Tag: ವಿಡಿಯೋ ಕಾನ್ಫರೆನ್ಸ್

  • ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

    ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

    ಬೆಂಗಳೂರು: ದೇಶಾದ್ಯಂತ ಕೂರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗುತ್ತಿರುವುದು ಕೇಂದ್ರ ಸರ್ಕಾರದ ನೆಮ್ಮದಿಯನ್ನು ಕೆಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರವು ಹಲವು ಗಂಭೀರ ಮತ್ತು ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ರಾಜ್ಯಗಳ ಮಟ್ಟದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪಡೆಯಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮುಂದಾಗಿದ್ದಾರೆ.

    ನಾಳೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರುಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದು, ಕೊರೊನಾ ನಿಯಂತ್ರಣ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳಿಂದ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರುಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಸಹ ಪ್ರಧಾನಿಗಳ ವಿಡಿಯೋ ಸಂವಾದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಗೂ ಮುನ್ನ ಸಿಎಂ ಯಡಿಯೂರಪ್ಪ ಅವರು ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಕರೆದಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಾಳೆ ಮಧ್ಯಾಹ್ನ 3.30ಕ್ಕೆ ಸಿಎಂ ಪೂರ್ವಭಾವಿ ಸಭೆ ನಡೆಸಲಿದ್ದಾರೆ.

    ಈ ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ಪೀಡಿತರು, ಶಂಕಿತರು, ನಿಯಂತ್ರಣ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಎಂ ಪಡೆಯಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳು ನಡೆಸುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಯಾವ ಸಲಹೆ-ಸೂಚನೆಗಳನ್ನು ಕೊಡುತ್ತಾರೆ ಕಾದು ನೋಡಬೇಕಿದೆ.

  • ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ – ಕೊರೊನಾ ಕುರಿತು ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲು ಕ್ರಮ

    ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ – ಕೊರೊನಾ ಕುರಿತು ಮಾಹಿತಿಗಾಗಿ ಸಹಾಯವಾಣಿ ಆರಂಭಿಸಲು ಕ್ರಮ

    ಬೀದರ್: ಕೊರೊನಾ ವೈರಸ್ ಸೋಂಕು ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗಲು ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸುವ ಕುರಿತಂತೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್ ಮಹಾದೇವ್ ಅವರು ಡಿಹೆಚ್‍ಓ ಮತ್ತು ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ ವಿಜಯ್‍ಭಾಸ್ಕರ್ ಅವರು ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಬಳಿಕ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೊರ ದೇಶ ಅಥವಾ ಹೊರ ರಾಜ್ಯಗಳಿಂದ ವಿಮಾನ, ರೈಲ್ವೆ ಅಥವಾ ಬಸ್‍ಗಳ ಮೂಲಕ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳ ತಪಾಸಣೆ ನಡೆಸಬೇಕು. ಕೆಲವು ದಿನಗಳ ಹಿಂದೆ ಜಿಲ್ಲೆಗೆ ಯಾರಾದರೂ ಕೊರೊನಾ ಸೋಂಕು ಪೀಡಿತ ರಾಷ್ಟ್ರಗಳಿಂದ ಆಗಮಿಸಿದ್ದರೆ ಆ ವ್ಯಕ್ತಿಗಳ ಮಾಹಿತಿ ಕಲೆ ಹಾಕಿ, ಅವರ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ತಿಳಿಸಿದರು.

    ಜಾತ್ರೆ, ಸಂತೆಗಳು ಸಾಧ್ಯವಾದಷ್ಟು ನಡೆಯದಂತೆ ಎಚ್ಚರ ವಹಿಸುವುದು ಸೂಕ್ತ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸ್ವಯಂ ಘೋಷಣಾ ಪ್ರಮಾಣ ಪತ್ರಗಳ ಅರ್ಜಿಗಳು ಮತ್ತು ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು ಸಹ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಸೂರ್ಯಕಾಂತ ಎಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ವಿ.ಜಿ ರೆಡ್ಡಿ, ಬೀದರ ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ್, ಬ್ರಿಮ್ಸ್ ವೈದ್ಯಾಧಿಕಾರಿಗಳಾದ ವಿಜಯ್‍ಕುಮಾರ್ ಅಂತಪನೋರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

    ಮಹಿಳೆಯ ಮಾತು ಕೇಳಿ ಭಾವುಕರಾದ ಮೋದಿ

    ನವದೆಹಲಿ: ಮಹಿಳೆಯೊಬ್ಬರ ಮಾತು ಕೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವೇದಿಕೆಯಲ್ಲಿಯೇ ಭಾವುಕರಾಗಿದ್ದಾರೆ.

    ಇಂದು ಮೋದಿ ಜನೌಷಧಿ ಕೇಂದ್ರಗಳ ಮಾಲೀಕರು ಮತ್ತು ಪ್ರಧಾನ್ ಮಂತ್ರಿ ಭಾರತೀಯ ಜನೌಶಧಿ ಪರಿಯೋಜನ (ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಹಿಳೆ ದೀಪಾ ಶಾ, ನಾನು ದೇವರನ್ನು ನೋಡಿಲ್ಲ. ಆದರೆ ನಿಮ್ಮಲ್ಲಿ ದೇವರನ್ನು ನೋಡುತ್ತೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಮೋದಿ ಒಂದು ಕ್ಷಣ ಭಾವುಕರಾದರು.

    ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ದೀಪಾ ಶಾ, ನಾನು 2011 ರಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದೆ. ವೈದ್ಯರು ನೀವು ಗುಣವಾಗಲ್ಲ ಎಂದು ಹೇಳಿದ್ದರು. ಆದರೆ ನಾನು ಜನೌಷಧಿ ಕೇಂದ್ರದಿಂದ ಕಡಿಮೆ ಬೆಲೆಗೆ ಮಾತ್ರೆಗಳನ್ನು ತೆಗೆದುಕೊಂಡು ಸೇವಿಸಿ ಈಗ ಗುಣವಾಗಿದ್ದೇನೆ. ಜೊತೆಗೆ ತಿಂಗಳಿಗೆ 3,500 ರೂ. ಹಣವನ್ನು ಉಳಿಸಿಕೊಳ್ಳುತ್ತಿದ್ದೇನೆ. ಈ ಹಣ ನನ್ನ ಊಟದ ಮತ್ತು ತಿಂಗಳ ಬಳಕೆಗೆ ಖರ್ಚು ಮಾಡುತ್ತೇನೆ ಎಂದರು.

    ಜೊತೆಗೆ ನನಗೆ ಎಲ್ಲರೂ ಸಹಾಯ ಮಾಡಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿಯೂ ಕೂಡ ಸಹಾಯ ಮಾಡಿದ್ದಾರೆ. ನಾನು ಯಾವತ್ತು ಶಿವನನ್ನು ನೋಡಿಲ್ಲ. ಆದರೆ ನಿಮ್ಮನ್ನು ನೋಡಿದಾಗ ನನಗೆ ನಿಮ್ಮಲ್ಲಿ ಶಿವ ಕಾಣುತ್ತಾನೆ ಎಂದು ಹೇಳಿ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ದೀಪಾ ಶಾ ಅಳುವುದನ್ನು ಕಂಡ ಮೋದಿ ಅವರು ಕೂಡ ಕಣ್ಣೀರು ಹಾಕಿದ್ದಾರೆ.

    ಇದಾದ ನಂತರ ಮಾತನಾಡಿದ ಮೋದಿ ಅವರು, ನೀವು ನಿಮ್ಮ ಇಚ್ಛಾಶಕ್ತಿಯಿಂದ ನಿಮ್ಮ ರೋಗವನ್ನು ಸೋಲಿಸಿದ್ದೀರಾ. ನಿಮ್ಮ ಧೈರ್ಯ ನಿಮ್ಮ ದೇವರು, ಆ ಧೈರ್ಯವೇ ನಿಮ್ಮನ್ನು ರೋಗದಿಂದ ಹೋರಬರುವ ಶಕ್ತಿ ನೀಡಿದೆ. ನಿಮ್ಮಲ್ಲಿರುವ ಈ ವಿಶ್ವಾಸ ಹೀಗೆ ಇರಲಿ ಎಂದು ವಿಡಿಯೋ ಕಾನ್ಫರೆನ್ಸ್ ಅಲ್ಲಿ ತಿಳಿಸಿದ್ದಾರೆ.

    ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮೋದಿ, ಕೊರೊನಾ ವೈರಸ್ ವದಂತಿಯಿಂದ ದೂರ ಇರುವಂತೆ ನನ್ನ ದೇಶದ ಜನರಲ್ಲಿ ಮನವಿ ಮಾಡುತ್ತೇನೆ. ಕೊರೊನಾ ಈ ನಿಟ್ಟಿನಲ್ಲಿ ನಾವು ವೈದ್ಯರ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಕರೆ ಕೊಟ್ಟರು. ನಾವು ನಮಸ್ಕಾರ ಎಂದು ಶುಭಾಶಯ ಕೋರುವುದನ್ನು ಕೆಲವು ಕಾರಣಗಳಿಂದ ಮರೆತ್ತಿದ್ದೇವೆ. ಆದರೆ ಇಂದು ಇಡೀ ಪ್ರಪಂಚವೇ ನಮಸ್ಕಾರ ಮಾಡಿ ಆಹ್ವಾನಿಸುವುದನ್ನು ಮಾಡುತ್ತಿದೆ. ನಮಗೆ ಇದೇ ಸರಿಯಾದ ಸಮಯ ಹ್ಯಾಂಡ್‍ಶೇಕ್ ಮಾಡುವ ಬದಲು ನಮಸ್ಕಾರ ಮಾಡುವ ಅಭ್ಯಾಸವನ್ನು ಮತ್ತೊಮ್ಮೆ ಅಳವಡಿಸಿಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.

    ಪ್ರತಿ ತಿಂಗಳು, ಒಂದು ಕೋಟಿ ಕುಟುಂಬಗಳು ಈ ಜನೌಷಧಿ ಕೇಂದ್ರಗಳಿಂದ ಅಗ್ಗದ ಔಷಧಿಗಳ ಲಾಭವನ್ನು ಪಡೆಯುತ್ತಿವೆ. ದೇಶಾದ್ಯಂತ 6,000 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಜನರಿಗೆ 2,000-2,500 ಕೋಟಿ ರೂ. ಗಳನ್ನು ಉಳಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.

  • ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ: ಪ್ರಧಾನಿ ಮೋದಿ

    ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ: ಪ್ರಧಾನಿ ಮೋದಿ

    ನವದೆಹಲಿ: ವಿರೋಧ ಪಕ್ಷಗಳ ಟೀಕೆಯ ನಡುವೆಯೂ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡ ವೀಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಲಕ್ಷಾಂತರ ಬಿಜೆಪಿ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ. ಈ ವೇಳೆ, ಭಾರತ ಒಂದಾಗಿ ಹೋರಾಡುತ್ತೆ, ಒಂದಾಗಿ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶತ್ರು ದೇಶವು ಭಯೋತ್ಪಾದಕರಿಗೆ ಬೆಂಬಲಿಸಿ ಭಾರತ ವಿರುದ್ಧ ನಿಂತರೆ, ಅವರಿಂದ ಭಾರತದ ಅಭಿವೃದ್ಧಿ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಜೊತೆಗೂಡಿ, ಒಂದಾಗಿ ಭಾರತೀಯ ಸೈನಿಕರ ಬೆಂಬಲಕ್ಕೆ ನಿಂತು ನಮ್ಮ ದೇಶವನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ ಎನ್ನುವುದನ್ನು ತೋರಿಸಬೇಕು ಎಂದು “ಮೆರಾ ಬೂತ್ ಸಬ್ಸೇ ಮಜಬೂತ್” ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ಭಾರತ ಒಂದಾಗಿ ನಿಲ್ಲುತ್ತದೆ, ಒಂದಾಗಿ ಕೆಲಸ ಮಾಡುತ್ತದೆ, ಒಂದಾಗಿ ಬೆಳೆಯುತ್ತದೆ. ಒಂದಾಗಿ ಹೋರಾಡುತ್ತದೆ ಹಾಗೂ ಒಂದಾಗಿ ಗೆಲ್ಲುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಾವೆಲ್ಲ ಒಂದಾಗಿ ನಿಂತು ಶತ್ರುಗಳನ್ನು ಮಟ್ಟಹಾಕಬೇಕು ಎಂದು ಮೋದಿ ಅವರು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

    ಭಾರತ- ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಇರುವಾಗ ಪ್ರಧಾನಿ ಅವರು ತಮ್ಮ ಪಕ್ಷದ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತ ಪೈಲಟ್ ಪಾಕ್ ವಶದಲ್ಲಿದ್ದಾರೆ. ಗಡಿಯಲ್ಲಿ ಸೈನಿಕರು ಜಮಾವಣೆಗೊಂಡಿದ್ದಾರೆ. ಈ ಪರಿಸ್ಥಿತಿಯಲ್ಲೂ ಪ್ರಧಾನಿ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv