ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿತರಿಸಲು (Distribution) ಕೆವಿಎನ್ ಸಂಸ್ಥೆ ಮುಂದಾಗಿದೆ. ಮತ್ತೊಂದು ಖುಷಿ ಸಂಗತಿ ಅಂದರೆ, ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.
ಪ್ರಭಾಸ್ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್ ಆದ ಅಮಿತಾಭ್ ಬಚ್ಚನ್ ಅವರ ಹೊಸ ಲುಕ್.
ಕರ್ನಾಟಕದ ತುಂಬೆಲ್ಲ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ `ಕಾಟೇರ’ (Katera) ಕ್ರೇಜ್ ಮೇರೆ ಮೀರಿಕೊಂಡಿದೆ. ಪರಭಾಷಾ ಚಿತ್ರಗಳಿಗೆ ಸೆಡ್ಡು ಹೊಡೆದು ಥೇಟರುಗಳಿಗೆ ಆಗಮಿಸುವ ಸನ್ನಾಹದಲ್ಲಿರೋ ಈ ಚಿತ್ರದ ದಿಕ್ಕಿನಿಂದ ಕ್ಷಣಕ್ಕೊಂದರಂತೆ ಹೊಸಾ ಸುದ್ದಿಗಳು ಹೊರಬೀಳುತ್ತಿವೆ. ಇದೇ ಹೊತ್ತಿನಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಕಾಟೇರ ವಿತರಣಾ (Distribution) ಹಕ್ಕನ್ನು ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ (Guru Deshpande) ಪಡೆದುಕೊಂಡಿದ್ದಾರೆ.
ಈ ಸುದ್ದಿ ಕೇಳಿದಾಕ್ಷಣ ಹಲವರಿಗೆ ಅಚ್ಚರಿಯಾದೀತೇನೋ… ಗುರು ದೇಶಪಾಂಡೆ ನಿರ್ದೇಶಕರಾಗಿ ಪ್ರಸಿದ್ಧಿ ಪಡೆದುಕೊಂಡಿರುವವರು. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಾಗಿಯೂ ಸದ್ದು ಮಾಡುತ್ತಿರುವವರು. ಇಂಥಾ ಗುರು ದೇಶಪಾಂಡೆ ಏಕಾಏಕಿ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆಂದರೆ, ಅಚ್ಚರಿಯಾಗೋದು ಸಹಜವೇ. ಅಸಲೀ ವಿಚಾರವೆಂದರೆ, ಅವರು ಸಿನಿಮಾ ವಿತರಣಾ ಕ್ಷೇತ್ರಕ್ಕೆ ಸೀನಿಯರ್. ದಶಕಗಳ ಹಿಂದೆ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿದ್ದ ಗುರು ದೇಶಪಾಂಡೆ ಕಾಟೇರ ಮೂಲಕ ಆ ಕ್ಷೇತ್ರಕ್ಕೆ ಮತ್ತೆ ಅಡಿಯಿರಿಸಿದ್ದಾರೆ.
ದರ್ಶನ್ ಸಿನಿಮಾಗಳೆಂದರೆ, ದಶದಿಕ್ಕುಗಳತ್ತಲೂ ಕ್ರೇಜ್ ಹಬ್ಬಿಕೊಳ್ಳೋದು ಮಾಮೂಲು. ಸದ್ಯದ ಮಟ್ಟಿಗೆ ಕಾಟೇರ ವಿಚಾರದಲ್ಲಿ ಈ ಹಿಂದಿಗಿಂತಲೂ ತುಸು ಹೆಚ್ಚೇ ನಿರೀಕ್ಷೆಗಳಿದ್ದಾವೆ. ಅದರಲ್ಲಿಯೂ ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಮಂದಿಯ ಸಿನಿಮಾ ವ್ಯಾಮೋಹ ಅತೀವವಾದದ್ದು. ಇಂಥಾ ಭಾಗದ ಕಾಟೇರ ವಿತರಣಾ ಹಕ್ಕು ಗುರು ದೇಶಪಾಂಡೆ ತೆಕ್ಕೆಗೆ ಬಿದ್ದಿದೆ. ಇದರೊಂದಿಗೆ ಸಿನಿಮಾ ವಿತರಕರಾಗಿ ಗುರು ದೇಶಪಾಡೆ ಅವರ ಸೆಕೆಂಡ್ ಇನ್ನಿಂಗ್ಸ್ ಕೂಡಾ ಭರ್ಜರಿ ಯಶ ದಕ್ಕಿಸಿಕೊಳ್ಳುವ ನಿಖರ ಸೂಚನೆಗಳೂ ಕಾಣಿಸುತ್ತಿವೆ.
ಗುರು ದೇಶಪಾಂಡೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಸಕ್ರಿಯರಾಗಿದ್ದರೂ ಕೂಡಾ, ಪ್ರಧಾನವಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ, 2010-11ನೇ ಸಾಲಿನಲ್ಲಿ ಅವರು ಸಿನಿಮಾ ವಿತರಕರಾಗಿ ಸಕ್ರಿಯರಾಗಿದ್ದರು. ಆ ಕಾಲದಲ್ಲಿ ರಜನೀಕಾಂತ್ ಮಾಜೀ ಅಳಿಯ ಧನುಶ್ ನಟಿಸಿದ್ದ ಅಡುಗಳಂ, ದೈವ ತಿರುಮಗಳ್, ದಳಪತಿ ವಿಜಯ್ ನಟಿಸಿದ್ದ ವೇಲಾಯುಧನ್, ಯಶ್ ಅಭಿನಯದ ಕಿರಾತಕ, ಸಂಜು ವೆಡ್ಸ್ ಗೀತಾದಂಥಾ ಹಿಟ್ ಸಿನಿಮಾಗಳನ್ನು ವಿತರಿಸುವ ಮೂಲಕ ಗೆದ್ದಿದ್ದರು. ಆ ನಂತರದಲ್ಲಿ ನಿರ್ದೇಶನದತ್ತ ಹೊರಳಿಕೊಂಡಿದ್ದ ಗುರು ದೇಶಪಾಂಡೆ ವಿತರಣಾ ಕ್ಷೇತ್ರದಿಂದ ಹಿಂದೆ ಸರಿದ್ದರು. ಇದೀಗ ದಶಕದ ನಂತರ, ಕಾಟೇರನ ಪ್ರಭೆಯಲ್ಲವರು ಹಳೇ ಹಾದಿಯಲ್ಲಿ ಹೊಸಾ ಹುರುಪಿನೊಂದಿಗೆ ಹೆಜ್ಜೆಯೂರಿದ್ದಾರೆ
ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಜಯಣ್ಣ (Jayanna) ಮತ್ತೊಂದು ಮೆಗಾ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸುತ್ತಿದ್ದಾರೆ. ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ (Jailer) ಸಿನಿಮಾದ ಕರ್ನಾಟಕ ವಿತರಣಾ (Distributed) ಹಕ್ಕು ಜಯಣ್ಣಗೆ ಸಿಕ್ಕಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡದೊಂದು ಗೆಲುವು ಕಾಣದ ಜಯಣ್ಣಗೆ ಈ ಸಿನಿಮಾ ಕೈ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.
ಒಂದು ಕಡೆ ಸಿನಿಮಾವನ್ನು ರಿಲೀಸ್ ಮಾಡಲು ದೇಶಾದ್ಯಂತ ಸರ್ವಸಿದ್ದತೆ ನಡೆಸಿದ್ದರೆ, ಮತ್ತೊಂದು ಕಡೆ ಚಿತ್ರದ ಟೈಟಲ್ (Title) ತಂಡಕ್ಕೆ ಸಂಕಷ್ಟ ತಂದಿದೆ ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಮಲಯಾಳಂ (Malayalam) ನಿರ್ದೇಶಕರೊಬ್ಬರು ಟೈಟಲ್ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ.
ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರದಿತ್ತು.
ಈಗ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಮೊದಲು ಜೈಲರ್ ಹೆಸರಿನಲ್ಲಿ ತಾವು ಸಿನಿಮಾ ಮಾಡಿದ್ದರಿಂದ ಮತ್ತು ಮಲಯಾಳಂನಲ್ಲಿ ತಮಗೆ ರಜನಿ ಸಿನಿಮಾದಿಂದ ತೊಂದರೆ ಆಗುವುದರಿಂದ, ಟೈಟಲ್ ಬದಲಾಯಿಸುವಂತೆ ಅವರು ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್ ದಿಗ್ಗಜರು ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.
ಸನ್ ಪಿಕ್ಚರ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್ (Shivaraj Kumar) ವಿಶೇಷ ಪಾತ್ರದಲ್ಲಿ ನಟಿಸಿರೋದು ಕುತೂಹಲ ಕೆರಳಿಸಿದೆ. ಇನ್ನು ಬಾಲಿವುಡ್ ನಟ ಜಾಕಿ ಶ್ರಾಫ್, ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal), ಟಾಲಿವುಡ್ ನಟ ಸುನಿಲ್, ನಾಗಬಾಬು, ನಟಿ ರಮ್ಯಾ ಕೃಷ್ಣ, ತಮನ್ನಾ ಭಾಟಿಯಾ ನಟಿಸಿದ್ದು, ಸಿನಿಪ್ರಿಯರಿಗೆ ಇವರೆಲ್ಲರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಸಿಗಲಿದೆ.
ಅಣ್ಣಾತ್ತೆ ಬಳಿಕ ರಜನಿ ನಟಿಸಿರುವ 169ನೇ ಸಿನಿಮಾ ಜೈಲರ್. ತಲೈವ ಹೊಸ ಸಿನಿಮಾ ಎಂಟ್ರಿಗೆ ಕಾದು ಕುಳಿತಿರುವ ಅಭಿಮಾನಿಗಳು ಹಬ್ಬ ಮಾಡಲು ಸಜ್ಜಾಗಿದ್ದಾರೆ. ರಾಕ್ ಸ್ಟಾರ್ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನದ ಜೈಲರ್ ಸಿನಿಮಾವನ್ನೂ ಚೆನ್ನೈ, ಮಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ಹಲವೆಡೆ ಶೂಟಿಂಗ್ ನಡೆಸಲಾಗಿದೆ.
ಧಾರವಾಡ: ಜಿಲ್ಲೆಯಲ್ಲಿ ಒಬ್ಬರು ಯುವ ವೈದ್ಯರಿದ್ದಾರೆ. ಇವರು ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆಯನ್ನೇ ಪಡೆದಿಲ್ಲ. ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಸರ್ಕಾರ ನೀಡಿದ್ದ ಸಂಬಳವನ್ನೆಲ್ಲಾ ನೇರವಾಗಿ ಕೋವಿಡ್ ಕೆಲಸಕ್ಕೇ ನೀಡಿ ಜನರ ಪ್ರಶಂಸೆಗೆ ಪಾತ್ರನಾಗಿದ್ದಾರೆ.
ಹೌದು ಧಾರವಾಡದ ಕಮಲಾಪೂರ ನಿವಾಸಿಯಾದ 23 ವರ್ಷದ ಡಾ. ಮಯೂರೇಶ್ ಲೋಹಾರ್, ಕಳೆದ ಜುಲೈ ತಿಂಗಳಲ್ಲಿ ಬಿಎಎಂಎಸ್ ಮುಗಿಸಿ ನೇರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದರು. ಅಷ್ಟೊತ್ತಿಗಾಗಲೇ ದೇಶದಲ್ಲಿ ಕೊರೊನಾ ಹಾವಳಿ ಮಿತಿ ಮೀರಿ ಹೋಗಿತ್ತು. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹುತೇಕ ಸರ್ಕಾರಿ ಸೇವೆಯಲ್ಲಿರೋ ಜನರು ಕೆಲಸ ಮಾಡಲು ಹಿಂದೇಟು ಹಾಕೋ ಸಮಯದಲ್ಲಿಯೇ, ಇವರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.
ಕೆಲಸಕ್ಕೆ ಬಂದ ಕೂಡಲೇ ಇವರನ್ನು ಕೋವಿಡ್ ವಾರ್ಡಿಗೆ ಕೆಲಸಕ್ಕೆ ನಿಯೋಜಿಸಲಾಯಿತು. 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಸತತವಾಗಿ ಮೂರು ತಿಂಗಳ ಕಾಲ ಕೋವಿಡ್ ವಾರ್ಡ್ ನಲ್ಲಿಯೇ ಕೆಲಸ ಮಾಡಿದ ಡಾ. ಮಯೂರೇಶ, ತಮಗೆ ಬಂದ ಸಂಬಂಳದಿಂದ ಇದೀಗ ಎನ್-95 ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಡಾ. ಮಯೂರೇಶ್ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿಯೂ ಕೆಲಸ ಮಾಡಿ, ಅಲ್ಲಿ ಬಂದ ಸಂಬಳ ಹಾಗೂ ಸರ್ಕಾರಿ ಸಂಬಳವನ್ನು ಒಟ್ಟಾರೆ ಸೇರಿಸಿ, ಒಂದೂವರೆ ಲಕ್ಷ ರೂಪಾಯಿಯ ಮಾಸ್ಕ್ ಖರೀದಿಸಿ ಉಚಿತವಾಗಿ ಹಂಚಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಬಳದಲ್ಲಿಯೇ ಸಮಾಜಕ್ಕೆ ಸಹಾಯ ಮಾಡುತ್ತಿರೋ ಇವರ ಸೇವೆಗೆ ಗೆಳೆಯರು ಸಾಥ್ ನೀಡಿದ್ದಾರೆ. ಒಟ್ಟು 5,000 ಎನ್ 95 ಹಾಗೂ 5,000 ಥ್ರೀ ಲೇಯರ್ ಮಾಸ್ಕ್‍ಗಳನ್ನು ಇದುವರೆಗೂ ಹಂಚಿರುವ ಈ ವೈದ್ಯ, ಶಾಲೆಗಳು ಆರಂಭವಾಗೋ ಸಾಧ್ಯತೆ ಇರುವುದರಿಂದ ಬಿಇಓ ಕಚೇರಿಗೆ 1,000, ಪೊಲೀಸ್ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿದಂತೆ ಧಾರವಾಡದ ವಿವಿಧ ಪ್ರದೇಶಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ನೀಡಿದ್ದಾರೆ.
ರಾಯಚೂರು: ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಗೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನ ಅಕ್ಷರಶಃ ಬೀದಿಗೆ ಬಂದಿದ್ದರು. ಇಲ್ಲಿನ ಜನರ ಪರಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದ್ದಾರೆ.
ಅತೀವೃಷ್ಟಿಯಿಂದ ರಾಯಚೂರು ಜಿಲ್ಲೆ ಈಗ ತತ್ತರಿಸಿ ಹೋಗಿದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಾಯಚೂರು ತಾಲೂಕಿನ ಬಹುತೇಕ ಹಳ್ಳಿಗಳು ಅಲ್ಲೋಲ ಕಲ್ಲೋಲವಾಗಿವೆ. ನೂರಾರು ಮನೆಗಳು ಬಿದ್ದಿವೆ, ಸಾವಿರಾರು ಎಕ್ರೆ ಜಮೀನು ಹಾಳಾಗಿದೆ. ರೈತರ ಬದುಕು ಬೀದಿಗೆ ಬಂದಿದೆ. ಇಲ್ಲಿನ ಇಡಪನೂರು ಗ್ರಾಮದ ಪರಸ್ಥಿತಿಯಂತೂ ಹೇಳತೀರದು. ಗ್ರಾಮದಲ್ಲಿ 56 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು 100ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಹೀಗಾಗಿ ಜನ ಸೂರಿಲ್ಲದೆ ಸಂತ್ರಸ್ತರಾಗಿದ್ದಾರೆ.
ಜಿಲ್ಲಾಡಳಿತ ಒಂದೆರಡು ಬಾರಿ ದಿನಸಿ ಪದಾರ್ಥ ನೀಡಿ ಕೈ ತೊಳೆದುಕೊಂಡಿತ್ತು. ಗ್ರಾಮದ ಶಾಲೆ, ಸಮುದಾಯ ಭವನದಲ್ಲಿ ಸಂತ್ರಸ್ತರು ಒಂದು ತಿಂಗಳಿಂದ ಆಶ್ರಯ ಪಡೆದಿದ್ದಾರೆ. ಆದರೆ ಊಟಕ್ಕೆ ಕಷ್ಟಪಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ರಾಯಚೂರು ರೋಟರಿ ಕ್ಲಬ್ ಹಾಗೂ ಸಾವಿತ್ರಿ ಗ್ರೂಪ್ ರಾಯಚೂರು ಸಹಯೋಗದಲ್ಲಿ ಆಹಾರ ಕಿಟ್ ವಿತರಿಸಲಾಯಿತು.
ಪಬ್ಲಿಕ್ ಟಿವಿ ವರದಿ ಬಳಿಕ ಜಿಲ್ಲಾಡಳಿತ ಸಹ ಎಚ್ಚೆತ್ತು ಸಂತ್ರಸ್ತರು ಶೆಡ್ ನಿರ್ಮಿಸಿಕೊಳ್ಳಲು ಟಿನ್ ಹಾಗೂ ಪೊಲೀಸ್ ವಿತರಣೆ ಮಾಡಿದ್ದಾರೆ. ಆದರೆ ಸಂಪೂರ್ಣ ಮನೆಗಳು ಬಿದ್ದು ಮನೆಯಲ್ಲಿನ ದವಸ ಧಾನ್ಯವನ್ನೂ ಕಳೆದುಕೊಂಡ ಜನ ಊಟಕ್ಕೆ ಪರದಾಡುವ ಸ್ಥಿತಿಯಿದೆ. ಪ್ರತಿದಿನ ಕೂಲಿ ಕೆಲಸ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಶಾಲೆ ಸಮುದಾಯ ಭವನದಲ್ಲೇ ವಾಸವಾಗಿದ್ದಾರೆ. ಆದರೆ ಈಗ ಮತ್ತೆ ಮಳೆ ಬಂದಿದ್ದರಿಂದ ಕೂಲಿ ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದರು. ಸಂತ್ರಸ್ತರ ಸಂಕಷ್ಟದ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ವರದಿಗೆ ಸ್ಪಂದನೆ ಸಿಕ್ಕಿದ್ದರಿಂದ ನಿರಾಶ್ರಿತರಿಗೆ ಆಹಾರದ ಕಿಟ್ ಸಿಕ್ಕಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ: ಪಬ್ಲಿಕ್ ಟಿವಿಯ ಮನೆಯೇ ಮಂತ್ರಾಲಯ ಕಾರ್ಯಕ್ರಮದಲ್ಲಿ ಶುಕ್ರವಾರ ಹುಬ್ಬಳ್ಳಿಯ ಪದ್ಮಾವತಿಯವರು ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಆಹಾರವಿಲ್ಲದೇ ಜೀವನ ನಡೆಸುವಂತಾಗಿದೆ ಎಂದು ಪಬ್ಲಿಕ್ ಟಿವಿಯ ಕಾರ್ಯಕ್ರಮದ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಯುವ ಮುಖಂಡ ದೀಪಕ್ ನಾಯ್ಡು ಅವರು ಪದ್ಮಾವತಿಯವರಿಗೆ ಮನೆಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.
ಹುಬ್ಬಳ್ಳಿಯ ಆನಂದನಗರದಲ್ಲಿರುವ ಪದ್ಮಾವತಿಯವರ ಸ್ವಗೃಹಕ್ಕೆ ಭೇಟಿ ನೀಡಿದ ದೀಪಕ್ ನಾಯ್ಡು ಅವರು, ಅಕ್ಕಿ, ರವಾ, ಅವಲಕ್ಕಿ, ಬೆಳೆ, ಎಣ್ಣೆ, ತೊಗರಿಬೆಳೆ, ಸಕ್ಕರೆ ಚಹಾಪುಡಿ ಇರುವ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಈ ಮೂಲಕ ಮನೆಯ ಮಂತ್ರಾಲಯ ಕಾರ್ಯಕ್ರಮದಲ್ಲಿ ನೋವನ್ನು ತೋಡಿಕೊಂಡ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಶಿವಮೊಗ್ಗ: ಕೊರೊನಾ ಮಹಾಮಾರಿ ಸೋಂಕು ರೈತರಿಗೂ ಬೆಂಬಿಡದೇ ಕಾಡುತ್ತಿದ್ದು, ತಾವು ಬೆಳೆದ ಬೆಳೆ, ಹಣ್ಣುಗಳನ್ನು ಮಾರಾಟ ಮಾಡಲಾಗದೇ ರೈತರು ಒದ್ದಾಡುತ್ತಿದ್ದಾರೆ. ಈ ವೇಳೆ ಸರ್ಕಾರವೇನಾದರೂ ಸಹಾಯ ಮಾಡಲಿ ಎಂದು ಗೋಗರೆಯುತ್ತಿದ್ದಾರೆ.
ಈ ರೀತಿಯ ಸಂದರ್ಭದಲ್ಲಿ ಹಣ್ಣು ಬೆಳೆದ ಬೆಳೆಗಾರರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಬೆಂಬಲವಾಗಿ ನಿಂತಿದ್ದು, ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ತಾವೇ ಸ್ವಂತ ಹಣದಿಂದ ಖರೀದಿ ಮಾಡಿದ್ದಾರೆ. ಜೊತೆಗೆ ಇದನ್ನು ಸಾರ್ವಜನಿಕರಿಗೆ ವಿತರಿಸುವ ಕೆಲಸ ಕೂಡ ಮಾಡುತ್ತಿದ್ದಾರೆ.
ಹಣ್ಣು ಬೆಳೆಗಾರರಿಗೆ ನಷ್ಟವುಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಚಿವರು ತಾವೇ ಖರೀದಿಸಿ, ರೈತರ ಕೈ ಹಿಡಿದಿದ್ದಾರೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಹಣ್ಣು ಬೆಳೆಗಾರರು ವಿವಿಧ ಹಣ್ಣುಗಳನ್ನು ಬೆಳೆದು ಕೆಲವು ಕಡೆಗಳಲ್ಲಿ ನಾಶ ಮಾಡಿದ್ದರು. ಆದರೆ ಕೆಲವು ಭಾಗದಲ್ಲಿ ಕಲ್ಲಂಗಡಿ ಬೆಳೆದು ಮಾರಾಟ ಮಾಡಲಾಗದೆ, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದ ಬೆಳಗಾರರಿಗೆ ಸಚಿವ ಈಶ್ವರಪ್ಪ ಬೆನ್ನೆಲುಬಾಗಿ ನಿಂತಿದ್ದಾರೆ. ವಿವಿಧ ಬೆಳೆಗಾರರಿಂದ ಸುಮಾರು 70 ಸಾವಿರ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮಾನವೀಯತೆ ಮೆರೆದಿದ್ದಾರೆ.
ಅದರಂತೆ ಇಂದು ಈ ಹಣ್ಣುಗಳ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಬಳಿ ಹಣ್ಣುಗಳು ತುಂಬಿದ್ದ ವಾಹನಗಳಿಗೆ ಚಾಲನೆ ನೀಡಿದರು. ನಗರದ 35 ವಾರ್ಡ್ ಗಳಿಗೆ ತೆರಳಿ ಅಲ್ಲಿನ ಅರ್ಹ ಬಡವರಿಗೆ ಈ ಹಣ್ಣನ್ನು ಉಚಿತವಾಗಿ ಹಂಚುವ ಕಾರ್ಯವನ್ನು ಇಂದು ಸಚಿವ ಈಶ್ವರಪ್ಪ ಮಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಲಾಕ್‍ಡೌನ್‍ನಿಂದ ಯಾವುದೇ ವಸ್ತುಗಳು ಸಿಗದೆ ಜನರು ಪರದಾಡುತ್ತಿದ್ದಾರೆ. ಹೀಗಾಗಿ ಟಿ.ದಾಸರಹಳ್ಳಿ ಜೆಡಿಎಸ್ ಶಾಸಕ ಮಂಜುನಾಥ್ ಬರೋಬ್ಬರಿ 15 ಸಾವಿರ ಕುಟುಂಬಕ್ಕೆ ದಿನಸಿ ವಿತರಣೆ ಮಾಡಲು ಸಿದ್ಧರಾಗಿದ್ದಾರೆ.
ನೂರಾರು ಸ್ವಯಂ ಸೇವಕ ಯುವಕ-ಯುವತಿಯರ ತಂಡದಿಂದ ವಿವಿಧ ಧಾನ್ಯಗಳ ಪ್ಯಾಕೇಜ್ ತಯಾರಿ ಮಾಡಿಸುತ್ತಿದ್ದಾರೆ. ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿ ಇರುವುದರಿಂದ ಜನರ ಹಸಿವು ನೀಗಿಸುವ ನಿಟ್ಟಿನಲ್ಲಿ ಶಾಸಕರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಅಕ್ಕಿ, ನಾಲ್ಕು ಬಗೆಯ ಬೇಳೆ ಕಾಳುಗಳು, ಅಡುಗೆ ಎಣ್ಣೆ, ಸೇರಿದಂತೆ ಇನ್ನಿತರ ಪದಾರ್ಥಗಳ ಪ್ಯಾಕೇಜ್ ಮಾಡಿ ಎಲ್ಲಾ ಹಸಿದ ಬಡ ಜನರ ಕುಟುಂಬಕ್ಕೆ ವಿತರಣೆ ಮಾಡಲಾಗುತ್ತಿದೆ.
ಈ ವೇಳೆ ಶಾಸಕ ಮಂಜುನಾಥ್ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಈ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ಜನರು ಕಂಗಾಲಾಗಿದ್ದಾರೆ. ಲಾಕ್‍ಡೌನ್‍ನಿಂದ ಜನರು ಪರದಾಡುತ್ತಿದ್ದು, ಪಕ್ಷ ಭೇದ ಮರೆತು ಎಲ್ಲರಿಗೂ ದವಸ ಧಾನ್ಯಗಳನ್ನ ನೀಡುವ ತೀರ್ಮಾನಕ್ಕೆ ನಾವು ಹಾಗೂ ನಮ್ಮ ಮುಖಂಡರು ಬಂದಿದ್ದೇವೆ. ಹೀಗಾಗಿ ಉತ್ತಮ ಗುಣಮಟ್ಟದ ದಿನಸಿ ಧಾನ್ಯಗಳನ್ನ ತಂದು ಸರಿ ಸಮನಾಗಿ ಪ್ಯಾಕೆಟ್ ಮಾಡಿ ಹಸಿದವರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ಇಂತಹ ಲಾಕ್‍ಡೌನ್ ವೇಳೆ ನಮ್ಮ ಸ್ವಯಂ ಸೇವಕ ಯುವಕ-ಯುವತಿಯರು ಸ್ಯಾನಿಟೈಸರ್ ಹಾಗೂ ಮಾಸ್ಕ್ ಧರಿಸಿ ಅಂತರವನ್ನ ಕಾಯ್ದುಕೊಂಡು ಎಲ್ಲಾ ಪದಾರ್ಥಗಳನ್ನ ಪ್ಯಾಕೆಟ್ ಮಾಡಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಂಗಳೂರು: ಕೊರೊನಾ ವೈರಸ್ ಮಹಾಮಾರಿಗೆ ಜನ ಕಂಗೆಟ್ಟಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾನಿಯೊಬ್ಬರು ನೆರವಾಗಲು ಮುಂದೆ ಬಂದಿದ್ದಾರೆ.
ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಯ ಮಾಲಕ, ಉದ್ಯಮಿ ಪ್ರಕಾಶ್ ಶೆಟ್ಟಿ ಬರೋಬ್ಬರಿ ಒಂದು ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್ ವಿತರಣೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಡ ಜನರಿಗೆ ಈ ಕಿಟ್ ವಿತರಣೆಯಾಗಲಿದೆ. ಒಂದೊಂದು ಕಿಟ್‍ನಲ್ಲಿ 10ಕೆಜಿ ಅಕ್ಕಿ, 2ಕೆಜಿ ಸಕ್ಕರೆ, 1ಕೆಜಿ ಬೇಳೆ, 1/2ಕೆಜಿ ಚಾಪುಡಿ, 1/2ಕೆಜಿ ರಸಂ ಪುಡಿ ಒಳಗೊಂಡಿದೆ.
ಒಟ್ಟು 10 ಸಾವಿರ ಕಿಟ್‍ಗಳು ಇದ್ದು ಎರಡು ಜಿಲ್ಲೆಗೆ ತಲಾ 5 ಸಾವಿರ ಕಿಟ್ ಹಂಚಲಾಗಿದೆ. ಎರಡು ಜಿಲ್ಲೆಯ ಎಲ್ಲಾ ಶಾಸಕರ ಮುಖಾಂತರ ಇದು ಬಡ ಜನರಿಗೆ ತಲುಪಲಿದೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಕಿಟ್ ವಿತರಣೆಗೆ ಚಾಲನೆ ನೀಡಿದರು. ಪ್ರಕಾಶ್ ಶೆಟ್ಟಿ ಅವರ ಈ ಕಾರ್ಯ ಇತರ ದಾನಿಗಳಿಗೂ ಪ್ರೇರಣೆಯಾಗಲಿ ಎಂದು ಪಾಲಿಕೆ ಆಯುಕ್ತರು ಇದೇ ಸಂದರ್ಭ ಹೇಳಿದರು.
ಕಾರವಾರ: ಯಾವುದೇ ಕಾರ್ಯಕ್ರಮವಿರಲಿ ಬಂದ ಅಥಿತಿಗಳಿಗೆ ಸಿಹಿ ನೀಡಿ ಮೃಷ್ಟಾನ್ನ ಭೋಜನ ನೀಡುವ ಮೂಲಕ ಅತಿಥಿ ಸತ್ಕಾರ ಮಾಡುವುದು ಸಂಪ್ರದಾಯ .
ಯಲ್ಲಾಪುರ ತಾಲೂಕಿನ ಚಂದಗುಳಿಯಲ್ಲಿ ಬುಧವಾರ ನಡೆದ ಉಪನಯನವೊಂದರಲ್ಲಿ ವಿತರಿಸಿದ ವಿಭಿನ್ನ ಉಂಡೆ ಅತಿಥಿಗಳನ್ನು ಮೆಚ್ಚಿಸುವಂತೆ ಮಾಡಿತ್ತು. ಅಲ್ಲಿ ವಿತರಿಸಿದ್ದು ಯಾವುದೇ ಸಿಹಿಯಾದ ಉಂಡೆಯಾಗಿರದೇ ಪ್ಯಾಕ್ ಮಾಡಿದ ಬೀಜದುಂಡೆಯಾಗಿತ್ತು. ವೀಣಾ ಹಾಗೂ ರಾಮಚಂದ್ರ ವೈದ್ಯ ದಂಪತಿಗಳ ಪುತ್ರನಾದ ಆದಿತ್ಯ (ಜಯಶೀಲ)ನ ಉಪನಯನವನ್ನು ತಾಲೂಕಿನ ಚಂದಗುಳಿ ಗಂಟೆ ಗಣಪತಿ ದೇವಾಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಮ್ಮ ಮಗನ ಉಪನಯನ ವಿಭಿನ್ನವಾಗಿರಬೇಕು ಮತ್ತು ಈ ಶುಭಕಾರ್ಯದ ಸವಿನೆನಪು ಚಿರಸ್ಥಾಯಿಯಾಗಿರಬೇಕು ಎನ್ನುವ ಉದ್ದೇಶದಿಂದ ಈ ದಂಪತಿ ಆಯ್ಕೆ ಮಾಡಿಕೊಂಡಿದ್ದು ಪರಿಸರ ಜಾಗೃತಿ. ಮಗನ ಉಪನಯನದ ಹೆಸರಿನಲ್ಲಿ ನೂರಾರು ಗಿಡಗಳು ಅಲ್ಲಲ್ಲಿ ಬೆಳೆದು ನಿಲ್ಲಲಿ, ಈ ಮೂಲಕ ಹಸಿರು ಪರಿಸರ ಹೆಚ್ಚಾಗಲಿ ಎಂಬ ಉದ್ದೇಶದಿಂದ ಬೀಜದುಂಡೆಗಳನ್ನು ತಯಾರಿಸಿ, ಬಂದಂತಹ ಅತಿಥಿಗಳಿಗೆ ಆದಿತ್ಯನ ಆಧ್ಯಾತ್ಮಿಕ ಪಯಣಕ್ಕೆ ಸಾಕ್ಷಿಯಾಗಿ ಹರಸಿ. ಪ್ರೀತಿಯಿಂದ ನಾವು ನೀಡುವ ಜೀವಗಾಳು ಪಸರಿಸಿ ಎಂಬ ಸಂದೇಶದೊಂದಿಗೆ ವಿತರಿಸಿದ್ದಲ್ಲದೇ, ಇದನ್ನು ನಿಮ್ಮ ಮನೆಯ ಸುತ್ತಮುತ್ತಲಿನ ಖಾಲಿ ಪ್ರದೇಶದಲ್ಲಿ ಹಾಕುವುದರ ಮೂಲಕ ಹಸಿರು ಪರಿಸರ ಹೆಚ್ಚಾಗಲು ಕೈಜೋಡಿಸಿ ಎಂಬ ಮನವಿಯನ್ನೂ ಮಾಡಿಕೊಳ್ಳಲಾಯಿತು.
ಈ ವಿಚಾರದ ಬಗ್ಗೆ ಮಾತನಾಡಿರುವ ಈ ಬೀಜದುಂಡೆ ವಿತರಣೆಯ ರೂವಾರಿ ಆದಿತ್ಯನ ಕುಟುಂಬದವರಾದ ವಾನಳ್ಳಿಯ ನಾಗವೇಣಿ ಹೆಗಡೆ, ಅತಿಥಿಗಳಿಗೆ ವಿತರಿಸಲು ಎರಡು ಜಾತಿಯ ಮರಗಳಾದ ನೇರಳೆ, ಹಲಸು ಮುಂತಾದ ಬೀಜಗಳುಳ್ಳ ಸುಮಾರು 1200 ಹೆಚ್ಚು ಬೀಜದುಂಡೆಗಳನ್ನು ತಯಾರಿಸಿ ವಿತರಿಸಿದ್ದೇವೆ. ಅವುಗಳಲ್ಲಿ ನೂರು ಗಿಡಗಳು ಹುಟ್ಟಿ, ಮರವಾಗಿ ಬೆಳೆದು ನಿಂತರೆ ಪರಿಸರಕ್ಕೊಂದು ಕೊಡುಗೆ ನೀಡಬೇಕೆಂದ ನಮ್ಮ ಅಭಿಲಾಶೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ರೀತಿ ಶುಭ ಕಾರ್ಯಗಳಲ್ಲಿ ಸಾಮಾಜಿಕ ಸಂದೇಶವನ್ನು, ಪರಿಸರ ಜಾಗೃತಿಯನ್ನು ಮೂಡಿಸುವಂತಾದರೆ ಶುಭ ಕಾರ್ಯ ಸಾಮಾಜಿಕ ಕಾರ್ಯವಾಗುವುದರಲ್ಲಿ ಸಂಶಯವಿಲ್ಲ.