ವಿಜಯಪುರ: ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಕೇಳಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಕಾಲಂನಲ್ಲಿ ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಎಂದು ಕಾಲಂ ಹಾಕಿದ್ದರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಮಾತನಾಡಿದ್ದೇವೆ. ಸಿಎಂ ಎದುರು ಸಭೆಯಲ್ಲಿ ಈ ವಿಚಾರಗಳನ್ನ ಪ್ರಸ್ತಾಪಿಸಿದ್ದೇವೆ. ಮುಸ್ಲಿಂ ಕ್ರಿಶ್ಚಿಯನ್ ಯಾಕಿಲ್ಲ ಎನ್ನುವ ಬಗ್ಗೆ ಕೂಡ ಕೇಳಿದ್ದೇವೆ. ಈ ರೀತಿ ಏನಾದರೂ ಇದ್ದರೆ ಬದಲಾವಣೆಗೆ ಹೇಳಿದ್ದೇವೆ ಎಂದರು.ಇದನ್ನೂ ಓದಿ: 7 ಕೋಟಿ ಜನರಿಗೂ ತೃಪ್ತಿಯಾಗುವಂತೆ ಜಾತಿಗಣತಿ ಸಮೀಕ್ಷೆ ನಡೆಯಲಿದೆ: ಖಂಡ್ರೆ
ಇಂಡಿಯಾ ಮತ್ತು ಪಾಕ್ ಮ್ಯಾಚ್ ವಿಚಾರಕ್ಕೆ ಮಾತನಾಡಿ ಪಾಕಿಸ್ತಾನ್ ಜೊತೆಗೆ ಮ್ಯಾಚ್ ಆಡಬಾರದಿತ್ತು. ಪಾಕಿಸ್ತಾನದ ಜೊತೆಗೆ ಸಂಬಂಧ ಕಟ್ ಆಗಬೇಕು. ಮುಗ್ಧ ಜನರನ್ನ ಪಾಕಿಸ್ತಾನದವರು ಹತ್ಯೆ ಮಾಡಿದ್ದಾರೆ. ಪಾಕ್ ಜೊತೆಗೆ ಮ್ಯಾಚ್ ಹಮ್ಮಿಕೊಂಡಿದ್ದೆ ಮಹಾತಪ್ಪು. ಪಾಕ್ ಜೊತೆಗೆ ಮ್ಯಾಚ್ ಆಡಿದ್ರೆ ಆ ಕುಟುಂಬಗಳಿಗೆ ಏನ್ ಅನಿಸುತ್ತೆ? ಮ್ಯಾಚ್ ಆಡಿದ್ರೆ ಆ ಕುಟುಂಬಗಳಿಗೆ ನೋವು ಆಗಲ್ವಾ? ಅಮಿತ್ ಶಾ ಪುತ್ರನೇ ಬಿಸಿಸಿ ಅಧ್ಯಕ್ಷ ಅಲ್ವಾ, ಮ್ಯಾಚ್ ಯಾಕೆ ನಡೆಸ್ತಿರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.
-ಸೋನಿಯಾ ಗಾಂಧಿ ನಿರ್ದೇಶನದಂತೆ ಸಿದ್ದರಾಮಯ್ಯನವರು ಕೀಳು ಮಟ್ಟದ ವ್ಯವಸ್ಥೆ ತಂದಿದ್ದಾರೆ
ವಿಜಯಪುರ: ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಇದು ಸಿದ್ದರಾಮಯ್ಯನ ನಾಟಕ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ ಅವರ ಸಚಿವ ಸಂಪುಟದಲ್ಲೇ ಗೊಂದಲ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಜಾತಿಗಣತಿಯನ್ನು ಕೈಬಿಡಬೇಕು. ಹೇಗಿದ್ದರೂ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತೆ. ಕೇವಲ ಕೇಂದ್ರಕ್ಕೆ ಮಾತ್ರ ಜಾತಿಗಣತಿ ನಡೆಸಲು ಅಧಿಕಾರವಿದೆ. ರಾಜ್ಯಕ್ಕೆ ಅಧಿಕಾರವಿಲ್ಲ. ಆದರೆ ಇವರು ಸುಮ್ಮನೇ ರಾಜ್ಯದ ಜನರ ದಾರಿ ತಪ್ಪಿಸಲು, ರಾಜ್ಯದಲ್ಲಿ ಲಿಂಗಾಯರು, ಒಕ್ಕಲಿಗರು ಕಡಿಮೆ ಇದ್ದಾರೆ ಎಂದು ತೋರಿಸಲು ಮತ್ತು ಅಲ್ಪಸಂಖ್ಯಾತ ಮುಸ್ಲಿಂರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ತೋರಿಸಲು ಸಿದ್ದರಾಮಯ್ಯನ ನಾಟಕವಿದು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ; JDS ಮುಖಂಡ ಕಬ್ಜ ಮಾಡಿದ್ದ 75 ಕೋಟಿ ಮೌಲ್ಯದ ಭೂಮಿ ಬಿಡಿಎ ವಶಕ್ಕೆ
ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಎಂದು ಮಾಡಿರುವ ವರ್ಗಗಳನ್ನು ಈ ಮೊದಲು ಸೋನಿಯಾ ಗಾಂಧಿ ವ್ಯವಸ್ಥಿತವಾಗಿ ಹೊಸ ಹೊಸ ನಾಮಗಳನ್ನು ಕೊಟಿದ್ದರು. ಅವರು ಇಡೀ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರ ಅಥವಾ ಮುಸ್ಲಿಂ ರಾಷ್ಟ್ರ ಮಾಡಬೇಕೆಂದುಕೊಂಡಿದ್ದಾರೆ. ಈ ಸಂಚಿನ ಹಿನ್ನೆಲೆ ಇದೀಗ ಈ ರಾಜ್ಯದಲ್ಲಿ ಜಾತಿವರ್ಗೀಕರಣ ಮಾಡಿದ್ದಾರೆ. ಆ ಜಾತಿಗಳು ನಮ್ಮ ದೇಶದಲ್ಲಿಯೇ ಇಲ್ಲ. ಭಾರತದಲ್ಲಿಯೂ ಇಲ್ಲ. ವಿಶ್ವದಲ್ಲಿಯೂ ಇಲ್ಲ. ಕೇವಲ ಸೋನಿಯಾ ಗಾಂಧಿಯ ನಿರ್ದೇಶನದಂತೆ ಸಿದ್ದರಾಮಯ್ಯನವರು ಇಂತಹ ಅತ್ಯಂತ ಕೀಳು ಮಟ್ಟದ ವ್ಯವಸ್ಥೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು/ವಿಜಯಪುರ: ಏರ್‌ಬಸ್-320 ಮಾದರಿಯ ದೊಡ್ಡ ವಿಮಾನಗಳ ಕಾರ್ಯಾಚರಣೆ ಮತ್ತು ರಾತ್ರಿ ವೇಳೆ ಲ್ಯಾಂಡಿಂಗ್ ಸೌಲಭ್ಯ ಅಭಿವೃದ್ಧಿ ಸೇರಿದಂತೆ ಇತರ ಅನುಕೂಲಗಳಿಗಾಗಿ ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ 270.83 ಕೋಟಿ ರೂ. ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ಒಪ್ಪಿಗೆ ನೀಡಲಾಗಿದೆ. ಇದರಿಂದಾಗಿ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿನ ಒಟ್ಟು ವೆಚ್ಚವು 618.75 ಕೋಟಿ ರೂ.ಗಳಾಗಲಿದೆ. ಎಟಿಆರ್ ಮಾದರಿಯ ನಾಗರಿಕ ವಿಮಾನ ಕಾರ್ಯಾಚರಣೆಗೆ ಸೀಮಿತವಾಗಿದ್ದ ವಿಮಾನ ನಿಲ್ದಾಣದ ಮೂಲ ವಿನ್ಯಾಸವನ್ನು ಏರ್‌ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೂ ಅನುಕೂಲವಾಗುವಂತೆ ಬದಲಿಸಿದ್ದರಿಂದ ವೆಚ್ಚ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ವಿಜಯಪುರ| ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದ ಚಿನ್ನಾಭರಣ, ನಗದು ಮಹಾರಾಷ್ಟ್ರದಲ್ಲಿ ಪತ್ತೆ
ವಿಮಾನ ನಿಲ್ದಾಣದ ಮೂಲವಿನ್ಯಾಸವನ್ನು ಚಿಕ್ಕ ವಿಮಾನಗಳನ್ನು ಗಮನದಲ್ಲಿಟ್ಟಿಕೊಂಡು ಮಾತ್ರ ಮಾಡಲಾಗಿತ್ತು. ಅದರಲ್ಲಿ ಏರ್‌ಬಸ್ ಮಾದರಿಯ ವಿಮಾನ ಕಾರ್ಯಾಚರಣೆಗಳಿಗಾಗಲಿ, ನೈಟ್ ಲ್ಯಾಂಡಿಂಗ್‌ಗಾಗಲಿ ಅವಕಾಶವಿರಲಿಲ್ಲ. ಆದರೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ನಗರಗಳು ಕ್ಷಿಪ್ರವಾಗಿ ಬೆಳೆಯುತ್ತಿವೆ. ಜೊತೆಗೆ ಮಹಾರಾಷ್ಟ್ರದ ಸೊಲ್ಲಾಪುರ, ಸಾತಾರಾ ಜಿಲ್ಲೆಗಳೂ ವಿಜಯಪುರಕ್ಕೆ ಹತ್ತಿರವಾಗಿವೆ. ಇತ್ತ ಬೆಳಗಾವಿ, ಕಲಬುರಗಿ ಜಿಲ್ಲೆಯ ಹಲವು ತಾಲೂಕುಗಳ ಒಡನಾಟವೂ ವಿಜಯಪುರದೊಂದಿಗೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ಐವತ್ತು ವರ್ಷಗಳ ಅಗತ್ಯವನ್ನು ಪರಿಗಣಿಸಿ, ಹಲವು ಹೆಚ್ಚುವರಿ ಸೌಲಭ್ಯಗಳನ್ನು ಈಗ ಸೇರಿಸಲಾಗುತ್ತಿದೆ ಎಂದಿದ್ದಾರೆ.
ಈಗ ಒದಗಿಸಲಾಗಿರುವ ಹಣದಲ್ಲಿ ನೈಟ್ ಲ್ಯಾಂಡಿಂಗ್ ಸಂಬಂಧಿತ ಕಾಮಗಾರಿಗಳು, ರನ್‌ವೇಯ ಎರಡೂ ಬದಿಗಳಿಗೆ ಪೇವ್ಡ್ ಶೋಲ್ಡರ್ ನಿರ್ಮಾಣ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ಬಾಬ್ತಿಗೆ 65 ಕೋಟಿ ರೂ. ವಿನಿಯೋಗಿಸಲಾಗುವುದು. ವಿಜಯಪುರ ವಿಮಾನ ನಿಲ್ದಾಣದಿಂದ ರಾ.ಹೆ.50ಕ್ಕೆ ಸಂಪರ್ಕ ಕಲ್ಪಿಸಲಿರುವ ಮೀಸಲು ರಸ್ತೆಯ ಅಭಿವೃದ್ಧಿಗೆ 52 ಕೋಟಿ ರೂ. ವೆಚ್ಚವಾಗಲಿದೆ. ವಿಮಾನ ನಿಲ್ದಾಣದ ಮೂಲವಿನ್ಯಾಸದಲ್ಲಿ ಇವುಗಳ ಪ್ರಸ್ತಾಪವೇ ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದಲ್ಲದೆ 25 ಕೋಟಿ ರೂ. ವೆಚ್ಚದಲ್ಲಿ ಎರಡು ವಿಮಾನ ರಕ್ಷಣೆ ಮತ್ತು ಅಗ್ನಿಶಾಮಕ ವಾಹನಗಳು (ARFF) ಮತ್ತು ಉಪಕರಣಗಳನ್ನು ಖರೀದಿಸಲಾಗುವುದು. ಮಿಕ್ಕಂತೆ 2.76 ಕೋಟಿ ರೂ.ಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯಗೊಳಿಸುವ ಉಪಕರಣಗಳು (BDDS) ಮತ್ತು 13.09 ಕೋಟಿ ರೂ. ವೆಚ್ಚದಲ್ಲಿ ಡಿವಿಒಆರ್ (ಡೋಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್) ಉಪಕರಣಗಳ ಖರೀದಿ ಮತ್ತು ಅಳವಡಿಕೆ ಕೆಲಸಗಳು ನಡೆಯಲಿವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ಬ್ಲ್ಯೂ ಪ್ರಿಂಟ್ ರಿಲೀಸ್
ವಿಮಾನ ನಿಲ್ದಾಣದ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತಂಡಗಳು ಕಾಲಕಾಲಕ್ಕೆ ಪರಿಶೀಲಿಸುತ್ತಿದೆ. ಅದು ನಿಗದಿತ ಮಾನದಂಡಗಳಿಗೆ ನೀಡಿದ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಹೆಚ್ಚಿನ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚುವರಿ ಹಣಕಾಸು ನೆರವು ಕೋರಿ ಈ ವರ್ಷದ ಫೆಬ್ರವರಿಯಲ್ಲೇ ರಾಜ್ಯ ಮಟ್ಟದ ತಾಂತ್ರಿಕ ಸಲಹೆ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿಗೆ ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಅದು ತನ್ನ ಒಪ್ಪಿಗೆ ನೀಡಿದ ನಂತರ ಸಂಪುಟ ಸಭೆಯ ಮುಂದೆ ಬಂದಿತ್ತು ಎಂದು ವಿವರಿಸಿದ್ದಾರೆ.
– ವಾಹನ ಬಿಟ್ಟು ಪರಾರಿಯಾಗಿದ್ದ ಗ್ರಾಮದಲ್ಲೇ ಬ್ಯಾಗ್ ಪತ್ತೆ
ವಿಜಯಪುರ: ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ (SBI Bank Robbery) ಪ್ರಕರಣದಲ್ಲಿ ದೋಚಿದ್ದ ಚಿನ್ನಾಭರಣ ಪತ್ತೆ ಹಚ್ಚುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಚಿನ್ನಾಭರಣ, ನಗದಿನ ಬ್ಯಾಗ್ ಪತ್ತೆಯಾಗಿದೆ. ದರೋಡೆಗೆ ಬಳಿಸಿದ ವಾಹನದಲ್ಲೂ ಸ್ವಲ್ಪ ಹಣ, ಚಿನ್ನಾಭರಣ ಪತ್ತೆಯಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಕಳೆದ 16 ರಂದು ಸಂಜೆ 6ರ ಸುಮಾರಿಗೆ ದರೋಡೆ ನಡೆದಿತ್ತು. ಐದು ಜನ ದರೋಡೆಕೋರರ ತಂಡ ಪಿಸ್ತೂಲ್ ತೋರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪರಾರಿಯಾಗುವ ವೇಳೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವಾಡೆ ತಾಲೂಕಿನ ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೊರರ ವಾಹನ ಬೈಕ್ ಒಂದಕ್ಕೆ ಡಿಕ್ಕಿಯಾಗಿ ಗಲಾಟೆ ನಡೆದಿತ್ತು. ಆಗ ವಾಹನವನ್ನು ಅಲ್ಲೆ ಬಿಟ್ಟು ದರೋಡೆಕೋರರು ನಗದು, ಚಿನ್ನಾಭರಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದರು. ಆಗ ವಾಹನದಲ್ಲಿ ಚಿನ್ನಾಭರಣದ ಪ್ಯಾಕೆಟ್ ಸಿಕ್ಕಿದ್ದವು. ಆದರೆ, ಇದೀಗ ಮತ್ತೊಂದು ಬ್ಯಾಗ್ ಪತ್ತೆಯಾಗಿದೆ. ಇದನ್ನೂ ಓದಿ: 1 ಕೋಟಿ ನಗದು, 20 ಕೆಜಿ ಚಿನ್ನ ಸೇರಿ 21 ಕೋಟಿ ದರೋಡೆಯಾಗಿದೆ – ಎಸ್ಪಿ ಲಕ್ಷ್ಮಣ ನಿಂಬರಗಿ
ನಿನ್ನೆ ಮಧ್ಯಾಹ್ನ ಮಹಾರಾಷ್ಟ್ರ ಪೊಲೀಸರು ಹಾಗೂ ವಿಜಯಪುರ ಪೊಲೀಸರು ಹುಲ್ಲಜಂತಿ ಗ್ರಾಮದಲ್ಲಿ ಸಭೆ ನಡೆಸಿದ ಗ್ರಾಮಸ್ಥರಲ್ಲಿ ದರೋಡೆಕೋರನ ಹಾಗೂ ಕಳ್ಳತನ ಬ್ಯಾಗ್‌ಗಳ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದರು. ಇದಾದ ನಂತರ ಪೊಲೀಸರು ಹುಲ್ಲಜಂತಿ ಗ್ರಾಮದ ತೀವ್ರ ಶೋಧ ಕಾರ್ಯ ಮಾಡಿದ್ದರು. ಸಂಜೆ 5 ಗಂಟೆ ಸುಮಾರಿಗೆ ಗ್ರಾಮದ ಒಂದು ಪಾಳುಬಿದ್ದ ಮನೆಯ ಮೇಲ್ಛಾವಣಿಯಲ್ಲಿ ಒಂದು ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ 41.04 ಲಕ್ಷ ನಗದು, 6.54 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಇನ್ನು ಪೊಲೀಸರ 8 ತಂಡಗಳನ್ನು ಮಾಡಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರ: ಜಿಲ್ಲೆಯ ಸಿಂದಗಿ (Sindagi) ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ನಿನ್ನೆ (ಶುಕ್ರವಾರ) ಒಂದೇ ದಿನದಲ್ಲಿ 4 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ.
ಸಿಂದಗಿ ಪಟ್ಟಣದ ಸುತ್ತಮುತ್ತು ಕಂಪನದ ಅನುಭವ ಆಗಿದ್ದು, ಮಧ್ಯಾಹ್ನ 3 ಗಂಟೆ, ರಾತ್ರಿ 10:11, ಮತ್ತೆ ರಾತ್ರಿ 10:25, ಮತ್ತೊಮ್ಮೆ ರಾತ್ರಿ 10:47 ಒಟ್ಟು 4 ಬಾರಿ ಭೂಮಿ ಕಂಪನಿಸಿದಂತೆ ಭಾಸವಾಗಿದೆ.
ಜೋರಾದ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಸಿಂದಗಿ ಜನರಲ್ಲಿ ಆತಂಕ ಮೂಡಿದ್ದು, ಮನೆ ಬಿಟ್ಟು ಅನೇಕರು ಹೊರಬಂದಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಈ ರೀತಿ ಸರಣಿ ರೂಪದಲ್ಲಿ ಭೂಕಂಪನದ ಅನುಭವ ಆಗಿತ್ತು.
ಕಳೆದ 7 ದಿನಗಳಿಂದ ಭಾರಿ ಪ್ರಮಾಣ ಸದ್ದು ಭೂಮಿಯಲ್ಲಿ ಕಂಡು ಬಂದಿದ್ದು, ಸಿಂದಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ವಿಜಯಪುರ: 1 ಕೋಟಿ ರೂ. ನಗದು, 20 ಕೆಜಿ ಚಿನ್ನಾಭರಣ ಸೇರಿ ಒಟ್ಟು 21 ಕೋಟಿ ದರೋಡೆಯಾಗಿದೆ ಎಂದು ವಿಜಯಪುರ (Vijayapura) ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ದರೋಡೆಗೆ 5 ಜನರು ಬಂದಿದ್ದರು. 6 ಜನ ಬ್ಯಾಂಕ್ ಸಿಬ್ಬಂದಿ ಹಾಗೂ 4 ಜನ ಗ್ರಾಹಕರನ್ನು ದರೋಡೆಕೋರರು ಲಾಕ್ ಮಾಡಿದ್ದಾರೆ. ಕೋಣೆಯಲ್ಲಿ ಕೂಡಿ ಹಾಕಿ, ಪ್ಲಾಸ್ಟಿಕ್ ಬ್ಯಾಂಡ್‌ಗಳಿಂದ ಕೈ, ಕಾಲು ಕಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಪಂಡರಾಪುರ ಕಡೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸದ್ಯದ ಮಾಹಿತಿ ಪ್ರಕಾರ 1 ಕೋಟಿ ರೂ. ನಗದು, ಅಂದಾಜು 20 ಕೆಜಿ ಚಿನ್ನಾಭರಣ ಸೇರಿದಂತೆ 21 ಕೋಟಿ ರೂ. ಮೌಲ್ಯದ ನಗದು ಚಿನ್ನಾಭರಣ ದರೋಡೆಯಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ವಿಜಯಪುರ| ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್ – 3 ತಿಂಗಳು ರಜೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್; ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲು
ಮಂಗಳವಾರ (ಸೆ.17) ಸಂಜೆ 6:30 ರಿಂದ 7:30ರ ನಡುವೆ ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಮೊದಲೇ ಒಳಗೆ ಬಂದು ಕುಳಿತಿದ್ದ. ಬ್ಯಾಂಕ್ ಕ್ಲೋಸಿಂಗ್ ಟೈಂನಲ್ಲಿ ಲಾಕರ್ ಓಪನ್ ಇತ್ತು. ಆಗ ಬಂದೂಕಿನಿಂದ ಬೆದರಿಸಿ, ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ಒಟ್ಟು 398 ಪ್ಯಾಕ್ ಚಿನ್ನ ಅಂದರೆ 21 ಕೋಟಿ ರೂ. ಮೌಲ್ಯದ ಚಿನ್ನ, ನಗದು ದರೋಡೆಯಾಗಿದೆ ಎಂದಿದ್ದಾರೆ.
ವಿಜಯಪುರ: ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆಯಾಗಿದ್ದು, ದರೋಡೆಕೋರರು ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಬ್ಯಾಂಕ್‌ನಲ್ಲಿ ಠೇವಣಿ, ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲಾಗಿದ್ದಾರೆ.
ಬ್ಯಾಂಕ್‌ನಲ್ಲಿ 1 ಕೋಟಿ ನಗದು, 12 ರಿಂದ 13 ಕೆ.ಜಿ ಚಿನ್ನ ದರೋಡೆಯಾಗಿದೆ. ಸಾಲಕ್ಕಾಗಿ ಅಡವಿಟ್ಟಿದ್ದ 12-13 ಕೆಜಿ ಚಿನ್ನ ದರೋಡೆಯಾಗಿರುವ ಸಾಧ್ಯತೆ ಇದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮೂಲಗಳಿಂದ ಮಾಹಿತಿ ಸಿಗಬೇಕಿದೆ ಎಂದು ತಿಳಿಸಿದ್ದಾರೆ.
ಐದಕ್ಕೂ ಅಧಿಕ ಮುಸುಕುಧಾರಿ ದರೋಡೆಕೋರರಿಂದ ಕೃತ್ಯ ನಡೆದಿದೆ. ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿನ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿ ಕೈಕಾಲು ಕಟ್ಟಿ ಹಾಕಿ ಕೂಡಿ ಹಾಕಿ ದರೋಡೆ ನಡೆಸಲಾಗಿದೆ. ಎಸ್ಪಿ ಲಕ್ಷ್ಮಣ ನಿಂಬರಗಿ ಹಾಗೂ ಆಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಘಟನೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮ್ಯಾನೇಜರ್ ಹಾಗೂ ಇತರರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನಲ್ಲಿದ್ದ ನಗದು ಹಣ, ಚಿನ್ನಾಭರಣಗಳ ಕುರಿತು ಮೇಲಧಿಕಾರಿಗಳು ಬಂದ ಬಳಿಕ ಮಾಹಿತಿ ನೀಡುವುದಾಗಿ ಮ್ಯಾನೇಜರ್ ಹೇಳಿದ್ದಾರೆ.
ರಜೆಯಲ್ಲಿದ್ದ ಬ್ಯಾಂಕ್ ಸೆಕ್ಯುರಿಟಿ
ಬ್ಯಾಂಕ್ ಸೆಕ್ಯುರಿಟಿ ಮೂರು ತಿಂಗಳಿಂದ ರಜೆಯಲ್ಲಿದ್ದಾರೆ. ಬ್ಯಾಂಕ್ ಪಕ್ಕದಲ್ಲೇ ಇರುವ ಎಟಿಎಂ ಸೆಕ್ಯುರಿಟಿಯನ್ನು ಕೂಡ ಒಳಗಡೆ ಲಾಕ್ ಮಾಡಿದ್ದರು. ಐದು ಜನ ದರೋಡೆಕೋರರು ಬಂದಿದ್ದರು. ಇಬ್ಬರು ಬ್ಯಾಂಕ್ ಹೊರಗಡೆ ನಿಂತರೆ, ಮೂವರು ಬ್ಯಾಂಕ್ ಒಳಗಡೆ ಹೋಗಿ ದರೋಡೆ ಮಾಡಿದ್ದಾರೆ. ಬ್ಯಾಂಕ್‌ಗೆ ಎಂಟ್ರಿ ಕೊಡ್ತಿದ್ದಂತೆ ಮೊದಲು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ನಂತರ ಬ್ಯಾಂಕ್‌ನ ಎಲ್ಲ ಸಿಬ್ಬಂದಿ ಹಾಗೂ ಎಟಿಎಂ ಸೆಕ್ಯುರಿಟಿಯನ್ನ ಒಂದು ಕೋಣೆಯಲ್ಲಿ ಕೂಡ ಹಾಕಿ, ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಹುಲ್ಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಇದಕ್ಕೂ ಮುನ್ನ ಬ್ಯಾಂಕ್‌ಗೆ ಮೂರು ದಿನದಿಂದ ಭೇಟಿ ಕೊಟ್ಟಿದ್ದರು. ಆಗ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡೆ ಬ್ಯಾಂಕ್‌ಗೆ ಎಂಟ್ರಿ ಕೊಟ್ಟಿದ್ದರು. ಮೂರು ದಿನಗಳಿಂದ ಬ್ಯಾಂಕ್ ಸಿಬ್ಬಂದಿ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಈ ಮುಸುಕುಧಾರಿ ದರೋಡೆಕೋರರನ್ನು ಎಟಿಎಂ ಸೆಕ್ಯುರಿಟಿ ಗುರುತಿಸಿದ್ದಾರೆ.
ಬ್ಯಾಂಕ್‌ನಲ್ಲಿದ್ದ ಸಿಸಿ ಕ್ಯಾಮೆರಾ, ಹಾರ್ಡ್ ಡಿಸ್ಕ್ ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳ ಪರಿಶೀಲನೆಯಲ್ಲಿ ಖಾಕಿ ಪಡೆ ನಿರತವಾಗಿದೆ. ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೆ ರಸ್ತೆಗಳಿಗೂ ನಾಕಾ ಬಂದಿ ಹಾಕಿದ್ದಾರೆ. ಮಹಾರಾಷ್ಟ್ರದ ದರೋಡೆಕೋರರ ಗ್ಯಾಂಗ್‌ನಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರಲ್ಲಿ ಓರ್ವ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೋರರು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ದರೋಡೆಕೋರನನ್ನು ಬೈಕ್ ಸವಾರ ಹಾಗೂ ಗ್ರಾಮಸ್ಥರು ಬೆನ್ನುಹತ್ತಿದ್ದರು. ಗ್ರಾಮದಲ್ಲೇ ವಾಹನ ಚಲಾಯಿಸಿ ರಸ್ತೆ ಬಂದ್ ಆದ ಕಾರಣ ಗ್ರಾಮಸ್ಥರ ಮಧ್ಯೆ ಲಾಕ್ ಆಗಿದ್ದರು. ಗ್ರಾಮಸ್ಥರಿಗೆ ಪಿಸ್ತೂಲ್ ತೋರಿಸಿ ವಾಹನ ಬಿಟ್ಟು ದರೋಡೆ ಮಾಡಿದ ನಗದು, ಚಿನ್ನಾಭರಣದ ಮೂಟೆ ಹೊತ್ತು ದರೋಡೆಕೋರರು ಪರಾರಿಯಾಗಿದ್ದಾರೆ. ಪರಾರಿಯಾಗಿರುವ ದರೋಡೆಕೋರರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ದರೋಡೆ ನಂತರ ದರೋಡೆಕೋರರು ಬೇರೆ ಬೇರೆಯಾಗಿ ಪರಾರಿಯಾಗಿದ್ದಾರೆ. ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
ಗ್ರಾಹಕರಲ್ಲಿ ಆತಂಕ
ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ. ದರೋಡೆಕೋರನ ಕೃತ್ಯಕ್ಕೆ ಹುಲಜಂತಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ವಾಹನ ಬಿಟ್ಟ ಸ್ಥಳ ಹಾಗೂ ಬ್ಯಾಂಕ್ ಹತ್ತಿರ ಪೊಲೀಸರ ಕಣ್ಗಾವಲು ಇಡಲಾಗಿದೆ. ವಾಹನ ಬಿಟ್ಟಲ್ಲಿ ಹಾಗೂ ಬ್ಯಾಂಕ್‌ನಲ್ಲಿ ಶ್ವಾನದಳ, ಬೆರಳಚ್ಚು ತಜ್ಞರಿಂದ ತಪಾಸಣೆ ನಡೆಸಿದ್ದಾರೆ.
ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರು ಕಂಗಾಲಾಗಿದ್ದಾರೆ. ‘ಲಾಕರ್‌ನಲ್ಲಿ 100 ಗ್ರಾಂ ಚಿನ್ನದ ಆಭರಣ, ಅರ್ಧ ಕೆಜಿ ಬೆಳ್ಳಿ ಇಟ್ಟಿದ್ದೆ. 40 ಗ್ರಾಂ ಚಿನ್ನಾಭರಣ ಪ್ಲಜ್ ಮಾಡಿ 2.5 ಲಕ್ಷ ಲೋನ್ ಪಡದಿದ್ದೆ. ಇದೀಗ ದರೋಡೆ ಸುದ್ದಿ ಕೇಳಿ ಆತಂಕ ಮೂಡಿದೆ ಎಂದು ಗ್ರಾಹಕ ಸಂಗಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಡಚಣ ಪಟ್ಟಣದ ಎಸ್‌ಬಿಐ ಬ್ಯಾಂಕ್ ದರೋಡೆ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಜಮಾಯಿಸುತ್ತಿದ್ದಾರೆ. ನಮ್ಮ ಚಿನ್ನಾಭರಣ ಹೋಗಿದೆಯಾ ಅನ್ನೋದರ ಬಗ್ಗೆ ಮಾಹಿತಿ ಪಡೆಯಲು ಗ್ರಾಹಕರು ಬಂದಿದ್ದಾರೆ. ಮತ್ತೊಂದು ಕಡೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಆರೋಪಿಗಳಿಗಾಗಿ ತಲಾಷ್ ನಡೆಸಿದ್ದಾರೆ.
ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬ್ಯಾಂಕ್‌ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ (SBI Bank) ದರೋಡೆ (Robbery) ನಡೆದಿದೆ.
ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ತೋರಿಸಿ ಕಟ್ಟಿಹಾಕಿ ಕಳ್ಳರು ಕಳ್ಳತನ ಮಾಡಿದ್ದಾರೆ. ಬ್ಯಾಂಕ್ ವಹಿವಾಟು ಸಮಯ ಮುಗಿದ ಮೇಲೆ ಬ್ಯಾಂಕ್‌ಗೆ 5ಕ್ಕೂ ಹೆಚ್ಚು ಮುಸುಕುಧಾರಿಗಳು ನುಗ್ಗಿ ಕೃತ್ಯ ಎಸಗಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಎಷ್ಟು ಹಣ ಕಳ್ಳತನದ ಆಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಅಂದಾಜು 8 ಕೋಟಿ ರೂ. ನಗದು ಹಣ ಹಾಗೂ ಸುಮಾರು 50 ಕೆಜಿಗೂ ಆಧಿಕ ಚಿನ್ನಾಭರಣ ದರೋಡೆಯಾಗಿರೋ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಬ್ಯಾಂಕಿನ ಸಿಸಿ ಕ್ಯಾಮೆರಾ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಸಂಪರ್ಕಿಸುವ ಹಾಗೂ ಚಡಚಣದ ಇತರೇ ರಸ್ತೆಗಳಿಗೂ ಪೊಲೀಸರು ನಾಕಾ ಬಂದಿ ಹಾಕಿ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟ ಗ್ರಾಹಕರಲ್ಲಿ ಆತಂಕ ಎದುರಾಗಿದ್ದು ಭಾರೀ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಜಮಾವಣೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಜನರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ.
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎರಡು ಸಾರಿಗೆ ಬಸ್‌ಗಳ ಸಂಚಾರಕ್ಕಿಂದು ಯಕ್ಕುಂಡಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂಗರಿಸಲಾಗಿದ್ದ ಎರಡು ಬಸ್‌ಗಳ ಸಂಚಾರಕ್ಕೆ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮಲ್ಲು ದಳವಾಯಿ ಮತ್ತು ಬ್ಲಾಕ್ ಕಾಂಗ್ರೆಸ್ ಈರಗೊಂಡ ಬಿರಾದಾರ ಚಾಲನೆ ನೀಡಿದರು. ಈ ಬಸ್‌ಗಳು ವಿಜಯಪುರ ನಗರದಿಂದ ಚಿಕ್ಕಲಕಿ ಕ್ರಾಸ್‌ವರೆಗೆ ಸಂಚರಿಸಲಿವೆ.ಇದನ್ನೂ ಓದಿ: 4.8 ಕೋಟಿ ಪತ್ತೆ ಕೇಸ್ – ಸುಧಾಕರ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, FIR ರದ್ದು
ಈ ಸಂದರ್ಭದಲ್ಲಿ ಮಲ್ಲು ದಳವಾಯಿ ಅವರು ಮಾತನಾಡಿ, ಸಚಿವ ಎಂ.ಬಿ. ಪಾಟೀಲ್ ಅವರ ಸೂಚನೆಯಂತೆ ಎರಡು ನೂತನ ಬಸ್‌ಗಳ ಸೇವೆ ಪ್ರಾರಂಭವಾಗಿದೆ. ಇದರಿಂದ ಈ ಮಾರ್ಗದಲ್ಲಿ ಬರುವ ಚಿಕ್ಕಲಕಿ ಕ್ರಾಸ್, ಅರ್ಜುಣಗಿ, ಯಕ್ಕುಂಡಿ, ಬಬಲೇಶ್ವರ, ಸಾರವಾಡ, ವಿಜಯಪುರ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಸಚಿವರಿಗೆ ಹಾಗೂ ಸಾರಿಗೆ ಇಲಾಖೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಲಾಲಸಾಬ ಜಮಾದಾರ, ಗ್ರಾ.ಪಂ ಅಧ್ಯಕ್ಷ ರಫೀಕ ಸೋನಾರ, ಸದಸ್ಯರಾದ ಗುರು ಜೈನಾಪೂರ, ಸಿದರಾಯ ಬಿರಾದಾರ, ಬಸು ಕಾಲಿಬಾಗ, ಗೌಡಪ್ಪ ಬಿರಾದಾರ, ಮುಖಂಡರಾದ ಬಾಬುಗೌಡ ಪಾಟೀಲ, ಚನ್ನಪ್ಪ ಕೊಪ್ಪದ, ಶೇಖಪ್ಪ ಕೊಪ್ಪದ, ಪ್ರಭುಗೌಡ ಪಾಟೀಲ, ಅಶ್ಪಾಕ ಜಾಗೀರದಾರ, ಜುಬ್ರಾಯಿಲ್ ಮೊಕಾಲೆ, ರವಿ ಕಾಂಬಳೆ, ನಾಗರಾಜ ಕುಲಕರ್ಣಿ, ಮುದಕನಗೌಡ ಪಾಟೀಲ, ಗುರುಬಸಪ್ಪ ತೆವರಟ್ಟಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಕ ನಾರಾಯಣಪ್ಪ ಕುರುಬರ, ಡಿಟಿಓ ಎಂ.ಎಸ್.ಹಿರೇಮಠ, ಡಿಪೋ-1ರ ಮ್ಯಾನೇಜರ್ ಎಸ್.ಎ.ಬಿರಾದಾರ, ಎ.ಟಿ.ಎಂ ಜೆ.ಕೆ.ಹುಗ್ಗೇನವರ ಸೇರಿದಂತೆ ಯಕ್ಕುಂಡಿ, ಹೊಕ್ಕುಂಡಿ, ಕಾತ್ರಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ
ತುಮಕೂರು: ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಶನಿವಾರ (ಸೆ.13) ತುಮಕೂರಿನಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ, ಅನ್ಯಕೋಮಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿ ರಘುನಾಥ್ ಎಂಬುವವರು ದೂರು ನೀಡಿದ್ದು, ದೂರಿನನ್ವಯ ತುಮಕೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಗವಿ ಆಂಜನೇಯ ದೇವಸ್ಥಾನ ಹತ್ತಿರ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿಗೆ ಇಂದು ಪೂಜೆ ಸಲ್ಲಿಸಿ ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದ ಬಳಿಕ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದೆ. ಇದಕ್ಕೂ ಮೊದಲು ಅತ್ಯಂತ ಅದ್ದೂರಿಯಾಗಿ ಪಟ್ಟಣಕ್ಕೆ ಸ್ಬಾಗತಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗಣೇಶ ಮಂಟಪಕ್ಕೆ… pic.twitter.com/yG0IsxgWIH
ಎಫ್‌ಐಆರ್ ದಾಖಲಾಗುವ ಮುನ್ನ ತುಮಕೂರು ಶೋಭಾಯಾತ್ರೆಯಲ್ಲಿ ಭಾಷಣ ಮಾಡಿದ್ದ ಯತ್ನಾಳ್, ನನ್ನ ವಿರುದ್ಧ ಮದ್ದೂರಿನಲ್ಲಿ 70ನೇ ಪ್ರಕರಣ ದಾಖಲಾಗಿದೆ. ಇದೀಗ ತುಮಕೂರಿನಲ್ಲಿ 71ನೇ ಪ್ರಕರಣ ದಾಖಲಾಗಬಹುದು ಎಂದು ಹೇಳಿದ್ದರು ಎನ್ನಲಾಗಿದೆ.