Tag: ವಿಕ್ರಮ್ ಲ್ಯಾಂಡರ್

  • Chandrayaan-3: ವಿಕ್ರಮ್‌ ಲ್ಯಾಂಡರ್‌ ಡಿಬೂಸ್ಟಿಂಗ್‌ ಕಾರ್ಯಾಚರಣೆ ಯಶಸ್ವಿ

    Chandrayaan-3: ವಿಕ್ರಮ್‌ ಲ್ಯಾಂಡರ್‌ ಡಿಬೂಸ್ಟಿಂಗ್‌ ಕಾರ್ಯಾಚರಣೆ ಯಶಸ್ವಿ

    ನವದೆಹಲಿ: ಚಂದ್ರಯಾನ-3 (Chandrayaan-3) ಕಾರ್ಯಾಚರಣೆಯ ಕೊನೆ ಹಂತದ ಭಾಗವಾಗಿ ಬಾಹ್ಯಾಕಾಶ ನೌಕೆಯಿಂದ ಲ್ಯಾಂಡರ್‌ ಮತ್ತು ರೋವರ್‌ ಬೇರ್ಪಡಿಸುವ ಕಾರ್ಯ ಗುರುವಾರ ಯಶಸ್ವಿಯಾಗಿ ನಡೆದಿತ್ತು. ಅದರ ಬೆನ್ನಲ್ಲೇ ಇಂದು ಮತ್ತೊಂದು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲಾಗಿದೆ.

    ವಿಕ್ರಮ್ ಲ್ಯಾಂಡರ್ (Vikram Lander) ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಇಸ್ರೋ ಯಶಸ್ವಿಗೊಳಿಸಿದೆ. LM ತನ್ನ ಕಕ್ಷೆಯನ್ನು 113 ಕಿಮೀ x 157 ಕಿಮೀಗೆ ಇಳಿಸಿದ ಡಿಬೂಸ್ಟಿಂಗ್ ಕಾರ್ಯಾಚರಣೆಗೆ ಯಶಸ್ವಿಯಾಗಿ ಒಳಗಾಯಿತು. ಡಿಬೂಸ್ಟಿಂಗ್ ಬಳಿಕ ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಅರೋಗ್ಯ ಸಾಮಾನ್ಯ ಸ್ಥಿತಿಯಲ್ಲಿದೆ. ಆಗಸ್ಟ್ 20 ರಂದು ಮಧ್ಯರಾತ್ರಿ 2 ಗಂಟೆಗೆ ಎರಡನೇ ಡಿಬೂಸ್ಟಿಂಗ್‌ಗೆ ಸಮಯ ನಿಗದಿ ಪಡಿಸಲಾಗಿದೆ ಎಂದು ಇಸ್ರೋ (ISRO) ತಿಳಿಸಿದೆ. ಇದನ್ನೂ ಓದಿ: ಚಂದ್ರ ಇನ್ನೂ ಸನಿಹ – ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್‌ ಲ್ಯಾಂಡರ್‌

    ಚಂದ್ರಯಾನ-3 ಯೋಜನೆಯ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಇಸ್ರೋ ಮಾಹಿತಿ ಹಂಚಿಕೊಳ್ಳುತ್ತಿದೆ. ವಿಕ್ರಮ್‌ ಲ್ಯಾಂಡರ್‌ ಈಗ ಚಂದ್ರನಿಗೆ ಮತ್ತಷ್ಟು ಸನಿಹ ಆಗಿದೆ. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾದಲ್ಲಿ ಚಂದ್ರನ ಮೇಲ್ಮೈ ವೀಡಿಯೋ ಸೆರೆ ಹಿಡಿದಿದೆ. ವೀಡಿಯೋ ದೃಶ್ಯವನ್ನು ಸಹ ತನ್ನ ಟ್ವಿಟ್ಟರ್‌ (ಎಕ್ಸ್‌) ಖಾತೆಯಲ್ಲಿ ಇಸ್ರೋ ಹಂಚಿಕೊಂಡಿದೆ.

    ಜು.14 ರಂದು ಇಸ್ರೋ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತು. ಆಗಸ್ಟ್ 23 ರಂದು ಚಂದ್ರದ ದಕ್ಷಿಣ ಭಾಗದಲ್ಲಿ ಇಳಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿದ ಚಂದ್ರಯಾನ ನೌಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ಮೆಕ್ಯಾನಿಕಲ್ ಎಂಜಿನಿಯರ್ ನೆರವಿನಿಂದ ವಿಕ್ರಮ್ ಲ್ಯಾಂಡರ್ ತ್ಯಾಜ್ಯ ಪತ್ತೆ ಹಚ್ಚಿದ ನಾಸಾ

    ಭಾರತದ ಮೆಕ್ಯಾನಿಕಲ್ ಎಂಜಿನಿಯರ್ ನೆರವಿನಿಂದ ವಿಕ್ರಮ್ ಲ್ಯಾಂಡರ್ ತ್ಯಾಜ್ಯ ಪತ್ತೆ ಹಚ್ಚಿದ ನಾಸಾ

    ಚೆನ್ನೈ: ಬಹು ನಿರೀಕ್ಷಿತ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಪತನಗೊಂಡ ನಂತರ ಹೇಗಾಯಿತು, ಏನಾಯಿತು ಎಂಬುದರ ಕುರಿತು ಇಸ್ರೋ, ನಾಸಾ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದರು. ಆದರೆ ಕಂಡು ಹಿಡಿಯುವುದು ಕಷ್ಟದ ಕೆಲಸವಾಗಿತ್ತು. ಇದೀಗ ನಾಸಾ ವಿಕ್ರಮ್ ಲ್ಯಾಂಡರ್ ನ ತ್ಯಾಜ್ಯ ಪತ್ತೆ ಹಚ್ಚಿದ್ದು, ವಿಶೇಷವೆಂದರೆ ನಾಸಾಗೆ ತಮಿಳುನಾಡಿನ ಎಂಜಿನಿಯರ್ ಸಹಾಯ ಮಾಡಿದ್ದಾರೆ.

    ಈ ಕುರಿತು ಸ್ವತಃ ನಾಸಾ ಸ್ಪಷ್ಟಪಡಿಸಿದ್ದು, ತಮಿಳುನಾಡಿನ 33 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಷಣ್ಮುಗ ಸುಬ್ರಹ್ಮಣಿಯನ್ ಅವರ ಸಹಾಯದಿಂದ ನಾವು ವಿಕ್ರಮ್ ಲ್ಯಾಂಡರ್ ಪತನವಾಗಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಹೇಳಿದೆ. ಪತ್ತೆ ಹಚ್ಚಲು ಸಹಕರಿಸಿದ್ದಕ್ಕೆ ಷಣ್ಮುಗ ಅವರಿಗೆ ಇ-ಮೇಲ್ ಮೂಲಕ ನಾಸಾ ಧನ್ಯವಾದ ತಿಳಿಸಿದೆ.

    ಪ್ರತಿಷ್ಠಿತ ನಾಸಾ ಸಂಸ್ಥೆಯೇ ವಿಕ್ರಮ್ ಲ್ಯಾಂಡ್‍ನ ಸುಳಿವು ಕಂಡುಹಿಡಿಯಲು ವಿಫಲವಾಯಿತಲ್ಲ ಎಂಬ ವಿಷಯ ಷಣ್ಮುಗ ಅವರಲ್ಲಿ ಕುತೂಹಲ ಕೆರಳಿಸಿತು. ಹೀಗಾಗಿ ಈ ಕುರಿತು ಸಂಶೋಧನೆ ನಡೆಸಲು ಪ್ರಾರಂಭಿಸಿದರು. ಸಿಕ್ಕ ಮಾಹಿತಿಯನ್ನು ಇ-ಮೇಲ್ ಹಾಗೂ ಟ್ವಿಟ್ಟರ್ ಮೂಲಕ ನಾಸಾದೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು ನಾಸಾ ವಿಕ್ರಮ್ ಲ್ಯಾಂಡರ್ ಪತನವನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ವಿಕ್ರಮ್ ಲ್ಯಾಂಡರ್ ಪತನದ ಕುರಿತು ಮೊದಲ ಬಾರಿಗೆ ಸಕಾರಾತ್ಮಕ ಗುರುತನ್ನು ಷಣ್ಮುಗ ಪತ್ತೆ ಹಚ್ಚಿ ನಾಸಾಗೆ ತಿಳಿಸಿದ್ದರು.

    ನಾನು ಪದೇ ಪದೆ ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳದ ಹಳೆಯ ಚಿತ್ರಗಳು ಹಾಗೂ ನಾಸಾ ಹೊಸತಾಗಿ ಬಿಡುಗಡೆ ಮಾಡಿದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡುತ್ತಿದ್ದೆ. ಇದನ್ನು ನಾನು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ರೆಡ್ಡಿಟ್ ಮೂಲಕ ಹಂಚಿಕೊಳ್ಳುತ್ತಿದ್ದೆ ಎಂದು ಷಣ್ಮುಗ ಮಾಹಿತಿ ನೀಡಿದ್ದಾರೆ.

    ವಿಕ್ರಮ್ ಲ್ಯಾಂಡರ್ ಕುರಿತ ಸುಳಿವನ್ನು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ನಾನು ಪ್ರಯತ್ನವನ್ನು ಬಿಡಲಿಲ್ಲ. ಅಂತಿಮವಾಗಿ ನಾನು ಸಂಶೋಧಿಸಿದ ಚಿತ್ರಗಳನ್ನು ಅಕ್ಟೋಬರ್ 3ರಂದು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ನಾನು ನೀಡಿದ ಸುಳಿವಿನ ಆಧಾರದ ಮೇಲೆ ಅದೇ ಸ್ಥಳದಲ್ಲಿ ನಾಸಾ ಹೆಚ್ಚು ಹುಡುಕಾಟವನ್ನು ನಡೆಸಿತು. ಕಂಡುಹಿಡಿದ ಎರಡು ತಿಂಗಳ ನಂತರ ಅಧಿಕೃತವಾಗಿ ನಾಸಾ ಘೋಷಣೆ ಮಾಡಿತು. ಸಾರ್ವಜನಿಕರ ಮುಂದೆ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಅವರು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ತಡವಾಗಿ ಘೋಷಣೆ ಮಾಡಿದೆ. ಹೀಗಾಗಿ ನಾನೂ ಅದೇ ರೀತಿ ಮಾಡಿದೆ ಎಂದು ಷಣ್ಮುಗ ತಿಳಿಸಿದರು.

    ಚಂದ್ರಯಾನ-2 ಮಿಷನ್ ಯಶಸ್ವಿಯಾಗಿದೆ ಎಂದು ನಾನು ಭಾವಿಸುತ್ತೇನೆ. ವಿಕ್ರಮ್ ಲ್ಯಾಂಡರ್ ಕ್ರ್ಯಾಶ್ ಆಗಿದ್ದು ದುರಂತ. ಆದರೆ ಜನ ಇಸ್ರೋ ಹಾಗೂ ವಿಕ್ರಮ್ ಲ್ಯಾಂಡರ್ ಬಗ್ಗೆ ಹೆಚ್ಚು ಚರ್ಚೆ ಮಾಡುವಂತಾಯಿತು, ಸಂಶೋಧನೆಗೆ ತೊಡಗುವಂತೆ ಮಾಡಿತು. ಅದೇ ಇದರ ಸಕಾರಾತ್ಮಕತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಾಸಾ ನನ್ನ ಕೊಡುಗೆಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ನನ್ನ ಸಂಶೋಧನೆಗಾಗಿ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‍ಆರ್‍ಒ) ಚಿತ್ರಗಳನ್ನು ಬಳಸಿದ್ದೆ. ನಂತರ ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದ್ದೆ. ಚಂದ್ರನಲ್ಲಿ ಈ ತ್ಯಾಜ್ಯವನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ, ನಾನು ಕೇವಲ ಒಂದು ತುಂಡು ತ್ಯಾಜ್ಯವನ್ನು ಮಾತ್ರ ಪತ್ತೆಹಚ್ಚಿದ್ದೆ ಎಂದು ವಿವರಿಸಿದ್ದಾರೆ.

    ನಾಸಾದಿಂದ ಚಿತ್ರ ಬಿಡುಗಡೆ
    ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದ್ದು, ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.

    ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‍ಆರ್‍ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.

    ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಷಣ್ಮುಗ ಸುಬ್ರಹ್ಮಣ್ಯಂ ಅವರು ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.

    3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ನಸುಕಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.

  • ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

    ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳ ಪತ್ತೆ ಹಚ್ಚಿದ ನಾಸಾ

    ವಾಷಿಂಗ್ಟನ್: ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.

    ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‌ಆರ್‌ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.

    ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಮೆಕ್ಯಾನಿಕಲ್ ಇಂಜಿನಿಯರ್ ಷಣ್ಮುಗ ಸುಬ್ರಮಣ್ಯಂ ಎಲ್‌ಆರ್‌ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.

    3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ಬೆಳಗಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.

  • ವಿಕ್ರಮ್ ಸಂಪರ್ಕಕ್ಕೆ ಇಸ್ರೋ ಜೊತೆ ನಾಸಾ ಪ್ರಯತ್ನ- ನಾಸಾ ಯಾಕೆ ಇಷ್ಟೊಂದು ಪ್ರಯತ್ನಿಸುತ್ತಿರುವುದು?

    ವಿಕ್ರಮ್ ಸಂಪರ್ಕಕ್ಕೆ ಇಸ್ರೋ ಜೊತೆ ನಾಸಾ ಪ್ರಯತ್ನ- ನಾಸಾ ಯಾಕೆ ಇಷ್ಟೊಂದು ಪ್ರಯತ್ನಿಸುತ್ತಿರುವುದು?

    – 2.1 ಕಿ.ಮೀ ಅಲ್ಲ 400 ಮೀ. ಅಂತರದಲ್ಲಿ ಮಿಸ್ ಆದ ವಿಕ್ರಮ್

    ಬೆಂಗಳೂರು: ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಪ್ರಯತ್ನಿಸುತ್ತಿದ್ದು, ಅಮೆರಿಕಾದ ನಾಸಾ ಸಹ ವಿಕ್ರಮ್ ಗೆ ಸಂದೇಶ ರವಾನಿಸಿದೆ. ಈ ಮೂಲಕ ವಿಕ್ರಮ್ ಸಂಪರ್ಕಕ್ಕೆ ನಾಸಾ ಸಹ ಮುಂದಾಗಿದೆ. ಈ ಮೊದಲು ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ 2.1 ಕಿ.ಮೀ. ಅಂತರದಲ್ಲಿ ಸಂಪರ್ಕ ಕಳೆದುಕೊಂಡಿತ್ತು ಎಂದು ಹೇಳಲಾಗಿತ್ತು. ಆದ್ರೆ ಕೇವಲ 400 ಮೀ. ಅಂತರದಲ್ಲಿ ವಿಕ್ರಮ್ ಸಂಪರ್ಕ ಕಳೆದುಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

    ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಇಸ್ರೋ ವಿಜ್ಞಾನಿಗಳು ಆರ್ಬಿಟರ್ ಮೂಲಕ ವಿಕ್ರಮ್ ಸಂಪರ್ಕಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇತ್ತ ನಾಸಾ ತನ್ನ ಡಿಪ್ ಸ್ಪೇಸ್ ನೆಟ್‍ವರ್ಕ್ (ಡಿಎಸ್‍ಎನ್)ನ ಜೆಟ್ ಪ್ರಪೊಲ್ಷನ್ ಲ್ಯಾಬ್ರೋಟರಿ (ಜೆಪಿಎಲ್) ಮೂಲಕ ವಿಕ್ರಮ್ ಲ್ಯಾಂಡರ್ ಗೆ ರೇಡಿಯೋ ಸಂದೇಶವನ್ನು ಕಳುಹಿಸಿದೆ. ಇಸ್ರೋ ಒಪ್ಪಿಗೆ ನೀಡಿದ ಬಳಿಕ ನಾಸಾ ವಿಕ್ರಮ್ ಗೆ ರೇಡಿಯೋ ಸಂದೇಶವನ್ನು ಕಳುಹಿಸುವ ಮೂಲಕ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ

    14 ದಿನದಲ್ಲಿ ಸಿಗುತ್ತಾ ಸಂಪರ್ಕ?
    ವಿಕ್ರಮ್ ಸಂಪರ್ಕ ಸಿಗುವ ನಿರೀಕ್ಷೆಗಳು ಕಡಿಮೆ ಆಗುತ್ತಿವೆ ಎನ್ನಲಾಗುತ್ತಿದೆ. ಚಂದ್ರನ ಮೇಲ್ಮೈನಲ್ಲಿದೆ ಎನ್ನಲಾಗಿರುವ ವಿಕ್ರಮ್ ನಿಗೆ ಕೇವಲ 14 ದಿನ ಮಾತ್ರ ಸೂರ್ಯ ಬೆಳಕು ಸಿಗಲಿದೆ. ಅಂದ್ರೆ 14 ದಿನಗಳವರೆಗೆ ಇಸ್ರೋ ಸಂಪರ್ಕ ಸಾಧಿಸಲು ಪ್ರಯತ್ನಿಸಬಹುದು. ಒಂದು ವೇಳೆ ವಿಕ್ರಮ್ ಲ್ಯಾಂಡರ್ ನಲ್ಲಿರುವ ಉಪಕರಣಗಳು ಹಾನಿಗೊಳಗಾದ್ರೆ ಸಂಪರ್ಕ ಸಾಧಿಸುವುದು ಕಷ್ಟವಾಗಲಿದೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು 6 ದಿನಗಳು ಕಳೆದಿವೆ. 14 ದಿನಗಳ ಬಳಿಕ ಅತಿ ದೊಡ್ಡ ರಾತ್ರಿಯ ದಿನ ಬರಲಿದೆ. ಒಂದು ವೇಳೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದರೂ ಈ ದಿನ ವಿಜ್ಞಾನಿಗಳು ಅತ್ಯಂತ ಕಷ್ಟವಾಗಿರುತಿತ್ತು. ಹಾಗಾಗಿ ಸೆಪ್ಟೆಂಬರ್ 21ರೊಳಗೆ ವಿಕ್ರಮ್ ಲ್ಯಾಂಡರ್ ಸಂಪರ್ಕಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ:   ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

    ನಾಸಾ ಕ್ಯಾಲಿಫೋರ್ನಿಯಾದ ಅಂತರೀಕ್ಷ ಕೇಂದ್ರದಿಂದ ತನ್ನ ಡಿಎಸ್‍ಎನ್ ಮೂಲಕ ವಿಕ್ರಮ್ ನಿಗೆ ರೇಡಿಯೋ ಸಂದೇಶ ಕಳುಹಿಸಿದೆ. 12 ಕಿಲೋವ್ಯಾಟ್ ರೇಡಿಯೋ ಫ್ರಿಕ್ವಿನ್ಸಿ ಮೂಲಕ ವಿಕ್ರಮ್ ನನ್ನ ಸಂಪರ್ಕಿಸಲು ಡಿಎಸ್‍ಎನ್ ಸತತವಾಗಿ ಪ್ರಯತ್ನಿಸುತ್ತಿದೆ. ಲ್ಯಾಂಡರ್ ಗೆ ಸಿಗ್ನಲ್ ಕಳುಹಿಸಿದಾಗ ಚಂದ್ರ ಒಂದು ರೇಡಿಯೋ ರಿಫ್ಲೆಕ್ಟರ್ ರೀತಿ ಕೆಲಸ ಮಾಡುತ್ತದೆ. ಕಳುಹಿಸಿದ ಸಿಗ್ನಲ್ ಮಾದರಿಯನ್ನು ಭೂಮಿಗೂ ಕಳುಹಿಸುತ್ತದೆ. ಇದನ್ನೂ ಓದಿ: ವಿಕ್ರಮ್ ಸಂಪರ್ಕ ಕಡಿತಕ್ಕೆ ಎಕ್ಸ್ಟ್ರಾ ಬ್ರೇಕ್ ಕಾರಣ ಶಂಕೆ- ಇತ್ತ ನಾಸಾ ಶ್ಲಾಘನೆ

    ಚಂದ್ರಯಾನ-2 ಮೇಲ್ಯಾಕೆ ನಾಸಾಗೆ ಆಸಕ್ತಿ?
    ಚಂದ್ರಯಾನ-2 ಯೋಜನೆ ಬಗ್ಗೆ ನಾಸಾ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಇಸ್ರೋದಿಂದ ಒಪ್ಪಿಗೆ ಪಡೆದ ಮರುಕ್ಷಣದಿಂದ ವಿಕ್ರಮ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದೆ. ವಿಕ್ರಮ್ ಮೇಲೆ ಪ್ಯಾಸಿವ್ ಪೆಲೋಡ್ ಲೇಸರ್ ರಿಫ್ಲೇಕ್ಟರ್ ಅಳವಡಿಸಲಾಗಿದೆ. ಇದರ ಮೂಲಕ ಲ್ಯಾಂಡರ್ ನಿಗದಿತ ಸ್ಥಳ ಮತ್ತು ಅಲ್ಲಿಯ ಮಾಹಿತಿ ಲಭ್ಯವಾಗಲಿದೆ. ಚಂದ್ರನ ದಕ್ಷಿಣ ಧ್ರುವ ಮತ್ತು ಭೂಮಿಯ ನಡುವಿನ ನಿಗದಿತ ಅಂತರ ತಿಳಿಯಲಿದೆ. ಇದರಿಂದ ನಾಸಾಗೆ ಭವಿಷ್ಯದ ಯೋಜನೆಗಳಿಗೆ ಹೆಚ್ಚು ಅನಕೂಲವಾಗಲಿದೆ.

    ಚಂದ್ರಯಾನ-2ರ ಆರ್ಬಿಟರ್ 8 ಸುಧಾರಿತ ಪೇಲೋಡ್ ಒಳಗೊಂಡಿದ್ದರಿಂದ ಮಹತ್ವದ ಮಾಹಿತಿ ಮತ್ತು ಡೇಟಾ ಲಭ್ಯವಾಗಲಿದೆ. ಆರ್ಬಿಟರ್ ನಿಂದ ಸಿಕ್ಕಿರುವ ಚಂದ್ರನ 3ಡಿ ಮ್ಯಾಪಿಂಗ್ ಡೇಟಾಗಾಗಿ ನಾಸಾ ತುದಿಗಾಲಿನಲ್ಲಿ ನಿಂತಿದೆ. ಇದರ ಜೊತೆಗೆ ಈಗಾಗಲೇ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದ ಹಲವು ಚಿತ್ರಗಳು, ವಾತಾವರಣದ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಎಲ್ಲ ಮಾಹಿತಿಗಳು ನಾಸಾಗೆ ದೊರಕಿದ್ದಲ್ಲಿ, ಅದು ಕೈಗೊಂಡಿರುವ 2024ರ ಚಂದ್ರನ ದಕ್ಷಿಣ ಧ್ರುವ ತಲುಪುವ ಯೋಜನೆಯ ತಯಾರಿಗೆ ಸಹಾಯವಾಗಲಿದೆ. ದಕ್ಷಿಣ ಧ್ರುವದ ಫೋಟೋಗಳು ಲಭ್ಯವಾದ್ರೆ ನಾಸಾಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನೂ ಓದಿ:  ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಆಗುತ್ತಿದೆ: ಭೂತಾನ್ ಪ್ರಧಾನಿ

    ಚೀನಾದಲ್ಲೂ ಅಧ್ಯಯನ:
    ಭಾರತ ದಕ್ಷಿಣ ಧ್ರುವ ತಲುಪಲು ಪ್ರಯತ್ನ ನಡೆಸುತ್ತಿದೆ. ವಿಕ್ರಮ್ ಲ್ಯಾಂಡರ್ ಹಾರ್ಡ್ ಲ್ಯಾಂಡಿಂಗ್ ಪರಿಣಾಮ ಅಂತಿಮ ಕ್ಷಣದ ಕೆಲ ಮಾಹಿತಿ ಅಲಭ್ಯವಾಗಿದೆ. ಆದರೂ ಚಂದ್ರನಲ್ಲಿಯ ಅನೇಕ ಮಾಹಿತಿಗಳು ಇಸ್ರೋಗೆ ದೊರಕಿವೆ. ಇತ್ತ ನಾಸಾ ಸಹ ಚಂದ್ರಯಾನಕ್ಕೆ ಸಿದ್ಧಗೊಳ್ಳುತ್ತಿದೆ. ಭಾರತದ ನೆರೆಯ ರಾಷ್ಟ್ರ ಸಹ ಚಂದ್ರನ ಅಂಗಳ ತಲುಪಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಂದ್ರಯಾನವನ್ನು ಟೀಕಿಸಿದ ಪಾಕ್ ಸಚಿವನ ಚಳಿ ಬಿಡಿಸಿದ ನೆಟ್ಟಿಗರು

  • ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು: ನಾಗ್ಪುರ್ ಪೊಲೀಸ್

    ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು: ನಾಗ್ಪುರ್ ಪೊಲೀಸ್

    ಮುಂಬೈ: ಇಸ್ರೋನ ಬಹುನಿರೀಕ್ಷೆಯ ಚಂದ್ರಯಾನ-2 ರ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲು 2.1 ಕಿ.ಮೀ ಅಂತರದಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ನಾಗ್ಪುರ್ ಪೊಲೀಸ್ ವಿಕ್ರಮ್ ನಿನಗೆ ದಂಡ ಹಾಕಲ್ಲ ಸಂಪರ್ಕಕ್ಕೆ ಸಿಗು ಎಂದು ಟ್ವೀಟ್ ಮಾಡಿದ್ದಾರೆ,

    ಶನಿವಾರ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಲ್ಯಾಂಡರ್, ಲ್ಯಾಂಡಿಂಗ್‍ಗೆ ಕೆಲವು ನಿಮಿಷ ಬಾಕಿಯಿದ್ದಾಗ ತನ್ನ ಕಕ್ಷೆಯನ್ನು ಬದಲಿಸಿ ಇಸ್ರೋದಿಂದ ಸಂಪರ್ಕವನ್ನು ಕಳೆದುಕೊಂಡಿತ್ತು. ಇದಕ್ಕೆ ಸಂಬಧಿಸಿದಂತೆ ನಾಗ್ಪುರ ಪೊಲೀಸ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಇಸ್ರೋಗೆ ಸಂಪರ್ಕಕ್ಕೆ ಸಿಗದ ವಿಕ್ರಮ್ ಲ್ಯಾಂಡರ್ ಕುರಿತು ಟ್ವೀಟ್ ಮಾಡಿರುವ ನಾಗ್ಪುರ್ ಪೊಲೀಸರು, ನಮ್ಮ ಪ್ರೀತಿಯ ವಿಕ್ರಮ್. ನೀನು ಸಿಗ್ನಲ್ ಜಂಪ್ ಮಾಡಿದ್ದೀಯಾ ಎಂದು ನಾವು ನಿನಗೆ ದಂಡ ಹಾಕಲ್ಲ. ದಯವಿಟ್ಟು ನೀನು ನಮ್ಮ ಸಂಪರ್ಕಕ್ಕೆ ಸಿಗು ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

    ಈಗ ಈ ಟ್ವಿಟ್ಟರ್ ನೋಡಿದ ನೆಟ್ಟಿಗರು ಪೊಲೀಸರ ಈ ಟ್ವೀಟ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಟ್ವೀಟ್ ಅದ್ಭುತವಾಗಿದೆ. ನಿಮ್ಮ ಹಾಗೇ 130 ಕೋಟಿ ಭಾರತೀಯರು ವಿಕ್ರಮನ ಸಂಪರ್ಕಕ್ಕೆ ಕಾಯುತ್ತಿದ್ದಾರೆ ಎಂದು ಕೆಲವರು ರೀಟ್ವೀಟ್ ಮಾಡಿದ್ದಾರೆ. ಒಳ್ಳೆಯ ಮಾತುಗಳು ಸೋ ಕ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ.

    ಸಾಫ್ಟ್ ಲ್ಯಾಂಡಿಂಗ್ ಆಗದೆ ಹಾರ್ಡ್ ಲ್ಯಾಂಡಿಂಗ್ ಆದ ಕಾರಣ ವಿಕ್ರಮ್ ಲ್ಯಾಂಡರ್ ಮತ್ತೆ ಸಂಪರ್ಕ ಸಿಗುವುದು ಕಷ್ಟ ಎಂದು ಹೇಳಲಾಗಿತ್ತು. ಆದರೆ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಬಿದ್ದಿರುವ ಥರ್ಮಲ್‍ನ ಫೋಟೋವನ್ನು ಕಳುಹಿಸಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಭಾನುವಾರ ಹೇಳಿದ್ದರು. ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಮತ್ತು ಹೇಗಿದೆ ಎಂಬಿತ್ಯಾದಿಗಳ ವಿಷಯಗಳ ಮಾಹಿತಿ ಸಿಗಲಿದೆ ಎಂದು ಹಲವು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು.

    ಹಿರಿಯ ವಿಜ್ಞಾನಿಯೊಬ್ಬರು, ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಿಗುವ ಸಾಧ್ಯತೆಗಳಿವೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸ್ಥಳ ತಲುಪಲು ಆರ್ಬಿಟರ್ ಗೆ ಮೂರು ದಿನ ಸಮಯ ಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ವಿಕ್ರಮ್ ತನ್ನ ಪಥ ಬದಲಿಸಿದ್ದರಿಂದ ಸಂಪರ್ಕ ಕಡಿತಗೊಂಡಿತು ಎಂದು ವಿವರಿಸಿದ್ದರು.

  • ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ

    ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ

    ಬೆಂಗಳೂರು: ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯವಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ. ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು.

    ಆರ್ಬಿಟರ್ ವಿಕ್ರಮ್ ಲ್ಯಾಂಡರ್ ನ ಥರ್ಮಲ್ ಫೋಟೋವನ್ನು ಕ್ಲಿಕ್ಕಿಸಿದೆ. ಆದರೆ ಇದೂವರೆಗೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧ್ಯವಾಗಿಲ್ಲ. ಸಂಪರ್ಕಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ತಂಡ ವಿಕ್ರಮ್ ಲ್ಯಾಂಡರ್ ಸಂಪರ್ಕಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ಶೀಘ್ರದಲ್ಲಿಯೇ ಸಂಪರ್ಕ ಸಾಧ್ಯವಾಗಲಿದೆ ಎಂದು ಶಿವನ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ:  ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಆಗುತ್ತಿದೆ: ಭೂತಾನ್ ಪ್ರಧಾನಿ

    ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಎಲ್ಲಿದೆ ಮತ್ತು ಹೇಗಿದೆ ಎಂಬಿತ್ಯಾದಿಗಳ ವಿಷಯಗಳ ಮಾಹಿತಿ ಸಿಗಲಿದೆ ಎಂದು ಹಲವು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದರು. ಹಿರಿಯ ವಿಜ್ಞಾನಿಯೊಬ್ಬರು, ಮುಂದಿನ ಮೂರು ದಿನಗಳಲ್ಲಿ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಿಗುವ ಸಾಧ್ಯತೆಗಳಿವೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು ಸ್ಥಳ ತಲುಪಲು ಆರ್ಬಿಟರ್ ಗೆ ಮೂರು ದಿನ ಸಮಯ ಬೇಕಾಗುತ್ತದೆ. ಕೊನೆಯ ಕ್ಷಣದಲ್ಲಿ ವಿಕ್ರಮ್ ತನ್ನ ಪಥ ಬದಲಿಸಿದ್ದರಿಂದ ಸಂಪರ್ಕ ಕಡಿತಗೊಂಡಿತು ಎಂದು ವಿವರಿಸಿದ್ದರು.

    ವಿಕ್ರಮ್ ಸಂಪರ್ಕ ಕಡಿತಕ್ಕೆ ಎಕ್ಸ್ಟ್ರಾ ಬ್ರೇಕ್ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆರ್ಬಿಟರ್‍ನಿಂದ ಸಾಫ್ಟ್ ಲ್ಯಾಂಡಿಂಗ್ ಮಾಡುವಾಗ ಎಕ್ಸ್ಟ್ರಾ ಹಾರ್ಡ್ ಥ್ರಸ್ಟರ್ ನಿಂದ ಒತ್ತಡ ಹೆಚ್ಚಾಗಿದೆ. ಹಾಗಾಗಿ, ಸಂಪರ್ಕ ಕಡಿತವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತಡರಾತ್ರಿಯಿಂದ ಬೆಳಗ್ಗೆ 10 ಗಂಟೆಯವರೆಗೆ ಸಂಪರ್ಕ ಸಾಧಿಸಲು ವಿಜ್ಞಾನಿಗಳ ಶತಪ್ರಯತ್ನ 

    ಆರಂಭದಲ್ಲಿ ಥ್ರಸ್ಟರ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿಜ್ಞಾನಿಗಳು ಭಾವಿಸಿದ್ದರು. ಆದರೀಗ, ಡೇಟಾ ಪರಿಶೀಲನೆಯಲ್ಲಿ ಥ್ರಸ್ಟರ್ ಒತ್ತಡ ತಂದಿದೆ ಎನ್ನಲಾಗ್ತಿದೆ. ಚಂದ್ರಯಾನ 2 ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಚಂದ್ರನನ್ನು ಸುತ್ತುತ್ತಿರುವ ಆರ್ಬಿಟರ್ 7 ವರ್ಷಗಳ ಕಾಲ ತನ್ನ ಕೆಲಸ ಮಾಡಲಿದೆ. ಯೋಜನೆ ಶೇ.90 ರಿಂದ 95ರಷ್ಟು ಯಶಸ್ವಿಯಾಗಿದೆ ಅಂತ ಇಸ್ರೋ ಹೇಳಿದೆ.

    ಈ ಮಧ್ಯೆ, ಇಸ್ರೋಗೆ ಅಮೆರಿಕದ ನಾಸಾ ಧೈರ್ಯ ತುಂಬಿದೆ. ಬಾಹ್ಯಾಕಾಶ ಭಾರೀ ಕಷ್ಟಕರ. ಆದರೂ, ಭಾರತದ ಸಾಧನೆ ಏನೂ ಕಡಿಮೆಯಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಯತ್ನವನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಕಾರ್ಯದಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಮುಂಬರುವ ದಿನಗಳಲ್ಲಿ ಒಟ್ಟಾಗಿ ಶ್ರಮಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದು ನಾಸಾ ಟ್ವೀಟ್ ಮಾಡಿದೆ. ಇದನ್ನೂ ಓದಿ:  ರೈತನ ಮಗ ಇಸ್ರೋ ರಾಕೆಟ್ ಮ್ಯಾನ್ ಆದ ಕಥೆ ಓದಿ

    ಚಂದ್ರಯಾನ-2 ಪಯಣ:
    ಶನಿವಾರ ಬೆಳಗಿನ ಜಾವ 1.39ಕ್ಕೆ ಲ್ಯಾಂಡರ್ ಚಂದ್ರನತ್ತ ಇಳಿಯುವ ಕೊನೆಯ ಸಿದ್ಧತೆ ಆರಂಭಗೊಂಡಿತ್ತು. ಇಸ್ರೋ ನಿಗದಿಪಡಿಸಿದ ಪಥದಲ್ಲೇ ಲ್ಯಾಂಡರ್ ಚಲಿಸುತಿತ್ತು. 1.48 ಕೇವಲ 6.ಕಿ.ಮೀ ದೂರದಲ್ಲಿತ್ತು. ಕೊನೆಯ ಹಂತದಲ್ಲಿ ಲ್ಯಾಂಡರ್ ವೇಗೋತ್ಕರ್ಷವನ್ನು ಕಳೆದುಕೊಂಡಿತು. ದೊಡ್ಡ ಪರದೆಯಲ್ಲಿ ಕೆಂಪು ಬಣ್ಣದ ರೇಖೆ ಸಾಗಬೇಕಾದ ದಾರಿ ತೋರಿಸುತ್ತಿದ್ದರೆ ಹಸಿರು ಬಣ್ಣ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣದ ಮೇಲೆಯೇ ಹೋಗುತಿತ್ತು. 1.55ಕ್ಕೆ ಹಸಿರು ಬಣ್ಣದ ಟ್ರಾಜೆಕ್ಟರಿ ರೇಖೆ ಕೆಂಪು ಬಣ್ಣವನ್ನು ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡುತ್ತಿದ್ದ ವಿಜ್ಞಾನಿಗಳು ಆಂತಕಕ್ಕೆ ಒಳಗಾದರು. ಅಲ್ಲಿಯವರೆಗೆ ಸಂಭ್ರಮದಲ್ಲೇ ಇದ್ದ ವಿಜ್ಞಾನಿಗಳು ಲ್ಯಾಂಡರಿನಿಂದ ಬರುತ್ತಿರುವ ಸಿಗ್ನಲ್ ನೋಡಿ ಮುಖದಲ್ಲಿದ್ದ ಸಂಭ್ರಮ ಮರೆಯಾಗಿ ಆತಂಕ ಹೆಚ್ಚಾಯಿತು. ಏನು ನಡೆಯುತ್ತಿದೆ ಎನ್ನುವುದು ಯಾರಿಗೂ ತಿಳಿಯಲಿಲ್ಲ. ಕೊನೆಗೆ 2.17 ಕ್ಕೆ ಇಸ್ರೋ ಅಧ್ಯಕ್ಷ ಶಿವನ್ 2.1 ಕಿ.ಮೀ ದೂರದಲ್ಲಿದ್ದಾಗ ವಿಕ್ರಮ್ ಸಂಪರ್ಕ ಕಡಿತಗೊಂಡಿದೆ ಎಂದು ಬಹಳ ಗದ್ಗದಿತವಾಗಿ ಪ್ರಕಟಿಸಿ, ಸಂಪರ್ಕ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

    ವಿಡಿಯೋ ವೈರಲ್: ಮಂಗಳಯಾನ ಗುರಿ ಮುಟ್ಟದ್ದಕ್ಕೆ  ಬೇಸರದಲ್ಲಿದ್ದ ಶಿವನ್ ಅವರನ್ನು ಪ್ರಧಾನಿ ಮೋದಿ ಸಮಾಧಾನ ಪಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇಸ್ರೋ ಕಚೇರಿಯಿಂದ ಹೊರ ಬರುತ್ತಲೇ ಪ್ರಧಾನಿ ಮೋದಿ ಅವರನ್ನು ನೋಡಿ ಇಸ್ರೋ ಮುಖ್ಯಸ್ಥ ಕೆ.ಶಿವನ್ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಶಿವನ್ ಅವರನ್ನು ಅಪ್ಪಿ ಬೆನ್ನು ತಟ್ಟಿ ಸಮಾಧಾನಪಡಿಸಿದರು. ಇದನ್ನೂ ಓದಿ: ಮೋದಿ ಆಲಂಗಿಸಿ ಕಣ್ಣೀರಿಟ್ಟ ಶಿವನ್

  • ಮೋದಿ ಆಲಂಗಿಸಿ ಕಣ್ಣೀರಿಟ್ಟ ಶಿವನ್

    ಮೋದಿ ಆಲಂಗಿಸಿ ಕಣ್ಣೀರಿಟ್ಟ ಶಿವನ್

    ಬೆಂಗಳೂರು: ಚಂದ್ರಯಾನ-2 ಕೊನೆ ಕ್ಷಣದಲ್ಲಿ ನಿರಾಸೆಯುಂಟು ಮಾಡಿತು. ಇಂದು ಬೆಳಗ್ಗೆ ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು. ಇಸ್ರೋ ಕಚೇರಿಯಿಂದ ಹೊರ ಬರುತ್ತಲೇ ಪ್ರಧಾನಿ ಮೋದಿ ಅವರನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್ ಆಲಂಗಿಸಿ ಕಣ್ಣೀರಿಟ್ಟರು.

    ಕೆ.ಶಿವನ್ ಅವರನ್ನು ಆಲಂಗಿಸಿಕೊಂಡು ಪ್ರಧಾನಿಗಳು ಧೈರ್ಯ ತುಂಬಿದರು. ತಮ್ಮ ಭಾಷಣದಲ್ಲಿಯೂ ವಿಜ್ಞಾನಿಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ ಪ್ರಧಾನಿಗಳು, ಅಮೃತ ಸಂತಾನಕ್ಕೆ ತಡೆ ಇಲ್ಲ. ನೀವು ಪ್ರೇರಣೆಯ ಚಿಲುಮೆಗಳು. ಹಾಗಾಗಿ ಬೆಳ್ಳಂಬೆಳಗ್ಗೆ ನಿಮ್ಮ ದರ್ಶನದ ಮೂಲಕ ಪ್ರೇರಣೆ ಪಡೆಯಲು ನಾನು ಬಂದಿದ್ದೇನೆ ಎಂದು ವಿಜ್ಞಾನಿಗಳಿಗೆ ಧೈರ್ಯ ತುಂಬಿದರು.

    ನಿಮ್ಮ ಕಠಿಣ ಪರಿಶ್ರಮ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇಡೀ ಭಾರತ ನಮ್ಮ ಇಸ್ರೋ ವಿಜ್ಞಾನಿಗಳೊಂದಿಗೆ ಇದೆ. ಅಡೆತಡೆಗಳಿಂದ ನಿಮ್ಮ ಉತ್ಸಾಹ ಹೆಚ್ಚಾಗಿದೆ. ತೊಂದರೆಗಳು ಎದುರಾಗಿವೆ ಎಂದು ಧೃತಿಗಡೆಬಾರದು. ಸತತ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ವಿಫಲತೆಗೆ ಎದೆಗುಂದದೆ, ಗುರಿ ತಲುಪವಲ್ಲಿ ನಮ್ಮ ಕೆಲಸ ಆರಂಭವಾಗಬೇಕಿದೆ. ನೀವು ಮಾಡಿದ್ದನ್ನು, ಇದೂವರೆಗೂ ಯಾರು ಮಾಡಿಲ್ಲ. ನಿನ್ನೆ ರಾತ್ರಿಯೂ ಹೇಳಿದಂತೆ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ಹೇಳಿದರು.

  • ಇಡೀ ಭಾರತ ಇಸ್ರೋ ಜೊತೆಗಿದೆ: ಮೋದಿ

    ಇಡೀ ಭಾರತ ಇಸ್ರೋ ಜೊತೆಗಿದೆ: ಮೋದಿ

    ಬೆಂಗಳೂರು: ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಯೋಜನೆ ಕೊನೆಯ ಹಂತದಲ್ಲಿ ಬೇಸರ ಮೂಡಿಸಿತ್ತು. ಇಂದು ಬೆಳಗ್ಗೆ ಇಸ್ರೋ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳು ಮತ್ತು ದೇಶವನ್ನುದ್ದೇಶಿಸಿ ಮಾತನಾಡಿದರು.

    ಕಳೆದ ಕೆಲವು ದಿನಗಳಿಂದ ಇಸ್ರೋ ವಿಜ್ಞಾನಿಗಳು ನಿದ್ದೆ ಮಾಡಿಲ್ಲ ಎಂದು ಎಲ್ಲರಿಗೂ ಗೊತ್ತು. ಬೆಳಗಿನ ಜಾವ ನಿಮ್ಮ ಮುಖದಲ್ಲಿ ಬೇಸರ ಭಾವ ನೋಡಿದಾಗ ಹೆಚ್ಚು ಕಾಲ ನಾನು ಅಲ್ಲಿ ಉಳಿಯಲಿಲ್ಲ. ದಿಢೀರ್ ಅಂತ ಸಂಪರ್ಕ ಕಡಿತಗೊಂಡಾಗ ನಿಮ್ಮೆಲ್ಲರ ಮುಖದಲ್ಲಿ ನಿರಾಸೆ ಮೂಡಿತು. ನಾನು ನಿಮ್ಮೆಲ್ಲರ ಮನಸ್ಸು ಅರ್ಥ ಮಾಡಿಕೊಂಡಿದ್ದೇನೆ.

    ಇಂದು ನಮಗೆ ಕೊನೆ ಹಂತದಲ್ಲಿ ಸಣ್ಣದೊಂದು ಅಡೆಯುಂಟಾಗಿದೆ. ಚಂದ್ರಯಾನ ಚಂದ್ರನನ್ನ ಅಪ್ಪಿಕೊಳ್ಳುವ ನಮ್ಮ ಇಚ್ಛಾಶಕ್ತಿ ಮತ್ತಷ್ಟು ಪ್ರಬಲಗೊಂಡಿದೆ. ಸಣ್ಣದೊಂದು ಅಡೆ ತಡೆಯಿಂದ ನಾವು ಹಿಂಜರಿಯದೇ ಅದರ ಪರಿಹಾರಕ್ಕಾಗಿ ಮುಂದಿನ ದಿನ ಕೆಲಸ ಮಾಡಬೇಕಿದೆ. ಕವಿಗಳು ಚಂದ್ರನ ಬಗ್ಗೆ ಹಲವು ಕವಿತೆಗಳನ್ನು ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಚಂದ್ರಯಾನದ ಬಗ್ಗೆ ಕವನಗಳನ್ನು ಬರೆಯಲಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ನಮಗೆಲ್ಲರಿಗೂ ಇದೆ. ಚಂದ್ರನನ್ನ ಮುಟ್ಟುವ ಆಸೆ ಇನ್ನಷ್ಟು ಹೆಚ್ಚಾಗಿದೆ ಎಂದರು.

    ನಿಮ್ಮ ಕಠಿಣ ಪರಿಶ್ರಮ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಇಡೀ ಭಾರತ ನಮ್ಮ ಇಸ್ರೋ ವಿಜ್ಞಾನಿಗಳೊಂದಿಗೆ ಇದೆ. ಅಡೆತಡೆಗಳಿಂದ ನಿಮ್ಮ ಉತ್ಸಾಹ ಹೆಚ್ಚಾಗಿದೆ. ತೊಂದರೆಗಳು ಎದುರಾಗಿವೆ ಎಂದು ಧೃತಿಗಡೆಬಾರದು. ಸತತ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ. ವಿಫಲತೆಗೆ ಎದೆಗುಂದದೆ, ಗುರಿ ತಲುಪವಲ್ಲಿ ನಮ್ಮ ಕೆಲಸ ಆರಂಭವಾಗಬೇಕಿದೆ. ನೀವು ಮಾಡಿದ್ದನ್ನು, ಇದೂವರೆಗೂ ಯಾರು ಮಾಡಿಲ್ಲ. ನಿನ್ನೆ ರಾತ್ರಿಯೂ ಹೇಳಿದಂತೆ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ ಎಂದರು.

    ಪ್ರತಿ ಸೋಲು ಹೊಸದೊಂದನ್ನು ಕಲಿಸಿಕೊಡುತ್ತದೆ. ವಿಜ್ಞಾನದಲ್ಲಿ ಎಂದು ವಿಫಲತೆ ಆಗಲ್ಲ. ಎಲ್ಲ ಪ್ರಯೋಗಗಳು ನಮಗೆ ಹೊಸ ವಿಷಯವನ್ನು ಕಲಿಸಿಕೊಡುತ್ತೇವೆ. ಚಂದ್ರಯಾನದ ಕೊನೆಯ ಯಾನ ನಮ್ಮ ಯೋಜನೆಯಂತೆ ನಡೆಯಲಿಲ್ಲ ಎಂದು ನಿರಾಸೆಗೊಳ್ಳಬೇಡಿ. ನಮ್ಮ ಆರ್ಬಿಟರ್ ಚಂದ್ರನ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘರ್ಷ, ಸಂಕಷ್ಟಗಳೇ ಹೊಸ ಅವಿಷ್ಕಾರಕ್ಕೆ ನಾಂದಿಯಾಗಲಿದೆ. ನಿಮ್ಮೆಲ್ಲರ ದಶಕಗಳ ಪರಿಶ್ರಮದಿಂದ ಇಂದು ಸ್ಪೇಸ್ ಸೈನ್ಸ್ ನಲ್ಲಿ ನಾವು ಮೊದಲಿಗರಾಗಿದ್ದೇವೆ. ಚಂದ್ರಯಾನ-2 ಮಿಷನ್ ಕೊನೆ ಹಂತ ಬೇಸರ ತಂದಿರಬಹುದು. ಆದ್ರೆ ನಮ್ಮ ಚಂದ್ರಯಾನದ ಪ್ರಯಾಣ ಅದ್ಧೂರಿಯಾಗಿತ್ತು. ಜ್ಞಾನಕ್ಕಿಂತ ದೊಡ್ಡ ಶಿಕ್ಷಣ ವಿಜ್ಞಾನ. ಮುಂದಿನ ಎಲ್ಲ ಯೋಜನೆಗಳಿಗೆ ಶುಭವಾಗಲಿ ಎಂದು ಪ್ರಧಾನಿಗಳು ಹಾರೈಸಿದರು.

    ನನಗಿಂತ ನಿಮ್ಮ ಸಂಕಲ್ಪ ದೊಡ್ಡದಿದೆ. ಇಂದು ಬೆಳ್ಳಂಬೆಳಗ್ಗೆ ನಿಮ್ಮನ್ನು ನೋಡುವ ಮೂಲಕ ಪ್ರೇರಣೆ ಪಡೆದುಕೊಳ್ಳಲು ಬಂದಿದ್ದೇನೆ. ನಿಮ್ಮೆಲ್ಲರಿಂದ ಪ್ರೇರಣೆ ನಾನು ಮರೆಯಲಾರೆ. ನಿಮ್ಮ ಸಂಕಲ್ಪ, ಕೆಲಸ ಹೀಗೆ ಮುಂದುವರಿಯಲಿ ಎಂದು ಶುಭಕೋರಿದರು.

  • ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

    ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

    ಬೆಂಗಳೂರು: ಚಂದ್ರನ ಮೇಲ್ಮೈ ತಲುಪುವಲ್ಲಿ ಯಶಸ್ವಿಯಾದ ಚಂದ್ರಯಾನ್-2 ನೌಕೆ ಅಲ್ಲಿಂದ ಮಹತ್ವಾಕಾಂಕ್ಷಿ ವಿಕ್ರಮ ಲ್ಯಾಂಡರ್ ನನ್ನು ಚಂದ್ರನ ಮೇಲೆ ಸ್ಪರ್ಶಿಸುವ ಸಂಪರ್ಕ ಕಳೆದುಕೊಂಡಿದೆ. ಕೊನೆ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ನಲ್ಲಿದ್ದ ಸಿಗ್ನಲ್ ಕಡಿತವಾಗಿದೆ. ಈ ಲ್ಯಾಂಡಿಂಗ್ ಆಗುವ ಪ್ರಕ್ರಿಯೆ ಭಾರೀ ಕೌತುಕ, ಕಾತುರ, ಬೆರಗು, ರೋಮಾಂಚನ, ಆತಂಕ, ಹತಾಶೆಯಿಂದ ಕೂಡಿತ್ತು. ಹಾಗಾದರೆ, ರಾತ್ರಿ ಪ್ರಧಾನಿ ಮೋದಿ ಅವರು ಇಸ್ರೋದ ಇಸ್ಟ್ರಾಕ್ ಕೇಂದ್ರ ತಲುಪಿದ ಕ್ಷಣದಿಂದ ಅವರು ಹೊರಗೆ ಬರೋವರೆಗೆ ಏನೆಲ್ಲಾ ಆಯ್ತು ಅನ್ನೋದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

    ವಿಕ್ರಮ್ ಕ್ಷಣಕ್ಷಣದ ಕೌತುಕ
    * 1.23 – ವಿಕ್ರಮ್ ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಣೆಗೆ ಸಕಲ ಸಿದ್ಧತೆ
    * 1.26 – ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ ( ಪೀಣ್ಯದಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಮೋದಿ ಎಂಟ್ರಿ. ಇಸ್ರೋ ಅಧ್ಯಕ್ಷ ಕೆ.ಶಿವನ್ ಹೂ ನೀಡಿ ಸ್ವಾಗತ. ಮಾಜಿ ಅಧ್ಯಕ್ಷರು, ಹಿರಿಯ ವಿಜ್ಞಾನಿಗಳಿಗೆ ಕೈ ಕುಲುಕಿ ತಮ್ಮ ಆಸನದಲ್ಲಿ ಆಸೀನ)
    * 1.37 – ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭ ಯಶಸ್ವಿ
    * 1.43 – ಚಂದ್ರನ ದಕ್ಷಿಣ ಧ್ರುವದತ್ತ ವಿಕ್ರಮ್ ಪ್ರಯಾಣ
    * 1.46 – ಲ್ಯಾಂಡ್ ಆಗುವ ಸ್ಥಳದಿಂದ 70 ಕಿ.ಮೀ. ದೂರದಲ್ಲಿದ್ದ ವಿಕ್ರಮ್
    * 1.50 – ಚಂದ್ರನತ್ತ ವಿಕ್ರಮ್ ಲ್ಯಾಂಡರ್ ಯಶಸ್ವಿ ಪಯಣ – ಇಸ್ರೋ ಕೇಂದ್ರ ಕಚೇರಿಯಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ. ಎಲ್ಲರ ಮುಖದಲ್ಲೂ ಸಂಭ್ರಮಾಚರಣೆ.

    * 1.52 – ವಿಕ್ರಮ್ ಲ್ಯಾಂಡರ್ ನ ವೇಗ ತಗ್ಗಿಸುವ ಕೆಲಸ ( 1.52ಕ್ಕೆ ಸರಿಯಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಿತ್ತು)
    * 1.57 – ವಿಕ್ರಮ್ ಲ್ಯಾಂಡ್ ಆಯ್ತಾ ಇಲ್ವಾ ಅಂತ ವಿಜ್ಞಾನಿಗಳಲ್ಲಿ ಆತಂಕ
    * 2.02 – ಮಾನಿಟರಿಂಗ್ ರೂಮ್‍ನಿಂದ ಹೊರ ಬಂದ ಪ್ರಧಾನಿ
    * 2.04 – ಲ್ಯಾಂಡರ್ ನಿಂದ ಇಸ್ರೋಗೆ ಸಿಗದ ಸಿಗ್ನಲ್
    * 2.07 – ಚಂದ್ರನ ಮೇಲ್ಮೈನಲ್ಲಿ 2.1 ಕಿ.ಮೀ.ನಲ್ಲಿ ಮಿಷನ್ ಕಂಟ್ರೋಲ್ & ವಿಕ್ರಮ್ ಲ್ಯಾಂಡರ್ ನಡುವಿನ ಸಂಪರ್ಕ ಕಡಿತ
    * 2.10 – ಆರ್ಬಿಟರ್ ನೊಂದಿಗೆ ಸಂವಹನ ಸಂಪರ್ಕ ಯಥಾಸ್ಥಿತಿ. ಆದರೆ ವಿಕ್ರಮ ಸಂಪರ್ಕ ಕಡಿತ
    * 2.17 – ಕೊನೆ ಕ್ಷಣದಲ್ಲಿ ವಿಕ್ರಮ್ ಸಂಪರ್ಕ ಕಡಿತ ಅಂತ ಇಸ್ರೋ ಅಧ್ಯಕ್ಷ ಶಿವನ್ ಹೇಳಿಕೆ
    * 2.22 – ಸಾಧನೆ ಸಣ್ಣದಲ್ಲ. ಧೃತಿಗೆಡಬೇಡಿ ಅಂತ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ
    * 3.15 – ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಿಕ್ಕಿಲ್ಲ. ಡೇಟಾ ವಿಶ್ಲೇಷಣೆ ನಡೀತಿದೆ ಎಂದ ಇಸ್ರೋ
    * 3.31 – ಚಂದ್ರಯಾನ-2 ಯೋಜನೆಯ ಫಲಿತಾಂಶ ಸದ್ಯಕ್ಕೆ ತಡೆ

    ಮೊದಲ ಹಂತದ ಪ್ರಕ್ರಿಯೆಗಳೂ ಯಶಸ್ವಿಯಾಗಿತ್ತು. ಬರೋಬ್ಬರಿ 47 ದಿನಗಳ ನಂತರ ಮುಂಜಾನೆ 1 ಗಂಟೆ 37 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲ್ಮೈನತ್ತ ಲ್ಯಾಂಡರ್ ತನ್ನ ಪಯಣ ಆರಂಭಿಸಿತ್ತು. ಈ ಘಟ್ಟ ಅತ್ಯಂತ ಸೂಕ್ಷ್ಮ ಘಟ್ಟ ಎಂಬುದಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದರು. ಹೀಗಿದ್ದರೂ ಲ್ಯಾಂಡರ್ ಚಂದ್ರನತ್ತ ಯೋಜನೆಯಂತೆ ತನ್ನ ಚಲನೆ ಆರಂಭಿಸಿದ್ದರಿಂದ ಇಸ್ರೋ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು.

    ಲ್ಯಾಂಡರ್ ನಲ್ಲಿದ್ದ ಎಂಜಿನ್‍ಗಳನ್ನು ಚಾಲನೆಗೊಳಿಸಿ, ಅದರ ವೇಗವನ್ನೂ ಹಂತ ಹಂತವಾಗಿ ಯಶಸ್ವಿಯಾಗಿ ತಗ್ಗಿಸಲಾಗಿತ್ತು. ಆದರೆ ಇನ್ನೇನು ಚಂದ್ರನ ಮೇಲ್ಮೈನ್ನು ತಲುಪಲು ಕೇವಲ 2.1 ಕಿಲೋ ಮೀಟರ್ ಇದೆ ಎನ್ನುವಾಗ ಲ್ಯಾಂಡರ್ ಇಸ್ರೋದ ಸಂಪರ್ಕ ಕಡಿದುಕೊಂಡಿತು. ಸ್ವಲ್ಪ ಹೊತ್ತು ಏನಾಗುತ್ತಿದೆ ಎಂಬುದೇ ಇಸ್ರೋ ಕಚೇರಿಯಲ್ಲಿದ್ದವರಿಗೆ ತಿಳಿಯದಾಯಿತು. ಇಸ್ರೋ ಕಚೇರಿಯಲ್ಲಿದ್ದ ಪ್ರಧಾನಿ, ವಿಜ್ಞಾನಿಗಳ ಮುಖದಲ್ಲಿ ದುಗುಡ, ಆತಂಕದ ಕ್ಷಣಗಳು ಎದ್ದು ಕಾಣಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಬೇಸರದಿಂದ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಬಂದ ಅಧ್ಯಕ್ಷ ಕೆ. ಶಿವನ್ ನಡೆದುದನ್ನು ವಿವರಿಸಿ, ಸಿಕ್ಕಿರುವ ಮಾಹಿತಿಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ ಎಂದರು.