Tag: ವಿಂಡೀಸ್

  • ಕ್ಯಾಚ್‍ನ್ನು ಒಂದೇ ಕೈಯಲ್ಲಿ ಹಿಡಿದು ಗಮನಸೆಳೆದ ಡಾಟಿನ್

    ಕ್ಯಾಚ್‍ನ್ನು ಒಂದೇ ಕೈಯಲ್ಲಿ ಹಿಡಿದು ಗಮನಸೆಳೆದ ಡಾಟಿನ್

    ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ವೆಸ್ಟ್‌ ಇಂಡೀಸ್ ಸೋಲಿಸಿದೆ.

    ವಿಂಡೀಸ್ ನೀಡಿದ 226 ರನ್‍ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 47.4 ಓವರ್ ಗಳಲ್ಲಿ 218 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಕೊನೆಯ 18 ಎಸೆತಗಳಲ್ಲಿ 9 ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ. ಮತ್ತೊಂದೆಡೆ ಸತತ ಎರಡು ಗೆಲುವು ದಾಖಲಿಸುವ ಮೂಲಕ ವೆಸ್ಟ್ ಇಂಡೀಸ್ ವನಿತೆಯರು ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಈ ಗೆಲುವಿನಲ್ಲಿ ಎಲ್ಲರನ್ನೂ ಗಮನಸೆಳೆದಿದ್ದು, ವಿಂಡೀಸ್ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಹಿಡಿದ ಅದ್ಭುತ ಕ್ಯಾಚ್.

    ಇಂಗ್ಲೆಂಡ್ ಇನಿಂಗ್ಸ್‍ನ 9ನೇ ಓವರ್‍ನಲ್ಲಿ ಶ್ಯಾಮಿಲಿಯಾ ಅವರ ಮೊದಲ ಎಸೆತವನ್ನು ವಿನ್‍ಫೀಲ್ಡ್ ಹಿಲ್ ಬ್ಯಾಕ್‍ವರ್ಡ್ ಪಾಯಿಂಟ್ ಕಡೆಗೆ ಕಟ್ ಮಾಡಿದರು. ವಿಂಡೀಸ್ ಪರ ಡಿಯಾಂಡ್ರಾ ಡಾಟಿನ್ ಅದೇ ಭಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ತಕ್ಷಣವೇ ಜಿಗಿಯುವ ಮೂಲಕ ಗಾಳಿಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನೂ ಚಕಿತಗೊಳಿಸಿದರು. ಡಿಯಾಂಡ್ರಾ ಡಾಟಿನ್ ಅವರ ಈ ಅತ್ಯಾದ್ಭುತ ಕ್ಯಾಚ್ ವೀಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಡಾಟಿನ್ ಅವರ ಈ ಕ್ಯಾಚ್‍ಗೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

    ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್‍ಗೆ 225 ರನ್ ಗಳಿಸಿತು. ವಿಂಡೀಸ್ ಪರ ವಿಕೆಟ್‍ಕೀಪರ್ ಶೆಮನ್ ಕ್ಯಾಂಪ್‍ಬೆಲ್ ಅವರು 66 ರನ್‍ಗಳನ್ನು ಬಾರಿಸಿ ಮಿಂಚಿದರೆ, ಚಾಡೆನ್ ನೇಷನ್ 49 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ್ತಿ ಹೀಲಿ ಮ್ಯಾಥ್ಯೂಸ್ 45 ರನ್ ಗಳಿಸಿದರೆ, ಡಾಟಿನ್ 31 ರನ್ ಗಳಿಸಿದ್ದರು. ಇಂಗ್ಲೆಂಡ್ ಪರ ಎಕ್ಲೆಸ್ಟೋನ್ 3 ವಿಕೆಟ್ ಪಡೆದಿದ್ದರು.

    226 ರನ್‍ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 218 ರನ್‍ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಟಮ್ಮಿ ಬ್ಯೂಮಾಂಟ್ 76 ಎಸೆತಗಳಲ್ಲಿ 46 ರನ್ ಗಳಿಸಿದರೆ, ಸೋಫಿಯಾ ಡಂಕ್ಲಿ 35 ಎಸೆತಗಳಲ್ಲಿ 38 ರನ್ ಗಳಿಸಿದರು. ಡೇನಿಯಲ್ ವೇಟ್ 33 ರನ್ ಗಳ ಕೊಡುಗೆ ನೀಡಿದರು. ಸೋಫಿ ಎಕ್ಲೆಸ್ಟೋನ್ 33 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ಶ್ಯಾಮಿಲಿಯಾ ಕಾನೆಲ್ ಮೂರು ವಿಕೆಟ್ ಪಡೆದರೆ, ಮ್ಯಾಥ್ಯೂಸ್ ಮತ್ತು ಅನಿಸಾ ಮೊಹಮ್ಮದ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.