Tag: ವಿಜೆ ಚಿತ್ರಾ

  • ಆ ಸೀರಿಯಲ್ ನಟಿ ಸಾಯೋ ಮುನ್ನ ಫೋನಲ್ಲಿ ವಾಗ್ವಾದ ನಡೆಸಿದ್ದು ಯಾರ ಜೊತೆ?

    ಆ ಸೀರಿಯಲ್ ನಟಿ ಸಾಯೋ ಮುನ್ನ ಫೋನಲ್ಲಿ ವಾಗ್ವಾದ ನಡೆಸಿದ್ದು ಯಾರ ಜೊತೆ?

    – ಮುಂದುವರಿದ ಪೊಲೀಸ್ ತನಿಖೆ, ಮಹತ್ವದ ವಿಚಾರ ಬಯಲು

    ಚೆನ್ನೈ: ಕಳೆದ ವಾರ ಚೆನ್ನೈನ ಹೋಟೆಲೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಖ್ಯಾತ ಸೀರಿಯಲ್ ನಟಿ ವಿ.ಜೆ ಚಿತ್ರಾ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾಯಿತೇ…? ತನ್ನ ತಾಯಿ ಹಾಗೂ ಮದುವೆಯಾಗಬೇಕಿದ್ದ ಹುಡುಗನಿಂದಾಗಿಯೇ ಚಿತ್ರಾ ಸಾವನ್ನಪ್ಪಿದರಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರು ತನಿಖೆ ಆರಂಭಿಸಿದ್ದು, ಈ ವೇಳೆ ಮಹತ್ವದ ಅಂಶಗಳು ಬಯಲಾಗಿವೆ ಎನ್ನಲಾಗಿದೆ.

    ಸಾಯುವುದಕ್ಕೂ ಕೆಲ ಕಾಲ ಮುನ್ನ ಚಿತ್ರಾ ಫೋನಲ್ಲಿ ಯಾರದೋ ಜೊತೆ ವಾಗ್ವಾದ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ಇದು ಯಾರ ಜೊತೆ ಎಂಬ ಮಾಹಿತಿಯನ್ನು ಪೊಲೀಸರು ಇನ್ನೂ ಬಿಟ್ಟುಕೊಟ್ಟಿಲ್ಲ. ಚಿತ್ರಾ ಮದುವೆಯಾಗಬೇಕಿದ್ದ ಹುಡುಗ ಹೇಮನಾಥ್‍ನನ್ನು ಸತತ ಐದನೇ ದಿನವೂ ಪೊಲೀಸರು ತನಿಖೆ ನಡೆಸಿದ್ದಾರೆ.

    ತಾಯಿ ವಿಜಯ ಹಾಗೂ ಪ್ರಿಯಕರ ಹೇಮನಾಥ್ ಅವರಿಂದ ಚಿತ್ರಾ ಅವರ ಮೇಲೆ ತೀವ್ರ ಒತ್ತಡವಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇವರಿಬ್ಬರ ಒತ್ತಡದಿಂದಾಗಿ ಚಿತ್ರಾ ಮಾನಸಿಕವಾಗಿ ತುಂಬಾ ನೊಂದಿದ್ದರು. ಅಲ್ಲದೇ ಸೀರಿಯಲ್ ಶೂಟಿಂಗ್ ಲೊಕೇಷನ್‍ಗೆ ಹೇಮನಾಥ್ ಮದ್ಯಸೇವಿಸಿ ಬಂದು ಚಿತ್ರಾ ಜೊತೆ ಗಲಾಟೆ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬಯಲಿಗೆ ಬಂದಿದೆ.

    ಈ ವಿಚಾರ ಗೊತ್ತಾದ ಮೇಲೆ ತಾಯಿ ವಿಜಯಾ ಅವರು ಹೇಮನಾಥ್‍ನನ್ನು ಮದುವೆಯಾಗಬೇಡ, ಬದಲಿಗೆ ಬೇರೆ ಯಾರನ್ನು ಬೇಕಾದರೂ ಮದುವೆಯಾಗು ಎಂದು ಹಠ ಹಿಡಿದಿದ್ದರು. ಆದರೆ ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಫೆಬ್ರವರಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದರೂ ಮನೆಯವರಿಗೆ ಹೇಳದೇ ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದರು. ಒಂದು ಕಡೆ ಅಮ್ಮನ ಒತ್ತಡ, ಇನ್ನೊಂದು ಕಡೆ ಭಾವಿ ಪತಿಯ ಗಲಾಟೆಯಿಂದಾಗಿ ಚಿತ್ರಾ ತುಂಬಾ ನೊಂದಿದ್ದರು ಎಂದು ಪೊಲೀಸರು ಹೇಳುತ್ತಿದ್ದಾರೆ.

    ಹೇಮನಾಥೇ ಕೊಂದಿದ್ದ ಎಂದು ಆರೋಪ: ನನ್ನ ಮಗಳನ್ನು ಹೇಮನಾಥ್ ಹೊಡೆದು ಸಾಯಿಸಿದ್ದಾನೆ. ಅವಳ ಸಾವಿಗೆ ಹೇಮನಾಥ್ ಕಾರಣ. ಅಲ್ಲದೇ ಚಿತ್ರಾ ಮುಖದಲ್ಲಿ ಗಾಯದ ಗುರುತುಗಳಿದ್ದವು ಎಂದು ತಾಯಿ ವಿಜಯಾ ಆರೋಪ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಈ ಗಾಯಗಳು ಆತ್ಮಹತ್ಯೆಗೆ ಯತ್ನಿಸಿದ ವೇಳೆ ಚಿತ್ರಾಳೇ ಮುಖವನ್ನು ಪರಚಿಕೊಂಡಿರೋದು ಎಂದು ಉಲ್ಲೇಖಿಸಲಾಗಿದೆ.

    ಹೋಟೆಲ್ ರೂಂನಲ್ಲಿ ಸಿಕ್ಕಿದ್ದ ಚಿತ್ರಾಳ ಮೊಬೈಲ್ ಫೋನನ್ನು ಹೆಚ್ಚಿನ ಪರಿಶೀಲನೆಗಾಗಿ ಫಾರೆನ್ಸಿಕ್ ಲ್ಯಾಬ್‍ಗೆ ಕಳಿಸಲಾಗಿತ್ತು. ಈ ವೇಳೆ ಫೋನ್ ಕರೆ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

  • ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ ಆತ್ಮಹತ್ಯೆ

    ಜನಪ್ರಿಯ ಸೀರಿಯಲ್ ನಟಿ ವಿಜೆ ಚಿತ್ರಾ ಆತ್ಮಹತ್ಯೆ

    – ಶೂಟಿಂಗ್ ಮುಗಿಸಿ ಬಂದು ನೇಣಿಗೆ ಶರಣು
    – ಹೋಟೆಲಿನಲ್ಲೇ ನಟಿ ಬದುಕಿಗೆ ವಿದಾಯ

    ಚೆನ್ನೈ: ತಮಿಳು ಸೀರಿಯಲ್ ನಟಿ ವಿಜೆ ಚಿತ್ರಾ(28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಚಾರ ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ.

    ಚಿತ್ರಾ ಅವರು ಜನಪ್ರಿಯ ತಮಿಳು ಕಾರ್ಯಕ್ರಮ ಪಾಂಡಿಯನ್ ಸ್ಟೋರ್ಸ್ ನಲ್ಲಿ ಮುಲ್ಲೈ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದರು. ಇದೀಗ ಈಕೆಯ ಮೃತದೇಹ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಇವಿಪಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿಸಿ ಇಂದು ಮುಂಜಾನೆ 2.30ರ ಸುಮಾರಿಗೆ ಹೋಟೆಲ್ ಗೆ ಮರಳಿದ್ದರು. ಚಿತ್ರಾ ಅವರು ಕೆಲವು ತಿಂಗಳ ಹಿಂದೆ ಉದ್ಯಮಿ ಹೇಮಂತ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯ ಅವರ ಜೊತೆಯೇ ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

    ಚಿತ್ರಾ ಅವರು ಕಾರ್ಯಕ್ರಮ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಪಾಂಡಿಯನ್ ಸ್ಟೋರ್ಸ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತನ್ನ ಮುಲ್ಲೈ ಪಾತ್ರದ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದ ಚಿತ್ರಾ, ತನ್ನ ಫೋಟೋ ಹಾಗೂ ಕೆಲವೊಂದು ಪೋಸ್ಟ್ ಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲದೆ ಕೆಲವೊಂದು ಕಾಮಿಡಿ ಪೋಸ್ಟ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

    ಒಟ್ಟಿನಲ್ಲಿ ಚಿತ್ರಾ ಆತ್ಮಹತ್ಯೆ ವಿಚಾರ ನೋವುಂಟು ಮಾಡಿದ್ದು, ಖಿನ್ನತೆಯೇ ಚಿತ್ರಾ ಸೂಸೈಡ್ ಗೆ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಚಿತ್ರಾ ಆತ್ಮಹತ್ಯೆಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಬಿ ಮಿಡಿಯುತ್ತಿದ್ದಾರೆ.