Tag: ವಾಹನ ಸವಾರರು

  • ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿ – ಮೂವರು ಗಂಭೀರ

    ಕಿಲ್ಲರ್ ಬಿಎಂಟಿಸಿಗೆ ಇಬ್ಬರು ಬಲಿ – ಮೂವರು ಗಂಭೀರ

    ಬೆಂಗಳೂರು: ವೈಕುಂಠ ಏಕಾದಶಿಯಂಥ ಒಳ್ಳೆಯ ದಿನದಂದೇ ಬಿಎಂಟಿಸಿಗೆ ಇಬ್ಬರು ಬಲಿಯಾದ್ರೆ, ಮೂವರು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

    ಬೈಲಪ್ಪ(42) ಹಾಗು ವಿಶ್ವಾರಾಧ್ಯ ಸಾವನ್ನಪ್ಪಿದ ವಾಹನ ಸವಾರರು. ಬೆಳಗ್ಗೆ 8-30ರ ಸುಮಾರಿಗೆ ಕನ್ನಲ್ಲಿ ಡಿಪೋಗೆ ಸೇರಿದ 245ಎಂ ಬಸ್ ವಡ್ಡರಹಳ್ಳಿಯಿಂದ ಮೆಜೆಸ್ಟಿಕ್ ಕಡೆ ಹೊರಟಿತ್ತು. ಕೊಟ್ಟಿಗೆಪಾಳ್ಯ ಡೌನ್ ನಲ್ಲಿ ಬ್ರೇಕ್ ಫೈಲ್ಯೂರ್ ಆಗಿದೆ. ಬಸ್ ಬ್ರೇಕ್ ಫೈಲ್ಯೂರ್ ಆಗಿ ನಾಲ್ಕು ದ್ವಿಚಕ್ರ ವಾಹನಗಳು, ಒಂದು ಕಾರ್ ಗೆ ಡಿಕ್ಕಿ ಹೊಡೆದಿದೆ.

    ಈ ಘಟನೆಯಲ್ಲಿ ವಾಹನಗಳು ಸಂಪೂರ್ಣ ಜಖಂ ಆಗಿವೆ. ಬಿಎಂಟಿಸಿ ಚಾಲಕ ವೆಂಕಟೇಶ್ ಸಮಯಪ್ರಜ್ಞೆ ಮೆರೆದಿದ್ದಾರೆ. ರಸ್ತೆಯ ಎಡಬದಿಯಲ್ಲಿ ಬಸ್ ಸ್ಟಾಪ್ ಇದ್ದು, ಸಾಕಷ್ಟು ಜನ ನಿಂತಿದ್ದರು. ಬಲಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳಿಗೆ ಬಸ್ಸು ನುಗ್ಗಿಸಿ ನಿಲ್ಲಿಸಿದ್ದಾರೆ.

    ವಾಹನ ಸವಾರರ ಮೇಲೆ ಹರಿದ ಪರಿಣಾಮ ಹರ್ಷಿತ್, ನಾಗರಾಜ್ ಮತ್ತು ಅಭಿಷೇಕ್ ಗೆ ಗಂಭೀರ ಗಾಯಗಳಾಗಿ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿಲ್ಲಿದ್ದ ಪ್ರಯಾಣಿಕರು, ಎಮರ್ಜೆನ್ಸಿ ಎಕ್ಸಿಟ್‍ನಿಂದ ಹೊರಬಂದಿದ್ದಾರೆ.

    ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಇಬ್ಬರು ಸಾವನ್ನಪ್ಪಿದ್ರೆ, ಮೂವರಿಗೆ ತಲೆಗೆ ಗಾಯವಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಲಿಕಾನ್ ಸಿಟಿಯಲ್ಲಿ ಇಂದು ಪ್ರತಿಭಟನಾ ದಿನ

    ಸಿಲಿಕಾನ್ ಸಿಟಿಯಲ್ಲಿ ಇಂದು ಪ್ರತಿಭಟನಾ ದಿನ

    ಬೆಂಗಳೂರು: ಇಂದು ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರು ಪಟ್ಟ ಪಾಡು ಯಾರಿಗೂ ಬೇಡ. 1 ಕಿಲೋಮೀಟರ್ ಸಾಗುವುದಕ್ಕೆ ಅರ್ಧ ಗಂಟೆಗೂ ಹೆಚ್ಚುಕಾಲ ಬೇಕಾಗಿತ್ತು. ಯಾಕೆಂದರೆ ಇಂದು ಸಿಲಿಕಾನ್ ಸಿಟಿಯ ರೋಡುಗಳಲ್ಲಿ ಪ್ರತಿಭಟನೆಯ ಜನರೇ ಕಾಣುತ್ತಿದ್ದರು.

    ಹೌದು, ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಯ ಅಬ್ಬರ ಜೋರಾಗಿತ್ತು. ಸಿಲಿಕಾನ್ ಸಿಟಿಯ ಹೃದಯ ಭಾಗವಾದ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ರು. ಜೊತೆಗೆ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಪ್ರತಿಭಟನಾ ರ‍್ಯಾಲಿ ಮಾಡಿದರು.

    ಇದರಿಂದ ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಕೆಆರ್ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ರೋಡ್ ಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಯಾವಾಗಪ್ಪ ಕೆಲಸಕ್ಕೆ ಹೋಗೊದು? ಟ್ರಾಫಿಕ್ ಕ್ಲೀಯರ್ ಆಗೋದು ಯಾವಾಗ ಎಂದು ಕಾಯುವಂತಾಗಿತ್ತು. ಇನ್ನೊಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಗಾಗಿ ಹೆಬ್ಬಾಳ ರೋಡ್ ಬಂದ್ ಮಾಡಿದ್ದರು. ಪ್ರಧಾನಿ ಮೋದಿ ಸಂಚಾರ ಮಾಡೋದಕ್ಕಾಗಿ 30 ನಿಮಿಷಗಳ ಕಾಲ ರೋಡ್ ಬಂದ್ ಮಾಡಿದ್ದ ಪೊಲೀಸರ ವಿರುದ್ಧ ವಾಹನ ಸವಾರರು ಅಕ್ರೋಶಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

    ಮಧ್ಯಾಹ್ನ ಮೈಸೂರ್ ರೋಡ್ ನಲ್ಲಿರೋ ಗೋರಿಪಾಳ್ಯ ರಸ್ತೆಯ ಪಕ್ಕದ ಈದ್ಗಾ ಮೈದಾನದಲ್ಲಿ ಸಿಎಎ ಮತ್ತು ಎನ್.ಸಿ.ಆರ್ ವಿರುದ್ಧ ಪ್ರತಿಭಟನಾ ಸಮಾವೇಶಕ್ಕೆ 10 ಸಾವಿರ ಜನಸೇರಿದ್ರು. ಇದರಿಂದ ಮೈಸೂರು ರೋಡ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರಧಾನಿ ಮೋದಿಯ ಕಾರ್ಯಕ್ರಮ ಒಂದು ಕಡೆ, ಆಶಾ ಕಾರ್ಯಕರ್ತೆಯರ ಪ್ರತಿಭಟನಾ ರ‍್ಯಾಲಿ, ಹಾಗೂ ಸಿಎಎ ವಿರುದ್ಧದ ಸಮಾವೇಶದಿಂದ ನಗರ ಪೊಲೀಸರು ಹೈರಾಣಾಗಿ ಹೋದರು.

    ಒಟ್ಟಿನಲ್ಲಿ ನಗರದ ಮೂರು ಭಾಗಗಳಲ್ಲಿ ಆದ ಬೆಳವಣಿಗೆಯಿಂದ ವಾಹನ ಸವಾರರು ಮಾತ್ರ ಸಾಕಪ್ಪ ಸಿಲಿಕಾನ್ ಸಿಟಿಯ ಟ್ರಾಫಿಕ್ ಸಹವಾಸ ಎಂದು ರಸ್ತೆಯಲ್ಲೇ ಗಂಟೆಗಟ್ಟಲೇ ಸಮಯ ಕಳೆಯಬೇಕಾಯಿತು. ಇದರಿಂದ ಕೆಲಸಕ್ಕೆ ಹೊರಟ್ಟಿದ ಸಿಲಿಕಾನ್ ಸಿಟಿ ಮಂದಿ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತುಹೋದರು.

  • ಸಂಚಾರ ನಿಯಮ ಉಲ್ಲಂಘನೆ – ನಿತ್ಯ ಒಂದೂವರೆ ಲಕ್ಷಕ್ಕೂ ಹೆಚ್ಚು ದಂಡ ವಸೂಲಿ

    ಸಂಚಾರ ನಿಯಮ ಉಲ್ಲಂಘನೆ – ನಿತ್ಯ ಒಂದೂವರೆ ಲಕ್ಷಕ್ಕೂ ಹೆಚ್ಚು ದಂಡ ವಸೂಲಿ

    ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ವ್ಯಾಪ್ತಿಯಲ್ಲಿ 2019ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವವರಿಂದ ಪ್ರತಿನಿತ್ಯ ಪೊಲೀಸರು ಒಂದೂವರೆ ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡುತ್ತಿದ್ದಾರೆ.

    2019ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 3,21,180 ಜನರ ವಿರುದ್ಧ ಇದೂವರೆಗೂ ದೂರು ದಾಖಲಾಗಿದ್ದು, ಈವರೆಗೆ ಬರೋಬ್ಬರಿ 6,88,28,950 ರೂಪಾಯಿ ದಂಡ ವಸೂಲಿಯಾಗಿದೆ. ಈ ಪೈಕಿ 6,075 ಡ್ರಿಂಕ್ & ಡ್ರೈವ್ ಮಾಡಿದ ಪ್ರಕರಣವಾಗಿದ್ದು, ಈ ಪ್ರಕರಣಗಳಲ್ಲಿ 1,59,21,400 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ಇದೀಗ ಹುಬ್ಬಳ್ಳಿ ಧಾರವಾಡದಲ್ಲಿ ಪ್ರತಿನಿತ್ಯ ಸರಾಸರಿ 1.89 ಲಕ್ಷ ರೂಪಾಯಿ ದಂಡ ಸಂಗ್ರಹವಾಗುತ್ತಿರುವುದು ವಿಶೇಷವಾಗಿದೆ.

    ಕುಡಿದು ವಾಹನ ಓಡಿಸಿದರೆ ಅತಿ ಹೆಚ್ಚು ದಂಡ ವಿಧಿಸಿದರೂ, ಡ್ರಿಂಕ್ & ಡ್ರೈವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಡಿಸೆಂಬರ್ ಅಂತ್ಯದವರೆಗೆ ಹುಬ್ಬಳ್ಳಿ-ಧಾರವಾಡ ಕಮಿಷನರ್ ವ್ಯಾಪ್ತಿಯಲ್ಲಿ ಕುಡಿದು ವಾಹನ ಚಲಾವಣೆ ಸೇರಿದಂತೆ ವಿವಿಧ ಅಪಘಾತಗಳಲ್ಲಿ ಬರೋಬ್ಬರಿ 80 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕುಡಿದು ವಾಹನ ಚಲಾವಣೆ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘನೆ ಮಾಡೋ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಲು ಹುಬ್ಬಳ್ಳಿ- ಧಾರವಾಡ ಪೊಲೀಸರು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ಅಲ್ಲದೇ ಯಾರ ಒತ್ತಡಕ್ಕೂ ಒಳಗಾಗದೇ ದಂಡ ವಿಧಿಸಿ ಸಂಚಾರ ನಿಯಮ ಪಾಲನೆ ಮಾಡುವಂತೆ ಪೊಲೀಸರು ಚಾಲಕರಿಗೆ ಮನವರಿಕೆ ಮಾಡುತ್ತಿರುವುದು ವಿಶೇಷವಾಗಿದೆ.

  • ರಸ್ತೆಯಲ್ಲೇ ಹೈಟೆನ್ಷನ್ ಕಾಮಗಾರಿ- ವಾಹನ ಸವಾರರಿಗೆ ಫುಲ್ ಟೆನ್ಶನ್

    ರಸ್ತೆಯಲ್ಲೇ ಹೈಟೆನ್ಷನ್ ಕಾಮಗಾರಿ- ವಾಹನ ಸವಾರರಿಗೆ ಫುಲ್ ಟೆನ್ಶನ್

    ರಾಮನಗರ: ಬೊಂಬೆನಗರಿ ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಹೈಟೆನ್ಷನ್ ಕಾಮಗಾರಿ ಇದೀಗ ವಾಹನ ಸವಾರರಿಗೆ ಪೀಕಲಾಟವನ್ನು ತಂದೊಡ್ಡಿದೆ. ಹೈಟೆನ್ಷನ್ ಕಾಮಗಾರಿ ಹೆಸರಿನಲ್ಲಿ ಚನ್ನಪಟ್ಟಣ-ಸಾತನೂರು ರಸ್ತೆಯಲ್ಲಿ ತೆರೆದಿರುವ ಗುಂಡಿಗಳು ಸಾವಿಗೆ ಆಹ್ವಾನವನ್ನ ನೀಡುತ್ತಿವೆ.

    ಚನ್ನಪಟ್ಟಣದ ಸಾತನೂರು ವೃತ್ತದಿಂದ ನೀಲಸಂದ್ರದವರೆಗೂ ಸುಮಾರು 4 ಕಿ.ಮೀನಷ್ಟು ದೂರದವರೆಗೆ ಕೆಪಿಟಿಸಿಎಲ್ ವತಿಯಿಂದ ಹೈಟೆನ್ಷನ್ ವೈರ್ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿಗೆ ಸಂಬಂಧಿಸಿದಂತೆ ಮುನ್ನೆಚರಿಕಾ ಕ್ರಮವನ್ನು ತೆಗೆದುಕೊಳ್ಳದೇ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇದರಿಂದ ವಾಹನ ಸವಾರರು ಬೆಳಗ್ಗೆ ಹಾಗೂ ರಾತ್ರಿ ವೇಳೆ ಸಾಕಷ್ಟು ಆತಂಕದಲ್ಲೇ ವಾಹನ ಚಲಾಯಿಸುತ್ತಿದ್ದಾರೆ.

    ಮುಂಜಾಗ್ರತಾ ಕ್ರಮಗಳೇ ಇಲ್ಲ:
    ಯಾವುದೇ ಕಾಮಗಾರಿ ನಡೆಯುವುದಾದರೆ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ. ಆದರೆ ಹೈಟೆನ್ಷನ್ ಕಾಮಗಾರಿಯಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನೇ ತೆಗೆದುಕೊಂಡಿಲ್ಲ. ಗುಂಡಿ ತೆಗೆದಿರುವ ಜಾಗದಲ್ಲಿ ಕೇವಲ ಪೊಲೀಸ್ ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ. ಡೈವರ್ಸನ್ ಸೂಚನಾ ಫಲಕ, ರಿಪ್ಲೆಕ್ಟ್ ಸ್ಟಿಕ್ಕರ್ ಬೋರ್ಡ್ ಸೇರಿದಂತೆ ಯಾವೊಂದು ಸೂಚನೆಗಳನ್ನು ಸಹ ಅಳವಡಿಸಿಲ್ಲ. ಹೀಗಾಗಿ, ರಾತ್ರಿ ವೇಳೆಯಲ್ಲಿ ಸಂಚರಿಸುವ ಸವಾರರು ಸ್ವಲ್ಪ ಎಚ್ಚರ ತಪ್ಪಿದರೆ ಈ ಗುಂಡಿಯೊಳಗೆ ಸಮಾಧಿ ಆಗಬೇಕಾಗುತ್ತದೆ.

    ಅಷ್ಟೇ ಅಲ್ಲದೆ ಪ್ರವಾಸಿ ತಾಣಗಳಿಗೆ, ಪ್ರಸಿದ್ಧ ದೇವಾಲಯಗಳಿಗೆ ಇದೇ ಮಾರ್ಗವಾಗಿ ಪ್ರವಾಸಿಗರು ತೆರಳುತ್ತಾರೆ. ಸರಿಯಾದ ಮಾಹಿತಿ ತಿಳಿಯದೆ, ರಸ್ತೆಯ ಪರಿಸ್ಥಿತಿ ನೋಡದೆ ಗಾಡಿ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

  • ಸಾವಿಗೆ ಆಹ್ವಾನ ನೀಡುತ್ತಿವೆ ಬೊಂಬೆನಗರಿಯ ಮೈದುಂಬಿದ ಕೆರೆಗಳು

    ಸಾವಿಗೆ ಆಹ್ವಾನ ನೀಡುತ್ತಿವೆ ಬೊಂಬೆನಗರಿಯ ಮೈದುಂಬಿದ ಕೆರೆಗಳು

    ರಾಮನಗರ: ಚನ್ನಪಟ್ಟಣ ತಾಲೂಕಿನ ಕೆರೆ ಕಟ್ಟೆಗಳೆಲ್ಲ ಇದೀಗ ತುಂಬಿ ತುಳುಕುತ್ತಿವೆ. ಅಲ್ಪಸ್ವಲ್ಪ ಮಳೆಯ ಜೊತೆಗೆ ಏತ ನೀರಾವರಿ ಮೂಲಕ ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಆದರೆ ಇದೀಗ ಈ ತುಂಬಿದ ಕೆರೆಗಳೇ ಆಹಾರಕ್ಕಾಗಿ ಕಾಯುತ್ತಾ ಕುಳಿತಿವೆ.

    ಚನ್ನಪಟ್ಟಣದ ಇಗ್ಗಲೂರು ದೇವೇಗೌಡ ಬ್ಯಾರೇಜ್ ನಿಂದ ತಾಲೂಕಿನ ಸುಮಾರು 100ಕ್ಕೂ ಹೆಚ್ಚು ದೊಡ್ಡ ಹಾಗೂ ಚಿಕ್ಕ ಕೆರೆಗಳಿಗೆ ನೀರು ಹರಿಸಿ ತುಂಬಿಸಲಾಗಿದೆ. ಒಂದೊಂದು ಕೆರೆಗೂ ಒಂದೊಂದು ಲಿಂಕ್ ಮೂಲಕ ನೀರು ಹರಿಸುವುದಲ್ಲದೇ ಹಲವಾರು ಕೆರೆಗಳಿಗೆ ನೀರನ್ನು ಲಿಫ್ಟ್ ಮಾಡಿ ತುಂಬಿಸಲಾಗಿದೆ.

    ಇದೀಗ ಮೈತುಂಬಿ ನಿಂತಿರುವ ಕೆರೆಗಳ ಎರಡು ಬದಿಗಳಲ್ಲಿ ತಡೆಗೋಡೆಗಳೇ ಇಲ್ಲದಿರುವುದು ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ. ಕೆರೆಯ ಏರಿಯ ರಸ್ತೆಗಳು ಚಿಕ್ಕದಾಗಿದೆ. ಸ್ವಲ್ಪ ಯಾಮಾರಿದ್ರು ಯಮಪುರಿಗೆ ಸೇರುವುದು ಫಿಕ್ಸ್ ಆಗಿದ್ದು ವಾಹನ ಅಂಗೈನಲ್ಲಿ ಜೀವ ಹಿಡಿದು ಓಡಾಡುವಂತಾಗಿದೆ.

    ಕಿಲ್ಲರ್ ಲೇಕ್ಸ್:
    ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಕೆರೆ, ಹೊಂಗನೂರು, ಮತ್ತಿಕೆರೆ, ಸುಳ್ಳೇರಿ, ಸೋಗಾಲ, ಸಿಂಗ್ರಾಜಿಪುರ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕೆರೆಗಳು ತಡೆಗೋಡರಯನ್ನೇ ಹೊಂದಿಲ್ಲ. ಇದರಿಂದ ಕೆರೆಯ ಬದಿಯ ರಸ್ತೆಗಳಲ್ಲಿ ಓಡಾಡುವುದು ಅಸಾಧ್ಯವಾಗಿದೆ.

    ಅದರಲ್ಲೂ ತಿಟ್ಟಮಾರನಹಳ್ಳಿ ಕೆರೆ ಸಾಕಷ್ಟು ಸಾವುಗಳನ್ನು ಕಂಡಿದೆ. ತಡೆಗೋಡೆಗಾಗಿಯೇ ಪ್ರತಿಭಟನೆ ರೂಪದಲ್ಲಿ ಮೇಕೆ ಬಲಿ ನೀಡುವ ಮೂಲಕ ಕೆರೆಗೆ ಆಹಾರ ನೀಡಿ ಅಪಘಾತ ನಡೆಯದಂತೆ ಪೂಜೆ ಸಲ್ಲಿಸಿದರು. ಆದರೂ ಕೂಡ ಈ ಭಾಗದಲ್ಲಿ ಅಪಘಾತಗಳು, ಕೆರೆಗೆ ವಾಹನ ಬೀಳುವುದು ನಿಂತೇ ಇಲ್ಲ.

    ಹೀಗಾಗಿ ತಾಲೂಕಿನ ಬಹುತೇಕ ಕೆರೆಗಳಿಗೆ ಶೀಘ್ರವಾಗಿ ತಡೆಗೋಡೆ ನಿರ್ಮಿಸಿ ಪ್ರಾಣಹಾನಿಯನ್ನು ತಪ್ಪಿಸುವಂತೆ ತಾಲೂಕಿನ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ. ಅಲ್ಲದೆ ತಡೆಗೋಡೆ ನಿರ್ಮಿಸದಿದ್ದರೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

  • ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು

    ಹಾವೇರಿ: ಈ ರಸ್ತೆಗಳಲ್ಲಿ ಹಾದು ಹೋಗಿ ನೀವೇನಾದ್ರೂ ಸುರಕ್ಷಿತವಾಗಿ ಅಂದುಕೊಂಡ ಜಾಗ ಸೇರಿದ್ರೆ ನೀವು ಸಾವು ಗೆದ್ದು ಬಂದಂತೆಯೇ. ಯಾಕೆಂದರೆ ಭಾರೀ ಮಳೆಗೆ ರಸ್ತೆಗಳು ಕಿತ್ತು ಹೋಗಿ ಗುಂಡಿಗಳಾಗಿವೆ. ಕಿತ್ತು ಹೋದ ರಸ್ತೆಯಲ್ಲೇ ವಾಹನ ಸವಾರರು ಸಾಗುವ ದುಸ್ಥಿತಿ ನಿರ್ಮಾಣವಾಗಿದೆ.

    ಹಾವೇರಿ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಗುಂಡಿಮಯವಾಗಿವೆ. ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಕಿತ್ತುಹೋಗಿವೆ. ಅನೇಕ ಕಡೆಗಳಲ್ಲಿ ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಕೆಲವೆಡೆ ರಸ್ತೆಗಳು ಕೆಸರು ಗದ್ದೆಗಳಾಗಿವೆ. ಇಂಥಾ ರಸ್ತೆಗಳಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡುತ್ತಿದ್ದಾರೆ.

    ಮಳೆಗೆ ರಸ್ತೆ ಕಿತ್ತು ಹೋಗಿ ಮೂರು ತಿಂಗಳು ಕಳೆದರೂ ದುರಸ್ತಿ ಕಾರ್ಯ ನಡೆದಿಲ್ಲ. ಕಿತ್ತು ಹೋದ ರಸ್ತೆಗಳಲ್ಲಿ ಯಾವುದಾದರು ಒಂದು ವಾಹನ ಮುಂದೆ ಹೋಗೋದು ಸ್ವಲ್ಪ ತಡವಾದರೆ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅಲ್ಲದೇ, ಈ ರಸ್ತೆಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ನಡೆಯುತ್ತಿವೆ. ಅಲ್ಲದೆ ಜಿಲ್ಲೆಯಲ್ಲಿ ಹಾದು ಹೋಗಿರೋ ಪೂಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸ್ಥಿತಿಯಂತೂ ಹೇಳತೀರದ್ದು. ರಸ್ತೆ ಅಗಲೀಕರಣ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಹರಸಾಹಸ ಪಡಬೇಕಿದೆ.

    ಇನ್ನಾದರೂ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಿ ಕಿತ್ತು ಹೋಗಿರೋ ರಸ್ತೆ ಸರಿಪಡಿಸಬೇಕಿದೆ. ಆಗ ಮಾತ್ರ ವಾಹನ ಸವಾರರ ಎದುರಿಸುತ್ತಿರುವ ತೊಂದೆರೆ ನಿವಾರಣೆಯಾಗಲಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

  • ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು

    ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು

    ಬೆಂಗಳೂರು: ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಇಳಿಸಿದ್ದರೂ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಒಂದೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 21.52 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದಾರೆ.

    ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಕೇಂದ್ರ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿ, ದಂಡದ ಮೊತ್ತವನ್ನ ಇಳಿಸಿತ್ತು. ಈ ಬೆನ್ನಲ್ಲೇ ವಾಹನ ಸವಾರರು ತಮ್ಮ ಹಳೇ ಚಾಳಿಯನ್ನ ಮುಂದುವರಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಮಂಗಳವಾರ ಒಂದೇ ದಿನಕ್ಕೆ 6,782 ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳು ಸಿಲಿಕಾನ್ ಸಿಟಿ ವಾಹನ ಸವಾರರಿಂದ ದಾಖಲಾಗಿವೆ.

    ಈ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆಯ ಕೇಸ್‍ಗಳೇ ಹೆಚ್ಚು ದಾಖಲಾಗಿವೆ. ಬರೋಬ್ಬರಿ 1,546 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಇದರಿಂದ ಸುಮಾರು 2,87,500 ರೂ. ದಂಡ ಸಂಗ್ರಹವಾಗಿದೆ. ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಪ್ರಕರಣಗಳು 1,046 ದಾಖಲಾಗಿದ್ದು, ಇದರಿಂದ 2,22,000 ರೂ. ದಂಡ ವಸೂಲಾಗಿದೆ.

    806 ವಾಹನಗಳನ್ನು ತಪ್ಪಾಗಿ ಪಾರ್ಕಿಂಗ್ ಮಾಡಿದ ಪ್ರಕರಣಗಳು ದಾಖಲಾಗಿದ್ದು 1,66,100 ರೂ. ದಂಡವನ್ನು ವಾಹನ ಸವಾರರಿಂದ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಗ್ನಲ್ ಜಂಪ್ 818 ಪ್ರಕರಣದಿಂದ 1,41,800 ರೂ., ನೋ ಎಂಟ್ರಿ ಪ್ರಕರಣಗಳು 355, ಅದರಿಂದ 1,03,800 ರೂ., ಅಲ್ಲದೆ ವಾಹನದಲ್ಲಿ ಉದ್ದದ ಸಾಮಾಗ್ರಿಗಳನ್ನು ಸಾಗಿಸಿದ 318 ಪ್ರಕರಣಗಳಿಂದ 3,18,100 ರೂ. ದಂಡ ಸಂಗ್ರಹಿಸಲಾಗಿದೆ.

    ಸುಮಾರು 65 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 6,782 ಪ್ರಕರಣಗಳಿಂದ ಸಂಚಾರಿ ಪೊಲೀಸರು ಒಂದೇ ದಿನಕ್ಕೆ ಬರೋಬ್ಬರಿ 21,52,100 ರೂಪಾಯಿಯನ್ನು ದಂಡ ವಸೂಲಿ ಮಾಡಿದ್ದಾರೆ.

  • ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು

    ಫೋನ್‍ಪೇಯಿಂದ ಹಣ ಕೀಳ್ತಾರೆ – ಪಬ್ಲಿಕ್ ಕ್ಯಾಮೆರಾ ಕಂಡ ಕೂಡ್ಲೇ ಓಡ್ತಾರೆ ಟ್ರಾಫಿಕ್ ಪೊಲೀಸ್ರು

    ಬೆಂಗಳೂರು: ಕೆಲ ಟ್ರಾಫಿಕ್ ಪೊಲೀಸರು ದುಬಾರಿ ದಂಡವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ದಂಡದ ಹೆಸರಲ್ಲಿ ವಾಹನ ಸವಾರರ ಬಳಿ ಹಗಲು ದರೋಡೆಗೆ ಇಳಿದಿದ್ದಾರೆ. ಪ್ರಶ್ನೆ ಮಾಡಿದರೆ ಟ್ರಾಫಿಕ್ ಪಿಎಸ್‍ಐ ಧಮ್ಕಿ ಹಾಕುತ್ತಾರೆ. ಟ್ರಾಫಿಕ್ ಪೊಲೀಸರ ವರ್ತನೆಗೆ ಜನರು ಬಿಲ್ ಇಲ್ಲದೆ ಫೈನ್ ಕಟ್ಟುತ್ತಿದ್ದಾರೆ.

    ಹೌದು. ಬೆಂಗಳೂರಿನಲ್ಲಿ ಕೆಲ ಟ್ರಾಫಿಕ್ ಪೊಲೀಸರು ದುಬಾರಿ ದಂಡವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸಿಕ್ಕಿದ್ದೇ ಚಾನ್ಸ್ ಎಂಬಂತೆ ವಾಹನ ಸವಾರರ ಬಳಿ ಬಂದಷ್ಟು ದೋಚಿಕೊಳ್ಳಲು ಮುಂದಾಗಿದ್ದಾರೆ. ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಹಾಗೂ ಗ್ಯಾಂಗ್ ಹಗಲು ದರೋಡೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ದಂಡದ ಮೊತ್ತವನ್ನು ಫೋನ್‍ಪೇ ಮಾಡಿಸಿಕೊಳ್ಳುವ ಕಾನೂನು ಯಾವಾಗ ಬಂತು ಎಂದು ಪ್ರಶ್ನೆ ಮಾಡಿದ್ದೆ ತಡ, ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಕೋಪಗೊಂಡಿದ್ದಾರೆ. ಅಲ್ಲದೆ ನಮ್ಮನ್ನೇ ಪ್ರಶ್ನೆ ಮಾಡುತ್ತೀಯಾ ಬಂದ ಕೆಲಸವನ್ನು ಮಾಡಿಕೊಂಡು ಹೋಗಿ, ಇಲ್ಲ ಹೊಯ್ಸಳ ಕರೆಸಿ ಒದ್ದು ಒಳಗಡೆ ತಳ್ಳ ಬೇಕಾಗುತ್ತದೆ ಎಂದು ಧಮ್ಕಿ ಹಾಕಲು ಮುಂದಾಗಿದ್ದಾರೆ. ಅಲ್ಲದೆ ಒಬ್ಬ ವಾಹನ ಸವಾರ ಪ್ರಶ್ನೆ ಮಾಡಿದ ಎನ್ನುವ ಕಾರಣಕ್ಕೆ ಕತ್ತಿನ ಪಟ್ಟಿ ಹಿಡಿದು ಪೊಲೀಸ್ ಠಾಣೆಗೆ ಬಿಟ್ಟು ಬಂದಿದ್ದಾರೆ.

    ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಪಕ್ಕದಲ್ಲಿಯೇ ಇದ್ದುಕೊಂಡು ಮಹಿಳೆಯರು, ಪಿಎಸ್‍ಐ ಪಟಾಲಂ ಕಡೆಯಿಂದ ಫೋನ್‍ಪೇ ಮೂಲಕ ದಂಡದ ಹಣ ವಸೂಲಿ ಮಾಡಿಸುತ್ತಾರೆ. ಇದನ್ನು ಪಬ್ಲಿಕ್ ಟಿವಿ ಚಿತ್ರೀಕರಿಸಲು ಹೋದಾಗ ಫೋನ್‍ಪೇ ಮುಖಾಂತರ ದಂಡದ ಹಣ ಪಾವತಿಸಿಕೊಳ್ಳುತ್ತಿದ್ದ ಮಲ್ಲೇಶ್ವರಂ ಪಿಎಸ್‍ಐ ಗ್ಯಾಂಗ್ ಸದಸ್ಯರು ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಗ್ಯಾಂಗ್ ನ ಸದ್ಯಸರು ಎಸ್ಕೇಪ್ ಆಗುತ್ತಿದ್ದಂತೆಯೇ ಮಲ್ಲೇಶ್ವರಂ ಟ್ರಾಫಿಕ್ ಪಿಎಸ್‍ಐ ಕೂಡ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡು ಜಾಗ ಖಾಲಿ ಮಾಡಿದ್ದಾರೆ.

    ಟ್ರಾಫಿಕ್ ಪೊಲೀಸರಿಗೆ ಮರು ಪ್ರಶ್ನೆ ಮಾಡಿದರೆ ರೇಗಾಡಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನ ಸವಾರರ ಜೊತೆ ಮಾತಿನ ಚಕಮಕಿಗೆ ಇಳಿದರೆ ಸಾಕು ಟೋಯಿಂಗ್ ಹುಡುಗರು ರೌಡಿಗಳ ರೀತಿಯಲ್ಲಿ ವರ್ತಿಸಲು ಶುರು ಮಾಡಿಕೊಳ್ಳುತ್ತಾರೆ. ಅಮಾಯಕ ವಾಹನ ಸವಾರರು ಇವರ ಅವಾಂತರ ಕಂಡು ಕೆಸರಲ್ಲಿ ಕಲ್ಲು ಹಾಕಿದರೆ ನಮ್ಮ ಮೇಲೆ ಸಿಡಿಯೋದು ಎಂದುಕೊಂಡು ಫೋನ್‍ಪೇ, ಗೂಗಲ್‍ಪೇನೋ ಏನೋ ಮಾಡಿ ಹೋಗುತ್ತಿರುತ್ತಾರೆ.

  • 5 ದಿನದಲ್ಲಿ 72 ಲಕ್ಷ ದಂಡ ಸಂಗ್ರಹ – ಹೆಲ್ಮೆಟ್ ಹಾಕದ್ದಕ್ಕೆ ಬಿತ್ತು ಅತಿ ಹೆಚ್ಚು ಕೇಸ್

    5 ದಿನದಲ್ಲಿ 72 ಲಕ್ಷ ದಂಡ ಸಂಗ್ರಹ – ಹೆಲ್ಮೆಟ್ ಹಾಕದ್ದಕ್ಕೆ ಬಿತ್ತು ಅತಿ ಹೆಚ್ಚು ಕೇಸ್

    ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರು ಹೊಸ ತಿದ್ದುಪಡಿ ಕಾಯ್ದೆ ಜಾರಿಯಾದ ಐದೇ ದಿನದಲ್ಲಿ ಬರೋಬ್ಬರಿ 72.49 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

    ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಯ ನಿರ್ದೇಶನದಂತೆ ಸೆ.4 ರಿಂದ ಇಂದು(ಸೆ.9) ಬೆಳಗ್ಗೆ 10 ಗಂಟೆಯವರೆಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಒಟ್ಟು 6,813 ಪ್ರಕರಣ ದಾಖಲಿಸಿ 72,49,900 ದಂಡವನ್ನು ವಸೂಲಿ ಮಾಡಿದ್ದಾರೆ.

     

    ಹಿಂಬದಿಯ ಸವಾರ ಹೆಲ್ಮಟ್ ಹಾಕದ್ದಕ್ಕೆ ಅತಿ ಹೆಚ್ಚು ದಂಡ ಬಿದ್ದಿದ್ದು, ಬರೋಬ್ಬರಿ 2,645 ಪ್ರಕರಣಗಳು ದಾಖಲಾಗಿದ್ದು, ಸುಮಾರು 26,45,000 ದಂಡವನ್ನು ವಸೂಲಿ ಮಾಡಲಾಗಿದೆ. ಇದನ್ನು ಬಿಟ್ಟರೆ ಚಾಲನೆ ಮಾಡುವಾಗ ಹೆಲ್ಮಟ್ ಹಾಕದ 1,968 ಪ್ರಕರಣಗಳು ದಾಖಲಾಗಿದ್ದು 19,68,000 ದಂಡ ವಸೂಲಿ ಮಾಡಲಾಗಿದೆ.

    ವಾಹನ ಚಾಲಿಸುವ ಮೊಬೈಲ್ ಬಳಕೆ ಮಾಡಿದ ಒಟ್ಟು 695 ಪ್ರಕರಣ ದಾಖಲಾಗಿದ್ದು, 13,90,000 ದಂಡ ವಸೂಲಿ ಮಾಡಲಾಗಿದೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಕ್ಕೆ 708 ಪ್ರಕರಣಗಳು ದಾಖಲಾಗಿದ್ದು, 7,08,000 ವಸೂಲಿ ಮಾಡಲಾಗಿದೆ. ಇದನ್ನು ಬಿಟ್ಟರೆ ಒನ್ ವೇಯಲ್ಲಿ ವಾಹನ ಚಾಲನೆ ಮಾಡಿದ 425 ಪ್ರಕರಣ ದಾಖಲಾಗಿದ್ದು, ಒಟ್ಟು 2,12,500 ದಂಡ ವಸೂಲಿ ಮಾಡಲಾಗಿದೆ.

  • ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗ್ಳೂರಿನಲ್ಲಿ ಒಂದೇ ದಿನಕ್ಕೆ ಟ್ರಾಫಿಕ್ ಪೊಲೀಸರಿಂದ ಬರೋಬ್ಬರಿ 30 ಲಕ್ಷ ದಂಡ ವಸೂಲಿ

    ಬೆಂಗಳೂರು: ದೇಶಾದ್ಯಂತ ನೂತನ ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ, ಭಾರೀ ಪ್ರಾಮಾಣದ ದಂಡ ಕಟ್ಟಿ ಸುತ್ತಾಗಿದ್ದಾರೆ.

    ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

    ಇದರ ನಡುವೆ, ದುಬಾರಿ ದಂಡ ತಪ್ಪಿಸಿಕೊಳ್ಳಲು ದೇಸೀ ಉಪಾಯಕ್ಕೆ ಪೊಲೀಸರೇ ಬೇಸ್ತು ಬಿದ್ದಿದ್ದಾರೆ. ಗುರುಗ್ರಾಮದಲ್ಲಿ ಬೈಕ್ ಸವಾರರು ಪೊಲೀಸರ ಪರಿಶೀಲನೆ ಕಂಡು ಬೈಕ್‍ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಈ ಕುರಿತ ಹಾಸ್ಯಾತ್ಮಕ ವಿಡಿಯೋವೊಂದನ್ನು ಗುರುಗ್ರಾಮದ ಐಪಿಎಸ್ ಅಧಿಕಾರಿ ಪಂಕಜ್ ನೈನ್ ಶೇರ್ ಮಾಡಿಕೊಂಡಿದ್ದಾರೆ.