Tag: ವಿಡಿಯೋ ಕಾನ್ಫೆರೆನ್ಸ್

  • ಪ್ರಧಾನಿ ಜೊತೆ ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂವಾದ

    ಪ್ರಧಾನಿ ಜೊತೆ ರಾಜ್ಯದ ಗ್ರಾಮ ಪಂಚಾಯತ್ ಅಧ್ಯಕ್ಷ ಸಂವಾದ

    – ಕೊರೊನಾ ವೈರಸ್ ತಡೆ ಬಗ್ಗೆ ಚರ್ಚೆ

    ಚಿಕ್ಕಬಳ್ಳಾಪುರ: ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಿದರು.

    ಅಂದಹಾಗೆ ಪ್ರಧಾನಮಂತ್ರಿಗಳ ಜೊತೆ ರಾಜ್ಯದ ಇಬ್ಬರು ಗ್ರಾಮಪಂಚಾಯ್ತಿ ಅಧ್ಯಕ್ಷರು ಅಯ್ಕೆಯಾಗಿದ್ದರು ಎನ್ನಲಾಗಿದೆ. ಇದರಲ್ಲಿ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿಯ ಗ್ರಾಮಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್ ಸಹ ಒಬ್ಬರು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ಮೋದಿಯವರ ಜೊತೆ ಸಂವಾದ ನಡೆಸಿದರು.

    ಸಂವಾದದಲ್ಲಿ ಕೊರೊನಾ ವೈರಸ್ ತಡೆಯುವ ಸಲುವಾಗಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು. ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನಂ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಚಿಕ್ಕನರಸಿಂಹಯ್ಯ ಸೇರಿದಂತೆ ಕೆಲ ಜಿಲ್ಲಾ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಸಂವಾದದ ನಂತರ ಪ್ರತಿಕ್ರಿಯಿಸಿದ ಗ್ರಾಮಪಂಚಾಯತ್ ಅಧ್ಯಕ್ಷ ನವೀನ್ ಕುಮಾರ್, ನಾನು ಕನಸು ಮನಸ್ಸಿನಲ್ಲಿಯೂ ಪ್ರಧಾನಿ ಮೋದಿಯವರ ಜೊತೆ ಮಾತನಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈಗ ಮಾತನಾಡಿರೋದು ಬಹಳ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಸಿಇಓ ಫೌಜಿಯಾ ತರನಂ ಮಾತನಾಡಿ ಮೋದಿ ಅವರು 4-5 ನಿಮಿಷಗಳ ಕಾಲ ನಮ್ಮ ಜಿಲ್ಲೆಯ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಜೊತೆ ಮಾತನಾಡಿದರು, ಕೊರೊನಾ ಬಗ್ಗೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತೆಗೆದುಕೊಂಡ ಕ್ರಮಗಳು. ಮನೆ ಮನೆಗೆ ಪಡಿತರ ವಿತರಣೆ ಮಾಡಿದ್ದು, ವಲಸಿಗರಿಗೆ ಸೂಕ್ತ ವಸತಿ ಊಟ ವ್ಯವಸ್ಥೆ ಹಾಗೂ ಔಷಧಿಗಳ ವಿತರಣೆ ಮಾಡಿದರ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾಹಿತಿ ನೀಡಿದ ನಂತರ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನ ಸಲ್ಲಿಸಿದರು ಎಂದು ತಿಳಿಸಿದರು.

  • ಕೊಹ್ಲಿ, ಸಚಿನ್, ಗಂಗೂಲಿ ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಸಭೆ

    ಕೊಹ್ಲಿ, ಸಚಿನ್, ಗಂಗೂಲಿ ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಸಭೆ

    – ಕ್ರೀಡಾಪಟುಗಳ ಕೆಲಸವನ್ನು ಹಾಡಿಹೊಗಳಿದ ಪಿಎಂ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಸುಮಾರು 40 ಜನ ಕ್ರೀಡಾಪುಟಗಳ ಜೊತೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

    ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 24ರಂದು 21 ದಿನಗಳ ಲಾಕ್‍ಡೌನ್ ಜಾರಿಗೊಳಿಸಿದ ನಂತರ ಮೋದಿ ಅವರು ಕ್ರೀಡಾಪಟುಗಳ ಜೊತೆ ಇದೇ ಮೊದಲ ಬಾರಿಗೆ ಸಂವಹನ ನಡೆಸಿದ್ದಾರೆ. ಈ ಸಭೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದ ಪರಿಸ್ಥಿತಿ ಮತ್ತು ಲಾಕ್‍ಡೌನ್‍ನಿಂದ ಆಗಿರುವ ಪರಿಣಾಮಗಳ ಬಗ್ಗೆ ಕ್ರೀಡಾಪಟುಗಳ ಜೊತೆ ಚರ್ಚೆ ಮಾಡಿದ್ದಾರೆ.

    ಈ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಕೊಹ್ಲಿ, ಸಚಿನ್ ಮತ್ತು ಗಂಗೂಲಿಯವರ ಜೊತೆ, ಓಟಾಗಾರ್ತಿ ಪಿಟಿ ಉಷಾ, ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲಾ ಗೋಪಿಚಂದ್, ಚೆಸ್ ಆಟಗಾರ ವಿಶ್ವನಾಥನ್ ಆನಂದ್, ರನ್ನರ್ ಹಿಮಾ ದಾಸ್, ಕುಸ್ತಿಪಟು ಭಜರಂಗ್ ಪುನಿಯಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಕ್ರಿಕೆಟಿಗರಾದ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಚೇತೇಶ್ವರ ಪೂಜಾರ ಇತರ ಪ್ರಮುಖ ಕ್ರೀಡಾಪಟುಗಳು ಇದ್ದರು.

    ಈ ಸಮಯದಲ್ಲಿ ಕ್ರೀಡಾಪಡುಗಳು ರಾಷ್ಟ್ರಕ್ಕಾಗಿ ಮೈದಾನದಲ್ಲಿ ಪಡುವ ಕಷ್ಟವನ್ನು ಮೋದಿ ಅವರು ಶ್ಲಾಘಿಸಿದ್ದಾರೆ. ಇದರ ಜೊತೆಗೆ ಕ್ರೀಡಾಪಟುಗಳು ಈಗ ದೇಶದಲ್ಲಿ ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಮತ್ತು ಈಗಿನ ಪರಿಸ್ಥಿತಿಯ ಬಗ್ಗೆ ತಿಳಿ ಹೇಳುವ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಸರ್ಕಾರ ಮಾಡಿರುವ ನಿಯಮಗಳನ್ನು ಜನರು ಪಾಲಿಸುವಂತೆ ಮಾಡಬೇಕು ಎಂದು ಕ್ರೀಡಾಪಟುಗಳಿಗೆ ಕೇಳಿಕೊಂಡಿದ್ದಾರೆ.

    ಕೊರೊನಾ ವೈರಸ್ ನಿಂದ ಉಂಟಾಗುವ ಪರಿಸ್ಥಿತಿಯ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಿ ನಂತರ ಟ್ವೀಟ್ ಮಾಡಿರುವ ಮೋದಿ ಅವರು, ಕ್ರೀಡೆಗಳಲ್ಲಿ ಸ್ವಯಂ-ಶಿಸ್ತು, ಸ್ಥಿರತೆ, ತಂಡದ ಕೆಲಸ ಮತ್ತು ಹೋರಾಟದ ಮನೋಭಾವ ಬೇಕು. ಹಾಗೇಯೆ ಕೊರೊನಾ ವೈರಸ್ ಅನ್ನು ಸೋಲಿಸಲು ಇವುಗಳ ಅಗತ್ಯ ನಮಗಿದೆ ಎಂದಿದ್ದಾರೆ.

    ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಮೋದಿ, ಫಿಟ್‍ನೆಸ್‍ನ ಮಹತ್ವವನ್ನು ಸಾರುವ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ, ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರಿಂದ, ಸಾಮಾಜಿಕ ಅಂತರಕ್ಕೆ ಒತ್ತು ನೀಡಿ ಜೊತೆಗೆ ಪಿಎಂ ಕೇರ್ಸ್ ನಂತಹ ಪ್ರಯತ್ನಗಳಿಗೆ ಸಹಕರಿಸಿ ನಮ್ಮ ಕ್ರೀಡಾಪಟುಗಳು ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ನೀಡಿದ್ರು 10 ಹೆಲ್ತ್ ಟಿಪ್ಸ್

    ಕೊರೊನಾ ವಿರುದ್ಧ ಹೋರಾಟಕ್ಕೆ ಮೋದಿ ನೀಡಿದ್ರು 10 ಹೆಲ್ತ್ ಟಿಪ್ಸ್

    ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಅವರು 10 ಹೆಲ್ತ್ ಟಿಪ್ಸ್ ಗಹಳನ್ನು ನೀಡಿದ್ದಾರೆ.

    ತಲೆ ಬರಹ ಓದಿ ಕನ್‍ಫ್ಯೂಸ್ ಆಗಬೇಡಿ. ಮೋದಿ ಸರ್ಕಾರದ ಅಯುಷ್ ಇಲಾಖೆ ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲವೊಂದು ಸಲಹೆ ನೀಡಿದೆ. ಈ ಸಲಹೆ ಇರುವ ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಓದಿ: ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    10 ಹೆಲ್ತ್ ಟಿಪ್ಸ್
    1. ದಿನವಿಡಿ ಬಿಸಿ ನೀರು ಕುಡಿಯಿರಿ.
    2. ದಿನಕ್ಕೆ ಮೂವತ್ತು ನಿಮಿಷ ಯೋಗಾಸನ, ಪ್ರಾಣಾಯಾಮ ಮಾಡಿ.
    3. ಆಹಾರದಲ್ಲಿ ಅರಶಿನ, ಧನಿಯಾ, ಬೆಳ್ಳುಳ್ಳು ಯಥೇಚ್ಚವಾಗಿ ಬಳಸಿ.
    4. ಚವನಪ್ರಾಶ ನಿತ್ಯ ಒಂದು ಸ್ಪೂನ್ (ಜೇನು ತುಪ್ಪ, ಸಕ್ಕರೆ, ತುಪ್ಪ ಹಾಕಿ ಮಾಡಿರೋದು)
    5. ದಿನಕ್ಕೆರಡು ಬಾರಿ ಹರ್ಬಲ್ ಟೀ ಕುಡಿಯಿರಿ.( ತುಳಸಿ, ದಾಲ್ಚಿನ್ನಿ, ಬೆಲ್ಲ, ಲೆಮನ್ ಹಾಕಿರುವ ಟೀ)
    6. ಅರಶಿನ ಹಾಕಿರುವ ಹಾಲು ದಿನಕ್ಕೊಂದು ಅಥವಾ ಎರಡು ಬಾರಿ.
    7. ನಿತ್ಯವೂ ಬಿಸಿ ನೀರಿನಲ್ಲಿ ಪುದೀನ ಹಾಕಿ ಅದ್ರ ಗಾಳಿಯನ್ನು ತೆಗೆದುಕೊಳ್ಳುವುದು.
    8. ಮೂಗಿಗೆ ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿಕೊಳ್ಳುವುದು.
    9. ಅಯಿಲ್ ಪುಲ್ಲಿಂಗ್ ಅಂದ್ರೆ ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಎರಡರಿಂದ ಮೂರು ನಿಮಿಷ ಬಾಯಿ ಮುಕ್ಕಳಿಸಬೇಕು. ಅದನ್ನು ನುಂಗಬಾರದು. ಆಮೇಲೆ ಬಿಸಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.
    10. ಲವಂಗವನ್ನು ಸಕ್ಕರೆ ಹನಿಯ ಜೊತೆ ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು. ಕಫ ಕೆಮ್ಮು ಸಮಸ್ಯೆ ಇದ್ದರೆ ಇದನ್ನು ಪ್ರಾಕ್ಟೀಸ್ ಮಾಡಬೇಕು.