Tag: ವಿದುರಾಶ್ವತ್ಥ

  • ನಾಳೆ ಭಜರಂಗದಳದ ಬೈಕ್ ರ‍್ಯಾಲಿ – ವೀರಸೌಧ ಚಿತ್ರಗ್ಯಾಲರಿಗೆ ಪೊಲೀಸ್ ಬಂದೋಬಸ್ತ್

    ನಾಳೆ ಭಜರಂಗದಳದ ಬೈಕ್ ರ‍್ಯಾಲಿ – ವೀರಸೌಧ ಚಿತ್ರಗ್ಯಾಲರಿಗೆ ಪೊಲೀಸ್ ಬಂದೋಬಸ್ತ್

    ಚಿಕ್ಕಬಳ್ಳಾಪುರ: ಕರ್ನಾಟಕ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥ ಗ್ರಾಮಕ್ಕೆ ಸ್ವಾಂತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಹಿಂದೂಪರ ಸಂಘಟನೆಗಳು ಭಾನುವಾರ ಬೆಂಗಳೂರಿನ ಪ್ರೀಡಂ ಪಾರ್ಕ್ನಿಂದ ಬೃಹತ್ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿವೆ. ಹಿಂದೂ ಪರ ಸಂಘಟನೆಗಳ ದಾಳಿ ಹಿನ್ನೆಲೆ ವೀರಸೌಧ ಗ್ಯಾಲರಿ ಸೇರಿದಂತೆ ಹಲವೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಭಜರಂಗದಳ ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ ನೇತೃತ್ವದಲ್ಲಿ ವಿದುರಾಶ್ವತ್ಥ ಗ್ರಾಮಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬರಲಿದ್ದು, ಹುತಾತ್ಮ ವೀರ ಯೋಧರ ಸ್ಮಾರಕ ಹಾಗೂ ಸ್ತೂಪಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಈ ವೇಳೆ ಚಿತ್ರ ಗ್ಯಾಲರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ವಿವಾದಿತ ಪೋಟೋಗಳ ಮೇಲೆ ದಾಳಿ ನಡೆಯುವ ಆತಂಕ ಉದ್ಭವವಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವೀರಸೌಧದ ಚಿತ್ರ ಗ್ಯಾಲರಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ನಿಮ್ಮ ವರಿಷ್ಠೆಯ ಮೂಲ ಯಾವುದು?: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸವಾಲ್

    ಚಿತ್ರ ಗ್ಯಾಲರಿ ವಿವಾದವೇನು?
    ವಿದುರಾಶ್ವತ್ಥ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ, ಸ್ವಾತಂತ್ರ‍್ಯ ಸಂಗ್ರಾಮದ ಪುಣ್ಯ ಭೂಮಿಯೂ ಹೌದು. ಅಂತಹ ಕ್ಷೇತ್ರದಲ್ಲಿ ಒಂದು ಕಡೆ ವಿದುರ ಮಹರ್ಷಿ ನೆಟ್ಟ ಅಶ್ವತ್ಥ ವೃಕ್ಷದ ಕೆಳಗೆ ಅಶ್ವತ್ಥನಾರಾಯಣಸ್ವಾಮಿ ನೆಲೆ ನಿಂತಿದ್ದರೆ ಮತ್ತೊಂದೆಡೆ ಸ್ವಾತಂತ್ರ ಸಂಗ್ರಾಮದಲ್ಲಿ ಮಡಿದ ವೀರಯೋಧರ ಸ್ತೂಪವೂ ಇದೆ. ಅದೇ ಜಾಗದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ದರ್ಶನ ಮಾಡಿಸುವ ಚಿತ್ರ ಗ್ಯಾಲರಿಯೂ ಇದ್ದು, ಆ ಚಿತ್ರ ಗ್ಯಾಲರಿ ಕಳೆದ ಒಂದು ತಿಂಗಳಿನಿಂದ ವಿವಾದಿತ ಕೇಂದ್ರ ಬಿಂದುವಾಗಿದೆ.

    ಚಿತ್ರ ಗ್ಯಾಲರಿಯಲ್ಲಿನ ಕೆಲ ಪೋಟೋಗಳಲ್ಲಿ ಹಿಂದೂ ಕೋಮುವಾದ, ಬಲ ಪಂಥೀಯ, ಮುಸ್ಲಿಂ ಕೋಮುವಾದ, ಮಹಾತ್ಮ ಗಾಂಧಿ ಹತ್ಯೆ ಮಾಡಿದವರು ಎಂದು ಹಲವು ಪೋಟೋಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ಬರೆದು, ಪೋಟೋಗಳ ಬದಲಾವಣೆಗೂ ಆಗ್ರಹಿಸಿದ್ದಾರೆ. ಹೀಗಾಗಿ ಕಳೆದ 1 ತಿಂಗಳಿನಿಂದ ವೀರಸೌಧದ ಚಿತ್ರ ಗ್ಯಾಲರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸುವ ಆತಂಕ ಇದೆ ಎಂದು ಸ್ವತಃ ಉಸ್ತುವಾರಿ ವಹಿಸಿದ್ದ ಸ್ವಾತಂತ್ರ‍್ಯ ಸ್ಮಾರಕ ಅಭಿವೃದ್ಧಿ ಸಮಿತಿ, ವೀರಸೌಧ ಚಿತ್ರ ಗ್ಯಾಲರಿಗೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಇದನ್ನೂ ಓದಿ: ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ: ಬೊಮ್ಮಾಯಿ

    ವೀರಸೌಧ ಚಿತ್ರ ಗ್ಯಾಲರಿಗೆ ಹಿಂದೆಂದೂ ಕಾಣದ ಪೊಲೀಸರನ್ನು ಇದೀಗ ನಿಯೋಜಿಸಿ, ಭದ್ರತೆ ವಹಿಸಲಾಗಿದೆ. ಭಾನುವಾರ ಸಾವಿರಾರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದ್ದು, ವೀರಸೌಧದ ಚಿತ್ರ ಗ್ಯಾಲರಿಗೆ ಎಲ್ಲಿಲ್ಲದ ಬಂದೋಬಸ್ತ್ ಮಾಡಲಾಗಿದೆ.

  • ಕೋತಿ ಕಾಟ ತಪ್ಪಿಸೋಕೆ ತಾನೇ ಕೋತಿಯಾದ ಅರಣ್ಯ ಸಿಬ್ಬಂದಿ

    ಕೋತಿ ಕಾಟ ತಪ್ಪಿಸೋಕೆ ತಾನೇ ಕೋತಿಯಾದ ಅರಣ್ಯ ಸಿಬ್ಬಂದಿ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ರಾಜ್ಯಪಾಲ ವಿ.ಆರ್ ವಾಲಾ ಹಾಗೂ ಸಿಎಂ ಯಡಿಯೂರಪ್ಪನವರು ಭಾಗವಹಿಸಿದ್ರು.

    ಅಮೃತಮಹೋತ್ಸವ ಕಾರ್ಯನಿಮಿತ್ತ ವಿದುರಾಶ್ವತ್ಥಕ್ಕೆ ಆಗಮಿಸಿದ ಸಿಎಂ ಹಾಗೂ ರಾಜ್ಯಪಾಲರಿಗೆ ಕೋತಿಗಳ ಕಾಟ-ಉಪಟಳ ಎದುರಾಗಬಾರದು ಅಂತ ಅರಣ್ಯ ಇಲಾಖೆ ವತಿಯಿಂದ ಸಿಬ್ಬಂದಿಯೋರ್ವ ಮುಖಕ್ಕೆ ಮಂಗನವತಾರದ ಮಾಸ್ಕ್ ಧರಿಸಿ ಕೋತಿಗಳನ್ನ ಓಡಿಸುವ ಕಾಯಕ ಮಾಡಿದ್ದಾನೆ.

    ಅಂದಹಾಗೆ ವಿದುರಾಶ್ವತ್ಥದಲ್ಲಿ ಕೋತಿಗಳ ಹಾವಳಿ ಅತಿಯಾಗಿದ್ದು ಇಂದು ಕೋತಿಯ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಈ ಕೆಲಸ ಪ್ಲಾನ್ ಮಾಡಿದೆ. ಮಂಕಿ ಮಾಸ್ಕ್ ಹಾಕಿ ಕಪ್ಲು ಜರ್ಖಿನ್ ತೊಟ್ಟು ಕೋತಿಗಳ ಕಡೆ ಸುಳಿದಾಡಿದ್ರೆ ಸಾಕು ಕೋತಿಗಳ ಎದ್ನೋ ಬಿದ್ನೋ ಅಂತ ಪರಾರಿಯಾಗ್ತಿದ್ದವು.

  • ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ: ಸುಧಾಕರ್

    ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ: ಸುಧಾಕರ್

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಮತ್ತೆ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಅಂತಹ ಪರಿಸ್ಥಿತಿ ಬರದೆ ಇರಲಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಆ ಪರಿಸ್ಥಿತಿ ಬರದೆ ಇರಲು ಸಿಎಂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಹೆಚ್ಚಿನ ಲಸಿಕೆ ನೀಡುವ ಕೆಲಸ ಆಗಲಿದೆ ಅಂತ ಹೇಳಿದರು.

    ಸ್ವಾತಂತ್ರ್ಯ ಹೋರಾಟದ ಇತಿಹಾಸವಿರುವ ವಿದುರಾಶ್ವತ್ಥವನ್ನು ಅಂತರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು. ವಿದುರಾಶ್ವತ್ಥದಲ್ಲಿ 1938ರಲ್ಲಿ ಧ್ವಜಾರೋಹಣ ನೆರವೇರಿಸುವ ವೇಳೆ ಬ್ರಿಟಿಷರು ಗುಂಡಿನ ದಾಳಿ ನಡೆಸಿ ಅಧಿಕೃತವಾಗಿ 09 ಮಂದಿ ಹೋರಾಟಗಾರರು ಹುತಾತ್ಮರಾದರು. ಆದರೆ ಅದು ಅನಧಿಕೃತವಾಗಿ 30ಕ್ಕೂ ಹೆಚ್ಚು ಮಂದಿ ಎಂದು ಹೇಳಲಾಗುತ್ತದೆ. ಈ ಸ್ಥಳಕ್ಕೆ ವಿದುರ ಬಂದು ಅಶ್ವತ್ಥಕಟ್ಟೆ ನಿರ್ಮಿಸಿದರು ಎಂಬ ಹಿನ್ನೆಲೆ ಇದೆ. ಇಲ್ಲಿ ನಾಗಪೂಜೆ ಕೂಡ ನಡೆಯುತ್ತಿದೆ. ಹೀಗಾಗಿ ಇದನ್ನು ಐತಿಹಾಸಿಕ, ಧಾರ್ಮಿಕ ತಾಣವಾಗಿ ಅಭಿವೃದ್ಧಿಪಡಿಸಿ, ಅಂತಾರಾಷ್ಟ್ರೀಯ ಸ್ಮರಣ ಕೇಂದ್ರವಾಗಿ ರೂಪಿಸಬೇಕು. ಈಗಾಗಲೇ ಸಮಿತಿಯು ಡಿಪಿಆರ್ ಮಾಡಿಕೊಟ್ಟಿದ್ದು, ಇದಕ್ಕಾಗಿ 15-16 ಕೋಟಿ ರೂ. ಖರ್ಚಾಗುತ್ತದೆ. ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು ಎಂದು ಕೋರಿದರು.

    ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತಿರುವ ಸಂದರ್ಭದಲ್ಲಿ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಬಗ್ಗೆ ಚಿಂತನೆ ನಡೆಸಲು ಕಾರ್ಯಕ್ರಮ ನಡೆಸುವಂತೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಅನೇಕರು ಹುತಾತ್ಮರಾಗಿದ್ದು, ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ನಡೆಯುತ್ತಿದೆ. ಐತಿಹಾಸಿಕ, ಧಾರ್ಮಿಕ ಕ್ಷೇತ್ರವಾದ ವಿದುರಾಶ್ವತ್ಥದಲ್ಲಿ ಕೂಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

    ಕೃಷ್ಣಾ ನದಿಯಿಂದ 5 ಟಿಎಂಸಿಯನ್ನು ಆಂಧ್ರ ಪ್ರದೇಶದ ಸಹಕಾರದಿಂದ ಪಡೆದರೆ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರಾವರಿ ಕಲ್ಪಿಸಬಹುದು. ನಮ್ಮ ನದಿ ಮೂಲಗಳಿಂದ ಆ ರಾಜ್ಯದ ಜನರಿಗೆ ನೀರು ನೀಡಬಹುದು. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗಿದ್ದು, ಮುಂದಿನ ವರ್ಷದ ಜೂನ್ ಗೆ ಸಿದ್ಧವಾಗಲಿದೆ. ಕೋವಿಡ್ ಆರ್ಥಿಕ ಸಂಕಷ್ಟವಿರುವುದರಿಂದ ಈ ಬಾರಿ ಹೆಚ್ಚಿನ ಗಾತ್ರದ ಬಜೆಟ್ ನೀಡುವುದಿಲ್ಲ ಎಂಬ ಅಪನಂಬಿಕೆ ಇತ್ತು. ಆದರೆ ಮುಖ್ಯಮಂತ್ರಿಗಳು ಹೆಚ್ಚು ಗಾತ್ರದ ಬಜೆಟ್ ಮಂಡಿಸಿ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಮಹಿಳಾ ಅಸಮಾನತೆ ದೂರವಾಗಿಸಲು, ಅಂತಾರಾಷ್ಟ್ರೀಯ ಮಹಿಳಾ ದಿನದಂದು ಮಂಡಿಸಿದ ಬಜೆಟ್ ನಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತಮ ಕೊಡುಗೆ ನೀಡಲಾಗಿದೆ. ನಂದಿ ಬೆಟ್ಟ, ಎತ್ತಿನೆಹೊಳೆ ಯೋಜನೆ ಜಾರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದರು.

  • ಕಂಪ್ಯೂಟರ್ ಆಪರೇಟರ್ ಜೊತೆ ಸರ್ಕಾರಿ ಅಧಿಕಾರಿ ಆಟ – ದೇವರಿಗೆ 60 ಲಕ್ಷ ರೂ. ಪಂಗನಾಮ

    ಕಂಪ್ಯೂಟರ್ ಆಪರೇಟರ್ ಜೊತೆ ಸರ್ಕಾರಿ ಅಧಿಕಾರಿ ಆಟ – ದೇವರಿಗೆ 60 ಲಕ್ಷ ರೂ. ಪಂಗನಾಮ

    – ವಿದುರಾಶ್ವತ್ಥ ದೇಗುಲದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ
    – ಅವ್ಯವಹಾರ ಬಯಲಿಗೆ ಎಳೆದ ತಹಶೀಲ್ದಾರ್

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಐತಿಹಾಸಿಕ ಪುರಾತನ ಪ್ರಸಿದ್ಧ ವಿದುರಾಶ್ವತ್ಥ ಗ್ರಾಮದ ಶ್ರೀ ಅಶ್ವತ್ಥನಾರಾಯಣಸ್ವಾಮಿ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರದ ಪ್ರಕರಣ ಬಯಲಿಗೆ ಬಂದಿದೆ.

    ದೇವಾಲಯ ಆಡಳಿತಾಧಿಕಾರಿ ಗುರುಪ್ರಸಾಸ್ ವೆಂಕಟರಮಣ, ಗುತ್ತಿಗೆ ಆಧಾರದ ಮೇಲೆ ಬೇಸಿಕ್ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಶೃತಿ ಹಾಗೂ ಡಿ ಗ್ರೂಪ್ ನೌಕರ ಸುರೇಶ್ ಸೇರಿ ದೇವಸ್ಥಾನದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಗೌರಿಬಿದನೂರು ತಹಶೀಲ್ದಾರ್ ಹಾಗೂ ಹಾಲಿ ದೇವಾಲಯದ ಪ್ರಭಾರ ಕಾರ್ಯ ನಿರ್ವಹಕಾಧಿಕಾರಿ ಶ್ರೀನಿವಾಸ್ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಇಲಾಖೆಯ ಆಯಕ್ತರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

    ವರದಿಯಲ್ಲಿ ಏನಿದೆ?
    ವೆಂಕಟರಮಣ ಗುರುಪ್ರಸಾದ್ 2017ರ ಆಗಸ್ಟ್ 02 ರಿಂದ 2019ರ ಆಗಸ್ಟ್ 26ರವರೆಗೆ ವಿದುರಾಶ್ವತ್ಥನಾರಾಯಣ ದೇಗುಲದಲ್ಲಿ ಕಾರ್ಯ ನಿರ್ವಹಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಮಯದಲ್ಲಿ ಚೆಕ್‍ಗಳ ವಿತರಣೆಯಲ್ಲಿ ಲೋಪ ದೋಷಗಳನ್ನು ಮಾಡಿ ಹಣ ದುರ್ಬಳಕೆ ಆಗಿರುವುದು ಕಂಡುಬಂದಿರುತ್ತದೆ. ಚೆಕ್ ವಿತರಣೆ ಉಸ್ತುವಾರಿ ವಹಿಸಿಕೊಂಡಿದ್ದ ಡಾಟಾ ಎಂಟ್ರಿ ಆಪರೇಟರ್ ಶೃತಿ ಅಧಿಕಾರಿಗಳಿಗೆ ಸಮರ್ಪಕ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿರುತ್ತಾರೆ. ಹೀಗಾಗಿ ಪರಿಶೀಲನೆ ವೇಳೆ ಮೇಲ್ನೋಟಕ್ಕೆ ಅರ್ಚಕರ ದೀಪಾರಾಧನೆಗೆ ಅಂತ 50 ಸಾವಿರ ರೂ. ಹೆಚ್ಚುವರಿ ಹಣ, ಮುಡಿ ತೆಗೆಯುವವರಿಗೆ ಅಂತ 7,57,779 ರೂ. ನೀಡಲಾಗಿದೆ.

    ಶೃತಿ ತಾಯಿ ಪರಿಮಳಾ ಅವರಿಗೆ ಅನಾವಶ್ಯಕವಾಗಿ 7,27,000 ರೂ. ನೀಡಲಾಗಿದೆ. ದೇವಾಲಯದ ನಾಗಪ್ರತಿಷ್ಠೆ ಸೇವಾಕರ್ತರ ಊಟೋಪಚಾರಕ್ಕಾಗಿ 18.85 ಲಕ್ಷದ ರೂ. ಹೆಚ್ಚುವರಿ ಹಣ, ಅನಾಮಧೇಯರಿಗೆ ಅನಾವಶ್ಯಕವಾಗಿ 2.58 ಲಕ್ಷ ರೂಪಾಯಿ ವಿತರಿಸಿದ್ದಾರೆ. ಹೀಗೆ ದೇವಾಲಯದ ಹಣದಲ್ಲಿ 60 ಲಕ್ಷ ರೂಪಾಯಿಗೂ ಅಧಿಕ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ವರದಿ ನೀಡಿರುವುದಾಗಿ ತಹಶೀಲ್ದಾರ್ ಶ್ರೀನಿವಾಸ್ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿದ್ದಾರೆ.

    ಅವ್ಯವಹಾರ ಹೇಗೆ?
    ದೇವಾಲಯದಲ್ಲಿ ನಾಗಪ್ರತಿಷ್ಠಾಪನೆ ಮಾಡುವ ಭಕ್ತರ ಅನುಕೂಲ ಊಟೋಪಚಾರಕ್ಕೆ ಅಂತ ದೇವಾಲಯದ ನಿಧಿಯಿಂದ ಒಂದು ನಾಗಪ್ರತಿಷ್ಠಪನಾ ಕಾರ್ಯಕ್ಕೆ ತಲಾ 800 ರೂಪಾಯಿ ಖರ್ಚು ಮಾಡಬಹುದು. ಹೀಗೆ 2019 ಏಪ್ರಿಲ್ 1ರಿಂದ 2019ರ ಆಗಸ್ಟ್ 31 ರವರೆಗೆ 363 ನಾಗಪ್ರತಿಷ್ಠಾಪನೆ ಆಗಿದೆ. ಆ ಭಕ್ತರಿಗೆ 2,90,400 ರೂಪಾಯಿ ಖರ್ಚು ಮಾಡಬಹುದು. ಆದರೆ ನಾಗಪ್ರತಿಷ್ಠಾಪನೆ ಊಟೋಪಚಾರದ ಹೆಸರಲ್ಲಿ ಹೆಚ್ಚುವರಿಯಾಗಿ 18.85 ಲಕ್ಷ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಹೀಗೆ ಮುಡಿ ತೆಗೆಯುವವರಿಗೆ 600 ರೂಪಾಯಿ ಕೊಡುವ ವ್ಯವಹಾರದಲ್ಲಿ 60 ಸಾವಿರ ರೂ.ನಂತೆ ಹಣ ಡ್ರಾ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದಾರೆ.

    ಈ ಸಂಬಂಧ ದೇವಾಲಯದ ಖಾತೆಯಿಂದ ಚೆಕ್ ಪಡೆದವರನ್ನು ಕರೆಸಿ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ನಮಗೆ ಅಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಯಾಗಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ವೇಳೆ ಡಾಟಾ ಎಂಟ್ರಿ ಆಪರೇಟರ್ ಶೃತಿ ಹಾಗೂ ಸ್ವೀಪರ್ ಸುರೇಶ್ ನಮಗೆ ಬರಬೇಕಾದ ಹಣವನ್ನು ನಗದು ರೂಪದಲ್ಲಿ ನೀಡಿ ಚೆಕ್ ಅನ್ನು ಅವರೇ ಬ್ಯಾಂಕಿನಲ್ಲಿ ಡ್ರಾ ಮಾಡಿಕೊಳ್ಳುತ್ತಿದ್ದರು. ಚೆಕ್‍ಗಳಲ್ಲಿ ಎಷ್ಟು ಮೊತ್ತದ ಹಣ ಇರುತ್ತಿತ್ತು ಎಂಬುದು ನಮಗೆ ಗೊತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶೃತಿ ಹಾಗೂ ಸುರೇಶ್ ಮೌನ ವಹಿಸಿದ್ದು, ತಪ್ಪನ್ನ ಒಪ್ಪಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಬಯಲಿಗೆ ಬಂದಿದ್ದು ಹೇಗೆ?
    ಈ ಹಿಂದೆ ಕಾರ್ಯನಿರ್ವಾಹಾಧಿಕಾರಿ ವೆಂಕಟರಮಣ ಗುರುಪ್ರದಾದ್ ಬೇರೆಡೆಗೆ ವರ್ಗಾವಣೆಯಾದಾಗ ನೂತನ ಪ್ರಭಾರ ಕಾರ್ಯನಿರ್ವಾಹಕಾಧಿಕಾರಿಯಾಗಿ ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್ ಅವರನ್ನ ನೇಮಕ ಮಾಡಲಾಗಿದೆ. ಈ ವೇಳೆ ಕಚೇರಿಯ ಕಡತ, ಲೆಕ್ಕದ ಬುಕ್‍ಗಳ ಪರಿಶೀಲನೆಯಲ್ಲಿ ತೊಡಗಿದ್ದ ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಅವ್ಯವಹಾರದ ವಾಸನೆ ಕಂಡು ಬಂದಿತ್ತು. ಈ ವಿಚಾರವಾಗಿ ಸಿಬ್ಬಂದಿಯನ್ನು ವಿಚಾರಿಸಿ ಬ್ಯಾಂಕ್‍ನ ವಹಿವಾಟುಗಳನ್ನ ಪರಿಶೀಲನೆ ನಡೆಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ. ಹೀಗಾಗಿ ಈ ಸಂಬಂಧ ಸಂಪೂರ್ಣ ಪರಿಶೀಲನೆ ನಡೆಸಿದಾಗ ಸರಿ ಸುಮಾರು 60 ಲಕ್ಷ ರೂ.ಗೂ ಅಧಿಕ ಹಣ ದುರುಪಯೋಗವಾಗಿರುವ ಬಗ್ಗೆ ಶ್ರೀನಿವಾಸ್ ವರದಿ ನೀಡಿದ್ದಾರೆ.

    ದೇವಾಲಯದ ಮಹತ್ವ..!
    ವಿಧುರಾಶ್ವತ್ಥ ಗ್ರಾಮದ ಬಳಿಯಿರುವ ಈ ದೇವಾಲಯದಲ್ಲಿ ನಾಗದೋಷ, ಸಂತಾನಭಾಗ್ಯ ವಿವಾಹಭಾಗ್ಯದ ಇಷ್ಟಾರ್ಥ ಕೋರಿಕೆಗೆ ನಾಗರಕಲ್ಲು ಪ್ರತಿಷ್ಠಾಪನೆ ಮಾಡೋದು ಪ್ರತೀತಿ. ಪ್ರತಿದಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ನಾಗರಕಲ್ಲು ಪ್ರತಿಷ್ಠಾಪನೆ ಮಾಡುತ್ತಾರೆ. ಹೀಗೆ ದೇವಸ್ಥಾನಕ್ಕೆ ಬಂದ ಭಕ್ತರು ವಿವಿಧ ಕಾರಣಗಳಿಗಾಗಿ ದೇವರಿಗೆ ಕಾಣಿಕೆ, ಸೇವೆ ಅಂತ ಹಣ ಸಂದಾಯ ಮಾಡುತ್ತಾರೆ. ಹೀಗೆ ಹಣ ಸಂದಾಯವಾದ ಹಣವನ್ನು ದೇವಸ್ಥಾನದ ಆಡಳಿತಾಧಿಕಾರಿ ಆಗಿದ್ದ ಗುರುಪ್ರಸಾದ್, ದೇವಸ್ಥಾನದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಶೃತಿ ಹಾಗೂ ಸುರೇಶ್ ಸೇರಿಕೊಂಡು ಮನಸ್ಸೊ ಇಚ್ಛೆ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

    ದೇವಸ್ಥಾನದಲ್ಲಿ ಭಕ್ತರು ಸಂದಾಯ ಮಾಡುವ ಹಣವನ್ನು, ವಿಧುರಾಶ್ವತ್ಥ ಗ್ರಾಮದಲ್ಲಿರುವ ಸ್ಥಳೀಯ ಬ್ಯಾಂಕ್‍ನಲ್ಲಿರುವ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಆದರೆ ದೇವಸ್ಥಾನದ ಆಡಳಿತಾಧಿಕಾರಿ ಆಗಿದ್ದ ಗುರುಪ್ರಸಾದ್, ಶೃತಿ ಹಾಗೂ ಸುರೇಶ್ ಚೆಕ್‍ಗಳನ್ನು ತಿದ್ದಿ ಐನೂರು ರೂ. ಚೆಕ್ ಅನ್ನು ಐದು ಸಾವಿರ ಎಂದು, 50 ಸಾವಿರ ರೂಪಾಯಿ ಚೆಕ್ ಅನ್ನು ಐವತ್ತು ಸಾವಿರ ಎಂದು, ಐವತ್ತು ಸಾವಿರ ರೂಪಾಯಿ ಚೆಕ್ ಅನ್ನು 5 ಲಕ್ಷ ರೂಪಾಯಿ ಎಂದು ತಿದ್ದಿ ಹಗಲು ದರೋಡೆ ಮಾಡಿದ್ದಾರೆ. ಆದರೆ ಇದ್ಯಾವುದು ದೇವಸ್ಥಾನದ ವ್ಯವಸ್ಥಾಪಕ ಸದಸ್ಯರ ಗಮನಕ್ಕೆ ಬಂದಿರಲಿಲ್ಲವಂತೆ.

    ಗೌರಿಬಿದನೂರು ತಹಶೀಲ್ದಾರ್ ಶ್ರೀನಿವಾಸ್ ಹಾಗೂ ದೇವಸ್ಥಾನದ ಪೇಸ್ಕಾರ್ ನಂಜಪ್ಪ ಗಮನಕ್ಕೆ ಬರುತ್ತಿದ್ದಂತೆ ಆಯುಕ್ತರಿಗೆ ವರದಿ ನೀಡಿದ್ದಾರೆ. ಮತ್ತೊಂದೆಡೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೆಡೆ ತಹಶೀಲ್ದಾರ್ ಮತ್ತೊಂದೆಡೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗುರುಪ್ರಸಾದ್ ವರ್ಗಾವಣೆಯಾಗಿ ತಿರುಮಲ ತಿರುಪತಿ ಸೇರಿಕೊಂಡಿದ್ದರೆ, ಇತ್ತ ಶೃತಿ ಹಾಗೂ ಸುರೇಶ್ ಕಚೇರಿಗೆ ಬರದೆ ಕಳ್ಳಾಟ ಆಡುತ್ತಿದ್ದಾರೆ.