Tag: ವಿಜಯ್ ಕಿರಗಂದೂರ್

  • ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ ಕೆಜಿಎಫ್ ಅಧೀರ

    ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ ಕೆಜಿಎಫ್ ಅಧೀರ

    ಬೆಂಗಳೂರು: ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್‍ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.

    ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕನ್‌ಫ್ಯೂಸ್ ಆಗಬೇಡಿ. ಬೊಮ್ಮನಹಳ್ಳಿಯ ಬಿಬಿಎಂಪಿಯವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಆಧೀರನನ್ನು ಬಳಸಿದ್ದಾರೆ. ಕೆಜಿಎಫ್ ಚಿತ್ರದ ಅಧೀರ ರುಮಾಲಿನ ಬಟ್ಟೆಯಿಂದ ಬಾಯಿ ಮುಚ್ಚಿಕೊಂಡಿರುವ ಫೋಟೋ ಹಾಕಿ, ಮಾಸ್ಕ್ ಹಾಕಿಕೊಳ್ಳಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನೋಡಿ ಅಧೀರನು ಕೂಡ ಮಾಸ್ಕ್ ಹಾಕಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    https://twitter.com/vkiragandur/status/1288672451245686785?s=21

    ಈ ಟ್ವೀಟ್ ಕಂಡು ಖುಷಿಯಾದ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ರೀಟ್ವೀಟ್ ಮಾಡಿದ್ದು, ಅಧೀರ ಕೆಜಿಎಫ್ ಚಿತ್ರದಲ್ಲಿ ಖಳನಾಯಕನಾಗಿರಬಹುದು. ಆದರೆ ಆತನೂ ಕೂಡ ಕೊರೊನಾ ವೈರಸ್ ವಿರುದ್ಧ ಒಳ್ಳೆಯ ಜಾಗೃತಿಯನ್ನು ಮೂಡಿಸುತ್ತಿದ್ದಾನೆ. ಹೌದು ಮಾಸ್ಕ್ ಧರಿಸಿ, ನಿಮ್ಮನ್ನು ನೀವು ಕಾಪಾಡಿಕೊಳ್ಳುವುದರ ಜೊತೆ ನಿಮ್ಮ ಸುತ್ತಮುತ್ತಲಿರುವ ಜನರನ್ನು ಕಾಪಾಡಿ. ಬನ್ನಿ ಇಡೀ ಜಗತ್ತನ್ನೆ ಸುರಕ್ಷಿತವಾಗಿ ಮಾಡೋಣ. ಒಳ್ಳೆ ಆಯ್ಕೆ ಬೊಮ್ಮನಹಳ್ಳಿ ಬಿಬಿಎಂಪಿ ಎಂದು ಬರೆದುಕೊಂಡಿದ್ದಾರೆ.

    ಇಡೀ ಭಾರತವೇ ಕೆಜಿಎಫ್-2 ಚಿತ್ರದ ಬಿಡುಗಡೆಗೆ ಕಾಯುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ಬರುವ ಅಧೀರನ ಪಾತ್ರವೂ ಅಷ್ಟೇ ಕುತೂಹಲವನ್ನು ಹುಟ್ಟುಹಾಕಿದೆ. ಈ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಅವರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಕಳೆದ ಬುಧವಾರ ಸಂಜಯ್ ದತ್ ಅವರ ಹುಟ್ಟು ಹಬ್ಬದ ಪ್ರಯಕ್ತ ಕೆಜಿಎಫ್ ಚಿತ್ರತಂಡ ಅಧೀರನ ಇನ್ನೊಂದು ಹೊಸ ಲುಕ್ ಅನ್ನು ಬಿಡುಗಡೆ ಮಾಡಿದೆ. ಕ್ರೂರತ್ವಕ್ಕೆ ಹಿಡಿದ ಕೈಗನ್ನಡಿಯಂತಿರುವ ಅಧೀರನ ಇನ್ನೊಂದು ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ಹೊಂಬಾಳೆ ಫಿಲಂಸ್‌ಗೆ 6ನೇ ವಸಂತ – ಯಶ್, ಪುನೀತ್ ಸಮಾಗಮ

    ಹೊಂಬಾಳೆ ಫಿಲಂಸ್‌ಗೆ 6ನೇ ವಸಂತ – ಯಶ್, ಪುನೀತ್ ಸಮಾಗಮ

    ಬೆಂಗಳೂರು: ಹೊಂಬಾಳೆ ಫಿಲಂಸ್‌ ಬ್ಯಾನರ್‌ಗೆ ಆರನೇ 6ನೇ ವಸಂತ ಸಂಭ್ರಮ. ಹೀಗಾಗಿ ನಗರದಲ್ಲಿ ಭರ್ಜರಿಯಾಗಿ ಔತಣ ಕೂಟ ನಡೆದಿದೆ. ಈ ಸಮಾರಂಭದಲ್ಲಿ ಸೂಪರ್ ಸ್ಟಾರ್‌ಗಳ ಸಮಾಗಮವಾಗಿದೆ.

    ಹೊಂಬಾಳೆ ಫಿಲಂಸ್‌ ಶನಿವಾರ ಆರನೇ ವಸಂತದ ಸಂಭ್ರಮದಲ್ಲಿತ್ತು. ಹೀಗಾಗಿ ಖಾಸಗಿ ಹೋಟೆಲಿನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಔತಣ ಕೂಟವನ್ನು ಏರ್ಪಡಿಸಿದ್ದರು. ಈ ಅದ್ಧೂರಿ ಪಾರ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಸೇರಿದಂತೆ ‘ರಾಜಕುಮಾರ’ ಹಾಗೂ ‘ಕೆಜಿಎಫ್’ ಚಿತ್ರತಂಡ ಭಾಗಿಯಾಗಿತ್ತು.

    ಹೊಂಬಾಳೆ ಸ್ಯಾಂಡಲ್‍ವುಡ್‍ನ ಜನಪ್ರಿಯ ಬ್ಯಾನರ್ ಆಗಿದ್ದು, ‘ನಿನ್ನಿಂದಲೇ’, ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್’ ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ಕೀರ್ತಿ ಈ ಬ್ಯಾನರ್‌ಗೆ ಸಲ್ಲುತ್ತದೆ. ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತಹ ಸಿನಿಮಾವನ್ನು ಬ್ಯಾನರ್ ಹೊಂಬಾಳೆ ಕೊಟ್ಟಿದೆ.

    ಸದ್ಯಕ್ಕೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹಾಗೂ ‘ಯುವರತ್ನ’ ಸಿನಿಮಾ ನಿರ್ಮಾಣಗೊಳ್ಳುತ್ತಿವೆ. ಕಳೆದ ದಿನವೇ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಳೆದ ವರ್ಷ ಇದೇ ದಿನದಂದು ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಇಡೀ ದೇಶ ಚಂದನವನದತ್ತ ತಿರುಗಿ ನೋಡುವಂತೆ ಮಾಡಿತ್ತು. ಈಗ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಫಸ್ಟ್ ಲುಕ್ ನೋಡಿ ಮತ್ತೆ ದಂಗಾಗುವಂತೆ ಮಾಡಿದೆ.

    ಡಿಸೆಂಬರ್ 21 ‘ಕೆಜಿಎಫ್’ ರಿಲೀಸ್ ಆದ ದಿನ. ‘ಕೆಜಿಎಫ್ ಚಾಪ್ಟರ್ 2’ ಫಸ್ಟ್ ಲುಕ್ ಬಿಡುಗಡೆಯಾಗಿರುವ ದಿನ. ಎಲ್ಲದಕ್ಕಿಂತ ಹೆಚ್ಚಾಗಿ ಹೊಂಬಾಳೆ ಎಂಬ ಬ್ಯಾನರ್ ಲಾಂಚ್ ಆದ ದಿನ. ಇದೇ ಖುಷಿಯಲ್ಲಿ ಎಲ್ಲಾ ಒಟ್ಟಾಗಿ ಸೇರಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕರುನಾಡ ಮಂದಿಗೆ, ಸಿನಿಮಾ ಪ್ರೇಮಿಗಳಿಗೆ, ಸಪೋರ್ಟ್ ಮಾಡಿದ ಎಲ್ಲರಿಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಧನ್ಯವಾದ ತಿಳಿಸಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡಿದ ಸುಮಾರು 400 ಮಂದಿಗೆ ಭರ್ಜರಿ ಔತಣ ಕೂಟ ಏರ್ಪಡಿಸಿದ್ದರು.

  • ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ, ಆ ಎದೆಯಲ್ಲಿ ನೀವು ಇದ್ದೀರಿ: ಯಶ್

    ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ, ಆ ಎದೆಯಲ್ಲಿ ನೀವು ಇದ್ದೀರಿ: ಯಶ್

    ಬೆಂಗಳೂರು: ಸಕ್ಸಸ್ ನಮ್ಮ ತಲೆಗೆ ಏರಿಲ್ಲ. ಈ ಸಕ್ಸಸ್ ನಮ್ಮೆಲ್ಲರ ಎದೆಯಲ್ಲಿದೆ. ಆ ಎದೆಯಲ್ಲಿ ನೀವು ಇದ್ದೀರಿ ಎಂದು ಯಶ್ ಹೇಳಿದ್ದಾರೆ.

    ಕೆಜಿಎಫ್ ಬಿಡುಗಡೆಯಾಗಿ ಯಶಸ್ವಿಯಾಗಿ 25 ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಅವರು, ಒಬ್ಬರು ಇಬ್ಬರಿಂದ ಈ ಸಿನಿಮಾ ಹಿಟ್ ಆಗಿಲ್ಲ. ಪ್ರತಿಯೊಬ್ಬರು ಶ್ರಮ ಪಟ್ಟು ದುಡಿದ ಫಲ ಇದು. ಈ ಚಿತ್ರವನ್ನು ಪ್ರೋತ್ಸಾಹಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದರು.

    ಕನ್ನಡದ ಜನ ಇದು ನಮ್ಮ ಸಿನಿಮಾ ಎನ್ನುವ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದೀರಿ. ಎಲ್ಲ ಮಾಧ್ಯಮಗಳು ಜೊತೆಗೆ ಡಿಜಿಟಲ್ ಮೀಡಿಯಾದಲ್ಲೂ ಚಿತ್ರಕ್ಕೆ ಉತ್ತಮ ಪ್ರಚಾರ ಸಿಕ್ಕಿದೆ. ವಿಶೇಷವಾಗಿ ಟ್ರೋಲ್ ಪೇಜ್ ಗಳಲ್ಲೂ ಪ್ರಚಾರ ಮಾಡಿದ್ದಕ್ಕೆ ಥ್ಯಾಂಕ್ಸ್ ಎಂದು ತಿಳಿಸಿದರು.

    ಕೆಜಿಎಫ್ ಚಾಪ್ಟರ್ 2 ಮುಂದಿನ ಕನಸು. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ನಮ್ಮ ಕಲಾವಿದರ ಮಾತುಗಳು, ಸಾರ್ಥಕತೆಯ ಭಾವ ಅವರ ಕಣ್ಣಿನಲ್ಲಿರುವ ಹೊಳಪು ನೋಡುವಾಗಲೇ ತಿಳಿಯುತ್ತದೆ. ಆರ್ಮಿ ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ಈ ಫಲಿತಾಂಶ ಬಂದಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ವಿಶೇಷವಾಗಿ ಕಲಾವಿದರ ಫ್ಯಾಮಿಲಿಯ ಬಗ್ಗೆ ಮಾತನಾಡಿದ ಅವರು, ಈ ಚಿತ್ರ ಹಿಟ್ ಆಗಲು ನಮ್ಮ ಫ್ಯಾಮಿಲಿಯೂ ಕಾರಣ. ದೀರ್ಘ ಶೂಟಿಂಗ್ ನಡೆದಾಗ ಅವರೆಲ್ಲರು ನಮ್ಮನ್ನು ಸಹಿಸಿಕೊಂಡಿದ್ದಾರೆ. “ಏನ್ ಮಾಡದೇ ಇರುವ ಸಿನಿಮಾ ಮಾಡ್ತಾ ಇದ್ದೀರಾ” ಈ ರೀತಿಯ ಪ್ರಶ್ನೆಗಳು ಚಿತ್ರ ತಂಡದ ಸದಸ್ಯರಿಗೆ ಬಂದಿರುತ್ತದೆ. ಆದರೂ ನಮ್ಮೆನ್ನೆಲ್ಲ ಸಹಿಸಿಕೊಂಡು ಚಿತ್ರಕ್ಕೆ ಬೆಂಬಲ ನೀಡಿದ ಕುಟುಂಬದ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಯಶ್ ತಿಳಿಸಿದರು. ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರ ಹೆಸರನ್ನು ಹೇಳಿ ಯಶ್ ಧನ್ಯವಾದ ಹೇಳಿದ್ದು ವಿಶೇಷವಾಗಿತ್ತು.

    ನಾನು ಅಭಿನಯ ಶಾಲೆಗೆ ಸೇರಬೇಕು ಎಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ `ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ಅನಂತ್ ಸರ್ ನನಗೆ ಹಲವು ಅಭಿನಯದ ಪಾಠ ಹೇಳಿಕೊಡುತ್ತಿದ್ದರು. ಫೌಂಡೇಶನ್ ಸರಿ ಇದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎನ್ನುವಂತೆ ಆ ಸೀರಿಯಲ್ ನಲ್ಲಿ ಬಹಳಷ್ಟು ವಿಚಾರಗಳನ್ನು ಅವರು ಕಲಿಸಿಕೊಟ್ಟರು. ಕಲಿಯುವ ವಯಸ್ಸಿನಲ್ಲಿ ಈ ಪಾಠ ಹೇಳಿಕೊಟ್ಟ ನನ್ನ ಮೊದಲ ಅಭಿನಯದ ಗುರುಗುಳು ಅನಂತ್ ಸರ್. ಶೂಟಿಂಗ್ ವೇಳೆ ಸರ್ ಏನು ಮಾಡಲ್ಲ ಅಲ್ಲ ಅಂತ ಅನಿಸುತಿತ್ತು. ಆದರೆ ಮಾನಿಟರ್ ನೋಡಿದ ಮೇಲೆ ಸರ್ ಅಭಿನಯ ಏನು ಎನ್ನುವುದು ಗೊತ್ತಾಗುತಿತ್ತು ಎಂದು ಯಶ್ ಈ ವೇಳೆ ಅನಂತ್ ನಾಗ್ ಅವರು ಹೇಳಿಕೊಟ್ಟ ಪಾಠಗಳನ್ನು ನೆನಪಿಸಿಕೊಂಡರು.

    ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಮಾತನಾಡಿದ ಯಶ್, ಕೆಜಿಎಫ್ ಸ್ಕ್ರಿಪ್ಟ್ ತಂದಾಗ ಇಷ್ಟು ದೀರ್ಘ ಅವಧಿಯ ಸಿನಿಮಾ ಕಷ್ಟವಾಗಬಹುದು. ಬೇರೆ ಸಿನಿಮಾ ಮಾಡಿ ಎಂದು ನಾನು ಹೇಳಿದ್ದೆ. ಆದರೆ ಅವರು ನಾನು ಮುಂದೆ ಮಾಡಿದ್ರೆ ಕೆಜಿಎಫ್ ಸಿನಿಮಾ ಮಾತ್ರ ಮಾಡುವುದು. ಬೇರೆ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದಿದ್ದರು. ಕೆಲಸದ ಬಗ್ಗೆ ಇರುವ ಅವರ ಬದ್ಧತೆ ಏನು ಎನ್ನುವುದು ಈ ಸಿನಿಮಾ ನೋಡಿದ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

    ಇಷ್ಟು ಒಂದು ದೊಡ್ಡ ಬಜೆಟ್ ಸಿನಿಮಾ ಮಾಡಬೇಕಾದರೆ ತಾಕತ್ ಬೇಕು. ಮಾರುಕಟ್ಟೆಯನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ಧೈರ್ಯದಿಂದ ಬಂಡವಾಳ ಹಾಕಿ ನಿರ್ಮಾಪಕ ವಿಜಯ್ ಅವರು ಕನ್ನಡ ಚಿತ್ರರಂಗದಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ ಎಂದು ಹೊಗಳಿದರು.

    ಕ್ಯಾಮೆರಾ ಕೆಲಸ ಮಾಡಿದ ಭುವನ್ ಗೌಡ ಅವರ ಬಗ್ಗೆ ಮಾತನಾಡಿ, ಕ್ಯಾಮೆರಾ ಚಿತ್ರದ ಹೈಲೈಟ್ಸ್. ಮುಂಬೈನಲ್ಲಿ ಭುವನ್ ಗೌಡ ಡಿಒಪಿ ವೇಗ ನೋಡಿ ಎಲ್ಲರು ಅಚ್ಚರಿ ಪಟ್ಟಿದ್ದಾರೆ. ಭುವನ್ ಪ್ರತಿಭೆ ಎಲ್ಲರಿಗೂ ಗೊತ್ತಾಗಿದ್ದು, ಆ ಕಡೆ ಹೋದರೆ ಮತ್ತೆ ಅವರು ಈ ಕಡೆ ಬರಲ್ಲ ಎಂದು ಯಶ್ ಮೆಚ್ಚುಗೆ ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv