Tag: ವಿಂಗ್ ಕಮಾಂಡರ್ ಅಭಿನಂದನ್

  • ಪುಲ್ವಾಮಾ ದಾಳಿಗೆ ಪ್ರತೀಕಾರ – ಏರ್‌ಸ್ಟ್ರೈಕ್‌ಗೆ ಒಂದು ವರ್ಷ

    ಪುಲ್ವಾಮಾ ದಾಳಿಗೆ ಪ್ರತೀಕಾರ – ಏರ್‌ಸ್ಟ್ರೈಕ್‌ಗೆ ಒಂದು ವರ್ಷ

    ನವದೆಹಲಿ: ಪಾಕಿಸ್ತಾನದ ಬಾಲಕೋಟ್‍ನಲ್ಲಿ ಏರ್‌ಸ್ಟ್ರೈಕ್‌ ನಡೆಸಿ ಇಂದಿಗೆ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ವಾಹನದ ಮೇಲೆ ಪಾಕ್ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿತ್ತು. ಇದನ್ನೂ ಓದಿ: ಬಾಲಾಕೋಟ್ ಏರ್ ಸ್ಟ್ರೈಕ್‍ನಲ್ಲಿ ನೂರಕ್ಕೂ ಅಧಿಕ ಉಗ್ರರು ಬಲಿ – ಮೃತದೇಹವನ್ನು ನದಿಗೆ ಎಸೆದಿದ್ದ ಪಾಕ್

    ಪುಲ್ವಾಮಾ ದಾಳಿ ನಡೆದ 12ನೇ ದಿನಕ್ಕೆ ಪಾಕ್‍ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿದ ಭಾರತ ಕಳೆದ ವರ್ಷ ಇದೇ ದಿನ ನಸುಕಿನ ಜಾವ, ಬಾಲಾಕೋಟ್‍ನಲ್ಲಿದ್ದ ಜೈಷ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ್ದ 12 ಮಿರಾಜ್-2000 ಯುದ್ಧ ವಿಮಾನಗಳು ಜೈಷ್‍ನ ತರಬೇತಿ ಕೇಂದ್ರಗಳ ಮೇಲೆ ಅತ್ಯಾಧುನಿಕ ಬಾಂಬ್‍ಗಳನ್ನು ಹಾಕಿ ಸಂಪೂರ್ಣ ನಾಶ ಮಾಡಿದ್ದವು. ನಸುಕಿನ ಜಾವ 3.30ರಿಂದ 3.55ರ ಅವಧಿಯಲ್ಲಿ ನಡೆದ ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದು ಹಾಕಲಾಗಿತ್ತು. ಆದರೆ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಚ್ಚಿಕೊಳ್ಳಲು ದಾಳಿಯನ್ನು ಅಲ್ಲಗಳೆದಿತ್ತು. ಯಾವುದೇ ದಾಳಿಗಳು ನಡೆದಿಲ್ಲ ಎಂದು ಹೇಳಿಕೊಂಡಿತ್ತು. ಇದಾದ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಕೆಲ ದಿನಗಳ ಕಾಲ ಯುದ್ಧದ ಕಾರ್ಮೋಡ ನಿರ್ಮಾಣವಾಗಿತ್ತು. ಇದನ್ನೂ ಓದಿ: ಭಾರತಕ್ಕಿಂದು ಕರಾಳ ದಿನ – ಪುಲ್ವಾಮಾ ದಾಳಿಗೆ 1 ವರ್ಷ

    ಬಾಲಕೋಟ್ ದಾಳಿಗೆ ಪ್ರತಿಯಾಗಿ ಪಾಕ್ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್‍ನ ವಿಮಾನಗಳು ಭಾರತ ಗಡಿದಾಟಿ ಒಳಗೆ ಬಂದಿದ್ದವು. ತಕ್ಷಣ ಭಾರತದ ಕಡೆಯಿಂದ ಮಿಗ್-21 ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು. ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್, ಪಾಕ್‍ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನ ಅಪಘಾಕ್ಕೀಡಾಗಿತ್ತು. ನಂತರ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿತು. ಇದನ್ನೂ ಓದಿ: ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

  • ನಾವೆಲ್ಲಾ ಡಮ್ಮಿ, ವಿಂಗ್ ಕಮಾಂಡರ್ ಅಭಿನಂದನ್ ರಿಯಲ್ ಹೀರೋ: ದರ್ಶನ್

    ನಾವೆಲ್ಲಾ ಡಮ್ಮಿ, ವಿಂಗ್ ಕಮಾಂಡರ್ ಅಭಿನಂದನ್ ರಿಯಲ್ ಹೀರೋ: ದರ್ಶನ್

    ಮೈಸೂರು: ವಿಂಗ್ ಕಮಾಂಡರ್ ಅಭಿನಂದನ್ ಅವರು ರಿಯಲ್ ಹೀರೋ, ನಾವೆಲ್ಲಾ ಡಮ್ಮಿ ಎಂದು ಮೈಸೂರಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಮೈಸೂರಿನಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿರುವ ನಟ ದರ್ಶನ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ವಿಂಗ್ ಕಮಾಂಡರ್ ಅಭಿನಂದನ್ ಅವರು ರಿಯಲ್ ಹೀರೋ, ನಾವೆಲ್ಲಾ ಡಮ್ಮಿ. ಇನ್ನೊಬ್ಬರ ನೆಲದಲ್ಲಿ ನಿಂತು ಅಷ್ಟು ಧೈರ್ಯವಾಗಿರುವ ಅವರ ಗಟ್ಸ್ ಗ್ರೇಟ್ ಹಾಗೂ ಅವರಿಗೆ ಹ್ಯಾಟ್ಸಾಫ್ ಹೇಳುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.

    ಇದಾದ ಬಳಿಕ ಛಾಯಾಚಿತ್ರದ ಪ್ರದರ್ಶನದ ಬಗ್ಗೆ ಮಾತನಾಡಿದ ದರ್ಶನ್ ಅವರು ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದರು.

    ನನಗೆ ಛಾಯಾಚಿತ್ರದ ಬಗ್ಗೆ ಅರಿವೇ ಇರಲಿಲ್ಲ. ನನ್ನ ಸ್ನೇಹಿತರು ಇದರ ಹುಚ್ಚು ಹಿಡಿಸಿದರು. ಬಳಿಕ ನಾನು ಕಬಿನಿ, ಕೇರಳ ಸೇರಿದಂತೆ ಹಲವೆಡೆ ಓಡಾಡಿ ಈ ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಕಾಡಿನಲ್ಲಿ ಪ್ರಾಣಿಗಳನ್ನು ನೋಡುವುದೇ ಒಂದು ಚಾಲೆಂಜ್. ಆ ಅನುಭವದ ಮುಂದೆ ಬೇರೆ ಏನು ಇಲ್ಲ. ಅಪರೂಪದ ಕ್ಷಣಗಳಿಗೆ ಕಾಡಿನ ಪ್ರವಾಸ ಸಾಕ್ಷಿಯಾಗಿದೆ ಎಂದರು.

    ಅಲ್ಲದೇ ಮನಸ್ಸಿಗೆ ನೆಮ್ಮದಿ ಸಿಗುತ್ತೆ, ತಾಳ್ಮೆ ಕಲಿಯಬಹುದು. ಎಲ್ಲರು ಕಾಡು ಉಳಿಸಿ ಇಲ್ಲದಿದ್ದರೆ, ಮುಂದೆ ಪ್ರಾಣಿಗಳನ್ನು ಫೋಟೋದಲ್ಲೇ ನೋಡಬೇಕಾಗುತ್ತೆ. ಅದಕ್ಕಾದರೂ ಕಾಡನ್ನು ಸಂರಕ್ಷಿಸೋಣ ಎಂದು ಮನವಿ ಮಾಡಿಕೊಂಡರು.

    ಚಿತ್ರ ಬಿಡುಗಡೆ ಬಗ್ಗೆ ಮಾತನಾಡಿ, “ಯಜಮಾನ ಚಿತ್ರ ರಿಲೀಸ್ ಆಗಿದೆ. ನಾನು ಈಗ ರಿಸಲ್ಟ್‍ಗಾಗಿ ಕಾಯುತ್ತಿದ್ದೇನೆ. ಯಜಮಾನ ಈಗಷ್ಟೇ ಬಿಡುಗಡೆಯಾಗಿದ್ದು, ಎಲ್ಲರು ಸಿನಿಮಾ ನೋಡುತ್ತಿದ್ದಾರೆ. ಒಂದೊಂದೆ ಕಡೆಯಿಂದ ಫೋನ್ ಬರುತ್ತಿದೆ. ಇನ್ನೆರಡು ದಿನ ಆದ ಮೇಲೆ ಚಿತ್ರದ ಬಗ್ಗೆ ಮಾತನಾಡುತ್ತೇನೆ. ಮೊದಲು ಎಲ್ಲರು ಚಿತ್ರ ನೋಡಿ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇರ ಯುದ್ಧ ಬೇಡ, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಉತ್ತಮ: ಪಲಿಮಾರು ಶ್ರೀ

    ನೇರ ಯುದ್ಧ ಬೇಡ, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಉತ್ತಮ: ಪಲಿಮಾರು ಶ್ರೀ

    ಉಡುಪಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆಯಾಗಲಿದ್ದಾರೆ. ಅಭಿನಂದನ್ ಬಿಡುಗಡೆ ಸಂಬಂಧ ರಾಜ್ಯದ ಹಲವು ಕಡೆ ಪೂಜೆ ಪುನಸ್ಕಾರಗಳು ನಡೆದಿತ್ತು.

    ಕೋಲಾರ, ಕೊಪ್ಪಳ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೋಧ ವಾಪಾಸ್ ಭಾರತಕ್ಕೆ ಬರಲಿ ಎಂದು ಪೂಜೆ ಪ್ರಾರ್ಥಿಸಿದ್ದರು. ಹಾಗೆಯೇ ಯೋಧರಿಗಾಗಿ ಉಡುಪಿಯ ಕೃಷ್ಣಮಠದಲ್ಲಿ ಕೂಡ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಪರ್ಯಾಯ ಪಲಿಮಾರು ಸ್ವಾಮೀಜಿಗಳು ಮಧ್ಯಾಹ್ನದ ಮಹಾಪೂಜೆಯಲ್ಲಿ ಅಭಿಷೇಕ ಮತ್ತು ಲಕ್ಷ ತುಳಸಿ ಅರ್ಪಣೆ ವೇಳೆ ಕೃಷ್ಣನಲ್ಲಿ ಸ್ವಾಮೀಜಿ ಅಭಿನಂದನ್ ಅವರಿಗಾಗಿ ಪ್ರಾರ್ಥಿಸಿದ್ದರು. ಇದನ್ನೂ ಓದಿ:ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲಿಮಾರು ವಿದ್ಯಾಧೀಶ ಶ್ರೀಗಳು, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಒಂದು ದಿಟ್ಟ ಹೆಜ್ಜೆ ಎಂದಿದ್ದಾರೆ. ಇದರಿಂದ ಸೇನೆಯ ಬಗ್ಗೆ ತುಂಬ ಅಭಿಮಾನ ಮೂಡಿದೆ. ಪಾಕಿಸ್ತಾನ ಅಭಿನಂದನ್ ವರ್ಧಮಾನ್‍ರನ್ನು ಬಂಧಿಸಿರುವುದು ಕಾನೂನು ಬಾಹಿರ. ಪಾಕ್ ಅವರನ್ನು ಶೀಘ್ರ ಬಿಡುಗಡೆ ಮಾಡಲಿ. ಜರಾಸಂಧನ ಸೆರೆಮನೆಯಲ್ಲಿಟ್ಟ ರಾಜಕುಮಾರರನ್ನು ಶ್ರೀಕೃಷ್ಣ ಬಿಡಿಸಿದ್ದ. ನರಕಾಸುರನನ್ನು ವಧೆ ಮಾಡಿ ರಾಜಕುಮಾರಿಯರನ್ನು ಸೆರೆಯಿಂದ ಬಿಡಿಸಿದ್ದ ಹಾಗೆಯೇ ದೇವರ ಕೃಪೆ ಯೋಧರ ಮೇಲೆ ಇದೆ ಅವರು ಕೂಡ ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂದಿದ್ದರು.

    ಪಾಕಿಸ್ತಾನದ ಮೇಲೆ ಯುದ್ಧ ಬೇಡ. ನೇರ ಯುದ್ಧದಿಂದ ಮಾನವ ಜನಾಂಗದ ನಾಶವಾಗುತ್ತದೆ. ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಉಗ್ರರ ನಾಶವಾಗಬೇಕು. ಉಗ್ರರಿರುವ ಅಡಗುದಾಣಗಳನ್ನು ಹುಡುಕಿ ದಾಳಿ ಮಾಡಬೇಕು ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv