Tag: ವಿಕಲಚೇತನರು

  • ಗರ್ಭಿಣಿಯರು, ವಿಕಲಚೇತನರು ಮನೆಯಿಂದ್ಲೇ ಸರ್ಕಾರಿ ಕೆಲಸ ಮಾಡ್ಬೋದು: ಜಿತೇಂದ್ರ ಸಿಂಗ್

    ಗರ್ಭಿಣಿಯರು, ವಿಕಲಚೇತನರು ಮನೆಯಿಂದ್ಲೇ ಸರ್ಕಾರಿ ಕೆಲಸ ಮಾಡ್ಬೋದು: ಜಿತೇಂದ್ರ ಸಿಂಗ್

    ನವದೆಹಲಿ: ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ಗರ್ಭಿಣಿಯರು ಮತ್ತು ‘ದಿವ್ಯಾಂಗ್’ (ವಿಕಲಚೇತನ) ಉದ್ಯೋಗಿಗಳು ಇನ್ನೂ ಮುಂದೆ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬಹುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರು.

    ಧಾರಕ ವಲಯವನ್ನು ಡಿ-ನೋಟಿಫೈ ಮಾಡುವವರೆಗೆ ಕೋವಿಡ್ ಕಂಟೈನ್‍ಮೆಂಟ್ ವಲಯದಲ್ಲಿ ವಾಸಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ. ಅಧೀನ ಕಾರ್ಯದರ್ಶಿ ಮಟ್ಟಕ್ಕಿಂತ ಕೆಳಗಿರುವ ಸರ್ಕಾರಿ ನೌಕರರ ದೈಹಿಕ ಹಾಜರಾತಿಯನ್ನು 50% ಕ್ಕೆ ನಿರ್ಬಂಧಿಸಲಾಗಿದೆ. ಉಳಿದ 50% ರಷ್ಟು ಜನರು ಮನೆಯಿಂದಲೇ ಕೆಲಸ ಮಾಡುತ್ತಾರೆ ಎಂದು ಸಿಬ್ಬಂದಿ ಸಚಿವಾಲಯ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ನೀವು ಸರಿಯಾಗಿ ಮಾಸ್ಕ್ ಧರಿಸಿದ್ರೆ ಲಾಕ್‍ಡೌನ್ ಮಾಡಲ್ಲ: ಅರವಿಂದ್ ಕೇಜ್ರಿವಾಲ್

    ಈ ಕುರಿತು ಮಾಹಿತಿ ನೀಡಿದ ಸಿಂಗ್ ಅವರು, ಭಾರತದಲ್ಲಿ ಕೋವಿಡ್ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿಯರು ಮತ್ತು ‘ದಿವ್ಯಾಂಗ್’ (ವಿಕಲಚೇತನ) ಉದ್ಯೋಗಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ. ಅವರು ಮನೆಯಿಂದಲೇ ಕೆಲಸ ಮಾಡಬಹುದು ಎಂದು ತಿಳಿಸಿದರು.

    ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ರೋಸ್ಟರ್‍ಗಳನ್ನು ಸಿದ್ಧಪಡಿಸಲಾಗುವುದು. ಕಚೇರಿಗೆ ಹಾಜರಾಗದ ಮತ್ತು ಮನೆಯಿಂದಲೇ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವಾಗಲೂ ದೂರವಾಣಿ ಮತ್ತು ಇತರ ಎಲೆಕ್ಟ್ರಾನಿಕ್ ಸಂವಹನಗಳ ಮೂಲಕ ಲಭ್ಯವಿರುತ್ತಾರೆ ಎಂದು ಹೇಳಿದರು.

    ದೆಹಲಿಯಲ್ಲಿ ನಿನ್ನೆ ಕೋವಿಡ್‍ನಿಂದಾಗಿ ಏಳು ಸಾವುಗಳು ಮತ್ತು 20,181 ಹೊಸ ಪ್ರಕರಣಗಳು ದಾಖಲಾಗಿದೆ. ಪಾಸಿಟಿವ್ ಪ್ರಮಾಣವು 19.60 ಪ್ರತಿಶತಕ್ಕೆ ಏರಿದೆ. ನವೀಕರಿಸಿದ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇಂದು ದೆಹಲಿಯಲ್ಲಿ ಒಂದೇ ದಿನದಲ್ಲಿ 1,59,632 ಪ್ರಕರಣಗಳು ಮತ್ತು 327 ಸಾವುಗಳು ಸಂಭವಿಸಿವೆ ಎಂದು ಆತಂಕ ವ್ಯಕ್ತಪಡಿಸಿದರು.

    ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಆದೇಶವನ್ನು ಹೊರಡಿಸಿದೆ. ಇದರ ಪ್ರಕಾರ ಸಾಧ್ಯವಾದಷ್ಟು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಧಿಕೃತ ಸಭೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

    ಕಚೇರಿ ಆವರಣದಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಸಮಯ ಪಾಲನೆ ಮಾಡಬೇಕು. ಆಗಾಗ್ಗೆ ಕೈ ತೊಳೆಯುವುದು, ಸ್ವಚ್ಫವಾಗಿರುವುದು, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಟೈರ್ ಕೆಳಗೆ ಸಿಕ್ಕ ನೋಟ್ ತೆಗೆದುಕೊಳ್ಳಲು ವ್ಯಕ್ತಿ ಸರ್ಕಸ್

    ಡಿಒಪಿಟಿ ಆದೇಶದ ಪ್ರಕಾರ, ಪ್ರಸ್ತುತ ಹೊರಡಿಸಲಾದ ಮಾರ್ಗಸೂಚಿಗಳು ಜನವರಿ 31 ರವರೆಗೆ ಜಾರಿಯಲ್ಲಿರುತ್ತವೆ ಎಂದು ಹೇಳಿದರು.

  • ಉತ್ತರ ಕನ್ನಡ ಜಿಲ್ಲೆಯಲ್ಲಿ 6,241 ವಿಕಲಚೇತನರಿಗೆ ಲಸಿಕೆ

    ಉತ್ತರ ಕನ್ನಡ ಜಿಲ್ಲೆಯಲ್ಲಿ 6,241 ವಿಕಲಚೇತನರಿಗೆ ಲಸಿಕೆ

    ಕಾರವಾರ: ಇಂದು ನಡೆದ ವಿಕಲಚೇತನರಿಗೆ ಕೋವಿಡ್ ಲಸಿಕಾ ಅಭಿಯಾನದಲ್ಲಿ ಇಂದು 18 ರಿಂದ 44 ವರ್ಷದವರೆಗಿನ ಹಾಗೂ 45 ವರ್ಷ ಮೇಲ್ಪಟ್ಟ ವಿಕಲಚೇತನರಲ್ಲಿ 4871 ವಿಕಲಚೇತನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.

    ವಿಕಲಚೇತನರಿಗೆ ಲಸಿಕೆ ಹಾಕಿಕೊಳ್ಳಲು ತೊಂದರೆ ಉಂಟಾಗದಂತೆ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಕಲಚೇತನರಿಗೆ ಎರಡು ವಾಹನದ ವ್ಯವಸ್ಥೆಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮಾಡಿತ್ತು. ಅಂಗವಿಕಲರು ಲಸಿಕೆ ಪಡೆಯಲು ಸಹಾಯ ಬಯಸಿದ್ದಲ್ಲಿ ಮನೆಯಿಂದ ವಾಹನದ ಮೇಲೆ ತಂದು ಲಸಿಕೆ ನೀಡಲಾಯಿತು. ಇನ್ನು ಹಲವರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಂಡರು.

    ಇಂದು ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 18 ರಿಂದ 44 ವರ್ಷ ಒಳಗಿನ 3,452 ವಿಕಲಚೇತನರು ಲಸಿಕೆ ಪಡೆದರು. ಇನ್ನು 44 ವರ್ಷ ಮೇಲ್ಪಟ್ಟ 2,789 ವಿಕಲಚೇತನರರು ಕೋವಿಡ್ ಲಸಿಕೆ ಪಡೆದುಕೊಂಡರು. ಕುಮಟಾ ತಾಲೂಕಿನ ತೊರ್ಕೆ ಗ್ರಾಮದಲ್ಲಿ ಶೇಕಡಾ 95 ಅಂಗವಿಕಲರು ಲಸಿಕೆ ಪಡೆದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13,354 ವಿಕಲಚೇತನರಲ್ಲಿ 6,241 ವಿಕಲಚೇತನರು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

    ಇಂದು ಜಿಲ್ಲೆಯಲ್ಲಿ ವಿಕಲಚೇತನರಿಗೆ ಕೋವಿಡ್ ಲಸಿಕೆ ನೀಡುವ ಮಹಾ ಅಭಿಯಾನ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಮಹಾ ಅಭಿಯಾನದಲ್ಲಿ ಲಸಿಕೆ ಪಡೆಯದೇ ಇರುವ ವಿಕಲಚೇತನರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ ಹೇಳಿದ್ದಾರೆ.

  • ವಿಕಲಚೇತನರಿಗೆ ತ್ರಿಚಕ್ರ ವಾಹನದ ಸಂದರ್ಶನ-ಬೀಗ ಹಾಕೊಂಡು ಹೋದ ಅಧಿಕಾರಿ

    ವಿಕಲಚೇತನರಿಗೆ ತ್ರಿಚಕ್ರ ವಾಹನದ ಸಂದರ್ಶನ-ಬೀಗ ಹಾಕೊಂಡು ಹೋದ ಅಧಿಕಾರಿ

    ಧಾರವಾಡ: ವಿಕಲಚೇತನರಿಗೆ ತ್ರಿಚಕ್ರ ವಾಹನ ನೀಡುವ ಸಂದರ್ಶನಕ್ಕೆ ಕರೆದ ಅಧಿಕಾರಿಗಳು, ಸಂರ್ದಶನ ಅರ್ಧಕ್ಕೆ ಮುಗಿಸಿ ಕಚೇರಿಗೆ ಬೀಗ ಹಾಕಿ ಹೊರಟು ಹೋದ ಘಟನೆ ಧಾರವಾಡದಲ್ಲಿ ನಡೆದಿದೆ.

    ನಗರದ ಮಿನಿ ವಿಧಾನಸೌಧದಲ್ಲಿರುವ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳೇ ಈ ಎಡವಟ್ಟು ಮಾಡಿದ್ದಾರೆ. ಜಿಲ್ಲೆಯ ಹಲವು ವಿಕಲಚೇತನರಿಗೆ ಶುಕ್ರವಾರ ತ್ರಿಚಕ್ರ ವಾಹನ ನೀಡುವ ಉದ್ದೇಶದಿಂದ ಸಂದರ್ಶನ ಕರೆಯಲಾಗಿತ್ತು. ಇದಕ್ಕಾಗಿ ಜಿಲ್ಲೆಯ 25 ಕ್ಕೂ ಹೆಚ್ಚು ವಿಕಲಚೇತನರು ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ 12 ಗಂಟೆಗೆ ಕಚೇರಿ ತೆಗೆದ ಅಧಿಕಾರಿಗಳು, ಎಸ್‍ಸಿ ಎಸ್‍ಟಿ ಹಾಗೂ ಅಲ್ಪಸಂಖ್ಯಾತರ ಸಂದರ್ಶನ ಮುಗಿಸಿ ಕಚೇರಿಗೆ ಬೀಗ ಹಾಕಿದ್ದಾರೆ.

    ಉಳಿದ ವಿಕಲಚೇತನರು ಅಧಿಕಾರಿಗಳಿಗಾಗಿ ಕಾಯುತ್ತ ಕುಳಿತರೂ ಅವರು ಆಗಮಿಸಲೇ ಇಲ್ಲ. ಇದರಿಂದ ಆಕ್ರೋಶಗೊಂಡ ಎಲ್ಲರೂ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ನಡೆದಾಡಲು ಬಾರದೆ ಇರುವ ಈ ಎಲ್ಲರೂ ಅಧಿಕಾರಿಗಳು ಬರುವಿಕೆಗೆ ಕಾಯುತ್ತ ಕುಳಿತರೂ ಅಧಿಕಾರಿಗಳು ಮಾತ್ರ ಮತ್ತೇ ಬರಲೇ ಇಲ್ಲ. ಕಳೆದ 4 ಬಾರಿ ಅರ್ಜಿ ಹಾಕಿದ್ದ ಜಿಲ್ಲೆಯ ಶಿರೂರ ಗ್ರಾಮದ ವೀರಭದ್ರಪ್ಪ ಕಮ್ಮಾರ ಎಂಬ ವಿಕಲಚೇತನ ವ್ಯಕ್ತಿ ಈ ಬಾರಿಯಾದ್ರೂ ನನಗೆ ತ್ರಿಚಕ್ರ ವಾಹನ ಸಿಗಬಹುದು ಎಂದು ಆಸೆಯಿಂದಲೇ ಬಂದಿದ್ದರು. ಅಧಿಕಾರಿಗಳ ಬೇಜಾವಾಬ್ದಾರಿಯಿಂದ ವಾಪಸ್ಸಾಗುವ ಮಾತನ್ನ ಹೇಳಿದರು.

    ವಿಶ್ವನಾಥ್ ಎಂಬವರು ಸಹ ಇದೇ ರೀತಿ ವಾಹನದ ಆಸೆಯಿಂದ ಬಂದಿದ್ದರು. ಇದಲ್ಲದೇ ಹಲವು ಯುವತಿಯರು ಸಹ ಸಂದರ್ಶನಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಅವರಿಗೆ ವಾಹನದ ಸಂದರ್ಶನ ಮಾಡದೇ ಇರುವದು ಅಲ್ಲಿರುವ ಹಲವು ಜನರಿಗೆ ಕೂಡಾ ಬೇಸರ ತರಿಸಿತು.

  • ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಮಂಗಳೂರು: ಬಲಿಷ್ಠರ ಆಟವೆಂದೇ ಹೆಸರು ಗಳಿಸಿರುವ ಕಬಡ್ಡಿಯನ್ನು ಈಗ ವಿಕಲ ಚೇತನರೂ ಆಡಲಾರಂಭಿಸಿದ್ದು, ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡ ಪ್ರಶಸ್ತಿಯನ್ನು ಗೆದ್ದಿದೆ.

    ಒಂದು ಕೈ ಊನ ಇದ್ದವರು, ಕೈ ಅರ್ಧಕ್ಕೆ ಕಳಕೊಂಡವರು, ಒಂದು ಕಾಲು ಸಪೂರ ಇದ್ದವರು, ಒಂದು ಕಾಲೇ ಇಲ್ಲದವರು ಹೀಗೆ ನಾನಾ ತೆರನಾದ ದೈಹಿಕ ಊನವುಳ್ಳವರು ನಿರಾಯಾಸವಾಗಿ ಕಬಡ್ಡಿ ರೈಡ್ ಮಾಡ್ತಿರೋದನ್ನು ನೋಡಿದರೆ ಅಚ್ಚರಿಯಾಗುತ್ತೆ. ಆದ್ರೆ ದೈಹಿಕ ಬಲ ಮತ್ತು ಯುಕ್ತಿಯಿಂದಲೇ ಆಡೋ ಕಬಡ್ಡಿ ಆಟವನ್ನು ವಿಕಲಚೇತನರು, ತಾವು ಇತರೇ ಆಟಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಅನ್ನುವಂತೆ ಆಡಿ ತೋರಿಸಿದ್ದಾರೆ.

    ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ 12 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ವಿಪರ್ಯಾಸ ಅಂದರೆ, ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಕೂಟ ನಡೆಯುತ್ತಿದ್ದರೂ ಪ್ರಚಾರ ಇಲ್ಲದ ಕಾರಣ ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದರು.

    ವಿಕಲಚೇತನರು ಎಂದರೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಆದರೆ ಸಾಧಿಸಬೇಕೆಂಬ ಛಲವೊಂದಿದ್ದರೆ ಎಂತವರೂ ಏನನ್ನಾದರೂ ಸಾಧಿಸಬಹುದು ಅನ್ನೋದನ್ನ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ್ದ ವಿಕಲಚೇತನರು ತೋರಿಸಿಕೊಟ್ಟಿದ್ದಾರೆ. ದೈಹಿಕವಾಗಿ ಬಲಿಷ್ಠರಾಗಿರುವರು ಆಡುವ ಪ್ರೋ ಕಬಡ್ಡಿಯನ್ನು ನೋಡೋರು, ಅಂಗವೈಕಲ್ಯತೆ ಇರುವವರು ತಾವೇನೂ ಕಮ್ಮಿಯಿಲ್ಲ ಎಂದು ಕಬಡ್ಡಿ ಆಡಿ ದೇಶಕ್ಕೆ ಚಾಂಪಿಯನ್ ಆಗಿದ್ದಾರೆ.

    ಸಾಮಾನ್ಯವಾಗಿ ಅಂಗ ವಿಕಲಚೇತರೆಂದರೆ ವೀಲ್ ಚೇರ್ ಕೊಟ್ಟು ಬದಿಗಿರಿಸುತ್ತಾರೆ. ಆದರೆ, ಅವರಲ್ಲೂ ಆಡೋ ಹುಮ್ಮಸ್ಸು ಇರುತ್ತೆ ಅನ್ನುವುದನ್ನು ಯಾರೂ ಮನಗಾಣುವುದಿಲ್ಲ. ಪ್ಯಾರಾ ಒಲಿಂಪಿಕ್ಸ್ ಅನ್ನುವ ಪ್ರತ್ಯೇಕ ವಿಭಾಗ ಇದ್ದರೂ, ಕಬಡ್ಡಿ ಆಡಿಸಿ ನೋಡಿದ್ದಿಲ್ಲ. ಆದರೆ ಬಾಗಲಕೋಟೆ, ವಿಜಾಪುರ, ಕೊಪ್ಪಳದಂತಹ ಹಳ್ಳಿ ಹುಡುಗರೇ ಕರ್ನಾಟಕ ತಂಡದಲ್ಲಿದ್ದು ಇದೇ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ವಿಕಲ ಚೇತನರ ಕಬಡ್ಡಿ ಪಂದ್ಯಾವಳಿಯ ಫೈನಲಿನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.

    ಇಷ್ಟಕ್ಕೂ ಕರ್ನಾಟಕ ತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಕೋಚ್  ಶೇಖರ್ ಗೆ ಸಲ್ಲುತ್ತದೆ. ದೈಹಿಕ ಊನ ಇದ್ದವರನ್ನು ಸ್ಫೂರ್ತಿ ಕೊಟ್ಟು 18 ವರ್ಷಗಳ ಹಿಂದೆ ತಂಡ ಕಟ್ಟಿದ ಶೇಖರ್ ಸದ್ಯ ತಂಡದ ಕೋಚ್ ಆಗಿದ್ದಾರೆ. ಬಲಿಷ್ಠರ ಕ್ರೀಡೆಗೆ ವಿಕಲ ಚೇತನರ ಎಂಟ್ರಿಯಾಗಿದ್ದಾರೆ. ಸಮಾಜ ಹಾಗೂ ಸರ್ಕಾರದ ಕಡೆಯಿಂದ ಸಹಕಾರ ಸಿಕ್ಕರೆ ಇಂಥವರೂ ರಾಷ್ಟ್ರ ಮಟ್ಟದಲ್ಲಿ ಮಿಂಚಬಲ್ಲರು ಅನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಸಾಧಿಸಬೇಕೆಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋದನ್ನು ಈ ಸಾಹಸಿಗರು ನಾಡಿಗೆ ತೋರಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv