Tag: ವಿದ್ಯುತ್ ಬಿಲ್

  • ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ: ಬೆಸ್ಕಾಂ ಸ್ಪಷ್ಟನೆ

    ವಿದ್ಯುತ್ ಬಿಲ್ ಪಾವತಿಗೆ 6 ತಿಂಗಳ ಕಾಲಾವಕಾಶ ಇಲ್ಲ: ಬೆಸ್ಕಾಂ ಸ್ಪಷ್ಟನೆ

    ಬೆಂಗಳೂರು: ವಿದ್ಯುತ್ ಶುಲ್ಕ ಪಾವತಿಗೆ ಬಿಲ್ ನೀಡಿದ ದಿನದಿಂದ 6 ತಿಂಗಳುಗಳ ಕಾಲಾವಕಾಶವಿರುತ್ತದೆ ಎಂಬ ಸುಳ್ಳು ಮಾಹಿತಿಯನ್ನು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದು, ಇಂತಹ ವದಂತಿ ಮತ್ತು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ಗ್ರಾಹಕರಿಗೆ ಮನವಿ ಮಾಡಿದೆ.

    ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಾಲಕಾಲಕ್ಕೆ ಅನುಮೋದಿಸುವ ದರದಲ್ಲಿ ಗ್ರಾಹಕರು ಬಳಸುವ ವಿದ್ಯುತ್‍ಗೆ ಬೆಸ್ಕಾಂ ವಿದ್ಯುತ್ ಶುಲ್ಕವನ್ನು ಸಂಗ್ರಹಿಸುತ್ತಿದ್ದು, ಬಿಲ್ ವಿತರಿಸಿದ ದಿನದಿಂದ ಅದರ ಪಾವತಿಗೆ 15 ದಿನಗಳ ಕಾಲಾವಕಾಶವಿರುತ್ತದೆ. ಜೊತೆಗೆ ಗ್ರಾಹಕರಿಗೆ ನೀಡುವ ಮಾಸಿಕ ಬಿಲ್‍ನ ಹಿಂಬದಿ ಸೂಚನೆ 1 ರಲ್ಲಿ ಬಿಲ್ ಪಾವತಿಸಲು ಅಂತಿಮ ಗಡವು, ಬಿಲ್ ವಿತರಿಸಿದ ದಿನದಿಂದ 15 ದಿನಗಳ ಅವಧಿಯಾಗಿರುತ್ತದೆ ಎಂದು ನಮೂದಿಸಲಾಗಿದೆ. ಗ್ರಾಹಕರು ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡದಿದ್ದಲ್ಲಿ ಗಡುವು ದಿನಾಂಕದ ನಂತರ 15 ದಿನಗಳ ಕಾಲಾವಧಿಯ ನೋಟಿಸ್ ಜಾರಿ ಮಾಡಿ ಬಾಕಿ ಪಾವತಿಸದ ಪ್ರಯುಕ್ತ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಅಧಿಕಾರವನ್ನು ಬೆಸ್ಕಾಂ ಹೊಂದಿರುತ್ತದೆ ಎಂದು ಬೆಸ್ಕಾಂನ ನಿರ್ದೇಶಕರು (ಹಣಕಾಸು) ತಿಳಿಸಿದ್ದಾರೆ.  ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಬಿಲ್ ವಿತರಿಸಿದ ದಿನಾಂಕದಿಂದ 15 ದಿನದೊಳಗೆ ಬಿಲ್‍ನ ಮೊತ್ತವನ್ನು ಗ್ರಾಹಕರು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಬೆಸ್ಕಾಂ ಮಿತ್ರ ಆ್ಯಪ್, ಹತ್ತಿರದ ಬೆಸ್ಕಾಂ ಕಚೇರಿ, ಬೆಸ್ಕಾಂ ವೆಬ್ ಸೈಟ್ ಮತ್ತು ಗೂಗಲ್ ಆ್ಯಪ್‍ಗಳಲ್ಲಿ ಮಾತ್ರ ಪಾವತಿಸಬಹುದಾಗಿದೆ. ಇಲೆಕ್ಟ್ರಿಸಿಟಿ ಕಾಯ್ದೆ ಕುರಿತಂತೆ ಜನರಿಗೆ ದಾರಿ ತಪ್ಪಿಸುವ ಮಾಹಿತಿ ನೀಡಿ, ವಿದ್ಯುತ್ ಬಿಲ್ ಪಾವತಿಸಲು 6 ತಿಂಗಳ ಕಾಲವಿರುತ್ತದೆ. ಒಂದು ವೇಳೆ 6 ತಿಂಗಳ ನಂತರ ಬಿಲ್ ಕಟ್ಟದಿದ್ದ ಪಕ್ಷದಲ್ಲಿ ಬೆಸ್ಕಾಂ ಜಾಗೃತದಳ ಬಿಲ್ ಪಾವತಿಸುವಂತೆ 15 ದಿನಗಳ ಕಾಲ ಅವಧಿಯ ನೋಟಿಸ್ ನೀಡುತ್ತದೆ ಎಂಬ ಸುಳ್ಳು ಮಾಹಿತಿಯನ್ನು ವ್ಯಕ್ತಿಯೋರ್ವ ಕೆಲವು ದಿನಗಳ ಹಿಂದೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಕುರಿತು ಬೆಸ್ಕಾಂ ಜಾಗೃತದಳಕ್ಕೆ ಮಾಹಿತಿ ನೀಡಿದ್ದು, ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದೆ.

    ಇಂತಹ ವದಂತಿ ಬಗ್ಗೆ ಕಿವಿಗೊಡಬೇಡಿ, ಇಂತಹ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಮಾಹಿತಿ ಇದ್ದಲ್ಲಿ, ಬೆಸ್ಕಾಂನ ಅಧೀಕ್ಷಕರು, ಜಾಗೃತದಳ ಇವರ ದೂರವಾಣಿ ಸಂಖ್ಯೆ – 9448042375ಗೆ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್, ಜಾಗೃತದಳ ಇವರ ದೂರವಾಣಿ ಸಂಖ್ಯೆ – 9448094802ಗೆ ಕರೆ ಮಾಡಲು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.  ಇದನ್ನೂ ಓದಿ: ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ

    ಆನ್ ಲೈನ್ ವಂಚನೆ: ಸುಳ್ಳು ಸುದ್ದಿ ಹರಡುವುದರ ಜೊತೆಗೆ ಗ್ರಾಹಕರನ್ನು ಆನ್‍ಲೈನ್ ವಂಚಕರು ಕಾಡುತ್ತಿದ್ದಾರೆ. ನಿಮ್ಮ ವಿದ್ಯುತ್ ಬಿಲ್ ಅನ್ನು ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಸ್‍ಎಂಎಸ್ ಕಳುಹಿಸಿ ವಂಚಿಸುವ ಆನ್‍ಲೈನ್ ವಂಚನೆಕೋರರ ಚಾಲದ ಬಗ್ಗೆ ಎಚ್ಚರದಿಂದಿರುವಂತೆ ಬೆಸ್ಕಾಂ ಗ್ರಾಹಕರನ್ನು ಎಚ್ಚರಿಸಿದೆ. ಆನ್‍ಲೈನ್ ವಂಚನೆಕೋರರು, ಗ್ರಾಹಕರಿಗೆ ಕರೆ ಮಾಡಿ ತಾವು ಸೂಚಿಸುವ ಮೊಬೈಲ್‍ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ ವಿದ್ಯುತ್ ಶುಲ್ಕವನ್ನು ಪಾವತಿಸಲು ಸೂಚಿಸುತ್ತಿದ್ದಾರೆ. ಇಂತಹ ಯಾವುದೇ ಬಿಲ್ ಪಾವತಿಸುವ ವ್ಯವಸ್ಥೆ ಬೆಸ್ಕಾಂನಲ್ಲಿಲ್ಲ. ಅಲ್ಲದೆ ಗ್ರಾಹಕರಿಗೆ ಬೆಸ್ಕಾಂ ಬಿಲ್ ಪಾವತಿಸುವ ಕುರಿತಂತೆ ಯಾವುದೇ ಸಂದೇಶ ಅಥವಾ ದೂರವಾಣಿ ಕರೆ ಮಾಡುವುದಿಲ್ಲ. ಗ್ರಾಹಕರು ಇಂತಹ ಕರೆಗಳು ಬಂದ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಗೆ ಮಾಹಿತಿ ನೀಡಲು ಕೋರಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

    ವಿದ್ಯುತ್ ಪೂರೈಕೆ ಉಚಿತವಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್ : ನಿತಿನ್ ರಾವತ್

    ಮುಂಬೈ: ವಿದ್ಯುತ್ ಬಿಲ್ ಪಾವತಿಸದೇ ಇದ್ದರೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗುತ್ತದೆ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತಿನ್ ರಾವತ್ ಹೇಳಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಜನರು ಮನೆಯಲ್ಲಿದ್ದ ಕಾರಣ ವಿದ್ಯುತ್ ಬಿಲ್ ನಿಧಾನವಾಗಿ ಪಾವತಿಸಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು. ಈ ವೇಳೆ ವಿದ್ಯುತ್ ಇಲಾಖೆ ನೌಕರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಆದರೆ ಲಾಕ್‍ಡೌನ್ ಮುಗಿದ ನಂತರ ಕೂಡ ಅನೇಕ ಜನರು ವಿದ್ಯುತ್ ಬಿಲ್ ಪಾವತಿಸಿಲ್ಲ. ಹೀಗಾಗಿ ವಿದ್ಯುತ್ ಬಿಲ್ ಪಾವತಿಸದೇ ಇದ್ದರೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗುತ್ತದೆ ಎಂದು ನಿತಿನ್ ರಾವತ್ ಬೆದರಿಕೆಯೊಡ್ಡಿದ್ದಾರೆ. ಇದನ್ನೂ ಓದಿ:  ಭಾರತೀಯರನ್ನು ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮೋದಿ ಸರ್ಕಾರ ಮಾಡುತ್ತಿದೆ: ಖೂಬಾ

    ಅಕೋಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮಗಾಗಿ ಹೀಗೆ ಮಾಡಿ, ನಮಗಾಗಿ ಹಾಗೆ ಮಾಡಿ ಎನ್ನುತ್ತಾರೋ ಹೊರತು ವಿದ್ಯುತ್ ಬಿಲ್ ಕಟ್ಟುವುದಿಲ್ಲ. ಹಾಗಾಗಿ ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇವೆ. ವಿದ್ಯುತ್ ಉಚಿತವಾಗಿ ಪೂರೈಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ರೈತರು ವಿದ್ಯುತ್ ಬಿಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಬಿಲ್‍ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತದೆ.

    ಲಾಕ್‍ಡೌನ್ ವೇಳೆ ನೀವು ಮನೆಯಲ್ಲಿ ಕುಳಿತಿರುವಾಗ, ನಿಮಗಾಗಿ ವಿದ್ಯುತ್ ಇಲಾಖೆ ನೌಕರರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ನೀವು ರೆಫ್ರಿಜರೇಟರ್‌ಗಳು, ಕೂಲರ್‌ಗಳು, ಟಿವಿಗಳು, ಲ್ಯಾಪ್‍ಟಾಪ್‍ಗಳನ್ನು ಬಳಸಿದ್ದೀರಿ ಮತ್ತು ನಾವು ನಿಮಗೆ 24-ಗಂಟೆಗಳ ಕಾಲವಿದ್ಯುತ್ ಪೂರೈಕೆ ಮಾಡಿದ್ದೇವೆ. ನಮ್ಮ ಅನೇಕ ನೌಕರರು ಹಗಲು, ರಾತ್ರಿ ರಸ್ತೆಯಲ್ಲಿದ್ದರು ಮತ್ತು ಅವರಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

  • ವಿದ್ಯುತ್‌ ಬಿಲ್‌ ಪಾವತಿಸದವರ ಪಟ್ಟಿ ಪ್ರಕಟ – ಮಧ್ಯಪ್ರದೇಶ ಕಂದಾಯ ಸಚಿವರೇ ನಂ.1

    ವಿದ್ಯುತ್‌ ಬಿಲ್‌ ಪಾವತಿಸದವರ ಪಟ್ಟಿ ಪ್ರಕಟ – ಮಧ್ಯಪ್ರದೇಶ ಕಂದಾಯ ಸಚಿವರೇ ನಂ.1

    ಭೋಪಾಲ್: ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ವಿದ್ಯುಚ್ಛಕ್ತಿ ಇಲಾಖೆ ಪ್ರಕಟಿಸಿದೆ. ಆ ಪಟ್ಟಿಯಲ್ಲಿ ಮಧ್ಯಪ್ರದೇಶದ ಕಂದಾಯ ಮತ್ತು ಸಾರಿಗೆ ಸಚಿವ ಗೋವಿಂದ್‌ ಸಿಂಗ್‌ ರಜಪೂತ್‌ ಅವರ ಹೆಸರೇ ಮೊದಲ ಸ್ಥಾನದಲ್ಲಿರುವುದು ಬೆಳಕಿಗೆ ಬಂದಿದೆ.

    ಪಟ್ಟಿಯಲ್ಲಿ ರಜಪೂತ್‌ ಅವರ ಸಹೋದರ ಗುಲಾಬ್‌ ಸಿಂಗ್‌ ರಜಪೂತ್‌ ಹೆಸರು ಕೂಡ ಇದೆ. ಅಷ್ಟೇ ಅಲ್ಲ ಕಲೆಕ್ಟರ್‌ ಬಂಗಲೆ, ಎಸ್‌ಪಿ ಕಚೇರಿ, ವೈದ್ಯರು, ನಟರು, ಸಾಮಾಜಿಕ ಕಾರ್ಯಕರ್ತರ ಹೆಸರುಗಳು ಪಟ್ಟಿಯಲ್ಲಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಮನೆಯಲ್ಲಿ ಬಂದೂಕು ಬಚ್ಚಿಟ್ಟಿದ್ದಕ್ಕೆ ಭಾರತೀಯ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ

    34,667 ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗುಲಾಬ್‌ ಸಿಂಗ್‌ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಕಲೆಕ್ಟರ್‌ ಬಂಗಲೆ-11,445 ರೂ., ಎಸ್‌ಪಿ ಕಚೇರಿ-23,428 ರೂ., ಎಸ್‌ಎಎಫ್‌ 16 ಬೆಟಾಲಿಯನ್‌ ಕಚೇರಿಯಿಂದ 18,650 ರೂ. ವಿದ್ಯುತ್‌ ಬಿಲ್‌ ಬಾಕಿ ಪಾವತಿಯಾಗಬೇಕಿದೆ.

    ಬಿಲ್‌ ಪಾವತಿಸುವಂತೆ ಸುಸ್ತಿದಾರರಿಗೆ ಇಲಾಖೆ ಈಗಾಗಲೇ ಎಸ್‌ಎಂಎಸ್‌ ಕಳುಹಿಸಿದೆ. ಬಾಕಿ ಇರುವ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

    ವಿದ್ಯುತ್‌ ಬಿಲ್‌ ವಸೂಲಾತಿ ಕುರಿತು ಇಲಾಖೆಯ ಎಂಜಿನಿಯರ್‌ ಎಸ್‌.ಕೆ.ಸಿನ್ಹಾ ಮಾತನಾಡಿ, ಸಾಗರನಗರ ವಿಭಾಗದಲ್ಲಿ 91 ಸಾವಿರ ಗ್ರಾಹಕರಿದ್ದು, ಅವರ ಪೈಕಿ 67 ಸಾವಿರ ಮಂದಿ ಬಿಲ್‌ ಪಾವತಿಸಿದ್ದಾರೆ. ಉಳಿದವರಿಗೆ ಬಿಲ್‌ ಪಾವತಿಸುವಂತೆ ಎಸ್‌ಎಂಎಸ್‌ ಕಳುಹಿಸಲಾಗಿದೆ. ಕರೆ ಮಾಡಿ ಕೂಡ ತಿಳಿಸಲಾಗುವುದು. ಒಂದು ವೇಳೆ ಪಾವತಿಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ವಿದ್ಯುತ್ ಬಿಲ್‍ನಲ್ಲಿ ಅಕ್ರಮ, ಮೂವರ ಅಮಾನತು: ಸುನಿಲ್ ಕುಮಾರ್

    ವಿದ್ಯುತ್ ಬಿಲ್‍ನಲ್ಲಿ ಅಕ್ರಮ, ಮೂವರ ಅಮಾನತು: ಸುನಿಲ್ ಕುಮಾರ್

    ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ ಈ ಮೂವರು ಅಮಾನತಿಗೊಳಗಾದ ಸಿಬ್ಬಂದಿಯಾಗಿದ್ದಾರೆ.

    ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ ಕೆಲವು ಬಿಲ್ಲುಗಳನ್ನು ಮಾರ್ಪಾಟು ಮಾಡಿ ಅದರ ಮೊತ್ತವನ್ನು ಕಡಿಮೆ ಮಾಡಿ ಆ ಮೂಲಕ ಬೆಸ್ಕಾಂಗೆ ಬರಬೇಕಾದ ವಾಸ್ತವಿಕ ಆದಾಯದಲ್ಲಿ ನಷ್ಟ ಉಂಟಾಗಲು ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಮೇಲೆ ಕೋಲಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ಕೂಡ ದಾಖಲಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

    ತಾವು ಇಲಾಖೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಅಕ್ರಮ ಎಸಗಿ ಆ ಮೂಲಕ ಇಲಾಖೆಗೆ ನಷ್ಟವುಂಟು ಮಾಡುವ ಯಾವುದೇ ಅಧಿಕಾರಿ, ಸಿಬ್ಬಂದಿ ಇರಲಿ ಅವರ ಮೇಲೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ಪ್ರಸ್ತುತ ಈ ಮೂವರು ಸಿಬ್ಬಂದಿ ಬೇರೆ, ಬೇರೆ ಐಪಿ ವಿಳಾಸಗಳ ಗಣಕಯಂತ್ರಗಳಲ್ಲಿ ಐಡಿಗಳನ್ನು ಉಪಯೋಗಿಸಿ ವಂಚನೆ ಎಸಗಿರುವುದು ದೃಢವಾಗಿರುವುದರಿಂದ ಹಾಗೂ 8 ಆರ್ ಆರ್ ಸಂಖ್ಯೆಗಳಲ್ಲಿ ಒಟ್ಟು 444966-00 ಗಳಷ್ಟು ಮೊತ್ತ ಕಂಪನಿಗೆ ನಷ್ಟವಾಗಿರುವುದರಿಂದ ಇವರ ಮೇಲೆ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆಯನ್ನು ಸಹ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮನೆಯಂಗಳಕ್ಕೆ ಬಂದ ಹಾವು ಹಿಡಿದು ರಕ್ಷಿಸಿದ ಆರರ ಪೋರಿ

  • ವಿದ್ಯುತ್ ಬಿಲ್ ಪಾವತಿಸದ ಪುರಾತತ್ವ ಇಲಾಖೆ- ಕತ್ತಲಲ್ಲಿ ಹಳೇಬೀಡು ಹೊಯ್ಸಳೇಶ್ವರ ದೇವಾಲಯ

    ವಿದ್ಯುತ್ ಬಿಲ್ ಪಾವತಿಸದ ಪುರಾತತ್ವ ಇಲಾಖೆ- ಕತ್ತಲಲ್ಲಿ ಹಳೇಬೀಡು ಹೊಯ್ಸಳೇಶ್ವರ ದೇವಾಲಯ

    ಹಾಸನ: ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲೆಯ ಬೇಲೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಹಳೇಬೀಡು ಹೊಯ್ಸಳೇಶ್ವರ ದೇವಾಲಯದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕತ್ತಲಲ್ಲೇ ದೇವರ ದರ್ಶನ ಮಾಡುವಂತಾಗಿದೆ.

    6 ತಿಂಗಳಿಂದ ಸುಮಾರು 45,000 ರೂ. ವಿದ್ಯುತ್ ಬಿಲ್‍ಅನ್ನು ಪುರಾತತ್ವ ಇಲಾಖೆ ವಿಭಾಗ ಪಾವತಿಸಬೇಕಿದೆ. ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ದೇವಾಲಯದ ಒಳಗೆ ಕತ್ತಲೆಯ ಇರುವ ಕಾರಣ ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. ಸಾವಿರಾರು ಜನ ಭೇಟಿ ನೀಡುವ ದೇಗುಲದ ವಿದ್ಯುತ್ ಬಿಲ್ ಭರಿಸಲಾಗದ ಪುರಾತತ್ವ ಇಲಾಖೆ ವಿರುದ್ಧ ಪ್ರವಾಸಿಗರು ಬೇಸರ ಹೊರಹಾಕುತ್ತಿದ್ದಾರೆ.

    ಮೂರು ತಿಂಗಳ ಹಿಂದೆ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ಸೆಸ್ಕ್ ಸಿಬ್ಬಂದಿ ದೇವಾಲಯದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ರು. ಈ ವೇಳೆ ವಿದ್ಯುತ್ ಬಾಕಿ ಪಾವತಿಸುವುದಾಗಿ ಪುರಾತತ್ವ ವಿಭಾಗದ ಅಧಿಕಾರಿಗಳು ಭರವಸೆ ನೀಡಿದ್ದರು. ಹೀಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರು. ಅಂದಿನಿಂದಲೂ ಬಿಲ್ ಬಾಕಿ ಇದ್ದು, ಈಗ ಮೊತ್ತವೂ ಹೆಚ್ಚಾಗಿರುವ ಕಾರಣ ನಿಯಮಾನುಸಾರ ಕನೆಕ್ಷನ್ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಇತಿಹಾಸ ಪ್ರಸಿದ್ಧ ದೇಗುಲದ ವಿದ್ಯುತ್ ಬಿಲ್ ಪಾವತಿಸುವಷ್ಟು ಹಣ ಸರ್ಕಾರದ ಬೊಕ್ಕಸದಲ್ಲಿ ಇಲ್ಲವೇ ಎಂದು ಪ್ರವಾಸಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

  • ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ

    ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ

    – ಮೂರು ಕೋಟಿಗೂ ಅಧಿಕ ಬಿಲ್ ಬಾಕಿ!

    ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಬರೋಬ್ಬರಿ ಮೂರು ಕೋಟಿಗೂ ಅಧಿಕ ರೂ.ಗಳ ಬಿಲ್ ಮೊತ್ತವನ್ನು ಗ್ರಾಮ ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ.

    ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಕಳೆದ ಏಳೆಂಟು ವರ್ಷಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಶ್ರವಣಬೆಳಗೂಳಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು ಪೂರೈಸಬೇಕು. ಅದಕ್ಕಾಗಿ ಹೇಮಾವತಿ ನದಿಯಿಂದ ನೀರು ತರಲಾಗಿದ್ದು, ಬೃಹತ್ ಯಂತ್ರಗಳು ಚಾಲನೆಯಲ್ಲಿರುತ್ತವೆ.

    ಇಷ್ಟೇ ಅಲ್ಲದೇ ಮಹಾಮಸ್ತಕಾಭಿಷೇಕ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಎಲ್ಲ ಕಾರಣದಿಂದ ಶ್ರವಣಬೆಳಗೂಳ ಗ್ರಾಮಪಂಚಾಯಿತಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಗ್ರಾಮ ಪಂಚಾಯಿತಿಗೆ ಬರುವ ಕಡಿಮೆ ಆದಾಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಶ್ರವಣಬೆಳಗೂಳಕ್ಕೆ ಬಿಲ್ ಪಾವತಿ ಮಾಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯ ಶಾಸಕ ಬಾಲಕೃಷ್ಣ ಮನವಿ ಮಾಡಿದ್ದಾರೆ.

    ಪಂಚಾಯಿತಿಗೆ ಬರುವ ಆದಾಯದ ಇತಿಮಿತಿಯಲ್ಲಿ ತಿಂಗಳಿಗೆ ಎರಡು ಲಕ್ಷದಷ್ಟು ಬಿಲ್ ಕಟ್ಟುತ್ತಿದ್ದಾರೆ. ಆದರೆ ಒಂದು ತಿಂಗಳಿಗೆ ಸುಮಾರು 4 ಲಕ್ಷದವರೆಗೆ ಬಿಲ್ ಬರುವ ಕಾರಣ ಪ್ರತಿ ತಿಂಗಳು ವಿದ್ಯುತ್ ಬಿಲ್ ಬಾಕಿ ಉಳಿಯುತ್ತಲೇ ಇದೆ. ಕೆಇಬಿಯವರು ಕೂಡ ಹಲವಾರು ಬಾರಿ ಬಿಲ್ ಪಾವತಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಶ್ರವಣಬೆಳಗೊಳ ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿರುವುದರಿಂದ ಸರ್ಕಾರ ಗ್ರಾಮ ಪಂಚಾಯಿತಿಗೆ ವಿದ್ಯುತ್ ಬಿಲ್ ಕಟ್ಟಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

    ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ನೋಡಲು ಪ್ರಪಂಚದ ಮೂಲೆ ಮೂಲೆಯಿಂದ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿರುವ ಬಾಹುಬಲಿ ಪ್ರತಿಮೆ ಸೇರಿದಂತೆ ಇನ್ನಿತರ ಇತಿಹಾಸ ಪ್ರಸಿದ್ಧ ಬಸದಿಗಳು ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸುತ್ತವೆ.

  • ವಿದ್ಯುತ್ ಇಲಾಖೆಯ ಸಿಬ್ಬಂದಿಯನ್ನ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು

    ವಿದ್ಯುತ್ ಇಲಾಖೆಯ ಸಿಬ್ಬಂದಿಯನ್ನ ಕಂಬಕ್ಕೆ ಕಟ್ಟಿದ ಗ್ರಾಮಸ್ಥರು

    -ಪೊಲೀಸರು ಬಂದ್ಮೇಲೆ ತಿಳಿಯಾದ ವಾತಾವರಣ

    ಹೈದರಾಬಾದ್: ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ಕಟ್ಟಿ ಹಾಕಿದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

    ವಿದ್ಯುತ್ ಇಲಾಖೆಯ ಅಧಿಕಾರಿಗಳಿಬ್ಬರು ಗ್ರಾಮಕ್ಕೆ ಪರಿಶೀಲನೆಗೆ ಆಗಮಿಸಿದ್ದರು. ವಿದ್ಯುತ್ ಬಿಲ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.

    ವಿದ್ಯುತ್ ಇಲಾಖೆಯ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಇತ್ತ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕರೆಂಟ್ ಬಿಲ್‌ನಲ್ಲಿ ವ್ಯತ್ಯಾಸ ಇದ್ರೆ ಕಟ್ಟಬೇಡಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕರೆಂಟ್ ಬಿಲ್‌ನಲ್ಲಿ ವ್ಯತ್ಯಾಸ ಇದ್ರೆ ಕಟ್ಟಬೇಡಿ

    – ಪಬ್ಲಿಕ್ ಟಿವಿಯ ನಿರಂತರ ಅಭಿಯಾನದಿಂದ ಎಚ್ಚೆತ್ತ ಬೆಸ್ಕಾಂ
    – ಸರಾಸರಿ ಬಿಲ್ ನೀಡಿದ್ದರಿಂದ ದುಬಾರಿ ಬಂದಿದೆ
    – ಜೂನ್‍ವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲ್ಲ
    – ದುಬಾರಿ ಬಿಲ್ ಪಾವತಿಸಿದ್ರೆ ಮೇ ತಿಂಗಳಲ್ಲಿ ಕಡಿತ
    – ಸಮಸ್ಯೆ ಇದ್ರೆ ಮತ್ತೆ ರೀಡಿಂಗ್

    ಬೆಂಗಳೂರು: ದುಬಾರಿ ವಿದ್ಯುತ್ ಬಿಲ್ ಪಡೆದು ಸಂಕಷ್ಟಕ್ಕೆ ಸಿಲುಕಿದ ಜನತೆಗೆ ಗುಡ್‍ನ್ಯೂಸ್. ದುಬಾರಿ ಬಿಲ್ ಪಡೆದ ಗ್ರಾಹಕರು ತಮ್ಮ ಗೊಂದಲಗಳನ್ನು ಬಗೆಹರಿಸಿ ಬಿಲ್ ಕಟ್ಟುವಂತೆ ಬೆಸ್ಕಾಂ ಹೇಳಿದ್ದು ಈ ಮೂಲಕ ಪಬ್ಲಿಕ್ ಟಿವಿ ನಿರಂತರ ಅಭಿಯಾನಕ್ಕೆ ದೊಡ್ಡ ಗೆಲುವು ಸಿಕ್ಕಿದೆ.

    ಪಬ್ಲಿಕ್ ಟಿವಿ ಕಳೆದ ವಾರದಿಂದಲೇ ದುಬಾರಿ ಬಿಲ್ ವಿಚಾರವನ್ನು ಪ್ರಸ್ತಾಪ ಮಾಡಿ ವರದಿ ಮಾಡಿತ್ತು. ಇಂದು ಬೆಳಗ್ಗೆಯಿಂದಲೇ ಗ್ರಾಹಕರಿಗೆ ಹಳೆ ಬಿಲ್ ಎಷ್ಟು ಇತ್ತು ಈಗ ಲಾಕ್‍ಡೌನ್ ಅವಧಿಯಲ್ಲಿ ಎಷ್ಟು ಬಿಲ್ ಬಂದಿದೆ ಎಂಬ ವಿಚಾರವನ್ನು ಸಾಕ್ಷ್ಯ ಸಮೇತ ಮುಂದಿಟ್ಟು ನಿರಂತರವಾಗಿ ಪ್ರಸಾರ ಮಾಡಿತ್ತು. ಅಷ್ಟೇ ಅಲ್ಲದೇ ಎಲ್ಲ ಎಸ್ಕಾಂಗಳ ಎಂಡಿಗಳ ಹೆಸರು, ಫೋನ್ ನಂಬರ್, ಇಮೇಲ್, ಟ್ವಿಟ್ಟರ್ ಹ್ಯಾಂಡಲ್ ಹಾಕಿ ಅಭಿಯಾನ ಮಾಡಿತ್ತು.

    ಈ ಅಭಿಯಾನದ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಎಂಡಿ ರಾಜೇಶ್ ಗೌಡ ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಬಿಲ್ ವಿಚಾರದಲ್ಲಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

    ಬೇಸಿಗೆ ಹಾಗೂ ಲಾಕ್ ಡೌನ್ ಇರುವುದರಿಂದ ವಿದ್ಯುತ್ ಬಳಕೆ ಹೆಚ್ಚಾಗಿದೆ. ಐಟಿ ಬಿಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿದ್ದರಿಂದ ಬಿಲ್ ಹೆಚ್ಚಾಗಿರಬಹುದು. ಅಲ್ಲದೆ 2 ತಿಂಗಳ ಬಿಲ್ ಆದ್ದರಿಂದ ಇದು ಹೆಚ್ಚಾಗಿದೆ ಎಂದು ಭಾವಿಸಿದ್ದೇನೆ. ಕೋವಿಡ್ 19 ಸುರಕ್ಷತೆ ದೃಷ್ಟಿಯಿಂದ ಹಲವು ಕಡೆಗಳಲ್ಲಿ ಮೀಟರ್ ರೀಡರ್ಸ್ ಮನೆಗಳಿಗೆ ಹೋಗಿಲ್ಲ. ಇದಕ್ಕಾಗಿ 3 ತಿಂಗಳ ಸರಾಸರಿ ಬಿಲ್ ಮಾಡಲು ಸೂಚಿಸಿದ್ದೆವು ಎಂಬ ವಿಚಾರವನ್ನು ಹೇಳಿದರು.

    ಮಾರ್ಚ್ ಹಾಗೂ ಏಪ್ರಿಲ್ 2 ರೀಡಿಂಗ್ ಇದ್ದು ಅದನ್ನು ನೋಡಿ ಲೆಕ್ಕ ಹಾಕಲಾಗಿದೆ. ಬಳಕೆ ಜಾಸ್ತಿ ಆದಂತೆ ಸ್ಲಾಬ್ ಲಿಮಿಟ್ ಸಹ ಜಾಸ್ತಿ ಆಗುತ್ತದೆ. ಬಿಲ್‍ನಲ್ಲಿ ವ್ಯತ್ಯಾಸ ಇದ್ರೆ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ. ಪರಿಶೀಲನೆ ಮಾಡಿ ಸರಿಯಾದ ಮೇಲೆ ಕಟ್ಟಬಹುದು. ಸಮಸ್ಯೆ ಇರುವವರು ಮೀಟರ್ ರೀಡಿಂಗ್ ಗೆ ಅವಕಾಶ ಮಾಡಿಕೊಡಿ. ನಾವು ಮೀಟರ್ ರೀಡಿಂಗ್ ಮಾಡಿದ ನಂತರ ನೀಡುವ ಬಿಲ್ ಪಾವತಿಸಬಹುದು ಎಂದು ರಾಜೇಶ್ ಗೌಡ ತಿಳಿಸಿದರು.

    ಲಾಕ್‍ಡೌನ್ ಆಗಿದ್ದರಿಂದ ಕೆಲವರು ಮನೆಯನ್ನು ತೊರೆದು ಬೇರೆ ಕಡೆಯಲ್ಲಿದ್ದರು. ಅವರು ಮನೆಯಲ್ಲಿ ಇಲ್ಲದೇ ಇದ್ದರೂ ದುಬಾರಿ ಬಿಲ್ ಬಂದಿದೆ ಹೇಗೆ ಎಂಬ ಪಬ್ಲಿಕ್ ಟಿವಿಯ ವರದಿಗಾರರ ಪ್ರಶ್ನೆಗೆ ಈ ರೀತಿ ಸಮಸ್ಯೆ ಆಗಿದ್ದಲ್ಲಿ ಗ್ರಾಹಕರು ವಾಟ್ಸಪ್, ಇಮೇಲ್ ಮೂಲಕ ನಮಗೆ ಬಿಲ್ ಕಳುಹಿಸಿ. ಇದನ್ನು ಪರಿಶೀಲಿಸಿ ನಾವು ಬಿಲ್ ನೀಡುತ್ತೇವೆ. ಬೇಸಿಗೆ ಕಾರಣದಿಂದ ಕೊಂಚ ಬಿಲ್ ಹೆಚ್ಚಾಗಿದೆ. ಬಿಲ್ ವಿಚಾರದಲ್ಲಿ ಸ್ಪಷ್ಟತೆ ಬರುವವರೆಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದರು.

    ಭಾರತದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ನಮ್ಮ ಬಿಲ್ಲಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ. ವಿದ್ಯುತ್ ಬಳಕೆ ಜಾಸ್ತಿಯಾದಂತೆ ವಿದ್ಯುತ್ ಬಿಲ್ ಸ್ಲಾಬ್ ಏರಿಕೆಯಾಗುತ್ತದೆ. ರೀಡಿಂಗ್ ಸಮಯದಲ್ಲಿ ಹಲವು ಮಂದಿ ಡೋರ್ ಲಾಕ್ ಮಾಡಿದ್ದರು. ಡೋರ್ ಲಾಕ್ ಅಂತ ಮೀಟರ್ ರೀಡಿಂಗ್ ಯಂತ್ರದಲ್ಲಿ ಪ್ರೆಸ್ ಮಾಡಿದ್ರೆ ಸರಾಸರಿ ಬಿಲ್ ಬರುತ್ತದೆ. ಈ ಕಾರಣದಿಂದ ಬಿಲ್ ಏರಿಕೆಯಾಗಿರಬಹುದು. ಯಾವುದೇ ಕಾರಣಕ್ಕೂ ನಮ್ಮಿಂದ ಒಂದು ರೂ. ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗುವುದು ಎಂದು ಬೆಸ್ಕಾಂ ಎಂಡಿ ರಾಜೇಶ್ ಗೌಡ ಹೇಳಿದರು.

    ಬಿಲ್ ಬಗ್ಗೆ ಗೊಂದಲವಿದ್ರೆ 1912 ಸಹಾಯವಾಣಿಗೆ ಕರೆಮಾಡಿ ಪರಿಹರಿಸಿಕೊಳ್ಳಬಹುದು. ವಿದ್ಯುತ್ ಬಿಲ್ ನಲ್ಲಿ ನಿಗದಿತ ಶುಲ್ಕ, ವಿದ್ಯುತ್ ಶುಲ್ಕ ಮತ್ತು ತೆರಿಗೆ ಎಂಬ ಮೂರು ಅಂಶಗಳಿವೆ. ಕೆಲವು ಗ್ರಾಹಕರಿಗೆ ಸೀಲ್ಡೌನ್, ಡೋರ್ ಲಾಕ್, ಕ್ವಾರಂಟೈನ್ ಕಾರಣದಿಂದ ಸರಾಸರಿ ಬಿಲ್ ನೀಡಲಾಗಿದೆ. ಒಂದು ವೇಳೆ ಸರಾಸರಿ ಬಿಲ್ ತಾಳೆಯಾಗದಿದ್ದಲ್ಲಿ ಸಹಾಯವಾಣಿಗೆ ಕರೆಮಾಡಿದ್ರೆ ಪರಿಷ್ಕೃತ ಬಿಲ್ ನೀಡಲಾಗುವುದು ಎಂದು ತಿಳಿಸಿದರು.

    ಈಗಾಗಲೇ ಬಿಲ್ ಪಾವತಿಸಿದವರಿಗೆ ಅವರ ಬಿಲ್ ಬಗ್ಗೆ ಅನುಮಾನವಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಒಂದು ಕಡಿಮೆ ವಿದ್ಯುತ್ ಬಳಸಿಯೂ ದುಬಾರಿ ಬಿಲ್ ಬಂದಿದ್ದರೆ ಮೇ ತಿಂಗಳ ವಿದ್ಯುತ್ ಬಿಲ್ ನಲ್ಲಿ ಕಡಿತ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಬಿಲ್ ಕಟ್ಟಲು ತಡಮಾಡಿದವರ ಮನೆಗೆ ವಿದ್ಯುತ್ ಸಂಪರ್ಕ ತೆಗೆಯುವುದು ಬೇಡ ಎಂದು ಸೂಚನೆ ನೀಡಲಾಗಿದೆ. ಜೂನ್ ವರೆಗೂ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಮಾಡುವುದಿಲ್ಲ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸ್ಪಷ್ಟನೆ ನೀಡಿದರು.

     

  • ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್

    ಕೊರೊನಾ ಜೊತೆಗೆ ಹೊಡೀತು ಕರೆಂಟ್ ಶಾಕ್- ಸರಾಸರಿ ಬದಲಿಗೆ ಒನ್ ಟು ಡಬಲ್ ಬಿಲ್

    – ಗ್ರಾಹಕರಿಗೆ ಬರೆ, ಸರ್ಕಾರದ ವಸೂಲಿಗೆ ಜನಾಕ್ರೋಶ

    ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ.

    ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ ಎರಡೂ ತಿಂಗಳ ಅಂದ್ರೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ನೀಡಿವೆ. ಹಿಂದಿನ ಮೂರು ತಿಂಗಳ ಸರಾಸರಿ ಆಧಾರದ ಮೇಲೆ ಬಿಲ್ ನೀಡಿರುವುದು ಅವೈಜ್ಞಾನಿಕ ಎಂದು ಸಾವಿರಾರು ಗ್ರಾಹಕರು ಆರೋಪಿಸುತ್ತಿದ್ದಾರೆ.

    ವಿದ್ಯುತ್ ನಿಗಮ ಮಾರ್ಚ್, ಏಪ್ರಿಲ್ ಬಿಲ್ ಸೇರಿಸಿ ಬಿಲ್ ಕೊಡುತ್ತಿದೆ. 2 ತಿಂಗಳ ಬಿಲ್ ಅಂದರೆ ಮಾಮೂಲಿನ 2 ಪಟ್ಟು ಅಂತಿದ್ದವರಿಗೆ ಶಾಕ್ ಆಗಿದೆ. 2 ಪಟ್ಟು ಬದಲಿಗೆ ನೂರಾರು ರೂಪಾಯಿ ಹೆಚ್ಚಾಗಿ ಬಿಲ್ ಬಂದಿದೆ. ತಿಂಗಳ ಸರಾಸರಿ ವಿದ್ಯುತ್ ಬಿಲ್ 500 ರೂಪಾಯಿ ಬರುತ್ತಿತ್ತು. ಆದರೆ ಈಗ 700, 800, 1400 ರೂಪಾಯಿವರೆಗೆ ಬಿಲ್ ಬಂದಿದೆ. ಮೀಟರ್ ರೀಡಿಂಗ್ ಮಾಡದೆ ಸರಾಸರಿಯಲ್ಲಿ ಬಿಲ್ ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯುತ್ ನಿಗಮವು ಸಾಫ್ಟ್‌ವೇರ್ ಸಮಸ್ಯೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಹೇಳಿದೆ. ಇತ್ತ ಬಿಲ್ ಲೋಪ-ದೋಷ ಶೀಘ್ರದಲ್ಲೇ ಸರಿಪಡಿಸ್ತೇವೆ ಅಂತ ಅಧಿಕಾರಿಗಳ ಸಬೂಬು ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಇದೇ ಸಮಸ್ಯೆ ಉಂಟಾಗಿದೆ. ಕೆಲವರು ಲಾಕ್‍ಡೌನ್ ಆರಂಭದಲ್ಲೇ ಮನೆಗೆ ಬೀಗ ಹಾಕಿ ಊರಿಗೆ ಹೋಗಿದ್ದಾರೆ. ಸುಮಾರು ಒಂದೂವರೆ ತಿಂಗಳು ಕರೆಂಟೇ ಬಳಸಿಲ್ಲ. ಆದರೂ ಅವರಿಗೆಲ್ಲಾ ಡಬಲ್, ತ್ರಿಬಲ್ ಬಿಲ್ ಬಂದುಬಿಟ್ಟಿದೆ.

    ಬೆಂಗಳೂರು ಗ್ರಾಹಕ ಕೃಷ್ಣಪ್ಪ ಅವರಿಗೆ ಫೆಬ್ರವರಿನಲ್ಲಿ 2,397 ರೂ. ಬಿಲ್ ಬಂದಿತ್ತು. ಏಪ್ರಿಲ್ ಬಿಲ್ ಬಂದಿಲ್ಲ. ಆದರೂ ಪೇಟಿಎಂ ಮೂಲಕ ಅವರು 2,263 ರೂ. ಕಟ್ಟಿದ್ದಾರೆ. ಈಗ 5,409 ರೂ. ಬಿಲ್ ಬಂದಿದೆ.

    ಕರೆಂಟ್ ಶಾಕ್ ಮರ್ಮ:
    * ವಿದ್ಯುತ್ ಬಳಕೆ ಸ್ಲ್ಯಾಬ್ ಆಧಾರದಲ್ಲಿ ಬಿಲ್ ಕೊಡ್ತಿವೆ
    * ವಿದ್ಯುತ್ ಬಳಕೆ ಆಧರಿಸಿ ಬರುವ ಯೂನಿಟ್ ಮೇಲೆ ಸ್ಲ್ಯಾಬ್, ಶುಲ್ಕ ನಿಗದಿ
    * ಉದಾ: ತಿಂಗಳಿಗೆ 30 ಯೂನಿಟ್ ಬಳಕೆಗೆ ಪ್ರತಿ ಯೂನಿಟ್‍ಗೆ 3.75 ರೂ. ಇದ್ದರೆ, 70 ಯೂನಿಟ್‍ವಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 5.20 ರೂಪಾಯಿ
    * 100 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ 6.75 ರೂ.
    * 100 ಯೂನಿಟ್ ಮೇಲ್ಪಟ್ಟ ಬಳಕೆಗೆ ಪ್ರತಿ ಯೂನಿಟ್‍ಗೆ 7.80 ರೂ. ಇದೆ.
    * ಆದರೆ, ಮೀಟರ್ ರೀಡಿಂಗ್ ಸಂದರ್ಭದಲ್ಲಿ 2 ತಿಂಗಳು ಒಟ್ಟಾಗಿ ಬಿಲ್ ಮಾಡ್ತಿದ್ದಾರೆ.
    * ಇದೇ ಡಬಲ್, ತ್ರಿಬಲ್ ಬಿಲ್ ಬರ್ತಿರೋದಕ್ಕೆ ಕಾರಣ
    * ಕಂಪ್ಯೂಟರ್ ಸಾಫ್ಟ್‍ವೇರ್ ಈ ಬಿಲ್‍ಗಳನ್ನು ಸರಾಸರಿ ಆಧಾರದ ಮೇಲೆ ಜನರೇಟ್ ಮಾಡ್ತಿದೆ.
    * ಸ್ಲ್ಯಾಬ್ ವಿಚಾರ ಸಂಬಂಧ ಸಾಫ್ಟ್‍ವೇರ್‍ನಲ್ಲಿ ಗೊಂದಲ ಆಗಿರೋ ಸಾಧ್ಯತೆ ಇದೆ.

  • ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರ್ಕಾರದ ಆದೇಶ

    ವಿದ್ಯುತ್ ಬಿಲ್ ಸಂಗ್ರಹಕ್ಕೆ ಸರ್ಕಾರದ ಆದೇಶ

    ಬೆಂಗಳೂರು: ಲಾಕ್‍ಡೌನ್ ನಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಬಿಲ್ ಸಂಗ್ರಹಕ್ಕೆ ಎಸ್ಕಾಂಗೆ ಸರ್ಕಾರ ಆದೇಶ ನೀಡಿದೆ.

    ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗೆ ಸರ್ಕಾರ ನಿರ್ದೇಶನ ನೀಡಿದ್ದು, ಸಾರ್ವಜನಿಕರ ಸಮರ್ಪಕ ಮಾಹಿತಿ ನೀಡಿ ಬಿಲ್ ಸಂಗ್ರಹಿಸುವಂತೆ ಆದೇಶಿಸಿದೆ. ಆನ್‍ಲೈನ್, ವಾಟ್ಸಪ್, ಈ ಮೇಲ್ ಗಳ ಮೂಲಕ ವಿದ್ಯುತ್ ಬಳಕೆಯ ಬಗ್ಗೆ ಬಿಲ್ ಗಳನ್ನು ಸಾರ್ವಜನಿಕರಿಗೆ ನೀಡಲು ಸೂಚನೆ ನೀಡಲಾಗಿದೆ. ಗ್ರಾಹಕರು ಎಸ್ಕಾಂ ಮೊಬೈಲ್ ಆ್ಯಪ್ ಮೂಲಕ ಬಿಲ್ ಪಡೆಯಬಹುದು ಅಥವಾ 1912 ಹೆಲ್ಪ್ ಲೈನ್ ನಂಬರ್‍ಗೆ ಕರೆ ಮಾಡಿ ನಿಮ್ಮ ವಿದ್ಯುತ್ ಬಿಲ್ ಮಾಹಿತಿ ಪಡೆಯಬಹುದಾಗಿದೆ.

    ಎಸ್ಕಾಂಗೆ ಸಾರ್ವಜನಿಕರು ನೀಡಿದ ಫೋನ್, ವಾಟ್ಸಪ್, ಈ ಮೇಲ್‍ಗಳಿಗೆ, ಮೆಸ್ಸೆಜ್ ಗಳ ಮೂಲಕ ವಿದ್ಯುತ್ ಬಿಲ್, ಎಪ್ರಿಲ್ ತಿಂಗಳ ವಿದ್ಯುತ್ ಬಳಕೆ ವಿವರ ಕಳಿಸಲು ಸರ್ಕಾರ ಸೂಚಿಸಿದೆ. ಗ್ರಾಹಕರು ಆನ್‍ಲೈನ್ ಮೂಲಕ, ವಿದ್ಯುತ್ ನಿಗಮದ ಕಚೇರಿ ಕ್ಯಾಶ್ ಕೌಂಟರ್, ಕರ್ನಾಟಕ ಒನ್ ವೆಬ್ ಸೈಟ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಸ್ಪಾಟ್ ಬಿಲ್ಲಿಂಗ್ ಮಷೀನ್ ಮೂಲಕ ಬಿಲ್ ಪಾವತಿಸಬಹುದು.