Tag: ವಿಡಿಯೋ ಕಾನ್ಫರೆನ್ಸ್

  • ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ: ಬಿ.ಸಿ ನಾಗೇಶ್

    ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸೂಚನೆ: ಬಿ.ಸಿ ನಾಗೇಶ್

    ಬೆಂಗಳೂರು: ಆಗಸ್ಟ್-ಸೆಪ್ಟೆಂಬರ್‍ ನಲ್ಲಿ 2021ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ಮತ್ತು ದೋಷರಹಿತವಾಗಿ ನಡೆಸಲು ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

    ದ್ವಿತೀಯ ಪಿಯುಸಿ ಪರೀಕ್ಷೆ ಆಗಸ್ಟ್ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯಲಿದೆ. ಈ ಸಂಬಂಧ ಇಂದು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ತಮ್ಮ ವಿಧಾನಸೌಧದ ಕಚೇರಿಯಲ್ಲಿ ಸಭೆ ನಡೆಸಿದ ಬಿ.ಸಿ ನಾಗೇಶ್, ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳು ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದರು. ರಾಜ್ಯದಲ್ಲಿ ಒಟ್ಟು 5,546 ಕಾಲೇಜುಗಳಿಂದ 18,414 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ 187 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರಗಳಲ್ಲಿ ಆಗಸ್ಟ್ 17ರ ಒಳಗೆ ಪೂರ್ವಸಿದ್ಧತೆ ಆಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಖಚಿತ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

    ಕರ್ನಾಟಕ ಸೆಕ್ಯೂರ್ ಎಕ್ಸಾಮಿನೇಷನ್ ಸಿಸ್ಟಮ್ ಪ್ರಕಾರ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಪತಿಗೆ ದೇವಸ್ಥಾನ ನಿರ್ಮಿಸಿದ ಪತ್ನಿ

    ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್ ಉಮಾಶಂಕರ್, ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕರಾದ ಸ್ನೇಹಲ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ವೀಡಿಯೋ ಕಾನ್ಫರೆನ್ಸ್:
    ಪರೀಕ್ಷೆಗೆ ಸಂಬಂಧಿಸಿದಂತೆ ವಿಕಾಸ ಸೌಧದದಲ್ಲಿ ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಸಚಿವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿ ಅವರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಸಲಹೆ ಸೂಚನೆ ನೀಡಿದರು.

  • ಪ್ರವಾಹ ಪೀಡಿತ ರಾಜ್ಯಗಳ ಜೊತೆ ಇಂದು ಮೋದಿ ಮೀಟಿಂಗ್

    ಪ್ರವಾಹ ಪೀಡಿತ ರಾಜ್ಯಗಳ ಜೊತೆ ಇಂದು ಮೋದಿ ಮೀಟಿಂಗ್

    ನವದೆಹಲಿ: ರಾಜ್ಯದಲ್ಲಿ ಒಂದು ಕಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಮತ್ತೊಂದು ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿ ಜನರು ತತ್ತರಿಸಿದ್ದಾರೆ. ಈ ನಡುವೆ ಇಂದು ರಾಜ್ಯ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಎಲ್ಲ ಮಾಹಿತಿ ಪಡೆದುಕೊಳ್ಳಲಿದ್ದಾರೆ.

    ರಾಜ್ಯ ಏಕ ಕಾಲದಲ್ಲಿ ಎರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ರಾಜ್ಯದ ಸಚಿವರ ಜೊತೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಸಭೆಗೆ ಗೈರಾಗಲಿದ್ದು, ಸಿಎಂ ಪರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಭಾಗಿಯಾಗಲಿದ್ದಾರೆ.

    ಬೆಳಗ್ಗೆ 11:30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಪ್ರವಾಹದಿಂದ ಸೃಷ್ಟಿಯಾಗಿರುವ ಅನಾಹುತ, ನಷ್ಟ ಪರಿಹಾರ ಕಾರ್ಯಗಳ ಮಾಹಿತಿ ಪಡೆದುಕೊಳ್ಳಿದ್ದಾರೆ. ಇದರ ಜೊತೆಗೆ ಕೊರೊನಾ ನಿಯಂತ್ರಣ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಪಿಎಂ ಜೊತೆಗಿನ ಸಭೆ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್ ಈಗಾಗಲೇ ಎಲ್ಲ ಪ್ರವಾಹ ಪೀಡಿತ ಹಾಗೂ ಅತಿ ಹೆಚ್ಚು ಕೊರೊನಾ ಕಾಣಿಸಿಕೊಂಡ ರಾಜ್ಯಗಳಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಈ ಎಲ್ಲ ಮಾಹಿತಿಯನ್ನ ಪಿಎಂ ಮೋದಿ ಮುಂದೆ ಪ್ರಸುತ್ತ ಪಡಿಸಲಿದ್ದಾರೆ.

    ಕರ್ನಾಟಕದ ಜೊತೆಗೆ ಮಹಾರಾಷ್ಟ್ರ ಹಾಗೂ ಕೇರಳದ ಸಿಎಂ ಜೊತೆಗೆ ಪ್ರಧಾನಿ ಮೋದಿ ಮಾತನಾಡಲಿದ್ದು, ಇದಕ್ಕೆ ಪ್ರತ್ಯೇಕ ಸಮಯ ಮೀಸಲಿಡಲಾಗಿದೆ. ಪ್ರಧಾನಿ ಮೋದಿ ಸಭೆಯಿಂದ ರಾಜ್ಯದ ಪರಿಸ್ಥಿತಿ ಸರ್ಕಾರದ ಗಮನಕ್ಕೆ ಬಂದಲ್ಲಿ ಮುಂದೆ ರಾಜ್ಯಕ್ಕೆ ಹೆಚ್ಚು ಪರಿಹಾರ ಸಿಗುವ ನಿಟ್ಟಿನಲ್ಲೂ ಸಹಕಾರಿಯಾಗಲಿದೆ. ಸಚಿವರು ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಬೇಕಿದೆ.

  • ಲಾಕ್‍ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ಅಮಿತ್ ಶಾ

    ಲಾಕ್‍ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ: ಅಮಿತ್ ಶಾ

    ನವದೆಹಲಿ: ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ.

    ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಪ್ರಧಾನಿ ಮೋದಿ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಿದ್ದ ಅವರು, ನಿಯಮಗಳ ಪಾಲನೆ ಸಂಬಂಧ ದೂರುಗಳು ಬರುತ್ತಿದ್ದು ನಿಯಮಗಳನ್ನು ಕಠಿಣವಾಗಿ ಜಾರಿ ಮಾಡುವಂತೆ ಎಲ್ಲ ಸಿಎಂಗಳಿಗೆ ಸೂಚನೆ ನೀಡಿದರು.

    ಸಿಎಂಗಳ ಸಭೆಯಲ್ಲಿ ಕೊರೊನಾ ಬಿಕ್ಕಟ್ಟಿನ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಎಲ್ಲ ಮುಖ್ಯಮಂತ್ರಿಗಳು ಮಾಡುತ್ತಿರುವ ಕೆಲಸಗಳನ್ನು ಅಮಿತ್ ಶಾ ಶ್ಲಾಘಿಸಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ ಮುನ್ನಲೆಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು.

    ಅಂತಾರಾಷ್ಟ್ರೀಯ ಗಡಿಗಳಲ್ಲಿ ಜಾಗರೂಕತೆ ವಹಿಸುವ ಅಗತ್ಯತೆಯ ಬಗ್ಗೆ ಮತ್ತು ಆರ್ಥಿಕ ಸವಾಲುಗಳು ನಿಭಾಯಿಸುವುದು ಮತ್ತು ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಅಮಿತ್ ಶಾ ಸಭೆಯಲ್ಲಿ ಮಾತನಾಡಿದರು.

  • ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ಏ. 27ರಂದು ಮತ್ತೆ ಮುಖ್ಯಮಂತ್ರಿಗಳ ಜೊತೆ ಮೋದಿ ವಿಡಿಯೋ ಕಾನ್ಫರೆನ್ಸ್

    ನವದೆಹಲಿ: ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೂರನೇ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಕೊರೊನಾ ವೈರಸ್ ಸೋಂಕು ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮೋದಿ ಅವರು ಚರ್ಚೆ ಮಾಡಲಿದ್ದಾರೆ. ಈ ಹಿಂದೆ ಲಾಕ್‍ಡೌನ್ ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಯ ವಿಚಾರವಾಗಿ ಎರಡು ಬಾರಿ ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಮೊದಲ ಬಾರಿಗೆ ಮಾರ್ಚ್ 20ರಂದು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ, ಎಲ್ಲರ ಅಭಿಪ್ರಾಯ, ಸಲಹೆಗಳನ್ನು ಪಡೆದು ಮಾರ್ಚ್ 24ರಂದು ದೇಶಾದ್ಯಂತ ಲಾಕ್‍ಡೌನ್ ಜಾರಿಗೆ ತರಲಾಯ್ತು.

    ಮಾಚ್ 24ರ ಬಳಿಕ 21 ದಿನಗಳ ಲಾಕ್‍ಡೌನ್ ಮುಕ್ತಾಯವಾಗುವುದಕ್ಕೂ ಮುನ್ನವೇ ಎರಡನೇ ವಿಡಿಯೋ ಕಾನ್ಫರೆನ್ಸ್ ಅನ್ನು ಏಪ್ರಿಲ್ 11ರಂದು ನಡೆಸಿ, ಏಪ್ರಿಲ್ 14ಕ್ಕೆ ಮುಗಿಯಬೇಕಿದ್ದ ಲಾಕ್‍ಡೌನ್ ಅನ್ನು ಮೇ 3ರವರೆಗೆ ವಿಸ್ತರಣೆ ಮಾಡಲಾಯಿತು.

    ಸದ್ಯ ಏಪ್ರಿಲ್ 20ರ ಬಳಿಕ ಕೇಂದ್ರದ ನಿರ್ದೇಶನದ ಪ್ರಕಾರವೇ ಕೆಲವು ರಾಜ್ಯಗಳು ಲಾಕ್‍ಡೌನ್ ನಿಯಮಗಳನ್ನು ಸಡಿಲಗೊಳಿಸಿವೆ. ಹೀಗಾಗಿ ಈ ಬಗ್ಗೆ ಚರ್ಚೆ, ಮಾಹಿತಿ ಪಡೆಯಲು ಏಪ್ರಿಲ್ 27ರಂದು ಮೋದಿ ಅವರು ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.

    ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1,486 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 49 ಜನ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈವರೆಗೆ ಭಾರತದಲ್ಲಿ 20,471 ಮಂದಿಗೆ ಸೋಂಕು ತಗುಲಿದ್ದು, 3,960 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 652 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

  • ಲಾಕ್‍ಡೌನ್ ಗಂಭೀರವಾಗಿ ಪರಿಗಣಿಸಿ – ಎಲ್ಲ ಸಿಎಂಗಳಿಗೆ ಮೋದಿ ಸೂಚನೆ

    ಲಾಕ್‍ಡೌನ್ ಗಂಭೀರವಾಗಿ ಪರಿಗಣಿಸಿ – ಎಲ್ಲ ಸಿಎಂಗಳಿಗೆ ಮೋದಿ ಸೂಚನೆ

    ನವದೆಹಲಿ: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಪ್ರಧಾನಿ ಮೋದಿ ಎರಡನೇ ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮಾಡಿ ಮಾತನಾಡಿದ್ದು ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದ್ದಾರೆ.

    ಈ ಸಂದರ್ಭದಲ್ಲಿ ಏಪ್ರಿಲ್ 14ರ ನಂತರ ಲಾಕ್‍ಡೌನ್ ಇರುತ್ತಾ ಇಲ್ಲವೋ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಏನು ತಿಳಿಸಿಲ್ಲ. ಈ ವೇಳೆ ಮುಂದಿನ ವಾರವೂ ಕೊರೊನಾ ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಮೆಡಿಕಲ್ ಉತ್ಪನ್ನಗಳು ಯಾವುದೇ ತಡೆ ಇಲ್ಲದೇ ಶೀಘ್ರವಾಗಿ ತಲುಪಬೇಕು. ಮೆಡಿಕಲ್ ಉತ್ಪನ್ನ ತಯಾರಿಕೆಗೆ ಬೇಕಾಗಿರುವ ಕಚ್ಚಾ ವಸ್ತುಗಳು ಪೊರೈಕೆಗೆ ಯಾವುದೇ ಸಮಸ್ಯೆ ಆಗಬಾರದು ಎಂದು ತಿಳಿಸಿದ್ದಾರೆ.

    ರಾಜ್ಯಗಳ ಮುಖ್ಯಮಂತ್ರಿಗಳು ಕೊರೊನಾ ತಡೆಗಟ್ಟಲು ತಾವು ಕೈಗೊಂಡ ಕ್ರಮಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸೋಂಕಿತರ ಪತ್ತೆಯ ಜೊತೆ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಭಾಗವಹಿಸಿದವರ ಪತ್ತೆ ಕಾರ್ಯದ ವಿವರವನ್ನು ಮೋದಿ ಮುಂದೆ ವಿವರಿಸಿದರು.

    ಈ ಸಂದರ್ಭದಲ್ಲಿ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ವ್ಯಕ್ತಿಗಳನ್ನು ಶೀಘ್ರವೇ ಗುರುತಿಸಿ ಕ್ವಾರಂಟೈನ್ ಮಾಡಬೇಕು. ಸಮುದಾಯಕ್ಕೆ ವೈರಸ್ ಹಬ್ಬದಂತೆ ನೋಡಿಕೊಳ್ಳಬೇಕಿದೆ. ಜನ ಸಾಮಾನ್ಯರ ಅಗತ್ಯ ವಸ್ತುಗಳ ವಿತರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

    ಮಾರ್ಚ್ 20 ರಂದು ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದ ಪ್ರಧಾನಿ ಮೋದಿ, ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿರಿವ ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವೆಲ್ಲ ಒಂದಾಗಿ ಹೋರಾಟ ಮಾಡಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಸಿಎಂಗಳ ಜೊತೆ ಮನವಿ ಮಾಡಿದ್ದರು.

    ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿರುವ ಲಾಕ್‍ಡೌನ್ ಮತ್ತೆ ಕೇಂದ್ರ ಸರ್ಕಾರ ವಿಸ್ತರಿಸುತ್ತಾ? ಇಲ್ಲವೋ ಎಂಬ ವಿಚಾರಕ್ಕೆ ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಮಾರ್ಚ್ 30 ರಂದು ಪ್ರತಿಕ್ರಿಯಿಸಿ, ಸದ್ಯಕ್ಕೆ ಲಾಕ್ ಡೌನ್ ವಿಸ್ತರಿಸುವ ಯಾವುದೇ ಯೋಚನೆ ಇಲ್ಲ ಎಂದು ಉತ್ತರಿಸಿದ್ದರು.

  • ಹೊರಗೆ ಬಂದ್ರೆ ಅರೆಸ್ಟ್ – ಸಿಎಂ ಖಡಕ್ ಸೂಚನೆ

    ಹೊರಗೆ ಬಂದ್ರೆ ಅರೆಸ್ಟ್ – ಸಿಎಂ ಖಡಕ್ ಸೂಚನೆ

    – ಅಂತರ್ ರಾಜ್ಯ, ಎಲ್ಲಾ ಜಿಲ್ಲೆಗಳ ಬಾರ್ಡರ್ ಸೀಲ್

    ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಆದರೂ ಕೆಲವರು ಮನೆಯಿಂದ ಹೊರಗಡೆ ಬಂದು ಸುತ್ತಾಡುತ್ತಿದ್ದಾರೆ. ಹೀಗಾಗಿ ನಾಳೆಯಿಂದ ಮನೆಯಿಂದ ಹೊರ ಬಂದವರನ್ನು ಅರೆಸ್ಟ್ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಖಡಕ್ ಸೂಚನೆ ಕೊಟ್ಟಿದ್ದಾರೆ.

    ಪೊಲೀಸರು ಎಷ್ಟೇ ಹೇಳಿದರೂ ಕೆಲವರು ಮನೆಯಿಂದ ಹೊರಬರುತ್ತಿದ್ದಾರೆ. ಇತ್ತ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಾಳೆಯಿಂದ ಲಾಕ್‍ಡೌನ್ ಉಲ್ಲಂಘಿಸಿ ಹೊರಗಡೆ ತಿರುಗಾಡಿದರೆ ಅರೆಸ್ಟ್ ಮಾಡಿ ಎಂದು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಯಡಿಯೂರಪ್ಪ ಡಿಸಿ ಮತ್ತು ಎಸ್‍ಪಿಗಳಿಗೆ ಮೌಖಿಕ ಆದೇಶ ರವಾನಿಸಿದ್ದಾರೆ.

    ಕೊರೊನಾಗೆ ಕರ್ನಾಟಕ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸಿಗಳ ಜೊತೆ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಜಿಲ್ಲೆಗಳ ಪರಿಸ್ಥಿತಿ ತಿಳಿಯಲು ಡಿಸಿಗಳ ಜೊತೆ ಸಿಎಂ ಯಡಿಯೂರಪ್ಪ ಮೂಲಕ ಸಭೆ ನಡೆಸಿದ್ದು, ಸಚಿವರಾದ ಅಶೋಕ್, ಬೊಮ್ಮಾಯಿ, ಸುರೇಶ್ ಕುಮಾರ್, ಸುಧಾಕರ್, ಲಕ್ಷ್ಮಣ ಸವದಿ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

    ವಿಡಿಯೋ ಕಾನ್ಫರೆನ್ಸ್‍ನ ಮುಖ್ಯಂಶಗಳು:
    * ಮಾನ್ಯ ಪ್ರಧಾನ ಮಂತ್ರಿ ಅವರ ಸೂಚನೆಯಂತೆ 21 ದಿನಗಳ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ.
    * ಲಾಕ್‍ಡೌನ್ ಮೀರಿ ಹೊರ ಬರುವವರನ್ನು ಅರೆಸ್ಟ್ ಮಾಡುವಂತೆ ಸೂಚನೆ.
    * ಅಂತರ್ ರಾಜ್ಯ ಮತ್ತು ಎಲ್ಲಾ ಜಿಲ್ಲೆಯ ಬಾರ್ಡರ್‌ಗಳನ್ನು ಸೀಲ್ ಮಾಡಬೇಕು.
    * ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡಬೇಕು.
    * ಈಗಾಗಲೇ ಡಿಸ್ಟಲರಿ ಕಂಪನಿಗಳ ಜೊತೆ ಸ್ಯಾನಿಟೈಸರ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದ್ದು, ಕೆಲವು ಕಂಪನಿಗಳ ಉಚಿತವಾಗಿ ನೀಡಲು ಮುಂದೆ ಬಂದಿವೆ. ಅದರ ಸದಾವಕಾಶ ಬಳಕೆಗೆ ಸೂಚನೆ

    * ನಿಮ್ಮ ಏನೇ ಸಮಸ್ಯೆ ಇದ್ದರು ಕೂಡಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು.
    * ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್‍ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ಧ ಕ್ರಮ.
    * ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಮ.
    * ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೋವಿಡ್‍ಗಾಗಿ ಮೀಸಲಿಡುವಂತೆ ಸೂಚನೆ.
    * ವೈದ್ಯರು ಮತ್ತು ನರ್ಸ್ ಗಳಿಗೆ ತೊಂದರೆ ಕೊಡುವ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು.
    * ಪಾಸ್ ಇದ್ದವರು ತುರ್ತು ಕೆಲಸ ಇದ್ದವರಿಗೆ ಮಾತ್ರ ಹೊರಗಡೆ ಹೋಗಲು ಅವಕಾಶ.
    * ಅಗತ್ಯ ವಸ್ತು ತೆಗೆದುಕೊಳ್ಳೋರು ಅದೇ ಏರಿಯಾದ ರಸ್ತೆಯಲ್ಲಿನ ಅಂಗಡಿಯಲ್ಲಿ ತೆಗೆದುಕೊಳ್ಳಬೇಕು. ಅಲ್ಲಿ ಇಲ್ಲದೆ ಹೋದರೆ ಪಕ್ಕದ ರಸ್ತೆಯಲ್ಲಿ ಅಗತ್ಯ ವಸ್ತು ತೆಗೆದುಕೊಳ್ಳಬೇಕು. ಬೇರೆ ಏರಿಯಾಗೆ ಹೋದರೆ ಅರೆಸ್ಟ್.

  • ವೈದ್ಯರು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತಿರುವ ದೇವರು: ಪ್ರಧಾನಿ ಮೋದಿ

    ವೈದ್ಯರು ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತಿರುವ ದೇವರು: ಪ್ರಧಾನಿ ಮೋದಿ

    – ವೈದ್ಯಕೀಯ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿದರೆ ಕಠಿಣ ಕ್ರಮ

    ನವದೆಹಲಿ: ಬಿಳಿ ಸಮವಸ್ತ್ರ ತೊಟ್ಟು ನಮಗಾಗಿ ಹಗಲು ರಾತ್ರಿ ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ನಮ್ಮ ಪಾಲಿನ ದೇವರು. ಅವರ ಜೀವವನ್ನು ಪಣಕ್ಕಿಟ್ಟು ನಮಗಾಗಿ ಅವರೆಲ್ಲಾ ದುಡಿಯುತ್ತಿದ್ದಾರೆ. ಅವರ ವಿರುದ್ಧ ಹಲ್ಲೆ ನಡೆಸುವುದಾಗಲಿ, ದೌರ್ಜನ್ಯ ಎಸೆಗುವುದಾಗಲಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ್ದಾರೆ.

    ವಾರಣಾಸಿ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಾರಣಾಸಿಯ ಆಯ್ದ ಮತದಾರರ ಜೊತೆ ಮೋದಿ ಸಂವಾದ ನಡೆಸಿದರು. ಈ ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ದೇಶಕ್ಕಾಗಿ, ಎಲ್ಲರ ಜೀವ ಉಳಿಸಲು ತಮ್ಮ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಳಿ ಸಮವಸ್ತ್ರದಲ್ಲಿರುವ ದೇವರು. ಎಲ್ಲರನ್ನೂ ಸೋಂಕಿನಿಂದ ಉಳಿಸಲು ದುಡಿಯುತ್ತಿದ್ದಾರೆ. ಅವರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಹಾಗೆಯೇ ನಾಗರಿಕರಲ್ಲಿ ವಿನಂತಿ ಮಾಡುತ್ತೇನೆ ಒಂದು ವೇಳೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಯಾರಾದರು ತಪ್ಪಾಗಿ ನಡೆದುಕೊಂಡರೆ ಅವರಿಗೆ ನೀವು ಬುದ್ಧಿ ಹೇಳಿ. ಪರಿಸ್ಥಿತಿಯನ್ನು ವಿವರಿಸಿ ಎಂದು ಮೋದಿ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದ ಜೊತೆ ವೈದ್ಯಕೀಯ ಕ್ಷೇತ್ರ ನಿಂತಿದೆ. ವೈದ್ಯರು, ನರ್ಸ್‍ಗಳು, ಇತರೆ ವೈದ್ಯಕೀಯ ಸಿಬ್ಬಂದಿ ದಿನಕ್ಕೆ 18 ಗಂಟೆಗಿಂತ ಹೆಚ್ಚು ಸಮಯ ದುಡಿಯುತ್ತಿದ್ದಾರೆ. 2ರಿಂದ 3 ಗಂಟೆ ನಿದ್ರೆ ಮಾಡಿ ಮತ್ತೆ ಕೆಲಸಕ್ಕೆ ಹಾಜಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ಪೊಲೀಸ್ ಇಲಾಖೆ ಹೊರಗೆ ಹಗಲು ರಾತ್ರಿ ನಮ್ಮ ಒಳಿತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕ ಸಮಾಜದ ಜನರು ಬಡವರಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದಾರೆ. ಇವರಿಗೆ ನಾವು ಸೆಲೂಟ್ ಹೊಡಿಯಬೇಕು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಮಾಜಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಧನ್ಯವಾದ ಎಂದು ಮೋದಿ ಶ್ಲಾಘಿಸಿದ್ದಾರೆ.

    ಕೊರೊನಾ ವೈರಸ್ ಸೋಂಕನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯಿರಿ. ಅಥವಾ ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಸಮಸ್ಯೆ ತಿಳಿಸಿ. ಮನೆಯಲಿಯೇ ಇರಿ. ಕೊರೊನಾ ವೈರಸ್‍ಗೆ ಇನ್ನೂ ಔಷಧಿ ಸಿಕ್ಕಿಲ್ಲ. ವೈದ್ಯರು, ವಿಜ್ಞಾನಿಗಳು ಔಷಧಿ ಕಂಡುಹಿಡಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದಷ್ಟು ಬೇಗ ಔಷಧಿಯನ್ನು ಕಂಡುಹಿಡಿಯಲಿದ್ದಾರೆ. ದಯವಿಟ್ಟು ಗಾಳಿ ಮಾತುಗಳಿಗೆ, ಮೂಡನಂಬಿಕೆಗಳಿಗೆ ಕಿವಿಗೊಡಬೇಡಿ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿಸಿ, ಚಿಕಿತ್ಸೆ ಪಡೆಯಿರಿ ಎಂದು ಪ್ರಧಾನಿ ಅವರು ಮನವಿ ಮಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ದೇಶವಾಸಿಗಳು ಬೆಂಬಲ ನೀಡಿದಕ್ಕೆ ಧನ್ಯವಾದ. ಜೊತೆಗೆ ಸಂಜೆ 5 ಗಂಟೆಗೆ ಮನೆಯಿಂದ ಹೊರಬಂದು ಈ ಕಠಿಣ ಪರಿಸ್ಥಿತಿಯಲ್ಲಿ ನಮಗಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ, ಪೌರಕಾರ್ಮಿಕರಿಗೆ ನೀವು ಅಭಿನಂದಿಸಿದ್ದಕ್ಕೂ ಧನ್ಯವಾದ ಎಂದು ಮೋದಿ ಅವರು ಹೇಳಿದ್ದಾರೆ.

  • ಮಹಾಭಾರತ ಯುದ್ಧ 18 ದಿನ, ಕೊರೊನಾ ವಿರುದ್ಧ ದೇಶದ ಸಮರ 21 ದಿನ: ಮೋದಿ

    ಮಹಾಭಾರತ ಯುದ್ಧ 18 ದಿನ, ಕೊರೊನಾ ವಿರುದ್ಧ ದೇಶದ ಸಮರ 21 ದಿನ: ಮೋದಿ

    ನವದೆಹಲಿ: ಕೊರೊನಾ ವೈರಸ್ ಅಟ್ಟಹಾಸದ ಬಗ್ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯ ಆಯ್ದ ಪ್ರಜೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಮಹಾಭಾರತ ಯುದ್ಧ 18 ದಿನಗಳು ನಡೆಯಿತು. ಆದ್ರೆ ಕೊರೊನಾ ವೈರಸ್ ವಿರುದ್ಧ ದೇಶ ಯುದ್ಧ ಮಾಡಿ ಜಯಗಳಿಸಲು 21 ದಿನಗಳು ಬೇಕಾಗುತ್ತೆ ಎಂದು ದೇಶದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಭಾರತದಾದ್ಯಂತ ಲಾಕ್‍ಡೌನ್ ಘೋಷಣೆಯಾದ ಬಳಿಕ ಮೋದಿ ಅವರು ನಡೆಸುತ್ತಿರುವ ಮೊದಲ ವಿಡಿಯೋ ಕಾನ್ಫರೆನ್ಸ್ ಇದಾಗಿದ್ದು, ದೇಶವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದರು. ಮಹಾಭಾರತ ಯುದ್ಧ 18 ದಿನ ನಡೆಯಿತು, ಆದರೆ ದೇಶ ಕೊರೊನಾ ವಿರುದ್ಧ ನಡೆಸುತ್ತಿರುವ ಸಮರ 12 ದಿನ ನಡೆಯಬೇಕಿದೆ. ಈ ಯುದ್ಧದಲ್ಲಿ ದೇಶವನ್ನ ಗೆಲ್ಲಿಸೋದೇ ನಮ್ಮ ಗುರಿ ಎಂದು ಪ್ರಧಾನಿ ಹೇಳಿದರು.

    ಅಷ್ಟೇ ಅಲ್ಲದೇ ಗಾಳಿ ಸುದ್ದಿಗಳಿಗೆ ಕಿವಿಕೊಡಬೇಡಿ. ಕೊರೊನಾ ವೈರಸ್ ಶ್ರೀಮಂತ, ಬಡವ ಎಂದು ನೋಡುವುದಿಲ್ಲ. ದಯಮಾಡಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಮೋದಿ ಅವರು ಮನವಿ ಮಾಡಿಕೊಂಡರು.

    ಹಾಗೆಯೇ ವಾಟ್ಸಪ್ ಸಹಯೋಗದೊಂದಿಗೆ ಸರ್ಕಾರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಮೂಲಕ ಕೊರೊನಾ ವೈರಸ್ ಬಗ್ಗೆ ಸರಿಯಾದ ಮಾಹಿತಿ ಪಡೆಯುವಲ್ಲಿ ಜನರಿಗೆ ಸಹಕಾರಿಯಾಗಲಿದೆ. 9013151515 ಈ ನಂಬರ್ ಗೆ ‘ನಮಸ್ತೆ’ ಎಂದು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ವಾಟ್ಸಪ್ ಮಾಡಿದರೆ ನಿಮಗೆ ತಕ್ಷಣ ಪ್ರತಿಕ್ರಿಯಿಸಲಾಗುತ್ತದೆ. ಆಗ ಕೊರೊನಾ ವೈರಸ್ ಬಗ್ಗೆ ಇರುವ ಗೊಂದಲ, ಮಾಹಿತಿಗಳನ್ನು ವಾಟ್ಸಪ್ ಮೂಲಕವೇ ಪಡೆಯಬಹುದು ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮತರಾರರಿಗೆ ಮೋದಿ ಅವರು ತಿಳಿಸಿದರು.

  • ಕೊರೊನಾ ಎಫೆಕ್ಟ್- ವಿಡಿಯೋ ಕಾನ್ಫರೆನ್ಸ್‌ನಲ್ಲೇ ಮದ್ವೆಯಾದ ಜೋಡಿ

    ಕೊರೊನಾ ಎಫೆಕ್ಟ್- ವಿಡಿಯೋ ಕಾನ್ಫರೆನ್ಸ್‌ನಲ್ಲೇ ಮದ್ವೆಯಾದ ಜೋಡಿ

    ಪಾಟ್ನಾ: ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಜೋಡಿಯೊಂದು ಈ ಮೊದಲೇ ನಿಗದಿಯಾದ ದಿನಾಂಕದಂದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಯಾಗಿದ್ದಾರೆ.

    ಮದುಮಗ ಉತ್ತರ ಪ್ರದೇಶದ ಸಾಹಿಬಾಬಾದ್‍ನಲ್ಲಿದ್ದರೆ, ಮದುಮಗಳು ಬಿಹಾರದ ಪಾಟ್ನಾದಲ್ಲಿದ್ದರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಖಾಜಿ ಮೊದಲು ಯುವಕನನ್ನು ಮದುವೆಯಾಗಲು ಹುಡುಗಿಯಿಂದ ಅನುಮತಿ ಪಡೆದರು. ನಂತರ ಮದುವೆಯನ್ನು ನೆರವೇರಿಸಿದರು. ಇದನ್ನೂ ಓದಿ: ಹೆಣ್ಣು ಶಿಶುವಿಗೆ ಕೊರೊನಾ ಎಂದ ಹೆಸರಿಟ್ಟ ಚಿಕ್ಕಪ್ಪ

    ಈ ವಿವಾಹದ 30 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ವಧುವಿನ ಕುಟುಂಬಸ್ಥರು ಟಿವಿ ಮುಂದೆ ಒಟ್ಟುಗೂಡಿ ನಿಂತಿರುತ್ತಾರೆ. ಖಾಜಿ ಕೇಳಿದಾಗ ಯುವಕ ಹಾಗೂ ಯುವತಿ ಇಬ್ಬರೂ ಮದುವೆಯನ್ನು ಒಪ್ಪಿಕೊಂಡರು. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಮದುವೆ ಮಾಡಿಸಿದರು. ಇದನ್ನೂ ಓದಿ: ಕೊರೊನಾಗೆ ತಮಿಳುನಾಡಿನಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಏಪ್ರಿಲ್ 14ರವರೆಗೆ ಸಂಪೂರ್ಣ ಲಾಕ್‍ಡೌನ್:
    ಮಹಾಮಾರಿ ಕೊರೊನಾ ವೈರಸ್‍ನಿಂದಾಗ ಇಡೀ ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಲಾಗಿದೆ. ಹೀಗಾಗಿ ಮದುವೆ, ಸಭೆ ಸಮಾರಂಭ ಸೇರಿದಂತೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದರ ಮೇಲೆ ನಿಷೇಧ ಹೇರಲಾಗಿದೆ. ನವ ಜೋಡಿಯ ದಂಪತಿಯ ಕುಟುಂಬಗಳು ಡಿಜಿಟಲ್ ಇಂಡಿಯಾವನ್ನು ಆಯ್ಕೆಮಾಡಿಕೊಂಡು ಕೊರೊನಾ ವಿರುದ್ಧ ಹೋರಾಡುವ ಹೊಸ ಮಾರ್ಗವನ್ನು ಸೂಚಿಸಿವೆ. ಅಷ್ಟೇ ಅಲ್ಲದೆ ಡಿಜಿಟಲ್ ಪ್ಲಾಟ್‍ಫಾರ್ಮ್ ಮೂಲಕ ಸಮಯಕ್ಕೆ ಸರಿಯಾಗಿ ಕೆಲಸವನ್ನು ಮಾಡಬಹುದು ಎಂದು ತಿಳಿಸಿಕೊಟ್ಟಿದೆ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ.

  • ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಕೊರೊನಾ ಭೀತಿ- ಜಿಲ್ಲಾಧಿಕಾರಿಯೊಂದಿಗೆ ಡಿಸಿಎಂ ವಿಡಿಯೋ ಕಾನ್ಫರೆನ್ಸ್

    ಬೆಂಗಳೂರು: ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಪರಿಸ್ಥಿತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವಲೋಕಿಸಿದರು. ಅಲ್ಲದೆ ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

    ಬೆಂಗಳೂರಿನಲ್ಲಿ ಗುರುವಾರ ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜಿಲ್ಲೆಗೆ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಮಾಸ್ಕುಗಳನ್ನು ಕೂಡಲೇ ಒದಿಗಿಸುವುದಾಗಿ ತಿಳಿಸಿದ್ದಾರೆ.

    ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವೈದ್ಯರು ಧರಿಸುವ 900 ರಕ್ಷಾ ಕವಚಗಳು (ಪರ್ಸನಲ್ ಪ್ರೊಟೆಕ್ಷನ್ ಗೇರ್), 1000 ಎನ್ 95 ಮಾಸ್ಕುಗಳು ಹಾಗೂ ಸಾರ್ವಜನಿಕರು ಬಳಸುವ ಮೂರು ಪದರಗಳ 3000 ಮಾಸ್ಕುಗಳನ್ನು ಶುಕ್ರವಾರ ಬೆಳಗ್ಗೆ ಹೊತ್ತಿಗೆ ಕಲಬುರಗಿಗೆ ತಲುಪಿಸಲಾಗುವುದು. ಅಲ್ಲದೆ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ ಅವರನ್ನು ಕೂಡಲೇ ಕಲಬುರಗಿ ಜಿಲ್ಲೆಗೆ ನಿಯೋಜಿಸುತ್ತಿರುವುದಾಗಿ ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.

    ಸೋಮವಾರದ ವೇಳೆಗೆ ರೋಗ ಪತ್ತೆ ಮಾಡುವ ಪ್ರಯೋಗಾಲಯವನ್ನು ಕಲಬುರ್ಗಿಯಲ್ಲಿ ಸ್ಥಾಪಿಸಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಈ ವೇಳೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ, ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ ಇದ್ದರು.