Tag: ವಿದ್ಯುತ್ ಬಿಲ್

  • ಮೂರು ತಿಂಗಳು ವಿದ್ಯುತ್ ವಿನಾಯಿತಿ

    ಮೂರು ತಿಂಗಳು ವಿದ್ಯುತ್ ವಿನಾಯಿತಿ

    ನವದೆಹಲಿ: ಜನ ಸಾಮಾನ್ಯರಿಗೆ, ಉದ್ಯೋಗಿಗಳಿಗೆ ರಿಲೀಫ್ ನೀಡಿದ್ದ ಕೇಂದ್ರ ಸರ್ಕಾರ ಈಗ ವಿದ್ಯುತ್ ವಿನಾಯಿತಿಯನ್ನು ನೀಡಿದೆ.

    ಮೂರು ತಿಂಗಳ ಕಾಲ ವಿದ್ಯುತ್ ಬಿಲ್ ಪಾವತಿಗೆ 3 ತಿಂಗಳು ವಿನಾಯಿತಿ ನೀಡಿ ರಾಜ್ಯ ಸರ್ಕಾರಗಳು ಎಲ್ಲ ಎಸ್ಕಾಂಗಳಿಗೆ ಸೂಚಿಸಬೇಕೆಂದು ಕೇಂದ್ರ ಇಂಧನ ಸಚಿವಾಲಯ ಆದೇಶಿಸಿದೆ.

    ಲಾಕ್‍ಡೌನ್ ಅವಧಿಯಲ್ಲಿ ವ್ಯವಹಾರ ನಡೆಯದ ಕಾರಣ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಬೇಡಿಕೆ ವ್ಯಕ್ತವಾಗಿತ್ತು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಲವು ಕೈಗಾರಿಕೆ ಮತ್ತು ಕಂಪನಿಗಳು ಬಂದ್ ಆಗಿರುವ ಕಾರಣ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ.

    ಕೃಷಿ ಉತ್ಪನ್ನ ಸಾಗಾಟ, ಕೃಷಿಗೆ ಪೂರಕವಾಗಿರುವ ಸಂಸ್ಥೆಗಳ ವ್ಯವಹಾರಗಳಿಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ.

  • ಕಂಬದಲ್ಲಿ ನೇತಾಡುವಂತೆ ಮಾಡ್ತೀನಿ – ಚೆಸ್ಕಾಂ ನೌಕರನಿಗೆ ಪೊಲೀಸ್ ಆವಾಜ್

    ಕಂಬದಲ್ಲಿ ನೇತಾಡುವಂತೆ ಮಾಡ್ತೀನಿ – ಚೆಸ್ಕಾಂ ನೌಕರನಿಗೆ ಪೊಲೀಸ್ ಆವಾಜ್

    – ಬಿಲ್ ಕಟ್ಟದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತ
    – ಬೆಸ್ಕಾಂ ನೌಕರನಿಗೇ ಪೊಲೀಸ್ ಆವಾಜ್

    ಹಾಸನ: ಇನ್ನೊಂದ್ಸಲ ವಿದ್ಯುತ್ ಸಂಪರ್ಕ ಕಟ್ ಮಾಡಲು ಬನ್ನಿ. ನೀವು ಕಂಬದಲ್ಲಿ ನೇತಾಡುತ್ತಿರಬೇಕು ಹಾಗೇ ಮಾಡ್ತೀನಿ ಎಂದು, ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಚೆಸ್ಕಾಂ ನೌಕರನಿಗೆ ಪೊಲೀಸರೊಬ್ಬರು ಆವಾಜ್ ಹಾಕಿದ್ದಾರೆ.

    ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಘಟನೆ ನಡೆದಿದ್ದು, ವಿದ್ಯುತ್ ಬಿಲ್ ಸಂಗ್ರಹಿಸಲು ಚೆಸ್ಕಾಂ ಸಿಬ್ಬಂದಿ ಬುಧವಾರ ಬೆಳಗ್ಗೆ ಪೊಲೀಸ್ ಕ್ವಾಟ್ರಸ್‍ಗೆ ತೆರಳಿದ್ದಾರೆ. ಈ ವೇಳೆ ಬಿಲ್ ಕಟ್ಟದವರ ಮನೆಯ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದಾರೆ. ಇದರಿಂದ ಕೆರಳಿದ ಸಮವಸ್ತ್ರದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು,”ಇನ್ನೊಂದ್ಸಲ ಕ್ವಾಟ್ರಸ್‍ಗೆ ಲೈನ್ ಕಟ್ ಮಾಡಲು ಬನ್ನಿ ಮಾಡ್ತೀನಿ. ಕಳ್ಳರನ್ನೆಲ್ಲ ಬಿಟ್ಟು ಇಲ್ಲಿ ಬಂದಿದ್ದೀರಾ ಎಂದು ನಡು ಬೀದಿಯಲ್ಲೇ” ಆವಾಜ್ ಹಾಕಿದ್ದಾರೆ.

    ಈ ವೇಳೆ ಚೆಸ್ಕಾಂ ಸಿಬ್ಬಂದಿ ಮತ್ತು ಪೊಲೀಸ್ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಇಬ್ಬರು ಸರ್ಕಾರಿ ನೌಕರರ ಮಾತಿನ ಚಕಮಕಿ ವಿಡಿಯೋ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ವಿದ್ಯುತ್ ಲೈನ್ ಕಟ್ ಮಾಡಿದ ಸಿಬ್ಬಂದಿ ಕೈ ಮುರಿದ ಅಪ್ಪ, ಮಗ

    ವಿದ್ಯುತ್ ಲೈನ್ ಕಟ್ ಮಾಡಿದ ಸಿಬ್ಬಂದಿ ಕೈ ಮುರಿದ ಅಪ್ಪ, ಮಗ

    ಮಡಿಕೇರಿ: ಬಿಲ್ ಬಾಕಿ ಇರಿಸಿದ್ದ ಹಿನ್ನೆಲೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್ ಮ್ಯಾನ್ ಮೇಲೆ ಅಪ್ಪ, ಮಗ ಹಲ್ಲೆ ನಡೆಸಿ, ಸಿಬ್ಬಂದಿ ಕೈ ಮುರಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.

    ಅಮ್ಮತ್ತಿ ಗ್ರಾಮದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ನಿವಾಸಿ ಈರಪ್ಪ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಸೋಮವಾರ ಈರಪ್ಪ ಅಮ್ಮತ್ತಿ ಗ್ರಾಮದ ನಿವಾಸಿ ಬಿ.ಎಸ್ ಅಮಾನುಲ್ಲಾ ಖಾನ್ ಮನೆಗೆ ಹೋಗಿ ಬಿಲ್ ಬಾಕಿ ಇರಿಸಿಕೊಂಡಿದಕ್ಕೆ ವಿದ್ಯುತ್ ಕಡಿತಗೊಳಿಸಿದ್ದರು. ಅಮಾನುಲ್ಲಾ ಖಾನ್ ಅವರು ವಿದ್ಯುತ್ ಬಿಲ್‍ನಲ್ಲಿ 22,612 ರೂ. ಬಾಕಿ ಉಳಿಸಿಕೊಂಡಿದ್ದರು. ಆದ್ದರಿಂದ ಇಲಾಖೆಯ ಆದೇಶದಂತೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ಖಾನ್ ಅವರ ಮನೆಗೆ ಬರುವ ವಿದ್ಯುತ್ ಸಂಪರ್ಕವನ್ನು ಲೈನ್ ಮ್ಯಾನ್ ಕಡಿತಗೊಳಿಸಿದ್ದರು.

    ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ವಿಚಾರ ತಿಳಿದ ಅಮಾನುಲ್ಲಾ ಖಾನ್ ಹಾಗೂ ಪುತ್ರ ಜೀಯಾ ಉಲ್ಲಾ ಖಾನ್ ಕರ್ತವ್ಯ ನಿರತರಾಗಿದ್ದ ಈರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಈರಪ್ಪ ಅವರ ಎಡಗೈ ಮೂಳೆ ಮುರಿದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಈರಪ್ಪ ಅವರನ್ನು ಅಮ್ಮತ್ತಿ ಗ್ರಾಮದ ಆರ್‌ಐಹೆಚ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಅಮ್ಮತ್ತಿ ಪೋಲಿಸರಿಗೆ ದೂರು ನೀಡಲಾಗಿದ್ದು, ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸುವಂತೆ ಇಲಾಖೆಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

  • ಅರಣ್ಯಾಧಿಕಾರಿ ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತ – ಸಮುದಾಯ ಭವನಕ್ಕೆ ಸಿಬ್ಬಂದಿ ಶಿಫ್ಟ್

    ಅರಣ್ಯಾಧಿಕಾರಿ ಕಚೇರಿಗೆ ವಿದ್ಯುತ್ ಸಂಪರ್ಕ ಕಡಿತ – ಸಮುದಾಯ ಭವನಕ್ಕೆ ಸಿಬ್ಬಂದಿ ಶಿಫ್ಟ್

    ಧಾರವಾಡ: ಬಿಲ್ ಪಾವತಿಸದ್ದಕ್ಕೆ ಹೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಪರಿಣಾಮ ವಲಯ ಅರಣ್ಯಾಧಿಕಾರಿ ಕಚೇರಿ ಈಗ ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.

    ಇಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿಯ ಅಧಿಕಾರಿಗಳು ಕಳೆದ ಕೆಲವು ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಹೀಗಾಗಿ ಕಚೇರಿಯ 30 ಸಾವಿರ ರೂ. ಹಾಗೂ ಡಿಎಫ್‍ಒ ಸರ್ಕಾರಿ ನಿವಾಸದ ಬಾಕಿ ಸೇರಿದಂತೆ ಒಟ್ಟು 51 ಸಾವಿರ ರೂ. ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯೇ ಕಚೇರಿ ಮತ್ತು ನಿವಾಸದ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದಾರೆ.

    ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ತಮ್ಮದೇ ಇಲಾಖೆಯ ಆವರಣದಲ್ಲಿರುವ ಸಮುದಾಯ ಭವನಕ್ಕೆ ಕಂಪ್ಯೂಟರ್ ಗಳನ್ನು ಸಾಗಿಸಲಾಗಿದೆ. ಕೆಲವು ಸಿಬ್ಬಂದಿ ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಪರದಾಡುತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಲು ಇಲಾಖೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ವಿವಿಧ ಕಡತಗಳು ಬಾಕಿಯಿವೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

    ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಖಾಕಿ ಕರೆತಂದ ಸೆಸ್ಕಾಂ – ಗ್ರಾಮಸ್ಥರ ಅಕ್ರೋಶ

    ಮೈಸೂರು: ಗ್ರಾಮದ ಮನೆಗಳ ವಿದ್ಯುತ್ ಬಾಕಿ ಹಿನ್ನೆಲೆಯಲ್ಲಿ ರೈತರಿಂದ ಬಾಕಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕಾಂ) ಅಧಿಕಾರಿಗಳು ಹೊಸ ರೀತಿಯ ವರಸೆ ಆರಂಭಿಸಿದ್ದು, ಪೊಲೀಸರ ಸಮ್ಮುಖದಲ್ಲಿ ಹಣ ಕಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.

    ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸರ ಜೊತೆ ಆಗಮಿಸಿದ ಸೆಸ್ಕಾಂ ಅಧಿಕಾರಿಗಳು ರೈತರಿಂದ ಬಾಕಿ ವಸೂಲಿ ಮಾಡಲು ಮುಂದಾಗಿದ್ದಾರೆ. ಸದ್ಯ ಸೆಸ್ಕಾಂ ಸಿಬ್ಬಂದಿಗಳ ಈ ವರ್ತನೆಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ್ದಾರೆ.

    ಒಂದು ಗಂಟೆಗೂ ಹೆಚ್ಚು ಕಾಲ ಸೆಸ್ಕಾಂ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಈ ಕುರಿತು ಮಾತಿನ ಚಕಮಕಿ ನಡೆಯಿತು. ಸೆಸ್ಕಾಂ ಸಿಬ್ಬಂದಿ ಹಾಗೂ ಪೊಲೀಸರಿಗೆ ಗ್ರಾಮದ ಒಳಗೆ ಕಾಲಿಡದಂತೆ ಗ್ರಾಮಸ್ಥರು ರೈತರು ತಡೆಯೊಡ್ಡಿದರು.

    ಈ ಕುರಿತು ಗ್ರಾಮಸ್ಥರೊಂದಿಗೆ ತಮ್ಮ ಕಾರ್ಯದ ಕುರಿತು ವಾದ ಮಂಡಿಸಿದ ಅಧಿಕಾರಿಗಳು, ಹಲವು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಇದೆ. ಬಿಲ್ ಕೇಳಲು ಬಂದರೆ ನೀವು ನಮ್ಮ ಮೇಲೆ ದರ್ಪ ಮಾಡಿತ್ತೀರಾ. ಈ ಹಿನ್ನಲೆಯಲ್ಲಿ ಪೊಲೀಸರನ್ನು ಜೊತೆಗೆ ಕರೆದುಕೊಂಡು ಬಂದಿದ್ದೇವೆ. ವಿದ್ಯುತ್ ಹಣವನ್ನು ಸ್ಥಳದಲ್ಲೇ ಪಾವತಿ ಮಾಡುವಂತೆ ಪಟ್ಟು ಹಿಡಿದರು. ಇದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿ ಮಳೆ ಬೆಳೆ ಇಲ್ಲದೇ ನಷ್ಟ ಅನುಭವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಎಲ್ಲಾ ಹಣ ನೀಡಲು ಸಾಧ್ಯವಿಲ್ಲ ಮೊದಲಿನಂತೆ ಹಂತ ಹಂತವಾಗಿ ಹಣ ಪಾವತಿ ಮಾಡುವುದಾಗಿ ಹೇಳಿದ್ದಾರೆ.

  • 8.64 ಲಕ್ಷ ರೂ. ಕರೆಂಟ್ ಬಿಲ್ – ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ

    8.64 ಲಕ್ಷ ರೂ. ಕರೆಂಟ್ ಬಿಲ್ – ಆತ್ಮಹತ್ಯೆಗೆ ಶರಣಾದ ತರಕಾರಿ ವ್ಯಾಪಾರಿ

    ಮುಂಬೈ: ಮಹಾರಾಷ್ಟ್ರ ವಿದ್ಯುತ್ ಸರಬರಾಜು ನಿಗಮವು ತರಕಾರಿ ವ್ಯಾಪಾರ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರಿಗೆ 8.64 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ್ದು, ಭಾರೀ ಮೊತ್ತದ ಮೊತ್ತವನ್ನು ಕಂಡು ಹೆದರಿದ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಔರಂಗಬಾದ್ ಪ್ರದೇಶದಲ್ಲಿ ನಡೆದಿದೆ.

    40 ವರ್ಷ ವಯಸ್ಸಿನ ಜಗನ್ನಾಥ್ ಆತ್ಮಹತ್ಯೆಗೆ ಶರಣಾಗಿರುವ ವ್ಯಾಪಾರಿ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ಸರಬರಾಜು ನಿಗಮವು (ಎಂಎಸ್‍ಇಡಿಸಿಎಲ್) ಏಪ್ರಿಲ್ ತಿಂಗಳ ಅಂತ್ಯಕ್ಕೆ ಭಾರೀ ಮೊತ್ತದ ವಿದ್ಯುತ್ ಬಿಲ್ ನೀಡಿತ್ತು. ಇದನ್ನು ಕಂಡ ಜಗನ್ನಾಥ್ ಗುರುವಾರ ಬೆಳಗ್ಗೆ ಔರಂಗಬಾದ್ ಪ್ರದೇಶದ ಭರತ್ ನಗರದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸದ್ಯ ಪ್ರಕರಣದ ಕುರಿತು ತನಿಖೆ ನಡೆಸಿರುವ ಎಂಎಸ್‍ಇಡಿಸಿಎಲ್ ಭಾರೀ ಮೊತ್ತದ ಬಿಲ್ ನೀಡಿ ತಪ್ಪು ಮಾಡಿದ್ದ ತನ್ನ ಅಧಿಕಾರಿಯನ್ನು ಅಮಾನತು ಮಾಡಿದೆ. ಅಂದಹಾಗೇ ಜಗನ್ನಾಥ್ ಅವರಿಗೆ ನೀಡಿದ ಬಿಲ್ ನಲ್ಲಿ ಎರಡು ಕೊಠಡಿಯ ಶೆಡ್ ನಲ್ಲಿ 55,519 ಯೂನಿಟ್ಸ್ ವಿದ್ಯುತ್ ಬಳಕೆ ಮಾಡಲಾಗಿದ್ದು, 8,64,781 ರೂ ಪಾವತಿ ಮಾಡಬೇಕು ಎಂದು ನಮೂದಿಸಿಲಾಗಿತ್ತು. ಈ ಶೆಡ್ ನಲ್ಲಿ ಜಗನ್ನನಾಥ್ ಕಳೆದ 20 ವರ್ಷಗಳಿಂದ ತರಕಾರಿ ವ್ಯಾಪಾರ ನಡೆಸುತ್ತಿದ್ದರು.

    ಮೀಟರ್ ರೀಡಿಂಗ್ ವೇಳೆ ಅಧಿಕಾರಿ ಬಳಕೆ ಮಾಡಿದ್ದ 6,117.8 ಕಿಲೋವ್ಯಾಟ್ ಬದಲಾಗಿ 61,178 ಕಿಲೋ ವ್ಯಾಟ್ ಎಂದು ನಮೂದಿಸಿದ್ದು ಈ ಅವಘಡಕ್ಕೆ ಕಾರಣವಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ವಿದ್ಯುತ್ ನಿಗಮ ತಿಳಿಸಿದೆ. ಅಲ್ಲದೇ ಮೀಟರ್ ಕಾರ್ಯನಿರ್ವಹಿಸುತ್ತಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪುಂಡಲೀಕ ನಗರದಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.