂಬುವುದು ಗೊತ್ತಿದೆ. ನಮ್ಮಲ್ಲಿ ಡ್ರಗ್ಸ್ ಎಲ್ಲಿಂದ ಬರುತ್ತದೆ, ಯಾರು ಇದನ್ನು ಉಪಯೋಗಿಸುತ್ತಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿದೆ. ಆದರೆ ಸೆಲೆಬ್ರಿಟಿಗಳು ಇದನ್ನು ಬಳಕೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ಈ ಬಗ್ಗೆ ಸೆಲೆಬ್ರಿಟಿ ಅವರೇ ರಿವೀಲ್ ಮಾಡಿದ್ದರು. ಆದರೆ ನಾವು ಅವರನ್ನು ಗೇಲಿ ಮಾಡುತ್ತಿದ್ದೇವೆ. ಯಾರೋ ಒಬ್ಬರನ್ನು ಬಂಧನ ಮಾಡುವುದರಿಂದ ಏನು ಆಗಲ್ಲ. ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿದರೇ ಮಾತ್ರ ಇದಕ್ಕೆ ಬ್ರೇಕ್ ಹಾಕಲು ಸಾಧ್ಯ ಎಂದರು.

    ಇತ್ತ ಸಂಪುಟ ಪುನರ್ ರಚನೆ ಸಂಬಂಧ ಚಟುವಟಿಕೆಗಳು ಚುರುಕು ಪಡೆದಿದೆ. ಸಿಎಂ ಯಡಿಯೂರಪ್ಪ ಅವರು ನಿನ್ನೆಯೇ ಹಿರಿಯ ಸಚಿವರೊಂದಿಗೆ ಸಭೆ ಕೂಡ ನಡೆಸಿದ್ದರೆ. ಸಭೆಯಲ್ಲಿ ಯಾರನ್ನು ಕೈಬಿಡಬೇಕು, ಅವರನ್ನು ಹೇಗೆ ಒಪ್ಪಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

  • ಅಧಿವೇಶನದ ನಡುವೆಯೂ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಭಾಗಿ

    ಅಧಿವೇಶನದ ನಡುವೆಯೂ ಕಾಡಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಭಾಗಿ

    ತುಮಕೂರು: ವಿಧಾನಸಭಾ ಅಧಿವೇಶನದ ನಡುವೆಯೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಿಪಟೂರು ತಾಲೂಕಿನ ನೋಣವಿನಕೆರೆಯ ಕಾಡಸಿದ್ದೇಶ್ವರ ಮಠದ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಂಡರು.

    ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 9:30ಕ್ಕೆ ಮಠಕ್ಕೆ ಆಗಮಿಸಿದ ಸಿಎಂ, ಮೃತ್ಯುಂಜಯ ಹೋಮ, ರುದ್ರ ಹೋಮ, ಜಯಾದಿ ಹೋಮದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಬಳಿಕ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೇಶ್ವರ ಶ್ರೀಗಳ ಆಶೀರ್ವಾದ ಪಡೆದರು.

    ವೇದಿಕೆ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಾಡಸಿದ್ದೇಶ್ವರ ಮಠದ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಸೇವೆಯ ಗುಣಗಾನ ಮಾಡಿದರು. ಅಲ್ಲದೆ ರಾಜ್ಯ ಸರ್ಕಾರದ ವತಿಯಿಂದ ಮಠದ ಅಭಿವೃದ್ಧಿಗೆ ಸಹಾಯ ಮಾಡಲಾಗುವುದು ಎಂದು ಭರವಸೆ ನಿಡಿದರು. ಅಧಿವೇಶನಕ್ಕೆ ವಿಳಂಬವಾಗುವ ಹಿನ್ನೆಲೆಯಲ್ಲಿ ಚುಟುಕಾಗಿ ಭಾಷಣ ಮುಗಿಸಿ ಜಾತ್ರೆಯಿಂದ ಸಿಎಂ ವಿಧಾನಸೌಧ ದತ್ತ ಪಯಣ ಬೆಳೆಸಿದರು.

  • ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಸದನಕ್ಕೆ ಚಕ್ಕರ್, ಉಪ್ಪು ಹುಳಿ ಖಾರಕ್ಕೆ ಅಂಬರೀಶ್ ಹಾಜರ್

    ಬೆಂಗಳೂರು: ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ವಿಶೇಷ ಅಧಿವೇಶನಕ್ಕೆ ಚಕ್ಕರ್ ಹಾಕಿ ಉಪ್ಪು ಹುಳಿ ಖಾರ ಸಿನಿಮಾದ ಕಾರ್ಯಕ್ರಮಕ್ಕೆ ಮಾಜಿ ವಸತಿ ಸಚಿವ ಅಂಬರೀಶ್ ಹಾಜರಾಗಿದ್ದು ಟೀಕೆಗೆ ಗುರಿಯಾಗಿದೆ.

    ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ನಟ ಅಂಬರೀಶ್ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ `ಉಪ್ಪು ಹುಳಿ ಖಾರ’ ಚಿತ್ರದ ಟೀಸರ್ ಲಾಂಚ್ ಮಾಡಲು ಅಂಬರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ  ಟೀಸರ್ ಲಾಂಚ್ ಮಾಡಿದ ಅಂಬರೀಶ್ ಉಪ್ಪು ಹುಳಿ ಖಾರ ಚಿತ್ರದ ರೋಮಿಯೋ ಹಾಡಿಗೆ ಸ್ಜೇಜ್ ಮೇಲೆ ಸ್ಟೆಪ್ ಹಾಕಿದರು. ಮಾಲಾಶ್ರೀ ಅಂಬರೀಶ್‍ಗೆ ಲವ್ ಯು ಅಂದ್ರು ಅದಕ್ಕೆ ಅಂಬರೀಶ್ ಮೀಟು ಲವ್ ಎಂದು ಹೇಳಿ ಸ್ಜೇಜ್ ಮೇಲೆ ಮನೋರಂಜನೆ ನೀಡಿದರು.

    ವಿಧಾನಸಭಾ ಸಚಿವಾಲಯದಿಂದ ಸಿಕ್ಕಿದ ಮಾಹಿತಿ ಪ್ರಕಾರ ಸಚಿವ ಸ್ಥಾನ ಕಳೆದುಕೊಂಡ ಮೇಲೆ ಕೇವಲ ನಾಲ್ಕು ದಿನ ಮಾತ್ರ ಕಲಾಪಕ್ಕೆ ಅಂಬರೀಶ್ ಹಾಜರಾಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಅಂಬರೀಶ್ ಮೇ 2013ರಿಂದ 2016ರ ಜೂನ್ ವರೆಗೆ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿ ಬಳಿಕ ರಾಜೀನಾಮೆ ನೀಡಿದ್ದರು.

    ಉತ್ತರ ಕರ್ನಾಟಕದ ಸಮಸ್ಯೆ ಪರಿಹಾರಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಕರೆಯಲಾಗಿದೆ. ಒಟ್ಟು 225 ಶಾಸಕರ ಪೈಕಿ ಮೊದಲ ದಿನ ಬೆಳಗ್ಗೆ 11 ಗಂಟೆಗೆ ಹಾಜರಾಗಿದ್ದು ಕೇವಲ 20 ಮಂದಿ ಮಾತ್ರ.

    ಕೊನೇ ಪಕ್ಷದ ಇದು ವರ್ಷದ ಕೊನೇ ಅಧಿವೇಶನ. ಚುನಾವಣೆ ಹತ್ತಿರ ಇದೆ. ಜನ ನಮ್ಮ ನೋಡುತ್ತಿರುತ್ತಾರೆ. ಈ ಬಾರಿಯಾದ್ರೂ ನಾವು ಸದನದಲ್ಲಿ ಕಾಣಿಸಿಕೊಳ್ಳೋಣ ಎನ್ನುವ ಭಯವೂ ಶಾಸಕರಿಗೆ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲದಂತೆ ವರ್ತಿಸಿದ್ದಾರೆ. ಶಾಸಕರ ಹಾಜರಾತಿ ಕಡಿಮೆ ಇದ್ದ ಕಾರಣ ಒಂದೇ ನಿಮಿಷಕ್ಕೆ ಸ್ಪೀಕರ್ ಕೋಳಿವಾಡ ಕಲಾಪವನ್ನು ಮುಂದೂಡಿದ್ದರು.

    10 ದಿನಗಳ ಅಧಿವೇಶನಕ್ಕೆ ಬರೋಬ್ಬರಿ 28 ರಿಂದ 30 ಕೋಟಿ ರೂ. ಖರ್ಚು ಆದರೆ ದಿನಕ್ಕೆ ಎರಡೂವರೆಯಿಂದ ಮೂರು ಕೋಟಿ ರೂ. ವೆಚ್ಚವಾಗುತ್ತದೆ. ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 2,500 ರೂ. ಸಾರಿಗೆ ಭತ್ಯೆ ನೀಡಿದರೆ, ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ 5 ಸಾವಿರ ರೂ.ಸಾರಿಗೆ ಭತ್ಯೆ ನೀಡಲಾಗುತ್ತದೆ.