Tag: ವಿಜೇಂದರ್ ಸಿಂಗ್

  • ಸೋಶಿಯಲ್ ಮೀಡಿಯಾದಲ್ಲಿ ‘ರಾಗಾ’ ಆ್ಯಬ್ಸ್ ಫೋಟೋ ವೈರಲ್

    ಸೋಶಿಯಲ್ ಮೀಡಿಯಾದಲ್ಲಿ ‘ರಾಗಾ’ ಆ್ಯಬ್ಸ್ ಫೋಟೋ ವೈರಲ್

    ತಿರುವನಂತಪುರಂ: ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅವರ ಒದ್ದೆ ಬಟ್ಟೆಯಲ್ಲಿ ಕಾಣಿಸುತ್ತಿರುವ ಆ್ಯಬ್ಸ್ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಹುಲ್ ಗಾಂಧಿ ಕೆಲದಿನಗಳ ಹಿಂದೆ ಕೊಲ್ಲಂನಲ್ಲಿ ಮೀನುಗಾರರೊಂದಿಗೆ ಸಮುದ್ರಕ್ಕಿಳಿದು ಈಜಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ರಾಗಾ ಮೀನುಗಾರರೊಂದಿಗೆ ಸಮುದ್ರದಲ್ಲಿ ಈಜಾಡಿ ಮೇಲೆ ಬರುತ್ತಿದ್ದಂತೆ ಅವರ ಒದ್ದೆ ಬಟ್ಟೆಯಲ್ಲಿ ಅವರ ಆ್ಯಬ್ಸ್ ಗುರುತು ಫೋಟೋದಲ್ಲಿ ಕಂಡು ಬಂದಿದೆ. ಈ ಚಿತ್ರವನ್ನು ಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಸಹಿತ ಹಲವು ಕಾಂಗ್ರೆಸ್ ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ರಾಹುಲ್ ಗಾಂಧಿಯವರ ಆ್ಯಬ್ಸ್ ಛಾಯಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಒಲಂಪಿಕ್ ಮತ್ತು ಕಾಮನ್ ವೆಲ್ತ್ ಕಂಚು ಹಾಗೂ ಬೆಳ್ಳಿ ಪದಕ ವಿಜೇತ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್, ಬಾಕ್ಸರ್ ನಂತೆ ಆ್ಯಬ್ಸ್ ಹೊಂದಿರುವ ಧೈರ್ಯಶಾಲಿ ಯುವ ನಾಯಕ ರಾಹುಲ್ ಎಂದು ಬರೆದುಕೊಂಡಿದ್ದಾರೆ.

    ಕೇರಳದಲ್ಲಿ ಮೀನುಗಾರರೊಂದಿಗೆ ಮೀನುಗಾರಿಕೆಗೆ ತೆರಳಿದ ವೇಳೆ ರಾಹುಲ್ ಗಾಂಧಿ ಮೀನುಗಾರರು ಸಮುದ್ರಕ್ಕೆ ಹಾರಿ ಮೀನಿನ ಬಲೆ ಬಿಡಿಸುತ್ತಿದ್ದಂತೆ ತಾವು ನೀರಿಗೆ ಧುಮುಕಿ ಸುಮಾರು 10 ನಿಮಿಷಗಳ ಕಾಲ ನೀರಿನಲ್ಲಿ ಈಜಾಡಿದ್ದರು, ನಂತರ ಮೀನುಗಾರರು ತಯಾರಿಸಿದ ಮೀನಿನ ಖಾದ್ಯಗಳನ್ನು ಸವಿದು, ಸುಮಾರು 2.30 ಗಂಟೆಗಳ ಕಾಲ ಸಮುದ್ರದಲ್ಲಿ ಕಳೆದು ಮೀನುಗಾರರ ಕಷ್ಟ ಸುಖಗಳ ಕುರಿತು ಸಮಾಲೋಚನೆ ನಡೆಸಿದ್ದರು.

  • ಕೃಷಿ ಮಸೂದೆಯನ್ನು ಹಿಂಪಡೆಯದಿದ್ರೆ, ಖೇಲ್ ರತ್ನ ಪ್ರಶಸ್ತಿ ವಾಪಸ್ ಕೊಡುವೆ: ವಿಜೇಂದರ್ ಸಿಂಗ್

    ಕೃಷಿ ಮಸೂದೆಯನ್ನು ಹಿಂಪಡೆಯದಿದ್ರೆ, ಖೇಲ್ ರತ್ನ ಪ್ರಶಸ್ತಿ ವಾಪಸ್ ಕೊಡುವೆ: ವಿಜೇಂದರ್ ಸಿಂಗ್

    ನವದೆಹಲಿ: ಕೃಷಿ ಮಸೂದೆಯನ್ನು ವಾಪಸ್ ಪಡೆಯದೆ ಇದ್ದರೆ, ತಮಗೆ ಬಂದಿರುವ ಖೇಲ್ ರತ್ನ ಪ್ರಶಸ್ತಿಯನ್ನು ವಾಪಸ್ ಕೊಡುತ್ತೇನೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

    ಭಾರತದ ಬಾಕ್ಸರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜೇಂದರ್ ಸಿಂಗ್ ಅವರು ಇಂದು ಸಿಂಘು (ದೆಹಲಿ-ಹರಿಯಾಣ) ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಾಥ್ ನೀಡಿದರು. ಮಿಡಲ್ ವೇಟ್ ವಿಭಾಗದಲ್ಲಿ 2006 ಮತ್ತು 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಗಳನ್ನು ಗೆದ್ದ ಸಿಂಗ್ ಅವರು ಖೇಲ್ ರತ್ನ ಪ್ರಶಸ್ತಿಗೆ ಭಾಜನಾರಗಿದ್ದರು.

    ಈ ವೇಳೆ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ವಿಜೇಂದರ್ ಸಿಂಗ್, ವಿವಾದಾತ್ಮಕ ಕೃಷಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ತಮಗೆ ಬಂದಿರುವ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದರು. ವಿಜೇಂದರ್ ಸಿಂಗ್ ಅವರಿಗೆ 2009ರಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು.

    ನಾನು ಪಾಂಜಾಬ್‍ನಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಅಲ್ಲಿನ ರೈತರು ಬೆಳೆದ ಗೋದಿಯ ರೊಟ್ಟಿ ತಿಂದಿದ್ದೇನೆ. ಇಂದು ಅವರು ಇಲ್ಲಿ ಕಷ್ಟದಲ್ಲಿರುವಾಗ ನಾನು ಅವರ ಸಹೋದರನಾಗಿ ಬಂದಿದ್ದೇನೆ. ಹರಿಯಾಣದ ಇತರ ಕ್ರೀಡಾಪಟುಗಳು ಇಲ್ಲಿಗೆ ಬರಲು ಬಯಸಿದ್ದರು, ಆದರೆ ಅವರಿಗೆ ಸರ್ಕಾರಿ ಉದ್ಯೋಗ ಇರುವ ಕಾರಣ ಬರಲು ಆಗಲಿಲ್ಲ. ಆದರೆ ಅವರು ರೈತರೊಂದಿಗೆ ಇದ್ದಾರೆ ಎಂದು ತಿಳಿಸಿದರು.

    ಇದಕ್ಕೂ ಮೊದಲು 30ಕ್ಕೂ ಹೆಚ್ಚು ಮಾಜಿ ಒಲಿಂಪಿಕ್ ಆಟಗಾರರು ಮತ್ತು ಪದಕ ವಿಜೇತರು ಸದ್ಯ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲ ನೀಡಿಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಭಾರತದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಸಜ್ಜನ್ ಸಿಂಗ್ ಚೀಮಾ ಅವರು ಕೂಡ ರೈತರಿಗೆ ಬೆಂಬಲ ಘೋಷಿಸಿದ್ದಾರೆ. ಕ್ರೀಡಾಪಟುಗಳ ಜೊತೆಗೆ ಖ್ಯಾತ ಕಾದಂಬರಿಕಾರ ಡಾ.ಜಸ್ವಿಂದರ್ ಸಿಂಗ್ ಅವರು ತಮ್ಮ ಭಾರತೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಹ ಹಿಂದಿರುಗಿಸುವುದಾಗಿ ಹೇಳಿದ್ದಾರೆ.

    ಪಂಜಾಬಿನ ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ಈ ಕಾರಣದಿಂದ ಅಖಿಲ ಭಾರತ ಕಿಸಾನ್ ಸಂಘ ಸಮಿತಿಯು ಡಿಸೆಂಬರ್ 8 ರಂದು ಭಾರತ್ ಬಂದ್‍ಗೆ ಕರೆ ನೀಡಿದೆ.

  • ಲೋಕಸಭಾ ಚುನಾವಣೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಸ್ಪರ್ಧೆ

    ಲೋಕಸಭಾ ಚುನಾವಣೆಯಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ಸಿನಿಂದ ಸ್ಪರ್ಧೆ

    ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಬಾಕ್ಸರ್ ವಿಜೇಂದರ್ ಸಿಂಗ್ ಅವರು ಸ್ಪರ್ಧಿಸುತ್ತಿದ್ದಾರೆ.

    ವಿಜೇಂದರ್ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂದು ಪಕ್ಷ ಸೋಮವಾರ ಘೋಷಣೆ ಮಾಡಿದೆ. ಹೀಗಾಗಿ ಬಿಜೆಪಿಯ ರಮೇಶ್ ಬಿಧುರಿ ಹಾಗೂ ಆಮ್ ಆದ್ಮಿ ಪಕ್ಷದ ರಾಘವ್ ಚಂದ್ರ ವಿರುದ್ಧ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

    ಈ ಬಗ್ಗೆ ವಿಜೇಂದರ್ ಕೂಡ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷ ಕೊಟ್ಟ ಅವಕಾಶ ಹಾಗೂ ಜವಾಬ್ದಾರಿಗಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    20 ವರ್ಷಗಳ ವೃತ್ತಿಪರ ಬಾಕ್ಸಿಂಗ್‍ನಲ್ಲಿ ಸದಾ ದೇಶ ಹೆಮ್ಮೆಪಡುವಂಥ ಸಾಧನೆ ಮಾಡಿದ್ದೇನೆ. ಇದೀಗ ದೇಶದ ಜನರಿಗಾಗಿ ಕೊಡುಗೆ ಹಾಗೂ ಸೇವೆ ಸಲ್ಲಿಸಲು ಒಳ್ಳೆಯ ಸಂದರ್ಭ ಒದಗಿಬಂದಿದೆ. ಒಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ಹೊಸ ಜವಾಬ್ದಾರಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿಧುರಿ ಅವರು ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿದ್ದರು. ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಮೇ 12ರಂದು ಚುನಾವಣೆ ನಡೆಯಲಿದ್ದು, 23ಕ್ಕೆ ಫಲಿತಾಂಶ ಹೊರಬೀಳಲಿದೆ.