Tag: ವಿಜ್ಞಾನಿಗಳು

  • ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

    ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್

    – ವೀಕೆಂಡ್‍ನಲ್ಲಿ ಸೂಪರ್ ಮೂನ್ ಸಂಭ್ರಮ
    – ವಿಜ್ಞಾನಿಗಳ ಪಾಲಿಗೆ ವಿಸ್ಮಯ, ಜ್ಯೋತಿಷಿಗಳ ಪಾಲಿಗೆ ಭಯ

    ಬೆಂಗಳೂರು: ಇಂದು ಹಾಗೂ ನಾಳೆ ಆಗಸದಲ್ಲೊಂದು ವಿಸ್ಮಯ ನಡೆಯಲಿದೆ. ಚಂದದ ಚಂದ್ರಮಾಮ ಇನ್ನಷ್ಟು ಪ್ರಜ್ವಲಿಸುತ್ತಾನೆ. ಇದು ಅಂತಿಂಥ ಹುಣ್ಣಿಮೆಯಲ್ಲ, ಸೂಪರ್ ಮೂನ್ ಸಂಭ್ರಮ ಇರಲಿದೆ.

    ಪ್ರತಿ ತಿಂಗಳು ಹುಣ್ಣಿಮೆ ಘಟಿಸೋದು ಸಾಮಾನ್ಯ. ಆದರೆ ಇಂದು ಶುರುವಾಗಿ ನಾಳೆ ಭಾನುವಾರದವರೆಗೆ ಆಗಸದಲ್ಲಿ ಕಂಗೊಳಿಸುತ್ತಾನಲ್ಲ ಚಂದಿರ ಅದು ಮಾತ್ರ ಕಣ್ಣಿಗೆ ಸೊಗಸಾದ ದೃಶ್ಯ ವೈಭವ. ಈ ಬಾರಿಯ ಮಾಘ ಮಾಸದಲ್ಲಿ ಬಂದ ಹುಣ್ಣಿಮೆ ಚಂದಿರ, ಸೂಪರ್ ಮೂನ್ ಆಗಿದೆ. ಶನಿವಾರ ಸಂಜೆ 4 ಗಂಟೆ 2 ನಿಮಿಷಕ್ಕೆ ಶುರುವಾಗಿ ಭಾನುವಾರ ಮಧ್ಯಾಹ್ನ 1 ಗಂಟೆ 3 ನಿಮಿಷಕ್ಕೆ ಈ ಮಾಘ ಹುಣ್ಣಿಮೆ ಮುಗಿಯಲಿದೆ.

    ಸೂಪರ್ ಮೂನ್ ನಿಮ್ಮ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ. ಬೇಗನೆ ಉದಯವಾಗುವ ಚಂದ್ರ ನಿಧಾನವಾಗಿ ಮುಳುಗುತ್ತಾನೆ. ಭೂಮಿಯ ಸಮೀಪದಲ್ಲಿ ಬರುವ ಚಂದ್ರ ನಿಮಗೆ ಹತ್ತಿರದಲ್ಲೇ ಇರುವ ಭಾವನೆಯನ್ನ ಮೂಡಿಸುತ್ತಾನೆ. ಈ ಬಾರಿ ಬೆಳದಿಂಗಳು ಬೆಳಕು ದುಪ್ಪಟ್ಟಾಗಲಿದೆ ಎಂದು ಖ್ಯಾತ ಜ್ಯೋತಿಷಿ ರೇಣುಕಾರಾಧ್ಯ ಗುರೂಜಿ ಹೇಳಿದರು.

    ವಿಜ್ಞಾನಿಗಳ ಪಾಲಿನ ಈ ವಿಸ್ಮಯ, ಜ್ಯೋತಿಷ್ಯದಲ್ಲಿ ಮಾತ್ರ ಸಣ್ಣ ಆತಂಕ ಹುಟ್ಟಿಸಿದೆ. ಹುಣ್ಣಿಮೆಯು ಶನಿ ನಕ್ಷತ್ರದಲ್ಲಿ ಘಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪೌರ್ಣಮಿಯ ಮೇಲೆ ಶನಿಯ ನೇರ ದೃಷ್ಠಿ ಇದೆ. ಗ್ರಹಣದ ಬೆನ್ನಲ್ಲೆ ಬಂದ ಪೌರ್ಣಿಮೆ ಶ್ರೇಷ್ಠದಿನವಾದರೂ ಸೂಪರ್ ಮೂನ್ ಪ್ರಕೃತಿಯ ಮೇಲೆ ಅಸಹಜ ಪರಿಣಾಮ ಬೀರುತ್ತದೆ. ಪೌರ್ಣಿಮೆಯ ಅವಧಿ ಸುದೀರ್ಘವಾಗಿರುವುದರಿಂದ ಮನುಷ್ಯರಲ್ಲಿ ಮಾನಸಿಕ ತೊಳಲಾಟ, ದ್ವಂದ್ವಗಳು ಹೆಚ್ಚಾಗುತ್ತವೆ ಎಂದು ರೇಣುಕಾರಾಧ್ಯ ಗುರೂಜಿ ತಿಳಿಸಿದರು.

    ಈ ಮಾಘ ಹುಣ್ಣಿಮೆಯನ್ನ ಭರತ ಹುಣ್ಣಿಮೆ ಅಂತನೂ ಕರೆಯಲಾಗುತ್ತೆ. ಪೂರ್ಣ ಚಂದಿರನ ದರ್ಶನ ಆಗುವುದರಿಂದ ಜಲಗಂಡಾತರವಾಗುವ ಸಾಧ್ಯತೆ ಇದೆ. ಗ್ರಹಣಗಳ ನಂತರ ಬಂದಿರುವ ಪೂರ್ಣ ಹುಣ್ಣಿಮೆಯ ಪರಿಣಾಮ, ರಾಜ್ಯ ಹಾಗೂ ಕೇಂದ್ರದಲ್ಲೂ ಅವಘಡಗಳು ನಡೆಯಬಹುದು ಎಂದು ಗವಿಗಂಗಾಧರದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತರು ಹೇಳಿದರು.

    ಸೂಪರ್ ಮೂನ್ ಕೆಟ್ಟ ಪರಿಣಾಮ ತಪ್ಪಿಸಲು ಶಿವನ ಆರಾಧನೆ ಮಾಡಬೇಕು ಅನ್ನೋದು ಜ್ಯೋತಿಷಿಗಳ ಸಲಹೆ. ಆದರೆ ಆಗಸ ನೋಡಿ ಚಂದಮಾಮಾನ ಕಣ್ತುಂಬಿಸಿಕೊಳ್ಳಿ ಎಂಬುವುದು ವಿಜ್ಞಾನಿಗಳ ಸಲಹೆ.

  • ಸೂರ್ಯಗ್ರಹಣ: ರಾಷ್ಟ್ರದ ಗಮನ ಸೆಳೆದ ಕೊಡಗಿನ ಪುಟ್ಟ ಗ್ರಾಮ

    ಸೂರ್ಯಗ್ರಹಣ: ರಾಷ್ಟ್ರದ ಗಮನ ಸೆಳೆದ ಕೊಡಗಿನ ಪುಟ್ಟ ಗ್ರಾಮ

    – ಕುಟ್ಟದ ಕಾಯಮಾನಿಯಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸಜ್ಜುಗೊಂಡ ಪ್ರದೇಶ

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ `ಕುಟ್ಟ’ ಗ್ರಾಮವು ಈಗ ರಾಷ್ಟ್ರದ ಖಗೋಳ ವಿಜ್ಞಾನಿಗಳ ಗಮನ ಸೆಳೆದಿದೆ.

    ಕುಟ್ಟ ಗ್ರಾಮದತ್ತ ಎಲ್ಲರ ಗಮನವೂ ಕೇಂದ್ರಿಕೃತವಾಗಿದೆ. ಡಿ.26ರಂದು ನಡೆಯುವ ಸೂರ್ಯ ಗ್ರಹಣವು ದಕ್ಷಿಣ ಭಾರತದಲ್ಲಿ ಅದರಲ್ಲೂ ಕುಟ್ಟದ ಕಾಯಮಾನಿ ಪ್ರದೇಶದಲ್ಲಿ ವಿಶೇಷವಾಗಿ ಗೋಚರಿಸುವ ಕಾರಣಕ್ಕೆ ವಿಜ್ಞಾನಿಗಳ ಆಸಕ್ತಿಯ ಪ್ರದೇಶವಾಗಿದೆ. ದೇಶದ ಇತರೆ ಭಾಗದಲ್ಲಿ ಸೂರ್ಯಗ್ರಹಣದ ಪ್ರಮಾಣವು ಬೇರೆ ಬೇರೆ ರೀತಿಯಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.100ರಷ್ಟು ಸೂರ್ಯಗ್ರಹಣ ಗೋಚರಿಸಲಿದೆ ಎಂಬುದು ಖಗೋಳಾಸಕ್ತರ ಮಾಹಿತಿ. ಇದನ್ನೂ ಓದಿ: ಡಿಸೆಂಬರ್ 26ಕ್ಕೆ ಕೇತುಗ್ರಸ್ಥ ಸೂರ್ಯಗ್ರಹಣ

    ಹೀಗಾಗಿ, ವಿಸ್ಮಯ ವೀಕ್ಷಣೆ ಹಾಗೂ ಅಧ್ಯಯನಕ್ಕೆ ದೇಶದ ಹಲವೆಡೆಯಿಂದ ಖಗೋಳ ವಿಜ್ಞಾನಿಗಳು ಈ ಪ್ರದೇಶಕ್ಕೆ ಬರುತ್ತಿದ್ದಾರೆ. ಗ್ರಹಣ ವೀಕ್ಷಣೆಗೆ, ಪುಣೆಯ ಖಗೋಳ ಮತ್ತು ಪರಿಸರ ಕೇಂದ್ರದ ವಿಜ್ಞಾನಿಗಳ ತಂಡವು ವಿಶೇಷ ವ್ಯವಸ್ಥೆ ಮಾಡುತ್ತಿದೆ. ಗ್ರಹಣದ ಬಗ್ಗೆ ಜಾಗೃತಿ ಮೂಡಿಸಲು ಒಂದು ಸಾವಿರ ವಿದ್ಯಾರ್ಥಿಗಳನ್ನು ಕರೆಸಲಾಗುತ್ತಿದೆ. ಕೊಡಗು, ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳು ಗ್ರಹಣ ವೀಕ್ಷಣೆಗೆ ಬರಲಿದ್ದಾರೆ. ಅದಕ್ಕಾಗಿಯೇ ಕಾಫಿ ತೋಟದ ಪಕ್ಕವೇ ವಿಶಾಲ ಮೈದಾನ ಸಜ್ಜುಗೊಳಿಸಲಾಗಿದ್ದು ಬಂದವರು ಸೌರ ಕನ್ನಡಕದ ಮೂಲಕವೇ ಈ ವಿಸ್ಮಯ ಕಣ್ತುಂಬಿಕೊಳ್ಳಬಹುದಾಗಿದೆ.

    ಕುಟ್ಟ, ಬಿರುನಾಣಿ ಪ್ರದೇಶಗಳು ಪೂರ್ಣ ಪ್ರಮಾಣದ ಗ್ರಹಣ ಗೋಚರಿಸುವ ರೇಖೆಯಲ್ಲಿದ್ದು, ಈ ಪ್ರದೇಶಗಳು ವಿಜ್ಞಾನಿಗಳ ಆಸಕ್ತಿಯ ತಾಣಗಳಾಗಿವೆ. 26ರಂದು ಬೆಳಗ್ಗೆ 8.05ರಿಂದ 11ರ ತನಕ ಸೂರ್ಯಗ್ರಹಣ ಸಂಭವಿಸಲಿದೆ. ಬೆಳಗ್ಗೆ 9ರಿಂದ 9.30ರ ನಡುವೆ ಈ ಸ್ಥಳದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ. ಬೆಂಗಳೂರಿನಲ್ಲಿ ಶೇ.89.4, ಚೆನ್ನೈನಲ್ಲಿ ಶೇ.84, ಮುಂಬೈನಲ್ಲಿ ಶೇ.78ರಷ್ಟು ಸೂರ್ಯಗ್ರಹಣವಿದ್ದರೆ, ಕೊಡಗಿನ ಕುಟ್ಟದಲ್ಲಿ ಶೇ.99ರಿಂದ ಶೇ.100ರಷ್ಟು ಗ್ರಹಣ ಕಾಣಬಹುದು ಎನ್ನುತ್ತಾರೆ ವಿಜ್ಞಾನಿಗಳು.

    ಸೌರ ಕನ್ನಡಕ ವಿತರಣೆ
    ದಕ್ಷಿಣ ಭಾರತದಲ್ಲಿ ಇಂತಹ ಸೂರ್ಯಗ್ರಹಣ ವೀಕ್ಷಣೆಗೆ ಬಹಳ ವರ್ಷವೇ ಕಾಯಬೇಕು. ಹೀಗಾಗಿ, ಈ ಅಪರೂಪದ ವಿಸ್ಮಯವನ್ನು ಯಾರೂ ತಪ್ಪಿಸಿಕೊಳ್ಳಬಾರದು. ಹೀಗಾಗಿ ಜಿಲ್ಲಾ ವಿಜ್ಞಾನ ಪರಿಷತ್ ವತಿಯಿಂದ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ಸೌರ ಕನ್ನಡ ವಿತರಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ತೆರಳಿ ಸೂರ್ಯ ಗ್ರಹಣವನ್ನು ಹೇಗೆ ವೀಕ್ಷಿಸಬಹುದು ಎಂದು ಸೌರ ಕನ್ನಡಕವನ್ನು ನೀಡಿ ಮಕ್ಕಳಿಗೆ ಹಾಗೂ ದೊಡ್ಡವರಿಗೆ ತಿಳಿಸಲಾಗಿದೆ. ಅಲ್ಲದೆ ಮೂಢ ನಂಬಿಕೆಗಳ ಬಗ್ಗೆ ಸಹ ಅರಿವು ಮೂಡಿಸಲಾಗಿದೆ.

  • ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

    ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

    ಬೆಂಗಳೂರು: ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದ್ದು, ಸೂರ್ಯ ಮರೆಯಾಗುತ್ತಿದ್ದಾನೆ. ಮೈ ಕೊರೆಯುವ ಚಳಿ ಆರಂಭವಾಗುವ ಟೈಂನಲ್ಲಿ ವರ್ಷ ಪೂರ್ತಿ ವರ್ಷಧಾರೆಯ ಸಿಂಚನ. ವಾತಾವರಣ ಈ ಪರಿ ಬದಲಾಗುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆಲ್ಲ ವಿಜ್ಞಾನಿಗಳು ಬೆಚ್ಚಿಬೀಳುವ ಕಾರಣ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯದ ಹಿಂದೆ ಅರಬ್ಬೀ, ಬಂಗಾಳಕೊಲ್ಲಿಯ ಸಮುದ್ರಾಳದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಭೂಕಂಪ ಸೃಷ್ಟಿಯಾಗುತ್ತಿದ್ದು, ಇದು ಪ್ರಾಕೃತಿಕ ಬದಲಾವಣೆಗೂ ಕಾರಣವಾಗಿದೆ. ಹಾಗಾಗಿಯೇ ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಚ್ಚಿದ ವಾತಾವರಣ ಕಂಡು ಬರುತ್ತಿದೆ. ಇದು ತುಂಬಾ ಡೇಂಜರಸ್ ಎಂದು ಭೂಗರ್ಭ ತಜ್ಞರು ಹೇಳುತ್ತಾರೆ.

    ಪ್ರಕಾಶ್, ಭೂ ಗರ್ಭ ತಜ್ಞ

    ಅರಬ್ಬೀ ಸಮುದ್ರದಲ್ಲಿ ಸ್ಫೋಟಿಸಿದ ಮೂರು ಭೂಕಂಪಗಳು ಬೆಂಗಳೂರಿನಲ್ಲಿ ಈ ವಿಚಿತ್ರ ವಾತಾವರಣವನ್ನು ಸೃಷ್ಟಿಸಿದೆ. ಆತಂಕದ ವಿಚಾರ ಎಂದರೆ ಸಮುದ್ರಾಳದ ಸ್ಫೋಟದ ತೀವ್ರತೆಯ ಪ್ರಮಾಣ ಅಪಾಯದ ಮಟ್ಟ ಮೀರಿದ್ದು ಇದು ವಾತಾವರಣದ ಏರುಪೇರಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಇದೇ ರೀತಿ ಪದೇ ಪದೇ ಸಮುದ್ರಾಳದಲ್ಲಿ ಜ್ವಾಲಾಮುಖಿ ಮುನಿಸಿಕೊಂಡರೆ ಬೆಂಗಳೂರಿಗೆ ಇನ್ನಷ್ಟು ಅಪಾಯ ಕಾಡುವ ಸಾಧ್ಯತೆಗಳಿವೆ. ಮಳೆಯ ಅಬ್ಬರ, ವಾತಾವರಣ ಏರುಪೇರಿನಿಂದ ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಅದೆಲ್ಲೋ ಅಪರೂಪಕ್ಕೆ ಈ ರೀತಿ ಜ್ವಾಲಮುಖಿ ಸ್ಫೋಟಗೊಳ್ಳುತ್ತಿತ್ತು. ಆದರೆ ಈಗ ಪದೇ ಪದೇ ಈ ರೀತಿಯ ಸ್ಫೋಟ ಡೇಂಜರಸ್ ಎಂದು ಹೇಳಲಾಗುತ್ತಿದೆ. ಕಾಲ್ಸ್ ಬರ್ಗ್ ರಿಡ್ಜ್ ಎನ್ನುವ ಜ್ವಾಲಾಮುಖಿಗಳು ಈ ಮಳೆಗೆ ಕಾರಣವಾಗಿದ್ದು, ಇದು ಭಾರತದಲ್ಲಿ ಭೂಕಂಪದಂತಹ ಅಪಾಯವನ್ನು ತಂದೊಡ್ಡಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

    ಭೂಮಿಯಲ್ಲಿ ನಮಗರಿವಿಲ್ಲದಂತೆ ಆಗುವ ಬದಲಾವಣೆ ಇದೀಗ ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಸಿದೆ. ಮೊದಲೇ ನೆರೆಯ ಅಬ್ಬರದಲ್ಲಿ ಮುಳುಗಿದ ಕರುನಾಡಿಗೆ ಮಗದೊಂದು ಅಪಾಯದ ಸೂಚನೆ ಭೀತಿ ಹುಟ್ಟಿಸಿದೆ.

  • ಮತ್ತೆ ಲ್ಯಾಂಡರ್ ಜೊತೆ ಸಂಪರ್ಕ – ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

    ಮತ್ತೆ ಲ್ಯಾಂಡರ್ ಜೊತೆ ಸಂಪರ್ಕ – ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

    ನವದೆಹಲಿ: ಇಸ್ರೋ ವಿಜ್ಞಾನಿಗಳು ಮತ್ತೆ ವಿಕ್ರಂ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸುತ್ತಾರೆ ಎಂದು ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಈ ಹಿಂದೆ ಹಲವು ವಿಚಾರಗಳನ್ನು ಮೊದಲೇ ಊಹಿಸಿ ಪ್ರಸಿದ್ಧಿ ಪಡೆದಿರುವ ಅನಿರುದ್ಧ ಕುಮಾರ್ ಮಿಶ್ರಾ ಅವರು ಈ ಭವಿಷ್ಯವನ್ನು ನುಡಿದಿದ್ದಾರೆ. ನನ್ನ ಲೆಕ್ಕಾಚಾರದ ಪ್ರಕಾರ ಸೆ.20ರ ವರೆಗೆ ವಿಕ್ರಂ ಲ್ಯಾಂಡರ್ ಜೊತೆ ಮತ್ತೆ ಸಂವಹನ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಇಸ್ರೋ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯನಿರತರಾಗಿದ್ದಾರೆ. ಇವರಿಗೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

    ಇವರ ಟ್ವೀಟ್ ಅನ್ನು 1 ಸಾವಿರಕ್ಕೂ ಹೆಚ್ಚು ಜನ ರೀ ಟ್ವೀಟ್ ಮಾಡಿದ್ದರೆ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

    https://twitter.com/Anirudh_Astro/status/1170217193809817601

    ನಿಜವಾದ ಭವಿಷ್ಯಗಳು:
    ಅಮೆರಿಕದ ದೊಡ್ಡ ಮಟ್ಟದಲ್ಲಿ ಚಂಡಮಾರುತ ಆಗಸ್ಟ್ ಕೊನೆಯಲ್ಲಿ ಬೀಸಲಿದೆ ಎಂದು ಜೂನ್ 28 ರಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ನಿಜವಾಗಿದೆ ಎಂದು ತೋರಿಸಲು ಬಹಾಮ ದ್ವೀಪದ 50 ಸಾವಿರ ಮನೆಗಳ ಪೈಕಿ ಶೇ.70 ರಷ್ಟು ಮನೆಗಳು ಜಲಾವೃತಗೊಂಡಿದೆ ಎಂಬುದನ್ನು ಬ್ಲೂಮ್ ಬರ್ಗ್ ವರದಿ ಮಾಡಿದೆ ಎಂದು ಸೆ.5 ರಂದು ಟ್ವೀಟ್ ಮಾಡಿದ್ದರು.

    ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು ಸೋನಿಯಾ ಗಾಂಧಿ ಅವರನ್ನು ಹಂಗಾಮಿಯಾಗಿ ಮತ್ತೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ಅನಿರುದ್ಧ ಕುಮಾರ್ ಅವರು 2017ರ ಅಕ್ಟೋಬರ್ ನಲ್ಲಿ, ಕಾಂಗ್ರೆಸ್ ಸದ್ಯದ ಸ್ಥಿತಿ ನೋಡಿದರೆ ಮಹಿಳೆಯರು ಅಧ್ಯಕ್ಷರಾಗುವ ಸಾಧ್ಯತೆಯಿದೆ. ನನ್ನ ಪ್ರಕಾರ ಸೋನಿಯಾ ಗಾಂಧಿಯವರೇ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು 2017ರ ಅಕ್ಟೋಬರ್ ನಲ್ಲೇ ತಿಳಿಸಿದ್ದರು.

    https://twitter.com/Anirudh_Astro/status/1160491776945221632

    ಈ ವರ್ಷದ ಜೂನ್ ತಿಂಗಳಿನಲ್ಲಿ ಅಮಿತ್ ಶಾ ಅವರ ಬಗ್ಗೆ ಭವಿಷ್ಯ ನುಡಿದಿದ್ದ ಅವರು, ಜೂನ್ 2019 ರಿಂದ ಮಾರ್ಚ್ 2020ರ ಅವಧಿ ಒಳಗಡೆ ಅಮಿತ್ ಶಾ ಪಶ್ಚಿಮ ಬಂಗಾಳ, ಕಾಶ್ಮೀರ, ನಕ್ಸಲ್ ಸಮಸ್ಯೆ ಬಗ್ಗೆ ಬಹಳ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.

    https://twitter.com/Anirudh_Astro/status/1158418640523448320

    ಸದ್ಯ ಈಗ ಭಾರತದ ಆರ್ಥಿಕತೆ ಕುಸಿಯುತ್ತಿದ್ದರೂ ನವೆಂಬರ್ ಬಳಿಕ ಚೇತರಿಕೆ ಕಾಣಲಿದೆ. 2025ರ ವರೆಗೆ ಭಾರತ ಉತ್ತಮ ಪ್ರಗತಿಯನ್ನು ಕಾಣಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ. ಬಿಜೆಪಿ ಏಕಾಂಗಿಯಾಗಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಅನಿರುದ್ಧ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದರು. ಆದರೆ ಈ ಬಾರಿಯ ಐಪಿಎಲ್ ಬಗ್ಗೆ ಹೇಳಿದ್ದ ಭವಿಷ್ಯ ಸುಳ್ಳಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು.

    https://twitter.com/Anirudh_Astro/status/1131881712055726080

    ರಾತ್ರಿ ಏನಾಯ್ತು?
    1.39ಕ್ಕೆ ಲ್ಯಾಂಡರ್ ಚಂದ್ರನತ್ತ ಇಳಿಯುವ ಕೊನೆಯ ಸಿದ್ಧತೆ ಆರಂಭಗೊಂಡಿತ್ತು. ಇಸ್ರೋ ನಿಗದಿ ಪಡಿಸಿದ ಪಥದಲ್ಲೇ ಲ್ಯಾಂಡರ್ ಚಲಿಸುತಿತ್ತು. 1.48 ಕೇವಲ 6.ಕಿ.ಮೀ ದೂರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷವನ್ನು ಕಳೆದುಕೊಂಡಿತು. ದೊಡ್ಡ ಪರದೆಯಲ್ಲಿ ಕೆಂಪು ಬಣ್ಣದ ರೇಖೆ ಸಾಗಬೇಕಾದ ದಾರಿ ತೋರಿಸುತ್ತಿದ್ದರೆ ಹಸಿರು ಬಣ್ಣ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣದ ಮೇಲೆಯೇ ಹೋಗುತಿತ್ತು. 1.55ಕ್ಕೆ ಹಸಿರು ಬಣ್ಣದ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣವನ್ನು ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡುತ್ತಿದ್ದ ವಿಜ್ಞಾನಿಗಳು ಆಂತಕಕ್ಕೆ ಒಳಗಾದರು. ಅಲ್ಲಿಯವರೆಗೆ ಸಂಭ್ರಮದಲ್ಲೇ ಇದ್ದ ವಿಜ್ಞಾನಿಗಳು ಲ್ಯಾಂಡರಿನಿಂದ  ಬರುತ್ತಿರುವ ಸಿಗ್ನಲ್ ನೋಡಿ ಮುಖದಲ್ಲಿದ್ದ ಸಂಭ್ರಮ ಮರೆಯಾಗಿ ಆತಂಕ ಹೆಚ್ಚಾಯಿತು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಕೊನೆಗೆ 2.17 ಕ್ಕೆ ಇಸ್ರೋ ಅಧ್ಯಕ್ಷ ಶಿವನ್ 2.1 ಕಿ.ಮೀ ದೂರದಲ್ಲಿದ್ದಾಗ ವಿಕ್ರಮ್ ಸಂಪರ್ಕ ಕಡಿತಗೊಂಡಿದೆ ಎಂದು ಬಹಳ ಗದ್ಗದಿತವಾಗಿ ಪ್ರಕಟಿಸಿ, ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

     

  • ಯಾವ ದೇಶವೂ ಮಾಡದ ಪ್ರಯತ್ನ ನಾವು ಮಾಡಿದ್ದೇವೆ- ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಸೆಲ್ಯೂಟ್

    ಯಾವ ದೇಶವೂ ಮಾಡದ ಪ್ರಯತ್ನ ನಾವು ಮಾಡಿದ್ದೇವೆ- ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಸೆಲ್ಯೂಟ್

    ಕೊಪ್ಪಳ: ಚಂದಿರನ ಅಂಗಳದಲ್ಲಿ ವಿಕ್ರಮ ಲ್ಯಾಂಡರ್ ಸಂಪರ್ಕ ಕಡಿತ ಹಿನ್ನೆಲೆ ಕೊಪ್ಪಳದ ವಿದ್ಯಾರ್ಥಿಗಳು ವಿಜ್ಞಾನಿಗಳ ಪ್ರಯತ್ನಕ್ಕೆ ಸೆಲ್ಯೂಟ್ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಗಂಗಾವತಿಯ ರಾಘವೇಂದ್ರ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಇಂದು ಶಾಲೆ ಆರಂಭಕ್ಕೂ ಮುನ್ನ ವಿಜ್ಞಾನಿಗಳ ಪ್ರಯತ್ನಕ್ಕೆ ಜಯಘೊಷಣೆ ಮೊಳಗಿಸಿದ್ದಾರೆ. ಇದು ನಮ್ಮ ವಿಫಲವಲ್ಲ. ಚಂದಿರನ ದಕ್ಷಿಣ ಧ್ರುವಕ್ಕೆ ಉಪಗ್ರಹ ಉಡಾವಣೆ ಮಾಡುವ ಸಾಹಸಕ್ಕೆ ಜಗತ್ತಿನ ಮುಂದುವರಿದ ಯಾವ ದೇಶ ಕೈ ಹಾಕಿರಲಿಲ್ಲ. ಇವತ್ತು ನಮ್ಮ ದೇಶ ಆ ಒಂದು ಸಾಹಸಕ್ಕೆ ಕೈ ಹಾಕಿದೆ. ಯಶಸ್ಸು ಸಿಗದೆ ಇರಬಹುದು ಆದರೆ ನಮ್ಮ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ ಎಂದು ವಿದ್ಯಾರ್ಥಿಗಳು, ಶಿಕ್ಷಕರು ಸ್ವಾಭಿಮಾನದಿಂದ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ನಮ್ಮ ದೇಶದ ವಿಜ್ಞಾನಿಗಳ ಜೊತೆ ವಿದ್ಯಾರ್ಥಿಗಳಾದ ನಾವು ಇದ್ದೇವೆ. ಮತ್ತೆ ಪ್ರಯತ್ನಿಸೋಣ ಆ ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಮುಂದಿನ ಉಡಾವಣೆಯ ಜಯ ನಮ್ಮದಾಗಲಿ ಎಂದು ದೇವರಲ್ಲಿ ಬೇಡಿಕೊಂಡರು. ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಂ ಎಂದು ಹೇಳುವ ಮೂಲಕ ವಿಜ್ಞಾನಿಗಳಿಗೆ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು.

  • ತಡರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಸಂಪರ್ಕ ಸಾಧಿಸಲು ವಿಜ್ಞಾನಿಗಳ ಶತಪ್ರಯತ್ನ

    ತಡರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಸಂಪರ್ಕ ಸಾಧಿಸಲು ವಿಜ್ಞಾನಿಗಳ ಶತಪ್ರಯತ್ನ

    ಬೆಂಗಳೂರು: ಐತಿಹಾಸಿಕ ಸಾಧನೆ ಮಾಡಲು ಹೊರಟ್ಟಿದ್ದ ಇಸ್ರೋ ವಿಜ್ಞಾನಿಗಳು ತಡರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಕೇಂದ್ರದಿಂದ ಕದಲದೇ ಸಂಪರ್ಕ ಸಾಧಿಸಲು ಕಸರತ್ತು ನಡೆಸುತ್ತಿದ್ದರು.

    ಹೌದು. 3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಆದರೆ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತು.

    ತಡರಾತ್ರಿ 1.50ಕ್ಕೆ ಸಂಪರ್ಕ ಕಳೆದುಕೊಂಡರೂ ಬೆಳಗ್ಗೆ 10 ಗಂಟೆಯವರೆಗೆ ವಿಜ್ಞಾನಿಗಳು ಕೇಂದ್ರವನ್ನು ಬಿಟ್ಟು ತೆರಳದೇ ಹೇಗಾದರೂ ಮಾಡಿ ವಿಕ್ರಂ ಲ್ಯಾಂಡರ್ ಸಂಪರ್ಕ ಸಾಧಿಸಲು ಶತಪ್ರಯತ್ನ ನಡೆಸುತ್ತಿದ್ದರು. ಮುಖ್ಯವಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತು ಯೋಜನಾ ನಿರ್ದೇಶಕಿ ಎಂ ವನಿತಾ, ಮಿಷನ್ ನಿರ್ದೇಶಕಿ ರಿತು ಕರಿಧಾಲ್ ಕಂಟ್ರೋಲ್ ಕೊಠಡಿಯಲ್ಲೇ ಆಶಾಭಾವನೆಯಿಂದ ಪ್ರಯತ್ನ ನಡೆಸುತ್ತಿದ್ದರು.

    ನಡೆದಿದ್ದು ಏನು?
    1.39ಕ್ಕೆ ಲ್ಯಾಂಡರ್ ಚಂದ್ರನತ್ತ ಇಳಿಯುವ ಕೊನೆಯ ಸಿದ್ಧತೆ ಆರಂಭಗೊಂಡಿತ್ತು. ಇಸ್ರೋ ನಿಗದಿ ಪಡಿಸಿದ ಪಥದಲ್ಲೇ ಲ್ಯಾಂಡರ್ ಚಲಿಸುತಿತ್ತು. 1.48 ಕೇವಲ 6.ಕಿ.ಮೀ ದೂರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷವನ್ನು ಕಳೆದುಕೊಂಡಿತು. ದೊಡ್ಡ ಪರದೆಯಲ್ಲಿ ಕೆಂಪು ಬಣ್ಣದ ರೇಖೆ ಸಾಗಬೇಕಾದ ದಾರಿ ತೋರಿಸುತ್ತಿದ್ದರೆ ಹಸಿರು ಬಣ್ಣ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣದ ಮೇಲೆಯೇ ಹೋಗುತಿತ್ತು. 1.55ಕ್ಕೆ ಹಸಿರು ಬಣ್ಣದ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣವನ್ನು ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡುತ್ತಿದ್ದ ವಿಜ್ಞಾನಿಗಳು ಆಂತಕಕ್ಕೆ ಒಳಗಾದರು. ಅಲ್ಲಿಯವರೆಗೆ ಸಂಭ್ರಮದಲ್ಲೇ ಇದ್ದ ವಿಜ್ಞಾನಿಗಳು ಲ್ಯಾಂಡರಿನಿಂದ ಬರುತ್ತಿರುವ ಸಿಗ್ನಲ್ ನೋಡಿ ಮುಖದಲ್ಲಿದ್ದ ಸಂಭ್ರಮ ಮರೆಯಾಗಿ ಆತಂಕ ಹೆಚ್ಚಾಯಿತು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಕೊನೆಗೆ 2.17 ಕ್ಕೆ ಇಸ್ರೋ ಅಧ್ಯಕ್ಷ ಶಿವನ್ 2.1 ಕಿ.ಮೀ ದೂರದಲ್ಲಿದ್ದಾಗ ವಿಕ್ರಮ್ ಸಂಪರ್ಕ ಕಡಿತಗೊಂಡಿದೆ ಎಂದು ಬಹಳ ಗದ್ಗದಿತವಾಗಿ ಪ್ರಕಟಿಸಿ, ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

    ವಿಡಿಯೋ ವೈರಲ್: ಮಂಗಳಯಾನ ಗುರಿ ಮುಟ್ಟದಕ್ಕೆ ಬೇಸರದಲ್ಲಿದ್ದ ಶಿವನ್ ಅವರನ್ನು ಪ್ರಧಾನಿ ಮೋದಿ ಸಮಾಧಾನ ಪಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇಸ್ರೋ ಕಚೇರಿಯಿಂದ ಹೊರ ಬರುತ್ತಲೇ ಪ್ರಧಾನಿ ಮೋದಿ ಅವರನ್ನು ನೋಡಿ ಇಸ್ರೋ ಮುಖ್ಯಸ್ಥ ಕೆ.ಶಿವನ್ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶಿವನ್ ಅವರನ್ನು ಅಪ್ಪಿ ಬೆನ್ನು ತಟ್ಟಿ ಸಮಾಧಾನ ಪಡಿಸಿದರು.

    ನಿಮ್ಮ ಜೊತೆ ಭಾರತವಿದೆ: ಬೆಳಗ್ಗೆ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಳೆದ ಕೆಲವು ದಿನಗಳಿಂದ ಇಸ್ರೋ ವಿಜ್ಞಾನಿಗಳು ನಿದ್ದೆ ಮಾಡಿಲ್ಲ ಎಂದು ಎಲ್ಲರಿಗೂ ಗೊತ್ತು. ಬೆಳಗ್ಗಿನ ಜಾವ ನಿಮ್ಮ ಮುಖದಲ್ಲಿ ಬೇಸರ ಭಾವ ನೋಡಿದಾಗ ಹೆಚ್ಚು ಕಾಲ ನಾನು ಅಲ್ಲಿ ಉಳಿಯಲಿಲ್ಲ. ದಿಢೀರ್ ಅಂತ ಸಂಪರ್ಕ ಕಡಿತಗೊಂಡಾಗ ನಿಮ್ಮೆಲ್ಲರ ಮುಖದಲ್ಲಿ ನಿರಾಸೆ ಮೂಡಿತು. ನಾನು ನಿಮ್ಮೆಲ್ಲರ ಮನಸ್ಸು ಅರ್ಥ ಮಾಡಿಕೊಂಡಿದ್ದೇನೆ. ಇಂದು ನಮಗೆ ಕೊನೆ ಹಂತದಲ್ಲಿ ಸಣ್ಣದೊಂದು ಅಡೆಯುಂಟಾಗಿದೆ. ಚಂದ್ರಯಾನ ಚಂದ್ರನನ್ನ ಅಪ್ಪಿಕೊಳ್ಳುವ ನಮ್ಮ ಇಚ್ಛಾಶಕ್ತಿ ಮತ್ತಷ್ಟು ಪ್ರಬಲಗೊಂಡಿದೆ. ಸಣ್ಣದೊಂದು ಅಡೆ ತಡೆಯಿಂದ ನಾವು ಹಿಂಜರಿಯದೇ ಅದರ ಪರಿಹಾರಕ್ಕಾಗಿ ಮುಂದಿನ ದಿನ ಕೆಲಸ ಮಾಡಬೇಕಿದೆ. ಕವಿಗಳು ಚಂದ್ರನ ಬಗ್ಗೆ ಹಲವು ಕವಿತೆಗಳನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಯಾನದ ಬಗ್ಗೆ ಕವನಗಳನ್ನು ಬರೆಯಲಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಇದೆ. ಚಂದ್ರನನ್ನ ಮುಟ್ಟುವ ಆಸೆ ಇನ್ನಷ್ಟು ಹೆಚ್ಚಾಗಿದೆ ಎಂದರು.

    ನಿಮ್ಮ ಕಠಿಣ ಪರಿಶ್ರಮ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇಡೀ ಭಾರತ ನಮ್ಮ ಇಸ್ರೋ ವಿಜ್ಞಾನಿಗಳೊಂದಿಗೆ ಇದೆ. ಅಡೆತಡೆಗಳಿಂದ ನಿಮ್ಮ ಉತ್ಸಾಹ ಹೆಚ್ಚಾಗಿದೆ. ತೊಂದರೆಗಳು ಎದುರಾಗಿವೆ ಎಂದು ಧೃತಿಗಡೆಬಾರದು. ಸತತ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ವಿಫಲತೆಗೆ ಎದೆಗುಂದದೆ, ಗುರಿ ತಲುಪವಲ್ಲಿ ನಮ್ಮ ಕೆಲಸ ಆರಂಭವಾಗಬೇಕಿದೆ. ನೀವು ಮಾಡಿದ್ದನ್ನು, ಇದೂವರೆಗೂ ಯಾರು ಮಾಡಿಲ್ಲ. ನಿನ್ನೆ ರಾತ್ರಿಯೂ ಹೇಳಿದಂತೆ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದರು.

    ಪ್ರತಿ ಸೋಲು ಹೊಸದೊಂದನ್ನು ಕಲಿಸಿಕೊಡುತ್ತದೆ. ವಿಜ್ಞಾನದಲ್ಲಿ ಎಂದು ವಿಫಲತೆ ಆಗುವುದಿಲ್ಲ. ಎಲ್ಲ ಪ್ರಯೋಗಗಳು ನಮಗೆ ಹೊಸ ವಿಷಯವನ್ನು ಕಲಿಸಿಕೊಡುತ್ತೇವೆ. ಚಂದ್ರಯಾನದ ಕೊನೆಯ ಯಾನ ನಮ್ಮ ಯೋಜನೆಯಂತೆ ನಡೆಯಲಿಲ್ಲ ಎಂದು ನಿರಾಸೆಗೊಳ್ಳಬೇಡಿ. ನಮ್ಮ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘರ್ಷ, ಸಂಕಷ್ಟಗಳೇ ಹೊಸ ಅವಿಷ್ಕಾರಕ್ಕೆ ನಾಂದಿಯಾಗಲಿದೆ. ನಿಮ್ಮೆಲ್ಲರ ದಶಕಗಳ ಪರಿಶ್ರಮದಿಂದ ಇಂದು ಸ್ಪೇಸ್ ಸೈನ್ಸ್ ನಲ್ಲಿ ನಾವು ಮೊದಲಿಗರಾಗಿದ್ದೇವೆ. ಚಂದ್ರಯಾನ-2 ಮಿಷನ್ ಕೊನೆ ಹಂತ ಬೇಸರ ತಂದಿರಬಹುದು. ಆದ್ರೆ ನಮ್ಮ ಚಂದ್ರಯಾನದ ಪ್ರಯಾಣ ಅದ್ಧೂರಿಯಾಗಿತ್ತು. ಜ್ಞಾನಕ್ಕಿಂತ ದೊಡ್ಡ ಶಿಕ್ಷಣ ವಿಜ್ಞಾನ. ಮುಂದಿನ ಎಲ್ಲ ಯೋಜನೆಗಳಿಗೆ ಶುಭವಾಗಲಿ ಎಂದು ಪ್ರಧಾನಿಗಳು ಹಾರೈಸಿದರು.

    ನನಗಿಂತ ನಿಮ್ಮ ಸಂಕಲ್ಪ ದೊಡ್ಡದಿದೆ. ಇಂದು ಬೆಳ್ಳಂಬೆಳಗ್ಗೆ ನಿಮ್ಮನ್ನು ನೋಡುವ ಮೂಲಕ ಪ್ರೇರಣೆ ಪಡೆದುಕೊಳ್ಳಲು ಬಂದಿದ್ದೇನೆ. ನಿಮ್ಮೆಲ್ಲರಿಂದ  ಪಡೆದ ಪ್ರೇರಣೆ ನಾನು ಮರೆಯಲಾರೆ. ನಿಮ್ಮ ಸಂಕಲ್ಪ, ಕೆಲಸ ಹೀಗೆ ಮುಂದುವರಿಯಲಿ ಎಂದು ಶುಭಕೋರಿದರು.

  • ವಿಜ್ಞಾನಿಗಳ ಕೆಲಸ ವ್ಯರ್ಥವಾಗಿಲ್ಲ- ರಾಹುಲ್ ಗಾಂಧಿ

    ವಿಜ್ಞಾನಿಗಳ ಕೆಲಸ ವ್ಯರ್ಥವಾಗಿಲ್ಲ- ರಾಹುಲ್ ಗಾಂಧಿ

    ನವದೆಹಲಿ: ಇಸ್ರೋ ವಿಜ್ಞಾನಿಗಳ ಕೆಲಸ ವ್ಯರ್ಥವಾಗಿಲ್ಲ ಎಂದು ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಕಳೆದುಕೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಭಾರತ ಹೆಮ್ಮೆಯ ಸಂಸ್ಥೆ ಇಸ್ರೋ ಕೈಗೊಂಡಿದ್ದ ಚಂದ್ರಯಾನ -2 ಯೋಜನೆ ಬಹುತೇಕ ಯಶಸ್ವಿಯಾಗಿ ನಡೆದಿದ್ದು, ಆದರೆ ಅಂತಿಮ ಕ್ಷಣದಲ್ಲಿ ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಂಪರ್ಕ ಕಡಿತಗೊಂಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ನಮ್ಮ ವಿಜ್ಞಾನಿಗಳ ಸಾಧನೆ ಪ್ರತಿಯೊಬ್ಬ ಭಾರತಿಯರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

    ಚಂದ್ರಯಾನ-2 ಮೂನ್ ಮಿಷನ್‍ನಲ್ಲಿ ಇಸ್ರೋ ತಂಡವು ಮಾಡಿದ ಅದ್ಭುತ ಕಾರ್ಯಕ್ಕಾಗಿ ಅಭಿನಂದನೆಗಳು. ನಿಮ್ಮ ಉತ್ಸಾಹ ಮತ್ತು ಸಾಧನೆ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದೆ. ನಿಮ್ಮ ಕೆಲಸ ವ್ಯರ್ಥವಾಗಿಲ್ಲ. ನಿಮ್ಮ ಈ ಸಾಧನೆ ಭಾರತೀಯ ವೈಜ್ಞಾನಿಕ ಹಾದಿಗೆ ಮತ್ತು ಮುಂದಿನ ಭಾರತ ಕಾರ್ಯಚರಣೆಗೆ ಅಡಿಪಾಯವನ್ನು ಹಾಕಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಕಾಂಗ್ರೆಸ್ ಪಕ್ಷವು ಕೂಡ ಟ್ವೀಟ್ ಮಾಡಿದ್ದು, ಈ ಉದ್ವಿಗ್ನ ಸಮಯದಲ್ಲಿ ರಾಷ್ಟ್ರವು ಇಸ್ರೋದ ಸಂಪೂರ್ಣ ತಂಡ ಜೊತೆ ನಿಂತಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದೆ.

    ತಡ ರಾತ್ರಿ ವಿಕ್ರಮ್ ಲ್ಯಾಂಡ್ ಆಗುವ ಪ್ರಕ್ರಿಯೆ ಸರಿಯಾಗಿ ಆರಂಭಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಸೂಚನೆಯೂ ಲಭಿಸಿತು. ಆದರೆ ಲ್ಯಾಂಡರಿನಿಂದ ಪಥ ಬದಲಾದ ಕಾರಣ ಇಸ್ರೋ ಕೇಂದ್ರಕ್ಕೆ ಬರಬೇಕಾದ ಸಂದೇಶ ತಡವಾಗಿತ್ತು. ಚಂದ್ರನನ್ನು ತಲುಪಲು 2.1ಕಿಮೀ ದೂರ ಇದ್ದ ಸಂದರ್ಭದಲ್ಲಿ ಲ್ಯಾಂಡರಿನಿಂದ ಸಿಗ್ನಲ್ ಲಭಿಸಲಿಲ್ಲ. ಪರಿಣಾಮ ಇಸ್ರೋ ಅಧಿಕಾರಿಗಳ ಮುಖದಲ್ಲಿ ಆತಂಕ ಟೆನ್ಷನ್ ಕಂಡು ಬಂದಿತ್ತು.

    ಈ ವಿಚಾರದ ಬಗ್ಗೆ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು, 2.1 ಕಿ.ಮೀ ಅಂತರದಲ್ಲಿ ಸಿಗ್ನಲ್ ಕಡಿತಗೊಂಡಿದೆ. ಲ್ಯಾಂಡರ್ ಸಿಗ್ನಲ್ ಪಡೆಯಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಬಹುಬೇಗ ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದ್ದರು.

  • ಅಯ್ಯಪ್ಪ, ನೆಹರು ನಗರ ಬೆಟ್ಟಗಳು ವಾಸಕ್ಕೆ ಯೋಗ್ಯವಲ್ಲ- ಭೂ ವಿಜ್ಞಾನಿಗಳ ತಂಡ

    ಅಯ್ಯಪ್ಪ, ನೆಹರು ನಗರ ಬೆಟ್ಟಗಳು ವಾಸಕ್ಕೆ ಯೋಗ್ಯವಲ್ಲ- ಭೂ ವಿಜ್ಞಾನಿಗಳ ತಂಡ

    ಮಡಿಕೇರಿ: ವಿರಾಜಪೇಟೆಯಲ್ಲಿರುವ ಅಯ್ಯಪ್ಪ ಮತ್ತು ನೆಹರು ನಗರ ಬೆಟ್ಟಗಳು ಯಾವುದೇ ಕಾರಣಕ್ಕೂ ವಾಸಿಸಲು ಸುರಕ್ಷಿತವಲ್ಲ ಎಂದು ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಜ್ಞಾನಿಗಳ ತಂಡ ಸ್ಪಷ್ಟಪಡಿಸಿದೆ.

    ಎರಡೂ ಬೆಟ್ಟಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಇಂದು ವಿಜ್ಞಾನಿಗಳ ತಂಡ ಬೆಟ್ಟಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜ್ಞಾನಿ ಕಪಿಲ್ ಸಿಂಗ್, ಸದ್ಯ ಬೆಟ್ಟದಲ್ಲಿ ಮೂಡಿರುವ ಬಿರುಕುಗಳು ಮುಂದೆ ಗುಡ್ಡ ಕುಸಿತದ ಮುನ್ಸೂಚನೆಯಂತಿವೆ. ಹೀಗಾಗಿ ಅಯ್ಯಪ್ಪ ಹಾಗೂ ನೆಹರು ಬೆಟ್ಟಗಳು ಯಾವುದೇ ಕಾರಣಕ್ಕೂ ವಾಸಕ್ಕೆ ಸುರಕ್ಷಿತವಾದ ಸ್ಥಳಗಳಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಯಾವಾಗ ಬೇಕಾದರೂ ಬೆಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಅಧ್ಯಯನ ತಂಡ ಹೇಳಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ 54 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಜೊತೆಗೆ ಆಗಸ್ಟ್ 31 ರವರೆಗೆ ಈ ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗುವುದು. ಬಳಿಕ ವಿಜ್ಞಾನಿಗಳ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಇತ್ತೀಚೆಗೆ ಎರಡೂ ಬೆಟ್ಟಗಳು ಭಾರೀ ಬಿರುಕು ಬಿಟ್ಟಿದ್ದವು. ಹೀಗಾಗಿ ಇಂದು ಬೆಂಗಳೂರಿನಿಂದ ಭೂವಿಜ್ಞಾನಿಗಳ ತಂಡ ಆಗಮಿಸಿ, ಎರಡೂ ಬೆಟ್ಟಗಳ ಮಣ್ಣು ಪರೀಕ್ಷೆ ನಡೆಸಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೇತೃತ್ವದಲ್ಲಿ ತಂಡ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಿಲ್ ಸಿಂಗ್ ಮತ್ತು ಸುನಂದ ಬಸು ವಿಜ್ಞಾನಿಗಳ ತಂಡ ಮಳೆಗಾಲದಲ್ಲಿ ಬೆಟ್ಟ ಕುಸಿಯುವ ಸಾಧ್ಯತೆ ಇದೆ, ಹೀಗಾಗಿ ಅಲ್ಲಿ ವಾಸ ಮಾಡುವುದು ಯೋಗ್ಯವಲ್ಲ ಎಂದು ದೃಢಪಡಿಸಿದೆ.

    ಈ ಹಿಂದೆಯೇ ವಿರಾಜಪೇಟೆ ನಗರದ ನೆಹರು ನಗರ ಬೆಟ್ಟ ಮತ್ತು ಅಯ್ಯಪ್ಪ ಬೆಟ್ಟ ಕುಸಿಯುವ ಭೀತಿಯಲ್ಲಿವೆ. ನೆಹರು ನಗರದಲ್ಲಿ ಬೆಟ್ಟ ಸಂಪೂರ್ಣ ಬಾಯ್ತೆರಿದಿದ್ದು, ಬೆಟ್ಟದ ಬಿರುಕು ಕ್ಷಣ ಕ್ಷಣಕ್ಕೂ ಅಗಲವಾಗುತ್ತಿದೆ. ಅಲ್ಲದೆ, ಅಯ್ಯಪ್ಪ ಬೆಟ್ಟದಲ್ಲಿ ಸಹ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲೂ ಬೆಟ್ಟ ಕುಸಿಯಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು.

    ಮುನ್ನೆಚ್ಚರಿಕಾ ಕ್ರಮವಾಗಿ ನೆಹರು ಬೆಟ್ಟದ 8 ಕುಟುಂಬಗಳನ್ನು ಹಾಗೂ ಅಯ್ಯಪ್ಪ ಬೆಟ್ಟದ ಬಳಿಯ 25 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈ ಎಲ್ಲ ಕುಟುಂಬಗಳಿಗೆ ವಿರಾಜಪೇಟೆಯ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಸ್ಥಳಾಂತರಿಸಿದರೂ ಯಾವ ಪ್ರಮಾಣದಲ್ಲಿ ಗುಡ್ಡ ಕುಸಿಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ವಿರಾಜಪೇಟೆ ನಗರದ ಜನತೆ ತೀವ್ರ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

  • ವಿಶ್ವದ ಬಾಹ್ಯಾಕಾಶ ಇತಿಹಾಸದಲ್ಲಿ ವಿಶೇಷ ಸಾಧನೆ ನಿರ್ಮಿಸಿದ ಭಾರತ

    ವಿಶ್ವದ ಬಾಹ್ಯಾಕಾಶ ಇತಿಹಾಸದಲ್ಲಿ ವಿಶೇಷ ಸಾಧನೆ ನಿರ್ಮಿಸಿದ ಭಾರತ

    ನವದೆಹಲಿ: ಭಾರತ ಈಗ ಬಾಹ್ಯಾಕಾಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಬಾಹ್ಯಾಕಾಶಲ್ಲಿ ಭಾರತ ತನ್ನ ಕ್ಷಿಪಣಿಯನ್ನು ಬಳಸಿಕೊಂಡು ಮತ್ತೊಂದು ಉಪಗ್ರಹವನ್ನು ಹೊಡೆದು ಉರುಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಮಧ್ಯಾಹ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 300 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು ಭಾರತ ಇಂದು ಹೊಡೆದು ಹಾಕಿದೆ. ಒಟ್ಟು ಮೂರು ನಿಮಿಷದಲ್ಲಿ ಉಪಗ್ರಹ ಪ್ರತಿರೋಧಿ ಕ್ಷಿಪಣಿ ಪ್ರಯೋಗದ ಮಿಶನ್ ಶಕ್ತಿ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕ, ರಷ್ಯಾ, ಚೀನಾದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇಯ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

    ಈ ವಿಶೇಷ ಸಾಧನೆಯ ಮೂಲಕ ಭಾರತ ವಿಶ್ವದ ಭೂಪಟದಲ್ಲಿ ಸ್ಥಾನ ಪಡೆದಿದೆ. ಈ ಸಾಧನೆಗೆ ಕಾರಣವಾದ ಎಲ್ಲಾ ವಿಜ್ಞಾನಿಗಳನ್ನು ಮೋದಿ ಅಭಿನಂದಿಸಿದರು.

    ಪ್ರಯೋಗಾರ್ಥ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಶತ್ರು ರಾಷ್ಟ್ರಗಳ ಉಪಗ್ರಹವನ್ನು ಭಾರತ ಬಾಹ್ಯಾಕಾಶದಲ್ಲಿ ಹೊಡೆದು ಉರುಳಿಸುವ ಸಾಮರ್ಥ್ಯವನ್ನು ಪಡೆದಿದೆ.

     

  • ಭೂಕುಸಿತಕ್ಕೆ ಕಾರಣ ತಿಳಿಯಲು ಮಂಗ್ಳೂರಿಗೆ ಇಸ್ರೋ ತಂಡ ಭೇಟಿ

    ಭೂಕುಸಿತಕ್ಕೆ ಕಾರಣ ತಿಳಿಯಲು ಮಂಗ್ಳೂರಿಗೆ ಇಸ್ರೋ ತಂಡ ಭೇಟಿ

    ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭೂ ಕುಸಿತಕ್ಕೆ ಕಾರಣವನ್ನು ತಿಳಿಯಲು ಇಸ್ರೋ ವಿಜ್ಞಾನಿಗಳು ಇಂದು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಹಲವು ಭಾಗಗಳಿಗೆ ಭೇಟಿ ನೀಡಲಿದ್ದಾರೆ.

    ಕೊಡಗು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆಯಿಂದಾಗಿ ಸಾಕಷ್ಟು ಕಡೆ ಭೂಕುಸಿತ ಉಂಟಾಗಿತ್ತು. ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದ್ದಲ್ಲದೇ, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಸಂಭವಿಸಿದ ಭೂ ಕುಸಿತ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಕುಸಿದಿರುವುದಕ್ಕೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಇಸ್ರೋದ ವಿಜ್ಞಾನಿಗಳು ಭೂ ಕುಸಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

    ಇಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಇಸ್ರೋ ವಿಜ್ಞಾನಿಗಳ ತಂಡ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ಅಧ್ಯಯನ ನಡೆಸಲಿದ್ದಾರೆ. ಈ ವೇಳೆ ಕೊಡಗು ಜಿಲ್ಲೆಯ ಮದೆನಾಡು, ಜೋಡುಪಾಲ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ, ಕಲ್ಮಕಾರು ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv