ಮಂಡ್ಯ: ಜಿಲ್ಲೆಯಲ್ಲಿ ರಾತ್ರಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಭಾರೀ ಮಳೆಗೆ ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ. ಅಷ್ಟೇ ಅಲ್ಲದೇ ಭಾರೀ ಮಳೆಯಿಂದಾಗಿ ಬಡ ಕುಟುಂಬವೊಂದು ನೆರೆ ಮನೆಯ ಛಾವಣಿಯಲ್ಲಿ ರಾತ್ರಿ ಕಳೆದಿದೆ.
ಮದ್ದೂರು ಪಟ್ಟಣದಲ್ಲಿ ಮಳೆಯಿಂದ ಬಡ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಗಿದೆ. ರಾತ್ರಿ ಏಕಾಏಕಿ ಸುರಿದ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದೆ. ಪರಿಣಾಮ ವೃದ್ಧ ಮಹಿಳೆಯೊಬ್ಬರು ಸಣ್ಣ ಮಕ್ಕಳೊಂದಿಗೆ ಚಳಿಯಲ್ಲಿ ಪಕ್ಕದ ಮನೆಯ ಛಾವಣಿ ಕೆಳಗೆ ರಾತ್ರಿಯೆಲ್ಲಾ ಕಾಲ ಕಳೆದಿದ್ದಾರೆ. ಅಷ್ಟೇ ಅಲ್ಲದೇ ಮನೆಗೆ ನೀರು ನುಗ್ಗಿದ್ದರಿಂದ ದವಸ, ಧಾನ್ಯಗಳು ಸೇರಿ ಮನೆಯಲ್ಲಿದ್ದ ಪದಾರ್ಥಗಳು ನೀರು ಪಾಲಾಗಿದೆ.
ವೃದ್ಧ ಮಹಿಳೆ ನಾವು ಹೇಗೆ ಜೀವನ ಮಾಡುವುದು ಎಂದು ಕಂಗಾಲಾಗಿದ್ದಾರೆ. ಮಳೆಯಿಂದ ಹತ್ತಕ್ಕೂ ಹೆಚ್ಚು ಮರ, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಕಂಬಗಳು ಬಿದ್ದಿರುವುದರಿಂದ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.
ಚಿಕ್ಕಮಗಳೂರು: ಮಲೆನಾಡು ಕಳೆದೊಂದು ವಾರದಿಂದ ಅಕ್ಷರಶಃ ಮಳೆ ನಾಡಾಗಿದೆ. ಇದರಿಂದ ಜಿಲ್ಲಾದ್ಯಂತ 120ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದರೆ, ಎರಡು ಮನೆಗಳು ಸಂಪೂರ್ಣ ನೆಲಸಮವಾಗಿದೆ. ಜೊತೆಗೆ ಮಲೆನಾಡು ಭಾಗದಲ್ಲಿ 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಇಂದಿಗೂ ಮಲೆನಾಡ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.
ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಸುಮಾರು 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮಲೆನಾಡಿನ ನೂರಾರು ಗ್ರಾಮಗಳು ಕಗ್ಗತ್ತಲಲ್ಲಿ ಬದುಕುವಂತಾಗಿದೆ. ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆ ತುಂಬಾ ಹರಡಿಕೊಂಡಿವೆ. ಕೆಇಬಿಯವರು ಇಂದಿಗೂ ದುರಸ್ಥಿ ಮಾಡಲು ಸಾಧ್ಯವಾಗಿಲ್ಲ.
ಕೆಲ ಗ್ರಾಮಗಳು ಇಂದಿಗೂ ಕಗ್ಗತ್ತಲಲ್ಲಿ ಬದುಕುತ್ತಿವೆ. ಯುಪಿಎಸ್ ಇರುವಂತ ಮನೆಯವರು ಕೂಡ ಕರೆಂಟ್ ಕಾಣದೆ ನಾಲ್ಕು ದಿನ ಕಳೆದಿದೆ. ಈಗ ಆನ್‍ಲೈನ್ ಶಿಕ್ಷಣ ಆರಂಭವಾಗಿದೆ. ಮಲೆನಾಡಿನ ಮಕ್ಕಳು ವಿದ್ಯುತ್ ಇಲ್ಲದೆ, ಮೊಬೈಲ್ ಚಾರ್ಜ್ ಇಲ್ಲದೆ ಸೂಕ್ತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಯುಪಿಎಸ್ ಇದ್ದವರು ಕೇವಲ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಯುಪಿಎಸ್‍ಗಳನ್ನ ಬಳಸುತ್ತಿದ್ದಾರೆ. ಇದು ಮಲೆನಾಡ ಸದ್ಯದ ದುಸ್ಥಿತಿಯಾಗಿದೆ.
ಸರ್ಕಾರ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ನಿರಂತರವಾಗಿ ಸುರಿದ ಮಳೆ ಮಲೆನಾಡಿಗರ ಜನಜೀವನವನ್ನ ಅಸ್ತವ್ಯಸ್ತ ಮಾಡಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಅನೇಕ ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡುತ್ತಿದೆ. ಮತ್ತೊಂದೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.
ಹಾವೇರಿ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಧಾರಾಕಾರವಾಗಿ ಮಳೆಯಾಗಿದೆ. ಜಿಲ್ಲೆಯ ರಾಣೇಬೆನ್ನೂರಿನ ಮೃತ್ಯುಂಜಯ ನಗರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರು ಹರಸಾಹಸಪಟ್ಟಿದ್ದಾರೆ. ಒಂದು ಗಂಟೆ ಕಾಲ ಸುರಿದ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಹಾವೇರಿ ತಾಲೂಕು ಸೇರಿದಂತೆ ಬ್ಯಾಡಗಿ ವಿವಿಧ ಗ್ರಾಮದಲ್ಲಿ ಉತ್ತಮ ಮಳೆ ಆಗಿದೆ. ಕಳೆದ ಒಂದು ವಾರದಿಂದ ಮಳೆ ಇಲ್ಲದೆ ಜಿಲ್ಲೆಯ ಜನರು ಆತಂಕಗೊಂಡಿದ್ದರು. ಇದೀಗ ಮಳೆಯಿಂದ ಜಿಲ್ಲೆಯ ಜನರು ಸಂತಸಗೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ತಡರಾತ್ರಿ ಸುರಿದ ಮಳೆಯಿಂದಾಗಿ ಹಿರೇಹಳ್ಳ ಮೈದುಂಬಿ ಹರಿಯುತ್ತಿದೆ. ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಸಮೀಪದಲ್ಲಿರುವ ಹಿರೇಹಳ್ಳ ಚೆಕ್ ಡ್ಯಾಂ ಭರ್ತಿಯಾಗಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.
ಗಡಿ ಜಿಲ್ಲೆ ಚಾಮರಾಜನಗರದ ಹಲವೆಡೆ ಕಳೆದ ರಾತ್ರಿಯಿಡಿ ಸೋನೆ ಮಳೆಯಾಗಿದೆ. ಗುರುವಾರ ಸಂಜೆ ಆರಂಭವಾದ ತುಂತುರು ಮಳೆ ರಾತ್ರಿಯಿಡಿ ಬಿದ್ದಿದೆ. ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರೈತರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಕೂಡ ಚಾಮರಾಜನಗರದಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ಮಳೆ ಬೀಳುವ ಸಾಧ್ಯತೆಯಿದೆ.
ಕಲಬುರಗಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಎರಡು ಗಂಟೆಗಳ ಕಾಲ ಸತತ ಮಳೆಯಾಗಿದ್ದು, ಈ ಮೂಲಕ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ವಾಡಿಕೆ ಪ್ರಕಾರ ಜೂನ್ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿತ್ತು. ಆದರೆ ಈ ಬಾರಿ ವಾಡಿಕೆಯಂತೆ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಮುಂದಿನ ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನೂ ಗದಗ ಜಿಲ್ಲೆಯಲ್ಲೂ ವರುಣನ ಸಿಂಚನ ಶುರುವಾಗಿದೆ. ತಡರಾತ್ರಿಯಿಂದ ತುಂತುರು ಮಳೆ ಆರಂಭವಾಗಿದ್ದು, ಬಿಸಿಲು, ಧೂಳುನಿಂದ ಕಂಗೆಟ್ಟ ಜನ್ರಿಗೆ ತುಂತುರು ಮಳೆ ಸ್ವಲ್ಪ ತಂಪೆರೆದಂತಾಗಿದೆ. ರೈತರು ಮುಂಗಾರು ಬಿತ್ತನೆಗೆ ಮುಗಿಲಾಚೆ ನೋಡುವಂತಾಗಿತ್ತು. ಸದ್ಯ ಮಳೆ ಆರಂಭವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಧಾರವಾಡದಲ್ಲಿ ಕೂಡ ಧಾರಾಕಾರ ಮಳೆ ಸುರಿದಿದೆ. ಗುಡುಗು ಸಿಡಲು ಸಹಿತ ಸುರಿದ ಮಳೆಯಿಂದ ರೈತರು ಕೊಂಚ ನೆಮ್ಮದಿಯ ನಿಟ್ಡುಸಿರು ಬಿಟ್ಟಿದ್ದಾರೆ. ಹೊಲಗಳಲ್ಲಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಇಲ್ಲದ ಕಾರಣ ಕಂಗಾಲಾಗಿದ್ದರು. ಈ ಮಳೆಯಿಂದ ರೈತರು ಕೊಂಚ ಸಮಾಧಾನವಾಗುವಂತೆ ಆಗಿದೆ.
ಟ್ರಾಫಿಕ್ ಜಾಮ್:
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕೊಪ್ಪಗೇಟ್ ಬಳಿ ರಾತ್ರಿ ಸುರಿದ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದವು. ರಸ್ತೆಗೆ ಅಡ್ಡಲಾಗಿ ವಿದ್ಯುತ್ ತಂತಿಗಳು ಬಿದ್ದಿದ್ದರಿಂದ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗಟ್ಟಲೇ ಟ್ರಾಫಿಕ್ ಜಾಮ್‍ನಲ್ಲಿ ವಾಹನ ಸವಾರರು ಪರದಾಡುವಂತಾಗಿತ್ತು. ಅಲ್ಲದೇ ಟ್ರಾಫಿಕ್ ಜಾಮ್‍ನಿಂದ ಕೊಪ್ಪ ಗೇಟ್ ಗ್ರಾಮದ ಪುಟ್ಟ ರಸ್ತೆಗಳಲ್ಲಿ ಬೈಕ್ ಮತ್ತು ಕಾರುಗಳ ಓಡಾಟಕ್ಕೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕಂಬ ಮತ್ತು ತಂತಿಗಳನ್ನು ತೆರವು ಮಾಡಿದರು.