Tag: ವಿಜಯಶಂಕರ್

  • ಬಿಜೆಪಿ ಸೇರುವ ಬಗ್ಗೆ ವಿಜಯ್ ಶಂಕರ್ ಸ್ಪಷ್ಟನೆ

    ಬಿಜೆಪಿ ಸೇರುವ ಬಗ್ಗೆ ವಿಜಯ್ ಶಂಕರ್ ಸ್ಪಷ್ಟನೆ

    ಮೈಸೂರು: ಬಿಜೆಪಿ ಸೇರುವುದರ ಬಗ್ಗೆ ಮುಂದಿನ ವಾರ ಸ್ಪಷ್ಟನೆ ಕೊಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಪಕ್ಷ ಸೇರಲು ಆಹ್ವಾನ ಬಂದಿದೆ. ಈ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲು ಅಭಿಮಾನಿಗಳ ಸಭೆ ನಡೆಸುತ್ತಿದ್ದೇನೆ. ಇನ್ನೊಂದು ವಾರದಲ್ಲಿ ಸ್ಪಷ್ಟ ತೀರ್ಮಾನ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

    ಬಿಜೆಪಿ ತಮಗೆ ನೀಡಿರೋ ಆಹ್ವಾನ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಬದಲಾದ ರಾಜಕೀಯದಲ್ಲಿ ಬದಲಾವಣೆ ನನ್ನ ಪಾಲಿಗೆ ಅಳಿವು – ಉಳಿವಿನ ಪ್ರಶ್ನೆಯಾಗಿದೆ. ರಾಜಕೀಯದಲ್ಲಿ ಎಲ್ಲಾ ಸಂದರ್ಭದಲ್ಲೂ ನಮ್ಮ ಎಲ್ಲಾ ನಿರ್ಧಾರಗಳು ಫಲ ನೀಡುವುದಿಲ್ಲ. ಕಾಂಗ್ರೆಸ್ ಸೇರಿದ ತೀರ್ಮಾನದ ಲೆಕ್ಕವೂ ಹೀಗೆ ಫಲ ಕೊಡಲಿಲ್ಲ ಎಂದು ಹೇಳಿದರು.

    ರಾಜಕಾರಣಿ ಎಷ್ಟು ವರ್ಷ ಮನೆಯಲ್ಲಿ ಕೂರಲು ಸಾಧ್ಯ ಹೇಳಿ. ಹೀಗಾಗಿ ಬದಲಾವಣೆ ಬಯಸಿ ಅಭಿಮಾನಿಗಳ ಅಭಿಪ್ರಾಯ ಕೇಳುತ್ತಿದ್ದೇನೆ. ಹುಣಸೂರು ಉಪ ಚುನಾವಣೆ ದೃಷ್ಟಿಯಿಂದ ಇಂಥಹ ತೀರ್ಮಾನ ಕೈಗೊಳ್ಳುತ್ತಿಲ್ಲ. ಒಂದು ರಾಷ್ಟ್ರೀಯ ಪಕ್ಷಕ್ಕೆ ಕಂಡಿಷನ್ ಹಾಕಿ ಸೇರಲು ಆಗಲ್ಲ. ಒಂದು ವಾರದಲ್ಲಿ ಸ್ಪಷ್ಟ ತೀರ್ಮಾನಕ್ಕೆ ಬರುತ್ತೇನೆ. ಬಿಜೆಪಿ ಸೇರುವ ನಿರ್ಧಾರ ಕೈಗೊಂಡರೆ ಕಾಂಗ್ರೆಸ್ ಯಾಕೆ ಬಿಟ್ಟೆ, ಅಲ್ಲಿನ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ವಿವರಿಸುತ್ತೇನೆ ಎಂದು ತಿಳಿಸಿದರು.

  • ಐಎಂಎ ವಂಚನೆ ಪ್ರಕರಣ: ಡಿಸಿ ವಿಜಯಶಂಕರ್​​ರಿಂದ 2.5 ಕೋಟಿ ಜಪ್ತಿ

    ಐಎಂಎ ವಂಚನೆ ಪ್ರಕರಣ: ಡಿಸಿ ವಿಜಯಶಂಕರ್​​ರಿಂದ 2.5 ಕೋಟಿ ಜಪ್ತಿ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಬೆಂಗಳೂರು ಡಿಸಿ ವಿಜಯಶಂಕರ್ ಅವರಿಂದ ಎಸ್‍ಐಟಿ ಅಧಿಕಾರಿಗಳು 2.5 ಕೋಟಿ ರೂ. ವನ್ನು ಶುಕ್ರವಾರ ಜಪ್ತಿ ಮಾಡಿಕೊಂಡಿದ್ದಾರೆ.

    ಅಡೋನಿ ಎಂಬ ನಿರ್ಮಾಣ ಸಂಸ್ಥೆಯಿಂದಲೂ 1.5 ಕೋಟಿ ರೂ.ವನ್ನು ಎಸ್‍ಐಟಿ ವಶಕ್ಕೆ ಪಡೆದಿದೆ. ಅಷ್ಟೇ ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಗುಡಿ ಮತ್ತು ತಿಲಕನಗರ ರೌಡಿಶೀಟರ್ ಮುನೀರ್ ಅಲಿಯಾಸ್ ಗನ್ ಮುನೀರ್, ಬ್ರಿಗೇಡ್ ಬಾಬು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ವಿಜಯಶಂಕರ್ ನಗರದ ಬಿಲ್ಡರ್ ಓರ್ವನಿಗೆ ಫ್ಲಾಟ್ ಮತ್ತು ನಿವೇಶನ ಖರೀದಿಸಲು ಕಿಕ್ ಬ್ಯಾಕ್ ಹಣ ನೀಡಿದ್ದರು. ಈ ಲಂಚದ ಹಣ ಹಾಗೂ ಬಿಲ್ಡರ್ ನನ್ನು ಎಸ್‍ಐಟಿ ವಶಕ್ಕೆ ಪಡೆದಿದೆ. ವಿಜಯಶಂಕರ್ ಮತ್ತೊಂದು ಪ್ರಕಣದಲ್ಲಿ 1 ಕೋಟಿ ರೂ. ಲಂಚ ಪಡೆದಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಈ ಹಿನ್ನಲೆ ಆ ಹಣವನ್ನು ಎಸ್‍ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಐಎಂಎ ಸಮೂಹ ಕಂಪನಿಗೆ ಕ್ಲೀನ್ ಚಿಟ್ ನೀಡಲು ವಿಜಯಶಂಕರ್ 1.5 ಕೋಟಿ ರೂ. ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಬಂಧಿತ ಆರೋಪಿ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್‍ಐಟಿ ಅಧಿಕಾರಿಗಳು ಸೋಮವಾರ ವಿಜಯಶಂಕರ್ ಅವರನ್ನು ಬಂಧಿಸಿದ್ದರು. ಜೊತೆಗೆ ಬಿಲ್ಡರ್ ಕೃಷ್ಣಮೂರ್ತಿ ಅವರನ್ನು ಕೂಡ ಎಸ್‍ಐಟಿ ತಂಡವು ವಿಚಾರಣೆಗೆ ಒಳಪಡಿಸಿತ್ತು.

    ವಿಜಯಶಂಕರ್ ಅವರನ್ನು ಬಂಧಿಸಿದ್ದ ಎಸ್‍ಐಟಿ ಪೊಲೀಸರು ಮಂಗಳವಾರ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್ ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಈ ಮೂಲಕ ಆರೋಪಿಯನ್ನು ಇದೇ 15ರವೆರಗೂ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಕೋರಿಕೆಯನ್ನು ನ್ಯಾಯಾಧೀಶರು ಭಾಗಶಃ ಪುರಸ್ಕರಿಸಿದ್ದರು.

    ಬಂಧಿತ ವಿಜಯಶಂಕರ್ ವಿರುದ್ಧ ಕಮರ್ಶಿಯಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406 (ಅಪರಾಧಿಕ ನಂಬಿಕೆ ದ್ರೋಹಕ್ಕಾಗಿ ದಂಡನೆ), 409 (ಲೋಕನೌಕರರನಿಂದ ಅಪರಾಧಿಕ ನಂಬಿಕೆ ದ್ರೋಹ), 420 (ವಂಚನೆ) ಹಾಗೂ 120 (ಬಿ) (ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಅಪರಾಧ ಬಚ್ಚಿಡುವುದು) ಅಡಿ ಪ್ರಕರಣ ದಾಖಲಾಗಿದೆ.

  • ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

    ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಸ್ತಿ ವಿವರ ಘೋಷಣೆ

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ರಂಗೇರತೊಡಗಿದೆ. ಇವತ್ತು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿಯ ಅಭ್ಯರ್ಥಿ ಇವತ್ತು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದರು.

    ಮೊದಲು ಬಿಜೆಪಿಯ ಅಭ್ಯರ್ಥಿ ಪ್ರತಾಪ್‍ಸಿಂಹ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಡಿಸಿಎಂ ಅರ್ ಅಶೋಕ್, ಮಾಜಿ ಸಚಿವ ಎಸ್.ಎ ರಾಮದಾಸ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು. ಇದಕ್ಕೂ ಮುನ್ನ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಾನ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತ ಆಗಮಿಸಿ ಪೂಜೆ ಸಲ್ಲಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಪ್ರಚಾರಕ್ಕೆ ಆಗಮಿಸುತ್ತಾರೆ ಎಂದು ತಿಳಿಸಿದರು.

    ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಸಹ ನಾಮಪತ್ರ ಸಲ್ಲಿಸಿದರು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಇವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್ ಶಾಸಕರಾದ ಡಾ.ಯತೀಂದ್ರ ಸೇರಿ ಹಲವರು ಸಾಥ್ ನೀಡಿದರು. ಆದರೆ ಮೈತ್ರಿ ಪಕ್ಷದ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೊನೆ ಕ್ಷಣದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಚಿವ ಸಾ.ರಾ ಮಹೇಶ್ ಕೈ ನಾಯಕರಿಗೆ ಸಾಥ್ ನೀಡಿದರು.

    ಪ್ರತಾಪ್ ಸಿಂಹ್ ಆಸ್ತಿ ವಿವರ:
    ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಚುನಾವಣೆಯ ಅಫಿಡವಿಡ್‍ನಲ್ಲಿ ಆಸ್ತಿ ವಿವರ ಘೋಷಣೆ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಘೋಷಿಸಿಸಿದ್ದಕ್ಕಿಂತ ಅಲ್ಪ ಪ್ರಮಾಣದ ಆಸ್ತಿ ಏರಿಕೆ ಆಗಿದೆ. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಆಸ್ತಿಯಲ್ಲಿ 7,29,380 ಲಕ್ಷ ರೂ ಹೆಚ್ಚಳವಾಗಿದ್ದು, ಚರಾಸ್ತಿ 11,09,697 ಹೊಂದಿದ್ದರೆ, ಸ್ಥಿರಾಸ್ತಿ 52,05,000 ರೂ. ಇದ್ದು, 23,64,087 ಸಾಲ ಹೊಂದಿದ್ದಾರೆ.

    ಕಳೆದ ಚುನಾವಣೆಯಲ್ಲಿ ಪ್ರತಾಪ್ ಸಿಂಹ 7.85.317 ರೂ. ಚರಾಸ್ತಿ, 48,00,000 ರೂ. ಸ್ಥಿರಾಸ್ತಿ ಹಾಗೂ 43,99,048 ಸಾಲ ಹೊಂದಿದ್ದರು. ಚರಾಸ್ತಿಯಲ್ಲಿ 3,24,380 ರೂ., ಸ್ಥಿರಾಸ್ತಿಯಲ್ಲಿ 4,05,000 ಏರಿಕೆ ಆಗಿದ್ದು, 20,34,961 ರೂ. ಸಾಲದಲ್ಲಿ ಇಳಿಕೆ ಆಗಿದೆ.

    ಪತ್ನಿ ಅರ್ಪಿತಾ ಸಿಂಹ ಹೆಸರಿನಲ್ಲಿ 40,35,435 ರೂ. ಚರಾಸ್ತಿ, 81,50,000 ರೂ. ಸ್ಥಿರಾಸ್ತಿ ಇದ್ದು, 23,74,917 ಸಾಲ ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಅರ್ಪಿತಾ ಅವರ ಹೆಸರಿನಲ್ಲಿ 4,36,274 ರೂ. ಚರಾಸ್ತಿ, 30,00,00 ರೂ. ಸ್ಥಿರಾಸ್ತಿ ಹೊಂದಿದ್ದರು. ಕಳೆದ ಚುನಾವಣೆಗಿಂತ ಈ ಚುನಾವಣೆ ವೇಳೆಗೆ ಪ್ರತಾಪ್ ಸಿಂಹ ಕುಟುಂಬದಿಂದ ಒಟ್ಟು 1 ಕಾರು, 360 ಗ್ರಾಂ ಚಿನ್ನ ಹೆಚ್ಚುವರಿಯಾಗಿ ಘೋಷಣೆ ಆಗಿದೆ. ಅಲ್ಲದೇ ಪತ್ನಿ ಹೆಸರಿನಲ್ಲಿ 23,74,917 ಲಕ್ಷ ರೂ. ಸಾಲ ಹೆಚ್ಚುವರಿಯಾಗಿ ಘೋಷಣೆ ಆಗಿದ್ದು, ಪುತ್ರಿ ಹೆಸರಿನಲ್ಲಿ 1,22,623 ರೂ. ಲೈಫ್ ಇನ್ಸೂರೆನ್ಸ್ ಘೋಷಣೆ ಆಗಿದೆ.

  • ರಾಜ್ಯಕ್ಕೆ ಮೋದಿ ಆಗಮನದ ಹೊತ್ತಲ್ಲೇ ಮಾಜಿ ಸಚಿವ ವಿಜಯಶಂಕರ್ ಬಿಜೆಪಿಗೆ ಗುಡ್ ಬೈ

    ರಾಜ್ಯಕ್ಕೆ ಮೋದಿ ಆಗಮನದ ಹೊತ್ತಲ್ಲೇ ಮಾಜಿ ಸಚಿವ ವಿಜಯಶಂಕರ್ ಬಿಜೆಪಿಗೆ ಗುಡ್ ಬೈ

    – ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸ್ತಿರೋ ಹೊತ್ತಲ್ಲೇ ಬಿಜೆಪಿಯವರಿಂದಲೇ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಮೋದಿ ಬರ್ತಿರೋ ದಿನವೇ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ರೆ, ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಬಿಜೆಪಿಗೆ ಗುಡ್‍ಬೈ ಹೇಳ್ತಿದ್ದಾರೆ.

    ಭಾನುವಾರ ಮೋದಿ ಬರುತ್ತಿರೋ ದಿನವೇ ಬಿಜೆಪಿ ತೊರೆಯಲು ವಿಜಯಶಂಕರ್ ನಿರ್ಧರಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನನ್ನನ್ನು ನಿಲ್ಲಿಸಿ ಇನ್ನೊಮ್ಮೆ ನನ್ನ ಬಲಿಪಶು ಮಾಡೋಕೆ ಬಿಜೆಪಿ ಹುನ್ನಾರ ಮಾಡಿತ್ತು. ಕಳೆದ ಬಾರಿ ಎಚ್.ಡಿ. ದೇವೇಗೌಡರ ವಿರುದ್ಧ ನನ್ನ ಕಣಕ್ಕೆ ಇಳಿಸಿ ಬಲಿಪಶು ಮಾಡಿದ್ದರು. ಇದೀಗ ಮತ್ತೆ ನಾನು ಬಲಿಪಶು ಆಗೋಕೆ ಸಿದ್ಧನಿಲ್ಲ. ಹೀಗಾಗಿ ಬಿಜೆಪಿ ತೊರೆಯುತ್ತಿದ್ದೇನೆ ಅಂತ ವಿಜಯ್ ಸ್ಪಷ್ಟಪಡಿಸಿದ್ದಾರೆ. ಯಾವ ಪಕ್ಷಕ್ಕೆ ಸೇರಬೇಕು ಎಂಬುದನ್ನು ಒಂದೆರಡು ವಾರದಲ್ಲಿ ಹೇಳುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

    ಯೋಗೇಶ್ವರ್ ಬಿಜೆಪಿಗೆ: ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ನಾಳೆ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ರಾಮನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಯೋಗೇಶ್ವರ್, ಇಂಧನ ಇಲಾಖೆಯಲ್ಲಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಇಂಧನ ಇಲಾಖೆಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆಯುತ್ತಿದ್ದು, ಪಾವಗಡದ ಸೋಲಾರ್ ಘಟಕದಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ. ತಮಗೆ ಅನುಕೂಲ ಬಂದಂತೆ ಇಂಧನ ಖಾತೆ ದುರುಪಯೋಗ ನಡೆದಿದೆ. ನನ್ನ ಬಳಿ ಇಂಧನ ಇಲಾಖೆಯಲ್ಲಿ ನಡೆದಿರುವ ಅಕ್ರಮದ ದಾಖಲೆ ಇದೆ. ಮುಂದಿನ ದಿನಗಳಲ್ಲಿ ಮಾಧ್ಯಮದ ಮುಂದೆ ಇಂಧನ ಇಲಾಖೆಯ ಅಕ್ರಮ ಬಯಲು ಮಾಡುತ್ತೇನೆ ಅಂತ ಹೇಳಿದ್ದಾರೆ.

    ವಿಜಯ್ ಶಂಕರ್ ಪಕ್ಷ ತೊರೆಯುವ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಜಯ್ ಶಂಕರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಅವರು ಚುನಾವಣೆಗೆ ನಿಲ್ಲಬಹುದಿತ್ತು. ಆದ್ರೆ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಗೊತ್ತಿಲ್ಲ ಅಂತ ಹೇಳಿದ್ರು.