Tag: ವಿಜಯಪುರ

  • ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

    ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

    – `ಐ ಸ್ಟಾಂಡ್ ವಿಥ್ ಯತ್ನಾಳ್’ ರಾಜೀನಾಮೆ ಪತ್ರ ರವಾನೆ

    ವಿಜಯಪುರ: ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೇರಿದಂತೆ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

    ಶಾಸಕ ಯತ್ನಾಳ್ ಅಭಿವೃದ್ಧಿ ಹರಿಕಾರ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ್ದು ತಪ್ಪಾ? ಯತ್ನಾಳ್ ಉಚ್ಚಾಟನೆ ಈ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ನಾಳೆ ಅನೇಕರು ಸೇರಿ ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ್ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾತಿ ಕೇಳಿ, ಮತ ಬ್ಯಾಂಕಿನಡಿ ಮಣೆ ಹಾಕುವುದು ಕಾಂಗ್ರೆಸ್ಸಿನ ನೀತಿ, ಮೋದಿ ನೀತಿಯಲ್ಲ: ಈದ್ ಕಿಟ್ ಟೀಕೆಗೆ ಸಿ.ಟಿ.ರವಿ ಟಕ್ಕರ್

    ಜಿಲ್ಲಾ ಬಿಜೆಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೀಮು ಮಾಶ್ಯಾಳ್ ಹಾಗೂ ನಗರ ಮಂಡಳ ಅಧ್ಯಕ್ಷ ಶಂಕರ್ ಹೂಗಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಬಿಜೆಪಿ ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ರಾಚು ಬಿರಾದಾರ್ ಕೂಡ ರಾಜೀನಾಮೆ ನೀಡಿದ್ದು, `ಐ ಸ್ಟಾಂಡ್ ವಿಥ್ ಯತ್ನಾಳ್’ ಎಂದು ರಾಜೀನಾಮೆ ಪತ್ರ ಬರೆದು ವಾಟ್ಸಪ್‌ನಲ್ಲಿ ರವಾನಿಸಿದ್ದರು. ಇದನ್ನೂ ಓದಿ: ಬಿಜೆಪಿ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ – ಯತ್ನಾಳ್ ಉಚ್ಛಾಟನೆ, ಮುಂದೇನು?

  • ಯತ್ನಾಳ್‌ ಉಚ್ಛಾಟನೆ – ವಿಜಯಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

    ಯತ್ನಾಳ್‌ ಉಚ್ಛಾಟನೆ – ವಿಜಯಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

    ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ ನಗರದಲ್ಲಿ ಕೆಲ ಬಿಜೆಪಿ (BJP) ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

    ಮಾಜಿ ಪಾಲಿಕೆ ಸದಸ್ಯ ಉಮೇಶ ವಂದಾಲ ನೇತೃತ್ವದಲ್ಲಿ ಸಂಭ್ರಮೋತ್ಸವ ಮಾಡಿದ್ದಾರೆ. ನಗರದ ಶಾಹುನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.  ಇದನ್ನೂ ಓದಿ: ಬಿಜೆಪಿ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ – ಯತ್ನಾಳ್ ಉಚ್ಛಾಟನೆ, ಮುಂದೇನು?

    ಯತ್ನಾಳ್ ಉಚ್ಚಾಟನೆಯಿಂದ ಪಕ್ಷಕ್ಕೆ ರಾಜ್ಯದಲ್ಲಿ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ ಎಂದು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

  • ಬೆಳಗಾವಿ | ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಬೆಳಗಾವಿ | ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    – ಸ್ನೇಹಿತ ಪಿ.ಜಿಗೆ ಬಂದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಳಗಾವಿ: ಎಂಬಿಎ ಪದವೀಧರೆಯೊಬ್ಬಳು (MBA Graduate) ಪಿ.ಜಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ (Belagavi) ನಡೆದಿದೆ.

    ವಿಜಯಪುರ (Vijayapura) ಜಿಲ್ಲೆಯ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ಯುವತಿ. ವಿಜಯಪುರದಲ್ಲಿಯೇ ಎಂಬಿಎ ಪದವಿ ಓದಿದ್ದ ಐಶ್ವರ್ಯ ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದಳು. ಬೆಳಗಾವಿಯ ಕಂಪನಿಯೊಂದರಲ್ಲಿ ಕಲಿಕಾ ತರಬೇತಿಯಲ್ಲಿದ್ದ ಐಶ್ವರ್ಯ ಕಳೆದ ಮೂರು ತಿಂಗಳಿನಿಂದ ನೆಹರು ನಗರದ ಪಿ.ಜಿಯಲ್ಲಿ ವಾಸವಿದ್ದಳು. ಆತ್ಮಹತ್ಯೆಗೆ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಂಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾತ್ರವಲ್ಲದೇ ಯುವತಿ ಸ್ನೇಹಿತ ಕೂಡ ಪಿ.ಜಿಗೆ ಬಂದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲವ್ ಬ್ರೇಕಪ್ ಯುವತಿ ಆತ್ಮಹತ್ಯೆಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕಡಲಾಚೆಯ ಗಣಿಗಾರಿಕೆ ಯೋಜನೆಗೆ ಕೇರಳದ ವಿರೋಧವೇಕೆ? – ಯೋಜನೆಯ ಮಹತ್ವವೇನು?

    ಮಂಗಳವಾರ ಸಂಜೆ 6:30 ರಿಂದ 7:30ರ ಅವಧಿಯಲ್ಲಿ ಐಶ್ವರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಫೋನ್ ರಿಸೀವ್ ಮಾಡದಿದ್ದಕ್ಕೆ ಆಕೆಯ ಸ್ನೇಹಿತ ಪಿ.ಜಿಗೆ ಗಾಬರಿಯಿಂದ ಬಂದಿದ್ದ. ಪಿ.ಜಿ ರೂಂನ ಬಾಗಿಲು ಒಡೆದು ನೋಡಿದಾಗ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಐಶ್ವರ್ಯ ಸ್ನೇಹಿತ ಅಲ್ಲಿಂದ ವಾಪಸ್ ಹೋಗುತ್ತಿರುವುದನ್ನು ಸ್ಥಳೀಯರು ಕೂಡ ನೋಡಿದ್ದಾರೆ. ಇದನ್ನೂ ಓದಿ: ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಐಶ್ವರ್ಯ ಮೊಬೈಲ್‌ನ ಕಾಲ್ ಡೀಟೈಲ್ಸ್ ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೇ ಪಿಜಿಗೆ ಬಂದು ಹೋದ ಸ್ನೇಹಿತನಿಗಾಗಿ ಶೋಧ ನಡೆಸುತ್ತಿದ್ದಾರೆ. ಐಶ್ವರ್ಯ ಆತ್ಮಹತ್ಯೆಗೆ ಅಸಲಿ ಕಾರಣ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Tumakuru | 19 ಸಾವಿರ ಗಡಿ ದಾಟಿದ ಕ್ವಿಂಟಲ್ ಕೊಬ್ಬರಿ ಧಾರಣೆ – ಸಾರ್ವಕಾಲಿಕ ದಾಖಲೆ

  • ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ

    ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ

    – ಅನಾಥರಾದ ಮೃತ ದಂಪತಿಯ ನಾಲ್ಕು ಮಕ್ಕಳು

    ವಿಜಯಪುರ: ಕತ್ತು ಹಾಗೂ ಕಾಲಿಗೆ ಸೀರೆಯಿಂದ ಬಿಗಿದ ಸ್ಥಿತಿಯಲ್ಲಿ ಪತ್ನಿ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ಘಟನೆ ನಡೆದಿದೆ.

    ಸಿದ್ದಪ್ಪ ಹರನಾಳ ಹಾಗೂ ಆತನ ಪತ್ನಿ ಮೇಘಾ ಹರನಾಳ ಶವ ಪತ್ತೆಯಾಗಿದೆ. ಎಂಟು ವರ್ಷಗಳ ಹಿಂದೆ ಮೇಘಾಳನ್ನ ಸಿದ್ದಪ್ಪ ಹರನಾಳ ಮದುವೆಯಾಗಿದ್ದ. ಪತಿ ಸಿದ್ದಪ್ಪನೇ ಪತ್ನಿ ಮೇಘಾಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೃತ ಮೇಘಾಳ ತಾಯಿ ಗದ್ದೆಮ್ಮ ಹೊಸಮನಿ ಅವರು ಈ ಆರೋಪ ಮಾಡಿದ್ದಾರೆ.

    ಮೃತ ಸಿದ್ದಪ್ಪನ ತಾಯಿ ಶಾಂತಮ್ಮ ಹಾಗೂ ಸಹೋದರ ಶ್ರೀಕಾಂತ ಕಿರುಕುಳವೇ ಇದಕ್ಕೆ ಕಾರಣ ಎಂದು ಗದ್ದೆಮ್ಮ ದೂರಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಬಾಲಣ್ಣ ನಂದಗಾವಿ ಹಾಗೂ ಮುದ್ದೇಬಿಹಾಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳೆದ ಎರಡ್ಮೂರು ವರ್ಷಗಳಿಂದ ಸಿದ್ದಪ್ಪ ಹಾಗೂ ಮೇಘಾ ಸಂಸಾರದಲ್ಲಿ ಜಗಳವಾಗುತ್ತಾ ಬಂದಿತ್ತು. ರಾಜಿ ಪಂಚಾಯಿತಿ ಮಾಡಿ ಚೆನ್ನಾಗಿರಿ ಎಂದು ಹೇಳಿದ್ದೆವು. ಈಗ ನಮ್ಮ ಮಗಳನ್ನು ಕೊಲೆ ಮಾಡಿ ಅಳಿಯ ನೇಣಿಗೆ ಶರಣಾಗಿದ್ದಾನೆಂದು ಮಹಿಳೆ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ದಂಪತಿಗೆ ನಾಲ್ಕು ಮಕ್ಕಳಿದ್ದು, ನಾಲ್ವರು ಅನಾಥರಾಗಿದ್ದಾರೆಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

    ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರ ಶವಗಳನ್ನ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರ ಮಾಡಲಿದ್ದಾರೆ. ಪೊಲೀಸರ ತನಿಖೆಯಲ್ಲಿ ಘಟನೆಯ ಕುರಿತು ಸತ್ತಾಂಶ ಹೊರಬೀಳಲಿದೆ.

  • ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿ – ತಂದೆ ಸ್ಥಳದಲ್ಲೇ ಸಾವು

    ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿ – ತಂದೆ ಸ್ಥಳದಲ್ಲೇ ಸಾವು

    ವಿಜಯಪುರ: ಎಸ್‌ಎಸ್‌ಎಲ್‌ಸಿ (SSLC Exam) ಪರೀಕ್ಷೆಗೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಲಾರಿ ಡಿಕ್ಕಿಯಾದ ಪರಿಣಾಮ ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಕಗ್ಗೋಡ (Kaggod) ಗ್ರಾಮದ ಬಳಿಯ 52ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ಬೈಕ್ ಸವಾರನನ್ನು ವೆಂಕು ಚವ್ಹಾಣ (43) ಎಂದು ಗುರುತಿಸಲಾಗಿದ್ದು, ಪುತ್ರಿಯರಾದ ಐಶ್ವರ್ಯಾ, ಪ್ರೀತಿ ಹಾಗೂ ಪಕ್ಕದ ಮನೆ ನಿವಾಸಿ ಶ್ವೇತಾ ರಾಠೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ

    ಕುಮಟಗಿ ತಾಂಡಾದಿಂದ ತಮ್ಮ ಇಬ್ಬರು ಮಕ್ಕಳು ಹಾಗೂ ಪಕ್ಕದ ಮನೆ ನಿವಾಸಿಯನ್ನು ಕಗ್ಗೋಡದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತೆಲಂಗಾಣ (Telangana)ಮೂಲದ TS15UA8055 ನಂಬರ್ ಲಾರಿ ಹಾಗೂ KA28HL5603 ನಂಬರಿನ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ವಿಜಯಪುರ (Vijayapura) ನಗರದ ಬಿಎಲ್‌ಡಿಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ,

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!

  • ಹನಿಟ್ರ‍್ಯಾಪ್ ಬಹಳ ಹೀನ ಕೆಲಸ, ತೇಜೋವಧೆ ಮಾಡುವುದು ಸರಿಯಲ್ಲ – ಎಂ.ಬಿ ಪಾಟೀಲ್

    ಹನಿಟ್ರ‍್ಯಾಪ್ ಬಹಳ ಹೀನ ಕೆಲಸ, ತೇಜೋವಧೆ ಮಾಡುವುದು ಸರಿಯಲ್ಲ – ಎಂ.ಬಿ ಪಾಟೀಲ್

    ವಿಜಯಪುರ: ಹನಿಟ್ರ‍್ಯಾಪ್ (Honey Trap) ಎನ್ನುವಂತದ್ದು ಬಹಳ ಹೀನಾಯವಾದ ಕೆಲಸ, ತೇಜೋವಧೆ ಮಾಡುವುದು ಸರಿಯಲ್ಲ ಎಂದು ವಿಜಯಪುರದಲ್ಲಿ (Vijayapura) ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ರಾಜಣ್ಣ (KN Rajanna) ಅವರ ಹನಿಟ್ರ‍್ಯಾಪ್ ವಿಷಯದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಅವರು ಸಿಎಂ ಹಾಗೂ ಗೃಹಮಂತ್ರಿಗಳಿಗೆ ತಮಗೆ ಏನಾಗಿದೆ ಎನ್ನುವುದನ್ನು ತಿಳಿಸಿದ್ದಾರೆ. ಈ ರೀತಿ ರಾಜಕೀಯವಾಗಿ ಯಾರೇ ಮಾಡಿದರೂ ಅದು ತಪ್ಪು. ತೇಜೋವಧೆ ಮಾಡುವಂತಹದು ತಪ್ಪು, ಇದು ಬಹಳ ಹೀನಾಯವಾದ ಕೆಲಸ. ಹೀಗಾಗಿ ಇದನ್ನು ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಎಂದು ತನಿಖೆಯಾಗಬೇಕು. ಸಿಎಂ ಹಾಗೂ ಗೃಹಮಂತ್ರಿಗಳು ಅದರ ಬಗ್ಗೆ ಗಮನ ಹರಿಸುತ್ತಾರೆ ಎಂದರು.ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ನಟಿ ಜೊತೆ ‌’ಬಿಗ್‌ ಬಾಸ್‌’ ಕಿಶನ್ ಡ್ಯಾನ್ಸ್- ಬೆರಗಾದ ಫ್ಯಾನ್ಸ್‌

    ಕಾಂಗ್ರೆಸ್ (Congress) ಲಿಂಗಾಯತ ನಾಯಕರ ಸಭೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಭೆ ಮಾಡುತ್ತೇನೆ ಎಂದು ಹೇಳಿದ್ದು ಯಾವಾಗ? ಅದು ಮುಖ್ಯ. ಪತ್ರಕರ್ತರು ಪ್ರಶ್ನೆ ಕೇಳಿದಾಗ ನಾನು ಮಾತನಾಡಿದ್ದೇನೆ. ಲಿಂಗಾಯತರು ಸಭೆ ಮಾಡಿದರೆ ತಪ್ಪೇನು ಎಂದು ಹೇಳಿದ್ದೇನೆ. ನಮ್ಮಲ್ಲಿರುವ ಹಲವು ಸಮಸ್ಯೆಗಳಿಗೆ, ಮೀಸಲಾತಿ ಸಮಸ್ಯೆ, ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ, ವಚನ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಮಸ್ಯೆಗಳಿವೆ. ಈ ಸಮಸ್ಯೆಗಳಿಗಾಗಿ ನಾವು ಸಭೆ ಮಾಡಿದರೆ ತಪ್ಪಿಲ್ಲ. ಲಿಂಗಾಯತರು ಅಷ್ಟೇ ಅಲ್ಲದೆ ಬೇರೆಯವರು ಕೂಡ ಸಭೆ ಮಾಡಿದರೆ ತಪ್ಪೇನು? ನನ್ನ ಹೇಳಿಕೆ ರಾಜಕೀಯ ಬಣ್ಣ ಪಡೆದರೆ ಏನು ಮಾಡಕ್ಕಾಗಲ್ಲ ಎಂದು ಹೇಳಿದರು.

    ನಮ್ಮಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಸ್ವಯಂಘೋಷಿತವಾಗಿ ಸಿಎಂ ಆಗುತ್ತೇವೆ ಎಂದು ನಾವೇನು ಘೋಷಣೆ ಮಾಡಿಕೊಂಡಿಲ್ಲ. ವೀರೇಂದ್ರ ಪಾಟೀಲ್‌ರ ನಂತರ ಲಿಂಗಾಯತರಿಗೆ ಅಧಿಕಾರ ಸಿಕ್ಕಿಲ್ಲ ಎನ್ನುವುದನ್ನು ಮಾತ್ರ ನಾನು ಹೇಳಿದ್ದೇನೆ. ಲಿಂಗಾಯತರ ನಾಯಕತ್ವದಲ್ಲಿ 186 ಸೀಟ್ ಬಂದಿದ್ದವು. ಆದರೆ ವೀರೇಂದ್ರ ಪಾಟೀಲ್ ಅವರನ್ನು ಇಳಿಸಿದ ಬಳಿಕ 36 ಶಾಸಕರು ಮಾತ್ರ ಆಯ್ಕೆಯಾದರು. ಹೀಗಾಗಿ ಲಿಂಗಾಯತ ನಾಯಕತ್ವದ ಬಗ್ಗೆ ಹೇಳಿದ್ದೇನೆ ಅಷ್ಟೇ ಎಂದು ಪರೋಕ್ಷವಾಗಿ ಲಿಂಗಾಯತ ಸಿಎಂ ಆಗಬೇಕು ಎಂದು ಅಭಿಪ್ರಾಯಪಟ್ಟರು.ಇದನ್ನೂ ಓದಿ: ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

  • ವಿಜಯಪುರ| ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ – ಮೂವರು ಸಾವು

    ವಿಜಯಪುರ| ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ – ಮೂವರು ಸಾವು

    ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ವಿಜಯಪುರ (Vijayapura)ಜಿಲ್ಲೆಯ ಉಕ್ಕಲಿ (Ukkali) ಗ್ರಾಮದ ಹೆಗಡಿಹಾಳ ಕ್ರಾಸ್ ಬಳಿ ನಡೆದಿದೆ.

    ಮೃತರನ್ನು ಉತ್ನಾಳ ಗ್ರಾಮದ ನಿವಾಸಿಗಳಾದ ಭೀರಪ್ಪ ಗೋಡೆಕರ್ (26), ಹಣಮಂತ ಕಡ್ಲಿಮಟ್ಟಿ (32) ಎಂದು ಗುರುತಿಸಲಾಗಿದೆ. ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಗಂಭೀರವಾಗಿ ಗಾಯಗೊಂಡವ ಉಮೇಶ್ (30) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ರೂ ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ: ಕೆ.ಜೆ.ಜಾರ್ಜ್

    ಜಿಲ್ಲೆಯ ಉಕ್ಕಲಿ ಗ್ರಾಮದ ಹೆಗಡಿಹಾಳ ಕ್ರಾಸ್ ಬಳಿ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದು, ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿ ಹೊಡೆದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಕೇವಲ 1 ಪಂದ್ಯವಾಡಿ 869 ಕೋಟಿ ನಷ್ಟ – ಭಾರೀ ಸಂಕಷ್ಟದಲ್ಲಿ ಪಾಕ್‌ ಬೋರ್ಡ್‌

     

  • ಲವ್ ಜಿಹಾದ್ ಕಲಿಸೋ ಮದರಸಾಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ: ಯತ್ನಾಳ್ ಕೆಂಡ

    ಲವ್ ಜಿಹಾದ್ ಕಲಿಸೋ ಮದರಸಾಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ: ಯತ್ನಾಳ್ ಕೆಂಡ

    ವಿಜಯಪುರ: ಮದರಸಾ, ಉರ್ದು ಶಾಲೆಗಳಿಗೆ ಸಿದ್ದರಾಮಯ್ಯ ಸರ್ಕಾರ ಹಣ ಕೊಡುತ್ತಿದೆ. ಆದರೆ ಮದರಸಾಗಳಲ್ಲಿ ಏನು ಕಲಿಸುತ್ತಾರೆ? ದೇಶ ವಿರೋಧಿ ವಿಚಾರಗಳೇ ಇರ್ತಾವೆ, ಲವ್ ಜಿಹಾದ್ ಮಾಡಬೇಕು ಅಂತ ಕಲಿಸ್ತಾರೆ. ಅಂತಹ ಮದರಸಾಗಳಿಗೆ ಸರ್ಕಾರ ಹಣ ಕೊಡ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಕಿಡಿಕಾರಿದರು.

    ಬಿಡದಿಯಲ್ಲಿ ಪಾಕಿಸ್ತಾನ ಪರ ಬರಹ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕರ್ನಾಟಕದಲ್ಲಿ ಈ ಸಿದ್ದರಾಮಯ್ಯ ಸರ್ಕಾರ ನೋಡಿದ್ರೆ ಸಾಕಾಗಿದೆ. ಹಿಂದೂ ಹೆಣ್ಣುಮಕ್ಕಳ ಕೊಲೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಗ್ಗೆ ಭಯ ಉಳಿದಿಲ್ಲ. ಪಾಕಿಸ್ತಾನದ ಬಗ್ಗೆ ಬರಹ ಬರೀತಾರೆ ಅಂದರೆ, ಅವರು ಎಷ್ಟು ಸ್ವೇಚ್ಛಾಚಾರದಿಂದ ರಾಜ್ಯದಲ್ಲಿ ಜೀವನ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ಹನಿಮೂನ್ ಮೂಡ್‌ನಲ್ಲಿ ಲವ್ ಬರ್ಡ್ಸ್- ನಾಗಚೈತನ್ಯ ಜೊತೆ ಶೋಭಿತಾ ಜಾಲಿ ರೈಡ್

    ನಮ್ಮ ಗೃಹಮಂತ್ರಿಗಳಂತೂ ಏನು ಮಾಡುತ್ತಿಲ್ಲ. ಅವರು ಬಿಗ್ ಝೀರೋ, ರಾಜೀನಾಮೆ ಕೊಟ್ಟು ಬೇರೆ ಖಾತೆಯೂ ತಗೆದುಕೊಳ್ಳುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸರ್ಕಾರವು ಮದರಸಾಗೆ, ಉರ್ದು ಶಾಲೆಗೆ ಹಣ ಕೊಡುತ್ತಿದೆ. ಮದರಸಾದಲ್ಲಿ ಏನು ಕಲಿಸುತ್ತಾರೆ? ಅಲ್ಲಿ ದೇಶ ವಿರೋಧಿ ವಿಚಾರಗಳ ಇರುತ್ತವೆ. ಪಾಕಿಸ್ತಾನಕ್ಕೆ ಜೈ ಅನ್ನೋದನ್ನೇ ಕಲಿಸುತ್ತಾರೆ ಅಲ್ಲಿ. ಇಸ್ಲಾಂ ಅಂದರೆ ಇಡೀ ಅನ್ಯ ಧರ್ಮದವರನ್ನ ನಾಶ ಮಾಡಬೇಕು. ಅಲ್ಲಿ ಲವ್ ಜಿಹಾದ್ ಮಾಡಬೇಕು ಎಂದು ಕಲಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವರಿಗೆ ಹಣ ಕೊಡುತ್ತಿರುವುದರಿಂದ ಅವರಿಗೆ ದೊಡ್ಡ ಶಕ್ತಿ ಬಂದಿದೆ ಎಂದು ದೂರಿದರು. ಇದನ್ನೂ ಓದಿ: ಚಾಮರಾಜನಗರ | ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್ – ಮನನೊಂದು ಪತಿ ಆತ್ಮಹತ್ಯೆ

    ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ತರಬೇತಿ ವಿಚಾರವಾಗಿ ಪ್ರತಿಕ್ರಿಯಿಸಿ, ಮುಸ್ಲಿಂ ಯುವತಿಯರಿಗೆ ಆತ್ಮರಕ್ಷಣೆ ಕಲಿಸಿದರೆ, ನಿತ್ಯ ನಮ್ಮ ಹೆಣ್ಣು ಮಕ್ಕಳ ಜೊತೆಗೆ ಹೊಡೆದಾಡಬೇಕಾ? ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯವಾಗಿದೆಯಾ? ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಪುಲ್ವಾಮಾ ಸ್ಟೈಲ್‌ ದಾಳಿ – ಪಾಕ್‌ 90 ಸೈನಿಕರ ಹತ್ಯೆ: ಬಲೂಚ್ ಲಿಬರೇಶನ್ ಆರ್ಮಿ ಘೋಷಣೆ

    ಶುಕ್ರವಾರ ಹಾವೇರಿಯಲ್ಲಿ ಹಿಂದೂ ಯುವತಿಯನ್ನ ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ. ನಿರಂತರವಾಗಿ ಹಿಂದೂ ಹಾಗೂ ದಲಿತ ಹೆಣ್ಣು ಮಕ್ಕಳ ಮೇಲೆ ಈ ಸರ್ಕಾರದಿಂದ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದಿಷ್ಟು ದಿನಗಳಲ್ಲಿ ಜನರೇ ದಂಗೆ ಏಳುತ್ತಾರೆ ಎಂದು ಹೇಳಿದರು.

  • ರನ್ಯಾ ಕೇಸ್‌ನಲ್ಲಿ ನಂಟಿರೋ ಸಚಿವರು ಯಾರು ಅನ್ನೋದು ಗೊತ್ತಿದೆ, ಅಧಿವೇಶನದಲ್ಲಿ ಬಿಚ್ಚಿಡ್ತೀನಿ: ಯತ್ನಾಳ್‌ ಬಾಂಬ್‌

    ರನ್ಯಾ ಕೇಸ್‌ನಲ್ಲಿ ನಂಟಿರೋ ಸಚಿವರು ಯಾರು ಅನ್ನೋದು ಗೊತ್ತಿದೆ, ಅಧಿವೇಶನದಲ್ಲಿ ಬಿಚ್ಚಿಡ್ತೀನಿ: ಯತ್ನಾಳ್‌ ಬಾಂಬ್‌

    ವಿಜಯಪುರ: ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆ ಪ್ರಕರಣದ (Ranya Rao Gold Smuggling Case) ನಂಟು ಹೊಂದಿರುವ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೊಸ ಬಾಂಬ್‌ ಸಿಡಿಸಿದ್ದಾರೆ.

    ರನ್ಯಾ ಗೋಲ್ಡ್‌ ಸ್ಮಗ್ಲಿಂಗ್‌ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿಂದು (Vijayapura) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರನ್ಯಾ ರಾವ್‌ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರ ಹೆಸರು ನನಗೆ ಗೊತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು. ಇದನ್ನೂ ಓದಿ: Ramanagara| 20 ವರ್ಷಗಳ ಬಳಿಕ ಮಂಚನಬೆಲೆ ಎಡದಂಡೆ ನಾಲೆಗೆ ಹರಿದ ನೀರು

    ರನ್ಯಾ ಪ್ರಕರಣದ ನಂಟು ಹೊಂದಿರೋ ಸಚಿವರು ಯಾರು ಅನ್ನೋದು ಗೊತ್ತಿದೆ. ಅಧಿವೇಶನಲ್ಲಿ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೊಕಾಲ್ (ಶಿಷ್ಟಾಚಾರ) ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಗೋಲ್ಡ್ ಎಲ್ಲಿಂದ ತಂದ್ರು? ಗೋಲ್ಡ್ ಎಲ್ಲಿಟ್ಟುಕೊಂಡು ತಂದ್ರು? ಎಲ್ಲವೂ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪಿದೆ ಎಂಬ ಸಚಿವ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್‌, ಯಾರು ತಪ್ಪು ಮಾಡಿದ್ರೆ ಅದು ತಪ್ಪೆ. ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ರೆ ತಪ್ಪೆ, ನಮ್ಮ ಕೇಂದ್ರದ ಸಚಿವರು ಇದ್ರಲ್ಲಿ ಭಾಗಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಇನ್ನೂ ರನ್ಯಾಳಿಗೆ ಕೆಐಎಡಿಬಿಯಿಂದ ಜಮೀನು ಕೊಟ್ಟ ವಿಚಾರ ಕುರಿತು ಮಾತನಾಡಿ, ಜಮೀನು ಕೊಟ್ಟಿದ್ದನ್ನ ಸ್ವತಃ ನಿರಾಣಿ ಒಪ್ಪಿಕೊಂಡಿದ್ದಾರೆ. 12 ಏಕರೆ ಜಮೀನು ಕೊಟ್ಟಿದ್ದು, ಹಣ ಕಟ್ಟದೇ ಇರೋದಕ್ಕೆ ಅದು ರದ್ದಾಗಿದೆ. 12 ಎಕರೆಯದ್ದು ಯಾರೋ ಒಬ್ಬರು ಹಣ ಕೊಡ್ತೀನಿ ಎಂದಿದ್ದರು ಅವ್ರು ಕೊಟ್ಟಿಲ್ಲ ಎಂದರು. ಈ ವೇಳೆ ಹಣ ಕೊಡ್ತೀನಿ ಎಂದವರು ಸಚಿವರಾ? ಎನ್ನುವ ಪ್ರಶ್ನೆಗೆ ಮುಗುಳ್ನಕ್ಕರು. ಇದನ್ನೂ ಓದಿ:  ‘ಜಗದೋದ್ಧಾರನಾ ಆಡಿಸಿದಳು ಯಶೋಧೆ’ ಹಾಡು ಹಾಡಿದ ಸಂಸದ ತೇಜಸ್ವಿ ಸೂರ್ಯ ಪತ್ನಿ

  • ಕೊಳವೆ ಬಾವಿಗೆ ಬಾಲಕ ಬಿದ್ದಿದ್ದ ಪ್ರಕರಣ – ಕಾರ್ಯಾಚರಣೆಗೆ ಬಳಸಿದ್ದ ಯಂತ್ರಗಳ 3.70 ಲಕ್ಷ ಬಿಲ್ ಬಾಕಿ

    ಕೊಳವೆ ಬಾವಿಗೆ ಬಾಲಕ ಬಿದ್ದಿದ್ದ ಪ್ರಕರಣ – ಕಾರ್ಯಾಚರಣೆಗೆ ಬಳಸಿದ್ದ ಯಂತ್ರಗಳ 3.70 ಲಕ್ಷ ಬಿಲ್ ಬಾಕಿ

    ವಿಜಯಪುರ: ಸಾತ್ವಿಕ್ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದ ಪ್ರಕರಣ ಸಂಬಂಧ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದ್ದ ಯಂತ್ರೋಪಕರಣಗಳ 3.70 ಲಕ್ಷ ರೂ ಬಿಲ್ ಬಾಕಿ ಉಳಿದಿದೆ.

    ಹೌದು, ಕಳೆದ ವರ್ಷ ಏಪ್ರಿಲ್ 03 ರಂದು ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕ ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿತ್ತು. ಬಾಲಕ ಕೊಳವೆ ಬಾವಿಗೆ ಬಿದ್ದ 4 ಗಂಟೆಯಲ್ಲಿ ತಾಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.ಇದನ್ನೂ ಓದಿ: ಚಿಕ್ಕಮಗಳೂರು| ತಹಶೀಲ್ದಾರ್ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ!

    ಕಾರ್ಯಾಚರಣೆಯಲ್ಲಿ 2 ಹಿಟಾಚಿ, 3 ಜೆಸಿಬಿ, 4 ಟ್ರಾಕ್ಟರ್ ಬ್ರೇಕರ್ಸ್, 1 ಹ್ಯಾಂಡ್ ಡ್ರಿಲ್ಲಿಂಗ್, 1 ಸ್ಟೋನ್ ಕಟ್ಟಿಂಗ್ ಮಷಿನ್, 1 ವಾಟರ್ ಟ್ಯಾಂಕರ್ ಬಳಕೆ ಮಾಡಲಾಗಿತ್ತು. ಪರಿಸ್ಥಿತಿಯನ್ನು ಅರಿತ ಮಾಲೀಕರು ಈ ಎಲ್ಲ ಯಂತ್ರೋಪಕರಣಗಳನ್ನು ಯಾವುದೇ ಕಂಡಿಷನ್ ಇಲ್ಲದೆ ತಂದು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಅಲ್ಲದೆ ಸಾತ್ವಿಕ್ ರಕ್ಷಣೆಗೆ ಹಗಲು ರಾತ್ರಿಯೆನ್ನದೇ ಯಂತ್ರೋಪಕರಣಗಳ ಚಾಲಕರು, ಮಾಲೀಕರು ಕಾರ್ಯಾಚರಣೆ ನಡೆಸಿದ್ದರು. ಇದರ ಫಲವಾಗಿಯೇ ಯಶಸ್ವಿಯಾಗಿ ಬಾಲಕನನ್ನು ಕೊಳವೆ ಬಾವಿಯಿಂದ ಹೊರತರಲಾಯಿತು.

    ಆದರೆ ಕಾರ್ಯಾಚರಣೆ ವೇಳೆ ಹರಸಾಹಸಪಟ್ಟು ಮಗುವನ್ನು ಬದುಕುಳಿಸಿದ್ದ ಯಂತ್ರೋಪಕರಣಗಳ ಮಾಲೀಕರು ಈಗ ಅಲೆಡಾಡುವಂತಾಗಿದೆ. ಕಾರ್ಯಾಚರಣೆಗೆ ಬಳಸಲಾಗಿದ್ದ ಯಂತ್ರಗಳ 3.70 ಲಕ್ಷ ರೂ. ಬಿಲ್‌ನ್ನು ಜಿಲ್ಲಾಡಳಿತ ಬಾಕಿ ಉಳಿಸಿಕೊಂಡಿದೆ. ಕಳೆದ 11 ತಿಂಗಳಿಂದ ಬಿಲ್ ಬಾಕಿಯಿಟ್ಟುಕೊಂಡಿದ್ದು, ಪ್ರತಿನಿತ್ಯ ಬಿಲ್ ಕೊಡಿ ಎಂದು ಯಂತ್ರೋಪಕರಣಗಳ ಮಾಲೀಕರು ಅಲೆದಾಡುವಂತಾಗಿದೆ.

    ಇದು ಕೇವಲ ಯಂತ್ರೋಪಕರಣಗಳಿಗೆ ಹಾಕಿದ ಡೀಸೆಲ್ ಬಿಲ್ ಆಗಿದ್ದು, ಅಸಲಿಗೆ 10 ಲಕ್ಷ ರೂ.ಗೂ ಅಧಿಕ ಬಿಲ್ ಬರಬೇಕು. ಕೊಳವೆ ಬಾವಿ ಕಾರ್ಯಾಚರಣೆ ವೇಳೆ ಹಿಂದೆ ಮುಂದೆ ಯೋಚಿಸದೆ ಯಂತ್ರೋಪಕರಣಗಳನ್ನ ಒದಗಿಸಿದ್ದು, ಜಿಲ್ಲಾಡಳಿತ ಕೇವಲ ಡೀಸೆಲ್ ಬಿಲ್ ಕೊಡುವುದಕ್ಕೆ ಈ ರೀತಿ ಸತಾಯಿಸುತ್ತಿದ್ದಾರೆ ಎಂದು ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಹಿಂದಿ ಬೇಡ ಅನ್ನೋರು ತಮಿಳು ಸಿನಿಮಾವನ್ನು ಯಾಕೆ ಹಿಂದಿಗೆ ಡಬ್ಬಿಂಗ್‌ ಮಾಡ್ತೀರಿ: ಪವನ್‌ ಕಲ್ಯಾಣ್‌ ಪ್ರಶ್ನೆ