Tag: ವಿದ್ಯುತ್ ಕಳ್ಳತನ

  • ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ಬೆಂಗಳೂರು: ಜೆ.ಪಿ.ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ವಿದ್ಯುತ್ ಕಳವು ಪ್ರಕರಣದಲ್ಲಿ (Electricity Illegal Connection) ಹೆಚ್‌ಡಿಕೆ ವಿರುದ್ಧ ಬೆಸ್ಕಾಂ ಜಾಗೃತದಳ ಪ್ರಕರಣ ದಾಖಲಿಸಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ವಿದ್ಯುತ್ ಕಲಾಂ 135 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆ ನಿವಾಸಕ್ಕೆ ಅಕ್ರಮ ವಿದ್ಯುತ್‌ – ಮಾಜಿ ಸಿಎಂಗೆ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದ ಕಾಂಗ್ರೆಸ್‌

    ಮಾಜಿ ಸಿಎಂ ವಿದ್ಯುತ್‌ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಗಂಭೀರ ಆರೋಪ ಮಾಡಿತ್ತು. ಒಬ್ಬ ಮಾಜಿ ಸಿಎಂ ವಿದ್ಯುತ್‌ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ. ಇಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿಗೆ ಅರ್ಜಿ ಹಾಕಬಹುದಿತ್ತು ಎಂದು ಕಾಂಗ್ರೆಸ್‌ ಚಾಟಿ ಬೀಸಿತ್ತು.

    ವಿದ್ಯುತ್‌ ಕಳ್ಳತನ ಮಾಡಿದ್ದಾರೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಹೆಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದರು. ಇದು ಅಚಾತುರ್ಯದಿಂದ ಆದ ಘಟನೆ. ದಂಡ ಕಟ್ಟುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ದೀಪಾವಳಿಗೆ ಕರೆಂಟ್‌ ಕಳ್ಳತನ – ಬೆಸ್ಕಾಂ ನೋಟಿಸ್‌ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್‌ಡಿಕೆ

    ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್‌ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್‌ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್‌ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್‌ ಜೋರ್ಡ್‌ನಿಂದಲೇ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನು ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದರು.

  • 2008ರಲ್ಲಿ ವಿದ್ಯುತ್ ಕಳವು, 70ರ ವೃದ್ಧನಿಗೆ 19 ಲಕ್ಷ ದಂಡ, ಜೈಲು ಶಿಕ್ಷೆ

    2008ರಲ್ಲಿ ವಿದ್ಯುತ್ ಕಳವು, 70ರ ವೃದ್ಧನಿಗೆ 19 ಲಕ್ಷ ದಂಡ, ಜೈಲು ಶಿಕ್ಷೆ

    ಮುಂಬೈ: 2008ರಲ್ಲಿ ವಿದ್ಯುತ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಜಿಲ್ಲಾ ನ್ಯಾಯಾಲಯ ಈಗ ತೀರ್ಪು ಪ್ರಕಟಿಸಿದ್ದು, 70 ವರ್ಷದ ವೃದ್ಧನಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ ಬರೋಬ್ಬರಿ 19 ಲಕ್ಷ ರೂ.ಗಳ ದಂಡ ವಿಧಿಸಿದೆ.

    ಜಿಲ್ಲಾ ನ್ಯಾಯಾಧೀಶರಾದ ಪಿ.ಪಿ.ಯಾದವ್ ಅವರು ಈ ಆದೇಶ ಪ್ರಕಟಿಸಿದ್ದು, 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135ರ ಅಡಿಯಲ್ಲಿ ಶಿಕ್ಷಾರ್ಹ ಅಪಾರಾಧದ ಅಡಿ ಮೊನುದ್ದೀನ್ ಮೆಹಬೂಬ್ ಶೇಖ್ ನನ್ನು ತಪ್ಪಿತಸ್ಥನೆಂದು ಹೇಳಿದೆ. ವಿದ್ಯುತ್ ಕದಿಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಸೆಕ್ಷನ್ ರೂಪಿಸಲಾಗಿದೆ.

    ಫೆಬ್ರವರಿ 6ರಂದು ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಫೆಬ್ರವರಿ 9ರಂದು ಸಾರ್ವಜನಿಕವಾಗಿ ಲಭ್ಯವಾಗಿದೆ. ಶೈಖ್ ಪವರ್‍ಲೂಮ್ ಫ್ಯಾಕ್ಟರಿ ನೌಕರನಾಗಿದ್ದು, ಪರಿಶೀಲನೆ ವೇಳೆ ವಿದ್ಯುತ್ ಕದ್ದಿರುವುದು ತಿಳಿದಿದೆ. ಅಲ್ಲದೆ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು.

    ಅಡಿಶನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಾದು ಅವರು ವಾದ ಮಂಡಿಸಿದ್ದು, 2008 ಮಾರ್ಚ್ 10ರಂದು ಫ್ಯಾಕ್ಟರಿ ಮೇಲೆ ವಿದ್ಯುತ್ ಪ್ರಸರಣ ಕಂಪನಿಯವರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಈ ವೇಳೆ ಅಪರಾಧಿ ಸ್ಥಳದಲ್ಲೇ ಇದ್ದ. ಅಂಡರ್‍ಗ್ರೌಂಡ್ ಕೇಬಲ್‍ನಿಂದ ನೇರವಾಗಿ ಫ್ಯಾಕ್ಟರಿಗೆ ವಿದ್ಯುತ್ ಸಂಪರ್ಕ ಮಾಡಿರುವುದು ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ತಿಳಿದಿದೆ. ಔಟ್‍ಲೆಟ್‍ನ ಅಧಿಕೃತ ಮಾರ್ಗವನ್ನು ಬೈಪಾಸ್ ಮಾಡಿ ಕೇಬಲ್‍ನ್ನು ಮುಖ್ಯ ಸರಬರಾಜು ಮಾರ್ಗಕ್ಕೆ ಸೇರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಈ ಕುರಿತು ಲೆಕ್ಕ ಹಾಕಲಾಗಿದ್ದು, 2007, ಮೇ 16 ರಿಂದ 2008ರ ಮಾರ್ಚ್ 10ರ ವರೆಗೆ ಒಟ್ಟು 94,589 ಯುನಿಟ್ ವಿದ್ಯುತ್‍ನ್ನು ಕದಿಯಲಾಗಿದ್ದು, ಇದರ ಬೆಲೆ 6,32,454 ರೂ ಆಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿವೇಕ್ ಕಾದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಅಪರಾಧ ತುಂಬಾ ಗಂಭೀರವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದಾರೆ.

    ವಿದ್ಯುತ್ ಕದಿಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕದ್ದ ವಿದ್ಯುತ್‍ನ ಮೂರು ಪಟ್ಟು ಹಣವನ್ನು ದಂಡ ನೀಡಬೇಕು. ಅಲ್ಲದೆ ಕನಿಷ್ಟ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವಾದ ಆಲಿಸಿದ ನ್ಯಾಯಾಧೀಶರು ಅಪರಾಧಿಗೆ 2 ವರ್ಷಗಳ ಕಠಿಣ ಶಿಕ್ಷೆ ಹಾಗೂ 19 ಲಕ್ಷ ರೂ. ದಂಡ ವಿಧಿಸಿದ್ದಾರೆ.