Tag: ವಿದ್ಯಾಥಿಗಳು

  • SSLC ಪರೀಕ್ಷೆ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ : ಸುರೇಶ್ ಕುಮಾರ್

    SSLC ಪರೀಕ್ಷೆ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ : ಸುರೇಶ್ ಕುಮಾರ್

    ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮೈಸೂರಿನಲ್ಲಿ ಹೇಳಿದ್ದಾರೆ.

    ಕಳೆದ ಬಾರಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಅದೇ ಮಾದರಿಯಲ್ಲಿ ಈ ಬಾರಿಯೂ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿಯಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆ ನಡೆಸುವ ಸಂಬಂಧ ಈ ವಾರವೇ ಎಲ್ಲಾ ಜಿಲ್ಲೆಗಳ ಡಿಡಿಪಿಐ ಮತ್ತು ಬಿಇಒಗಳ ಸಭೆ ನಡೆಸಲಾಗುವುದು ಎಂದಿದ್ದಾರೆ

    ಈ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳಲ್ಲಿ ಇರುವ ಗೊಂದಲ ಅನುಮಾನಗಳನ್ನು ಹೋಗಲಾಡಿಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಈಗಾಗಲೇ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ರವಾನಿಸಲಾಗಿದೆ. ಈ ಮೂಲಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಗೊಂದಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ 8 ಲಕ್ಷ 76 ಸಾವಿರದ 581 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲಿದ್ದಾರೆ. ಇಷ್ಟೊಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕಳೆದ ಬಾರಿಯಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೆ.ಆರ್.ಎಸ್ ಡ್ಯಾಮ್‍ನಲ್ಲಿ ಲೀಕೇಜ್ ಇಲ್ಲ: ಮುರುಗೇಶ್ ನಿರಾಣಿ

  • ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – KSRTC  ಬಸ್ ಪ್ರಯಾಣ‌ ಉಚಿತ

    ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – KSRTC ಬಸ್ ಪ್ರಯಾಣ‌ ಉಚಿತ

    ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಕಲ್ಪಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ನಿರ್ಧಾರ ಕೈಗೊಂಡಿದೆ.

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯಾದ್ಯಂತ ಉಚಿತ ಬಸ್ ವ್ಯವಸ್ಥೆಯನ್ನು ಕರ್ನಾಟಕ ಸಾರಿಗೆ ಇಲಾಖೆ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳು ನಿಗಮದ ಸಾಮಾನ್ಯ ಹಾಗೂ ವೇಗದೂತ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

    ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಜೂನ್ 25ರಿಂದ ಜುಲೈ 4ರವರಗೂ ನಡೆಯಲಿವೆ. ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟ ಪರೀಕ್ಷೆಗೆ ತೆರಳುವುದು ವಿದ್ಯಾರ್ಥಿಗಳ ಪಾಲಿಗೆ ಸಮಸ್ಯೆಯಾಗಿತ್ತು. ಆದರೆ ಈಗ ಸಾರಿಗೆ ನಿಗಮವು ವಿದ್ಯಾರ್ಥಿಗಳಿಗೆ ಅಭಯ ನೀಡಿದೆ.

    ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪತ್ರ (ಹಾಲ್ ಟಿಕೆಟ್)ಅನ್ನು ಬಸ್ ಸಿಬ್ಬಂದಿಗೆ ತೋರಿಸಿ ಉಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಬಹುದು. ಪರೀಕ್ಷೆ ಮುಗಿಸಿ ಮನೆಗೆ ತೆರಳಲು ಉಚಿತವಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

  • ಶಾಲಾ ಛಾವಣಿಯ ಮರದ ತುಂಡು ಬಿದ್ದು ಇಬ್ಬರ ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಛಾವಣಿಯ ಮರದ ತುಂಡು ಬಿದ್ದು ಇಬ್ಬರ ವಿದ್ಯಾರ್ಥಿಗಳಿಗೆ ಗಾಯ

    ದಾವಣಗೆರೆ: ಶಾಲಾ ಛಾವಣಿಗೆ ಹಾಕಿದ್ದ ಮರದ ತುಂಡು ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾದ ಘಟನೆ ಹರಪನಹಳ್ಳಿ ತಾಲೂಕಿನ ಕಣಿವಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಣಿವಿಹಳ್ಳಿ ಗ್ರಾಮದ ಪೂಜಾರ ಮಂಜುನಾಥ್ ಮತ್ತು ಕೋಟೆಪ್ಪ ಗಾಯಗೊಂಡ ವಿದ್ಯಾರ್ಥಿಗಳು. ಬುಧವಾರ ಸಂಜೆ ಜೋರಾಗಿ ಗಾಳಿ ಬೀಸಿದ ಪರಿಣಾಮ ಹಂಚಿನ ಕೊಠಡಿಯ ಛಾವಣಿಗೆ ಹಾಕಿದ್ದ ಮರದ ತುಂಡು ಕೆಳಗೆ ಬಿದ್ದಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಹರಪನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾದೆ.

    ಶಾಲಾ ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿದ್ದು, ಮಕ್ಕಳು ಪ್ರಾಣ ಭೀತಿಯಿಂದ ಕಲಿಯುವಂತಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಕೊಠಡಿಗಳು ಇಂತಹ ಪರಿಸ್ಥಿತಿಯಲ್ಲಿವೆ.