Tag: ವಿದೇಶಿ ಕಳ್ಳರು

  • ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್

    ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್

    – ಬಂಧಿತರಿಂದ 2 ಕಾರು, 1.66 ಲಕ್ಷ ರೂ. ನಗದು ವಶಕ್ಕೆ

    ರಾಮನಗರ: ನಕಲಿ ಎಟಿಎಂ ಬಳಸಿ ಹಣ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ ಮೂವರು ವಿದೇಶಿಯರು ಸೇರಿ ಐವರು ಖತರ್ನಾಕ್ ಕಳ್ಳರನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

    ನೈಜಿರಿಯಾದ ಎರೆಹ್ಮೆನ್ ಸ್ಮಾರ್ಟ್ ಗೋಡ್ಸನ್ (33), ಉಡೋ ಕ್ರಿಸ್ಟಿಯಾನ್ (26), ತಾಂಜಾನಿಯಾದ ಮಥಿಯಾಸ್ ಎ ಶ್ವಾವಾ (32), ಮಹಾರಾಷ್ಟ್ರದ ಪುಣೆಯ ಪ್ರಶಾಂತ್ ಸುರೇಶ್ ಸವಂತ್ (30) ಹಾಗೂ ಅವಿನಾಶ್ ವಸಂತ್ ರನ್ಸೂರೆ (33) ಬಂಧಿತ ಆರೋಪಿಗಳು. ಬಂಧಿತರಿಂದ 1,66,930 ರೂ. ನಗದು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಪ್ರಕರಣವೊಂದರಲ್ಲಿ ಪುಣೆ ಜೈಲು ಸೇರಿದ್ದ ಎರೆಹ್ಮೆನ್ ಸ್ಮಾರ್ಟ್ ಗೋಡ್ಸನ್ ಜೈಲಿನಲ್ಲಿದ್ದ ಪ್ರಶಾಂತ್‌ಗೆ ಪರಿಚಯವಾಗಿದ್ದರು. ಈ ವೇಳೆ ಗೋಡ್ಸನ್ ಕಳ್ಳತನ ಹೇಗೆ ಮಾಡಬೇಕು ಎಂದು ಪ್ರಶಾಂತ್‌ಗೆ ಕಲಿಸಿಕೊಟ್ಟಿದ್ದ. ಜೈಲಿನಿಂದ ಬಿಡುಗಡೆಯಾದ ಮೇಲೆ ಪ್ರಶಾಂತ್ ತನ್ನ ಗೆಳೆಯ ಅವಿನಾಶ್‌ನನ್ನು ಕರೆದುಕೊಂಡು ಬಂದು ಗೋಡ್ಸನ್ ಟೀಂ ಸೇರಿದ್ದ. ಇತ್ತ ಬೆಂಗಳೂರಿನ ಕಲ್ಯಾಣನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಉಡೋ ಕ್ರಿಸ್ಟಿಯಾನ್ ಹಾಗೂ ತಾಂಜಾನಿಯಾದ ಕೂಡ ಗೋಡ್ಸನ್ ಗ್ಯಾಂಗ್ ಸೇರಿದ್ದರು.

    ಗೋಡ್ಸನ್ ಅಂಡ್ ಟೀಂ ಎಟಿಎಂ ಸೆಂಟರ್ ಗಳಲ್ಲಿ ಸ್ಕಿಮ್ಮಿಂಗ್ ಮಿಷನ್ ಹಾಗೂ ಕ್ಯಾಮೆರಾ ಅಳವಡಿಸಿ ಡಾಟಾ ಕದ್ದು ನಕಲಿ ಎಟಿಎಂ ತಯಾರಿಸುತ್ತಿದ್ದರು. ಬಳಿಕ ವಿವಿಧ ಎಟಿಎಂ ಸೆಂಟರ್ ಗಳಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು. ಆರೋಪಿಗಳು ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಇಂತಹ ಕೃತ್ಯ ಎಸಗಿದ್ದಾರೆ. ಇದೇ ರೀತಿ ರಾಮನಗರದಲ್ಲಿ ಗ್ರಾಹಕರೊಬ್ಬರ ಎಟಿಎಂ ನಕಲಿ ಮಾಡಿ, ಹಣ ಡ್ರಾ ಮಾಡಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಮನಗರ ಪೊಲೀಸರು ತನಿಖೆ ಆರಂಭಿಸಿದ್ದರು.

    ಆರೋಪಿಗಳು ರಾಮನಗರದ ಎಟಿಎಂ ಸೆಂಟರ್ ನಲ್ಲಿ ಸ್ಕಿಮ್ಮಿಂಗ್ ಮಿಷನ್ ಹಾಗೂ ಕ್ಯಾಮೆರಾ ಅಳವಡಿಸುತ್ತಿದ್ದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಪಡೆದ ಪೊಲೀಸರು ಆರೋಪಿಗಳಿಗೆ ಬಲೆ ಬೀಡಿದ್ದರು. ಪ್ರಕರಣದ ಆರೋಪಿ ಗೋಡ್ಸನ್ ಅಕ್ಟೋಬರ್ 31ರಂದು ರಾಮನಗರದ ಐಜೂರ್ ವೃತ್ತದ ಬಳಿ ಕಾಣಿಸಿಕೊಂಡಿದ್ದ. ತಕ್ಷಣವೇ ಆತನ ಬಂಧನಕ್ಕಾಗಿ ಪೊಲೀಸರು ಮುಂದಾಗಿದ್ದರು. ಆದರೆ ಗೋಡ್ಸನ್ ಕಾರಿನಿಂದ ಕೆಳಗೆ ಇಳಿಯದೇ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಈ ವೇಳೆ ಪೊಲೀಸರು ಕಾರನ್ನು ಬೆನ್ನುಹತ್ತಿ ಬೆಂಗಳೂರು-ಮೈಸೂರು ರಸ್ತೆಯ ಕನಕಪುರ ಸರ್ಕಲ್‌ನಲ್ಲಿ ಸುತ್ತುವರಿದು ನಿಂತಿದ್ದರು. ಪರಿಣಾಮ ಜೀವದ ಭಯದಿಂದ ಗೋಡ್ಸನ್ ಪೊಲೀಸರಿಗೆ ಶರಣಾಗಿದ್ದ.

    ಗೋಡ್ಸನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಬಾಯಿಬಿಟ್ಟಿದ್ದ. ಅವರಿಗೂ ಬಲೆ ಬೀಸಿದ ಪೊಲೀಸರು ಎಲ್ಲರನ್ನೂ ಬಂಧಿಸಿದ್ದಾರೆ. ಆರೋಪಿಗಳಿಂದ 2 ಕಾರು, 4 ಮೊಬೈಲ್, 2 ಲ್ಯಾಪ್‌ಟಾಪ್, 11 ಚಾಕು, 2 ಸ್ಕಿಮ್ಮಿಂಗ್ ಮಷಿನ್, 44 ಎಟಿಎಂ ಕಾರ್ಡ್, 8 ಖಾಲಿ ಎಟಿಎಂ ಕಾರ್ಡ್ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕಳ್ಳತನ ಮಾಡಿದ ಹಣದಿಂದ ಬೆಂಗಳೂರಿನಲ್ಲಿ ಎರಡು ಫ್ಲಾಟ್ ಖರೀದಿಸಿ, ಐಶಾರಾಮಿ ಜೀವನ ನಡೆಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿಕೊAಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ರಾಮನಗರ ಸೈಬರ್ ಠಾಣೆಯಲ್ಲಿ 13 ಪ್ರಕರಣಗಳು, ಕಗ್ಗಲೀಪುರ ಠಾಣೆಯಲ್ಲಿ 6 ಪ್ರಕರಣ ಹಾಗೂ ಬೆಂಗಳೂರು ನಗರ ಸೈಬರ್ ಕ್ರೈಮ್  ಠಾಣೆಯಲ್ಲಿ 11 ಮತ್ತು ಮೈಸೂರು ನಗರ ಠಾಣೆಯ 5 ಪ್ರಕರಣ ದಾಖಲಾಗಿವೆ.